ತಂಪುಹೊತ್ತಿನಲ್ಲಿ ನೆನೆಯಬೇಕಾದ ಅಪರೂಪದವರು

      – ಟಿ.ಅರ್. ಮಹದೇವಯ್ಯ, ಸಂಪಾದಕ ವರ್ಗದ ಪರವಾಗಿ

        (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ದಿ.ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

            ಮನುಷ್ಯನ ಹುಟ್ಟಿನ ಸಾರ್ಥಕತೆ ನಾಲ್ಕು ಕಾಲ ನಿಲ್ಲಬಲ್ಲ ಏನಾದರೂ ಜನೋಪಯೋಗಿ ಕೆಲಸ ಮಾಡುವುದಲ್ಲಿರುತ್ತದೆ. ತಾನು ತನ್ನ ಮನೆ, ತನ್ನ ಕುಟುಂಬ ಎನ್ನುವ ಸಂಕುಚಿತವಾದ ಸ್ವಾರ್ಥಪರ ದೃಷ್ಟಿಯಲ್ಲಿ ಬದುಕುವವ ಕಣ್ಮರೆಯಾಗಿ ಹೋದ ಮೇಲೆ ಅವನನ್ನು ಯಾರೂ ನೆನಸರು. ಸ್ವಾರ್ಥಪರ ದೃಷ್ಟಿಯಲ್ಲಿ ಬದುಕುವವ ಕಣ್ಮರೆಯಾಗಿ ಹೋದ ಮೇಲೆ ಅವನನ್ನು ಯಾರೂ ನೆನಸರು. ಸ್ವಾರ್ಥಲೇಶವಿಲ್ಲದೆ ಸಕಲರ ಒಳಿತಿಗಾಗಿ ಸೇವೆಗೈದ ಪುಣ್ಯಾತ್ಮರು ದೈಹಿಕವಾಗಿ ಕಣ್ಮರೆಯಾದರೂ ಜನಮನದಲ್ಲಿ ಜೀವಂತವಾಗಿರುತ್ತಾರೆ. ಅವರ ಸಾಧನೆಗಳು, ಅನುಕರಣೀಯವಾದ ಅವರ ನಡವಳಿಕೆಗಳು ಆದರ್ಶವೆನಿಸಿ ಅವರನ್ನು ಜೀವಂತವಾಗಿಸುತ್ತವೆ. ದಿII ಲಂಕಾ ಕೃಷ್ಣಮೂರ್ತಿ ಅವರುಗಳು ಅಂಥ ಅನನ್ಯ ಚೇತನ. ಇಂಥಹವರನ್ನೇ ಪ್ರಾತಃ ಸ್ಮರಣೀಯರು ಎನ್ನುವುದು.

           ಸರಳಜೀವನ, ಉದಾತ್ತ ಚಿಂತನ ಅಂದರೇನು ಎಂಬುದಕ್ಕೆ ಅವರ ಬದುಕು ಉತ್ಕೃಷ್ಟ ಉದಾಹರಣೆಯಾಗಿತ್ತು. ವಿಜ್ಞಾನದಲ್ಲಿ ಪದವೀಧರರಾಗಿ, ನ್ಯಾಯಶಾಸ್ತ್ರ ಓದಿ ಬಿ.ಎಲ್. ಪದವಿ ಪಡೆದು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ವೃತ್ತಿಗೆ ಸೇರಿ ತಮ್ಮ ದಕ್ಷತೆ, ಪ್ರಾಮಾಣಿಕತೆ ಮತ್ತು ಕಾರ್ಯಸಮರ್ಥತೆಯಿಂದಾಗಿ ಹಂತ ಹಂತವಾಗಿ ಮೇಲೇರಿ ಜಂಟೀ ರಿಜಿಸ್ಟ್ರಾರ್ ಆಗಿ ನಿವೃತ್ತರಾದವರು ಅವರು ಎಂದರೇ ಯಾರೂ ನಂಬುವಂತಿರಲಿಲ್ಲ. ಅವರು ಕನ್ನಡ, ಸಂಸ್ಕೃತ, ತೆಲುಗು, ಹಿಂದಿ, ತಮಿಳು, ಇಂಗ್ಲೀಷ್ ಮೊದಲಾದ ಬಹುಭಾಷೆ ಪಂಡಿತರಾಗಿದ್ದರು. ತೆಲುಗಿನಲ್ಲಿ ಅವರು ಮಹಾಕಾವ್ಯಗಳನ್ನು ಬರೆದಿದ್ದಾರೆ. ಅವರ ಹವ್ಯಾಸ ವೈವಿಧ್ಯವನ್ನು ಕಂಡರೆ ಆಶ್ಚರ್ಯವೆನಿಸುತ್ತದೆ. ಅವರು ಸಂಗೀತಜ್ಞರಾಗಿದ್ದರು. ಚಿತ್ರಕಲೆಯಲ್ಲಿ ನೈಪುಣ್ಯ ಹೊಂದಿದ್ದರು. ಅಷ್ಟಾವಧಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ತೆಲುಗು ಮತ್ತು ಕನ್ನಡದ ಅಷ್ಟಾವಧಾನ, ಶತಾವಧಾನಗಳಲ್ಲಿ ಪೃಚ್ಛಕರಾಗಿ ಕೆಲಸ ಮಾಡಿ ಆ ವಿಶೇಷ ಕಲೆ ಜನಪ್ರಿಯವಾಗಲು ಕಾರಣಕರ್ತರಾಗಿದ್ದರು. ಇಷ್ಟಾದರೂ ಅವರದು ತುಂಬಿ ತುಳುಕದ ಹಿರಿಯ ಜೀವ. ಎಳೆಯರಿಗೆ ಅವರು ನೀಡುತ್ತಿದ್ದ ಪ್ರೋತ್ಸಾಹ. ತೋರುತ್ತಿದ್ದ ಮಾರ್ಗದರ್ಶನ ಉಲ್ಲೇಖನೀಯ.

            ಲಂಕಾ ಅವರು ನಮ್ಮ ಸನಾತನ ಧರ್ಮದಲ್ಲಿ ಅಪಾರ ಆಸಕ್ತಿಯುಳ್ಳವರು. ಒಳ್ಳೆಯ ಆಚಾರವಂತರು. ಶಿಸ್ತಿನ ಜೀವನವನ್ನು ನಡೆಸಿಕೊಂಡು ಬಂದವರು. ನಡೆ – ನುಡಿಗಳೊಂದಾದ ಅಪರೂಪದವರು. ಮೇಲ್ನೋಟಕ್ಕೆ ಸಂಪ್ರದಾಯ – ಶರಣರಂತೆ ಅವರು ಕಂಡರೂ ಅವರದು ತೆರೆದ ಮನಸ್ಸು. ಒಳ್ಳೆಯದು ಯಾವ ಕಡೆಯಿಂದ ಬಂದರೂ ಸ್ವೀಕರಿಸಲು ಸಿದ್ಧ. ಮೂಢನಂಬಿಕೆ, ಕಂದಾಚಾರಗಳನ್ನು ಅವರು ಖಂಡಿಸುತ್ತಿದ್ದರು. ನಮ್ಮ ಆರ್ಷೇಯ ಆಚಾರ ವಿಚಾರಗಳನ್ನು ಆಧುನಿಕ ವೈಚಾರಿಕ ದೃಷ್ಟಿಯ ನಿಕಷಕ್ಕಿಟ್ಟು ನೋಡಿ ಅದರ ಸತ್ವವನ್ನು ಎತ್ತಿ ತೋರಿ, ಅವುಗಳ ಪ್ರಸ್ತುತತೆಯನ್ನು ಮನದಟ್ಟು ಮಾಡುವ ಬಗ್ಗೆ ಅವರು ತೀವ್ರ ಕಾಳಜಿಯನ್ನು ಹೊಂದಿದ್ದರು. ಧರ್ಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಭ್ಯಾಸ ಮಾಡುವ ಬಗ್ಗೆ ಅವರು ಸಾಕಷ್ಟು ಪ್ರಯೋಗಗಳನ್ನು ನಡೆಸಿದ್ದರು. ಲೇಖನಗಳಲ್ಲಿ ಬರೆದರು. ವಿಚಾರ ಸಂಕಿರಣವನ್ನು ನಡೆಸಿದರು. ಇಂಥ ಪ್ರಗತಿಪರ ವಿಚಾರಧೋರಣೆಯಿಂದಾಗಿ ಲಂಕಾ ಅವರುನಡೆಯುವ ನಾಣ್ಯವಾಗಿದ್ದರು.

            “ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸುಎಂಬ ಡಿ.ವಿ. ಜಿ. ಯವರ ಮಾತಿನಂತೆ ಲಂಕಾ ಅವರಲ್ಲಿ ನಾನು ಸನಾತನತೆ ಮತ್ತು ಆಧುನಿಕತೆಯ ಸುಂದರ ಸಮರಸವನ್ನು ಕಾಣಬಹುದಾಗಿತ್ತು. ಇಂಥ ಆರೋಗ್ಯಕರ ಮನಸ್ಸಿನವರು ಕಟ್ಟಿದ ಸಂಸ್ಥೆ, ನಡೆಸಿದ ಪತ್ರಿಕೆ ಅವರ ಉನ್ನತ ಆದರ್ಶವನ್ನು ಮುಂದುವರಿಸಿವೆ. ಇದು ನಿಜವಾಗಿ ಅವರ ಆತ್ಮಕ್ಕೆ ಶಾಂತಿಯನ್ನು ತರುವ ವಿಚಾರ.

              ನಿವೃತ್ತ ಜೀವನವನ್ನು ಸಂಪೂರ್ಣವಾಗಿ ಧರ್ಮಕಾರ್ಯಗಳಿಗಾಗಿ, ಸಾರಸ್ವತ ಸೇವೆಗಾಗಿ ಮೀಸಲಿಟ್ಟ ಲಂಕಾ ಕೃಷ್ಣಮೂರ್ತಿಯವರು ಹತ್ತು ಹಲವು ಬಗೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಯ ಯಾವುದೇ ಕೆಲಸವಿರಲಿ, ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ಸಂಸ್ಕೃತ ಪಾಠ, ವಿವಿಧ ಸಮಾಲೋಚಕ ಸಭೆಗಳು, ಕಾರ್ಯಕಾರಿ ಸಮಿತಿ ಸಭೆ ವಿವಿಧ ಸಮಾರಂಭಗಳು ಯಾವುದೇ ಇರಲಿ ಅವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ದುಡಿಯುತ್ತಿದ್ದರು. ಅವರ ಕ್ರಿಯಾಶೀಲತೆ ಯುವಕರನ್ನು ನಾಚಿಸುತ್ತಿತ್ತು. ಅರಿವ ಹಂಚುವಲ್ಲಿ ಅವರು ತೋರಿದ ಶ್ರದ್ಧಾಭಕ್ತಿಯನ್ನು ಯಾರು ಮರೆಯಲಾದೀತು? ಇಷ್ಟಾದರೂ ನಾನು ಮಾಡಿದೆ ಎಂಬ ಬಿಂಕವಿನಿತಿಲ್ಲ. ಮಾಡಿಯೂ ಮಾಡಿದಂತೆ ನಿಲ್ಲುವ ವೈಷಿಷ್ಟ್ಯ ಅವರದಾಗಿತ್ತು. ಅವರ ದೊಡ್ಡತನ ಅಡಗಿರುವುದೇ ಇಲ್ಲಿ! ದಿನೇ ದಿನೇ ಭ್ರಷ್ಟಗೊಳ್ಳುತ್ತಿರಿವ ಆಧುನಿಕ ಸಮಾಜದ ನಡುವೆ ಇಂಥವರೂ ಇದ್ದಾರಲ್ಲ ಎಂಬ ಆಶ್ಚರ್ಯ ಮೂಡುತ್ತಿತ್ತು.

           ತಾವು ಅಷ್ಟು ದೊಡ್ಡ ಅನುಭಾವಿಗಳಿದ್ದರೂ ಚಿಕ್ಕವರು ಹೇಳುವುದನ್ನು ಕೇಳುವ ದೊಡ್ಡಮನಸ್ಸು ಅವರಲ್ಲಿತ್ತು. ಮೃದುವಾದ ಮಾತು. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವ ರೀತಿ, ಇನ್ನೊಬ್ಬರ ಸುಖದಲ್ಲಿ ತಮ್ಮ ಸುಖವನ್ನು ಕಾಣುವ ಹೃದಯವೈಶಾಲ್ಯ ಮೊದಲಾದ ಅಪರೂಪದ ಗುಣಗಳ ಗಣಿ ಅವರಾಗಿದ್ದರು. ನಿಷ್ಕಾಮಸೇವೆ ಎಂದರೇನು ಎಂಬುದಕ್ಕೆ ಅವರ ಬದುಕು ಒಂದು ಉಜ್ವಲ ಉದಾಹರಣೆ. ಆ ನಿಟ್ಟಿನಲ್ಲಿ ಅವರು ದಾರಿದೀಪ; ತೋರುಗಂಬ!

           ಸನಾತನ ಧರ್ಮಸಂರಕ್ಷಣ ಸಂಸ್ಥೆಗೆ, “ಧರ್ಮಪ್ರಭಪತ್ರಿಕೆಯ ಬಳಗಕ್ಕೆ ಸಂಸ್ಕೃತಿಯ ಆರಾಧಕರಿಗೆ ಲಂಕಾ ಕೃಷ್ಣಮೂರ್ತಿಯವರ ನೆನಪು ಹಚ್ಚ ಹಸಿರು. ಅವರು ಭೌತಿಕವಾಗಿ ಕಣ್ಮರೆಯಾಗಿ ಒಂದು ವರ್ಷವಾಯಿತು. ಅವರ ದಿವ್ಯ ಸ್ಮರಣೆಗಾಗಿ, ಅವರ ಅಮರಚೇತನಕ್ಕೆ ಕೃತಜ್ಞತೆಯ ಕಾಣಿಕೆ ಅರ್ಪಿಸುವ ಸಲುವಾಗಿ 1997 ನವಂಬರ್ ತಿಂಗಳ ಸಂಚಿಕೆಯನ್ನು ಅವರ ಗುಣಪಥಕ್ಕೆ ಮೀಸಲಾಗಿಟ್ಟಿದ್ದೇವೆ. ಆ ಮೂಲಕಧರ್ಮಪ್ರಭತನ್ನ ಸಂಸ್ಥಾಪಕರನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ.