ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು                        

   (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ 

ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

ಲೆಂಕರ ಲೆಂಕ ದಿII ಲಂಕಾ ಕೃಷ್ಣಮೂರ್ತಿ

                                          ನಾ. ಮ. ಸಿದ್ಧರಾಮಯ್ಯ

ಮನುಷ್ಯನಿಗೆ ಚತುರ್ವಿಧ ಪುರುಷಾರ್ಥಗಳುಂಟು. ಧರ್ಮ, ಅರ್ಥ, ಕಾಮ, ಮೋಕ್ಷ. ಈ ನಾಲ್ಕರಲ್ಲಿ ಲೋಕದ ಜನರು ಅರ್ಥ – ಕಾಮಗಳನ್ನು ಹಿಡಿದುಕೊಂಡು ಕೊನೆಯಲ್ಲಿರುವ ಧರ್ಮ – ಮೋಕ್ಷಗಳೆರಡನ್ನು ಬಿಟ್ಟು ಜ್ಞಾನಶೂನ್ಯರಾಗಿ ಪ್ರಾಪಂಚಿಕದಲ್ಲಿ ದುಃಖಿಗಳಾಗಿರುತ್ತಾರೆ. ಅರ್ಥವಿರುವುದು ಧರ್ಮಕ್ಕಾಗಿಯೇ ಮತ್ತು ಕಾಮವಿರುವುದು ಮೋಕ್ಷಕ್ಕಾಗಿಯೇ ಎಂದು ತಿಳಿದವರೇ ಮಾನವರು. ಮನುಷ್ಯತ್ವ ಉಳ್ಳವರು! ಮನುಷ್ಯತ್ವ ಪಡೆದು ಮಾನವರಾಗಿ ತಮ್ಮ ಜೀವನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರೆಂದರೆ ಭಕ್ತರ ಭಕ್ತ (ಲೆಂಕರ ಲೆಂಕ ) ನಾಗಿ ಬಾಳು ಸಾರ್ಥಕ ಪಡಿಸಿಕೊಂಡವರೆಂದರೆ  ದಿII ಲಂಕಾ ಕೃಷ್ಣಮೂರ್ತಿಯವರು. ಅವರು “ಧರ್ಮಪ್ರಭ” ಮಾಸಿಕಕ್ಕೆ ಸಂಸ್ಥಾಪಕರಾಗಿ, ಚೈತನ್ಯ ಪುರುಷರಾಗಿ ಬಾಳಿದವರು. ಸನಾತನ ಧರ್ಮವನ್ನು ಎತ್ತಿ ಹಿಡಿದ ಲೇಖನಗಳನ್ನು ಅನುಭವ ಸಾಹಿತಿಗಳಿಂದ ಬರೆದು ತರಿಸಿ, ಪ್ರಕಟಿಸಿ ಕನ್ನಡನಾಡಿನಲ್ಲಿ ಸಾಹಿತ್ಯ ಸರಸ್ವತಿಯ ಸೇವೆ ಮಾಡಿದ್ದಾರೆ. 11-11-97ಕ್ಕೆ ನಮ್ಮನ್ನಗಲಿ ಒಂದು ವರ್ಷವಾದರೂ ಅವರು ಬಿಟ್ಟು ಹೋದ “ಧರ್ಮಪ್ರಭ” ಆಚಂದ್ರಾರ್ಕವಾಗಿ ಭೂಮಾನುಭೂತಿಯಲ್ಲಿ ಬೆಳಗಿ, ಸದಾ ಕಂಗೊಳಿಸುವುದು ಋತುಸತ್ಯವಾದ ಮಾತಾಗಿದೆ. ಒಳ್ಳೆಯ ವಿಚಾರಗಳು ಸಮಾಜದ ಹಿತಚಿಂತಕರು ಮಾಡುವ ಧ್ಯೇಯ ಧೋರಣೆಗಳು ದಿII ಲಂಕಾ ಕೃಷ್ಣಮೂರ್ತಿಯವರ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಓತಪ್ರೋತದಂತೆ ನೈಜತೆಯ ನಿಲುಗನ್ನಡಿಯಲ್ಲಿ ಬಿಂಬ ಪ್ರತಿಬಿಂಬದಂತೆ ಬೆಳಗಿ ಪ್ರತಿಮಾರೂಪದಲ್ಲಿ ಮಹೋಪಮೆಯಾಗಿದ್ದವು. ಶ್ರೀ ಕೃಷ್ಣಮೂರ್ತಿಯವರು ದೈಹಿಕವಾಗಿ ಕಣ್ಮರೆಯಾಗಿದ್ದರೂ ಅವರ ಸಮಾಜ ಸೇವಾಭಾವನೆಯ ದೃಷ್ಟಿಕೋನದಿಂದ ನಮ್ಮೆಲ್ಲರ ಕಣ್ಮಣಿಗಳಾಗಿದ್ದಾರೆ.