ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು                        

   (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ 

ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

ದಿII ಲಂಕಾ ಕೃಷ್ಣಮೂರ್ತಿ ಅವರ ನೆನಪು

  • ಬಿ. ಎಸ್. ವಿರೂಪಾಕ್ಷಪ್ಪ

ದಿII ಲಂಕಾ ಕೃಷ್ಣಮೂರ್ತಿಗಳ ವ್ಯಕ್ತಿತ್ವ ಅರಳಿಸುವ ಶಕ್ತಿ ಖಂಡಿತಾ ನನ್ನ ಲೇಖನಿಗಿಲ್ಲ. ಹಾಗೆಂದು ಸುಮ್ಮನಿರಲು ಒಪ್ಪದ ನನ್ನ ಮನದ ಒತ್ತಡಕ್ಕೆ ಮಣಿದು ಶ್ರೀಯುತರ ಬಗೆಗೆ ಈ ಕಿರು ಲೇಖನ ಸಮರ್ಪಿಸುವೆ.

“ಹುಟ್ಟಿದವರೆಲ್ಲಾ ಸಾಯಲೇ ಬೇಕು”. ಇದು ಪ್ರಕೃತಿ ಧರ್ಮ. ಇದಕ್ಕೂ ಮಿಗಿಲಾದ ಧರ್ಮ “ಬದುಕಿರುವಾಗ ಸತ್ತು ಸತ್ತ ಮೇಲೆ ಬದುಕುವುದು”. ಈ ಮೇರು ಧರ್ಮದ ಹಾದಿ ಹಿಡಿದವರು ನಮ್ಮ ದಿII ಲಂಕಾ ಕೃಷ್ಣಮೂರ್ತಿಗಳು.

ಶ್ರೀಯುತರು ನಾ ಕಂಡ ಹಿರಿಯ ಚೇತನಗಳಲ್ಲಿ ಒಬ್ಬರಾಗಿರುವರು. ಅವರನ್ನು ಸ್ಮರಿಸುವುದೂ ಒಂದು ಪುಣ್ಯಕಾರ್ಯವೆಂದು ಬಗೆವೆ. ಅವರಿಂದ ಉಪಕೃತರಾದವರು ಎಷ್ಟೋ ಮಂದಿ. ಅವರಲ್ಲಿ ನಾನೂ ಒಬ್ಬ. ಅವರು ನನ್ನ ಲೇಖನಿಗೆ ಅಮೃತಸೇಚನ ನೀಡಿರುವರು. ಅವರನ್ನು ನಾನೆಂದೂ ಮರೆಯಲಾರೆ. ನನ್ನ ಅವರ ಪರಿಚಯವಾದದ್ದು 1993ರಲ್ಲಿ. ಪರಿಚಯದ ಸಂದರ್ಭ ಎಂದರೆ ನಾನು ಬರೆದು ಪ್ರಕಟಿಸಿದ ಎರಡು ಕೃತಿಗಳು “ಶಬರಿಮಲೆ ಯಾತ್ರಾ ಮೋಡಿ” “ಕರಡಿ ಅಜ್ಜಯ್ಯ ದರ್ಶನ” ಅವರ ಕೈ ಸೇರಿ, ಅವರು ಅವುಗಳನ್ನು ತಮ್ಮ ಪತ್ರಿಕೆ “ಧರ್ಮಪ್ರಭ”ದಲ್ಲಿ ಲೇಖನ ಬರೆದು ಪರಿಚಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು. ಶ್ರೀಯುತರ ಕಾರ್ಯದಲ್ಲಿ ಅವರ ಬಲಗೈ ಬಂಟರಂತೆ ದುಡಿದ ಮತ್ತೊಬ್ಬ ಹಿರಿಯ ಚೇತನ ಅವರ ಗೆಳೆಯರಾದ(ನನಗೂ ಗೆಳೆಯರೆ) ಶ್ರೀ ಬಿ. ಭಗವಾನ್ ಸಿಂಗ್ ರವರು ಬೆಂಗಳೂರು ವಕೀಲ ಸಂಘದ ನಂಟಿನವರು. ಅವರಲ್ಲಿ ಒಮ್ಮೆ ನಾನು ಲಂಕಾ ಕೃಷ್ಣಮೂರ್ತಿಗಳನ್ನು ಕಂಡು ಮುಖತಃ ವಿಚಾರ ವಿನಿಮಯ ಮಾಡಿಕೊಳ್ಳುವ ನನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿ ಅದಕ್ಕಾಗಿ ಅವಕಾಶ ಕಲ್ಪಿಸಲು ವಿನಂತಿಸಿದ್ದೆ. ಈ ವಿಚಾರ ಅರಿತ ಲಂಕಾ ಕೃಷ್ಣಮೂರ್ತಿಗಳು ಶ್ರೀ ಬಿ. ಭಗವಾನ್ ಸಿಂಗ್ ರವರೊಂದಿಗೆ ಮಾರನೆ ದಿನವೆ ನಮ್ಮ ವಕೀಲರ ಸಂಘಕ್ಕೆ ಬಂದು ನನ್ನನ್ನು ಭೇಟಿ ಮಾಡಿ ಒಂದು ತಾಸು ವಿಚಾರವಿನಿಮಯಕ್ಕೆ ಅವಕಾಶಮಾಡಿಕೊಟ್ಟರು. ಇದು ದಿII ಲಂಕಾ ಕೃಷ್ಣಮೂರ್ತಿಗಳ ಹೃದಯ ವಿಶಾಲತೆಗೆ ಹಿಡಿದ ಕನ್ನಡಿ ಅಲ್ಲವೆ?

ನಂತರದ ಸಂಪರ್ಕದಿಂದ ನನಗೆ ಅವರ ಸರಳತೆ, ಸಜ್ಜನಿಕೆ, ಆಳವಾದ ಪಾಂಡಿತ್ಯ, ಸೇವಾಮನೋಧರ್ಮ, ಧರ್ಮಪಾಲನೆಯಲ್ಲಿ ಆಸಕ್ತಿ ಮುಂತಾಗಿ ಅನೇಕ ಗುಣಗಳ ಕಂಡು ಬೆರಗಾದೆ. ಇಷ್ಟೆಲ್ಲಾ ಗುಣನಿಧಿಯಾಗಿದ್ದರೂ ಶ್ರೀಯುತರು ತೋರಿಕೆ ಹಂಬಲ ಎಳ್ಳಷ್ಟು ಇಲ್ಲದೆ ಅವರ ಬಗ್ಗೆ ಒಲವು ತಾನೇ ತಾನಾಗಿ ಮೂಡಿತು. ಅವರ ಲೇಖನಗಳನ್ನು “ಧರ್ಮಪ್ರಭ” ದಲ್ಲಿ ಆಸಕ್ತಿಯಿಂದ ಓದತೊಡಗಿದೆ. ಗಾಯತ್ರಿ ಮಂತ್ರದ ಬಗೆಗಿನ ಅವರ ಲೇಖನ ಮನಸೂರೆಗೊಂಡವು. ಅವು ಉಪಯುಕ್ತ ಹಾಗೂ ಮಹತ್ವದ ಲೇಖನಗಳು. ಬಿಡಿ ಲೇಖನಗಳನ್ನು ಒಂದು ಪುಸ್ತಕ ರೂಪದಲ್ಲಿ ತರಲು ಶ್ರೀಯುತರಲ್ಲಿ ವಿನಂತಿಸಿದೆ. ಅವರು “ಅದಕ್ಕೆ ಕಾಲ ಬರಲಿ” ಎಂದು ಹೇಳಿದ್ದರು. 11-11-1996ರಲ್ಲಿ ಅವರಿಗೆ ಕಾಲನ ಕರೆ ಬಂದದ್ದು, ಒಬ್ಬ ಆತ್ಮೀಯ ಬಂಧುವನ್ನು ಕಳೆದುಕೊಂಡ ದುಃಖವಾಯಿತು. ಲಂಕಾ ಕೃಷ್ಣಮೂರ್ತಿಗಳ ಶರೀರ ಅಳಿಯಿತು. ನಿಜ. ಆದರೆ ಅವರ ಮನ ನಮ್ಮೊಂದಿಗಿದೆ ಎನ್ನುವುದು ಸತ್ಯ! ಅವರು ಬೆಳಸಿ ಪೋಷಿಸಿದ “ಸನಾತನ ಧರ್ಮ ಸಂರಕ್ಷಣಾ ಸಂಸ್ಥೆ” ಸಾಕಷ್ಟು ಬೆಳೆದಿದೆ. ಅವರ ಆಶೋತ್ತರ ಈಡೇರಿರುವುದೆಂದು ನಂಬಿರುವೆ. ಸಾರ್ಥಕ ಬಾಳು ಬಾಳಿದ ಲಂಕಾ ಕೃಷ್ಣಮೂರ್ತಿಗಳ ಆತ್ಮಕ್ಕೆ ಶಾಂತಿ ಕೋರಿ ನಮಿಸುವೆ.

ಓಂ ಶಾಂತಿಃ ಶಾಂತಿಃ ಶಾಂತಿಃ