ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು                        

   (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ 

ಪೂಜ್ಯ ದಿII ಲಂಕಾ ಕೃಷ್ಣಮೂರ್ತಿ – ಮೂರು ದಶಕಗಳ ಸ್ಮರಣೆ      

                            – ಶ್ರೀಮತಿ ಪದ್ಮ ಪುಟ್ಟಣ್ಣ

ಸುಮಾರು ೪೦ ವರ್ಷಗಳ ಹಿಂದಿನ ಮಾತು. ಆಗ ನಾವು ಐದು ಸಂಸಾರಗಳಿದ್ದ ಒಂದು ವಠಾರದಲ್ಲಿ ಸಂಸಾರ ಹೂಡಿದ್ದವು. ೧೯೫೮ನೇ ಇಸವಿ. ಆ ವಠಾರದಲ್ಲಿ ನಮ್ಮ ಮನೆ ಎದುರಿಗೇ ಶ್ರೀ ಲಂಕಾ ಕೃಷ್ಣಮೂರ್ತಿ ಅವರ ಸಂಸಾರ ಇದ್ದದ್ದು. ಶ್ರೀ ಲಂಕಾರವರಿಗೆ ಆಗ 25 – 26 ವರ್ಷ ವಯಸ್ಸು. ಅವರ ಶ್ರೀಮತಿ ಲಲಿತಮ್ಮನವರಿಗೆ 22 ವರ್ಷ ವಯಸ್ಸು. ಅವರ ಮಗ ಸುಬ್ರಹ್ಮಣ್ಯನಿಗೆ ಮೂರು ವರ್ಷ. ಅವರ ತಂದೆ, ತಾಯಿ, ತಮ್ಮ ಕೂಡ ಇವರಲ್ಲೇ ಇದ್ದರು. ಆವೇಳೆಗೆ ಇವರು ದೈವತ್ವವನ್ನು ಅಪ್ಪಿದ್ದರು. ಪ್ರಾತಃಕಾಲ ಸಂಧ್ಯಾವಂದನೆ, ಸೂರ್ಯ ನಮಸ್ಕಾರ, ಅನಂತರ ಭೋಜನ. ಸುಮಾರು ಹತ್ತು 10 ಘಂಟೆಗೆ ಕೆಲಸಕ್ಕೆ ಹೊರಟಾಗ ಅನನ್ಯ ಭಕ್ತಿಯಿಂದ ತುಳಸಿ ಬೃಂದಾವನಕ್ಕೆ ನಮಿಸಿ ತೆರಳುತ್ತಿದ್ದರು, ಆಗಲೂ ಪೋಷಾಕು ಪ್ರಿಯರಲ್ಲ್. ಮಿತಭಾಷಿ. ಗಾಂಭೀರ್ಯ ನಿಧಿ. ಆಮೇಲೆ ಒಂದು ದಶಕ ಸಂಪರ್ಕ ಅಷ್ಟಾಗಿರಲಿಲ್ಲ. 1967ನೇ ಇಸವಿಯಲ್ಲಿ ನಾವು ಜಯನಗರದ ೯ನೇ ಬ್ಲಾಕಿನಲ್ಲಿ ನೆಲಸಿದೆವು. ಅವರು ಇಂದಿರಾನಗರದಲ್ಲಿ ಮನೆ ಮಾಡಿ ಸಂಸಾರ ಹೂಡಿದ್ದರು. ಆವೇಳೆಗೆ ಮೂರು ಮಕ್ಕಳು ಆಗಿದ್ದರು. ಇವರದು ಅಚ್ಚುಕಟ್ಟಾದ ಸಂಸಾರ. ಮನೆ ನಂದನವನ. ಒಲವು ಪ್ರೀತಿಗಳ ಆಗರ. ಮಕ್ಕಳೆಲ್ಲರೂ ತಾಯಿ ತಂದೆಗಳಂತೆ ಸುಸಂಸ್ಕೃತರು. ವಿದ್ಯಾಸಂಪನ್ನರು. ಮನೆಯಲ್ಲಿ ಆಧ್ಯಾತ್ಮಿಕ ಪ್ರಭೆ ತುಂಬಿರುತ್ತಿತ್ತು. ಉಚ್ಚ ನ್ಯಾಯಾಲಯದಲ್ಲಿ ಅಡಿಷನಲ್ ರಿಜಿಸ್ಟ್ರಾರರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನವನ್ನು ಸಾರ್ಥಕ ಪಡಿಸಿಕೊಂಡವರು ಶ್ರೀಲಂಕಾ ಅವರು. ಅವರು ವೃತ್ತಿಯಿಂದ ನಿವೃತ್ತರಾದರೇ ಹೊರತು, ಜೀವನದಿಂದಲ್ಲ. ಜೀವನೋತ್ಸಾಹ ಇನ್ನೂ ವಿಕಸಿತವಾಯಿತು. ಯಾವುದೇ ಸ್ವಂತ ಹಿತಾಸಕ್ತಿ ಅಥವಾ ಪೂರ್ವಾಗ್ರಹ ಪೀಡಿತವಿಲ್ಲದೆ, ಅವರ ಜೀವನ ಸಮಾಜದ ಸುವ್ಯವಹಾರದಲ್ಲಿ ಲೀನವಾಯಿತು. ಅವರ ಸಹವಾಸದಿಂದ ಪ್ರತಿಯೊಬ್ಬರಿಗೂ ಒಳ್ಳೆಯ ಜೀವನದರ್ಶನ ಲಭ್ಯವಾಯಿತು.

ಅವರ ಜೀವನದಲ್ಲಿ ಸನಾತನ ಧರ್ಮ ಸಂರಕ್ಷಣ ಸಂಸ್ಥೆ ಸ್ಥಾಪನೆ ಮತ್ತು “ಧರ್ಮಪ್ರಭ” ಮಾಸಿಕದ ಪ್ರಕಟಣೆ ಅಸಾಧಾರಣ ಮೈಲಿಗಲ್ಲುಗಳು. ಇವೆರಡಕ್ಕೂ ಅವರ ನಿಸ್ವಾರ್ಥ ಸೇವೆ ಅನುಪಮ. ನಮ್ಮ ಯಜಮಾನರೂ ಇವರ ಜೊತೆ ನಾರಿನಂತೆ ಸೇರಿ ಹೋದರು. ಶ್ರೀ ಲಂಕಾರವರು ಧರ್ಮ ಸೂಕ್ಷ್ಮವನ್ನೊಳಗೊಂಡ ಪ್ರಶ್ನೆಗಳಿಗೆ ಅಸದೃಶ ಉತ್ತರಗಳನ್ನು ಪಾಂಡಿತ್ಯಪೂರ್ವಕ ಅಧಿಕಾರಿವಾಣಿಯಿಂದ ಕೊಡುತ್ತಿದ್ದರು. ಇವರನ್ನು “ಮಹಾತ್ಮ”ರೆಂದೇ ಕರೆಯಬಹುದು. ಇವರಲ್ಲಿ ಮೋಸ, ವಂಚನೆ, ಕೃತ್ರಿಮ, ಯಾವುವೂ ಹತ್ತಿರ ಸುಳಿಯುತ್ತಿರಲಿಲ್ಲ. ಪ್ರೀತಿ, ವಾತ್ಸಲ್ಯ, ಸತ್ಯ, ಶಾಂತಿ, ನಿಷ್ಕಪಟ ಸೇವೆ ಇವರಲ್ಲಿ ತಾಂಡವವಾಡುತ್ತಿತ್ತು.

ಇವರನ್ನು ಶ್ರೀ ಈಶ್ವರ ಚಂದ್ರ ವಿದ್ಯಾಸಾಗರರಿಗೆ ಹೋಲಿಸಬಹುದು. ಅವರಲ್ಲಿದ್ದ ಸರಳತೆ, ವಿದ್ವತ್ತು, ನಿರಾಡಂಬರಿಕೆ, ಉತ್ಕಟದೇಶಪ್ರೇಮ, ಸಮಾಜಪ್ರೀತಿ, ಶ್ರೀ ಲಂಕಾದವರಲ್ಲೂ ಎದ್ದು ಕಾಣುತ್ತಿತ್ತು. ಆಂಜನೇಯನಲ್ಲಿದ್ದ ಭಗವತ್ ಭಕ್ತಿ ವಿವೇಕ, ಮಾತಿನಲ್ಲಿ ವಿದ್ವತ್ತು, ಶ್ರದ್ಧೆ ಇವುಗಳನ್ನು ಇವರು ಅಳವಡಿಸಿಕೊಂಡಿದ್ದರು. ಜ್ಯೋತಿಷ್ ಶಾಸ್ತ್ರ, ಚಿತ್ರಕಲೆ, ಸಂಗೀತ, ಸಾಹಿತ್ಯ, ಅಸ್ಟಾವಧಾನ, ಧರ್ಮಶಾಸ್ತ್ರಗಳಲ್ಲಿ ನುರಿತವರು. ಸರಸ್ವತೀ ಪುತ್ರರೇ ಆಗಿದ್ದರು. ಅವರಲ್ಲಿದ್ದ ಜ್ಞಾನಭಂಡಾರವನ್ನು ಬೇರೆಯವರಿಗೂ ಸಮೂಹ ಮಾಧ್ಯಮಗಳಲ್ಲಿ ಹಂಚುತ್ತಿದ್ದರು.

ಇವರು ನಮ್ಮನ್ನು ಇಷ್ಟು ಬೇಗ ಅಗಲುವರೆಂದು ಯಾರೂ ತಿಳಿದಿರಲಿಲ್ಲ. ಅವರು ಶಿವಸಾಯುಜ್ಯವನ್ನು ಪಡೆದಂದು, ಅವರ ಅಧ್ಯಾತ್ಮಿಕ ಇಂದ್ರಚಾಪ ಸಮಾಜವನ್ನು ಆವರಿಸಿತ್ತು. ಅವರ ಹೆಸರು ಎಂದಿಗೂ ಹಸಿರು.