ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು                        

   (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ 

ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

ದಿ || ಲಂಕಾ ಕೃಷ್ಣಮೂರ್ತಿಯವರ ವಿಚಾರಧಾರೆ

                                      – ಎ. ಅರ್. ಸೀತಾರಾಮ್

     (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ದಿ ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

1. ದೇವರು ಇದ್ದಾನೆಯೇ? :- ಈ ತರ್ಕ ಹಾಗೂ ವಿಚಾರಧಾರೆ ಅನುಚಿತ. ಅಗೋಚರ ಶಕ್ತಿಯನ್ನು ಹುಡುಕುವುದೇ ದೇವರಿದ್ದಾನೆ ಎಂಬುದಕ್ಕೆ ಸಾಕ್ಷಿ.

2. ತೃಪ್ತಿ:- ಇರುವುದನ್ನು ಅನುಭವಿಸಿ. ಇಲ್ಲದೇ ಇರುವುದರ ಬಗ್ಗೆ ಚಿಂತಿಸದೇ ಇರುವುದೇ ತೃಪ್ತಿ.

3. ಆಸೆ :- ಇದು ಮಾನವನ ಒಂದು ಗುಣ. ಬೇರೆಯವರ ಧನ ಹಾಗೂ ಸುಖವನ್ನು ಆಶಿಸುವುದೇ ತಪ್ಪು. ನಿನಗೆ ಎಟುಕಿದ ಹಾಗೂ ಅದು ಧರ್ಮ ನಿಷಿದ್ಧವಲ್ಲದಿದ್ದರೆ ಅದರ ಅನುಭವ ಯೋಗ್ಯ.

4. ಕಾಮ:- ಕಾಮ ಪ್ರಕೃತಿ ನಿಯಮದ ಒಂದು ಅಂಗ. ಅದು ವರವೂ ಹೌದು. ಶಾಪವೂ ಹೌದು. ಅತಿಕಾಮ, ಪ್ರಕೃತಿ ಪುರುಷನ ವಿಲಕ್ಷಣ ಅವತಾರ. ನಿಷಿದ್ಧ ವರ್ಗದ ಕಾಮ ಒಂದು ಕರ್ಮ. ಪ್ರಕೃತಿದತ್ತವಾದ ಕಾಮ ಪವಿತ್ರ. ಅತಿಕಾಮ ನಿಷಿದ್ಧ. ಕಾಮದ ತೃಪ್ತಿ ಒಂದು. ಮೋಕ್ಷ ಕಾಮದ ಮೋಕ್ಷ ಕೊಡುವವಳು ಸತಿ. ಇಚ್ಛೆಯನ್ನರಿತ ಸತಿ ಪತಿವ್ರತೆ. ಅತೃಪ್ತ ಕಾಮದಿಂದ ಪುರುಷ ಕಂಟಕನಾಗುತ್ತಾನೆ.

5. ಕರ್ಮ :- ಸಮಾಜ ದೃಷ್ಟಿಯಿಂದ ಮಾಡಿದ ಕೆಲಸ ಧರ್ಮ. ಅಧರ್ಮ ಕಾರ್ಯಗಳಿಂದ ಮಾಡಿದ ಕೆಲಸ ಕರ್ಮ. ಇದಕ್ಕೆ ದಯೆ, ದಾನ ಹಾಗೂ ಧರ್ಮ ಮೋಕ್ಷ ಮಾರ್ಗಗಳು.

6. ಸುಖ-ದುಖಃ :- ಸಮಾಜವನ್ನು ಸನ್ಮಾರ್ಗದಲ್ಲಿ ಅನುಸರಿಸುವುದೇ ಸುಖ. ಅದಕ್ಕೆ ತಪ್ಪಿ ನಡೆದರೆ ಸಿಗುವುದೇ ದುಃಖ.

7. ಪ್ರೀತಿ :- ಇತರರನ್ನು ಅಯ್ಯೋ ಎನಿಸದಿರುವುದೇ ಪ್ರೀತಿ. ಪ್ರೀತಿ ಕೊಡುವ ವಸ್ತುವಲ್ಲ. ಅದು ಪಡೆಯುವ ವಸ್ತು.

8. ಕಾರ್ಯ :- ಅಂತರಾತ್ಮನಿಗೆ ತೃಪ್ತಿ ಕೊಡುವ ಕೆಲಸವೇ ಉತ್ತಮ ಕಾರ್ಯ.

9. ನಡವಳಿಕೆ :- ಅಧರ್ಮ ಕಾರ್ಯಗಳನ್ನು ಖಂಡಿಸುವುದೇ ಉತ್ತಮ ನಡುವಳಿಕೆ.

10. ಚತುರ :- ಇತರರ ಅಧರ್ಮ ಕಾರ್ಯದಲ್ಲಿ ಭಾಗಿಯಾಗದೆ ಉಳಿಯುವವನೇ ಚತುರ. ಅದರಿಂದ ಧರ್ಮ ರಕ್ಷಣೆಯಾಗುತ್ತದೆ. ಕಷ್ಟದಲ್ಲಿ ಶತೃವಿನ ರಕ್ಷಣೆ, ಉಪಚಾರವೇ ಚತುರನ ಲಕ್ಷಣ.

11. ಶಕ್ತಿ :- ಶಕ್ತಿ ಅಗೋಚರ. ಲಂಕೆಗೆ ಹಾರಿದ ಹನುಮಂತನಿಗೆ ತನ್ನ ಶಕ್ತಿ ಗೊತ್ತಿರಲಿಲ್ಲ. ಪ್ರಯತ್ನವೇ ಶಕ್ತಿ. 

12. ಲಂಕೆ :- ನಾನು ರಾವಣನ ಲಂಕೆಯಿಂದ ಬಂದಿಲ್ಲ. ಕ್ಷೀರಸಾಗರವೆಂಬ ಲಂಕೆಯಲ್ಲಿ ನಾರಾಯಣ ಸ್ಮರಣೆಗಾಗಿ ಇದ್ದೇನೆ.

13. ಗೃಹಸ್ಥ :- ಜಿಗುಪ್ಸೆ, ತಾತ್ಸಾರ, ಪ್ರೀತಿ, ಆಸೆ ಮತ್ತು ತೃಪ್ತಿಗಳಿಂದ ಆರ್ಜಿತ. ಅದರ ಆದರಣೆ ಹಾಗೂ ಆಚರಣೆ ಗೃಹಸ್ಥಧರ್ಮದ ಕನ್ನಡಿ. ಉತ್ತಮ ಆರ್ಜಿತಗಳಿಂದ ಉತ್ತಮ ಗೃಹಸ್ಥನಾಗುತ್ತಾನೆ.

14. ಬಡತನ, ಸಿರಿತನ ಮಾನವ ನಿರ್ಮಿತ ವರ್ಗಗಳು. ನಾವು ಯಾವ ಕಷ್ಟಗಳು ಬಂದರೂ ಎದುರಿಸಬಹುದು. ಆದರೆ ಸಿರಿವಂತನಿಗೆ ಕೂಡಲೇ  ಬಂದ ಬಡತನ, ಬಡವನಿಗೆ ಕೂಡಲೇ ಬರುವ ಸಿರಿತನ ಅನುಭವಿಸುವುದು ಬಹಳ ಕಷ್ಟ.

15. ನಾನು :- ನಾನು ಎಂಬುದು ಕೇವಲ ಭ್ರಮೆ. ಎಲ್ಲವೂ ದೇವರ ಚಿತ್ತ. ನನಗೇನೋ ದೇವರಲ್ಲಿ ನಂಬಿಕೆ ಇದೆ. ಬೇರೆಯವರಲ್ಲಿ ತಪ್ಪು ಹುಡುಕುವ ಯೋಗ್ಯತೆ ನನಗಿಲ್ಲ. ಬೇರೆಯವರನ್ನು ದೂಷಿಸುವುದು ನನಗೆ ಸರಿಹೋಗುವುದಿಲ್ಲ. ಇಷ್ಟವಿಲ್ಲದೇ ಹೋದರೆ ಅವರ ಸಹವಾಸ ನನಗೆ ಬೇಕಿಲ್ಲ. ನನಗೆ ತೋಚಿದ್ದು ನಾನು ಹೇಳುತ್ತೇನೆಯೇ ವಿನಃ ಬಲವಂತ ಮಾಡುವುದಿಲ್ಲ. ಅದು ನನ್ನ ಇಷ್ಟ.

16. ಅವಧಾನಿಗಳು ನಿಷೇಧಾಕ್ಷರಿ ಅಂದರೆ ನೀರು ಕುಡಿಸುತ್ತೇನೆ ಎಂದಿದ್ದಾರೆ. ನಾರಾಯಣ ಸ್ಮರಣೆಯಲ್ಲಿ ನೀರಿನ ರುಚಿ ವರ್ಣಿಸಬೇಕೆಂದು ಕೇಳುತ್ತೇನೆ.  

17. ಕಾಶಿಗೆ ಹೋಗಿ ಕೋಪವನ್ನು ಬಿಟ್ಟು ಬಂದು ಮತ್ತೆ ಕೋಪಮಾಡಿಕೊಂಡಿದ್ದೀರಾ ಎನ್ನುವರಲ್ಲ. ನಾನು ಹಿರಿಯವನಾಗಿ ಕೋಪಮಾಡಿಕೊಂಡಿಲ್ಲ. ಕೇವಲ ಆಕ್ಷೇಪಣೆ ಮಾತ್ರ ಮಾಡುತ್ತಿದ್ದೇನೆ. ಇದು ಗೃಹಸ್ಥನ ಧರ್ಮ.

18. ಸಾವು ಮಾನವನಿಗೆ ಮುಕ್ತಿ ಕೊಡುವ ಮಾರ್ಗ. ಸತ್ತವರೆಲ್ಲರೂ ಪುಣ್ಯಾತ್ಮರು. ಏಕೆಂದರೆ ಅವರಿಂದ ಧರ್ಮಕ್ಕೆ ಹಾನಿಯಾಗುವುದಿಲ್ಲ. ಅವರ ಕರ್ಮಗಳು ಸಮಾಜಕ್ಕೆ ಪಾಠವಾಗುತ್ತವೆ. ಕೆಲವರಿಗೆ ದಾರಿ ದೀಪವಾಗುತ್ತವೆ, ಅವರ ಉತ್ತಮ ಕಾರ್ಯಗಳು ಸಮಾಜಕ್ಕೆ ರಕ್ಷೆಯಾಗುತ್ತವೆ.

19. ಪಾಲಿಗೆ ಬಂದದ್ದು ಅನುಭವಿಸಲಾಗದಿರುವುದೇ ಕಷ್ಟ. ದೇವರ ಕೃಪೆ ಎಂದು ಬಂದಿದ್ದನ್ನು ಧರ್ಮ ರೀತಿಯಲ್ಲಿ ಅನುಸರಿಸುವುದೇ ಇದಕ್ಕೆ ಪರಿಹಾರ. ಕ್ರಮೇಣ ಕಷ್ಟಗಳು ಖಂಡಿತ ಪರಿಹಾರವಾಗುತ್ತವೆ. ಅದಕ್ಕೆ ಧರ್ಮವೇ ಸಾಕ್ಷಿ.

20 ಇತರರನ್ನು ಆಧರಿಸಿ ಅನುಸರಿಸುವುದೇ ಸಮಾಜ. ಅದರಿಂದ ಘನತೆ ಹೆಚ್ಚಾಗುತ್ತದೆ. ಇದೇ ನಮ್ಮ ಸಮಾಜ ಹಾಗೂ ಸನಾತನ ಧರ್ಮ.