ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು                        

   (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ 

ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

ಸ್ಲೀಪಿಂಗ್ ಬ್ಯೂಟಿ – ಒಂದು ಸವಿನೆನಪು

                                      – ಬ. ವೆಂ. ಗೋವಿಂದರಾಜು

 ದಿವಂಗತ ಲಂಕಾ ಕೃಷ್ಣಮೂರ್ತಿಗಳು 1949 ರಿಂದಲೂ ನನ್ನ ಸ್ನೇಹಿತರು. ನಾನು, ಅವರು ಮತ್ತು ಶ್ರೀ ಬಿ. ಭಗವಾನ್ ಸಿಂಗ್ ರವರು ಎಲ್ಲಾ ಒಟ್ಟಿಗೆ ಲಾ ಕಾಲೇಜ್ ಹಾಸ್ಟಲ್ ನಲ್ಲಿದ್ದೆವು. ನಾವೆಲ್ಲ ಶ್ರೀ ಲಂಕಾ ರವರಿಗೆ “ಸ್ಲೀಪಿಂಗ್ ಬ್ಯೂಟಿ” ಎಂದು ಹೆಸರಿಟ್ಟಿದ್ದೆವು. ಅವರ ಕೆದರಿದ ತಲೆ ಕೂದಲು ಮತ್ತು ಯಾವಾಗಲೂ ಸ್ವಲ್ಪ ಮಂಕಾಗಿರುತ್ತಿದ್ದ ಅವರ ಸ್ವಭಾವ ಇದಕ್ಕೆ ಕಾರಣ. ಜೊತೆಗೆ ಅವರು ಮಿತಭಾಷಿಗಳು. ಇವರು ಶೇಷಾದ್ರಿಪುರಂ ಹೈಸ್ಕೂಲಿನಲ್ಲಿ ಅರೆಕಾಲಿಕ ಉಪಾಧ್ಯಾರಾಗಿ ಸಹ ಕೆಲಸಮಾಡುತ್ತಿದ್ದರೆಂದು ನನ್ನ ನೆನಪು. ನಾನೂ ಅವರೂ ತೆಲುಗಿನಲ್ಲೆ ಮಾತನಾಡುತ್ತಿದ್ದೆವು. ಅವರ ಸ್ವಾರಸ್ಯಕರವಾದ ತೆಲುಗು ಚಾಟು ಪದ್ಯಗಳೇ ನನ್ನನ್ನು ಅವರು ಆಕರ್ಷಿಸಲು ಕಾರಣ. ಅವರು ನಗುತ್ತಿದ್ದುದೇ ಅಪರೂಪ. ಒಮ್ಮೊಮ್ಮೆ ಮಾತ್ರ ಮುಗುಳುನಗೆ, ಸರಳತೆಯ ಸಕಾರಮೂರ್ತಿ. ಉಡುಪು ಮತ್ತು ನಡೆ-ನುಡಿ ಎಲ್ಲವೂ ಸರಳ. ಆಡಂಬರ, ಕಪಟರೂಪ ಯಾವುದರಲ್ಲೂ ಇಲ್ಲ. ಬಿಚ್ಚು ಮನಸ್ಸು, ಮಕ್ಕಳ ಮನಸ್ಸಿನಂತೆ. ಒಮ್ಮೆಅವರನ್ನು ನಾನು ಉಪಹಾರಕ್ಕಾಗಿ ರಾಮಕೃಷ್ಣ ಲಂಚ್ ಹೋಂಗೆ ಕರೆದುಕೊಂಡು ಹೋಗಿದ್ದೆ. ಇಬ್ಬರೂ ತಿಂಡಿ ತಿಂದೆವು. ನಾನು ಇಬ್ಬರಿಗೂ ಕಾಫಿ ತರಲು ಹೇಳಿದೆ. ಅವರು ಕಾಫಿ ಬೇಡ, ಇನ್ನೊಂದು ಪ್ಲೇಟು ತಿಂಡಿಯನ್ನೇ ತೆಗೆದುಕೊಳ್ಳುತ್ತೇನೆ ಎಂದರು. ಅದು ಅವರ ಮುಗ್ಧ ನಡುವಳಿಕೆ. ಅವರಲ್ಲಿ ಹೃದಯವಂತಿಕೆ ಇತ್ತು. ಧರ್ಮಾಸಕ್ತರು, ದೈವಭಕ್ತರು ಮತ್ತು ಸತ್ಯವಂತರು. ನಾನು ನ್ಯಾಯಾಧೀಶನ ಕೆಲಸಕ್ಕೆ ಸೇರಿದೆ. ಅವರು ಹೈಕೋರ್ಟಿನಲ್ಲಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿದ್ದರು. ನನ್ನ ಸ್ನೇಹಿತರೆಂಬ ಸಲಿಗೆಯಿಂದ ನಾನು ಅವರಿಂದ ಕೆಲೊವೊಂದು ಮಾಹಿತಿ ಅಪೇಕ್ಷಿಸಿದೆ. ಅವರು ಕರ್ತವ್ಯದ ದೃಷ್ಟಿಯಿಂದ ನಿರಾಕರಿಸಿದರು. ನಿಯಮಗಳಿಗೇ ಅಂಟಿಕೊಂಡರು. ನನಗೆ ಸ್ವಲ್ಪ ಬೇಸರವಾಯ್ತು. ಆದರೂ ಅವರ ಕರ್ತವ್ಯನಿಷ್ಠೆಯನ್ನು ಮೆಚ್ಚದಿರಲಾಗಲಿಲ್ಲ. ಶಿಸ್ತಿನಿಂದ ಕೆಲಸ ಮಾಡಿ, ಹೆಸರು ಗಳಿಸಿದರು. ಅವರ ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ಅರಿವು, ಸೇವಾ ಮನೋಭಾವ ಗಮನಾರ್ಹ. ಸನಾತನ ಧರ್ಮ ಸಂಸ್ಥೆಗೆ, “ಧರ್ಮಪ್ರಭ” ಪತ್ರಿಕೆಗೆ ಅವರ ಸೇವೆ, ಕೊಡುಗೆ ಅಪಾರ. ಬೆಲೆಬಾಳುವ ಕಲೆಗಾರಿಕೆ ಅವರಿಗೆ ತಿಳಿದಿತ್ತು. ಸಾರ್ಥಕ ಜೀವನ, ತುಂಬು ಜೀವನ ನಡೆಸಿದರು. ಅವರೊಬ್ಬ ಆದರ್ಶವ್ಯಕ್ತಿ. ಅವರ ನೆನಪು ಸದಾ ಸವಿನೆನಪು.