ಶ್ರೀಮದ್ಭಾಗವತ ಮಹಾತ್ಮ್ಯ ಲೇಟ್ ಶ್ರೀ ಲಂಕಾ ಕೃಷ್ಣಮೂರ್ತಿ

ಮೊದಲನೆಯ ಅಧ್ಯಾಯ

 ಸಚ್ಚಿದಾನಂದ ರೂಪನೂ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನೂ, ತಾಪತ್ರಯಗಳನ್ನು ಹೋಗಲಾಡಿಸುವವನೂ ಆದ ಶ್ರೀ ಕೃಷ್ಣನಿಗೆ ನಮಸ್ಕರಿಸುತ್ತೇವೆ.

        ಸಮಸ್ತ ಕರ್ಮಗಳನ್ನು ತ್ಯಜಿಸಿ ಮೋಕ್ಷಾರ್ಥಿಯಾಗಿ ಏಕಾಂತವಾಗಿ ಹೊರಟ ಪುತ್ರನಾದ ಶುಕನನ್ನು ಹುಡುಕುತ್ತಾ ವಿರಹ ಕಾತರನಾಗಿ ಹೊರಟ ವ್ಯಾಸ ಮಹರ್ಷಿಯುಪುತ್ರನೇಎಂದು ಶುಕನನ್ನು ಕರೆದನು. ಶುಕನು ಅಲ್ಲಿಲ್ಲದಿದ್ದರೂ ಆತನು ಸಮಸ್ತ ಭೂತಗಳಲ್ಲಿ ಇರುವ ಪರಮಾತ್ಮನಲ್ಲಿ ಹೃದಯವನ್ನು ಲಗ್ನಮಾಡಿದ್ದುದ್ದರಿಂದ ಶುಕನ ಭಾವವನ್ನು ಹೊಂದಿದ್ದ. ಗಿಡಮರಗಳು ವ್ಯಾಸನಿಗೆ ಪ್ರತ್ಯುತ್ತರವನ್ನು ಕೊಟ್ಟವು. ಅಂತಹ ಮಹಾತ್ಮನಾದ, ಮೌನಿಯಾದ, ಶುಕ ಮಹರ್ಷಿಗೆ ನಮಸ್ಕರಿಸುತ್ತೇನೆ.

        ನೈಮಿಶಾರಣ್ಯದಲ್ಲಿ ಭಗವಂತನ ಕಥೆಯೆಂಬ ಅಮೃತರಸವನ್ನು ಆಸ್ವಾದಿಸಲು ಕುಶಲನಾದ ಶೌನಕ ಮಹರ್ಷಿ ಸುಖಾಸೀನನಾಗಿದ್ದ ಮಹಾ ಬುದ್ಧಿಶಾಲಿಯಾದ ಸೂತಪೌರುಣಿಕನಿಗೆ ನಮಸ್ಕರಿಸಿ ಆತನನ್ನು ಹೀಗೆಂದು ಕೇಳಿದನು.

ಶೌನಕನು ಹೇಳಿದನು

        ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಲು ಕೋಟಿಸೂರ್ಯ ಸಮಾನವಾದ ಕಾಂತಿಯುಳ್ಳ ಎಲೈ ಸೂತನೇ, ನನಗೆ ಕರ್ಣರಸಾಯನವಾಗಿರುವ ಶ್ರೇಷ್ಠವಾದ ಕಥೆಯನ್ನು ಹೇಳು. ವಿಷ್ಣುಭಕ್ತರಿಗೆ ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಬೆಳೆಸುವ ವಿವೇಕವು ಹೇಗೆ ವೃದ್ಧಿಯಾಗುತ್ತದೆ? ಅವರು ಮಾಯೆಯಿಂದುಂಟಾದ ಮೋಹವನ್ನು ಹೇಗೆ ಹೋಗಲಾಡಿಸುತ್ತಾರೆ? ಈಗ ಲೋಕದಲ್ಲಿ ಘೋರನಾದ ಕಲಿಯ ಪ್ರಭಾವದಿಂದ ಮನುಷ್ಯನು ಅಸುರತ್ವವನ್ನು ಹೊಂದಿದ್ದಾನೆ. ಅದರಿಂದ ನಾನಾ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ಅಂತಹ ಮಾನವನನ್ನು ಪಾಪರಹಿತನನ್ನಾಗಿ ಮಾಡುವ ಶ್ರೇಷ್ಠವಾದ ಮಾರ್ಗವಾವುದು? ಯಾವ ಸಾಧನವು ಎಲ್ಲಾ ಶ್ರೇಯಸ್ಸುಗಳಿಗಿಂತಲೂ ಶ್ರೇಷ್ಠವಾಗಿದೆಯೋ, ಎಲ್ಲಾ ಪವಿತ್ರ ವಸ್ತುಗಳಿಗಿಂತಲೂ ಪವಿತ್ರವಾಗಿದೆಯೋ, ಯಾವುದು ಕೃಷ್ಣನನ್ನು ಹೊಂದಲು ಸಹಾಯಕವಾಗಿದೆಯೋ, ಯಾವುದು ಕಲ್ಪವೃಕ್ಷಕ್ಕೆ, ಮತ್ತು ಚಿಂತಾಮಣಿಗೆ ಸಮಾನವಾಗಿ ಈ ಲೋಕದಲ್ಲಿ ಸುಖವನ್ನೂ ಆಮೇಲೆ ಸ್ವರ್ಗವನ್ನು ಕೊಡುವುದೋ, ಯಾವುದು ಸಂಪ್ರೀತನಾದ ಗುರುವಿನಂತೆ ಯೋಗಿಗಳಿಗೂ ದುರ್ಲಭವಾದ ವೈಕುಂಠವನ್ನು ಹೊಂದಲು ಸಹಾಯಕವಾಗಿರುವುದೋ, ಅಂತಹ ಶಾಶ್ವತವಾದ ಸಾಧನವನ್ನು ಈಗ ನನಗೆ ತಿಳಿಸು.

ಸೂತನು ಹೇಳಿದನು

ಎಲೈ ಶೌನಕನೇ, ನಿನ್ನ ಹೃದಯದಲ್ಲಿ ಪ್ರೇಮವಿರುವುದರಿಂದ ವಿಚಾರ ಮಾಡಿ ನಿನಗೆ ಸಮಸ್ತ ಸಿದ್ದಾಂತಗಳ ಸಾರವೂ, ಸಂಸಾರ ಭಯವನ್ನು ಹೋಗಲಾಡಿಸುವುದೂ, ಭಕ್ತಿಯನ್ನು ಹೆಚ್ಚಿಸುವುದೂ, ವಿಷ್ಣುವಿಗೆ ಸಂತೋಷಕರವೂ ಆದುದನ್ನು ತಿಳಿಸುತ್ತೇನೆ. ಸಾವಧಾನ ಚಿತ್ತನಾಗಿ ಕೇಳು.

        ಕಾಲವೆಂಬ ಹಾವಿನ ಬಾಯಿಗೆ ತುತ್ತಾಗಿ ಭಯಪಡುತ್ತಿರುವ ಮಾನವರ ಭಯವನ್ನು ಹೋಗಲಾಡಿಸಲು ಕಲಿಯುಗದಲ್ಲಿ ಶ್ರೀಮದ್ಭಾಗವತವೆಂಬ ಶಾಸ್ತ್ರವನ್ನು ಶುಕ ಮಹರ್ಷಿ ಹೇಳಿದನು. ಮನಸ್ಸನ್ನು ಶುದ್ಧಿ ಮಾಡಲು ಇದಕ್ಕಿಂತಲೂ ಉತ್ತಮವಾದ ಸಾಧನವು ಬೇರೆ ಇಲ್ಲ. ಜನ್ಮಾಂತರದಲ್ಲಿ ಪುಣ್ಯ ಮಾಡಿರುವವರಿಗೆ ಮಾತ್ರ ಈ ಭಾಗವತವು ಲಭಿಸುತ್ತದೆ. ಶುಕನು ಪರೀಕ್ಷಿನ್ ಮಹಾರಾಜನಿಗೆ ಭಾಗವತದ ಕಥೆಯನ್ನು ಹೇಳಲು ಸಭೆಯಲ್ಲಿ ಕುಳಿತಾಗ ದೇವತೆಗಳು ಅಮೃತಕುಂಭವನ್ನೇ ತೆಗೆದುಕೊಂಡು ಅಲ್ಲಿಗೆ ಬಂದರು. ಸ್ವಕಾರ್ಯಕುಶಲರಾದ ಆ ದೇವತೆಗಳೆಲ್ಲರೂ ಶುಕನಿಗೆ ನಮಸ್ಕಾರ ಮಾಡಿಈ ಅಮೃತವನ್ನು ತೆಗೆದುಕೊಂಡು ನಮಗೆ ಭಾಗವತ ಕಥೆ ಎಂಬ ಅಮೃತವನ್ನು ಕೊಡುಎಂದು ಪ್ರಾರ್ಥಿಸಿದರು. ಬ್ರಹ್ಮಜ್ಞಾನಿಯಾದ ಶುಕನುಅಮೃತವೆಲ್ಲಿ? ಭಾಗವತದ ಕಥೆಯಲ್ಲಿ? ಲೋಕದಲ್ಲಿ ಗಾಜೆಲ್ಲಿ? ದೊಡ್ಡ ರತ್ನವೆಲ್ಲಿ?” ಎಂದು ಯೋಚಿಸಿ ದೇವತೆಗಳನ್ನು ಕುರಿತು ನಕ್ಕು, ಅವರನ್ನು ಭಕ್ತರಲ್ಲವೆಂದು ತಿಳಿದು, ಅವರಿಗೆ ಕಥಾಮೃತವನ್ನು ಕೊಡಲಿಲ್ಲ. ಶ್ರೀಮದ್ಭಾಗವತದ ಕಥೆ ದೇವತೆಗಳಿಗೂ ದುರ್ಲಭ. ಆ ಕಥೆಯನ್ನು ಕೇಳಿ ಮಹಾರಾಜನು ಮೋಕ್ಷವನ್ನು ಹೊಂದಿದುದನ್ನು ನೋಡಿ ಬ್ರಹ್ಮದೇವನೇ ಆಶ್ಚರ್ಯಪಟ್ಟನು. ಬ್ರಹ್ಮದೇವನು ಸತ್ಯಲೋದಲ್ಲಿ ತಕ್ಕಡಿಯನ್ನು ಕಟ್ಟಿ ಬೇರೆ ಬೇರೆ ಮೋಕ್ಷಸಾಧನಗಳನ್ನು ತೂಕ ಮಾಡಿದನು. ಅವುಗಳಲ್ಲಿ ಎಲ್ಲಾ ಸಾಧನಗಳಿಗಿಂತಲೂ ಭಾಗವತವೇ ಹೆಚ್ಚು ಭಾರವಾಗಿತ್ತು. ಅದನ್ನು ನೋಡಿ ಋಷಿಗಳೆಲ್ಲರೂ ಬಹಳ ಆಶ್ಚರ್ಯಪಟ್ಟರು. ಕಲಿಯುಗದಲ್ಲಿ ಭಾಗವತ ಶಾಸ್ತ್ರವನ್ನು ಭಗವಂತನ ರೂಪವೆಂದೇ ಭಾವಿಸಿದರು. ಈ ಭಾಗವತವನ್ನು ಓದಿದರೆ ಅಥವಾ ಕೇಳಿದರೆ ವೈಕುಂಠ ಪ್ರಾಪ್ತಿ ಕೂಡಲೇ ಲಭಿಸುವುದು. ಸಪ್ತಾಹ ಅಂಧರೆ ಏಳು ದಿನಗಳಲ್ಲಿ ಕೇಳಿದರೆ ಭಾಗವತ ಮುಕ್ತಿಯನ್ನು ಕೊಡುವುದು ಎಂದು ಸನಕಾದಿ ಋಷಿಗಳು ನಾರದನಿಗೆ ಹಿಂದೆ ದಯೆಯಿಂದ ಹೇಳಿದರು. ಹಿಂದೆ ಬ್ರಹ್ಮಲೋಕದಲ್ಲಿ ನಾರದನು ಭಾಗವತವನ್ನು ಕೇಳಿದ್ದನು. ಆದರೆ ಸಪ್ತಾಹ ಶ್ರವಣ ವಿಧಿಯನ್ನು ಆತನಿಗೆ ಸನಕಾದಿ ಋಷಿಗಳು ಬೋಧಿಸಿದರು.

ಶೌನಕನು ಹೆಳಿದನು

ಸಂಸಾರ ಸಂಬಂಧವಿಲ್ಲದೇ ಲೋಕಗಳನ್ನು ಸುತ್ತುತ್ತಿರುವ ನಾರದನಿಗೆ ಸಪ್ತಾಹ ಶ್ರವಣ ವಿಧಿಯನ್ನು ತಿಳಿದುಕೊಳ್ಳಬೇಕೆಂಬ ಆಸೆ ಹೇಗೆ ಹುಟ್ಟಿತು? ಆತನಿಗೆ ಸನಕಾದಿ ಮಹರ್ಷಿಗಳು ಎಲ್ಲಿ ಸಿಕ್ಕಿದರು?

                                             ಸೂತನು ಹೇಳಿದನು

ಈಗ ನಿನಗೆ, ನನ್ನ ಗುರುವಾದ ಶುಕನು ನನಗೆ ರಹಸ್ಯವಾಗಿ ಹೇಳಿದ ಭಕ್ತಿಯುಕ್ತವಾದ ಕಥೆಯನ್ನು ಹೇಳುತ್ತೇನೆ. ಒಂದಾನೊಂದು ಕಾಲದಲ್ಲಿ ವಿಶಾಲೆಯೆಂಬ ಪ್ರದೇಶದಲ್ಲಿ ಸತ್ಪುರುಷರ ಸಹವಾಸಕ್ಕಾಗಿ ಬಂದಿದ್ದ ಸನಕ, ಸನಂದನ, ಸನತ್ಕುಮಾರ, ಸನತಸುಜಾತರೆಂಬ ನಾಲ್ವರು ನಿರ್ಮಲ ಮನಸ್ಸುಳ್ಳ ಮತ್ತು ಐದು ವರ್ಷದ ಕುಮಾರರಂತಿರುವ ಋಷಿಗಳು ಅಲ್ಲಿ ನಾರದನನ್ನು ಕಂಡರು.

                                         ಕುಮಾರರು ಹೇಳಿದರು

ಎಲೈ ಬ್ರಹ್ಮಋಷಿಯೇ, ನೀನೇಕೆ ದೀನಮುಖನಾಗಿಯೂ ಚಿಂತಾತುರನಾಗಿಯೂ ಇದ್ದೀಯೆ? ನೀನು ಆತುರವಾಗಿ ಎಲ್ಲಿಗೆ ಹೋಗುತ್ತಿದ್ದೀಯೇ? ನೀನೆಲ್ಲಿಂದ ಬಂದೆ? ಈಗ ಧನವನ್ನು ಕಳೆದುಕೊಂಡಿರುವವನಂತೆ ನೀನು ಶೂನ್ಯಚಿತ್ತನಾಗಿ ಕಾಣುತ್ತಿದ್ದೀಯೆ? ಸಂಸಾರವನ್ನು ಬಿಟ್ಟ ಮೇಲೆ ಹೀಗೆ ಚಿಂತಿಸುವುದು ಉಚಿತವಲ್ಲ. ಇದರ ಕಾರಣವನ್ನು ತಿಳಿಸು.

ನಾರದನು ಹೇಳಿದನು

ನಾನು ಭೂಲೋಕವು ಸರ್ವಶೇಷ್ಠವೆಂದು ಭಾವಿಸಿ ಅಲ್ಲಿಗೆ ಹೋಗಿ ಪುಷ್ಕರ, ಪ್ರಯಾ, ಕಾಶಿ, ಗೋದಾವರಿ, ಹರಿಕ್ಷೇತ್ರ, ಕುರುಕ್ಷೇತ್ರ, ಶ್ರೀರಂಗ, ಸೇತುಬಂಧನ, ಇತ್ಯಾದಿ ಪುಣ್ಯ ತೀರ್ಥಗಳಲ್ಲಿ ಸಂಚಾರ ಮಾಡುತ್ತಾ ಎಲ್ಲಿಯೂ ಆನಂದವನ್ನು ಕೊಡುವ ಶುಭವನ್ನು ಕಾಣಲಿಲ್ಲ. ಅಧರ್ಮಪರನಾದ ಕಲಿಯಿಂದ ಈಗ ಈ ಭೂಲೋಕ ಬಾಧಿಸಲ್ಪಟ್ಟಿದೆ. ಇಲ್ಲಿ ಸತ್ಯವಿಲ್ಲ. ತಪಸ್ಸು, ಶೌಚ, ದಯೆ, ಮತ್ತು ದಾನ ಯಾವುದು ಇಲ್ಲ. ಮನುಷ್ಯರೆಲ್ಲರೂ ಕೇವಲ ಉದರ ಪೋಷಕರಾಗಿ ದೀನರೂ ಮತ್ತು ತುಚ್ಛರಾಗಿ, ಸುಳ್ಳು ಹೇಳುವವರಾಗಿ, ಮಂದ ಬುದ್ಧಿಗಳೂ ಮಂದ ಭಾಗ್ಯರೂ ಆಗಿದ್ದಾರೆ. ಲೋಕದಲ್ಲಿ ಉತ್ಪಾತಗಳು ಹೆಚ್ಚಿವೆ. ಸತ್ಪುರುಷರೆಲ್ಲರೂ ಪಾಷಂಡ ಮತಗಳನ್ನು ಅನುಸರಿಸಿದರು. ಸನ್ಯಾಸಿಗಳು ಮದುವೆ ಮಾಡಿಕೊಂಡರು. ಮನೆಯಲ್ಲಿ ಹೆಂಡತಿಯ ಪ್ರಭುತ್ವ ಬಂದಿತು. ಹೆಂಡತಿಯ ಸಹೋದರನೇ ಸಲಹೆ ಕೊಡುವವನಾದನು. ಹೆಣ್ಣುಮಕ್ಕಳನ್ನು ತಂದೆ, ತಾಯಿಗಳು ಲೋಭದಿಂದ ಹಣಕ್ಕೆ ಮಾರತೊಡಗಿದರು. ಗಂಡಹೆಂಡಿರಲ್ಲಿ ಹಗೆತನ ಬೆಳೆಯಿತು. ಯವನರು ಆಶ್ರಮಗಳನ್ನು ಕೆಡಿಸಿದರು. ದುಷ್ಟರು ನದಿಗಳನ್ನೂ, ತೀರ್ಥಗಳನ್ನೂ, ದೇವಾಲಯಗಳನ್ನೂ ಕೆಡಿಸಿದರು. ಯೋಗಿಯಾದವನೂ, ಸಿದ್ಧನೂ, ಜ್ಞಾನಿಯೂ, ಒಳ್ಳೆ ಕೆಲಸ ಮಾಡುವವನೂ ದುರ್ಲಭರಾದರು. ಕಲಿಯೆಂಬ ಕಾಡ್ಗಿಚ್ಚಿಗೆ ಸಿಲುಕಿ ಮೋಕ್ಷಸಾಧನಗಳು ಭಸ್ಮವಾದವು. ಪಟ್ಟಣಗಳಲ್ಲಿ ಅನ್ನ ವಿಕ್ರಯ ನಡೆಯುವುದು. ದ್ವಿಜರು ಹಣದ ಸಂಪಾದನೆಗೆ ದೇವರ ಹೆಸರನ್ನು ಉಪಯೋಗಿಸಿಕೊಳ್ಳುವರು. ಹೆಂಗಸರು ಸೂಳೆಗಾರಿಕೆಯಲ್ಲಿ ತೊಡಗುವರು. ಹೀಗೆ ಕಲಿಯುಗದ ದೋಷಗಳನ್ನು ನೋಡುತ್ತ ಭೂಲೋಕದಲ್ಲಿ ಸಂಚಾರ ಮಾಡುತ್ತ ಕೃಷ್ಣನು ವಿಹರಿಸಿದ್ದ ಯಮುನಾ ತೀರಕ್ಕೆ ಬಂದೆನು. ಅಲ್ಲಿ ಒಂದು ಆಶ್ಚರ್ಯವನ್ನು ಕಂಡೆನು. ಮುನೀಶ್ವರರೇ, ಅದನ್ನು ಕೇಳಿ. ಆ ಯಮುನಾ ತೀರದಲ್ಲಿ ಬಹಳ ದುಃಖಿತಳಾಗಿ ಒಬ್ಬ ಸ್ತ್ರೀ ಕುಳಿತಿದ್ದಳು. ಅವಳ ಪಕ್ಕದಲ್ಲಿ ಇಬ್ಬರು ಮುದುಕರು ನೆಲದ ಮೇಲೆ ಬಿದ್ದಿದ್ದರು. ಅವರಲ್ಲಿ ಉಸಿರಾಟವಲ್ಲದೆ, ಮತ್ತಾವ ಚೈತನ್ಯವೂ ಇರಲಿಲ್ಲ. ಆ ಹೆಂಗಸು ಅವರಿಗೆ ಉಪಚಾರ ಮಾಡುತ್ತಾ, ಅವರ ಎದುರಿಗೆ ಅಳುತ್ತಾ, ಅವರನ್ನು ಎಬ್ಬಿಸಬೇಕೆಂದು ಎಷ್ಟೋ ಪ್ರಯತ್ನ ಮಾಡುತ್ತಿದ್ದಳು. ಅವಳು ತನ್ನನ್ನು ಕಾಪಾಡುವವನು ಯಾವನಾದರೂ ಕಣ್ಣಿಗೆ ಬೀಳುವನೇ ಎಂದು ಹತ್ತು ದಿಕ್ಕುಗಳಲ್ಲೂ ನೋಡುತ್ತಿದ್ದಳು. ನೂರು ಜನ ಹೆಂಗಸರು ಅವಳಿಗೆ ಬೀಸಣಿಗೆಯಿಂದ ಬೀಸುತ್ತಿದ್ದರೂ ಅವಳ ತಾಪ ಹರಿಯಲಿಲ್ಲ. ಅವಳನ್ನು ದೂರದಿಂದ ನೋಡಿ ನಾನು ಅವಳ ಹತ್ತಿರಕ್ಕೆ ಹೋದೆನು. ನನ್ನನ್ನು ನೋಡಿ ಅವಳು ಎದ್ದು ನಿಂತು ಹೀಗಿ ಹೇಳಿದಳು.

                                         ಬಾಲೆ ಹೇಳಿದಳು

ಅಯ್ಯಾ ಸಾಧುವೇ, ಸ್ವಲ್ಪ ಇಲ್ಲಿದ್ದು ನನ್ನ ದುಃಖವನ್ನು ನಾಶ ಮಾಡು. ನಿನ್ನ ದರ್ಶನದಿಂದ ಜನರಿಗೆ ಸಮಸ್ತ ಪಾಪಗಳು ಕಳೆಯುವುವು. ನಿನ್ನ ಮಾತಿನಿಂದ ದುಃಖೋಪಶಮನವಾಗುತ್ತದೆ. ನಿತ್ಯ ದರ್ಶನ ಲಭಿಸುವುದೇ ಒಂದು ಭಾಗ್ಯ.

ನಾರದನು ಹೇಳಿದನು

ಅಮ್ಮಾ, ನೀನಾರು? ಇಲ್ಲಿ ಮಲಗಿರುವ ಇಬ್ಬರು ವೃದ್ಧರು ಯಾರು? ನಿನ್ನ ಸುತ್ತಲಿರುವ ಈ ಹೆಂಗಸರು ಯಾರು? ನಿನ್ನ ದುಃಖಕ್ಕೆ ಏನು ಕಾರಣ? ಎಲ್ಲಾ ಪೂರ್ತಿಯಾಗಿ ತಿಳಿಸು.

ಬಾಲೆ ಹೇಳಿದಳು

ನನ್ನ ಹೆಸರು ಭಕ್ತಿ. ಇವರಿಬ್ಬರೂ ನನ್ನ ಮಕ್ಕಳು. ಒಬ್ಬನ ಹೆಸರು ಜ್ಞಾನ. ಮತ್ತೊಬ್ಬನ ಹೆಸರು ವೈರಾಗ್ಯ. ಇವರಿಬ್ಬರೂ ಕಾಲ ವಶದಿಂದ ಇಂತಹ ಜರ್ಜರ ಸ್ಥಿತಿಗೆ ಬಂದಿದ್ದಾರೆ. ನನ್ನ ಸುತ್ತಲೂ ಇರುವ ಹೆಂಗಸರು ಗಂಗೆ ಮೊದಲಾದ ನದಿಗಳು. ಇವರು ನನಗೆ ಉಪಚಾರ ಮಾಡಲು ಬಂದಿದ್ದಾರೆ. ದೇವತೆಗಳು ಬಂದು ನನಗೆ ಉಪಚಾರ ಮಾಡಿದರೂ ನನಗೆ ಒಳ್ಳೆಯದಾಗುತ್ತಿಲ್ಲ. ಈಗ ನೀನು ಮನಸ್ಸಿಟ್ಟು ನನ್ನ ವಿಷಯವನ್ನು ಕೇಳು. ಎಲೈ ತಪೋಧನನೇ, ನನ್ನ ವಿಷಯ ಎಷ್ಟೋ ಇದೆ. ಅದನ್ನು ಕೇಳಿ ನನಗೆ ಸುಖವನ್ನುಂಟು ಮಾಡು. ನಾನು ದ್ರವಿಡ ದೇಶದಲ್ಲಿ ಹುಟ್ಟಿದೆನು. ಕರ್ಣಾಟಕ ದೇಶದಲ್ಲಿ ಬೆಳೆದೆನು. ಮಹಾರಾಷ್ಟ್ರದೇಶದಲ್ಲೂ, ಗುರ್ಜರ ದೇಶದಲ್ಲೂ ಅಲ್ಲಲ್ಲಿ ಬೆಳೆದು ಕೊನೆಗೆ ಹೀನಸ್ಥಿತಿಗೆ ಬಂದೆನು. ಅಲ್ಲಿ ಘೋರನಾದ ಕಲಿಯ ಸಂಪರ್ಕದಿಂದ ಪಾಷಂಡರು ನನ್ನ ಶರೀರವನ್ನು. ಕತ್ತರಿಸಿದರು. ನಾನು ಬಲಹೀನಳಾಗಿ ಈ ಮಕ್ಕಳೊಂದಿಗೆ ಬಹಳಕಾಲ ಕೆಲಸಕ್ಕೆ ಬಾರದವಳಾಗಿದ್ದೆನು. ಆದರೆ, ಬೃಂದಾವನಕ್ಕೆ ಹೋಗಿ ಪುನಃ ಒಳ್ಳೆಯ ರೂಪವನ್ನು ಯೌವನವನ್ನೂ ಪಡೆದಿದ್ದೇನೆ. ಆದರೆ ಈ ನನ್ನ ಮಕ್ಕಳು ಮಾತ್ರ ನರಳುತ್ತಾ ಇಲ್ಲಿ ಬಿದ್ದಿದ್ದಾರೆ. ನಾನು ಈ ಜಾಗವನ್ನು ಬಿಟ್ಟು ವಿದೇಶಕ್ಕೆ ಹೋಗಬೇಕೆಂದಿದ್ದೇನೆ. ಆದರೆ ಮುದಿತನವನ್ನು ಹೊಂದಿರುವ ನನ್ನ ಮಕ್ಕಳನ್ನು ನೋಡಿ ದುಃಖಿಸುತ್ತಿದ್ದೇನೆ. ನಾನು ತರುಣಿಯಾಗಿದ್ದು ನನ್ನ ಮಕ್ಕಳು ಹೀಗೆ ಮುದುಕರಾಗಿರುವುದೇಕೆ? ನಾನು ತರುಣಿಯಾಗಿದ್ದು ನನ್ನ ಮಕ್ಕಳು ಹೀಗೆ ಮುದುಕರಾಗಿರುವುದೇಕೆ? ನಾವು ಮೂವರೂ ಒಟ್ಟಿಗಿರುವಾಗ ಈ ವೈಪರೀತ್ಯ ಹೇಗೆ ಬಂತು? ಲೋಕದಲ್ಲಿ ತಾಯಿ ಮುದುಕಿಯಾಗಿ ಮಕ್ಕಳು ತರುಣರಾಗಿರುವುದು ಸಹಜ. ಆದುದರಿಂದ ವಿಸ್ಮಯಪಟ್ಟು ಈ ಸ್ಥಿತಿಗೆ ಚಿಂತಿಸುತ್ತಿದ್ದೇನೆ. ಯೋಗಿಶ್ವರನೇ, ಬುದ್ಧಿವಂತನೇ, ಇದಕ್ಕೆ ಕಾರಣ ಏನೆಂಬುದು ನೀನಾದರೂ ತಿಳಿಸು.

ನಾರದನು ಹೇಳಿದನು

ಎಲೌ ಪಾಪರಹಿತಳೇ, ಜ್ಞಾನದಿಂದ ಎಲ್ಲವನ್ನೂ ನನ್ನಲ್ಲೇ ನೋಡುತ್ತೇನೆ. ನೀನು ಚಿಂತಿಸಬೇಡ. ವಿಷ್ಣುವು ನಿನಗೆ ಒಳ್ಳೆಯದನ್ನು ಮಾಡುತ್ತೇನೆ.

ಸೂತನು ಹೇಳಿದನು

ನಾರದನು ಕ್ಷಣಕಾಲದಲ್ಲಿ ಎಲ್ಲವನ್ನೂ ತಿಳಿದು ಹೇಳಲಾರಂಭಿಸಿದನು.

ನಾರದನು ಹೇಳಿದನು

ಬಾಲೆಯೇ ಮನಸ್ಸಿಟ್ಟು ಕೇಳು. ಈಗ ದಾರುಣವಾದ ಕಲಿಯುಗ. ಆದುದರಿಂದ ಸದಾಚಾರವು ಮಾಯವಾಗಿದೆ. ಯೋಗಮಾರ್ಗವೂ, ತಪಸ್ಸೂ, ಎಲ್ಲಿಯೂ ಕಂಡು ಬರುವುದಿಲ್ಲ. ಜನರು ಪಾಪಕರ್ಮಗಳನ್ನು ಮಾಡುತ್ತ ಶಠರಾಗಿದ್ದಾರೆ. ಈ ಕಲಿಯುಗದಲ್ಲಿ ಒಳ್ಳೆಯವರು ದುಃಖ ಪಡುತ್ತಾರೆ. ಕೆಟ್ಟವರು ಸಂತೋಷಪಡುತ್ತಿದ್ದಾರೆ. ವಿದ್ಯೆ ಮತ್ತು ಜ್ಞಾನವಿಲ್ಲದಿದ್ದರೂ, ಯಾವ ಬುದ್ಧಿಶಾಲಿ  ಉದ್ಧಂತನಾಗಿರುತ್ತಾನೋ, ಅವನೇ ಧೀರನೂ ಪಂಡಿತನೂ ಎನಿಸಿಕೊಳ್ಳುತ್ತಾನೆ. ಅಸ್ಪೃಷ್ಯರಾದ ಇಂತಹ ದುರಾಚಾರಿಗಳನ್ನು ಹೊತ್ತು ವರ್ಷ ವರ್ಷಕ್ಕೂ ಆದಿಶೇಷನಿಗೆ ಭಾರವಾಗುತ್ತಿದ್ದಾಳೆ. ಲೋಕ ಕಲ್ಯಾಣವು ಕಂಡು ಬರುತ್ತಿಲ್ಲ. ನಿನ್ನನ್ನೂ, ನಿನ್ನ ಮಕ್ಕಳನ್ನೂ, ನೋಡುವವನೇ ಇಲ್ಲ. ಕಾಮಾಂಧರಾದ ಜನರಿಂದ ನೀನು ಉಪೇಕ್ಷಿಸಲ್ಪಟ್ಟು ಮುದುಕಿಯಾಗಿ ಬಿಟ್ಟಿದ್ದೆ. ಆದರೆ ಬೃಂದಾವನದ ಸಂಯೋಗದಿಂದ ನೀನು ಪುನಃ ತರುಣಿಯಾದೆ. ಬೃಂದಾವನವು ಧನ್ಯ. ಅಲ್ಲಿ ಭಕ್ತಿ ಯಾವಾಗಲೂ ನಟಿಸುತ್ತಿರುತ್ತದೆ. ತಮ್ಮನ್ನು ಗ್ರಹಿಸುವವರು ಇಲ್ಲದೇ ಇರುವುದರಿಂದ ಈ ನಿನ್ನ ಮಕ್ಕಳು ವೃದ್ಧಾಪ್ಯವನ್ನು ಬಿಡಲಿಲ್ಲ. ಇವರು ತಮ್ಮಲ್ಲಿ ತಾವೇ ಸುಖವನ್ನು ಹೊಂದಿ ಗಾಢನಿದ್ರೆಯಲ್ಲಿ ಮುಳುಗಿದ್ದಾರೆ.

ಭಕ್ತಿ ಹೇಳಿದಳು

ಪರೀಕ್ಷಿನ್ ಮಹಾರಾಜನು ಅಶುಚಿಯಾದ ಕಲಿಗೆ ಅವಕಾಶ ಹೇಗೆ ಕೊಟ್ಟನು? ಕಲಿಯುಗದಲ್ಲಿ ಒಳ್ಳೆಯ ವಸ್ತುಗಳ ಸಾರವೆಲ್ಲ ಎಲ್ಲಿಗೆ ಹೋಯಿತು? ಕರುಣಾಳುವಾದ ಶ್ರೀಹರಿ ಅಧರ್ಮವನ್ನು ನೋಡುತ್ತ ಏಕೆ ಸುಮ್ಮನಿದ್ದಾನೆ? ಈ ಸಂಶಯಗಳನ್ನು ಬಿಡಿಸು. ನಿನ್ನ ಮಾತನ್ನು ಕೇಳುತ್ತಾ ನನಗೆ ಸುಖವುಂಟಾಗುತ್ತಿದೆ.

ನಾರದನು ಹೇಳಿದನು

ಅಮ್ಮಾ, ನೀನು ಪ್ರೀತಿಯಿಂದ ಕೇಳುತ್ತಿರುವುದರಿಂದ ಹೇಳುತ್ತಿದ್ದೇನೆ ಕೇಳು. ನಿನ್ನ ದುಃಖಪರಿಹಾರವಾಗುವುದು. ಯಾವ ದಿನ ಶ್ರೀಕೃಷ್ಣನು ಭೂಲೋಕವನ್ನು ಬಿಟ್ಟು ವೈಕುಂಠಕ್ಕೆ ಹೋದನೋ ಅದೇ ದಿನ ಸಮಸ್ತ ಸಾಧನಗಳನ್ನೂ ಮುರಿಯುವ ಕಲಿಯುಗ ಪ್ರಾರಂಭವಾಯಿತು. ಪರೀಕ್ಷಿನ್ಮಹಾರಾಜನು ದಿಗ್ವಿಜಯ ಮಾಡುವಾಗ ಕಲಿ ಆತನ ಕೈಗೆ ಸಿಕ್ಕಿ ಆತನನ್ನೇ ಶರಣು ಹೊಕ್ಕನು. ಆದ್ದರಿಂದ ಆತನು ದುಂಬಿಯಂತೆ ಸಾರವನ್ನು ಹೀರುವ ಕಲಿಯನ್ನು ಕೊಲ್ಲಲಿಲ್ಲ. ತಪಸ್ಸಿನಿಂದಲೂ, ಯೋಗದಿಂದಲೂ, ಸಮಾಧಿಯಿಂದಲೂ ಯಾವ ಫಲವನ್ನು ಹೊಂದಲು ಸಾಧ್ಯವಿಲ್ಲವೋ ಅಂತಹ ಫಲವನ್ನು ಈ ಕಲಿಯುಗದಲ್ಲಿ ಜನರು ವಿಷ್ಣುಕೀರ್ತನದಿಂದ ಸಾಧಿಸಬಲ್ಲರು. ಆದುದರಿಂದ ಕಲಿಯುಗ ಒಂದು ವಿಧದಲ್ಲಿ ಜನರಿಗೆ ಒಳ್ಳೆಯದಾಗಿದೆ. ಹೀಗೆ ಒಳ್ಳೆಯದು ಕೆಟ್ಟದ್ದು ಬೆರೆತಿರುವ ಈ ಕಲಿಯನ್ನು ವಿಷ್ಣುಭಕ್ತನಾದ ಪರೀಕ್ಷಿನ್ಮಹಾರಾಜನು ಜನರ ಹಿತಕ್ಕಾಗಿ ಹಾಗೆಯೇ ಬಿಟ್ಟನು. ಕೆಟ್ಟ ಕೆಲಸಗಳನ್ನು ಮಾಡುವುದರಿಂದ ಎಲ್ಲ ಕಡೆಗಳಲ್ಲೂ ಇದ್ದ ಸಾರವು ಈಗ ಹೊರಟು ಹೋಗಿದೆ. ಭೂಲೋಕದಲ್ಲಿನ ಪದಾರ್ಥಗಳು ಬೀಜವಿಲ್ಲದ ಜೊಳ್ಳಿನಂತೆ ಸಾರಹೀನವಾಗಿವೆ. ಈ ಯುಗದಲ್ಲಿ ಬ್ರಾಹ್ಮಣರು ಹಣದ ಆಸೆಗೆ ಹರಿನಾಮಕೀರ್ತನವನ್ನು ಮನೆ ಮನೆಯಲ್ಲೂ ಮಾಡುತ್ತಿದ್ದಾರೆ. ಅದುದರಿಂದ ವಿಷ್ಣು ಕಥೆಯಲ್ಲಿನ ಸಾರ ಲೋಪವಾಗಿದೆ. ಪುಣ್ಯಕ್ಷೇತ್ರಗಳಲ್ಲಿ ಬಹಳ ಕೆಟ್ಟ ಕೆಲಸಗಳನ್ನು ಮಾಡುವ ನಾಸ್ತಿಕರಾದಂತಹ ಜನರೇ ತುಂಬಿರುವುದರಿಂದ ಆ ಕ್ಷೇತ್ರಗಳಲ್ಲಿ ಸಾರವಿಲ್ಲ. ಕಾಮ, ಕ್ರೋಧ, ಲೋಭ, ತೃಷ್ಣೆ ಮತ್ತು ಚಿಂತೆಯಿಂದ ಕೂಡಿ  ತಪಸ್ಸನ್ನು ಮಾಡುವುದರಿಂದ ತಪಸ್ಸಿನ ಸಾರ ನಷ್ಟವಾಗಿದೆ. ಧ್ಯಾನ ಮಾಡುವ ಜನರು ಮನಸ್ಸನ್ನು ಜಯಿಸದಿರುವುದರಿಂದಲೂ, ಲೋಭ-ಡಂಭಗಳು ಬಿಡದೆ ಪಾಷಂಡರನ್ನು ಆಶ್ರಯಿಸಿರುವುದರಿಂದಲೂ, ಶಾಸ್ತ್ರಗಳನ್ನು ಅಭ್ಯಾಸ ಮಾಡದಿರುವುದರಿಂದಲೂ, ಧ್ಯಾನ ಯೋಗದ ಫಲ ಅವರಿಗೆ ಸಿಗುತ್ತಿಲ್ಲ. ಪಂಡಿತರು ಸಹ ಕೋಣಗಳಂತೆ ಕೇವಲ ಕಾಮಾಸಕ್ತರಾಗಿದ್ದಾರೆ. ಇವರು ಮಕ್ಕಳನ್ನು ಹುಟ್ಟಿಸುವುದರಲ್ಲಿ ಸಮರ್ಥರೇ ಹೊರತು ಮೋಕ್ಷಸಾಧನೆಯಲ್ಲಿ ಅಸಮರ್ಥರಾಗಿದ್ದಾರೆ. ಸಾಂಪ್ರಾದಾಯಿಕವಾಗಿ ಬಂದ ವಿಷ್ಣು ಭಕ್ತಿ ಎಲ್ಲಿಯೂ ಕಂಡುಬರುವುದಿಲ್ಲ. ಹೀಗೆ ಎಲ್ಲಿ ನೋಡಿದರೂ ವಸ್ತುಗಳು ಸಾರಹೀನವಾಗಿವೆ. ಇದು ಕೇವಲ ಯುಗಧರ್ಮ. ಇದಕ್ಕೆ ಯಾರೂ ಹೊಣೆಯಲ್ಲ. ಆದುದರಿಂದ ಹತ್ತಿರದಲ್ಲಿದ್ದೂ ವಿಷ್ಣುದೇವನು ಇದನ್ನೆಲ್ಲಾ ಸಹಿಸಿಕೊಂಡಿದ್ದಾನೆ.

ಸೂತನು ಹೇಳಿದನು

ಹೀಗೆ ನಾರದನು ಹೇಳಿದ್ದನ್ನು ಕೇಳಿ ಭಕ್ತಿಯು ಆಶ್ಚರ್ಯಪಟ್ಟು ಪುನಃ ಹೀಗೆ ಹೇಳಿದಳು. ಶೌನಕನೇ ಅದನ್ನು ಕೇಳು.

ಭಕ್ತಿ ಹೇಳಿದಳು

ದೇವಋಷಿಯೇ, ನೀನೇ ಧನ್ಯನು. ನನ್ನ ಅದೃಷ್ಟದಿಂದ ನೀನಿಲ್ಲಿಗೆ ಬಂದಿರುತ್ತೀಯೆ. ಲೋಕದಲ್ಲಿ ಸತ್ಪುರುಷರ ಸಂದರ್ಶನ ಸಮಸ್ತ ಇಷ್ಟಾರ್ಥಗಳನ್ನು ಪೂರೈಸುವುದರಿಂದ ಅತ್ಯುತ್ತಮವಾಗಿದೆ.

ಯಾರ ಮಾತುಗಳನ್ನು ಮಾತ್ರ ಆಶ್ರಯಿಸಿ ಸಂಸಾರಿಯಾಗಿರುವವನು, ಮಾಯೆಯನ್ನು ಗೆಲ್ಲುತ್ತಾನೆಯೋ.                                          

ಯಾರ ಕೃಪೆಯಿಂದ ಧ್ರುವನು ಶಾಶ್ವತವಾದ ಪದವಿಯನ್ನು ಹೊಂದಿದನೋ ಅಂತಹ ಸಕಲಮಂಗಳಪ್ರದನಾದ, ಬ್ರಹ್ಮಪುತ್ರನಾದ ನಾರದನಿಗೆ ನಮಸ್ಕರಿಸುತ್ತೇನೆ.

ಎಂಬಲ್ಲಿಗೆ ಶ್ರೀಪದ್ಮಪುರಾಣದ ಉತ್ತರಖಂಡದಲ್ಲಿನ ಶ್ರೀಮದ್ಭಾಗವತಮಾಹಾತ್ಮ್ಯದಲ್ಲಿ ಭಕ್ತಿನಾರದ ಸಮಾಗಮವೆಂಬ ಪ್ರಥಮಾಧ್ಯಾಯವು ಮುಗಿಯಿತು.

ದ್ವಿತೀಯಾಧ್ಯಾಯ

ನಾರದನು ಹೇಳಿದನು

ಬಾಲೆಯೇ, ನೀನೇಕೆ ಚಿಂತಾತುರಳಾಗಿ ವ್ಯರ್ಥವಾಗಿ ದುಃಖಿಸುತ್ತಿದ್ದೀಯೆ? ಶ್ರೀಕೃಷ್ಣನ ಪಾದಪದ್ಮಗಳನ್ನು ಸ್ಮರಿಸು. ನಿನ್ನ ದುಃಖವು ಪರಿಹಾರವಾಗುವುದು. ಯಾರ ಸಹಾಯದಿಂದ ಕೌರವರ ಅಪಕಾರದಿಂದ ದ್ರೌಪದಿ ರಕ್ಷಿಸಲ್ಪಟ್ಟಳೋ, ಯಾರು ಗೋಪಿಕಾಸ್ತ್ರೀಯರನ್ನು ರಕ್ಷಿಸಿದನೋ, ಅಂತಹ ಶ್ರೀಕೃಷ್ಣನು ಎಲ್ಲಿಗೂ ಹೋಗಲಿಲ್ಲ. ಭಕ್ತಿಯಾದ ನೀನು ಆತನಿಗೆ ಪ್ರಾಣಕ್ಕಿಂತಲೂ ಹೆಚ್ಚುಪ್ರಿಯಳು. ನಿನ್ನಿಂದ ಕರೆಯಲ್ಪಟ್ಟ ಭಗವಂತನು ನೀಚರ ಮನೆಗಳಿಗೂ ಬರುತ್ತಾನೆ. ಕೃತ ತ್ರೇತಾ ದ್ವಾಪರ ಯುಗಗಳಲ್ಲಿ ಜ್ಞಾನವೈರಾಗ್ಯಗಳು ಮೊಕ್ಷಸಾಧನಗಳಾಗಿದ್ದವು. ಆದರೆ ಕಲಿಯುಗದಲ್ಲಿ ಕೇವಲ ಭಕ್ತಿಯೇ ಬ್ರಹ್ಮಸಾಯುಜ್ಯವನ್ನು ಕೊಡಲು ಸಮರ್ಥವಾಗಿದೆ ಎಂದು ಯೋಚಿಸಿ ಚಿದಾನಂದ ಸ್ವರೂಪನಾದ ಪರಮಾತ್ಮನು ಸದ್ರೂಪಳೂ, ಸುಂದರಿಯೂ, ಕೃಷ್ಣ ಪ್ರಿಯಳೂ ಆದ ನಿನ್ನನ್ನು ಸೃಷ್ಟಿಮಾಡಿದನು. ಒಂದಾನೊಂದು ಕಾಲದಲ್ಲಿ ನೀನು ಕೈಗಳನ್ನು ಜೋಡಿಸಿ ಕೃಷ್ಣನನ್ನು “ನನ್ನ ಕೆಲಸವೇನೆಂದು” ಕೇಳಿದೆ. ಅದಕ್ಕೆ ಶ್ರೀಕೃಷ್ಣನು “ನೀನು ನನ್ನ ಭಕ್ತರನ್ನು ಪೋಷಿಸು” ಎಂದು ಆಜ್ಞಾಪಿಸಿದನು. ನೀನದಕ್ಕೆ ಒಪ್ಪಿಕೊಂಡೆ. ಅದರಿಂದ ಶ್ರೀಹರಿ ಸಂತುಷ್ಟನಾಗಿ ಮುಕ್ತಿಯನ್ನು ನಿನಗೆ ದಾಸಿಯನ್ನಾಗಿ ಮಾಡಿದನು. ನೀನು ವೈಕುಂಠದಲ್ಲಿ ನಿನ್ನ ನಿಜರೂಪದಿಂದ ಈ ಜ್ಞಾನ ವೈರಾಗ್ಯಗಳನ್ನು ಪೋಷಿಸುತ್ತಿದ್ದೀಯೆ. ಭೂಲೋಕದಲ್ಲಿ ಭಕ್ತರನ್ನು ಪೋಷಿಸುವುದಕ್ಕಾಗಿ ನೀನು ಛಾಯಾರೂಪವನ್ನು ಧರಿಸಿ ಮುಕ್ತಿ ಜ್ಞಾನ ವೈರಾಗ್ಯಗಳನ್ನು ಜೊತೆಯಲ್ಲಿಟ್ಟುಕೊಂಡು ಬಂದಿದ್ದೀಯೆ. ಕೃತಯುಗದಿಂದ ದ್ವಾಪರಯುಗದ ಕೊನೆಯವರೆಗೂ ನೀನು ಮಹಾನಂದದಿಂದ ಇದ್ದೆ. ಪಾಷಂಡರೆಂಬ ವ್ಯಾಧಿಯಿಂದ ಕಲಿಯುಗದಲ್ಲಿ ಮುಕ್ತಿ ಕ್ಷಯವನ್ನು ಹೊದಿದಳು. ಅವಳು ನಿನ್ನ ಅಪ್ಪಣೆ ಪಡೆದು ಪುನಃ ಶೀಘ್ರವಾಗಿ ವೈಕುಂಠಕ್ಕೆ ಹೋದಳು. ನೀನು ಭೂಲೋಕದಲ್ಲಿ ಸ್ಮರಿಸಿದಾಗ ಮುಕ್ತಿ ಇಲ್ಲಿಗೆ ಬರುತ್ತಾಳ, ಮತ್ತು ವೈಕುಂಠಕ್ಕೆ ಹಿಂತಿರುಗಿ ಹೋಗುತ್ತಾಳೆ. ಈ ಜ್ಞಾನ ವೈರಾಗ್ಯಗಳನ್ನು ನೀನು ಪುತ್ರರಂತೆ  ಬಳಿಯಲ್ಲಿಟ್ಟುಕೊಂಡು ಸಲಹುತ್ತಿದ್ದೀಯೆ. ಜನರಿವರನ್ನುಪೇಕ್ಷೆ ಮಾಡಿರುವುದರಿಂದ ಈ ಕಲಿಯುಗದಲ್ಲಿ ಈ ನಿನ್ನ ಮಕ್ಕಳು ಮುದುಕರೂ, ಬಲಹೀನರೂ ಆಗಿದ್ದಾರೆ. ಆದರೂ ನೀನು ಚಿಂತಿಸಬೇಡ. ನಾನಿದನ್ನು ಸರಿಪಡಿಸುವ ಉಪಾಯವನ್ನು ಆಲೋಚನೆ ಮಾಡುತ್ತಿದ್ದೇನೆ. ಎಲೌ ಸುಂದರಿಯೇ, ಕಲಿಗೆ ಸಮಾನವಾದ ಯುಗವು ಬೇರೆ ಇಲ್ಲ. ಅದರಲ್ಲಿ ನಿನ್ನನ್ನು ಮನೆಮನೆಯಲ್ಲೂ ಜನಜನರಲ್ಲಿಯೂ ಸ್ಥಾಪಿಸುತ್ತೇನೆ. ಇದಕ್ಕಾಗಿ ನಾನು ಇತರ ಧರ್ಮಗಳನ್ನು ಬಿಟ್ಟು ಮಹೋತ್ಸವಗಳನ್ನು ಆಶ್ರಯಿಸುತ್ತೇನೆ. ನಾನು ಲೋಕದಲ್ಲಿ ನಿನ್ನನ್ನು ಸ್ಥಾಪಿಸದಿದ್ದರೆ ಹರಿದಾಸನಲ್ಲ. ಈ ಕಲಿಯುಗದಲ್ಲಿ ನಿನ್ನನ್ನುಳ್ಳ ಜನರು ಪಾಪಿಗಳಾದರೂ ನಿರ್ಭಯವಾಗಿ ವೈಕುಂಠವನ್ನು ಸೇರುವರು. ಯಾವಾಗಲೂ ಪ್ರೇಮರೂಪಿಣಿಯಾದ ಭಕ್ತಿ ಯಾರ ಮನಸ್ಸಿನಲ್ಲಿರುವುದೋ ಅಂತಹ ನಿರ್ಮಲಸ್ವರೂಪರು ಕನಸಿನಲ್ಲೂ ಯಮನನ್ನು ಕಾಣುವುದಿಲ್ಲ. ಮನಸ್ಸಿನಲ್ಲಿ ಭಕ್ತಿಯಿರುವವರನ್ನು ಪ್ರೇತವಾಗಲಿ, ಪಿಶಾಚವಾಗಲಿ, ರಾಕ್ಷಸನಾಗಲಿ, ಅಸುರನಾಗಲಿ ಮುಟ್ಟಲಾರನು. ಶ್ರಿಹರಿಯನ್ನು ಹೊಂದುವುದಕ್ಕೆ ತಪಸ್ಸುಗಳಿಂದಾಗಲಿ, ವೇದಗಳಿಂದಾಗಲಿ, ಜ್ಞಾನದಿಂದಾಗಲಿ, ಕರ್ಮದಿಂದಾಗಲಿ ಸಾಧ್ಯವಿಲ್ಲ. ಭಕ್ತಿಯಿಂದ ಮಾತ್ರ ಸಾಧ್ಯ. ಇದಕ್ಕೆ ಗೋಪಿಕಾ ಸ್ತ್ರೀಯರೇ ನಿದರ್ಶನ. ಸಾವಿರಾರು ಜನ್ಮಗಳ ಪರಿಪಾಕದಿಂದ ಮನುಷ್ಯರಿಗೆ ಭಕ್ತಿಯಲ್ಲಿ ಪ್ರೀತಿ ಹುಟ್ಟುತ್ತದೆ. ಕಲಿಯುಗದಲ್ಲಿ ಭಕ್ತಿ ಒಂದೇ ಮಾರ್ಗ. ಭಕ್ತಿಯಿಂದ ಶ್ರೀಕೃಷ್ಣನು ಎದುರಿನಲ್ಲಿರುತ್ತಾನೆ. ಯಾರು ಭಕ್ತಿಗೆ ದ್ರೋಹಮಾಡುವರೋ ಅವರು ಮೂರು ಲೋಕಗಳಲ್ಲಯೂ ನಾಶಹೊಂದುತ್ತಾರೆ. ಹಿಂದೆ ಭಕ್ತನನ್ನು ದೂಷಿಸಿ ದುರ್ವಾಸನು ದುಃಖವನ್ನು ಹೊಂದಿದನು. ವ್ರತಗಳು ಬೇಡ. ತೀರ್ಥಗಳು ಬೇಡ. ಯೋಗಗಳು ಬೇಡ. ಯಜ್ಞಗಳು ಬೇಡ. ಜ್ಞಾನದ ಮಾತುಗಳು ಬೇಡ. ಭಕ್ತಿಯೊಂದೇ ಮುಕ್ತಿಯನ್ನು ಕೊಡಬಲ್ಲದು.

ಸೂತನು ಹೇಳಿದನು

ಹೀಗೆ ನಾರದನಿಂದ ನಿರ್ಣಯಿಸಲ್ಪಟ್ಟ ತನ್ನ ಹಿರಿಮೆಯನ್ನು ಕೇಳಿ ಭಕ್ತಿ ಸರ್ವಾಂಗ ಸೃಷ್ಟಿಯನ್ನು ಹೊಂದಿ ನಾರದನನ್ನು ಕುರಿತು ಹೇಳಿದಳು.

ಭಕ್ತಿ ಹೇಳಿದಳು

ಆಹಾ, ನಾರದನೇ ನೀನೇ ಧನ್ಯನು. ನಿನಗೆ ನನ್ನಲ್ಲಿ ನಿಶ್ಚಲವಾದ ಪ್ರೀತಿಯಿದೆ. ನಿನ್ನನ್ನು ನಾನೆಂದಿಗೂ ಬಿಡುವುದಿಲ್ಲ. ನಿನ್ನ ಹೃದಯದಲ್ಲಿ ಸದಾ ನಾನಿರುವೆನು. ಸತ್ಪುರುಷನೇ, ದಯಾಶೀಲನಾದ ನಿನ್ನಿಂದ ನನ್ನ ಬಾಧೆ ಕ್ಷಣದಲ್ಲಿ ತೊಲಗಿತು. ಈ ನನ್ನ ಮಕ್ಕಳು ಚೈತನ್ಯವಿಲ್ಲದೆ ಬಿದ್ದಿದ್ದಾರೆ. ಇವರಿಗೆ ಸ್ಪೃಹೆ ಬರುವಂತೆ ಮಾಡು. ಇವರನ್ನು ಎಚ್ಚರಗೊಳಿಸು.

ಸೂತನು ಹೇಳಿದನು

ಭಕ್ತಿಯ ಮಾತನ್ನು ಕೇಳಿ ನಾರದನಿಗೆ ಕರುಣೆ ಉಂಟಾಯಿತು. ಆತನು ತನ್ನ ಕೈಯಿಂದ ಭಕ್ತಿಯ ಮಕ್ಕಳನ್ನು ತಟ್ಟಿ ಅವರ ಕಿವಿಗಳ ಹತ್ತಿರ ಬಾಯಿಟ್ಟು ಗಟ್ಟಿಯಾಗಿ ಶಬ್ದ ಮಾಡುತ್ತ ಅವರನ್ನು ಪ್ರಬೋಧಿಸತೊಡಗಿದನು. “ಜ್ಞಾನನೇ ಶೀಘ್ರವಾಗಿ ಏಳು. ವೈರಾಗ್ಯನೇ ಏಳು”, ಎಂದು ಉಚ್ಚರಿಸಿದನು. ವೇದವೇದಾಂತ ವಾಕ್ಯಗಳನ್ನು ಹೇಳಿದನು. ಗೀತಾ ವಾಕ್ಯಗಳನ್ನು ಹೇಳಿದನು. ಹೀಗೆ ಪದೇ ಪದೇ ಹೇಳಿ ಬಹಳ ಪ್ರಯತ್ನದಿಂದ ಅವರನ್ನು ಹೇಗೆಯೋ ಎಬ್ಬಿಸಿದನು. ಆದರೆ ಅವರು ಕಣ್ತೆರೆದು ನೋಡಲಿಲ್ಲ. ಸುಮ್ಮನೆ ಆಕಳಿಸುತ್ತಿದ್ದರು. ಅವರ ಮೈ ಕೂದಲೆಲ್ಲ ಬಕಪಕ್ಷಿಯಂತೆ ಬೆಳ್ಳಗಾಗಿದ್ದವು. ಅವರ ಅಂಗಗಳು ಒಣಗಿದ ಕಟ್ಟಿಗೆಯಂತೆ ಸಾರಹೀನವಾಗಿದ್ದವು. ಅವರು ಬಹಳ ಸುಸ್ತಾಗಿದ್ದರು. ಹಸಿವೆಯಿಂದ ಬಹಳ ಬಳಲಿದ್ದರು. ಅವರು ನಾರದನ ಕಡೆ ಒಂದು ಸಲ ನೋಡಿ ಪುನಃ ಹಾಗೆಯೇ ಮಲಗಿಬಿಟ್ಟರು. ನಾರದ ಮಹರ್ಷಿಗೆ ಏನು ಮಾಡಬೇಕೆಂಬ ಚಿಂತೆ ಹತ್ತಿತು. “ಅಯ್ಯೋ ಇವರ ನಿದ್ರೆ ಎಂಥಾದ್ದು! ಇವರು ಎಷ್ಟು ಮುದುಕರಾಗಿದ್ದಾರೆ?” ಎಂದು ಚಿಂತಿಸುತ್ತ ಆತನು ಗೋವಿಂದನನ್ನು ಸ್ಮರಿಸಿದನು. ಆಗ ಆಕಾಶವಾಣಿಯು “ಋಷಿಯೇ, ಚಿಂತಿಸಬೇಡ. ನಿನ್ನ ಪ್ರಯತ್ನ ಸಫಲವಾಗುವುದು. ಇದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ನೀನು ಸತ್ಕರ್ಮವನ್ನು ಮಾಡು. 

ನೀನು ಸಾಧುಭಾಷಿಗಳಾದ ಸಾಧುಗಳನ್ನು ಕೇಳಿದರೆ ಅವರು ನಿನಗೆ ಇದಕ್ಕೆ ಏನು ಮಾಡಬೇಕೆಂದು ಹೇಳುವರು. ನೀನು ಅವರು ಹೇಳಿದ ಸತ್ಕರ್ಮವನ್ನು ಮಾಡಿದರೆ ಇವರ ನಿದ್ರೆಯೂ ಮುದಿತನವೂ ಕ್ಷಣದಲ್ಲಿ ಮಾಯವಾಗುವುವು. ಆಗ ಭಕ್ತಿ ಎಲ್ಲೆಡೆಗಳಲ್ಲೂ ಪ್ರಸರಿಸುವುದು” ಎಂದು ಹೇಳಿತು. ಹೀಗೆ ಆಕಾಶವಾಣಿ ಹೇಳಿದ್ದನ್ನು ಅಲ್ಲಿದ್ದ ಎಲ್ಲರೂ ಸ್ಪಷ್ಟವಾಗಿ ಕೇಳಿದರು. ನಾರದನು ಆಶ್ಚರ್ಯಪಟ್ಟನು. ಆದರೆ ಆತನಿಗೆ ಯಾವ ಸತ್ಕರ್ಮವನ್ನು ಮಾಡಬೇಕೆಂದು ತಿಳಿಯಲಿಲ್ಲ.

ನಾರದನು ಹೇಳಿದನು

ಆಕಾಶವಾಣಿಯು ನಾನೇನು ಮಾಡಬೇಕೆಂಬುದನ್ನು ಪೂರ್ತಿ ತಿಳಿಸಲಿಲ್ಲ. ಇವರನ್ನು ಚೇತನಗೊಳಿಸುವುದಕ್ಕೆ ನಾನಾವ ಸತ್ಕರ್ಮವನ್ನು ಮಾಡಬೇಕು? ಆಕಾಶವಾಣಿ ಹೇಳಿದ ಸತ್ಪುರುಷರೆಲ್ಲಿದ್ದಾರೆ? ಅವರು ನನಗೆ ಸತ್ಕರ್ಮವನ್ನು ಹೇಗೆ ತಿಳಿಸುತ್ತಾರೆ? ನಾನೀಗ ಏನು ಮಾಡಬೇಕು?

ಸೂತನು ಹೇಳಿದನು

ಹೀಗೆ ಯೋಚಿಸುತ್ತ ನಾರದನು ಅವರಿಬ್ಬರನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಹೊರಟನು. ಒಂದೊಂದು ತೀರ್ಥಕ್ಕೂ ಹೋಗಿ ಅಲ್ಲಿದ್ದ ಮುನೀಶ್ವರರನ್ನು ಕೇಳಿದನು. ಅವರೆಲ್ಲರೂ ನಾರದನು ಹೇಳಿದ ವೃತ್ತಾಂತವನ್ನು ಕೇಳಿದರೇ ಹೊರತು ಯಾರೂ ನಾರದನಿಗೆ ಏನು ಮಾಡಬೇಕೆಂದು ಸೂಚಿಸಲಿಲ್ಲ. ಕೆಲವರು ಇದು ಅಸಾಧ್ಯವೆಂದು ಹೇಳಿದರು. ಕೆಲವರು ಇದು ಯಾರಿಗೂ ತಿಳಿಯಲು ಸಾಧ್ಯವಿಲ್ಲವೆಂದು ಹೇಳಿದರು. ಮತ್ತೆ ಕೆಲವರು ಮೌನದಿಂದಿದ್ದರು. ಕೆಲವರು ಏನೂ ಹೇಳದೆ ತಪ್ಪಿಸಿಕೊಂಡು ಹೋದರು ಮೂರು ಲೋಕಗಳಲ್ಲಿಯು ಆಶ್ಚರ್ಯಕರವಾಗಿ ದೊಡ್ಡದಾದ ಹಾಹಾಕಾರವುಂಟಾಯಿತು. ವೇದ ವೇದಾಂತ ವಾಕ್ಯಗಳಿಂದಲೂ ಗೀತಾವಾಕ್ಯಗಳಿಂದಲೂ ಪ್ರಬೋಧಿಸಿದರೂ ಭಕ್ತಿಜ್ಞಾನ ವೈರಾಗ್ಯಗಳು  ತೆಪ್ಪರಿಸಿಕೊಳ್ಳಲಿಲ್ಲವೆಂದೂ ಇದಕ್ಕೆ ಮತ್ತಾವ ಉಪಾಯವೂ ಇಲ್ಲವೆಂದು ಜನರು ಒಬ್ಬೊಬ್ಬರ ಕಿವಿಯಲ್ಲಿ ಗೊಣಗಾಡತೊಡಗಿದರು. ಯೋಗಿಯಾದ ನಾರದನಿಗೇ ಗೊತ್ತಾಗದಿದ್ದ ಮೇಲೆ ಅದನ್ನು ಇತರ ಮನುಷ್ಯರು ಹೇಳಬಲ್ಲರೇ ಎಂದೂ, ಇದು ಅಸಾಧ್ಯವೆಂದೂ, ಕೇಳಲ್ಪಟ್ಟ ಋಷಿಗಳು ನಿಶ್ಚಿತವಾಗಿ ಹೇಳಿಬಿಟ್ಟರು. ಆಗ ನಾರದನು ಚಿಂತಾತುರನಾಗಿ ಬದರೀ ವನಕ್ಕೆ ಬಂದನು. ಇಲ್ಲಿ ತಪಸ್ಸನ್ನು ಮಾಡೋಣವೆಂದು ನಿಶ್ಚಯಿಸಿಕೊಂಡಿದ್ದನು. ಆಗ ಆತನಿಗೆ ಕೋಟಿಸೂರ್ಯರಂತೆ ಪ್ರಕಾಶಿಸುತ್ತಿದ್ದ ಸನಕಾದಿ ಮುನೀಶ್ವರರು ಕಾಣಿಸಲು ನಾರದನು ಅವರನ್ನು ಕುರಿತು ಹೇಳಿದನು.

ನಾರದನು ಹೇಳಿದನು

ಕುಮಾರರೇ, ಈಗ ನನ್ನ ಮಹಾಭಾಗ್ಯದಿಂದ ತಮ್ಮ ಭೇಟಿ ಆಯಿತು. ನನ್ನ ಮೇಲೆ ಕರುಣೆಯಿಟ್ಟು ನನಗೆ ಬೇಕಾದುದನ್ನು ತಿಳಿಸಿ. ತಾವೆಲ್ಲರೂ ಯೋಗಿಗಳು, ಬುದ್ಧಿವಂತರು, ಬಹುಶ್ರುತರು, ಹಿರಿಯರಿಗಿಂತಲೂ ಹಿರಿಯರಾದರೂ ಐದುವರ್ಷ ವಯಸ್ಸಿನಲ್ಲೇ ಇರುವವರು. ಸದಾ ವೈಕುಂಠದಲ್ಲಿರುವವರು. ಹರಿ ಕೀರ್ತನ ತತ್ಪರರು, ಲೀಲಾಮೃತ ರಸೋನ್ಮತ್ತರು. ಕಥಾಮಾತ್ರೈಕ ಜೀವಿಗಳು. ನಿತ್ಯವೂ ಯಾರ ಮುಖದಲ್ಲಿ ಹರಿನಾಮವಿರುವುದೋ ಅವರನ್ನು ಶ್ರೀ ಹರಿಯು ಸದಾ ರಕ್ಷಿಸುತ್ತಾನಾದುದರಿಂದ ಅಂಥವರನ್ನು ಯಮನ ಅಪ್ಪಣೆಯಲ್ಲಿರುವ ಮುದಿತನ ಬಾಧಿಸುವುದಿಲ್ಲ. ತಮ್ಮ ಕೋಪದಿಂದ ವಿಷ್ಣುವಿನ ದ್ವಾರಪಾಲಕರೇ ಭೂಲೋಕಕ್ಕೆ ಬಿದ್ದರು. ತಮ್ಮ ಕರುಣೆಯಿಂದ ಪುನಃ ವೈಕುಂಠವನ್ನು ಹೊಂದಿದರು. ಆಹಾ ನನ್ನ ಭಾಗ್ಯದಿಂದ ತಮ್ಮ ದರ್ಶನವಾಯಿತು. ದಯಾಪರರಾದ ತಾವು ದೀನನಾದ ನನ್ನನ್ನು ಅನುಗ್ರಹಿಸಬೇಕು. ಆಕಾಶವಾಣಿ ಹೇಳಿದ ಸಾಧನವಾವುದೆಂಬುದನ್ನು ನನಗೆ ತಿಳಿಸಿ. ಅದನ್ನು ಹೇಗೆ ಅನುಷ್ಠಿಸಬೇಕು ಎನ್ನುವುದನ್ನೂ ಪೂರ್ತಿಯಾಗಿ ತಿಳಿಸಿ. ಭಕ್ತಿ ಜ್ಞಾನ ವೈರಾಗ್ಯಗಳಿಗೆ ಹೇಗೆ ಸುಖವುಂಟಾಗುವುದು? ಮತ್ತೆ ಅವುಗಳನ್ನು ಪ್ರೇಮಪೂರ್ವಕವಾಗಿ ಸರ್ವವರ್ಣಗಳಲ್ಲೂ ಹೇಗೆ ಸ್ಥಾಪಿಸಲು ಸಾಧ್ಯ? ಎಂಬುದನ್ನು ತಿಳಿಸಿ.

                                   ಕುಮಾರನು ಹೇಳಿದನು

        ದೇವರ್ಷಿಯೇ, ನೀನು ಚಿಂತಿಸಬೇಡ. ಮನಸ್ಸಿನಲ್ಲಿ ಹರ್ಷವನ್ನು ನೆಲೆಗೊಳಿಸು. ಈ ವಿಷಯದಲ್ಲಿ ಆಗಲೇ ಸಿದ್ಧವಾದ ಮತ್ತು ಸುಲಭಸಾಧ್ಯವಾದ ಉಪಾಯವಿದೆ. ನಾರದನೇ, ನೀನು ವಿರಕ್ತಿಯುಳ್ಳವರಲ್ಲಿ ಅಗ್ರಗಣ್ಯನಾದುದರಿಂದಲೂ, ಸದಾ ಶ್ರೀಕೃಷ್ಣದಾಸರಲ್ಲಿ ಅಗ್ರಣಿಯಾಗಿರುವುದರಿಂದಲೂ, ಯೋಗಭಾಸ್ಕರನಾಗಿರುವುದರಿಂದಲೂ, ಕೃತಾರ್ಥನಾಗಿದ್ದೀಯೆ. ಇಂತಹ ನೀನು ಭಕ್ತಿಯ ಕಾರ್ಯಕ್ಕಾಗಿ ಶ್ರಮಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಕೃಷ್ಣದಾಸನಿಗೆ ಭಕ್ತಿಯನ್ನು ಸಂಸ್ಥಾಪಿಸಬೇಕೆಂಬ ಉದ್ದೇಶ ಯಾವಾಗಲೂ ಸಫಲವಾಗುತ್ತದೆ. ಲೋಕದಲ್ಲಿ ಋಷಿಗಳು ಅನೇಕ ಮಾರ್ಗಗಳನ್ನು ಬೋಧಿಸಿದ್ದಾರೆ. ಅವೆಲ್ಲವೂ ಶ್ರಮಸಾಧ್ಯಗಳು ಮತ್ತು ಹೆಚ್ಚಾಗಿ ಸ್ವರ್ಗ ಫಲವನ್ನು ಮಾತ್ರ ಕೊಡತಕ್ಕವು. ವೈಕುಂಠಸಾಧಕವಾದ ಮಾರ್ಗವು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅದನ್ನು ಉಪದೇಶಿಸುವ ಪುರುಷನು ಭಾಗ್ಯದಿಂದ ಮಾತ್ರ ಲಭಿಸುವನು. ಹಿಂದೆ ನಿನಗೆ ಆಕಾಶವಾಣಿ ಯಾವ ಸತ್ಕರ್ಮವನ್ನು ಸೂಚಿಸಿತೋ ಅದನ್ನು  ತಿಳಿಸುತ್ತೇವೆ. ನೀನು ಸ್ಥಿರವಾದ ಮತ್ತು ಪ್ರಸನ್ನವಾದ ಮನಸ್ಸಿನಿಂದ ಅದನ್ನು ಕೇಳು. ಲೋಕದಲ್ಲಿ ಕೆಲವರು ದ್ರವ್ಯಗಳಿಂದ ಭಗವಂತನನ್ನು ಅರ್ಚಿಸುವರು. ಕೆಲವರು ತಪಸ್ಸಿನಿಂದ ಅರ್ಚಿಸುವರು. ಕೆಲವರು ಯೋಗದಿಂದಲೂ ಕೆಲವರು ವೇದ ಪಾರಾಯಣದಿಂದಲೂ ಜ್ಞಾನದಿಂದಲೂ ಅರ್ಚಿಸುವರು. ಅವರೆಲ್ಲರೂ ಕರ್ಮಬಂಧನವನ್ನು ಕಳೆದುಕೊಳ್ಳುತ್ತಾರೆ. ಪಂಡಿತರು ಜ್ಞಾನಯಜ್ಞವನ್ನು ಸತ್ಕರ್ಮಸೂಚಕವೆಂದು ಹೇಳಿದ್ದಾರೆ. ಶುಕಾದಿ ಮಹರ್ಷಿಗಳು ಶ್ರೀಮದ್ಭಾಗವತ ಪಾರಾಯಣ ಶ್ರವಣಗಳನ್ನು ಕೊಂಡಾಡಿದ್ದಾರೆ. ಶ್ರೀಮದ್ಭಾಗವತದ ಉಚ್ಚಾರಣದಿಂದ ಶಕ್ತಿಜ್ಞಾನ ವೈರಾಗ್ಯಗಳಿಗೆ ಬಹಳ ಬಲವುಂಟಾಗುತ್ತದೆ. ಭಕ್ತಿಯಿಂದ ದ್ವಂದ್ವಗಳ ಪೀಡೆ ಪರಿಹಾರವಾಗಿ ಆನಂದವುಂಟಾಗುತ್ತದೆ. ಶ್ರೀಮದ್ಭಾಗವತದ ಧ್ವನಿಯಿಂದ ಸಿಂಹದ ಗರ್ಜನೆಯನ್ನು ಕೇಳಿ ತೋಳಗಳು ಹೇಗೆ ಭಯಪಡುತ್ತವೆಯೋ ಹಾಗೆ ಕಲಿದೋಷಗಳೆಲ್ಲವೂ ನಾಶವಾಗುತ್ತವೆ. ಆಗ ಪ್ರತಿಯೊಂದು ಮನೆಯಲ್ಲೂ ಪ್ರತಿಯೊಬ್ಬನ ಮನಸ್ಸಿನಲ್ಲೂ ಜ್ಞಾನವೈರಾಗ್ಯಗಳಿಂದ ಕೂಡಿದ ಮತ್ತು ಪ್ರೇಮರಸವನ್ನುಂಟುಮಾಡುವ ಭಕ್ತಿಯು ಕ್ರೀಡಿಸುತ್ತದೆ.

ನಾರದರು ಹೇಳಿದರು

ವೇದ ವೇದಾಂತ ಪ್ರವಚನದಿಂದಲೂ, ಗೀತಾಪಾಠದಿಂದಲೂ ಪ್ರಬೋಧಿಸಿದರೂ ಭಕ್ತಿ ಜ್ಞಾನ ವೈರಾಗ್ಯಗಳು ತೆಪ್ಪರಿಸಿಕೊಳ್ಳದಿರುವಾಗ ಅವು ಶ್ರೀಮದ್ಭಾಗವತ ಪ್ರವಚನದಿಂದ ಹೇಗೆ ಚೈತನ್ಯವನ್ನು ಪಡೆಯುವುವು? ಅದರ ಕಥೆಗಳಲ್ಲಿ ಶ್ಲೋಕ ಶ್ಲೋಕದಲ್ಲೂ, ಪದಪದದಲ್ಲಿಯೂ ವೇದಾರ್ಥವಿದೆಯೇ? ನನ್ನ ಈ ಸಂದೇಹವನ್ನು ಶರಣಾಗತ ವತ್ಸಲರೂ ಮತ್ತು ಜ್ಞಾನಿಗಳೂ ಆದ ನೀವು ಕಾಲವಿಳಂಬವಿಲ್ಲದೆ ಪರಿಹರಿಸತಕ್ಕದ್ದು.

                                        ಕುಮಾರರು ಹೇಳಿದರು

ಭಾಗವತದ ಕಥೆಯು ವೇದ ಮತ್ತು ಉಪನಿಷತ್ತುಗಳಸಾರದಿಂದ ಹುಟ್ಟಿದೆ. ಆದುದರಿಂದ ಅದು ಗಿಡದಲ್ಲಿನ ಸಾರದಿಂದ ಹುಟ್ಟಿದ ಫಲದಂತೆ ಅತ್ಯುತ್ತಮವೂ ಆಸ್ವಾದಯೋಗ್ಯವೂ ಆಗಿದೆ. ಗಿಡದಲ್ಲಿ ಮೊದಲಿನಿಂದ ಕೊನೆಯವರೆಗೂ ರಸವಿರುತ್ತದೆಯಾದರೂ ಅದನ್ನು ಯಾರೂ ಆಸ್ವಾಸಿಸುವುದಿಲ್ಲ. ಅದು ಯಾವಾಗ ಪ್ರತ್ಯೇಕಿಸಲ್ಪಟ್ಟು ಫಲರೂಪದಲ್ಲಿ ಕಾಣಿಸಿಕೊಳ್ಳುವುದೋ ಆಗ ಅದು ಎಲ್ಲರ ಚಿತ್ತವನ್ನೂ ಆಕರ್ಷಿಸುತ್ತದೆ. ಹಾಲಿನಲ್ಲಿ ತುಪ್ಪವಿದ್ದರೂ ಅದನ್ನು ಆಸ್ವಾಸಿಸುವುದಕ್ಕೆ ಆಗುವುದಿಲ್ಲ. ಅದು ತುಪ್ಪವಾಗಿ ಪ್ರತ್ಯೇಕಿಸಲ್ಪಟ್ಟಾಗ ಅದು ದೇವತೆಗಳ ಆಹಾರವಾಗುತ್ತದೆ. ಕಬ್ಬಿನಲ್ಲಿ ಸಕ್ಕರೆ ಇರುತ್ತೆ. ಆದರೆ ಅದನ್ನು ಸಕ್ಕರೆ ರೂಪದಲ್ಲಿ ಪ್ರತ್ಯೇಕಿಸಿ ತೆಗೆದಾಗ ಅದು ಬಹಳ ಮಧುರವಾಗಿರುತ್ತದೆ. ಭಾಗವತ ಕಥೆಯ ವಿಷಯವೂ ಹಾಗೆಯೇ. ಈ ಭಾಗವತವೆಂಬ ಪುರಾಣವು ವೇದಸಮಾನವಾದದ್ದು. ಭಕ್ತಿ ಜ್ಞಾನ ವೈರಾಗ್ಯಗಳನ್ನು ಸ್ಥಾಪಿಸುವುದಕ್ಕಾಗಿ ಪ್ರಕಾಶಿತವಾಗಿದೆ. ಹಿಂದೆ ವ್ಯಾಸ ಮಹರ್ಷಿಯು ವೇದವೇದಾಂತಗಳಲ್ಲಿ ಮುಳುಗಿ ಗೀತೆಯನ್ನು ಸಹ ರಚಿಸಿದ್ದರೂ ಆತನಿಗೆ ಮನಶ್ಶಾಂತಿ ಲಭಿಸಲಿಲ್ಲ. ಆತನು ಅಜ್ಞಾನ ಸಮುದ್ರದಲ್ಲಿ ಮೋಹಗೊಂಡಿರುವಾಗ ನೀನೇ ಆತನಿಗೆ ನಾಲ್ಕು ಶ್ಲೋಕಗಳನ್ನು ಹೇಳಿ ಭಾಗವತ ರಚನೆಗೆ ಪ್ರೊತ್ಸಾಹಿಸಿದೆ. ಆ ಶ್ಲೋಕಗಳನ್ನು ಕೇಳಿದ ಕೂಡಲೇ ವ್ಯಾಸನು ಮನಸ್ಸಿನ ಅಶಾಂತಿಯನ್ನು ತೊರೆದನು. ಅಂತಹ ನೀನೇ ಭಾಗವತದ ಹಿರಿಮೆಯ ವಿಷಯದಲ್ಲಿ ಆಶ್ಚರ್ಯಪಟ್ಟು ಪ್ರಶ್ನಿಸಿತ್ತಿದ್ದೀಯಲ್ಲಾ. ಶ್ರೀಮದ್ಭಾಗವತದ ಶ್ರವಣದಿಂದ ಶೋಕವೂ ದುಃಖವೂ ತಪ್ಪದೆ ಪರಿಹಾರವಾಗುತ್ತದೆ.

                               ನಾರದನು ಹೇಳಿದನು

              ಆದಿಶೇಷನು ಹರಿಕೀರ್ತನೆಯನ್ನು ಹಾಡುತ್ತಿರಲು ಅದರ ರಸವನ್ನು ಪೂರ್ತಿಯಾಗಿ ಪಾನಮಾಡುತ್ತಾ ಆನಂದಿಸುವ ಕುಮಾರರೇ, ನಿಮ್ಮ ದರ್ಶನದಿಂದಲೇ ಸಮಸ್ತ ಪಾಪಗಳು ನಶಿಸಿ ಹೋಗುತ್ತದೆ. ಸಂಸಾರ ದುಃಖವೆಂಬ ದಾವಾನಲಕ್ಕೆ ಸಿಕ್ಕಿ ನರಳುತ್ತಿರುವವರಿಗೆ ಶ್ರೇಯಸ್ಸು ಉಂಟಾಗುತ್ತದೆ. ಅಂತಹ ನಿಮ್ಮನ್ನು ಪ್ರೇಮದ ಬೆಳಕಿಗಾಗಿ ಶರಣು ಹೊಕ್ಕಿದ್ದೇನೆ.

                   ಬಹು ಜನ್ಮಗಳ ಪುಣ್ಯಪರಿಪಾಕದಿಂದ ಸತ್ಪುರುಷರ ಸಹವಾಸ ಲಭಿಸುತ್ತದೆ. ಅದರಿಂದ ಅಜ್ಞಾನದಿಂದ ಉಂಟಾದ ಮೋಹ, ಮದ, ಎಂಬ ಅಂಧಕಾರವು ಅಳಿದು ವಿವೇಕ ಹುಟ್ಟುತ್ತದೆ.

   ಎಂಬಲ್ಲಿಗೆ ಶ್ರೀ ಪದ್ಮಪುರಾಣದ ಉತ್ತರ ಖಂಡದಲ್ಲಿನ ಶ್ರೀಮದ್ಭಾಗವತಮಹಾತ್ಮ್ಯದಲ್ಲಿ ಕುಮಾರ ನಾರದ ಸಂವಾದವೆಂಬ ದ್ವಿತೀಯಾಧ್ಯಾಯವು ಮುಗಿದುದು.   ಮೂರನೇ ಅಧ್ಯಾಯ

ಭಕ್ತಿ ಜ್ಞಾನ ವೈರಾಗ್ಯಗಳನ್ನು ಸ್ಥಾಪಿಸುವ ಸಲುವಾಗಿ ಪ್ರಯತ್ನಪಟ್ಟು ಶುಕಮಹರ್ಷಿಯಿಂದ ಹೇಳಲ್ಪಟ್ಟ ಭಾಗವತಶಾಸ್ತ್ರದ ಪ್ರಭೆಯನ್ನು ಬೀರುತ್ತ ನಾನು ಜ್ಞಾನ ಯಜ್ಞವನ್ನು ಮಾಡುವೆನು. ನಾನು ಈ ಯಜ್ಞವನ್ನು ಯಾವ ಸ್ಥಳದಲ್ಲಿ ಮಾಡಬೇಕೆಂಬುದನ್ನು ತಿಳಿಸಿ. ಭಾಗವತದ ಮಹಿಮೆಯನ್ನು ತಿಳಿಸಿ. ವೇದಪಾರಂಗತರಾದವರು ಭಾಗವತವನ್ನು ಎಷ್ಟುದಿನ ವಾಚನ ಮಾಡಬೇಕು? ಇದರ ವಿಧಿಯೆಲ್ಲವನ್ನೂ ನನಗೆ ತಿಳಿಸಿ.

ಕುಮಾರರು ಹೇಳಿದರು

ನಾರದನೇ, ನೀನು ವಿವೇಕಿಯು, ವಿನಯಶೀಲನೂ ಆಗಿರುವುದರಿಂದ ನಿನಗೆ ಇದನ್ನೆಲ್ಲಾ ತಿಳಿಸುತ್ತೇವೆ ಕೇಳು. ಗಂಗಾದ್ವಾರದ ಬಳಿ ಆನಂದವೆಂಬ ನದೀ ತೀರವಿದೆ. ಅಲ್ಲಿ ನಾನಾ ಋಷಿಗಳು ವಾಸ ಮಾಡುತ್ತಾರೆ. ದೇವತೆಗಳೂ ಸಿದ್ಧರೂ ಆ ಸ್ಥಳವನ್ನು ಸೇವಿಸುತ್ತಾರೆ. ಅದು ನಾನಾ ವೃಕ್ಷಗಳಿಂದಲೂ ಬಳ್ಳಿಗಳಿಂದಲೂ ಹೊಸದಾದ ನುಣುಪಾದ ಮರಳಿನಿಂದಲೂ  ಶೋಭಿತವಾಗಿದೆ. ಅದು ಏಕಾಂತವೂ ರಮ್ಯವೂ ಆದ ಪ್ರದೇಶ. ಚಿನ್ನದ ಪದ್ಮಗಳ ಸೌರಭದಿಂದ ಮನೋಹರವಾಗಿದೆ. ಅಲ್ಲಿರುವ ಪ್ರಾಣಿಗಳಲ್ಲಿ ಸಹಜವಾದ ವೈರವೂ ಇಲ್ಲ. ನೀನು ಸುಲಭವಾಗಿ ಅಲ್ಲಿ ಜ್ಞಾನ ಯಜ್ಞವನ್ನು ಮಾಡು. ಅಲ್ಲಿ ವಾಚನ ಮಾಡಿದ ಭಗವಂತನ ಕಥೆ ಅಪೂರ್ವವಾದ ರಸದಿಂದ ಮನೋಹರವಾಗುತ್ತದೆ. ಭಕ್ತಿಯ ದುರ್ಬಲವಾದ ಮುದಿತನದಿಂದ ಜೀರ್ಣವಾದ ಶರೀರಗಳುಳ್ಳ ತನ್ನ ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಬರುವಳು. ಎಲ್ಲಿ ಭಗವಂತನ ಕೀರ್ತನೆ ನಡೆಯುತ್ತದೆಯೋ ಅಲ್ಲಿಗೆ ಭಕ್ತಿಜ್ಞಾನ ವೈರಾಗ್ಯಗಳು ಆಗಮಿಸುವುವು. ಕಥಾ ಶಬ್ದವನ್ನು ಕೇಳಿ ಆ ಮೂವರಲ್ಲಿಯೂ ಯೌವನ ಮೂಡುವುದು.

ಸೂತನು ಹೇಳಿದನು

ಹೀಗೆ ಹೇಳಿ ನಾರದನ ಜೊತೆಯಲ್ಲಿ ಕುಮಾರರು ಕಥಾಪಾನಕ್ಕಾಗಿ ಗಂಗಾತಟಕ್ಕೆ ಶೀಘ್ರವಾಗಿ ಆಗಮಿಸಿದರು. ಅವರು ಅಲ್ಲಿಗೆ ಬಂದ ಕೂಡಲೇ ಭೂಲೋಕದಲ್ಲೂ, ದೇವಲೋಕದಲ್ಲೂ, ಬ್ರಹ್ಮಲೋಕದಲ್ಲೂ ಕೋಲಾಹಲವುಂಟಾಯಿತು. ಶ್ರೀಭಾಗತವೆಂಬ ಅಮೃತವನ್ನು ಪಾನ ಮಾಡಲು ರಸಲಂಪಟರಾದವರೂ, ಅವರಲ್ಲೂ ಮೊದಲು ವಿಷ್ಣುಭಕ್ತರೂ, ಓಡಿಬಂದರು. ಭೃಗು, ವಸಿಷ್ಠ, ಚ್ಯವನ, ಗೌತಮ, ಮೇಧಾತಿಥಿ, ದೇವಲ, ದೇವರಾತ, ಪರಶುರಾಮ, ವಿಶ್ವಾಮಿತ್ರ, ಶಾಕಲ, ಮಾರ್ಕಂಡೇಯ, ಆತ್ರೇಯ, ಪಿಪ್ಪಲಾದ, ಯೋಗೇಶ್ವರರಾದ ವ್ಯಾಸ ಪರಾಶರರೂ, ಛಾಯಾಶುಕನೂ, ಜಾಜಲಿ, ಜಹ್ನು ಮುಂತಾದ ಮುನಿಗಳೆಲ್ಲರೂ ಅತಿಪ್ರೇಮದಿಂದ ಪುತ್ರಕಲತ್ರ ಶಿಷ್ಯ ಸಮೇತರಾಗಿ ಅಲ್ಲಿಗೈತಂದರು.

ಉಪನಿಷತ್ತುಗಳೂ, ವೇದಗಳೂ, ಮಂತ್ರಗಳೂ, ತಂತ್ರಗಳೂ, ಉಳಿದ ಹದಿನೇಳು ಪುರಾಣಗಳೂ, ಆರು ಶಾಸ್ತ್ರಗಳೂ, ಗಂಗಾದಿ ನದಿಗಳೂ, ಪುಷ್ಕರ ಮುಂತಾದ ಸರಸ್ಸುಗಳೂ, ಕ್ಷೇತ್ರಗಳೂ, ದಿಕ್ಕುಗಳೂ, ದಂಡಕ ಮುಂತಾದ ಅರಣ್ಯಗಳೂ, ಪರ್ವತಗಳೂ,  ಎಲ್ಲಾ ರೂಪಗಳನ್ನು ಧರಿಸಿ ಅಲ್ಲಿಗೆ ಬಂದವು. ಅಲ್ಲಿಗೆ ಯಾವ ಹಿರಿಯರು ಬರಲಿಲ್ಲವೋ ಅವರನ್ನು ಭೃಗುಮಹರ್ಷಿಯು ಗೌರವದಿಂದ ಕರೆದುಕೊಂಡು ಬಂದನು. ನಾರದನು ಕೊಟ್ಟ ಉತ್ತಮವಾದ ಆಸನದಲ್ಲಿ ಸನಕಾದಿ ಕುಮಾರರು ದೀಕ್ಷಿತರಾಗಿ ಕುಳಿತುಕೊಂಡರು. ಅವರನ್ನು ಎಲ್ಲರು ನಮಸ್ಕರಿಸಿದರು. ಅವರು ಕೃಷ್ಣಧ್ಯಾನದಲ್ಲಿ ಮುಳುಗಿದ್ದರು. ವೈಷ್ಣವರೂ, ವಿರಕ್ತರೂ, ಸನ್ಯಾಸಿಗಳೂ, ಬ್ರಹ್ಮಚಾರಿಗಳೂ ಅವರ ಮುಂದೆ ಕುಳಿತರು. ಅವರ ಎದುರಿಗೆ ನಾರದನನು ಕುಳಿತುಕೊಂಡನು. ಒಂದು ಕಡೆಯಲ್ಲಿ ಋಷಿಗಳೂ, ಇನ್ನೊಂದು ಕಡೆ ದೇವತೆಗಳೂ ಕುಳಿತುಕೊಂಡರು. ವೇದಗಳೂ, ಉಪನಿಷತ್ತುಗಳೂ ಒಂದು ಕಡೆ ಕುಳಿತುಕೊಂಡವು. ತೀರ್ಥಗಳು ಒಂದುಕಡೆ ಕುಳಿತುಕೊಂಡವು. ಹೆಂಗಸರು ಒಂದು ಕಡೆ ಕುಳಿತುಕೊಂಡರು. ಜಯಕಾರಗಳೂ, ನಮಶ್ಶಬ್ಧಗಳೂ, ಶಂಖ ಧ್ವನಿಗಳೂ ಎದ್ದವು. ಅರಸಿನ, ಕುಂಕುಮ, ಮುಂತಾದ ಮಂಗಳ ದ್ರವ್ಯಗಳೂ, ಅರಳೂ, ಹೂಗಳೂ ಚೆಲ್ಲಲ್ಪಟ್ಟವು. ಕೆಲವರು ದೇವನಾಯಕರು ವಿಮಾನಗಳಲ್ಲಿ ಕುಳಿತು ಕಲ್ಪವೃಕ್ಷದ ಹೂಗಳನ್ನು ಎಲ್ಲರ ಮೇಲೂ ಸೂಸಿದರು. ಆಗ ಎಲ್ಲರೂ ಏಕಾಗ್ರಚಿತ್ತರಾಗಿರುವಾಗ, ಕುಮಾರರು ಶ್ರೀಮದ್ಭಾಗವತದ ಮಾಹಾತ್ಮ್ಯವನ್ನು ನಾರದನಿಗೆ ಹೀಗೆಂದು ಸ್ಪಷ್ಟವಾಗಿ ಹೇಳಿದರು.

ಕುಮಾರರು ಹೇಳಿದರು

ಯಾವುದನ್ನು ಕೇಳಿದ ಮಾತ್ರಕ್ಕೆ ಮೋಕ್ಷವು ಕರತಲಾಮಲಕವಾಗುವುದೋ ಅಂತಹ ಶುಕನಿಂದ ಹೇಳಲ್ಪಟ್ಟ ಭಾಗವತದ ಮಹಿಮೆಯನ್ನು ನಾವೀಗ ಹೇಳುತ್ತಿದ್ದೇವೆ. ಯಾವುದನ್ನು ಕೇಳಿದ ಕೂಡಲೇ ಶ್ರೀಮಹಾವಿಷ್ಣುವು ಮನಸ್ಸಿನಲ್ಲಿ ನೆಲೆಗೊಳ್ಳುವನೋ ಅಂತಹ ಭಾಗವತ ಪುರಾಣದ ಕಥೆ ಎಲ್ಲರಿಂದಲೂ ಸದಾ ಸೇವಿಸಲ್ಪಡಲು ಯೋಗ್ಯವಾದುದು. ಇದೊಂದೇ ಎಲ್ಲರಿಂದಲೂ ಸದಾ ಸೇವಿಸಲ್ಪಡಲು ಯೋಗ್ಯವಾದುದು. ಆ ಭಾಗವತವನ್ನು ಶುಕಮಹರ್ಷಿಯು ಪರೀಕ್ಷಿನ್ಮಹಾರಾಜನಿಗೆ ಹೇಳಿದನು. ಅದರಲ್ಲಿ ಹದಿನೆಂಟು ಸಾವಿರ ಶ್ಲೋಕಗಳಿವೆ. ಅದನ್ನು ಹನ್ನೆರಡು ಸ್ಕಂಧಗಳಾಗಿ ವಿಭಾಗಿಸಿದ್ದಾರೆ. ಎಲ್ಲಿಯವರೆಗೂ  ಭಾಗವತ ಶ್ರವಣವನ್ನು ಕ್ಷಣಕಾಲವಾದರೂ ಮಾಡದೆ ಇರುತ್ತಾನೋ ಅಲ್ಲಿಯವರೆಗೂ ಆ ಮನುಷ್ಯನು ಅಜ್ಞಾನದಿಂದ ಸಂಸಾರ ಚಕ್ರದಲ್ಲಿ ತಿರುಗುತ್ತಿರುತ್ತಾನೆ. ಅನೇಕ ವೇದಗಳೇಕೆ? ಶಾಸ್ತ್ರಗಳೇಕೆ? ಭ್ರಮವನ್ನುಂಟುಮಾಡುವ ಅನೇಕ ಪುರಾಣಗಳೇಕೆ? ಮುಕ್ತಿಯನ್ನು ಸಾಧಿಸಲು ಭಾಗವತ ಶಾಸ್ತ್ರವೊಂದು ಸಾಕು. ಯಾವ ಮನೆಯಲ್ಲಿ ನಿತ್ಯವೂ ಭಾಗವತದ ಅಧ್ಯಯನ ನಡೆಯುತ್ತಿರುತ್ತದೆಯೋ ಆ ಮನೆಯೇ ಒಂದು ಪುಣ್ಯ ಕ್ಷೇತ್ರ. ಅಲ್ಲಿರುವವರ ಪಾಪಗಳು ನಶಿಸಿ ಹೋಗುವುವು. ಒಂದು ಸಾವಿರ ಅಶ್ವಮೇಧಯಾಗಗಳು, ನೂರು ವಾಜಪೇಯ ಯಾಗಗಳೂ ಭಾಗವತದ ಹರಿನಾರನೇ ಒಂದು ಭಾಗಕ್ಕೂ ಸಮಾನವಲ್ಲ. ಎಲೈ ತಪೋಧನರೇ, ನರರು ಎಲ್ಲಿಯವರೆಗೂ ಶ್ರೀಮದ್ಭಾಗವತ ಶ್ರವಣವನ್ನು ಚೆನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರೆಗೂ ಅವರ ದೇಹಗಳಲ್ಲಿ ಪಾಪಗಳಿರುತ್ತವೆ. ಗಂಗೆಯಾಗಲಿ, ಗಯೆಯಾಗಲಿ, ಕಾಶಿಯಾಗಲಿ, ಪುಷ್ಕರವಾಗಲಿ, ಪ್ರಯಾಗವಾಗಲಿ, ಭಾಗವತ ಕೊಡುವಷ್ಟು ಫಲವನ್ನು ಕೊಡಲು ಸಮರ್ಥವಲ್ಲ. ನಿನಗೆ ಉತ್ತಮ ಗತಿ ಬೇಕಾದರೆ ನಿನ್ನ ಬಾಯಿಯಿಂದ ಭಾಗವತದ ಅರ್ಧ ಶ್ಲೋಕವನ್ನು ಅಥವಾ ಕಾಲು ಶ್ಲೋಕವನ್ನಾದರೂ ಪ್ರತಿ ದಿನ ಓದು. ವೇದಗಳ ಆದಿಯಾದ ಓಂಕಾರ, ವೇದಮಾತೆಯಾದ ಗಾಯತ್ರಿ, ಪುರುಷಸೂಕ್ತ, ವೇದಗಳು, ಭಾಗವತ, ದ್ವಾದಶಾಕ್ಷರಮಂತ್ರ, ದ್ವಾದಶಾತ್ಮನಾದ ಸೂರ್ಯನು, ಪ್ರಯಾಗ, ಸಂವತ್ಸರಾತ್ಮಕವಾದ ಕಾಲ, ಬ್ರಾಹ್ಮಣರು, ಅಗ್ನಿಹೋತ್ರ, ಗೋವು, ದ್ವಾದಶಿ, ತುಲಸಿ, ವಸಂತಋತು, ಪುರುಷೋತ್ತಮನಾದ ಶ್ರೀ ಮಹಾವಿಷ್ಣು, ಇವುಗಳಲ್ಲಿ ಜ್ಞಾನಿಗಳು ತತ್ವದೃಷ್ಟಿಯಿಂದ ಭೇದಭಾವವನ್ನು ಮಾಡುವುದಿಲ್ಲ. ಯಾರು ಭಾಗವತವನ್ನು ಅರ್ಥ ತಿಳಿದು ಸದಾ ಪಾರಾಯಣ ಮಾಡುವರೋ ಅವರು ಕೋಟಿ ಜನ್ಮಗಳಲ್ಲಿ ಮಾಡಿದ್ದ ಪಾಪವೆಲ್ಲಾ ನಶಿಸುವುದು. ಇದರಲ್ಲಿ ಸಂಶಯವಿಲ್ಲ. ಯಾರು ಪ್ರತಿದಿನ ಅರ್ಧ ಶ್ಲೋಕವನ್ನಾಗಲೀ ಕಾಲುಶ್ಲೋಕವನ್ನಾಗಲಿ ಭಾಗವತ ಪಾರಾಯಣ ತಪ್ಪದೆ ಮಾಡುವರೋ ಅವರಿಗೆ ರಾಜಸೂಯ ಯಾಗ ಮತ್ತು ಅಶ್ವಮೇಧ ಯಾಗ ಮಾಡಿದ ಪುಣ್ಯ ಬರುವುದು. ನಿತ್ಯವೂ ಭಾಗವತ ಪಾರಾಯಣ ಮಾಡುವುದು, ವಿಷ್ಣು ಧ್ಯಾನ ಮಾಡುವುದು, ತುಲಸೀ ಪೋಷಣಗಳನ್ನು ಮಾಡುವುದು, ಗೋ ಸೇವೆ ಮಾಡುವುದು ಇವೆಲ್ಲಾ ಒಂದಕ್ಕೊಂದು ಸಮಾನ. ಮರಣ ಕಾಲದಲ್ಲಿ ಯಾರು ಭಾಗವತದ ವಾಕ್ಯವನ್ನು ಕೇಳುವರೋ ಅವರಿಗೆ ಗೋವಿಂದನು ಸಂತುಷ್ಟನಾಗಿ ವೈಕುಂಠದಲ್ಲಿ ಸ್ಥಾನಕೊಡುವನು. ಯಾರು ಭಾಗವತ ಪುಸ್ತಕವನ್ನು ಚಿನ್ನದ ಸಿಂಹಗಳ ಜೊತೆಯಲ್ಲಿಟ್ಟು ವೈಷ್ಣವನಿಗೆ ದಾನ ಮಾಡುವರೋ ಅವರಿಗೆ ತಪ್ಪದೆ ಕೃಷ್ಣ ಸಾಯುಜ್ಯ ಲಭಿಸುವುದು.

        ಯಾವ ಬುದ್ಧಿಹೀನನು ಹುಟ್ಟಿದಲಾಗಾಯತು ಮನಸ್ಸಿಟ್ಟು ಸ್ವಲ್ಪವಾದರೂ ಭಾಗವತ ಕಥೆಯನ್ನು ಕೇಳಲಿಲ್ಲವೋ ಅವನ ಜೀವಿತ ಚಂಡಾಲನ ಜೀವಿತದಂತೆ, ಕತ್ತೆಯ ಜೀವಿತದಂತೆ ವ್ಯರ್ಥವಾದದ್ದು. ಅವನು ಹುಟ್ಟಿದ್ದಕ್ಕೆ ಫಲ ತಾಯಿಗೆ ಹೆರಿಗೆಯ ಕಷ್ಟಕೊಟ್ಟದ್ದೊಂದೇ.

        ಯಾವನು ಭಾಗವತ ಕಥೆಯನ್ನು ಸ್ವಲ್ಪವೂ ಕೇಳಲಿಲ್ಲವೋ ಅಂತಹ ಪಾಪಕರ್ಮನು ಜೀವಚ್ಛವನೆಂದೂ, ಅವನು ಪಶುಸಮನೆಂದೂ, ಅವನು ಭೂಮಿಗೆ ಭಾರರೂಪನೆಂದೂ, ದೇವ ಸಭೆಯಲ್ಲಿ ಮುಖ್ಯರಾದವರು ಹೇಳುತ್ತಾರೆ.

        ಲೋಕದಲ್ಲಿ ಭಾಗವತ ಕಥೆ ಸಿಗುವುದು ಕಷ್ಟ. ಅದು ಕೋಟಿ ಜನ್ಮಗಳ ಪುಣ್ಯವಿದ್ದರೆ ಮಾತ್ರ ಲಭಿಸುತ್ತದೆ. ಆದುದರಿಂದ ಯೋಗನಿಧಿಯೂ, ಬುದ್ಧಿವಂತನೂ ಆದ ನಾರದನೇ, ಭಾಗವತವನ್ನು ಪ್ರಯತ್ನಪಟ್ಟು ಕೇಳಬೇಕು. ಇದಕ್ಕೆ ದಿನಗಳ ನಿಯಮವಿಲ್ಲ. ಯಾವಾಗಲೂ ಇದನ್ನು ಶ್ರವಣ ಮಾಡಬಹುದು. ಸತ್ಯವನ್ನೂ ಬ್ರಹ್ಮಚರ್ಯವನ್ನೂ ಉಳ್ಳವನಾಗಿ ಯಾವಾಗಲೂ ಕೇಳಬಹುದು. ಯಾವಾಗಲೂ ಶ್ರವಣ ಮಾಡುವುದಕ್ಕೆ ಕಲಿಯುಗದಲ್ಲಿ ಸಾಧ್ಯವಿಲ್ಲದಿರುವುದರಿಂದ ಶುಕನು ಒಂದು ವಿಶೇಷವನ್ನು ಕಲ್ಪಿಸಿದ್ದಾನೆ. ಮನೋವೃತ್ತಿಯನ್ನು ಜಯಿಸುವುದಕ್ಕೂ, ನಿಯಮಗಳನ್ನು ಆಚರಿವುಸುವುದಕ್ಕೂ, ದೀಕ್ಷೆಯಿಂದ ಇರುವುದಕ್ಕೂ, ಸಾಧ್ಯವಿಲ್ಲದಿರುವುದರಿಂದ ಏಳು ದಿನಗಳು ಭಾಗವತ ಶ್ರವಣ ಮಾಡುವ ವಿಧಿಯು ಏರ್ಪಾಟಾಗಿದೆ. ಮಾಘಮಾಸದಲ್ಲಿ ಪ್ರತಿ ದಿನ ಶ್ರದ್ಧೆಯಿಂದ ಭಾಗವತವನ್ನು ಕೇಳಿದರೆ ಎಷ್ಟು ಫಲವಿದೆಯೋ ಅಷ್ಟೇಫಲ ಸಪ್ತಾಹ ಶ್ರವಣದಿಂದ ಲಭಿಸುತ್ತೆ, ಎಂದು ಶುಕದೇವನು ಏರ್ಪಾಟು ಮಾಡಿದ್ದಾನೆ. ಮನುಷ್ಯರಿಗೆ ಕಲಿದೋಷದಿಂದ ಮನಸ್ಸನ್ನು ಜಯಿಸುವುದು ಅಸಾಧ್ಯವಾಗಿರುವುದರಿಂದಲೂ, ರೋಗಗಳ ಕಾರಣದಿಂದಲೂ, ಆಯಸ್ಸು ಕ್ರಮೇಣ ಕ್ಷೀಣಿಸುತ್ತಿರುವುದರಿಂದಲೂ, ಸಪ್ತಾಹ ಶ್ರವಣ ಮಾಡಿದರೆ ಸಾಕು ಎಂದು ವಿಧಿಸಿದ್ದಾನೆ. ತಪಸ್ಸಿನಿಂದಲೂ, ಯೋಗದಿಂದಲೂ, ಸಮಾಧಿಯಿಂದಲೂ ಯಾವ ಫಲವನ್ನು ಹೊಂದಲು ಸಾಧ್ಯವಿಲ್ಲವೋ ಆ ಫಲವನ್ನು ಅನಾಯಾಸವಾಗಿ ಸಪ್ತಾಹ ಶ್ರವಣದಿಂದ ಹೊಂದಬಹುದು. ಭಾಗವತ ಸಪ್ತಾಹವು ಯಜ್ಞಕ್ಕಿಂತಲೂ, ವ್ರತಕ್ಕಿಂತಲೂ, ತಪಸ್ಸಿಗಿಂತಲೂ, ತೀರ್ಥಕ್ಕಿಂತಲೂ, ಯೋಗಕ್ಕಿಂತಲೂ, ಧ್ಯಾನಕ್ಕಿಂತಲೂ, ಜ್ಞಾನಕ್ಕಿಂತಲೂ ನಾನು ಶ್ರೇಷ್ಠವೆಂದು ಗರ್ಜಿಸುತ್ತಿದೆ. ಅದರ ಗರ್ಜನೆಯನ್ನು ಏನೆಂದು ವರ್ಣಿಸಲಿ. ಸದಾ ತನ್ನ ಹಿರಿಮೆಯನ್ನು ಸೂಚಿಸುತ್ತ ಗರ್ಜಿಸುತ್ತಲೇ ಇರುತ್ತದೆ.

                                        ಶೌನಕನು ಹೇಳಿದನು

        ಆಶ್ಚರ್ಯಕರವಾದ ಕಥೆಯನ್ನು ನೀನು ಹೇಳಿದೆ. ಭಾಗವತಪುರಾಣವು ಜ್ಞಾನ ಮುಂತಾದ ಧರ್ಮಗಳನ್ನು ಮೀರಿಸಿ ಕಲಿಯುಗದಲ್ಲಿ ಮುಕ್ತಿಗಾಗಿ ಯೋಗಿಗಳು ಎಲ್ಲದಕ್ಕಿಂತಲೂ ಶ್ರೇಷ್ಠವೆಂದು ಹೇಳುವಂತೆ ಯಾವ ಕಾರಣದಿಂದ ಆಯಿತು?

                                         ಸೂತನು ಹೇಳಿದನು

        ಕೃಷ್ಣು ಭೂಲೋಕವನ್ನು ಬಿಟ್ಟು ವೈಕುಂಠಕ್ಕೆ ಹೋಗಲು ಸಿದ್ಧನಾಗಿರುವಾಗ, ಮನಸ್ಸನ್ನು ಜಯಿಸಿದವನಾದರೂ ಉದ್ಧವನು ಕೃಷ್ಣನನ್ನು ಕುರಿತು ಹೀಗೆಂದು ಹೇಳಿದನು.

ಉದ್ಧವನು ಹೇಳಿದನು

        ಗೋವಿಂದನೇ, ನೀನು ಭಕ್ತರ ಕಾರ್ಯವನ್ನು ಮಾಡಿ ಈಗ ವೈಕುಂಠಕ್ಕೆ ಹೊರಟಿದ್ದೀಯೆ. ನನ್ನ ಮನಸ್ಸಿನಲ್ಲಿ ಬಹಳ ಚಿಂತೆಯುಂಟಾಗಿದೆ. ಅದನ್ನು ಕೇಳಿ ಸಮಾಧಾನಪಡಿಸು. ಈಗ ಘೋರವಾದ ಕಲಿಯುಗ ಪ್ರಾಪ್ತವಾಗಿದೆ. ಈ ಯುಗದಲ್ಲಿ ಪುನಃ ದುಷ್ಟರು ಉದ್ಭವಿಸುವರು. ಅವರ ಸಾಂಗತ್ಯದಿಂದ ಸತ್ಪುರುಷರೂ ಕ್ರೂರರಾಗುತ್ತಾರೆ. ಆಗ ಗೋರೂಪಳಾದ ಈ ಭೂಮಿ ಭಾರ ಸಹಿಸಲಾರದೆ ಯಾರನ್ನಾಶ್ರಯಿಸುವಳು. ಕಮಲಲೋಚನನೇ, ನೀನಲ್ಲದೆ ಭೂಮಿಗೆ ಸಂರಕ್ಷಕನು ಇನ್ನಾರೂ ನನಗೆ ಕಾಣಿಸುತ್ತಿಲ್ಲ. ಆದ್ದರಿಂದ ಸತ್ಪುರುಷರಲ್ಲಿ ದಯೆ ತೋರಿಸಿ ನೀನು ವೈಕುಂಠಕ್ಕೆ ತೆರಳದೆ ಇಲ್ಲೇ ಇರು. ಭಕ್ತವತ್ಸಲನೇ, ನೀನು ನಿರಾಕಾರನಾದರೂ ಚಿನ್ಮಯನಾದುದ್ದರಿಂದ ಭಕ್ತರಹಿತಕ್ಕಾಗಿ ಸಗುಣರೂಪವನ್ನು ಧರಿಸಿದ್ದೀಯೆ. ನಿನ್ನನ್ನಗಲಿ ಭಕ್ತರು ಭೂಲೋಕದಲ್ಲಿ ಹೇಗಿರುವರು? ನಿರ್ಗುಣೋಪಾಸನೆಯನ್ನು ಮಾಡುವುದು ಕಷ್ಟ. ಆದ್ದರಿಂದ ನೀನು ಸ್ವಲ್ಪ ಯೋಚನೆ ಮಾಡು. ಪ್ರಭಾಸ ಕ್ಷೇತ್ರದಲ್ಲಿ ಶ್ರೀಕೃಷ್ಣನು ಉದ್ಧವನು ಹೇಳಿದ ಈ ಮಾತುಗಳನ್ನು ಕೇಳಿ ಭಕ್ತರ ರಕ್ಷಣೆಗೆ ನಾನೀಗ ಏನು ಮಾಡಲಿ ಎಂದು ಯೋಚಿಸಿದನು. ಆಗ ಶ್ರೀಕೃಷ್ಣನು ತನ್ನಲ್ಲಿದ್ದ ತೇಜಸ್ಸನ್ನು  ಭಾಗವತದಲ್ಲಿಟ್ಟನು. ಶ್ರೀಕೃಷ್ಣನು ಅಂತರ್ಹಿತನಾಗಿ ಶ್ರೀ ಭಾಗವತವೆಂಬ ಸಮುದ್ರವನ್ನು ಪ್ರವೇಶಿಸಿದನು. ಆದುದರಿಂದ ಭಾಗವತ ವಿಷ್ಣುವಿನ ವಾಙ್ಮಯವಾದ ಪ್ರತ್ಯಕ್ಷಮೂರ್ತಿಯಾಗಿದೆ. ಇದು ಸೇವಿಸುವುದರಿಂದಲೂ, ಕೇಳುವುದರಿಂದಲೂ, ಓದುವುದರಿಂದಲೂ, ನೋಡುವುದರಿಂದಲೂ ಪಾಪವನ್ನು ನಾಶಗೊಳಿಸುತ್ತದೆ. ಹೀಗೆ ಸಪ್ತಾಹಶ್ರವಣವು ಎಲ್ಲ ಸಾಧನಗಳಿಗೂ ಮಿಗಿಲಾಗುವಂತೆ ಶ್ರೀಕೃಷ್ಣನು ಮಾಡಿದ್ದಾನೆ. ಕಲಿಯುಗದಲ್ಲಿ ಸಪ್ತಾಹಶ್ರವಣ ಅತ್ಯುತ್ತಮ ಧರ್ಮವೆಂದು ಹೇಳಲ್ಪಟ್ಟಿದೆ. ದುಃಖವನ್ನೂ ದಾರಿದ್ರ್ಯವನ್ನೂ, ದೌರ್ಭಾಗ್ಯವನ್ನೂ, ಪಾಪಗಳನ್ನೂ ತೊಳೆದುಕೊಳ್ಳುವುದಕ್ಕೂ, ಕಾಮಕ್ರೋಧಗಳನ್ನು ಜಯಿಸುವುದಕ್ಕೂ, ಕಲಿಯುಗದಲ್ಲಿ ಸಪ್ತಾಹ ಧರ್ಮವು ಹೇಳಲ್ಪಟ್ಟಿದೆ. ಇದನ್ನು ಬಿಟ್ಟರೆ ವಿಷ್ಣುಮಾಯೆಯನ್ನು ಗೆಲ್ಲಲು ದೇವತೆಗಳಿಗೂ ಸಾಧ್ಯವಿಲ್ಲ. ಮನುಷ್ಯನಿಗೆ ಹೇಗೆ ಸಾಧ್ಯವಾದೀತು. ಆದುದರಿಂದ ಸಪ್ತಾಹ ವಿಧಿ ಕೊಂಡಾಡತಕ್ಕದ್ದಾಗಿದೆ.

ಸೂತನು ಹೇಳಿದನು

        ಹೀಗೆ ಸಭೆಯಲ್ಲಿ ಸನಕಾದಿ ಋಷಿಗಳು ಸಪ್ತಾಹ ಶ್ರವಣವೆಂಬ ಧರ್ಮವನ್ನು ಪ್ರಕಾಶ ಮಾಡುತ್ತಿರಲು ಒಂದು ಆಶ್ಚರ್ಯ ನಡೆಯಿತು. ಶೌನಕನೇ, ಅದನ್ನು ಹೇಳುತ್ತೇನೆ ಕೇಳು. ಪ್ರೇಮೈಕ ರೂಪಳಾದ ಭಕ್ತಿಯು ತರುಣ ವಯಸ್ಕರಾದ ತನ್ನ ಮಕ್ಕಳನ್ನು ಕರೆದುಕೊಂಡು ಶ್ರೀಕೃಷ್ಣ, ಗೋವಿಂದಾ, ಹರೀ, ಮುರಾರೀ, ನಾಥಾ, ಎಂಬ ದೇವರ ನಾಮಗಳನ್ನು ಪದೇ ಪದೇ ಉಚ್ಚರಿಸುತ್ತ ಕೂಡಲೇ ಅಲ್ಲಿ ಪ್ರತ್ಯಕ್ಷಳಾದಳು. ಅಲ್ಲಿನ ಸದಸ್ಯರೆಲ್ಲರೂ ಒಳ್ಳೆಯ ಸುಂದರವಾದ ವೇಷವನ್ನು ಧರಿಸಿ ಭಾಗವತದ ಅರ್ಥವೆಂಬ ಭೂಷಣಗಳನ್ನು ತೊಟ್ಟು ಬಂದ ಆಕೆಯನ್ನು ನೋಡಿ “ಈಕೆ ಇಲ್ಲಿ ಹೇಗೆ ಪ್ರವೇಶಿಸಿದಳು? ಮುನಿಗಳ ನಡುವೆ ಹೇಗೆ ಬಂದಳು?” ಎಂದು ಜಿಜ್ಞಾಸೆಯನ್ನು ವ್ಯಕ್ತಪಡಿಸಿದರು. ಆಗ ಕುಮಾರರು “ಈಕೆಯು ಭಾಗವತ ಕಥಾರ್ಥದಿಂದ ಈಗ ಹೊರಗೆ ಬಂದಳೆಂದು” ಹೇಳಿದರು. ಆ ಮಾತನ್ನು ಕೇಳಿ  ಪುತ್ರಸಹಿತಳಾದ ಭಕ್ತಿಯು ಸನತ್ಕುಮಾರನಿಗೆ ವಿನಯದಿಂದ ಹೀಗೆ ಹೇಳಿದಳು.

                                          ಭಕ್ತಿ ಹೇಳಿದಳು

        ಕಲಿಪ್ರಭಾವದಿಂದ ನಾಶಹೊಂದಿದ್ದ ನಾನು ತಮ್ಮಿಂದ ಪ್ರಕಟವಾದ ಭಾಗವತ ಕಥಾರಸದಿಂದ ಈಗ ಪರಿಪುಷ್ಟಳಾಗಿದ್ದೇನೆ. ನಾನೀಗ ಎಲ್ಲಿ ನಿಲ್ಲಬೇಕೆಂಬುದನ್ನು ತಿಳಿಸಿ.

ಎಂದು ಭಕ್ತಿ ಹೇಳಿದ್ದನ್ನು ಕೇಳಿ ಕುಮಾರರು ಹೀಗೆಂದು ಹೇಳಿದರು. ಅಮ್ಮಾ ನೀನು ಭಕ್ತರಿಗೆ ಗೋವಿಂದ ರೂಪಿಣಿಯಾಗಿ ಪ್ರೇಮವನ್ನು ಧರಿಸಿ ಭವರೋಗಗಳನ್ನು ನಾಶಪಡಿಸುತ್ತ, ಧೈರ್ಯವನ್ನು ತುಂಬುತ್ತ ಯಾವಾಗಲೂ ವೈಷ್ಣವರ ಮನಸ್ಸುಗಳಲ್ಲಿ ನಿಂತಿರು. ಕಲಿಯಿಂದ ಉಂಟಾದ ದೋಷಗಳು ಲೋಕದಲ್ಲಿ ಎಷ್ಟು ಬಲಿಷ್ಠಗಳಾದರೂ ನಿನ್ನನ್ನು ನೋಡುವುದಕ್ಕೂ ಅವುಗಳಿಗೆ ಸಾಧ್ಯವಿರುವುದಿಲ್ಲ. ಹೀಗೆ ಕುಮಾರರು ಹೇಳುತ್ತಿರುವಾಗಲೇ ಭಕ್ತಿ ಹೋಗಿ ಹರಿದಾಸರ ಮನಸ್ಸುಗಳಲ್ಲಿ ಸೇರಿಕೊಡಳು.

ಸಮಸ್ತ ಪ್ರಪಂಚದಲ್ಲಿಯೂ ಯಾರ ಹೃದಯದಲ್ಲಿ ವಿಷ್ಣುಭಕ್ತಿ ಮಾತ್ರವಿರುತ್ತದೆಯೋ ಬಡವರಾದರೂ ಅವರೇ ಧನ್ಯರು. ಶ್ರೀಹರಿಯು ಭಕ್ತಿ ಎಂಬ ಹಗ್ಗದಿಂದ ಎಳೆಯಲ್ಪಟ್ಟು ತನ್ನ ಲೋಕವನ್ನು ಬಿಟ್ಟು ಅವರ ಮನಸ್ಸುಗಳಲ್ಲಿ ಪ್ರವೇಶಿಸುತ್ತಾನೆ.

ಪರಬ್ರಹ್ಮ ತತ್ವಪ್ರತಿಪಾದಕನಾದ ಭಾಗವತದ ಮಹಿಮೆಯನ್ನಿದಕ್ಕಿಂತಲೂ ಹೆಚ್ಚಾಗಿ ಏನೆಂದು ಹೇಳಲಿ. ಅದನ್ನು ಆಶ್ರಯಿಸಿ ಪಾರಾಯಣ ಮಾಡಿದರೆ ಪಾರಾಯಣ ಮಾಡುವವನೂ ಕೇಳುವವನೂ ಕೃಷ್ಣನಿಗೆ ಸಮಾನರಾಗುತ್ತಾರೆ. ಬೇರೆ ಧರ್ಮಗಳೇಕೆ ಬೇಕು?

        ಎಂಬಲ್ಲಿಗೆ ಶ್ರೀಪದ್ಮಪುರಾಣದ ಉತ್ತರ ಖಂಡದಲ್ಲಿ ಶ್ರೀಮದ್ಭಾಗವತ ಮಾಹಾತ್ಮ್ಯದಲ್ಲಿ ಭಕ್ತಿ ಕಷ್ಟನಿವರ್ತನೆಂಬ ತೃತೀಯಾಧ್ಯಾಯವು ಮುಗಿದುದು.

                                    ನಾಲ್ಕನೇ ಅಧ್ಯಾಯ

                                    ಸೂತನು ಹೇಳಿದನು

        ವೈಷ್ಣವರ ಮನಸ್ಸುಗಳಲ್ಲಿ ಅತಾಕಿಕವಾದ ಭಕ್ತಿ ನೆಲೆಸಸಿರುವುದನ್ನು ಕಂಡು ಭಕ್ತವತ್ಸಲನಾದ ಬಗವಂತನು ತನ್ನ ಲೋಕವನ್ನು ಬಿಟ್ಟು ವನಮಾಲೆಯನ್ನು ಧರಿಸಿದವನೂ ಮೇಘಶ್ಯಾಮನೂ ಪೀತಂಬರನೂ, ಮನೋಹರನೂ, ಕಾಂಚೀ ಕಿರೀಟ ಮತ್ತು ಕುಂಡಲಗಳನ್ನು ಧರಿಸಸಿದವನೂ ತ್ರಿಭಂಗಿಯಲ್ಲಿ ನಿಂತುಕೊಂಡವ ಕೌಸ್ತುಭಮಣಿಯನ್ನು ಧರಿಸಿದವ, ಕೋಟಿ ಮನ್ಮಥರ ಸೌಂದರ್ಯವುಳ್ಳವನೂ, ಗಂಧವನ್ನು ಮೈಯಲ್ಲಿ ಬಳಿಸಿಕೊಂಡವನೂ, ಪರಮಾನಂದ ಚಿನ್ಮೂರ್ತಿಯೂ, ಮನೋಹರನೂ, ಮುರಳೀಧರನೂ ಆಗಿ ತನ್ನ ಭಕ್ತರ ನಿರ್ಮಲವಾದ ಹೃದಯಗಳಲ್ಲಿ ಪ್ರವೇಶಿಸಿದನು. ಉದ್ಧವನು ಮುಂತಾದ ವಿಷ್ಣುಭಕ್ತರಾದ ವೈಕುಂಠವಾಸಿಗಳು ಭಾಗವತ ಕಥೆಯನ್ನು ಕೇಳುವುದಕ್ಕಾಗಿ ಯಾರಿಗೂ ಕಾಣಿಸಿಕೊಳ್ಳದೆ, ಅಲ್ಲಿಗೆ ಬಂದು ನಿಂತಿದ್ದರು. ಆಗ ಜಯಕಾರವೆದ್ದಿತು. ಅಲೌಕಿಕವಾದ ರಸಸಪುಷ್ಟಿ ಉಂಟಾಯಿತು. ಮಂಗಳ ಚೂರ್ಣಗಳೂ, ಪುಷ್ಪಗಳೂ ಮಳೆಗರೆದವು. ಪದೇ ಪದೇ ಶಂಖಧ್ವನಿಯು ಉಂಟಾಯಿತು. ಆ ಸಭೆಯಲ್ಲಿದ್ದವೆಲ್ಲರೂ ತಮ್ಮ ಮನೆಗಳನ್ನು, ದೇಹಗಳನ್ನೂ, ಆತ್ಮಗಳನ್ನೂ ಮರೆತರು. ಅಂತಹ ತನ್ಮಯ ಸ್ಥಿತಿಯನ್ನು ಕಂಡು ನಾರದನು ಹೀಗೆಂದು ಹೇಳಿದನು.

        ಮುನೀಶ್ವರರೇ, ಸಪ್ತಾಹದಿಂದ ಉಂಟಾದ ಅಲೌಕಿಕವಾದ ಮಹಿಮೆಯನ್ನು ನಾನೀಗ ನೋಡಿದೆನು. ಇಲ್ಲಿರುವ ಬುದ್ಧಿಯಿಲ್ಲದ ಪಶುಪಕ್ಷಿಗಳು ಸಹ ಈಗ ಎಲ್ಲಾ ಪಾಪರಹಿತಗಳಾಗುತ್ತಿವೆ. ಆದುದರಿಂದ ಈ ಕಲಿಯುಗದಲ್ಲಿ ಮನಸ್ಸನ್ನು ಶುದ್ಧಿಗೊಳಿಸುವ ಸಾಧನ ಭೂಲೋಕದಲ್ಲಿ ಇದಕ್ಕಿಂತಲೂ ಪವಿತ್ರವಾದದ್ದು ಬೇರೆ ಯಾವುದೂ ಇಲ್ಲ. ಈ ಭೂಲೋಕದಲ್ಲಿ ಭಾಗವತಕಥೆಗೆ ಸಮಾನವಾಗಿ ಪಾಪಗಳನ್ನು ಹೋಗಲಾಡಿಸುವ ಸಾಧನ ಮತ್ತಾವುದೂ ಇಲ್ಲ. ಈ ಕಥಾಮಯವಾದ ಸಪ್ತಾಹ ಯಜ್ಞದಿಂದ ಯಾರು ಯಾರು ಶುದ್ಧರಾಗುತ್ತಾರೆ ಎಂಬುದನ್ನು ನನಗೆ ತಳಿಸಿ. ದಯಾಳುಗಳಾದ ತಮ್ಮಿಂದ ಲೋಕಹಿತಕ್ಕಾಗಿ ಒಂದು ನವೀನ ಮಾರ್ಗವು ಪ್ರಕಾಶಿಸಲ್ಪಟ್ಟಿದೆ.

ಕುಮಾರರು ಹೇಳಿದರು

        ಯಾವ ಮಾನವರು ಸದಾ ಪಾಪ ಕಾರ್ಯಗಳನ್ನು ಮಾಡುತ್ತಿರುವರೋ, ಯಾರು ಸದಾ ದುರಾಚಾರಿಗಳಾಗಿ ತಪ್ಪು ಹಾದಿಯಲ್ಲಿರುವರೋ ಯಾರು ಕ್ರೋಧಾಗ್ನಿ ದಗ್ಧರಾಗಿರುವರೋ, ಯಾರು ಕುಟಿಲರಾಗಿಯೂ, ಕಾಮಿಗಳಾಗಿಯೂ ಇರುವರೋ ಅಂತಹವರು ಸಹ ಕಲಿಯುಗಲ್ಲಿ ಸಪ್ರಾಹ ಯಜ್ಞವನ್ನು ಮಾಡಿದರೆ ಪವಿತ್ರರಾಗುತ್ತಾರೆ. ಸತ್ಯವಿಲ್ಲದವರೂ, ಮಾತಾಪಿತೃರೂಪಕರೂ, ಆಸೆಯಿಂದ ಬಳಲುತ್ತಿರುವರೂ, ಆಶ್ರಮಧರ್ಮವನ್ನು ಬಿಟ್ಟವರೂ, ದಾಂಭಿಕರೂ, ಮತ್ಸರಗ್ರಸ್ತರೂ, ಹಿಂಸೆಮಾಡುವರೂ, ಕಲಿಯುಗದಲ್ಲಿ ಸಪ್ತಾಹ ಯಜ್ಞದಿಂದ ಪವಿತ್ರರಾಗುತ್ತಾರೆ. ಪಂಚಮಹಾಪಾಪಗಳನ್ನು ಮಾಡಿದವರೂ, ಛಲವುಳ್ಳವರೂ, ಮೋಸಗಾರರೂ, ಕ್ರೂರರೂ, ಪಿಶಾಚಗಳಂತೆ ದಯೆಯಿಲ್ಲದವರೂ, ಬ್ರಾಹ್ಮಣರ ಆಸ್ತಿಯನ್ನು ಅಪಹಾರ ಮಾಡಿದವರೂ, ವ್ಯಭಿಚಾರಿಗಳೂ, ಕಲಿಯುಗದಲ್ಲಿ ಸಪ್ತಾಹ ಯಜ್ಞದಿಂದ ಪೂತರಾಗುತ್ತಾರೆ. ಯಾವ ಬುದ್ಧಿಹೀನರು ಮನೋವಾಕ್ಕಾಯಗಳಿಂದ ಪಟ್ಟುಹಿಡಿದು ಪಾಪಕರ್ಮಗಳನ್ನು ಸದಾ ಮಾಡುತ್ತಿರುವರೋ, ಯಾರು ಇತರರ ಸೊತ್ತನ್ನು ಅಪಹರಿಸಿ ಅದನ್ನು ಅನುಭವಿಸುತ್ತಿರುವರೋ, ಯಾರು ಕಲ್ಮಷವುಳ್ಳವರೋ ಯಾರು ಕೆಟ್ಟ ಉದ್ದೇಶಗಳುಳ್ಳವರೋ ಅಂತಹವರು ಸಹ ಕಲಿಯುಗದಲ್ಲಿ ಸಪ್ತಾಹ ಯಜ್ಞದಿಂದ ಪವಿತ್ರರಾಗುತ್ತಾರೆ.

        ಈ ವಿಷಯವಾಗಿ ನಿನಗೆ ಒಂದು ಪ್ರಾಚೀನವಾದ ಇತಿಹಾಸವನ್ನು ಹೇಳುತ್ತೇವೆ. ಅದನ್ನು ಕೇಳಿದ ಮಾತ್ರಕ್ಕೆ ಪಾಪ ನಶಿಸುವುದು. ಹಿಂದೆ ತುಂಗಭದ್ರಾ ತೀರದಲ್ಲಿ ಒಂದು ಉತ್ತಮವಾದ ಪಟ್ಟಣವಿತ್ತು. ಅಲ್ಲಿ ನಾಲ್ಕುವರ್ಣದವರೂ ಸ್ವಧರ್ಮವನ್ನು ಪರಿಪಾಲಿಸುತ್ತ ಸತ್ಯದಲ್ಲೂ ಸತ್ಕಾರ್ಯಗಳಲ್ಲೂ ತತ್ಪರರಾಗಿದ್ದರು. ಆ ಪಟ್ಟಣದಲ್ಲಿ ಆತ್ಮದೇವನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನು ಸಮಸ್ತವೇದಗಳನ್ನೂ ತಿಳಿದವನಾಗಿದ್ದನು. ಶ್ರೌತಸ್ಮಾರ್ತಮರ್ಕಗಳಲ್ಲಿ ನಿಷ್ಟಾತನಾಗಿ ಎರಡನೆಯ ಸೂರ್ಯನಂತೆ ತೇಜಸ್ವಿಯಾಗಿದ್ದನು. ಆತನು ಭಿಕ್ಷಾಟನದಿಂದ ದ್ರವ್ಯವನ್ನು ಸಂಪಾದಿಸಿ ಧನಿಕನಾಗಿದ್ದು. ಆತನ ಹೆಂಡತಿಯ ಹೆಸರು ಧುಂಧುಲಿ. ಆಕೆಯು ಗಂಡನ ಮಾತನ್ನು ಉಳಿಸುವವಳಾಗಿದ್ದಳು. ಒಳ್ಳೆಯ ಕುಲದಲ್ಲಿ ಹುಟ್ಟಿದವಳೂ ಸುಂದರಿಯು ಆಗಿದ್ದಳು. ಆಕೆ ಯಾವಾಗಲೂ ಸುದ್ದಿಗಳಲ್ಲಿ ಆಸಕ್ತಳಾಗಿದ್ದಳು. ಅಲ್ಲದೇ ಕ್ರೂರಳೂ ಅತಿಯಾಗಿ ಮಾತಾಡುವವಳೂ ಗೃಹಕೃತ್ಯಗಳಲ್ಲಿ ದಕ್ಷಳೂ, ಲೋಭಿಯೂ, ಕಲಹಪ್ರಿಯಳೂ ಆಗಿದ್ದಳು. ಹೀಗೆ ಆ ದಂಪತಿಗಳು ಪ್ರೇಮದಿಂದ ಸಂಸಾರ ನಡೆಸುತ್ತಿರಲು ಸಂತಾನವಿಲ್ಲದೇ ಹೋದ ಕಾರಣ ಅವರಿಗೆ ಮನೆ ಮುಂತಾದ ಐಶ್ವರ್ಯವೂ ಕಾಮಸುಖವೂ ಮನಸ್ಸಿಗೆ ತೃಪ್ತಿಯನ್ನುಂಟು ಮಾಡಲಿಲ್ಲ. ಆ ಮೇಲೆ ಅವರು ಸಂತಾನಕ್ಕಗಿ ಅನೇಕ ಧರ್ಮಕಾರ್ಯಗಳನ್ನು ಮಾಡತೊಡಗಿದರು. ಅವರು ದೀನರಿಗೆ ಗೋವುಗಳನ್ನೂ, ಭೂಮಿಯನ್ನೂ, ಚಿನ್ನವನ್ನೂ, ಬಟ್ಟೆಗಳನ್ನೂ ಸದಾ ಕೊಡುತ್ತಿದ್ದರು. ಅವರ ಬಳಿಯಿದ್ದ ಧನದಲ್ಲಿ ಅರ್ಧಭಾಗವನ್ನು ಅವರು ಧರ್ಮ ಕಾರ್ಯಗಳಿಗೆ ವಿನಿಯೋಗಿಸಿದರು. ಅದರೂ ಅವರಿಗೆ ಪುತ್ರನಾಗಲಿ ಪುತ್ರಿಯಾಗಲಿ ಹುಟ್ಟಲಿಲ್ಲ. ಆಗ ಆ ವಿಪ್ರನು ಬಹಳ ಚಿಂತಾತುರನಾದನು. ಆತನು ಒಂದು ದಿನ ದುಃಖದಿಂದ ಮನೆಬಿಟ್ಟು ಅರಣ್ಯಕ್ಕೆ ಹೋದನು. ಮಧ್ಯಾಹ್ನವಾಗಲು ಆತ ಬಾಯಾರಿಕೆಯಿಂದ ಒಂದು ಕೆರೆಯ ಸಮೀಪಕ್ಕೆ ಬಂದನು. ಅಲ್ಲಿ ನೀರನ್ನು ಕುಡಿದು ಒಂದು ಕಡೆ ಕುಳಿತುಕೊಂಡು ಸಂತಾನವಿಲ್ಲವೆಂದು ದುಃಖಪಡುತ್ತಿದ್ದನು. ಒಂದು ಮುಹೂರ್ತ ಕಳೆಯುವಷ್ಟರೊಳಗೆ ಒಪ್ಪ ಸನ್ಯಾಸಿ ಅಲ್ಲಿಗೆ ಬಂದು ನೀರನ್ನು ಕುಡಿದನು. ಆಗ ವಿಪ್ರನು ಆ ಸನ್ಯಾಸಿಯ ಸಮೀಪಕ್ಕೆ ಹೋಗಿ ಆತನ ಪಾದಗಳಿಗೆ ನಮಸ್ಕಾರ ಮಾಡಿ ಆತನ ಎದುರಿಗೆ ದುಃಖದಿಂದ ನಿಟ್ಟುಸಿರುಬಿಡುತ್ತ ನಿಂತುಕೊಂಡನು.

ಸನ್ಯಾಸಿ ಹೇಳಿದನು

        ಬ್ರಾಹ್ಮಣನೇ, ಇದೆನು ನೀನು ಅಳುತ್ತಿದ್ಧೀಯೆ. ನಿನಗಿರುವ ದಾರುಣವಾದ ಚಿಂತೆ ಯಾವುದುದು? ನಿನ್ನ ದುಃಖಕ್ಕೆ ಕಾರಣವೇನೆಂಬುದನ್ನು ನನಗೆ ಶ್ರೀಘ್ರವಾಗಿ ತಿಳಿಸು.

ಬ್ರಾಹ್ಮಣನು ಹೇಳಿದನು

        ಎಲೈ ಋಷಿಯೇ, ನನ್ನ ದುಃಕದ ವಿಚಾರವೇನೆಂದು ಹೇಳುವೆನನು. ಇದು ನಾನು ಪೂರ್ವಜನ್ಮದಲ್ಲಿ ಮಾಡಿದ ಪಾಪದ ಫಲ. ನನ್ನ ಪೂರ್ವಿಕರು ನಾನು ದುಃಖದಿಂದ ತರ್ಪಣ ಮಾಡಿದಾಗ ಬೆಚ್ಚಗಿರುವ ಉದಕವನ್ನೇ ತೆಗೆದುಕೊಳ್ಳುತ್ತಿದ್ದಾರೆ. ನಾನು ಕೊಟ್ಟಿದ್ದನ್ನು ದೇವತೆಗಳೂ, ಬ್ರಾಹ್ಮಣರೂ ಸ್ವೀಕರಿಸುತ್ತಿಲ್ಲ. ಇದಕ್ಕೆ ಕಾರಣ ನನಗೆ ಸಂತಾನವಿಲ್ಲದಿರುವಿಕೆ. ಸಂತಾನವಿಲ್ಲವೆಂಬ ದುಃಖದಿಂದ ನನ್ನ ಮನಸ್ಸು ಶೂನ್ಯವಾಗಿದೆ. ಆದುದರಿಂದ ಪ್ರಾಣಗಳನ್ನು ಬಿಡಬೇಕೆಂದು ಇಲ್ಲಿಗೆ ಬಂದಿದ್ದೇನೆ. ಸಂತತಿಯಿಲ್ಲದವನ ಜೀವಿತಕ್ಕೆ ಧಿಕ್ಕಾರ. ಅವನ ಮನೆಗೆ ದಿಕ್ಕಾರ. ಅವನ ಧನ ವ್ಯರ್ಥ. ಅವನ ಕುಲಕ್ಕೆ ಧಿಕ್ಕಾರ. ನಾನು ಸಾಕುತ್ತಿರುವ ಹಸು ಸಹ ಬಂಜೆಯಾಗಿದೆ. ನಾನು ಹಾಕಿದ ಗಿಡ ಸಹ ಬಂಜೆಯಾಗಿದೆ. ನನ್ನ ಮನೆಗೆ ಯಾವ ಫಲವು ಬಂದರೂ ಅದು ಶ್ರೀಘ್ರವಾಗಿ ನಾಶವಾಗುತ್ತಿದೆ. ಹೀಗೆ ನಿರ್ಭಾಗ್ಯವೂ ಮತ್ತು ಸಂತಾನಹೀನನೂ ಆದ ನಾನೇಕೆ ಬದುಕಿರಬೇಕು? ಎಂದು ಹೇಳಿ ಆ ಬ್ರಾಹ್ಮಣನು ಆ ಸನ್ಯಾಸಿಯ ಪಕ್ಕದಲ್ಲಿ ದುಃಖಪೀಡಿತನಾಗಿ ಗಟ್ಟಿಯಾಗಿ ಅತ್ತನು. ಅದನ್ನು ನೋಡಿ ಆ ಯತಿಯ ಮನಸ್ಸಿನಲ್ಲಿ ಬಹಳ ಕರುಣೆ ಉಂಟಾಯಿತು. ಆತನು ಆ ಬ್ರಾಹ್ಮಣನ ಹಣೆಯ ಬರಹವನ್ನು ಓದಿ ಸಕಲವನ್ನೂ ತಿಳಿದು ಆತನಿಗೆ ಇದ್ದ ಸಂಗತಿಯನ್ನೆಲ್ಲಾ ಹೀಗೆ ವಿವರಿಸಿದನು.

ಸನ್ಯಾಸಿ ಹೇಳಿದನು

        ಸಂತಾನ ರೂಪವಾದ ಅಜ್ಞಾನವನ್ನು ಬಿಡು. ಕರ್ಮ ಗತಿಯನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ನೀನು ವಿವೇಕವುಳ್ಳವನಾಗಿ ಸಂಸಾರವಾಸನೆಯನ್ನು ಬಿಡು. ವಿಪ್ರನೇ ಕೇಳು. ನಾನೀಗ ನಿನ್ನ ಪ್ರಾರಬ್ಧವನ್ನು ನೋಡಿದ್ದೇನೆ. ಏಳು ಜನ್ಮಗಳಲ್ಲಿ ನಿನಗೆ ಪುತ್ರಪ್ರಾಪ್ತಿ ಇಲ್ಲವೇ ಇಲ್ಲ. ಹಿಂದೆ ಸಗರ ಚಕ್ರವರ್ತಿಯು, ಅಂಗನೆಯರಾಜನೂ ಸಂತಾನದಿಂದ ಬಹಳ ದುಃಖವನ್ನು ಹೊಂದಿದರು. ಆದುದರಿಂದ ನೀನು ಕುಟುಂಬದ ಮೇಲೆ ಮೋಹವನ್ನು ಬಿಡು. ಈ ಸನ್ಯಾಸದಲ್ಲಿಯೇ, ನಿಜವಾದ ಸುಖವಿರುವುದು.

ಬ್ರಾಹ್ಮಣನು ಹೇಳಿದನು

        ವಿವೇಕದಿಂದ ನನಗಾಗುವ ಲಾಭವೇನು? ನಿನ್ನ ಶಕ್ತಿಯನ್ನಾದರೂ ಉಪಯೋಗಿಸಿ ನನಗೆ ಮಗ ಹುಟ್ಟುವಂತೆ ವರಕೊಡು. ಇಲ್ಲದಿದ್ದರೆ ದುಃಖದಿಂದ ನಿನ್ನ ಎದುರಿನಲ್ಲೇ ಪ್ರಾಣಬಿಡುತ್ತೇನೆ. ಪುತ್ರ ಸುಖವನ್ನನುಭವಿಸದ ನನಗೆ ಸನ್ಯಾಸವು ನಿಷ್ಪ್ರಯೋಜಕ ಈ ಲೋಕದಲ್ಲಿ ಪುತ್ರಪೌತ್ರ ಸಮೇತನಾದ ಗೃಹದ್ಥನೇ ಆನಂದರಸವನ್ನನುಭವಿಸುವನು. ಎಂದು ಹೆಳಲು ಆ ಬ್ರಾಹ್ಮಣನ ಹಠನೋಡಿ ಆತಪೋದವನು ಹೇಳಿದನು. “ವಿಧಿ ನಿಯಮಿಸಿದ್ದನ್ನು ತಪ್ಪಿಸಲು ಯತ್ನಿಸಿ ಚಿತ್ರಕೇತು ಎಂಬಾತನು ಹಿಂದೆ ಕಷ್ಟಕ್ಕೀಡಾದನು. ನಿನಗೆ ದೈವವು ಪ್ರತಿಕೂಲವಾಗಿರುವುದರಿಂದ ನೀನು ಪುತ್ರನಿಂದ ಸುಖವನ್ನು ಹೊಂದಲಾರೆ. ಆದರೂ ನೀನು ಹಠದಿಂದಿದ್ದೀಯೆ. ನೀನು ಇಷ್ಟು ಪ್ರಾರ್ಥಿಸುತ್ತಿರುವಾಗ ನಾನೇನು ಪ್ರತ್ಯುತ್ತರ ಹೇಳಲಿ. “ಎಂದು ಹೇಳಿ ಆ ಬ್ರಾಹ್ಮಣನ ಹಠ ನೋಡಿ ಆ ಸನ್ಯಾಸಿ ಆತನಿಗೆ ಒಂದು ಹಣ್ಣು ಕೊಟ್ಟು ಇದನ್ನು ನಿನ್ನ ಹೆಂಡತಿಯು ತಿಂದರೆ ನಿನಗೆ ಪುತ್ರನು ಹುಟ್ಟುವನು. ನಿನ್ನ ಹೆಂಡತಿ ಒಂದು ವರ್ಷಕಾಲ ಸತ್ಯವಂತರಾಗಿ ಶುಚಿಯಾಗಿ ದಯೆಯುಳ್ಳವರೂ ದಾನಶೀಲರೂ ಆಗಿ ಒಂದು ಹೊತ್ತು ಮಾತ್ರ ಊಟ ಮಾಡುತ್ತ ಇದ್ದರೆ ಅಲ್ಲಿಂದ ನಿರ್ಮಲವಾದ ಪುತ್ರನು ಹುಟ್ಟುವನು” ಎಂದು ಹೇಳಿ ಅಲ್ಲಿಂದ ಹೊರಟುಹೋದನು. ಆ ಬ್ರಾಹ್ಮಣನು ಮನೆಗೆ ಬಂದು ಹೆಂಡತಿಗೆ ಫಲವನ್ನು ಕೊಟ್ಟು ತಾನು ಎಲ್ಲಿಗೊ ಹೋದನು. ಆ ಮೇಲೆ ಆತನ ಹೆಂಡತಿ ಕುಟಿಲ ಸ್ವಭಾವವುಳ್ಳವಳಾದುದರಿಂದ ತನ್ನ ಸಖಿಯ ಮುಂದೆ ಅಳತೊಡಗಿದಳು. “ಅಯ್ಯೋ ನನಗೆ ಈಗ ಚಿಂತೆ ಹುಟ್ಟಿತು. ಈ ಫಲವನ್ನು ನಾನು ತಿನ್ನುವುದಿಲ್ಲ. ಇದನುನ ತಿಂದರೆ ನನಗೆ ಗರ್ಭವಾಗುವುದು. ಅದರಿಂದ ಹೊಟ್ಟೆ ತುಂಬಿಕೊಳ್ಳುವುದು. ಅದರಿಂದ ಆಹಾರ ಕಡಿಮೆಯಾಗಿ ನಾನು ಅಶಕ್ತಳಾಗುವೆನು. ಹೀಗಾದರೆ ನಾನು ಮನೆಯ ಕೆಲಸ ಹೇಗೆ ಮಾಡಲಿ? ವಿಧಿವಶದಿಂದ ಈ ಊರಿನ ಮೇಲೆ ಶತ್ರುಗಳು ದಾಳಿ ಮಾಡಿದರೆ ಆಗ ನಾನು ಗರ್ಭಿಣಿಯಾಗಿದ್ದರೆ ಹೇಗೆ ಓಡಲಿ. ಹೊಟ್ಟೆಯಲ್ಲಿ ಗರ್ಭದ ಪಂಜರದಲ್ಲಿ ಗಿಣಿಯಿದ್ದಂತೆ ಸದಾ ಇರುತ್ತದೆ. ಅದನ್ನು ಹೊಟ್ಟೆಯಿಂದ ಈಚೆಗೆ ಬರುವಂತೆ ಹೇಗೆ ಮಾಡುವುದು. ಗರ್ಭ ಅಡ್ಡಡ್ಡವಾಗಿ ಬಿಟ್ಟರೆ ಆಗ ನಾನು ಖಂಡಿತ ಸತ್ತು ಹೋಗುತ್ತೇನೆ. ಹೆರಿಗೆಯಲ್ಲಿ ಬಹಳ ದುಃಖ ಉಂಟಾಗುತ್ತೆ. ಸುಕುಮಾರಿಯಾದ ನಾನು ಅದನ್ನು ಹೇಗೆ ಸಹಿಸಲಿ? ನಾನು ಗರ್ಭಿಣಿಯಾಗಿ ಹುಷಾರಿಲ್ಲದಿರುವಾಗ ಮನೆಯಲ್ಲಿರುವುದನ್ನೆಲ್ಲಾ ಬೇರೆಯವರು ಅಪಹರಿಸಿದರೆ ಹೇಗೆ? ಸತ್ಯ, ಶೌಚ, ಮುಂತಾದ ನಿಯಮ ನನಗೆ ಅಸಾಧ್ಯವಲ್ಲವೇ? ಮಗು ಹುಟ್ಟಿದರೂ ಅದನ್ನು ಲಾಲಿಸಿ ಪಾಲಿಸುವುದರಲ್ಲಿ ಕಷ್ಟವಿದೆ. ಬಂಜೆ ಅಥವಾ ವಿಧವೆಯಾದ ಸ್ತ್ರೀಯೇ ಸುಖದಿಂದಿರುತ್ತಾಳೆಂದು ನನ್ನ ಅಭಿಪ್ರಾಯ. “ಎಂದು ಕುತರ್ಕ ಮಾಡಿ ಅವಳು ಆ ಫಲವನ್ನು ತಿನ್ನಲಿಲ್ಲ. ಗಂಡ ಬಂದು ಫಲವನ್ನು ತಿಂದೆಯಾ” ಎಂದು ಕೇಳಿದಾಗ ಅವಳು “ತಿಂದೆ” ಎಂದು ಉತ್ತರ ಕೊಟ್ಟಳು. ಒಂದು ಸಲ ಅವಳ ತಂಗಿ ಅವಳ ಮನೆಗೆ ಬಂದಳು. ಆಗ ಅವಳು ತಂಗಿಯೊಡನೆ ತನ್ನ ವಿಚಾರವನ್ನೆಲ್ಲಾ ತಿಳಿಸಿ “ನನಗೆ ಇದು ದೊಡ್ಡ ಚಿಂತೆಯಾಗಿದೆ. ಈ ದುಃಖದಿಂದ ನಾನು ದುರ್ಬಲಳಾಗಿದ್ದೇನೆ ಏನು ಮಾಡಲಿ?” ಎಂದು ಹೇಳಿದಳು. ಅದಕ್ಕೆ ಅವಳು “ನಾನು ಗರ್ಭಿಣಿಯಾಗಿದ್ದೇನೆ. ನಾನು ಹೆತ್ತಕೂಡಲೇ ನನಗೆ ಹುಟ್ಟಿದ ಮಗುವನ್ನು ನಿನಗೆ ಕೊಡುತ್ತೇನೆ. ಅಲ್ಲಿಯವರೆಗೂ ನೀನು ನಿನ್ನ ಮನೆಯಲ್ಲಿ ಗರ್ಭಿಣಿಯಂತೆ ರಹಸ್ಯವಾಗಿ ನಟಿಸುತ್ತ ಸುಖದಿಂದಿರು. ನೀನು ನನ್ನ ಗಂಡನಿಗೆ ದುಡ್ಡುಕೊಟ್ಟರೆ ಆತ ನಿನಗೆ ಮಗುವನ್ನು ಕೊಡುತ್ತಾನೆ. ಇನ್ನು ಆರು ತಿಂಗಳಿಗೆ ಮಗು ಸತ್ತು ಹೋಯಿತೆಂದು ಲೋಕ ಹೇಳಿಕೊಳ್ಳುತ್ತೆ. ನಾನು ಪ್ರತಿದಿನ ನಿನ್ನ ಮನೆಗೆ ಬಂದು ನಿನಗೆ ಕೊಟ್ಟ ಬಾಲಕನನ್ನು ಪೋಷಿಸುತ್ತೇನೆ. ನಿನಗೆ ನಿನ್ನ ಗಂಡ ಕೊಟ್ಟಿರುವ ಹಣ್ಣನ್ನು ಈಗ ಗೋವಿಗೆ ಕೊಟ್ಟು ಪರೀಕ್ಷೆ ಮಾಡು ಎಂದು ಹೇಳಿದಳು. ಧುಂಧುಲಿಯು ಸ್ತ್ರೀ ಸ್ವಭಾವದಿಂದ ತಂಗಿ ಹೇಳಿದಂತೆಯೇ ಮಾಡಿದಳು. ಕಾಲವಾದ ಕೂಡಲೇ ಅವಳ ತಂಗಿ ಒಬ್ಬ ಗಂಡು ಮಗುವನ್ನು ಹೆತ್ತಳು. ಅವಳ ಗಂಡ ಆ ಮಗುವನ್ನು ತಂದು ರಹಸ್ಯವಾಗಿ ಧುಂಧುಬಿಗೆ ಕೊಟ್ಟನು. ಧುಂಧುಲಿಯು ತನ್ನ ಪತಿಗೆ ಸುಖವಾಗಿ ನಾನು ಪುತ್ರನನ್ನು ಹೆತ್ತಿದ್ದೇನೆಂದು ಹೇಳಿದಳು. ಆತ್ಮ ದೇವನಿಗಾದ ಈ ರೀತಿಯ ಪುತ್ರ ಜನನದಿಂದ ಲೋಕಕ್ಕೆ ಸುಖವುಂಟಾಯಿತು. ಆತ ಬ್ರಾಹ್ಮಣನಿಗೆ ದಾನ ಮಾಡಿ ಜಾತಕರ್ಮ ಮಾಡಿದನು. ಅವನ ಮನೆಯಲ್ಲಿ ಗೀತ ವಾದ್ಯಗಳ ಮಂಗಳಶಬ್ದ ಹೆಚ್ಚಾಗಿ ಉಂಟಾಯಿತು. ಧುಂಧುಬಿಯು ಪತಿಯೊಡನೆ “ನನಗೆ ಮಗುವನ್ನು ಸಾಕಲು ಹಾಲಿಲ್ಲ, ಬೇರೆಯವರ ಹಾಲು ಕೊಡಿಸಿ ನಾನು ಈ ಮಗುವನ್ನು ಹೇಗೆ ಸಲಹಲಿ. ನನ್ನ ತಂಗಿ ಹೆತ್ತು ಮಗು ಸತ್ತು ಹೋಗಿದೆ. ಆದ್ದರಿಂದ ಆಕೆಯನ್ನು ಕರೆದುಕೊಂಡು ನಮ್ಮ ಮನೆಯಲ್ಲಿಟ್ಟುಕೊಳ್ಳೋಣ. ಆಕೆ ಮಗುವಿಗೆ ಹಾಲು ಕೊಟ್ಟು ಸಲಹುತ್ತಾಳೆ”, ಎಂದು ಹೇಳಿದಳು. ಆ ವಿಪ್ರನೂ ಪುತ್ರ ರಕ್ಷಣೆಗಾಗಿ ಹಗೆಯೇ ಮಾಡಿದನು. ಆ ಪುತ್ರನಿಗೆ ತಾಯಿ ‘ಧುಂಧುಕಾರಿ’ ಯೆಂಬ ಹೆಸರನ್ನಿಟ್ಟಳು. ಅಲ್ಲಿಂದ ಮೂರು ತಿಂಗಳಿಗೆ ಅವರ ಮನೆಯ ಹಸು ಒಬ್ಬ ಗಂಡುಮಗುವನ್ನು ಹೆತ್ತಿತು. ಆ ಮಗು ಸರ್ವಾಂಗ ಸುಂದರನೂ, ದಿವ್ಯನೂ, ನಿರ್ಮಲನೂ, ಚಿನ್ನದಂತೆ ಕಾಂತಿಯುಳ್ಳವನೂ ಆಗಿದ್ದನು. ಇದನ್ನು ನೋಡಿ ಬಹಳ ಸಂತುಷ್ಟವಾಗಿ ಬ್ರಾಹ್ಮಣನು ತಾನೇ ಆ ಮಗುವಿಗೆ ಜಾತಕರ್ಮ ಮುಂತಾದ ಸಂಸ್ಕಾರಗಳನ್ನು ಮಾಡಿದನು. ಇದು ಬಹಳ ಆಶ್ಚರ್ಯವೆಂದು ಜನರೆಲ್ಲರೂ ಆ ಮಗುವನ್ನು ನೋಡುವ ಕುತೂಹಲದಿಂದ ಆ ಬ್ರಾಹ್ಮಣನ ಮನೆಗೆ ಬಂದರು. ಅವರೆಲ್ಲರೂ “ಆತ್ಮ ದೇವನಿಗೆ ಈಗ ಅದೃಷ್ಟ ಬಂದಿದೆ ನೋಡಿ. ಹಸುವಿನಲ್ಲಿ ದೇವರೂಪಿಯಾದ ಬಾಲಕನು ಹುಟ್ಟಿದ್ದಾನೆ. ಆಶ್ಚರ್ಯ” ಎಂದು ಹೇಳಿಕೊಂಡರು. ವಿಧಿನಿಯೋಗದಿಂದ ಯಾರಿಗೂ ಅದರ ರಹಸ್ಯ ತಿಳಿಯಲಿಲ್ಲ. ಆತ್ಮದೇವನು ಹಸುವಿನ ಕಿವಿಗಳಂತೆ ಕಿವಿಗಳುಳ್ಳ ಆ ಬಾಲಕನಿಗೆ ಗೋಕರ್ಣನೆಂದು ಹೆಸರಿಟ್ಟನು. ಆ ಯಿಬ್ಬರು ಮಕ್ಕಳೂ ಸ್ವಲ್ಪ ಕಾಲಕ್ಕೆ ಯುವಕರಾದರು. ಗೋಕರ್ಣನು ಪಂಡಿತನೂ, ಜ್ಞಾನಿಯೂ, ಆದನು. ಆ ಧುಂಧುಕಾರಿ ಬಹಳ ಕೆಟ್ಟವನಾದನು. ಅವನು ಸ್ನಾನ ಮುಂತಾದ ಶೌಚಕ್ರಿಯೆಗಳನ್ನೇ ಬಿಟ್ಟು ತಿನ್ನಬಾರದನ್ನು ತಿನ್ನುತ್ತ ಕ್ರೋಧವನ್ನು ಬೆಳೆಸಿ ದುಷ್ಟರಿಂದ ಧನವನ್ನು ತೆಗೆದುಕೊಳ್ಳುತ್ತಿದ್ದನು. ಶವಗಳಿಗಿಟ್ಟ ಆಹಾರವನ್ನು ತಿನ್ನುತ್ತಿದ್ದನು. ಕಳ್ಳತನ ಮಾಡುತ್ತಿದ್ದನು. ಎಲ್ಲರೊಂದಿಗೆ ದ್ವೇಷಕಟ್ಟಿಕೊಂಡನು. ಇತರರ ಮನೆಗಳನ್ನು ಸುಡುತ್ತಿದ್ದನು. ಬಾಲಕರನ್ನು ಆಡಿಸುವುದಕ್ಕೆಂದು ತೆಗೆದುಕೊಂಡು ಹೋಗಿ ಕೂಡಲೇ ಬಾವಿಯೊಳಕ್ಕೆ ಹಾಕುತ್ತಿದ್ದನು. ಹಿಂಸೆ ಮಾಡುತ್ತಿದ್ದನು. ಶಸ್ತ್ರಗಳನ್ನು ಧರಿಸಿದ್ದನು. ದೀನರನ್ನೂ ಕುರುಡರನ್ನೂ ಹಿಂಸಿಸುತ್ತಿದ್ದನು. ಚಂಡಾಲರ ಜೊತೆಯಲ್ಲಿ ಹಗ್ಗಗಳನ್ನು ಹಿಡಿದುಕೊಂಡು ನಾಯಿಗಳನ್ನು ಜೊತೆಯಲ್ಲಿಟ್ಟುಕೊಂಡು ತಿರುಗುತ್ತಿದ್ದನು. ಅವನು ಸೂಳೆಯರ ಜೊತೆ ಸೇರಿ ತಂದೆ ಸಂಪಾದಿಸಿಟ್ಟ ಧನವನ್ನೆಲ್ಲಾ ಪೋಲು ಮಾಡಿದನು. ಒಂದು ಸಲ ತಂದೆ ತಾಯಿಗಳನ್ನು ಹೊಡೆದು ಮನೆಯಲ್ಲಿದ್ದ ಪಾತ್ರೆಗಳನ್ನು ತೆಗೆದುಕೊಂಡು ಹೋದನು. ಲೋಭಿಯಾದ ಅವನ ತಂದೆ ಧನವನ್ನು ಕಳೇದುಕೊಂಡು “ಪುತ್ರಹೀನನಾಗಿದ್ದರೂ ಒಳ್ಳೆಯದು ಕುಲಪುತ್ರನು ದುಃಖ ಕೊಡುತ್ತಾನೆ. ನಾನೆಲ್ಲಿರಲಿ? ಎಲ್ಲಿಗೆ ಹೋಗಲಿ? ನನ್ನ ದುಃಖವನ್ನು ಹೋಗಲಾಡಿಸುವವರಾರು? ದುಃಖದಿಂದ ಪ್ರಾಣ ಬಿಡುತ್ತೇನೆ. ಅಯ್ಯೋ, ನನಗೆ ಕಷ್ಟಬಂತು” ಎಂದು ಗಟ್ಟಿಯಾಗಿ ಅತ್ತನು. ಆಗ ಜ್ಞಾನವಂತನಾದ ಗೋಕರ್ಣನು ಬಂದು ತಂದೆಗೆ ವೈರಾಗ್ಯ ಹುಟ್ಟುವಂತೆ ಹೀಗೆಂದು ಬೋಧೆ ಮಾಡಿದನು.

        “ಈ ಸಂಸಾರವು ಸಾರರಹಿತವಾದದ್ದು, ದುಃಖವನ್ನು ಕೊಡುವುದು ಮತ್ತು ಮೋಹವುಂಟು ಮಾಡುವುದು. ಯಾರು ಯಾರ ಮಕ್ಕಳು? ಯಾವುದು ಯಾರ ಧನ? ಮಮಕಾರವಿಟ್ಟು ಹೊಂದಿರುವವನು ಸದಾ ಪರಿತಾಪಕ್ಕೊಳಗಾಗಿರುತ್ತಾನೆ. ಇಂದ್ರನಿಗೂ ಸುಖವಿಲ್ಲ. ಚಕ್ರವರ್ತಿಗೂ ಸುಖವಿಲ್ಲ ಮೌನದಿಂದ ಏಕಾಂತವಾಗಿ ವಾಸ ಮಾಡುವ ವಿರಕ್ತನಿಗೆ ಮಾತ್ರ ಸುಖವಿದೆ. ಪುತ್ರರೂಪವಾದ ಅಜ್ಞಾನವನ್ನೂ ಬಿಡು. ಮೋಹದಿಂದ ಸಿಗುವುದು ನರಕವೇ. ಈ ದೇಹ ನಾಶವಾಗತಕ್ಕದ್ದು. ಆದುದರಿಂದ ಎಲ್ಲವನ್ನು ಬಿಟ್ಟು ಅವನಿಗೆ ತೆರಳು.”

        ಹೀಗೆ ಗೋಕರ್ಣನು ಹೇಳಿದ್ದನ್ನು ಕೇಳಿ ಆತನ ತಂದೆ ಅವನಿಗೆ ಹೊರಡಬೇಕೆಂದು ನಿಶ್ಚಯಿಸಿ ಮಗನೇ, ಅಡವಿಯಲ್ಲಿ ನಾನೇನು ಮಾಡಬೇಕು ಎಂಬುದನ್ನು ವಿಸ್ತಾರವಾಗಿ ತಿಳಿಸು. ನಾನು ಬುದ್ಧಿಹೀನನಾಗಿ ಕತ್ತಲಾಗಿರುವ ಬಾವಿಯಲ್ಲಿ ಸ್ನೇಹಪಾಶಬದ್ಧನಾಗಿ ಹೆಳವನಂತೆ ಬಿಟ್ಟಿದ್ದೇನೆ. ನನ್ನ ಕರ್ಮದಿಂದ ಅದರಲ್ಲಿ ಬಿದ್ದಿದ್ದೇನೆ. ಕಡುಣಾಶಾಲಿಯೇ, ನನ್ನನ್ನು ಮೇಲಕ್ಕೆ ಎಬ್ಬಿಸು” ಎಂದು ಪ್ರಾರ್ಥಿಸಿದನು.

ಗೋಕರ್ಣನು ಹೇಳಿದನು

        ತಂದೆಯೇ, ನೀನು ಮೂಳೆ ಮಾಂಸ ಮತ್ತು ರಕ್ತದಿಂದ ಕೂಡಿದ ಈ ದೇಹದಲ್ಲಿ ಅಭಿಮಾನವನ್ನು ಬಿಡು. ಹೆಂಡತಿ ಮಕ್ಕಳಲ್ಲಿ ನಿರಂತರವಾಗಿ ಇಟ್ಟಿರುವ ಮಮಕಾರವನ್ನು ಬಿಡು. ಈ ಜಗತ್ತು ಕ್ಷಣಿಕವೆಂದು ಸದಾ ನೋಡು. ಭಕ್ತಿಯನ್ನು ನೆಲೆಗೊಳಿಸಿ ವೈರಾಗ್ಯವನ್ನು ಪ್ರೇಮಿಸುವ ರಸಿಕ ನಾನು.

        ಶಾಶ್ವತವಾದ ಧರ್ಮವನ್ನೇ ಅವಲಂಬಿಸು. ಲೋಕಧರ್ಮಗಳನ್ನು ಬಿಡು. ಸತ್ಪುರುಷರ ಸೇವೆ ಮಾಡು. ಕಾಮವನ್ನೂ, ಆಸೆಯನ್ನೂ ಬಿಡು. ಇತರರ ಗುಣ ದೋಷಗಳನ್ನು ಲೆಕ್ಕಿಸುವುದನ್ನು ಶ್ರೀಘ್ರವಾಗಿ ಬಿಟ್ಟು ಭಗವಂತನ ಸೇವೆಯಲ್ಲಿಯೂ, ಕಥಾಶ್ರವಣದಲ್ಲಿಯು, ಇರುವ ಆನಂದರಸವನ್ನು ಪೂರ್ತಿಯಾಗಿ ಕುಡಿ.

        ಹೀಗೆ ಮಗನ ಮಾತುಗಳಿಂದ ಮನೆ ಬಿಟ್ಟು ಅರವತ್ತು ವರ್ಷ ವಯಸ್ಸಾಗಿದ್ದ ಆ ಬ್ರಾಹ್ಮಣನು ಸ್ಥಿರಜಿತ್ತನಾಗಿ ಅಡವಿಗೆ ಹೋದನು. ಅಲ್ಲಿ ಸದಾ ವಿಷ್ಣುವಿನ ಸೇವೆ ಮಾಡುತ್ತ ಭಾಗವತದ ದಶಮಸ್ಕಂಧವನ್ನು ಪಠಿಸುತ್ತಾ ಇದ್ದು ಕೊನೆಗೆ ಶ್ರೀಕೃಷ್ಣನನ್ನು ಸೇರಿದನು.

        ಎಂಬಲ್ಲಿಗೆ ಶ್ರೀಪದ್ಮಪುರಾಣದ ಉತ್ತರ ಖಂಡದಲ್ಲಿನ ಶ್ರೀಮದ್ಭಾಗವತ ಮಹಾತ್ಮ್ಯದಲ್ಲಿ ವಿಪ್ರ ಮೋಕ್ಷವೆಂಬ ನಾಲ್ಕನೇ ಅಧ್ಯಾಯ ಮುಗಿದುದು.

                          ಐದನೇ ಅಧ್ಯಾಯ

        ತಂದೆ ಸಂಸಾರ ಬಿಟ್ಟ ಮೇಲೆ ಧುಂಧುಕಾರಿ ತಾಯಿಯನ್ನು ಚೆನ್ನಾಗಿ ಹೊಡೆದು “ದುಡ್ಡೆಲ್ಲಿದೆ ಹೇಳು. ಇಲ್ಲದಿದ್ದರೆ ದೊಣ್ಣೆಯಿಂದ ಸಾಯಿಸುತ್ತೇನೆ” ಎಂದು ಹೆದರಿಸಿದನು. ಆಕೆಯು ಅವನ ಮಾತಿಗೆ ಹೆದರಿ ಇಂತಹ ಪುತ್ರನಾದನಲ್ಲಾ ಎಂದು ದುಃಖಿಸುತ್ತ ರಾತ್ರಿ ಭಾವಿಯಲ್ಲಿ ಬಿದ್ದು ಪ್ರಾಣಬಿಟ್ಟಳು. ಗೋಕರ್ಣನು ಯೋಗದಲ್ಲಿದ್ದು ತೀರ್ಥಯಾತ್ರೆಗೆ ಹೊರಟನು. ಆತನಿಗೆ ಸುಖವೂ ಇಲ್ಲ, ದುಃಖವೂ ಇಲ್ಲ. ವೈರಿಯೂ ಇಲ್ಲ. ಬಂಧುವೂ ಇಲ್ಲ. ಧುಂಧುಕಾರಿ ಮನೆಯಲ್ಲಿ ಐದು ಜನ ಸೂಳೆಯರನ್ನಿಟ್ಟುಕೊಂಡು ವಾಸ ಮಾಡುತ್ತಿದ್ದನು. ಅವನು ಬಹಳ ಕ್ರೂರಕಾರ್ಯಗಳನ್ನು ಮಾಡುತ್ತ ಸೂಳೆಯರ ಪೋಷಣೆಯಲ್ಲಿ ಇರತನಾಗಿ ಬುದ್ಧಿಯಿಲ್ಲದವನಾಗಿದ್ದನು. ಒಂದು ಸಲ ಸೂಳೆಯರು ಒಡವೆಗಳು ಬೇಕೆಂದು ಆಸೆಪಟ್ಟರು. ಅದಕ್ಕಾಗಿ ಕಾಮಾಂಧನಾದ ಧುಂಧುಕಾರಿ ಮರಣವನ್ನು ನೆನೆಯದೆ ಮನೆಯಿಂದ ಹೊರಟು ಎಲ್ಲೆಲ್ಲಿಯೋ ಧನವನ್ನು ಅಪಹರಿಸಿಕೊಂಡು ಮನೆಗೆ ಬಂದು ಸೂಳೆಯರಿಗೆ ಒಳ್ಳೆಯ ಬಟ್ಟೆಗಳನ್ನೂ ಕೆಲವು ಒಡವೆಗಳನ್ನೂ ಕೊಟ್ಟನು. ಅಧಿಕವಾದ ಆ ಧನವನ್ನು ನೋಡಿ ರಾತ್ರಿ ಆ ಹೆಂಗಸರೆಲ್ಲರೂ ‘ಇವನು ಪ್ರತಿದಿನ ಕಳ್ಳತನ ಮಾಡುತ್ತಾನೆ. ಆದುದರಿಂದ ಇವನು ರಾಜನ ಕೈಗೆ ಸಿಗುತ್ತಾನೆ. ರಾಜನು ಇವನ ಧನವನುನ ತೆಗೆದುಕೊಂಡು ಇವನಿಗೆ ಮರಣದಂಡನೆ ವಿಧಿಸುತ್ತಾನೆ. ಇದು ಖಂಡಿತ. ಆದುದರಿಂದ ಧನವನ್ನು ಉಳಿಸಿಕೊಳ್ಳಲು ನಾನೇ ರಹಸ್ಯವಾಗಿ ಇವನನ್ನು ಏಕೆ ಕೊಲ್ಲಬಾರದು? ಇವನನ್ನು ಕೊಂದು ಧನವನ್ನು ತೆಗೆದುಕೊಂಡು ಎಲ್ಲಿಗಾದರೂ ಹೋಗಿ ಬಿಡೋಣ” ಎಂದು ನಿಶ್ಚಯಿಸಿ ನಿದ್ರೆಯಲ್ಲಿದ್ದ ಅವನನ್ನು ಹಗ್ಗಗಳಿಂದ ಕಟ್ಟಿ ಅವನ ಕತ್ತಿಗೆ ಪಾಶ ಹಾಕಿ ಅವನನ್ನು ಕೊಲ್ಲಲು ಪ್ರಯತ್ನ ಮಾಡಿದರು. ಆದರೆ ಅವನು ಶೀಘ್ರವಾಗಿ ಸಾಯಲಿಲ್ಲವಾದುದರಿಂದ ಅವರು ಯೋಚನೆ ಮಾಡಿ ಅವನ ಬಾಯಿಯಲ್ಲಿ ಕೆಂಡಗಳನ್ನು ಹಾಕಿದರು. ಬೆಂಕಿಯ ಉರಿಗೆ ಬಹಳ ನೊಂದು ಅದನ್ನು ತಡೆಯಲಾರದೆ ಅವನು ಸತ್ತು ಹೋದನು. ಆ ಸೂಳೆಯರು ಅವನ ಶರೀರವನ್ನು ಒಂದು ಗುಣಿಯಲ್ಲಿ ಹೂತಿ ಬಿಟ್ಟರು. ಹೆಂಗಸರು ಸಾಧಾರಣವಾಗಿ ಸಾಹಸಿಕರು. ಈ ಕೊಲೆಯ ರಹಸ್ಯ ಯಾರಿಗೂ ಗೊತ್ತಾಗಲಿಲ್ಲ. ಆ ಸೂಳೆಯರು ಕೇಳಿದವರಿಗೆ ನಮ್ಮ ಪ್ರಿಯನು ಧನದ ಆಸೆಯಿಂದ ದೂರ ದೇಶಕ್ಕೆ ಹೋಗಿದ್ದಾನೆಂದೂ ಈ ವರ್ಷದೊಳಗೆ ಹಿಂತಿರುಗಿ ಬರುತ್ತಾನೆಂದೂ ಉತ್ತರ ಕೊಟ್ಟರು. ಕೆಟ್ಟ ಸ್ತ್ರೀಯರನ್ನು ಬುದ್ಧಿವಂತನು ಎಂದಿಗೂ ನಂಬಬಾರದು. ಬುದ್ಧಿಯಿಲ್ಲದೆ ಯಾವನಾದರೂ ನಂಬಿದರೆ ಅವನಿಗೆ ತಪ್ಪದೆ ದುಃಖಬರುವುದು. ಕಾಮಿಗಳ ಹೃದಯವನ್ನು ಆಕರ್ಷಿಸುವಂತಹ ಅಮೃತಮಯವಾದ ವಾಕ್ಕುಳ್ಳ ಮತ್ತು ಕತ್ತಿಯ ಅಂಚಿನಂತಹ ಹೃಚಯವುಳ್ಳ ಹೆಂಗಸರಿಗೆ ಪ್ರಿಯನಾದನು? ಬಹು ಪತಿಗಳಾದ ಸೂಳೆಯರು ಧನವನ್ನೆಲ್ಲಾ ಸಂಗ್ರಹಿಸಿಕೊಂಡು ಅಲ್ಲಿಂದ ಹೊರಟುಹೋದಳು. ಕೆಟ್ಟ ಕೆಲಸದಿಂದ ಧುಂಧುಕಾರಿಯು ದೊಡ್ಡ ಪ್ರೇತವಾಗಿಬಿಟ್ಟನು. ಅವನು ಗಾಳಿಯ ರೂಪದಲ್ಲಿ ಹತ್ತು ದಿಕ್ಕುಗಳಲ್ಲೂ, ಮಧ್ಯಪ್ರದೇಶದಲ್ಲೂ, ಸದಾ ಓಡುತ್ತಾ ಚಳಿ, ಬಿಸಿಲುಗಳಿಗೆ ಸಿಕ್ಕಿ ಬಾಧೆಪಡುತ್ತ ಆಹಾರವಿಲ್ಲದೆ ಬಾಯಾರಿಕೆ ಉಳ್ಳವನಾಗಿ ಎಲ್ಲಿಯು ದಿಕ್ಕಿಲ್ಲದವನಾಗಿ “ಅಯ್ಯೋ ವಿಧಿಯೇ” ಎಂದು ಪರಿತಪಿಸುತಿದ್ದನು. ಸ್ವಲ್ಪ ಕಾಲಕ್ಕೆ ಗೋಕರ್ಣನಿಗೆ ಧುಂಧುಕಾರಿ ಸತ್ತುಹೋಗಿದ್ದಾನೆಂದು ತಿಳಿಯಿತು. ಅವನು ಅನಾಥನೆಂದು ತಿಳಿದು ಗೋಕರ್ಣನು ಅವನಿಗೆ ಗಯಾಶ್ರಾದ್ಧವನ್ನು ಮಾಡಿದನು. ಅಲ್ಲದೆ ಆತನು ಯಾವ ಯಾವ ತೀರ್ಥಕ್ಕೆ ಹೋದನೋ ಅಲ್ಲೆಲ್ಲಾ ಅವನಿಗೆ ಶ್ರಾದ್ಧವನ್ನು ಮಾಡಿದನು. ಹೀಗೆ ತಿರ್ಥಯಾತ್ರೆ ಮುಗಿಸಿಕೊಂಡು ಆತನು ತನ್ನ ಊರಿಗೆ ಬಂದು ರಾತ್ರಿ ಯಾರಿಗೂ ಕಾಣಿಸದೆ, ಮನೆಯ ಅಂಗಳದಲ್ಲಿ ಮಲಗಿದ್ದನು. ಆಗ ಧುಂಧುಕಾರಿ ತನ್ನ ಬಂಧುವಾದ ಗೋಕರ್ಣನು ಅಲ್ಲಿ ಮಲಗಿರುವುದನ್ನು ಕಂಡು ರಾತ್ರಿ ಆತನಿಗೆ ತನ್ನ ಭಯಂಕರವಾದ ರೂಪವನ್ನು ತೋರಿಸಿದನು. ಒಂದು ಸಲ ಕುರಿಯ ರೂಪದಲ್ಲೂ ಒಂದು ಸಲ ಆನೆಯ ರೂಪದಲ್ಲೂ ಒಂದು ಸಲ ಕೋಣದ ರೂಪದಲ್ಲೂ ಒಂದು ಸಲ ಇಂದ್ರನ ರೂಪದಲ್ಲೂ ಒಂದು ಸಲ ಅಗ್ನಿಯ ರೂಪದಲ್ಲೂ ಪುನಃ ಮನುಷ್ಯನ ರೂಪದಲ್ಲೂ ಆತ ಕಾಣಿಸಿಕೊಂಡನು. ಈ ವೈಪರೀತ್ಯವನ್ನೂ ನೋಡಿ ಧೈರ್ಯಶಾಲಿಯಾದ ಗೋಕರ್ಣನು ಇವನಾವನೋ ದುರ್ಗತಿಕನಾಗಿರಬೇಕೆಂದುಕೊಂಡು ಅವನನ್ನು ಕುರಿತು ಹೇಳಿದನು.

ಗೋಕರ್ಣನು ಹೇಳಿದನು

        ಈ ರಾತ್ರಿ ಸಮಯದಲ್ಲಿ ಭಯಂಕರವಾದ ರೂಪ ತೋರಿಸುತ್ತಿರುವ ನೀನಾರು? ಈ ಸ್ಥಿತಿಯನ್ನು ಏಕೆ ಹೊಂದಿದೆ? ನೀನು ಪ್ರೇತವೇ, ಪಿಶಾಚವೇ ಅಥವಾ ರಾಕ್ಷಸನೇ ಎಂಬುದನ್ನು ತಿಳಿಸು.

ಸೂತನು ಹೇಳಿದನು

        ಹೀಗೆ ಆತನು ಕೇಳಲು ಧುಂಧುಕಾರಿಯು ಮೇಲಿಂದ ಮೇಲೆ ಗಟ್ಟಿಯಾಗಿ ಅತ್ತನು. ಅವನು ಮಾತಾಡುವುದಕ್ಕೂ ಶಕ್ತಿಯಿಲ್ಲದೆ ಸನ್ನೆಗಳನ್ನು ಮಾಡಿದನು. ಆಗ ಗೋಕರ್ಣನು ಬೊಗಸೆಯಲ್ಲಿ ನೀರು ತೆಗೆದುಕೊಂಡು ಅವನ ಮೇಲೆ ಎರಚಿದನು. ಅದರಿಂದ ಪಾಪ ಕಳೆದು ಅವನು ಮಾತಾಡತೊಡಗಿದನು.

ಪ್ರೇತವು ಹೇಳಿತು

        ನಾನು ‘ಧುಂಧುಕಾರಿ’ ಯೆಂಬ ಹೆಸರಿನ ನಿನ್ನ ಸಹೋದರನು. ನನ್ನ ತಪ್ಪಿನಿಂದ ನಾನು ಬ್ರಾಹ್ಮಣತ್ವವನ್ನೂ ಕಳೆದುಕೊಂಡೆನು. ಬಹಳ ಅಜ್ಞಾನದಲ್ಲಿದ್ದ ನನಗೆ ಕಾರ್ಯಕಾರ್ಯಗಳ ವಿವೇಚನೆಯೇ ಇರಲಿಲ್ಲ. ನಾನು ಜನರನ್ನು ಹಿಂಸಿಸಿದೆ. ಕೊನೆಗೆ ಹೆಂಗಸರಿಂದ ದುಃಖಕರವಾದ ರೀತಿಯಲ್ಲಿ ಕೊಲ್ಲಲ್ಲಪಟ್ಟೆನು. ಆದುದರಿಂದ ನಾನು ಪ್ರೇತತ್ವವನ್ನು ಹೊಂದಿ ಬಹಳ ಹೀನಸ್ಥಿತಿಯಲ್ಲಿದ್ದೇನೆ. ವಿಧಿಯ ಕೈಗೆ ಸಿಕ್ಕ ಗಾಳಿಯ ಆಹಾರದಿಂದ ಜೀವಿಸುತ್ತಿದ್ದೇನೆ. ಎಲೈ ಬಂಧುವೇ, ತಮ್ಮನೇ, ದಯಾಳುವೇ, ನನ್ನನ್ನು ಬಿಡಿಸು. ಎಂದು ಹೇಳಿದ ಅವನ ಮಾತನ್ನು ಕೇಳಿ ಗೋಕರ್ಣನು ಅವನಿಗೆ ಹೇಳಿದನು.

ಗೋಕರ್ಣನು ಹೇಳಿದನು

        ನಿನಗಾಗಿ ನಾನು ವಿಧಿಪೂರ್ವಕವಾಗಿ ಗಂಗೆಯಲ್ಲಿ ಪಿಂಡವನುನ ಕೊಟ್ಟೆನು. ಆದರೂ ನಿನೇಕೆ ಪ್ರೇತತ್ವದಿಂದ ಮುಕ್ತನಾಗಲಿಲ್ಲ ಎಂಬುದು ನನಗೆ ಬಹಳ ಆಶ್ಚರ್ಯಕರವಾಗಿದೆ. ಗಯಾ ಶ್ರಾದ್ಧದಿಂದಲೇ ನಿನಗೆ ಮುಕ್ತಿ ಲಭಿಸದಿರುವಾಗ ಇದಕ್ಕೆ ಇನ್ನಾವ ಉಪಾಯವೂ ಇಲ್ಲ. ಪ್ರೇತನೇ, ನಾನೀಗ ಏನು ಮಾಡಬೇಕೆಂಬುದನ್ನು ನೀನು ವಿಸ್ತಾರವಾಗಿ ಹೇಳು.

ಪ್ರೇತವು ಹೇಳಿತು

        ನೂರು ಗಯಾಶ್ರಾದ್ಧಗಳನ್ನು ಮಾಡಿದರೂ ನನಗೆ ಪ್ರೇತತ್ವದಿಂದ ಬಿಡುಗಡೆ ಯಾವುದಿಲ್ಲ. ಬೇರೆ ಯಾವುದಾದರೊಂದು ಉಪಾಯವನ್ನು ಈಗ ನೀನು ಯೋಚಿಸು.

        ಹೀಗೆ ಪ್ರೇತವು ಹೇಳಿದ ವಾಕ್ಯವನ್ನು ಕೇಳಿ ಗೋಕರ್ಣನಿಗೆ ಆಶ್ಚರ್ಯವುಂಟಾಯಿತು. ನೂರು ಶ್ರಾದ್ಧಗಳಿಂದಲೂ ಮುಕ್ತಿಯಾಗದಿದ್ದರೆ ನಿನ್ನ ಬಿಡುಗಡೆ ಅಸಾಧ್ಯ. ಈಗ ನೀನು ನಿನ್ನ ಸ್ಥಲಕ್ಕೆ ಹೋಗಿ ಅಲ್ಲಿಯೇ ನಿರ್ಭಯವಾಗಿಯಿರು. ನಾನು ವಿಚಾರಮಾಡಿ ನಿನ್ನ ಬಿಡುಗಡೆಗಾಗಿ ಏನಾದರೂ ಮಾಡುತ್ತೇನೆ”. ಎಂದು ಗೋಕರ್ಣನು ಹೇಳಲು ಆ ಮಾತನ್ನು ಕೇಳಿ ಧುಂಧುಕಾರಿ ತನ್ನ ಸ್ಥಾನಕ್ಕೆ ಹೊರಟನು. ಆ ರಾತ್ರಿಯೆಲ್ಲಾ ಗೋಕರ್ಣನು ಏನು ಮಾಡಬೇಕೆಂಬುದನ್ನು ಯೋಚಿಸುತ್ತಿದ್ದನು. ಆದರೂ ಆತನಿಗೆ ಉಪಾಯ ಹೊಳೆಯಲಿಲ್ಲ. ಬೆಳಗ್ಗೆ ಗೋಕರ್ಣನು ಬಂದಿರುವುದನ್ನು ನೋಡಿ ಜನರು ಪ್ರೀತಿಯಿಂದ ಬಂದರು. ರಾತ್ರಿ ನಡೆದ ಸಂಗತಿಯನ್ನು ಗೋಕರ್ಣನವರಿಗೆ ತಿಳಿಸಿದನು. ವಿದ್ವಾಂಸರೂ, ಯೋಗಾಭ್ಯಾಸ ಮಾಡುವವರೂ, ಜ್ಞಾನಿಗಳೂ, ಬ್ರಹ್ಮವಾದಿಗಳೂ, ಶಾಸ್ತ್ರಗಳನ್ನು ನೋಡಿದರು. ಆದರೂ, ಅವರಿಗೆ ಧುಂಧುಕಾರಿಯ ಬಿಡುಗಡೆಗೆ ಮಾರ್ಗ ಕಂಡುಬರಲಿಲ್ಲ. ಕೊನೆಗೆ ವಿದ್ವಾಂಸರು ಅವನ ಮುಕ್ತಿಗಾಗಿ ಸೂರ್ಯ ವಾಕ್ಯವನ್ನು ಕೇಳಬೇಕೆಂದು ಗೋಕರ್ಣನಿಗೆ ಹೇಳಿದರು. ಆಗ ಆತನು ಸೂರ್ಯನ ವೇಗಕ್ಕೆ ಸ್ತಂಭನವನ್ನು ಮಾಡಿ ಸೂರ್ಯನನ್ನು ಕುರಿತು “ಲೋಕಸಾಕ್ಷಿಯಾದ ಸೂರ್ಯದೇವನೇ, ಮುಕ್ತಿಯ ಉಪಾಯವನ್ನು ನನಗೆ ತಿಳಿಸು” ಎಂದು ಪ್ರಾರ್ಥಿಸಿದನು. ಅದನ್ನು ಕೇಳಿ ಸೂರ್ಯನು ದೂರದಿಂದಲೇ ಸ್ಪಷ್ಟವಾಗಿ ಹೀಗೆ ಹೇಳಿದನು “ಶ್ರೀಮದ್ಭಾಗವತದಿಂದ ಮುಕ್ತಿ ಆಗುವುದು. ನೀನು ಅದನ್ನು ಏಳು ದಿನ ವಾಚನ ಮಾಡು”. ಎಂದು ಹೆಳಿದ ಸೂರ್ಯನ ಧರ್ಮ ರೂಪವಾದ ವಾಕ್ಕು ಎಲ್ಲಿರಘೂ ಕೇಳಿಸಿತು. ಆಗ ಎಲ್ಲರೂ “ಪ್ರಯತ್ನದಿಂದ ಇದನ್ನು ಮಾಡಬೇಕು. ಇದು ಮಾಡುವುದು ಸುಲಭ” ಎಂದು ಹೇಳಿದರು. ಗೋಕರ್ಣನು ಹಾಗೆ ಮಾಡಲು ಸಂಕಲ್ಪಿಸಿ ಭಾಗವತವಾಚನಕ್ಕೆ ಏರ್ಪಾಟು ಮಾಡಿದನು. ಅದನ್ನು ಕೇಳುವುದಕ್ಕೆ ದೇಶದಲ್ಲಿ ಇತರ ಗ್ರಾಮಗಳಿಂದಲೂ ಜನ ಬಂದರು. ತಮ್ಮ ಪಾಪಗಳನ್ನು ಕಳೆದುಕೊಳ್ಳುವುದಕ್ಕಾಗಿ ಕುಂಟರೂ, ಕುರುಡರೂ, ಮುದುಕರು, ಅಶಕ್ತರೂ ಬಂದರು. ಜನರ ಗುಂಪು ದೊಡ್ಡದಾಗಿ ಸೇರಿದ್ದನ್ನು ನೋಡಿ ದೇವತೆಗಳಿಗೆ ಆಶ್ಚರ್ಯವುಂಟಾಯಿತು. ಗೋಕರ್ಣನು ಆಸನದ ಮೇಲೆ ಕುಳಿತು ಕಥೆಯನ್ನು ಹೇಳಲು ಪ್ರಾರಂಭ ಮಾಡಿದ ಕೂಡಲೇ ಪ್ರೇತನಲ್ಲಿಗೆ ಬಂದು ತಾನು ಇರುವುದಕ್ಕೆ ಜಾಗವನ್ನು ಅಲ್ಲಿ ಇಲ್ಲಿ ಹುಡುಕಿ ಏಳು ಗ್ರಂಥಿಗಳುಳ್ಳ ಒಂದು ಎತ್ತರವಾದ ಬಿದಿರು ಬೊಂಬನ್ನು ಕಂಡು ಅದರ ಬುಡದಲ್ಲಿದ್ದ ತೂತನ್ನು ಆಶ್ರಯಿಸಿ ಭಾಗವತ ಕಥಾಶ್ರವಣಕ್ಕಾಗಿ ನಿಂತನು. ಅವನು ಗಾಳಿಯ ರೂಪದಲ್ಲಿದ್ದರೆ ಒಂದು ಕಡೆ ನಿಲ್ಲಲು ಸಾಧ್ಯವಿಲ್ಲವೆಂದು ಆ ಬೊಮಿನ್ನು ಪ್ರವೇಶಿಸಿದನು. ಗೋಕರ್ಣನು ವಿಷ್ಣುಭಕ್ತನಾದ ಒಬ್ಬ ಬ್ರಾಹ್ಮಣನನ್ನು ಮುಖ್ಯ ಶ್ರೋತಾರನನ್ನಾಗಿ ಮಾಡಿಕೊಂಡು ಮೊದಲನೆಯ ಸ್ಕಂಧದಿಂದ ಭಾಗವತವನ್ನು ಸ್ಪಷ್ಟವಾಗಿ ವಾಚನ ಮಾಡಿ ತೊಡಗಿದನು. ಮೊದಲನೆಯ ದಿನ ಸಾಯಂಕಾಲಕ್ಕೆ ವಾಚನವನ್ನು ನಿಲ್ಲಿಸಿದಾಗ ಒಂದು ಆಶ್ಚರ್ಯ ನಡೆಯಿತು. ಆ ಬಿದಿರು ಬೊಂಬೆಯ ಒಂದು ಗಂಟು ಒಡೆದು ಶಬ್ದ ಬಂದಿತು. ಅದನ್ನು ಎಲ್ಲರೂ ಕಂಡರು. ಹಾಗೆಯೇ ಮೂರನೇ ದಿನ ಸಾಯಂಕಾಲ ಮೂರನೇ ಗಂಟು ಒಡೆಯಿತು. ಹೀಗೆ ಏಳು ದಿನ ವಾಚನ ಮುಗಿಯುವ ವೇಳೆಗೆ ಏಳು ಗಂಟುಗಳೂ ಒಡೆದು ದ್ವಾದಶ ಸ್ಕಂಧ ಶ್ರವಣ ಮಾಡಿದ ಕೂಡಲೇ ಧುಂಧುಕಾರಿ ಪ್ರೇತತ್ವವನ್ನು ಬಿಟ್ಟನು. ಆತನು ಮೇಘದಂತೆ ಶ್ಯಾಮಲವರ್ಣವುಳ್ಳ ದಿವ್ಯರೂಪವನು ಧರಿಸಿ ತುಲಸೀ ಹಾರವನ್ನು ಹಾಕಿಕೊಂಡಿದ್ದನು. ಪೀತಾಂಬರನಪ್ಪಿದ್ದನು. ಕಿರೀಟ ಕುಂಡಲಗಳನ್ನು ಧರಿಸಿದ್ದನು. ಆತನು ಕೂಡಲೇ ತಮ್ಮನಾದ ಗೋಕರ್ಣನಿಗೆ ನಮಸ್ಕಾರ ಮಾಡಿ ಹೀಗೆಂದು ಹೇಳಿದನು.

        “ಎಲೈ ಬಂಧುವೇ, ಕರುಣೆಯಿಂದ ನೀನು ನನ್ನನ್ನು ಪ್ರೇತತ್ವದ ಕಶ್ಮಲದಿಂದ ಬಿಡಿಸಿದೆ. ಪ್ರೇತಪೀಡೆಯನ್ನು ನಾಶಮಾಡುವ ಭಗವಂತನ ಕಥೆ ಧನ್ಯವು. ವಿಷ್ಣು ಲೋಕವನ್ನು ಕೊಡತಕ್ಕ ಸಪ್ತಾಹವು ಸಹ ಧನ್ಯವು. ಸಪ್ತಾಹ ಶ್ರವಣದಲ್ಲಿ ತೊಡಗಿದ ಕೂಡಲೆಯೇ ಸಮಸ್ತ ಪಾಪಗಳೂ ಕಂಪಿಸುವುವು. ಈ ಕಥೆಯು ನಮಗೆ ಕೂಡಲೇ ಮುಕ್ತಿ ಕೊಡತಕ್ಕದ್ದು. ಮನೋವಾಕ್ಕರ್ಮಗಳಿಂದ ಈಗ ಓಣಗಿ ಹೋದದ್ದು ರಸವಂತವಾಗಿ ಮಾಡಲ್ಪಟ್ಟಿತು. ಸ್ಥೂಲವಾದದ್ದು ಲಘುವಾಗಿ ಮಾಡಲ್ಪಟ್ಟಿತು. ಅಗ್ನಿಯು ಸಮಿಧೆಗಳನ್ನು ಹೇಗೆ ಸುಡುತ್ತದೆಯೋ ಹಾಗೆ ಭಾಗವತ ಶ್ರವಣವು ಪಾಪಗಳನ್ನು ಸುಡುತ್ತದೆ. ದೇವಸಭೆಯಲ್ಲಿರುವ ವಿದ್ವಾಂಸರು ಈ ಭಾರತ ವರ್ಷದಲ್ಲಿ ಭಾಗವತ ಕಥೆಯನ್ನು ಕೇಳದಿರುವ ಮನುಷ್ಯರ ಜನ್ಮ ನಿಷ್ಪಲವೆಂದು ಹೇಳಿದ್ದಾರೆ. ಭಾಗವತ ಕಥೆಯಿಲ್ಲದೆ ಮೋಹದಿಂದ ಅಶಾಶ್ವತವಾದ ಶರೀರವನ್ನು ರಕ್ಷಿಸಿ, ಪೋಷಿಸಿ, ಬಲಿಷ್ಠವಾಗಿ ಮಾಡಿದ್ದರಿಂದ ಏನು ಪ್ರಯೋಜನ? ಎಲಬುಗಳು ಈ ಶರೀತಕ್ಕೆ ಸ್ತಂಭಗಳು. ಇವು ಸ್ನಾಯುಗಳಿಂದ ಕಟ್ಟಲ್ಪಟ್ಟಿವೆ. ಇವುಗಳ ಮೇಲೆ ಮಾಂಸ ಮತ್ತು ರಕ್ತ ಮೆತ್ತಲ್ಪಟ್ಟಿವೆ. ಇದರ ಮೇಲೆ ಚರ್ಮದ ಹೊಗಿಕೆ ಇದೆ. ಇದು ಕೆಟ್ಟವಾಸನೆಯುಳ್ಳದ್ದು. ಮಲಮೂತ್ರಗಳಿಗೆ ಪಾತ್ರವು. ಮುದಿತನ, ದುಃಖ, ಇವು ಇದನ್ನು ಬಳಲಿಸುತ್ತವೆ. ಇದು ರೋಗಗಳ ಮನೆ. ಬಹಳ ಆಸೆಯುಳ್ಳದ್ದು. ಇದನು ಎಷ್ಟು ತುಂಬಿದರೂ ತೃಪ್ತಿಯಿಲ್ಲ. ಇದನ್ನು ಧರಿಸಿಸುವುದಕ್ಕೆ ಬಹಳ ಪ್ರಯಾಸಪಡಬೇಕು. ಇದು ಕೆಟ್ಟದ್ದು. ದೋಷಗಳಿಂದ ಕೂಡಿದ್ದು. ಕ್ಷಣ ಭಂಗುರವಾದದ್ದು. ಈ ಶರೀರ ಕೊನೆಗೆ ಕೃಮಿಗಳು ಮತ್ತು ಹಕ್ಕಿಗಳ ಪಾಲಾಗುವುದು. ಅಥವಾ ಭಸ್ಮವಾಗುವುದು. ಇದು ಶರೀರದ ವರ್ಣನೆ. ಇಂತಹ ಅಸ್ಥಿರವಾದ ಶರೀರದಿಂದ ಸ್ಥಿರವಾದ ಕಾರ್ಯವನ್ನೇಕೆ ಸಾಧಿಸಬಾರದು? ಬೆಳಗ್ಗೆ ಮಾಡಿದ ಅನ್ನ ಸಾಯಂಕಾಲಕ್ಕೆ ತಂಗಳಾಗುತ್ತದೆ. ಅಂತಹ ಅನ್ನದಿಂದ ಬೆಳೆಸಲ್ಪಟ್ಟ ಶರೀರ ಹೇಗೆ ನಿತ್ಯವಾಗುತ್ತದೆ? ಸಪ್ತಾಹಶ್ರವಣಮಾಡಿದರೆ ಈ ಲೋಕದಲ್ಲಿ ಶ್ರೀಹರಿ ಹತ್ತಿರಕ್ಕೆ ಬರುತ್ತಾನೆ. ಆದುದರಿಂದ ದೋಷ ನಿವೃತ್ತಿಗಾಗಿ ಇದೇ ಸರಿಯಾದ ಸಾಧನ. ಕಥಾಶ್ರವಣವಿಲ್ಲದ ಜೀವಿಗಳು ನೀರಿನಲ್ಲಿ ಗುಳ್ಳೇಗಳಂತೆಯು, ಜಂತುಗಳಲ್ಲಿ ಕ್ರಿಮಿಗಳಂತೆಯು, ಮರಣಕ್ಕಾಗಿಯೇ ಹುಟ್ಟುತ್ತಾರೆ. ಕಥಾಶ್ರವಣದಿಂದ ಜಡವಸ್ತುವಾದ ಒಂದಗಿದ ಬಿದಿರು ಬೊಂಬೆಯ ಗಂಟುಗಳೇ ಒಡೆದು ಹೋಗಿರುವಾಗ ಮನಸ್ಸಿನ ಗ್ರಂಥಿಗಳು ಒಡೆದು ಹೋಗುವುದರಲ್ಲಿ ಆಶ್ಚರ್ಯವೇನಿದೆ? ಸಪ್ತಾಹ ಶ್ರವಣದಿಂದ ಹೃದಯಗ್ರಂಥಿ ಭೇದಿಸಲ್ಪಡುತ್ತಿದೆ. ಸರ್ವ ಸಂಶಯಗಳೂ ನಿವಾರಣವಾಗುತ್ತವೆ. ಮನುಷ್ಯನ ಕರ್ಮಗಳು ನಶಿಸುತ್ತವೆ. ಮನಸ್ಸು ಸಂಸಾರವೆಂಬ ಅಂಟಿಕೊಂಡಿರುವ ಕೆಸರನ್ನು ತೊಳೆಯುವುದರಲ್ಲಿ ಸಮರ್ಥವಾದ ಭಾಗವತ ಕಥೆಯೆಂಬ ತೀರ್ಥದಲ್ಲಿ ನಿಂತರೆ ಮೋಕ್ಷವೇ ಲಭಿಸುವುದೆಂದು ಪಂಡಿತರ ಅಭಿಪ್ರಾಯ.” ಹೀಗೆ ಧುಂಧುಕಾರಿ ಹೇಳುತ್ತಿರುವಾಗಲೇ ಕಾಂತಿಗಳಿಂದ ಪ್ರಕಾಶಮಾನವೂ ವೈಕುಂಠವಾಸಿಗಳುಳ್ಳದ್ದೂ ಆದ ವಿಮಾನವಲ್ಲಿಗೆ ಬಂತು. ಎಲ್ಲರೂ ಆಶ್ಚರ್ಯದಿಂದ ನೋಡುತ್ತಿರುವಾಗಲೇ ಧುಂಧುಬಿಯ ಮಗನು ಆವಿಮಾನವನ್ನೇರಿದನು. ಆವಿಮಾನದಲ್ಲಿ ವಿಷ್ಣುಭಕ್ತರನ್ನು ನೋಡಿ ಗೋಕರ್ಣನು ಹೀಗೆಂದನು.

ಗೋಕರ್ಣನು ಹೇಳಿದನು

        ಇಲ್ಲಿಯೇ ಎಷ್ಟೊಂದು ನಿರ್ಮಲಚಿತ್ತವುಳ್ಳ ಶ್ರೋತಾರರಿದ್ದಾರೆ. ಅವರಿಗೂ ನೀವು ವಿಮಾನಗಳನ್ನು ಏಕೆ ತರಲಿಲ್ಲ? ಎಲ್ಲರೂ ಒಂದೇ ಸಮವಾಗಿ ಶ್ರವಣ ಮಾಡಿದ್ದಾರೆಂದು ನನಗೆ ಕಾಣುತ್ತೆ. ಎಲೈ ಹರಿಪ್ರಿಯರೇ, ಧುಂಧುಕಾರಿಗೆ ಮಾತ್ರ ವಿಮಾನ ತಂದು ಬೇರೆಯವರಿಗೆ ವಿಮಾನ ತರಲಿಲ್ಲವೆಂಬ ಫಲಭೇದವೇಕೆ ಉಂಟಾಯಿತೆಂಬುದನ್ನು ತಿಳಿಸಿ.

ಹರಿದಾಸರು ಹೇಳಿದರು

        ಶ್ರವಣದಲ್ಲಿ ಭೇದ ವಿರುವುದರಿಂದ ಇಲ್ಲಿ ಫಲಭೇದವುಂಟಾಗಿದೆ. ಎಲ್ಲರೂ ಶ್ರವಣವನ್ನು ಮಾಡಿದ್ದಾರೆ. ಆದರೆ ಮನನ ಮಾಡುವುದರಲ್ಲಿ ಭೇದವಿದೆ. ಎಲ್ಲರಿಗೂ ಮರ್ಯಾದೆ ಕೊಡಬೇಕೆಂದಿರುವ ಗೋಕರ್ಣನೇ, ಎಲ್ಲರೂ ಭಜನೆ ಮಾಡಿದ್ದರೂ ಈ ಕಾರಣದಿಂದ ಫಲಭೇದವುಂಟಾಗಿದೆ.

        ಪ್ರೇತವು ಏಳು ದಿನಗಳು ಪೂರ್ತಿಯಾಗಿ ಉಪವಾಸವಿದ್ದು ಕಥೆಯನ್ನು ಕೇಳಿತು. ಆದುದರಿಂದ ಅದು ಸ್ಥಿರಚಿತ್ತದಿಂದ ಹೆಚ್ಚಾಗಿ ಮನನ ಮುಂತಾದವುಗಳನ್ನು ಮಾಡಿತು. ಜ್ಞಾನವು ದೃಢವಾಗಿಲ್ಲದಿದ್ದರೆ ನಾಶವಾಗುತ್ತೆ. ವಿದ್ಯೆ ಪ್ರಮಾದದಿಂದ ಬಾಧಿತವಾಗುತ್ತದೆ. ಮಂತ್ರವು ಸಂದೇಹವಿದ್ದಲ್ಲಿ ಫಲಿಸುವುದಿಲ್ಲ. ಚಂಚಲ ಮನಸ್ಸಿದ್ದರೆ ಜಪವ್ಯಕ್ಥವಾಗುತ್ತದೆ. ದೇಶದಲ್ಲಿ ವಿಷ್ಣು ಭಕ್ತರಿಲ್ಲದಿದ್ದರೆ ಅದಕ್ಕೆ ಹಾನಿಯುಂಟಾಗುತ್ತದೆ. ಅಪಾತ್ರರೊಂದಿಗೆ ಮಾಡಿದ ಶ್ರಾದ್ಧ ಹತವಾಗುತ್ತದೆ. ಶ್ರೋತ್ರಯನಲ್ಲದವನಿಗೆ ಮಾಡಿದ ದಾನ ಫಲಕಾರಿಯಾಗುವುದಿಲ್ಲ. ಆಚಾರವಿಲ್ಲದಿದ್ದರೆ ಕುಲ ಕೆಟ್ಟುಹೋಗುತ್ತದೆ. ಗುರುವಿನ ಉಪದೇಶದಲ್ಲಿ ನಂಬಿಕೆ, ತನ್ನನ್ನು ತಾನು ದೀನನೆಂದು ಭಾವಿಸಿಕೊಳ್ಳವುದು. ಮನಸ್ಸಿನಲ್ಲಿ ದೋಷಗಳಿಲ್ಲದಿರುವಿಕೆ. ಕಥೆಯಲ್ಲಿ ನಿಶ್ಚಲವಾದ ಆಸಕ್ತಿ ಮುಂತಾದವುಗಳಿದ್ದು ಶ್ರವಣ ಮಾಡಿದರೆ ಅದು ಫಲಕಾರಿಯಾಗುವುದು. ಹೀಗೆ ಶ್ರವಣ ಮಾಡಿದರೆ ಅವರಿಗೆ ಶ್ರವಣಾಂತದಲ್ಲಿ ವೈಕುಂಠವಾಸ ತಪ್ಪದೆ ಲಭಿಸುತ್ತದೆ. ಗೋಕರ್ಣನೇ, ಗೋವಿಂದನು ನಿನಗೆ ಗೋಲೋಕವನ್ನು ತಾನು ಕೊಡಲಿರುವನು. ಹೀಗೆ ಹೇಳಿ ಹರಿದಾಸರು ವಿಷ್ಣುಕೀರ್ತನೆಯನ್ನು ಮಾಡುತ್ತಾ ವೈಕುಂಠಕ್ಕೆ ಹೋದರು.

        ಪುನಃ ಗೋಕರ್ಣನು ಶ್ರಾವಣ ಮಾಸದಲ್ಲಿ ಭಗವತದ ಕಥೆಯನ್ನು ಏಳುದಿನಗಳ ಕಾಲ ಹೇಳಿದನು. ಪುನಃ ಅವರೆಲ್ಲರೂ ಕಥೆಯನ್ನು ಕೇಳಿದರು. ನಾರದನೇ, ಕಥೆ ಮುಗಿದಾಗ ಏನು ನಡೆಯಿತೆಂಬುದನ್ನು ಕೇಳು. ಶ್ರೀ ವಿಷ್ಣುದೇವನು ತನ್ನ ಭಕ್ತರೊಡನೆ ವಿಮಾನಗಳಲ್ಲಿ ಆಗಮಿಸಿದನು. ಆಗ ಜಯಶಬ್ದಗಳೂ ನಮಶ್ಯಬ್ದಗಳೂ ಅನೇಕವಾಗಿ ವಿಸ್ತರಿಸಿದವು. ಅಲ್ಲಿ ಶ್ರೀ ವಿಷ್ಣುವು ತಾನೇ ಸಂತೋಷದಿಂದ ಪಾಂಚಜನ್ಯ ಧ್ವನಿಯನ್ನು ಮಾಡಿದನು. ಶ್ರೀ ವಿಷ್ಣುದೇವನು ಗೋಕರ್ಣನನ್ನು ಆಲಿಂಗನ ಮಾಡಿ ತನ್ನಂತೆ ರೂಪವನ್ನಾತನಿಗೆ ಕೊಟ್ಟನು. ಮತ್ತೆ ಒಂದು ಕ್ಷಣದಲ್ಲಿ ಶ್ರೋತೃಗಳನ್ನೆಲ್ಲಾ ಮೇಘವರ್ಣರನ್ನಾಗಿಯು, ಪೀತಾಂಬರ ಧಾರಿಗಳನ್ನಾಗಿಯು, ಕಿರೀಟ ಕುಂಡಲಗಳನ್ನು ಧರಿಸಿದವರನ್ನಾಗಿಯು ಮಾಡಿದನು. ಅಲ್ಲದೇ ಆ ಗ್ರಾಮದಲ್ಲಿದ್ದ ನಾಯಿಗಳು, ಚಂಡಾಲರು, ಮುಂತಾದ ಎಲ್ಲ ಜೀವಿಗಳನ್ನೂ ಗೋಕರ್ಣನ ಕೃಪೆಯಿಂದ ಆಗ ವಿಮಾನದಲ್ಲಿ ಕುಳ್ಳರಿಸಿಕೊಳ್ಳಲಾಯಿತು. ಅವರೆಲ್ಲರೂ ಯೋಗಿಗಮ್ಯವಾದ ಗೋಲೋಕಕ್ಕೆ ಕಳುಹಿಸಲ್ಪಟ್ಟರು. ಗೋಪಾಲನಾದ ಶ್ರೀ ಹರಿಯು ಭಕ್ತವತ್ಸಲನಾಗಿ ಗೋಕರ್ಣನನ್ನು ತನ್ನೊಡನೆ ಕರೆದುಕೊಂಡು ಗೋಪರಿಗೆ ಪ್ರಿಯವಾದ ಗೋಲೋಕಕ್ಕೆ ತೆರಳಿದನು. ಹಿಂದೆ ರಾಮನ ಜೊತೆಯಲ್ಲಿ ಅಯೋಧ್ಯಾವಾಸಿಗಳೆಲ್ಲರೂ ವೈಕುಂಠಕ್ಕೆ ಹೇಗೆ ಹೋದರೋ ಹಾಗೆ ಅವರೆಲ್ಲರೂ ಕೃಷ್ಣನ ಜೊತೆಯಲ್ಲಿ ಯೋಗಿ ದುರ್ಲಭವಾದ ಗೋಲೋಕಕ್ಕೆ ಕರೆದೊಯ್ಯಲ್ಪಟ್ಟರು. ಶ್ರೀಮದ್ಭಾಗವರ ಶ್ರವಣದಿಂದ ಅವರು ಎಲ್ಲಿ ಸೂರ್ಯ ಚಂದ್ರರಿಗೂ ಸಿದ್ಧರಿಗೂ ಸಹ ಪ್ರವೇಶವಿಲ್ಲವೋ ಅಂತಹ ಲೋಕಕ್ಕೆ ಹೋದರು.

        ಸುಕ್ತಾಹ ಯಜ್ಞದ ಕಥೆಯ ಉಜ್ವಲ ಫಲವನ್ನು ಈಗ ನಿನಗೆ ಹೇಳುತ್ತಿದ್ದೇವೆ. ಈ ಗೋಕರ್ಣನ ಕಥೆಯನ್ನು ಯಾರು ಆಸಕ್ತಿಯಿಂದ ಕೇಳುವರೋ ಅವರಿಗೆ ಪುನರ್ಜನ್ಮವಿಲ್ಲ. ಗಾಳಿ, ನೀರು, ಎಲೆ ಇವುಗಳನ್ನಾಹಾರ ಮಾಡಿಕೊಂಡು ದೇಹ ಶೋಷಣಮಾಡಿ ಚಿರಕಾಲ ತಪಸ್ಸು ಮಾಡಿದರೊ ಅಥವಾ ಯೋಗಾಭ್ಯಾಸ ಮಾಡಿದರೂ ಯಾವ ಗತಿ ಸಿಗುವುದಿಲ್ಲವೋ ಆ ಗತಿಯನ್ನು ಸಪ್ತಾಹದ ಕಥೆಯನ್ನು ಕೇಳುವುದರಿಂದ ಹೊಂದಬಹುದು.

        ಈ ಪುಣ್ಯವಾದ ಇತಿಹಾಸವನ್ನು ಚಿತ್ರಕೂಟದಲ್ಲಿರುವ ಮುನೀಶ್ವರನಾದ ಶಾಂಡಿಲ್ಯನು ಬ್ರಹ್ಮಾನಂದದ ಪರಿಪ್ಲುತನಾಗಿ ಓದುತ್ತಾನೆ.

        ಈ ಶ್ರೇಷ್ಠ ಮತ್ತು ಪವಿತ್ರವಾದ ಕಥೆಯನ್ನು ಒಂದು ಸಲ ಕೇಳಿದರೂ ಪಾಪಗಳು ನಶಿಸುವುವು. ಇದನ್ನು ಶ್ರಾದ್ಧದಲ್ಲಿ ಓದಿದರೆ ಪಿತೃದೇವತೆಗಳಿಗೆ ತೃಪ್ತಿವುಂಟಾಗುವುದು. ಸದಾ ಚೆನ್ನಾಗಿ ಓದುವುದರಿಂದ ಮೋಕ್ಷ ಲಭಿಸುವುದು.

ಎಂಬಲ್ಲಿಗೆ ಶ್ರೀಪದ್ಮಪುರಾಣದ ಉತ್ತರ ಖಂಡದಲ್ಲಿನ ಶ್ರೀಮದ್ಭಾಗವತ ಮಹಾತ್ಮ್ಯದಲ್ಲಿ ಗೋಕರ್ಣ ಮೋಕ್ಷವರ್ಣನವೆಂಬ ಐದನೇ ಅಧ್ಯಾಯವು ಮುಗಿಯಿತು.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)

ಆರನೇ ಅಧ್ಯಾಯ

ಕುಮಾರರು ಹೇಳಿದರು

ಈಗ ನಿನಗೆ ಸಪ್ತಾಹ ಶ್ರವಣ ಹೇಗೆ ಮಾಡಬೇಕೆಂಬುದನ್ನು ತಿಳಿಸುತ್ತೇವೆ. ಇದನ್ನು ಸಧಾರಣವಾಗಿ ಧನವೂ ಮತ್ತು ಜನಸಹಾಯವಿದ್ದರೆ ಮಾತ್ರ ಮಾಡಲು ಸಾಧ್ಯ. ಜ್ಯೋತಿಷ್ಕನನ್ನು ಕರೆದು ಒಳ್ಳೇಯ ಮುಹೂರ್ತವನ್ನು ಕೇಳಬೇಕು. ಒಂದು ಮದುವೆ ಮಾಡುವುದಕ್ಕೆ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಶ್ರಾವಣ ಭಾದ್ರಪದ, ಆಶ್ವಯುಜ ಕಾರ್ತಿಕ ಮಾರ್ಗಶಿರ ಈ ಮಾಸಗಳಲ್ಲಿ ಸಪ್ತಾಹವನ್ನು ಆರಂಭಿಸಿದರೆ ಕೇಳುವವರಿಗೆ ಮೋಕ್ಷ ಬರುವ ಸೂಚನೆಯಿದೆ. ಯಾವ ಮಾಸಗಳು ಶುಭಕಾರ್ಯಗಳಿಗೆ ವಜ್ರ್ಯವಾಗಿವೆಯೋ ಅವುಗಳನ್ನು ಬಿಡಬೇಕು. ಈ ಪ್ರಸ್ತಾಹಕ್ಕೆ ಸಹಾಯಕರನ್ನಾಗಿ ಕಾರ್ಯದಕ್ಷರಾದವರನ್ನು ಇಟ್ಟುಕೊಳ್ಳಬೇಕು. “ಇಲ್ಲಿ ಸಪ್ತಾಹ ನಡೆಯುತ್ತದೆ. ಕೆಲವರಿಗೆ ಹರಿಕಥೆಗಳೂ, ವಿಷ್ಣುಕೀರ್ತನೆಗಳೂ ಲಭಿಸುವುದೇ ಕಷ್ಟ. ಆದುದರಿಂದ ಎಲ್ಲರೂ ಕುಟುಂಬ ಸಮೇತರಾಗಿ ಈ ಸಪ್ತಾಹಕ್ಕೆ ಬರಬೇಕು” ಎಂಬ ವಾರ್ತೆಯನ್ನು ಸ್ತ್ರೀಗಳೂ, ಶೂದ್ರಾದಿಗಳಿಗೂ ಸಹ ತಿಳಿಯುವಂತೆ ಎಲ್ಲ ಪ್ರದೇಶಗಳಿಗೂ ಕಳುಹಿಸಬೇಕು. ಒಂದೊಂದು ಪ್ರದೇಶದಲ್ಲಿಯೂ ಇರುವ ವೈರಾಗ್ಯಶೀಲದಾರ ವಿಷ್ಣುಭಕ್ತರಿಗೂ ಕೀರ್ತನದಲ್ಲಿ ಆಸಕ್ತಿಯುಳ್ಳವರಿಗೂ ಹೀಗೆಂದು ಪತ್ರಗಳನ್ನು ಬರೆದು ಕಳುಹಿಸಬೇಕು. ‘ಈ ಸಪ್ತಾಹದಲ್ಲಿ ಏಳುದಿನ ಸತ್ಪುರುಷರು ಒಂದು ಕಡೆ ಸೇರುತ್ತಾರೆ. ಇದು ಬಹಳ ದುರ್ಲಭ.ಅಪೂರ್ವರಸವುಳ್ಳ ಕಥೆ ಇಲ್ಲಿ ನಡೆಯುತ್ತದೆ. ಶ್ರೀಭಾಗವರವೆಂಬ ಅಮೃತವನ್ನು ಪಾನಮಾಡುವುದಕ್ಕೆ ರಸಲೋಲುಕರಾದ ತಾವು ಪ್ರೇಮತತ್ಪರರಾಗಿ ಶ್ರೀಘ್ರವಾಗಿ ದಯಮಾಡಿಸಬೇಕು. ತಮಗೆ ಏಳುದಿನಗಳೂ ಇಲ್ಲಿರುವುದಕ್ಕೆ ಅವಕಾಶವಿಲ್ಲದಿದದರೆ, ಒಂದು ದಿನವಾದರೂ ಇಲ್ಲಿಗೆ ತಪ್ಪದೆ ಬರಬೇಕು. ಈ ಸಪ್ತಾಹದ ಒಂದೊಂದು ಕ್ಷಣವೂ ದುರ್ಲಭ”. ಎಂದು ಅವರಿಗೆ ಆಹ್ವಾನವನ್ನು ವಿನಯದಿಂದ ಕಳುಹಿಸಬೇಕು. ಬರುವ ಎಲ್ಲರಿಗೂ ವಾಸ ಸ್ಥನಗಳನ್ನು ಏರ್ಪಾಟು ಮಾಡಬೇಕು. ಭಾಗವತ ಶ್ರವಣವನ್ನು ಪುಣ್ಯಕ್ಷೇತ್ರದಲ್ಲಾಗಲಿ, ಅರಣ್ಯದಲ್ಲಾಗಲಿ ಮನೆಯಲ್ಲಾಗಲಿ ಏರ್ಪಾಟು ಮಾಡಬೇಕು. ಕಥಾಸ್ಥಳವನ್ನು ವಿಶಾಲವಾಗಿರುವ ನೆಲದಲ್ಲಿ ಮಾಡಬೇಕು. ನೆಲವನ್ನು ಶುದ್ಧಿಮಾಡಿ ಗುಡಿಸಿ ಸಾರಿಸಿ, ರಂಗೋಲಿಯಿಡಬೇಕು. ಮನೆಯಲ್ಲಿ ಸಪ್ತಾಹವನ್ನು ಏರ್ಪಾಟು ಮಾಡಿದರೆ ಅದು ನಡೆಯುವ ಜಾಗದಲ್ಲಿರುವ ಸಾಮಾನುಗಳನ್ನೆಲ್ಲಾ ತೆಗೆದು ಒಂದು ಕೋಣೆಯಲ್ಲಿರಬೇಕು. ಸಪ್ತಾಹಕ್ಕೆ ಐದು ದಿನಗಳು ಹಿಂದಿನಿಂದ ಆಸನಗಳನ್ನು ತಯಾರು ಮಾಡಬೆಕು. ಸಪ್ತಾಹ ನಡೆಯುವ ಜಾಗದಲ್ಲಿ ಎತ್ತಾಗಿ ಮಂಟಪವನ್ನು ಮಾಡಬೇಕು. ಅದಕ್ಕೆ ಬಾಳೆ ಗಿಡಗಳನ್ನು ಕಟ್ಟಿ ಅಲಂಕಾರ ಮಾಡಬೇಕು. ಅದನ್ನು ಬಟ್ಟೆಯ ಮೇಲ್ಕಟ್ಟುಗಳಿಂದಲೂ ಫಲ, ಪುಷ್ಪ ಮತ್ತು ಎಲೆಗಳಿಂದಲೂ ಅಲಂಕರಿಸಬೇಕು. ವೈಭವವನ್ನು ತೋರಿಸುವ ಧ್ವಜಗಳನ್ನು ನಾಲ್ಕು ದಿಕ್ಕುಗಳಲ್ಲೂ ನಿಲ್ಲಿಸಬೇಕು. ಆ ಮಂಟಪದಲ್ಲಿ ಮೇಲ್ಗಡೆ ವಿಸ್ತಾರವಾಗಿ ಏಳು ಲೋಕಗಳನ್ನು ನಿರ್ಮಿಸಬೇಕು. ಅವುಗಳಲ್ಲಿ ವಿಪ್ರರನ್ನೂ, ವಿರಕ್ತರನ್ನೂ, ಜಾಗರೂಕನಾಗಿ ಕುಳ್ಳರಿಸಬೇಕು. ಅವರಿಗೆ ಪೂರ್ವದಿಕ್ಕಿನಲ್ಲಿ ಉತ್ತರ ಭಾಗದಲ್ಲಿ ಕುಳಿತುಕೊಳ್ಳುವುದಕ್ಕೆ ಅನುಕೂಲವಾಗಿರುವಂತೆ ಆಸನಗಳನ್ನು ಏರ್ಪಾಟು ಮಾಡಬೇಕು. ಆ ಮೇಲೆ ವಾಚನ ಮಾಡುವವನಿಗೆ ದಿವ್ಯವಾದ ಒಂದು ಆಸನವನ್ನು ಏರ್ಪಾಟು ಮಾಡಬೇಕು. ವಾಚಕನು ಉತ್ತರ ದಿಕ್ಕಿಗೆ ಮುಖವುಳ್ಳವನಾಗಿಯೂ, ಮುಖ್ಯಶ್ರೋತಾರನು ಪೂರ್ವ ದಿಕ್ಕಿಗೆ ಮುಖವುಳ್ಳವನಾಗಿಯೂ ಕುಳಿತುಕೊಳ್ಳಬೇಕು. ವಾಚಕನು ಪ್ರಾಙ್ಮುಖನಾಗಿ ಕುಳಿತುಕೊಂಡರೆ ದೇಶಕಾಲಾದಿಗಳನ್ನು ಬಲ್ಲವರು ಶಾಸ್ತ್ರಗಳಲ್ಲಿ ಶ್ರೋತೃಗಳು ಕುಳಿತುಕೊಂಡಿರುವಾಗ ಪೂಜ್ಯ ಪೂಜಕರ ಮಧ್ಯೆ ಪೂರ್ವದಿಕ್ಕಿದೆಯೆಂದು ಭಾವಿಸಬೇಕು ಎಂದು ಹೇಳಿದ್ದಾರೆ. ವಿರಕ್ತನೂ, ವೈಷ್ಣವನೂ, ವಿಪ್ರನೂ, ವೇದಶಾಸ್ತ್ರಗಳನ್ನು ತಿಳಿದವನೂ, ದೃಷ್ಟಾಂದ್ರಗಳನ್ನು ಹೇಳುವುದರಲ್ಲಿ ಕುಶಲನೂ, ಧೀರನೂ, ನಿಸ್ಸ್ಪøಹನೂ ಆದವನನ್ನು ವಾಚಕನನ್ನಾಗಿ ಏರ್ಪಾಟು ಮಾಡಬೇಕು. ಪಂಡಿತರಾದರೂ ಅನೇಕ ಧರ್ಮವಿಭ್ರಾಂತರನ್ನೂ ಪಾಷಂಡಮ ತಾನು ಮಾಯಗಳನ್ನು ಸ್ತ್ರೀ ಲೋಲಪರನ್ನೂ ಭಾಗವತ ಕಥಾವಾಚನಕ್ಕೆ ನಿಯಮಿಸಿಬಾರದು. ವಾಚಕನ ಪಕ್ಕದಲ್ಲಿ ಅವನಿಗೆ ಸಹಾಯ ಮಾಡಲು ಪಂಡಿತನೂ, ಸಂಶಯಗಳನ್ನು ಪರಿಹರಿಸಬಲ್ಲವನೂ, ಜನರಿಗೆ ವಿಷಯಗಳನ್ನು ಬೋಧಿಸುವ ಅಭ್ಯಾಸವುಳ್ಳವನೂ ಆದ ಮತ್ತು ವಾಚಕನಂತೆಯೇ ಗುಣಗಳುಳ್ಳ ಇನ್ನೊಬ್ಬನನ್ನು ಒಟ್ಟುಕೊಳ್ಳಬೇಕು. ವಾಚಕನು ಸಪ್ತಾಹಪ್ರಾರಂಭವಾಗುವುದಕ್ಕೆ ಒಂದು ದಿನ ಹಿಂದೆ ಕ್ಷೌರ ಮಾಡಿಸಿಕೊಳ್ಳಬೇಕು. ಆಮೇಲೆ ಆತನು ಸಪ್ತಾಹದಲ್ಲಿ ಪ್ರ*** ಅರುಣೋದಯ ಕಾಲದಲ್ಲಿ ಶೌಚವನ್ನು ಮಾಡಿ ಸ್ನಾನ ಮಾಡಬೇಕು ಮತ್ತು ಸಂಧ್ಯಾವಂದನೆ ಮೊದಲಾದ ನಿತ್ಯಕರ್ಮವನ್ನು ಸಂಕ್ಷಿಪ್ತವಾಗಿ ಮಾಡಬೇಕು.

ಕಥೆಯಲ್ಲಿ ಬಾರದಿರಲು ಗಣಪತಿಯನ್ನು ಪೂಜಿಸಬೇಕು. ಸಪ್ತಾಹ ನಡೆಸುವಾತನು ಪಿತೃದೇವತೆಗಳಿಗೆ ತರ್ಪಣಮಾಡಿ ತನ್ನ ಶುದ್ಧಿಗಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಆಮೇಲೆ ಮಂಡಲವನ್ನು ಮಾಡಿ ಅಲ್ಲಿ ವಿಷ್ಣುವನ್ನೂ ಸ್ಥಾಪಿಸಬೇಕು. ಕೃಷ್ಣನನ್ನುದ್ದೇಶಿಸಿ ಮಂತ್ರಗಳಿಂದ ಕ್ರಮವಾಗಿ ಪೂಜೆಯನ್ನು ಮಾಡಬೇಕು. ಪೂಜೆಯ ಕೊನೆಯಲ್ಲಿ ಪ್ರದಕ್ಷಿಣ ನಮಸ್ಕಾರಗಳನ್ನೂ ಸ್ತೋತ್ರವನ್ನೂ ಮಾಡಬೆಕು. “ಎಲೈ ಕರುಣನಿಧಿಯೇ ಸಂಸಾರ ಸಮುದ್ರದಲ್ಲಿ ಮುಳುಗಿರುವ ಕರ್ಮಮೋಹದ ವಶಕ್ಕೆ ಸಿಕ್ಕಿರುವ ದೀನನಾದ ನನ್ನನ್ನು ಸಂಸಾರ ಸಾಗರದಿಂದ ಉದ್ಧಾರಿಸು” ಎಂದು ಪ್ರಾರ್ಥನೆ ಮಾಡಬೇಕು. ಆಮೇಲೆ ಕ್ರಮವಾಗಿ ಶ್ರೀಮದ್ಭಾಗವತಕ್ಕೂ ಪ್ರೀತಿಯಿಂದ ಧೂಪ ದೀಪಾದಿಗಳನ್ನು ಇರಿಸಿ ಪೂಜೆಯನ್ನು ಮಾಡಬೇಕು. ಆಮೇಲೆ ಬಿಲ್ವ ಫಲವನ್ನಿಟ್ಟುಕೊಂಡು ನಮಸ್ಕಾರ ಮಾಡಬೇಕು. ಆಗ ಪ್ರಸನ್ನಚಿತ್ತದಿಂದಲೂ ಕೇವಲ ಭಕ್ತಿಯಿಂದಲೂ “ಈ ಶ್ರೀಮದ್ಭಾಗವತಾಖ್ಯ ಗ್ರಂಥವು ಪ್ರತ್ಯಕ್ಷವಾಗಿ ಶ್ರೀಕೃಷ್ಣನೇ, ನಾಥನೇ ನಿನ್ನನ್ನು ನಾನು ಭವಸಾಗರದಿಂದ ಮುಕ್ತಿಪಡೆಯುವುದಕ್ಕಾಗಿ ಸ್ವೀಕರಿಸಿದ್ದೇನೆ. ನನ್ನ ಈ ಕೋರಿಕೆಯನ್ನು ನಿರ್ವಿಘ್ನವಾಗಿ ತಪ್ಪದೆ ಈಡೇರುವಂತೆ ನೀನು ಮಾಡು. ನಾನು ನಿನ್ನ ದಾಸನು”. ಎಂದು ದೀನವಾಕ್ಕುಗಳಿಂದ ಪ್ರಾರ್ಥನೆ ಮಾಡಬೇಕು. ಆಮೇಲೆ ಆತನು ವಾಚಕನಿಗೆ ವಸ್ತ್ರಗಳನ್ನೂ ಆಭರಣಗಳನ್ನೂ ಕೊಟ್ಟು ಆತನನ್ನು ಪೂಜಿಸಿ ಆತನನ್ನು “ಶುಕರೂಪನೇ, ಜ್ಞಾನಿಯೇ, ಸರ್ವಶಾಸ್ತ್ರವಿಶಾರದನೇ, ಈ ಭಾಗವತ ಕಥೆಯನ್ನು ಪ್ರಕಾಶಮಾಡಿ ನನ್ನ ಅಜ್ಞಾನವನ್ನು ಹೋಗಲಾಡಿಸು?, ಎಂದು ಸ್ತೋತ್ರ ಮಾಡಬೇಕು. ಆಮೇಲೆ ಆತನ ಮುಂದೆ ತನ್ನ ಶ್ರೇಯಸ್ಸಿಗಾಗಿ ಸಂತೋಷದಿಂದ ಸಪ್ತಾಹ ಮುಗಿಯುವವರೆಗೂ ತಾನು ಆಚರಿಸುವ ನಿಯಮವನ್ನೂ ಹೇಳಿ ಯಥಾಶಕ್ತಿಯಾಗಿ ಆನಿಯಮವನ್ನು ಪರಿಪಾಲಿಸಬೇಕು. ಕಥಾಭಂಗವನ್ನು ನಿವಾರಿಸುವುದಕ್ಕಾಗಿ ಆತನು ಐದು ಜನ ವಿಪ್ರರನ್ನು ಆರಿಸಿಕೊಳ್ಳಬೇಕು. ಅವರು ಶ್ರೀ ವಿಷ್ಣುವಿನ ದ್ವಾದಶಾಕ್ಷರ ಮಂತ್ರದ ಜಪವನ್ನು ಮಾಡಬೇಕು. ಬ್ರಾಹ್ಮಣರನ್ನು ವಿಷ್ಣುಭಕ್ತರನ್ನು ಇತರ ಕೀರ್ತನಕಾರರನ್ನೂ ನಮಸ್ಕರಿಸಿ ಪೂಜಿಸಿ ಅವರ ಅನುಜ್ಞೆಯನ್ನು ಪಡೆದು ಆತನು ತನ್ನ ಆಸನದಲ್ಲಿ ಕುಳಿತುಕೊಳ್ಳಬೇಕು ಜನರ, ಧನದ, ಧನಾಗಾರದ ಮತ್ತು ಮಕ್ಕಳ ಚಿಂತೆಯನ್ನು ಬಿಟ್ಟು ಶುದ್ಧವಾದ ಮನಸ್ಸಿನಿಂದ ಕಥೆಯನ್ನು ಕೇಳಿದರೆ ಆತನಿಗೆ ಉತ್ತಮವಾದ ಫಲ ಲಭಿಸುತ್ತದೆ. ಸೂರ್ಯೋದಯದಿಂದ ಮೂರೂವರೆ ಜಾವಗಳಾಗುವವೆಗೂ ಬುದ್ಧಿವಂತನಾದ ವಾಚಕನು ಒಳ್ಳೆಯ ಕಂಠದಿಂದ ಚೆನ್ನಾಗಿ ಕಥಾವಾಚನವನ್ನು ಮಾಡಬೇಕು. ಮಧ್ಯಾಹ್ನದಲ್ಲಿ ಎರಡು ಘಳಿಗೆಗಳ ಕಾಲ ಕಥೆಯನ್ನು ನಿಲ್ಲಿಸಬೇಕು. ಕಥೆಯನ್ನು ಅನುಸರಿಸಿ ವೈಷ್ಣವರು ಕೀರ್ತನೆಗಳನ್ನು ಹಾಡಬೇಕು. ಮಲಮೂತ್ರಬಾಧೆಯನ್ನು ತಪ್ಪಿಸಲು ಕಥೆಯನ್ನು ಕೇಳಬಯಸುವವರು ರತಿ ದಿನ ಒಂದು ಸಲ ಮಾತ್ರ ಹರಿಷ್ಯಾನ್ನವನ್ನು ಲಘುವಾಗಿ ತಿನ್ನಬೇಕು. ಇದರಿಂದ ಆತನಿಗೆ ಸುಖವುಂಟಾಗುತ್ತದೆ. ಶಕ್ತಿಯುದ್ದರೆ ಏಳು ದಿನಗಳೂ ____ ಮಾಡಿ ಈ ಕಥೆಯನ್ನು ಕೇಳಬಹುದು. ಆಗ ತುಪ್ಪ ಮತ್ತು ಹಾಲು ಮಾತ್ರ ಕುಡಿದು ಸುಖವಾಗಿ ಕಥೆಯನ್ನು ಕೇಳಬಹುದು. ಅಥವಾ ಫಲಗಳನ್ನು ಮಾತ್ರ ತಿನ್ನಬಹುದು. ಅಥವಾ ಒಂದು ಹೊತ್ತು ಮಾತ್ರ ಊಟ ಮಾಡಬಹುದು. ಹೇಗೆ ಕಥೆಯನ್ನು ಸುಖವಾಗಿ ಕೇಳುವುದಕ್ಕೆ ಹೇಗೆ ಅನುಕೂಲವೋ ಹಾಗೆ ಮಾಡಬಹುದು. ಒಂದು ವಏಳೆ ಉಪವಾಸ ಮಾಡುವುದರಿಂದ ಕಥೆಯ ಮೇಲೆ ಗಮನವಿಲ್ಲದೇ ಹೋಗುವ ಪಕ್ಷದಲ್ಲಿ ಮತ್ತೆ ಭೋಜನ ಮಾಡಿದರೆ ಕಥೆಯನ್ನು ಸುಖವಾಗಿ ಕೇಳುವುದಕ್ಕಾದರೆ ಉಪವಾಸ ಮಾಡುವುದು ಸರಿಯಲ್ಲಿ ಭೋಜನ ಮಾಡುವುದೇ ಸರಿ.

ನಾರದನೇ, ಈಗ ಸಪ್ತಾಹ ವ್ರತವನ್ನು ಹಿಡಿದವರ ನಿಯಮಗಳನ್ನು ಹೇಳುತ್ತೇವೆ ಕೇಳು. ವಿಷ್ಣು ದೀಕ್ಷೆಯನ್ನು ಪಡೆಯದಿದ್ದವರಿಗೆ ಕಥಾ ಶ್ರವಣಕ್ಕೆ ಅಧಿಕಾರವಿಲ್ಲ. ಕಥಾವ್ರತವುಳ್ಳವರು ಬ್ರಹ್ಮಚರ್ಯವನ್ನು ಪರಿಪಾಲಿಸಬೇಕು. ನೆಲದ ಮೇಲೆ ಮಲಗಬೇಕು. ಎಲೆಗಳಲ್ಲಿಯೇ ಊಟ ಮಾಡಬೇಕು. ಪ್ರತಿದಿನ ಕಥೆ ಮುಗಿಯುವವರೆಗೂ ಉಪವಾಸವಿದ್ದು ಆಮೇಲೆ ಭೋಜನ ಮಾಡಬೇಕು. ದ್ವಿದಳಧಾನ್ಯಗಳನ್ನೂ, ಜೇನುತುಪ್ಪವನ್ನೂ ಎಣ್ಣೆಯನ್ನೂ, ಗರಿಷ್ಠಾನ್ನವನ್ನೂ, ಭಾವದುಷ್ಟವಾದುದನ್ನೂ, ತಂಗಳನ್ನೂ ಆತನು ತಿನ್ನಬಾರದು. ಕಥಾವ್ರತಿಯಾದವನು ಕಾಮ, ಕ್ರೋಧ, ಮದ, ಕೋಪ, ಮತ್ಸರ, ಲೋಭ, ದಂಭ ಮೋಹ, ದ್ವೇಷ ಇವುಗಳನ್ನು ದೂರಮಾಡಬೇಕು. ಕಥಾತ್ರತಿಯಾದವನು ವೇದವನ್ನೂ, ವೈಷ್ಣವರನ್ನೂ, ವಿಪ್ರರನ್ನೂ, ಗುರುವನ್ನೂ, ಗೋವುಗಳನ್ನೂ ವ್ರತಾಚರಣೆ ಮಾಡುವವರನ್ನು, ತಪಸ್ವಿಗಳನ್ನೂ, ಬ್ರಹ್ಮಚಾರಿಗಳನ್ನೂ, ಸನ್ಯಾಸಿಗಳನ್ನೂ, ಹೆಂಗಸರನ್ನೂ, ರಾಜನನ್ನು, ದೊಡ್ಡವರನ್ನು ನಿಂದಿಸುವುದನ್ನು ಬಿಡಬೇಕು. ಕಥಾವ್ರತಿಯಾದವನು ರಜಸ್ವಲೆಯರೊಡನೆಯು, ಅಸ್ಪøಶ್ಯರೊಡನೆಯು, ಮ್ಲೇಚ್ಛರೊಡನೆಯು, ಪತಿತರೊಡನೆಯು, ವ್ರಾತ್ಯರೊಡನೆಯು, ದ್ವಿಜದ್ವೇಷಿಗಳೊಡನೆಯು, ವೇದಬಾಹ್ಯರೊಡನೆಯು ಮಾತಾಡಬಾರದು. ಕಥಾವ್ರತಿಯಾದವನು ಸತ್ಯ, ದಯೆ, ಮೌನ, ಆರ್ಜವ, ವಿನಯ ಮತ್ತು ಉದಾರಮನಸ್ಸು ಇವುಗಳನ್ನುಳ್ಳವನಾಗಬೇಕು. ದರಿದ್ರನೂ, ಕ್ಷಯರೋಗದಿಂದ ಬಾಧೆಪಡುತ್ತಿರುವವನೂ ರೋಗಿಯು, ನಿರ್ಭಾಗ್ಯನೂ, ಪಾಪ ಮಾಡಿದವನೂ, ಮಕ್ಕಳಿಲ್ಲದವನೂ, ಮೋಕ್ಷಬಯುವವನೂ, ಈ ಕಥೆಯನ್ನು ಕೇಳಬೇಕು. ರಜಸ್ವಲೆಯೇ ಆಗದ ಹೆಂಗಸೂ, ಕಾಕವಂಧ್ಯೆಯಾದವಳೂ, ಬಂಜೆಯಾದವಳೂ, ಮಕ್ಕಳು ಹುಟ್ಟಿ ಸತ್ತುಹೋಗಿರುವಳೂ, ಗರ್ಭಸ್ರಾವವಾಗುವವಳೂ, ಪ್ರಯತ್ನಪಟ್ಟು ಭಾಗವತದ ಕಥೆಯನ್ನೂ ಕೇಳಬೇಕು. ಇವರು ವಿಧಿಪೂರ್ವಕವಾಗಿ ಭಾಗವತ ಕಥಾಶ್ರವಣವನ್ನು ಮಾಡಿದರೆ ಅದು ಅಕ್ಷಯವಾದ ಫಲವನ್ನು ಕೊಡುವುದು. ಈಕಥೆ ಅತ್ಯುತ್ತಮವೂ, ದಿವ್ಯವೂ ಆಗಿದೆ. ಇದು ಕೋಟಿ ಯಜ್ಞಗಳ ಫಲವನ್ನು ಕೊಡುವುದು.

ಹೀಗೆ ವ್ರತವಿಧಿಯನ್ನು ನೆರವೇರಿಸಿದ ಮೇಲೆ ಉದ್ಯಾಪನವನ್ನು ಮಾಡಬೇಕು. ಫಲಕಾಂಕ್ಷಿಗಳಾದವರು ಅದನ್ನು ಕೃಷ್ಣ ಜನ್ಮಾಷ್ಟಮೀ ವ್ರತವನ್ನು ಮಾಡಿದ ರೀತಿಯಲ್ಲಿ ಮಾಡಬೇಕು. ಧನಹೀನರಾದ ಭಕ್ತರು ಉದ್ಯಾಪನವನ್ನು ಮಾಡಲೇಬೇಕೆಂಬ ನಿಬಂಧವಿಲ್ಲ.. ವಿಷ್ಣುಭಕ್ತರು ಕೋರಿಕೆಗಳಲ್ಲದವರಾದುದರಿಂದ ಅವರು ಕಥಾಶ್ರವಣದಿಂದಲೇ ಪವಿತ್ರರಾಗುತ್ತಾರೆ.

ಹೀಗೆ ಸಪ್ತಾಹ ಯಜ್ಞವನ್ನು ಪೂರ್ತಿ ಮಾಡಿದ ಮೇಲೆ ಅದನ್ನು ಮಾಡಿಸಿದ ಶ್ರೋತೃ, ವಾಚಕನನ್ನೂ ಭಾಗವತ ಪುಸ್ತಕವನ್ನು ಬಹಳ ಭಕ್ತಿಯಿಂದ ಪೂಜಿಸಬೇಕು. ಆಮೇಲೆ ದೇವರಿಗರ್ಪಿಸಿದ್ದ ತುಲಸೀಮಾಲಡಯನ್ನು ಪ್ರಸಾದ ರೂಪವಾಗಿ ಶ್ರೋತೃಗಳೆಲ್ಲರಿಗೂ ಹಂಚಬೇಕು. ಆಮೇಲೆ ಮೃದಂಗ ತಾಳಗಳ ಜೊತೆಯಲ್ಲಿ ಭಜನೆಮಾಡಬೇಕು. ಜಯಶಬ್ದವನ್ನೂ ನಮಶ್ಯಬ್ದವನ್ನೂ ಶಂಖಶಬ್ದವನ್ನೂ ಮಾಡಿಸಬೇಕು. ಬ್ರಾಹ್ಮಣರಿಗೂ ಯಾಚಕರಿಗೂ ಧನವನ್ನೂ ಅನ್ನವನ್ನೂ ದಾನಮಾಡಬೇಕು. ಶ್ರೋತಾರನು ವಿರಕ್ತನಾದ ಪಕ್ಷದಲ್ಲಿ ಮಾರನೇ ದಿನ ಭಗವದ್ಗೀತೆಯ ಪಾರಾಯಣ ಮಾಡಬೇಕು. ಆತನು ಗೃಹಸ್ಥನಾದರೆ ಕರ್ಮಶಾಂತಿಗಾಗಿ ಹೋಮವನ್ನು ಮಾಡಬೇಕು. ದಶಮಸ್ಕಂಧದ ಪ್ರತಿಶ್ಲೋಕವನ್ನೂ ಹೇಳಿ ಪಾಯಸ, ಜೇನುತುಪ್ಪ, ತುಪ್ಪ, ಎಳ್ಳು ಮತ್ತು ಅನ್ನ ಮುಂತಾದವುಗಳನ್ನು ಸೇರಿಸಿ ಹೋಮ ಮಾಡಬೇಕು. ಅಥವಾ ಭಕ್ತಿಯಿಂದ ಗಾಯತ್ರೀಮಂತ್ರವನ್ನೂ ಹೇಳುತ್ತ ಹೋಮ ಮಾಡಬಹುದು. ಏಕೆಂದರೆ ನಿಜವಾಗಿ ನೋಡಿದರೆ ಶ್ರೇಷ್ಠವಾದ ಭಾಗವತಪುರಾಣವು ಗಾಯತ್ರೀಮಯವಾಗಿದೆ. ಹೋಮವನ್ನು ಮಾಡಲು ಅಶಕ್ತನಾದ ಪಕ್ಷದಲ್ಲಿ ಹೋಮ ಪದಾರ್ಥಗಳನ್ನು ದಾನ ಮಾಡಿದರೆ ಆ ಫಲ ಬರುತ್ತದೆ. ಆಮೇಲೆ ಸಪ್ತಾಹ ಯಜ್ಞದಲ್ಲಿನ ಲೋಪದೋಷಗಳ ಮತ್ತು ಹೆಚ್ಚು ಕುಂದುಗಳ ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮದ ಪಾರಾಯಣ ಮಾಡಬೇಕು. ಸಹಸ್ರನಾಮಕ್ಕಿಂತಲೂ ಅಧಿಕವಾದದ್ದು ಯಾವುದೂ ಇಲ್ಲವಾದುದರಿಂದ ಅದನ್ನು ಪಾರಾಯಣ ಮಾಡಿದರೆ ಎಲ್ಲವೂ ಸಫಲವಾಗುತ್ತದೆ.

ಆಮೇಲೆ ಹನ್ನೆರಡು ಜನ ಬ್ರಾಹ್ಮಣರಿಗೆ ಮಧು ಪಾಯದಗಳಿಂದ ಭೋಜನ ಕೊಡಿಸಬೇಕು. ಶಕ್ತಿಯಿದ್ದರೆ ಮೂರು ಫಲಗಳಷ್ಟು ತೂಕವುಳ್ಳ ಚಿನ್ನದ ಸಿಂಹವನ್ನು ಮಾಡಿಸಿ ಅದರ ಜೊತೆಗೆ ಮನೋಹರವಾದ ಅಕ್ಷರಗಳಿಂದ ಬರೆಯಲ್ಪಟ್ಟ ಭಾಗವತದ ಪುಸ್ತಕವನ್ನಿಟ್ಟು ಆವಾಹನಾದ್ಯುಪಚಾರಗಳಿಂದ ಪೂಜೆ ಮಾಡಿ ಅವುಗಳನ್ನು ದಕ್ಷಿಣೆ, ವಸ್ತುಗಳು, ಭೂಷಣಗಳು, ಗಂಧ ಮುಂತಾದವುಗಳೊಡನೆ ಇಂದ್ರಿಯನಿಗ್ರಹವುಳ್ಳ ಆಚಾರ್ಯನಿಗೆ ಪೂಜೆ ಮಾಡಿ ದಾನಮಾಡಿದರೆ ಅಂತಹ ಬುದ್ಧಿವಂತನು ಭವಬಂಧನಗಳಿಂದ ಮುಕ್ತನಾಗುವನು.

ಮೇಲೆ ಹೇಳಿದ ವಿಧಿಯನ್ನನುಸರಿಸಿ ಸಪ್ತಾಹಯಜ್ಞವನ್ನು ಮಾಡಿದರೆ ಶ್ರೀಮದ್ಭಾಗವತ ಪುರಾಣವು ಮಾಡಿದವರ ಸಮಸ್ತ ಕಾರ್ಯಗಳನ್ನು ನಾಶ ಮಾಡಿ ಶುಭಫಲವನು ಕೊಡುವುದು. ಈ ಶ್ರೀಮದ್ಭಾಗವತವು ಧರ್ಮ ಕಾಮಾರ್ಥ ಮೋಕ್ಷಗಳನ್ನು ಸಾಧಿಸಲು ಸಾಧನವಾಗಿರುವುದು ಎಂಬುದರಲ್ಲಿ ಸಂಶಯವಿಲ್ಲ.

ಕುಮಾರರು ಹೇಳಿದರು

        ನಾರದನೇ, ಹೀಗೆ ನಿನಗೆ ಎಲ್ಲವೂ ತಿಳಿಸಿದ್ದೇನೆ. ಇನ್ನೇನು ಹೇಳಲಿಚ್ಛಿಸುವೆ? ಶ್ರೀಮದ್ಭಾಗವತದಿಂದಲೇ ಭುಕ್ತಿಯನ್ನೂ ಮುಕ್ತಿಯನ್ನೂ ಕೈಗೂಡಿಸಿಕೊಳ್ಳಬಹುದು.

ಸೂತನು ಹೇಳಿದನು

        ಎಂದು ಹೇಳಿ ಆ ಮಹಾತ್ಮರಾದ ಕುಮಾರರು ಏಳು ದಿನಗಳೂ ನಿಯಮದಿಂದ ಕೇಳುತ್ತಿದ್ದ ಸಮಸ್ತ ಪ್ರಾಣಿಗಳಿಗೂ ಸರ್ವಪಾಪಹರವೂ, ಪುಣ್ಯವೂ, ಭುಕ್ತಿಮುಕ್ತಿದಾಯಕವೂ ಆದ ಭಾಗವತ ಕಥೆಯನ್ನು ಯಥಾವಿಧಿಯಾಗಿ ವಾಚನ ಮಾಡಿ ಹೇಳಿದರು. ಆಮೇಲೆ ಅವರು ಪುರುಷೋತ್ತಮನನ್ನು ಸ್ತೋತ್ರ ಮಾಡಿದರು. ಅದರ ತುದಿಯಲ್ಲಿ ಸರ್ವಭೂತ ಮನೋಹರವಾಗಿ ಲಭಿಸಿತು. ನಾರದನೂ ತನ್ನ ಮನೋರಥವೀಡೇರಿದುದರಿಂದ ಕೃತಾರ್ಥನಾದನು. ಕಥೆಯನ್ನು ಕೇಳಿ ಮೈತುಂಬ ಪುಲಕಿತನೂ, ಪರಮಾನಂದ ಭರಿತನೂ ಆಗಿ ಭಗವತ್ಪ್ರಿಯನಾದ ನಾರದನು ಕೈಜೋಡಿಸಿಕೊಂಡು ಪ್ರೇಮಗದ್ಗದವಾದ ವಾಕ್ಕಿನಿಂದ ಕುಮಾರರಿಗೆ ಹೀಗೆ ಹೇಳಿದನು.

ನಾರದನು ಹೇಳಿದನು

        ನಾನು ಧನ್ಯನಾದೆನು. ಕರುಣಾಶಾಲಿಗಳಾದ ತಮ್ಮಿಂದ ಅನುಗೃಹೀತನಾದೆನು. ಈಗ ನಾನು ಸರ್ವಪಾಪಹರನಾದ ಭಗವಂತನನ್ನು ಹೊಂದಿದೆನು. ಭಾಗವತಶ್ರವಣದಿಂದ ವೈಕುಂಠವಾಸಿಯಾದ ವಿಷ್ಣುವನ್ನು ಹೊಂದಲು ಸಾಧ್ಯವಾದುದರಿಂದ, ಎಲೈ ತಪೋಧನರೇ, ಎಲ್ಲಧರ್ಮಗಳಿಗಿಂತಲೂ ಶ್ರವಣವು ಶ್ರೇಷ್ಠವೆಂದು ನಾನು ಭಾವಿಸುತ್ತೇನೆ.

ಸೂತನು ಹೇಳಿದನು

        ವೈಷ್ಣವೋತ್ತಮನಾದ ನಾರದನು ಹೀಗೆ ಹೇಳುತ್ತಿರುವಾಗ, ಯೋಗೇಶ್ವರನಾದ ಶುಕನು ಲೋಕಗಳಲ್ಲಿ ಸಂಚಾರ ಮಾಡುತ್ತ ಅಲ್ಲಿಗೆ ಬಂದನು.

        ಹದಿನಾರು ವರ್ಷ ವಯಸ್ಸಿನವನೂ, ಜ್ಞಾನ ಸುದ್ರಕ್ಕೆ ಚಂದ್ರನಂತಿರುವನೂ, ವ್ಯಾಸಪುತ್ರನೂ ಆದ ಶ್ರೀ ಶುಕನು ಕಥಾಸಮಾಪ್ತಿಯಲ್ಲಿ ಆತ್ಮಾನಂದಪೂರ್ಣನಾಗಿ ಪ್ರೇಮದಿಂದ ಭಾಗವತವನ್ನು ಮೆಲ್ಲಮೆಲ್ಲನೆ ಪಠಿಸುತ್ತ ಅಲ್ಲಿಗೆ ಬಂದನು. ಮಹಾತೇಜಸ್ವಿಯಾದ ಆತನನ್ನು ನೋಡಿ ಸದಸ್ಯರು ಕೂಡಲೆ ಎದ್ದು ಆತನಿಗೆ ಶ್ರೇಷ್ಠವಾದ ಆಸನವನ್ನು ಕೊಟ್ಟರು. ನಾರದರು ಆತನನ್ನು ಪ್ರೀತಿಯಿಂದ ಪೂಜಿಸಿದರು. ಆಗ ಸುಖವಾಗಿ ಕುಳಿತುಕೊಂಡ ಶುಕನು ಹೇಳಿದ ವಿಮಲವಾದ ಮತುಗಳನ್ನು ಕೇಳಿ.

ಶ್ರೀ ಶುಕನು ಹೇಳಿದನು

        ಎಲೈ ಭೂಲೋಕದಲ್ಲಿರುವ ರಸಿಕರೇ ಮತ್ತು ಭಾವುಕರೇ, ವೇದಗಳೆಂಬ ಕಲ್ಪವೃಕ್ಷದಿಂದ ಕೆಳಕ್ಕೆ ಬಿದ್ದಿರುವ ಮತ್ತು ಶುರ ಮುಖದಿಂದ ಅಮೃತ ದ್ರವಸಂಯುತವಾಗಿರುವ ರಸಲಕ್ಷ್ಮಿಗೆ ಆಲಯವಾಗಿರುವ ಭಾಗವತದ ರಸವನ್ನು ಮೇಲಿಂದ ಮೇಲೆ ತನ್ಮಯರಾಗುವವರೆಗೂ ಕುಡಿಯಿರಿ.

        ಶ್ರೇಷ್ಠವಾದ ವ್ಯಾಸಮಹರ್ಷಿ ರಚಿಸಿರುವ ಈ ಭಾಗವತದಲ್ಲಿ ಕಪಟವಿಲ್ಲದ ಶ್ರೇಷ್ಠವಾದ ಧರ್ಮನಿರೂಪಿತವಾಗಿದೆ. ಅದು ಮಾಸ್ಸರ್ಯವಿಲ್ಲದ ಸತ್ಪುರುಶರು ತಿಳಿದುಕೊಳ್ಳತಕ್ಕದಾಗಿದೆ. ಈ ಭಾಗವತದಲ್ಲಿನ ಕಥಾವಸ್ತು ಸತ್ಯವೂ, ಮಂಗಳಕರವೂ, ತಾಪತ್ರಯಗಳನ್ನು ಹೋಗಲಾಡಿಸುವುದೂ ಆಗಿದೆ. ಬೇರೆ ಶಾಸ್ತ್ರಗಳೇಕೆ? ಭಾಗವತ ಶ್ರವಣದಲ್ಲಿ ಆಸಕ್ತಿಯಿದ್ದವರು ತಮ್ಮ ಹೃದಯದಲ್ಲಿ ಈಶ್ವರನನ್ನು ತಕ್ಷಣವೇ ಕಟ್ಟಹಾಕಲು ಸತುರ್ಥರಾಗಿ ಧನ್ಯರಾಗಿರುತ್ತಾರೆ.

        ಶ್ರೀಮ್ಭಾಗವತವು ಎಲ್ಲರ ಪುರಾಣಗಳಲ್ಲೂ ಶ್ರೇಷ್ಟವಾಗಿದೆ. ಇದು ವಿಷ್ಣುಭಕ್ತರ ಆಸ್ತಿ. ಇದರಲ್ಲಿ ಪರಮಾತ್ಮನನ್ನು ಕುರಿತ ಶ್ರೇಷ್ಠವಾದ ನಿರ್ಮಲವಾದ ಜ್ಞಾನ ವರ್ಣಿಸಲ್ಪಟ್ಟಿದೆ. ಇದರಲ್ಲಿ ಜ್ಞಾನವೈರಾಗ್ಯವಾಗಿದೆ ಇದನ್ನು ಭಕ್ತಿಗಳಿಂದೊಡಗೂಡಿದ ನೈಷ್ಕಮ್ರ್ಯವು ಆವಿ ಷ್ಕøತವಾಗಿದೆ. ಇದನ್ನು ಭಕ್ತಿಯಿಂದ ಕೇಳುವ, ಓದುವ ಮತ್ತು ವಿಚಾರಿಸುವ ಜನರು ಮೋಕ್ಷವನ್ನು ಹೊಂದುತ್ತಾರೆ.

        ಈ ರಸವು ಸ್ವರ್ಗದಲ್ಲಾಗಲಿ ಸತ್ಯಲೋಕದಲ್ಲಾಗಲಿ, ಕೈಲಾಸದಲ್ಲಾಗಲಿ, ವೈಕುಂಠದಲ್ಲಾಗಲಿ ಸಿಗುವುದಿಲ್ಲ. ಆದುದರಿಂದ ಭಾಗ್ಯವಂತರು ಇದನ್ನು ಪಾನಮಾಡಿ ಯಾವಾಗಲೂ ಇದನ್ನು ಬಿಡಬೇಡಿ, ಬಿಡಬೇಡಿ.

ಸೂತನು ಹೇಳಿದನು

        ಶುಕನು ಹೀಗೆ ಹೇಳುತ್ತಿರುವಾಗ ಸಭಾಮಧ್ಯದಲ್ಲಿ ಪ್ರಹ್ಲಾದ, ಬಲಿಚಕ್ರವರ್ತಿ, ಉದ್ಧರ, ಅರ್ಜುನ ಮತ್ತು ಇತರ ವಿಷ್ಣುಭಕ್ತರ ಜೊತೆಯಲ್ಲಿ ಶ್ರೀಮಹಾವಿಷ್ಣುವು ಪ್ರತ್ಯಕ್ಷನಾದನು. ನಾರದನು ಆತನನ್ನು ಅವರನ್ನೂ ಪೂಜಿಸಿದನು. ಶ್ರೀಹರಿಯ ದೊಡ್ಡ ಸಿಂಹಾಸನದಲ್ಲಿ ಆನಂದದಿಂದ ಕುಳಿತಿರುವುದನ್ನು ನೋಡಿ ಆ ವಿಷ್ಣುಭಕ್ತರು ಆತನ ಎದುರಿಗೆ ಕೀರ್ತನವನ್ನು ಮಾಡಿದರು. ಆ ಕೀರ್ತನವನ್ನು ನೋಡುವುದಕ್ಕೆ ಪಾರ್ವತೀಸಮೇತನಾದ ಶಿವನೂ, ಬ್ರಹ್ಮದೇವನು ಅಲ್ಲಿಗೆ ಬಂದರು.

        ಆ ಕೀರ್ತನದಲ್ಲಿ ವೇಗವಾಗಿ ತಾಳ ಹಾಕಲು ಸಮರ್ಥನಾದ ಪ್ರಹ್ಲಾದನು ತಾಳ ಹಾಕುತ್ತಿದ್ದನು. ಉದ್ಧರನು ಜಾಗಟೆ ಬಾರಿಸುತ್ತಿದ್ದನು. ನಾರದನು ವೀಣೆ ಬಾರಿಸಿದನು. ಸ್ವರಕುಶಲನಾದ ಅರ್ಜುನನು ಹಾಡಿದನು. ಇಂದ್ರನು ಮೃದಂಗವನ್ನು ಬಾರಿಸಿದನು. ಕುಮಾರರು ಜಯಕಾರಮಾಡುತ್ತಿದ್ದರು. ಶ್ರೀಕುಶನು ಮುಂದೆ ನಿಂತು ಎಲ್ಲರಿಗೂ ಕೀರ್ತನೆಯ ಭಾವವನ್ನೂ ಸರಸವಾಗಿ ವಿವರಿಸುತ್ತಿದ್ದನು.

        ಆಗ ಮಹಾ ತೇಜಸ್ಸಿನಿಂದ ಕೂಡಿ ಭಕ್ತಿಜ್ಞಾನವೈರಾಗ್ಯಗಳು ಮಧ್ಯದಲ್ಲಿ ನಟರಂತೆ ನಾಟ್ಯಮಾಡಿದವು ಈ ಅಲೌಕಿಕವಾದ ಕೀರ್ತನವನ್ನು ನೋಡಿ ಸಂತುಷ್ಟನಾಗಿ ಶ್ರೀಹರಿ “ಭಕ್ತರೇ ನೀವೆಲ್ಲರೂ ನನ್ನ ಮೇಲೆ ಮನಸ್ಸಿಟ್ಟು ನನ್ನನ್ನು ನಿಮ್ಮ ವಶಪಡಿಸಿಕೊಂಡಿದ್ದೀರಿ. ನಾನು ಈ ಕಥಾವಾಚನದಿಂದ ಪ್ರೀತನಾಗಿದ್ದೇನೆ. ನಿಮಗೆ ಏನು ವರ ಬೇಕು ಕೇಳಿ” ಎಂದು ಹೇಳಿದನು. ಅದನ್ನು ಕೇಳಿ ಅಲ್ಲಿನ ಭಕ್ತರೆಲ್ಲರೂ ಪ್ರೇಮಾದ್ರ್ರಚಿತ್ತರೂ ಸಂತುಷ್ಟರೂ ಆಗಿ ವಿಷ್ಣುವನ್ನು ಹೀಗೆಂದು ಪ್ರಾರ್ಥಿಸಿದರು.

        “ಸ್ವಾಮೀ, ಎಲ್ಲೆಲ್ಲಿ ಭಾಗವತ ಸಪ್ತಾಹ ನಡೆಯುವುದೋ ಅಲ್ಲಲ್ಲಿ ನೀನು ಈ ನಿನ್ನ ಭಕ್ತರೊಡನೆ ಹಾಜರಿರಬೇಕು. ಈ ನಮ್ಮ ಕೋರಿಕೆಯನ್ನು ಈಡೇರಿಸು” ಎಂದು ಕೇಳಿದ ಕೂಡಲೇ ಅಚ್ಯುತನು “ಹಾಗೇ ಆಗಲಿ” ಎಂದು ವರಕೊಟ್ಟು ಮಾಯವಾದನು.

        ಆ ಮೇಲೆ ನಾರದನು ಶ್ರೀಹರಿಯ ಪಾದಗಳಿಗೂ ಶುಕ ಮೊದಲಾದ ತಪಸ್ಸಿಗಳಿಗೂ ನಮಸ್ಕಾರ ಮಾಡಿದನು. ಆ ಮೇಲೆ ಅಲ್ಲಿ ಸೇರಿದ್ದ ಎಲ್ಲರೂ ಮೋಹ ಕಳೆದುಕೊಂಡು, ಸಂತೋಷ ಪಡೆದು ಕಥಾಮೃತಪಾನ ಮಾಡಿದವರಾಗಿ ಅಲ್ಲಿಂದ ತೆರಳಿದರು. ಭಕ್ತಿಯು ತನ್ನ ಇಬ್ಬರು ಮಕ್ಕಳೊಡನೆ ಶುಕನಿಂದ ಆತನ ಶಾಸ್ತ್ರವಾದ ಭಗವತದಲ್ಲಿ ರಕ್ಷಣೆಯನ್ನು ಪಡೆದಳು. ಆದುದರಿಂದ ಭಾಗವತವನ್ನೂ ಸೇವಿಸಿದರೆ ಶ್ರೀ ಹರಿಯು ವಿಷ್ಣುಭಕ್ತರ ಹೃದಯದಲ್ಲಿ ಬಂದು ನಿಲ್ಲುವನು.

        ದಾರಿದ್ರ್ಯ, ದುಃಖಿಗಳೂ ಎಂಬ ಜ್ವರದಿಂಧ ವಹಿಸಲ್ಪಡುತ್ತಿರುವವರಿಗೂ ಮಾಯೆಯೆಂಬ ಪಿಶಾಚಿ ಹಿಡಿದವರಿಗೂ ಸಂಸಾರ ಸಮುದ್ರದಲ್ಲಿ ಬಿದ್ದವರಿಗೂ ಕ್ಷೇಮವನ್ನುಂಟು ಮಾಡುವ ಸಲುವಾಗಿ ಭಾಗವತ ಆರ್ಭಟಿಸುತ್ತಿದೆ.

ಶೌನಕನು ಹೇಳಿದನು

        ಸೂತನೇ ಭಾಗವತ ಕಥೆಯನ್ನು ಶುಕನು ಯಾವಾಗ ಹೇಳಿದನು? ಪುನಃ ಗೋಕರ್ಣನು ಯಾವಾಗ ವಾಚನ ಮಾಡಿದನು. ಪುನಃ ಸನಕಾದಿ ಕುಮಾರರು ಯಾವಾಗ ವಾಚನ ಮಾಡಿದಳು? ಈ ವಿಷಯಗಳಲ್ಲಿ ನನ್ನ ಸಂಶಯವನ್ನು ಬಿಡಿಸು.

ಸೂತನು ಹೇಳಿದನು

        ಶ್ರೀಕೃಷ್ಣನು ನಿರ್ಮಾಣ ಹೊಂದಿದ ಮೇಲೆ ಕಲಿಯುಗದಲ್ಲಿ ಮೂವತ್ತು ವರ್ಷಗಳು ಕಳೆದ ಮೇಲೆ ಭಾದ್ರಪದ ಮಾಸದ ನವಮಿಯಿಂದ ಶುಕನು ಭಾಗವತ ಕಥೆಯನ್ನು ಹೇಳಲಾರಂಭಿಸಿದನು. ಅದನ್ನು ಪರೀಕ್ಷಿನ್ಮಹಾರಜನು ಕೇಳಿದ ಮೇಲೆ ಕಲಿಯುಗದಲ್ಲಿ ಎರಡು ನೂರು ವರ್ಷಗಳು ಕಳೆದ ಮೇಲೆ ಗ್ರೀಷ್ಮಋತುವಿನಲ್ಲಿ ಶುಕ್ಲಪಕ್ಷದಲ್ಲಿ ನವಮಿಯ ದಿನ ಗೋಕರ್ಣನು ಭಾಗವತ ಕಥೆಯನ್ನು ಹೇಳಿದನು. ಅಲ್ಲಿಂದ ಕಲಿಯುಗದಲ್ಲಿ ಮೂವತ್ತು ವರ್ಷಗಳು ಕಳೇದಾಗ ಕಾರ್ತಿಕ ಮಾಸದ ಶುಕ್ಲಪಕ್ಷದಲ್ಲಿ ನವಮಿಯ ದಿನ ಬ್ರಹ್ಮಪುತ್ರರಾದ ಸನಕಾದಿ ಋಷಿಗಳು ಭಾಗವತವಾಚನವನ್ನು ಮಾಡಿದರು. ಎಲೈ ಅನಘನಾದ ಶೌಕ ಮಹರ್ಷಿಯೇ ನೀನು ಕೇಳಿದ ಪ್ರಶ್ನೆಗೆ ಉತ್ತರವನ್ನು ಹೇಳಿದ್ದೇನೆ.

        ಕಲಿಯುಗದಲ್ಲಿ ಭಾಗವತಕಥೆ ಭವರೋಗವಿನಾಶಿನಿಯಾಗಿದೆ. ವಿಷ್ಣು ಪ್ರಿಯವೂ, ಸಮಸ್ತ ಪಾಪಪರಿಹಾರವೂ, ಭಕ್ತಿಯ ವಿಲಾಸವನ್ನು ತೋರಿಸುವುದೂ ಮುಕ್ತಿ ಪಡೆಯಲು ಒಂಧೇ ಸಾಧನವೂ ಆದ ಈ ಭಾಗವತ ಕಥೆಯನ್ನು ಸತ್ಪುರುಷರು ಆದರದಿಂದ ಪಾನ ಮಾಡಲಿ. ಈ ಲೋಕದಲ್ಲಿ ಕೇವಲ ತೀರ್ಥಯಾತ್ರೆಗಳು ಮಾಡಿದರೆ ಏನು ಪ್ರಯೋಜನ?

        ಯಮನು ಪಾಶ ಹಿಡಿದುಕೊಂಡಿರುವ ತನ್ನ ದೂತನ ಕಿವಿಯಲ್ಲಿ “ಯಾವಾಗಲೂ ಭಗವಂತನ ಕಥೆಗಳನ್ನು ಕೇಳುತ್ತ ತನ್ಮಯನಾಗಿರುವವನ ತಂಟೆಗೆ ಹೋಗಬೇಕೆ. ನಾನು ಬೇರೆ ಜನರಿಗೆ ಪ್ರಭುವೇ ಹೊರತು ವೈಷ್ಣವರಿಗಲ್ಲ.” ಎಂದು ಹೇಳುತ್ತಾನೆ.

        ಅಸಾರವಾದ ಸಂಸಾರದಲ್ಲಿ ವಿಷಯಗಳೆಂಬ ವಿಷದಿಂದ ನರಳುತ್ತಿರುವ ಮನುಷ್ಯರೇ, ನಿಮ್ಮ ಕ್ಷೇಮಕ್ಕಾಗಿ ಅರ್ಧಕ್ಷಣವಾದರೂ ಭಾಗವತವೆಂಬ ಅಮೃತವನ್ನು ಪಾನಮಾಡಿ. ನೀವೇಕೆ ವ್ಯರ್ಥವಾಗಿ ಕೆಟ್ಟ ಕಥೆಗಳಲ್ಲಿ ಆಸಕ್ತರಾಗಿ ಕುಮಾರ್ಗದಲ್ಲಿ ಹೋಗುತ್ತಿದ್ದೀರಿ? ಭಾಗವತವನ್ನು ಕೇಳಿದರೆ ಮೋಕ್ಷಲಭಿಸುವುದೆಂದು ಪರೀಕ್ಷಿನ್ಮಹಾರಾಜನು ಸಾಕ್ಷಿಯಾಗಿ ಹೇಳುತ್ತಿದ್ದಾನೆ.

        ರಸಪ್ರವಾಹ ಪೂರಿತನಾದ ಶ್ರೀಶುಕನಿಂದ ಹೇಳಲ್ಪಟ್ಟ ಭಾಗವತ ಕಥೆಯನ್ನು ಯಾರು ಕಂಠಪಾಠ ಮಾಡುತ್ತಾರೋ ಅವರು ವೈಕುಂಠಕ್ಕೆ ಪ್ರಭುಗಳಾಗುತ್ತಾರೆ.

        ಎಂದು ಪರಶು ರಹಸ್ಯವೂ, ಸರ್ವಸಿದ್ಧಾಂತಸಾರವೂ ಆದ ವಿಷಯವನ್ನು ಶಾಸ್ತ್ರಪುಂಜವನ್ನು ನೋಡಿ ನಿನಗೆ ಹೇಳಿದ್ದೇನೆ. ಈ ಪ್ರಪಂಚದಲ್ಲಿ ಭಾಗವತಕ್ಕಿಂತಲೂ ನಿರ್ಮಲವಾದದ್ದು ಬೇರೆ ಯಾವುದೂ ಇಲ್ಲ. ಶ್ರೇಷ್ಠವಾದ ಆನಂದವನ್ನು ಹೊಂದಲು ಭಾಗವತದ ಹನ್ನೆರಡು ಸ್ಕಂಧಗಳ ಸಾರವನ್ನೂ ಪಾನಮಾಡು.

        ಕಥೆಯನ್ನು ಯಾರು ನಿಯಮದಿಂದ ಕೇಳುತ್ತಾರೆಯೋ, ಯಾರು ಇದನ್ನು ಶುದ್ಧವಿಷ್ಣುಭಕ್ತರ ಮುಂದೆ ಹೇಳುತ್ತಾರೆಯೋ ಅವರು ಚೆನ್ನಾಗಿ ವಿಧಿಸಲ್ಪಟ್ಟರುವ ಸತ್ಯಾಚರಣೆ ಮಾಡಿದರೆ ಸಿಗುವ ಫಲವನ್ನು ಹೊಂದುತ್ತಾರೆ. ಈ ಲೋಕದಲ್ಲಿ ಯಾವುದೂ ಅಸಾಧ್ಯವಿಲ್ಲ.

        ಎಂಬಲ್ಲಿಗೆ ಶ್ರೀಪದ್ಮಪುರಾಣದಲ್ಲಿನ ಉತ್ತರಖಂಡದಲ್ಲಿ ಶ್ರೀಮದ್ಭಾಗವತ ಮಹಾತ್ಮ್ಯದಲ್ಲಿ ಶ್ರವಣ ವಿಧಿಕಥನವೆಂಬ ಆರನೇ ಅಧ್ಯಾಯ ಮುಗಿದುದು.

ಶ್ರೀ ಮದ್ಭಾಗವತ ಮಹಾತ್ಮ್ಯ ಮುಗಿದುದು

ಹರಿಃ ಸಂ ತತ್ಸತ್

******