ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು                        

   (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ 

ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

ನಾ ಕಂಡ ಕೃಷ್ಣಮೂರ್ತಿಗಳು – ಎಲ್ಲರಂತಲ್ಲ ಈ ಮಹಾನುಭಾವರು                                                      

                                  -ವಾಣೀರಾವ್

ಈಗ ಹದಿನೈದು ವರ್ಷಗಳ ಹಿಂದೆ ಬೇಸಿಗೆಯ ಬಿಸಿಲಿಲಲ್ಲಿ ಒಬ್ಬರು ಮನೆ ಹುಡುಕುತ್ತ ಬಂದರು. ಆದರೆ ಅವರನ್ನು ಸರಿಯಾಗಿ ಗಮನಿಸದೆ ನಾನು ನನ್ನ ಮಗಳು ಹೊರಗೆ ಹೋಗಿ ಕೊಂಚ ಕಾಲದ ಮೇಲೆ ಮನೆಗೆ ಬಂದೆವು. ಆಗ ಹಿರಿಯರೊಬ್ಬರು ಕುಳಿತಿದ್ದರು. ನನ್ನ ಮಗಳು. ಇವರೇ ನನ್ನ ಸಂಗೀತ ಕಾರ್ಯಕ್ರಮದ ವಿವರವನ್ನು ಕೊಡಲು ಮನೆ ಹುಡುಕುತ್ತ ಬಂದವರು ಎಂದು ಹೇಳಿದಾಗ ಮನಸ್ಸಿಗೆ ನೋವಾಯಿತು. ಅವರನ್ನು ಕ್ಷಮೆ ಕೇಳಿದಾಗ ಮೃದುಮಾತಿನಲ್ಲಿ ಸಮಾಧಾನಪಡಿಸಿದರು.

ಈ ಮಾತಿಗೆ ಹದಿನೈದು ವರ್ಷಗಳೇ ಆಗಿವೆ. ಅಂದಿನಿಂದ ಅವರು ನನಗೆ ಗುರುಗಳು. ಮಾರ್ಗದರ್ಶಕರೂ ಆಗಿ ಅನೇಕ ಸಮಸ್ಯೆಗಳಲ್ಲಿ, ಅನುಕಂಪ, ಸಹಾನುಭವತಿಯನ್ನು ತೋರಿಸುತ್ತಿದ್ದರು. ಅವರನ್ನು ಹೆಚ್ಚು ಹೆಚ್ಚು ತಿಳಿದಂತೆಲ್ಲಾ, ಅವರ ಮೇಲಿನ ಗೌರವ ಹೆಚ್ಚುತ್ತಿತ್ತು. ಕಾರಣ ಅವರು ಎಲ್ಲರಂತಲ್ಲ. ಆ ಸರಳ ವ್ಯಕ್ತಿಯ ಹೃದಯದಲ್ಲಿ ಅಗಾಧವಾದ ವ್ಯಕ್ತಿತ್ವ ಅಡಗಿತ್ತು. ಎಷ್ಟು ಬೇಕೋ ಅಷ್ಟೇ ಮಾತು. ಸರಳವಾದ ಉಡಿಗೆ ತೊಡಿಗೆ. ಮಹಾ ಮೇಧಾವಿ. ತತ್ವ ಜ್ಞಾನಿ. ಎಂಥವರ ಮೇಲೂ ಅಪಾರ ಗೌರವ. ಯಾರ ಮೇಲೂ ಒಂದು ಸಣ್ನ ಮಾತಿಲ್ಲ. ಎಲ್ಲರಲ್ಲೂ ಒಂದು ಆತ್ಮೀಯತೆ. ವಿಶ್ವಾಸ, ಸ್ನೇಹಪರತೆ, ಆಡಂಬರವಿಲ್ಲದ ನಡತೆ. ಈ ಗುಣಗಳು ಅವರನ್ನು ಒಬ್ಬ ಶ್ರೇಷ್ಠವ್ಯಕ್ತಿಯನ್ನಾಗಿ ಮಾಡಿದ್ದವು.

ಎರಡು – ಮೂರು ವರ್ಷ ಅವರು ನಮ್ಮಲ್ಲಿ ಕೆಲವರಿಗೆ ಸಂಸ್ಕೃತ ಕಲಿಸಿದರು. ಆಗ ನಾವು ಕಲಿತ ವಿಷಯದಲ್ಲಿ ಬರೇ ಸಂಸ್ಕೃತ ಭಾಷೆಯೇ ಅಲ್ಲದೆ ಅದೆಷ್ಟೋ ವಿಷಯಗಳನ್ನು ತಿಳಿಯ ಹೇಳುತ್ತಿದ್ದರು. ಅವರೊಂದು   

“ಎನ್ ಸೈಕ್ಲೋಪೀಡಿಯಾ” ಎಂದುಕೊಳ್ಳುತ್ತಿದ್ದೆ. ಅಷ್ಟು ಪಾಂಡಿತ್ಯವಿದ್ದರೂ ತೋರಿಸಿಕೊಳ್ಳದೆ ಇರುವ ಅವರ ಸ್ವಭಾವ ನನಗೆ ಬಹು ಮೆಚ್ಚಿಗೆಯಾಗಿತ್ತು.

ಸಂಸ್ಕೃತ, ತೆಲುಗು, ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ನುರಿತರಾಗಿದ್ದರಲ್ಲದೆ, ಅಷ್ಟಾವಧಾನಿಗಳಾಗಿದ್ದರು. ಸಂಗೀತ, ಸಾಹಿತ್ಯ, ಚಿತ್ರಕಲೆಯಲ್ಲಿಯೂ ಪಳಗಿದ್ದರು.

ಅದೆಷ್ಟೋ ಬಾರಿ ಏನಾದರೊಂದನ್ನು ಅರ್ಥೈಸಿಕೊಳ್ಳಲು ಅವರಲ್ಲಿಗೆ ಹೋದಾಗ, ಅದಾವ ಸಮಯವೇ ಆಗಿರಲಿ. ಅವರಿಗೆ ಎಷ್ಟೇ ಕೆಲಸವಿರಲಿ. ಅಕ್ಕರೆಯಿಂದ ಕೂಡಿಸಿಕೊಂಡು ವಿವರವಾಗಿ ತಿಳಿಸಿಕೊಡುತ್ತಿದ್ದ ಆವರ ದೊಡ್ಡಗುಣವನ್ನು ಹೇಗೆ ತಾನೆ ಮರೆಯಲಿ? ಇಂತಹ ಅಪೂರ್ವ ವ್ಯಕ್ತಿಯನ್ನು ಮರೆಯುವುದಾದರೂ ಹೇಗೆ? ಅವರ ಆತ್ಮಕ್ಕೆ ದೇವರು ಶಾಂತಿ ನೀಡಲೆಂದು ಕೋರುತ್ತ ಇದೊಂದು ನನ್ನ ಪುಟ್ಟ ಶ್ರದ್ಧಾಂಜಲಿಯನ್ನು ಆ ಹಿರಿಯ ವ್ಯಕ್ತಿಗೆಂದು ಧರ್ಮಪ್ರಭೆಗೆ ಅರ್ಪಿಸುತ್ತಿದ್ದೇನೆ. ಅವರ ಆತ್ಮ ಅಮರವಾಗಲಿ!