ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು                        

   (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ 

ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

ಅಧ್ಯಕ್ಷರ ನುಡಿ

ಸನಾತನ ಧರ್ಮ ಸಂರಕ್ಷಣ ಸಂಸ್ಥೆಯ ಹಿರಿಯ ಟ್ರಸ್ಟಿಗಳೂ ಮತ್ತು ಈ ಸಂಸ್ಥೆಯ ಮುಖವಾಣಿ ಆಗಿರುವ “ಧರ್ಮಪ್ರಭ” ಮಾಸಿಕವನ್ನು ಹುಟ್ಟುಹಾಕಿದವರೂ, ಅದರ ಸಹಾಯಕ ಸಂಪಾದಕರೂ ಆಗಿದ್ದ ಪೂಜ್ಯ ಶ್ರೀ ಲಂಕಾ ಕೃಷ್ಣಮೂರ್ತಿಯವರು ನಮ್ಮೆಲ್ಲರನ್ನೂ ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಈ ಪುಣ್ಯಶ್ಲೋಕರನ್ನು ನಾವು ನೆನಸದ ದಿನವಿಲ್ಲ. ಈ ಸಂಚಿಕೆಯನ್ನು ಅವರ ಸ್ಮರಣಾರ್ಥ ಭಕ್ತಿಪೂರ್ವಕವಾಗಿ ಹೊರತರುತ್ತಿದ್ದೇವೆ. ಹೋದ ವರ್ಷ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದಾಗ ಹೀಗೆ ಬರೆದಿದ್ದೆ.

“ಅವರು ನಮ್ಮ ಸನಾತನ ಧರ್ಮಸಂರಕ್ಷಣ ಸಂಸ್ಥೆಯ ಜೀವನಾಡಿಯಾಗಿ, ಅಖಂಡ ಸೇವೆ ಸಲ್ಲಿಸುತ್ತಿದ್ದರು. ಸಂಸ್ಥೆಯು, ಒಬ್ಬ ಉದ್ದಾಮ ಪಂಡಿತನನ್ನು ಕಳೆದುಕೊಂಡು ಅನಾಥವಾಗಿದೆ. “ಧರ್ಮಪ್ರಭ” ಪತ್ರಿಕೆಯಲ್ಲಿನ ಅವರ ಸಂಪಾದಕೀಯ ಲೇಖನಗಳು, ಉದಾತ್ತ ಚಿಂತನೆಗಳಿಂದ ಕೂಡಿದ್ದು, ಓದುಗರ ಮೆಚ್ಚಿಗೆಯನ್ನು ಪಡೆದಿದ್ದುವು. ಅವರ ಲೇಖನಿ ಈಗ ಬತ್ತಿದೆ. ಆದರೆ ಅವರ ಚಿಂತನೆಗಳ ಸೊಗಸು ಯಾವತ್ತೂ ಉಳಿಯತಕ್ಕುವು. ನಮ್ಮ ಸಂಸ್ಥೆಗೆ ಅನೇಕ ದೇಣಿಗಳನ್ನು ಒದಗಿಸಿಕೊಟ್ಟು ಸಂಸ್ಥೆಯನ್ನು ಒಪ್ಪವಾಗಿ ಬೆಳಸಿದರು. ಅವರು ಅತ್ಯಂತ ಸರಳಜೀವಿಗಳಾಗಿದ್ದು, ಸಮಭಾವದಿಂದ ಕೂಡಿ ಖುಷಿ ಸದೃಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಅವರು ಇನ್ನಿಲ್ಲ. ಅವರ ಮಾರ್ಗದರ್ಶನವನ್ನು ನಾವು ಎಂದೂ ಮರೆಯುವ ಹಾಗಿಲ್ಲ”

ಅವರ ಶಾಶ್ವತವಾಣಿ, ಬರಹಗಳು ಹಾಗೂ ಅವರ ಪರಮ ಸಾತ್ವಿಕ ವ್ಯಕ್ತಿತ್ವ ಈಗಲೂ ನಮ್ಮ ಕೈ ಹಿಡಿದು ನಡೆಸುತ್ತಿವೆ. ಋಷಿವಾಣಿ ಹೀಗಿದೆ:

“ಯಸ್ತು ವಿಜ್ಞಾನವಾನ್ ಭವತಿ ಸುಮನಸ್ಕಃ ಸದಾ ಶುಚಿಃI

ಸತು ತತ್ವದ ಮಾಪ್ನೋತಿ ಯಸ್ಮಾದ್ಭೂಯೋ ನಜಾಯತೆII”

ಯಾವನು ಯಾವಾಗಲೂ ಜ್ಞಾನವುಳ್ಳವನಾಗಿ, ನಿಗ್ರಹಿಸಿದ ಮನವುಳ್ಳವನಾಗಿ ಶುಚಿಯಾಗಿರುವನೋ ಅವನು ಪರಮ ಪದವನ್ನು ಹೊಂದುತ್ತಾನೆ. ಆದ್ದರಿಂದ ಅವನು ಪುನಃ ಹುಟ್ಟುವುದಿಲ್ಲ. ಪೂಜ್ಯ ಶ್ರೀ ಲಂಕಾ ಅವರಿಗೆ ಮುಕ್ತಿ ಲಭ್ಯವಾಗಿದೆ. ಅವರನ್ನು ನಾವೆಲ್ಲರೂ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇವೆ.

ನಮ್ಮ ಕೋರಿಕೆಯನ್ನು ಮನ್ನಿಸಿ ಅನೇಕ ಸಹೃದಯ ಲೇಖಕ ಲೇಖಕಿಯರು, “ಧರ್ಮಪ್ರಭ” ಅಭಿಮಾನಿಗಳು, ಅವರ ವ್ಯಕ್ತಿತ್ವ – ಸಾಧನೆಗಳ ಬಗ್ಗೆ ಹಲವಾರು ಲೇಖನ, ಸಂದೇಶಗಳನ್ನು ಬರೆದು ಕಳುಹಿಸಿದ್ದಾರೆ. ಇವರಿಗೆಲ್ಲ ನಮ್ಮ ಅನಂತ ವಂದನೆಗಳು. ಆ ಎಲ್ಲ ಲೇಖನಗಳನ್ನು ಈ ಸಂಚಿಕೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಪ್ರಕಟಿಸಲಾಗಿಲ್ಲ. ಕ್ಷಮಿಸಬೇಕು. ಸೂಕ್ತ ಕಾಲದಲ್ಲಿ ಯುಕ್ತ ಲೇಖನಗಳನ್ನು ಉಪಯೋಗಿಸಿಕೊಳ್ಳಲಾಗುವುದು.

ಈ ಸಂಚಿಕೆಯನ್ನು ಹೊರತರಲು “ಧರ್ಮಪ್ರಭ” ಪತ್ರಿಕೆಯ ಗೌರವ ಸಂಪಾದಕರಾದ ಶ್ರೀ ಭಗವಾನ್ ಸಿಂಗ್, ಗೌರವ ಸಹ ಸಂಪಾದಕರಾದ ಶ್ರೀ ಟಿ. ಆರ್. ಮಹದೇವಯ್ಯ ಮತ್ತು ಶತಾವಧಾನಿ ಆರ್. ಗಣೇಶ್ ಅವರು ಅಪಾರ ಶ್ರಮವಹಿಸಿದ್ದಾರೆ. “ಧರ್ಮಪ್ರಭ” ಸಂಪಾದಕ ಮಂಡಳಿ ಸದಸ್ಯರು ಮತ್ತು ನಮ್ಮ ಸಂಸ್ಥೆಯ ಧರ್ಮದರ್ಶಿಗಳೂ ಈ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಈ ಸಂಚಿಕೆಯನ್ನು ಅಚ್ಚುಕಟ್ಟಾಗಿ ಸಕಾಲದಲ್ಲಿ ಹೊರತರಲು ಉತ್ಸಾಹೀ ಯುವ ಉದ್ಯಮಿ ಓರಿಯಂಟ್ ಪವರ್ ಪ್ರೆಸ್ಸಿನ ಒಡೆಯರಾದ ಶ್ರೀ ಜಿ.ಎಸ್. ಕುಮಾರಸಸ್ವಾಮಿಯವರು ಶ್ರದ್ಧೆಯಿಂದ ದುಡಿದಿದ್ದಾರೆ. ಇವರಿಗೆಲ್ಲ ನನ್ನ ಹೃತ್ಪೂರಕ ವಂದನೆಗಳು. ಜಾಹೀರಾತುದಾರರಿಗೂ ನನ್ನ ಗೌರವಪೂರ್ವಕ ವಂದನೆಗಳು.               

                                                   ಯೈ.ಯಂ.ಸಿ. ಶರ್ಮ

                                    ಅಧ್ಯಕ್ಷ, ಸನಾತನ ಧರ್ಮಸಂರಕ್ಷಣ ಸಂಸ್ಥೆ (ರಿ)