ಧವಳಕೀರ್ತಿಯನ್ನುಳಿಸಿದ ಕೃಷ್ಣಮೂರ್ತಿ   

                            – ಶತಾವಧಾನಿ ಆರ್, ಗಣೇಶ್

             (ದಿನಾಂಕ 1-11-1997 ರ ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ  ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ) 

       ಡಿವಿ ಜಿ ಯವರು ತಮ್ಮಸಂಸ್ಕೃತಿಎಂಬ ಸೊಗಸಾದ ಕಿರುಹೊತ್ತಿಗೆಯಲ್ಲಿ ಸುಸಂಸ್ಕೃತ ಮಾನವನ ಲಕ್ಷಣಗಳನ್ನು ನಿರೂಪಿಸುತ್ತಾ ಭರ್ತೃಹರಿಯ ಶ್ಲೋಕದ ಆಧಾರದಿಂದ ತಮ್ಮದೊಂದು ಪದ್ಯವನ್ನು ಉಲ್ಲೇಖಿಸುತ್ತಾರೆ.

ಕಲಿತಂ ಕಲ್ಲರೊಳ್, ಆಜ್ಞರೊಳ್ ತಿಳಿಯದಂ, ವಾಕ್ಯಜ್ಞರೊಳ್

ವಾಗ್ಮಿ ಮರ್ತೆ

ಎಳೆಯಂ ತಾನ್ ಎಳೆಯರ್ಕಳೊಳ್, ಬಡವರೊಳ್ ದೀನಂ.

ಸಖಂ ಸಖ್ಯರೋಳ್!

ನಲಿವಂ ಭೋಗದೆ ಭೋಗಿವೃಂದದೆ, ವಿರಾಗಂ

ರಾಗನಿರ್ಮುಕತರೋಳ್

ಸುಲಭಂ ಸಂಸ್ಕೃತನೆಲ್ಲರೊಳ್ ಸಮರಸಂ ವಿಶ್ವಾತ್ಮ

ಸಂಜ್ಞಾಪನಂII

             ಇಂಥ ಮಹಾಲಕ್ಷಣಗಳನ್ನುಳ್ಳ ಮಹನೀಯರು ನಮ್ಮೊಡನೆ ಯಾರಾದರೂ ಇದ್ದರೇ? ನಾವು ಅವರನ್ನು ಚೆನ್ನಾಗಿ ಅರಿತು, ಅವರೊಡನೆ ನುರಿತಿದ್ದೇವೇ? ಎಂದು ಪ್ರಶ್ನಿಸಿಕೊಂಡಾಗ ನನಗೆ ಥಟ್ಟನೆ ಹೊಳೆಯುವ ಹೆಸರು ದಿವಂಗತ ಲಂಕಾ ಕೃಷ್ಣಮೂರ್ತಿಯವರದು. ಅವರನ್ನರಿತವರು ಈ ಮೇಲಣ ಪದ್ಯವು ಅವರಿಗಾಗಿಯೇ ರಚಿತವಾಯಿತೇನೋ ಎಂಬಂತಿದೆಯೆಂದು ಹೇಳದಿರಲಾರರು.    

             ಶ್ರೀಯುತ ಕೃಷ್ಣಮೂರ್ತಿಯವರ ಉದ್ಯೋಗದ ಸಾಧನೆಗಳನ್ನಾಗಲೀ, ಕೌಟುಂಬಿಕ ಸಂಗತಿಗಳನ್ನಾಗಲಿ ನಾನು ಹೆಚ್ಚಾಗಿ ಬಲ್ಲವನಲ್ಲ. ನಾನು ಕಂಡಿದ್ದು ಹೆಚ್ಚಾಗಿ ಅವರ ಸಾಹಿತ್ಯ ಮತ್ತು ಸಂಸ್ಕೃತಿಗಳ ಮುಖವನ್ನೇ. ಆದರೆ ಕೃಷ್ಣಮೂರ್ತಿಗಳ ಯಾವ ಮುಖವೂ ಕುರೂಪಿಯಲ್ಲ, ಕುಹಕಿಯಲ್ಲ. ಸರ್ವತ್ರ ಋಜುತ್ವವನ್ನೇ ಅವರು ಆರಾಧಿಸಿ ಅನುಸಂಧಾನಿಸಿದ್ದರು. ಅವರ ಕೆಲವೊಂದು ನಡೆಬೆಳಕಿನ ಸೊಬಗನ್ನು ನುಡಿಗುಡಿಯಾಗಿಸುವುದಷ್ಟೇ ನನ್ನ ಪ್ರಸ್ತುತ ಯತ್ನ.

           ನಾನು  ಮೊದಲಿಗೆ ಶ್ರೀ ಲಂಕಾ ಕೃಷ್ಣಮೂರ್ತಿಯವರನ್ನು ಕಂಡದ್ದು ಅವಧಾನ ಸಭೆಯೊಂದರಲ್ಲಿ. ಮೊದಲ ನೋಟಕ್ಕೆ ಅವರು ಅನಾಕರ್ಶಕವಾಗಿಯೇ ಕಂಡರು. ಅಲ್ಲದೆ ಅವರು ಸಭೆಯನ್ನು ಬೆರಗುಬಡಿಸುವಂಥ ವಾಚಾಳಿಯೂ ಅಲ್ಲ. ಹೀಗಾಗಿ ಅವರ ಬಗ್ಗೆ ಆಸಕ್ತಿಯೇ ಮೂಡಲಿಲ್ಲ. ಆದರೆ ಕೆಲವರ್ಷಗಳ ಬಳಿಕ ನನ್ನ ಮಿತ್ರರೂ, ಅವರಿಗೆ ಸಂಹಿತರೂ ಆದ ಶ್ರೀ ಬಿ. ಆರ್. ಪ್ರಭಾಕರ್ ಅವರ ಮೂಲಕ ನನಗೆ ಕೃಷ್ಣಮೂರ್ತಿಗಳ ನೇರ ಪರಿಚಯವಾಯಿತು. ಅಂದೇ ಅವರ ಸಂಸ್ಕೃತಕವಿತಾ ಕೌಶಲವೂ, ಸಮಸ್ಯಾಪೂರ್ಣಪಾಟವವೂ ಮನ ಮುಟ್ಟಿದವು. ಅಲ್ಲದೆ ಅವರು ಮಾತಿನಲ್ಲೆಷ್ಟು ಜಾಗರೂಕರೆಂಬುದೂ ತಿಳಿಯಿತು. ಆ ಸಮಯದಲ್ಲೇ ಅವರು ತೆಲುಗಿನಿಂದ ಸಂಸ್ಕೃತಕ್ಕೆ ಭಾಷಾಂತರಿಸುತ್ತಿದ್ದ ತಿಕ್ಕನ ಸೋಮಯಾಜಿಯ ನಿರ್ವಚನೋತ್ತರ ರಾಮಾಯಣದ ಭಾಗಗಳನ್ನೂ ಗಮನಿಸಿದೆ. ಅಲ್ಲಿ ನಾನು ತಪ್ಪೆಂದು ಭ್ರಮಿಸಿ ಯಾವುದೋ ಶಬ್ದರೂಪವನ್ನು ತೋರಿಸಿದೆ. ಕೂಡಲೆ ಅವರು ಅದರತ್ತ ಧಾವಿಸಿದರು.  

             ಹಸ್ತಪ್ರತಿಯ ಕಡತದಲ್ಲಿ ನಾನು ಸೂಚಿಸಿದ ಪದ್ಯವೆಲ್ಲೋ ಮರೆಯಾಗಿತ್ತು. ಅದಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಬೇಕಾಯಿತು. ಕಡೆಗೆ ನಾನುಅದು ಸರಿಯೇ ಇದ್ದಿರಬಹುದು. ನೀವು ಚಿಂತಿಸಬೇಡಿಎಂದು ಹೇಳಿದರೂ ಒಪ್ಪದೆ ಅಂತೂ ಆ ಪದ್ಯವನ್ನು ಹುಡುಕಿ ತೆಗೆದರು! ಆದರೆ ಅದು ನಾನು ಭ್ರಮಿಸಿದಂತೆ ತಪ್ಪಾದ ಪದವನ್ನು ಹೊಂದಿರದೆ ಶುದ್ಧವಾಗಿಯೇ ಇದ್ದಿತು! ನನಗಾಗ ತುಂಬಾ ಖೇದವಾಯಿತಾದರೂ ಶ್ರೀ ಕೃಷ್ಣಮೂರ್ತಿಯವರು ಸಮಾಧಾನ ಹೇಳಿ, “ಮುಖ್ಯವಾಗಿ ನಮಗೆ ಬೇಕಾದದ್ದು ನಿರ್ದೋಷತ್ವ, ಭಾಷಾಶುದ್ಧಿ. ಅದಕ್ಕಾಗಿ ತಾನೆ ನೀವೂ ಕೇಳಿದ್ದು. ನಾನೂ ಹುಡಿಕಿದ್ದು. ಇನ್ನೇಕೆ ಚಿಂತೆ! ಎಲ್ಲಾ ಸರಿಯಾಯಿತಲ್ಲ!ಎಂದರು. ಇದು ಲಂಕಾ ಕೃಷ್ಣಮೂರ್ತಿಗಳ ಭಾಷಾಶುದ್ಧಿ ಮತ್ತು ನಿರ್ದೋಷತಾ ಪ್ರೀತಿಗಳಿಗೊಂದು ಸಣ್ಣ ನಿದರ್ಶನ.         

              ಮತ್ತೊಮ್ಮೆ ಕೋಲಾರದಲ್ಲಿ ಅವಧಾನ ನಡೆಸಲು ತೆರಳಿದಾಗ ಕೃಷ್ಣಮೂರ್ತಿಯವರೂ ನಮ್ಮೊಡನೆ ಬಂದಿದ್ದರು. ಬಸ್ಸಿನಲ್ಲಿ ನನ್ನನ್ನುನೀವು ಅವಧಾನಿಸಬೇಕಾದವರು ಶ್ರಮ ಮಾಡಿಕೊಳ್ಳಬಾರದು. ನೆರಳಿನತ್ತ ಕೂಡಿರಿ. ನಾನು ಬಿಸಿಲಿನತ್ತ ಕೂಡುವೆ. ನಮಗೇನು? “ಗೊರ್ರೆಲತೋ ತೋಲಿನಾ ಸರೇ ಗೇದೆಲತೋ ತೋಲಿನಾ ಸರೇ”. ಆದರೆ ನೀವು ಹಾಗಲ್ಲ. ಕಾರ್ಯಕ್ರಮದ ಜವಾಬ್ದಾರಿ ನಿಮ್ಮದಲ್ಲವೇಎಂದು ಬೇರೆಯ ಕಡೆ ಕೂಡಿಸಿದ್ದರು. ಇದು ಅವರು ವಾತ್ಸಲ್ಯ ಮತ್ತು ಸಾರಳ್ಯಗಳ ಸೊಗಡಿಗೊಂದು ಸಣ್ಣ ಸಾಕ್ಷ್ಯ.

                ಇನ್ನೊಮ್ಮೆ ಕೆ.ಜಿ.ಎಫ಼್ ನಲ್ಲಿ ಅವಧಾನವೊಂದನ್ನು ನಡೆಸಿ ಅದಾದ ಬಳಿಕ ಮೂಕಾಭಿನಯವನ್ನೊಂದನ್ನು ನೋಡುವ ಅವಕಾಶ ಬಂದಿತು. ನಮ್ಮಲ್ಲಿ ಕೆಲವರಿಗೆ (ನಾನೂ ಸೇರಿದಂತೆ) ಆ ಮೂಕಾಭಿನಯದ ಅತಿರೇಕ ರುಚಿಸಲಿಲ್ಲ. ಆದರೆ ಕೃಷ್ಣಮೂರ್ತಿಯವರು ವಿಮುಖರಾಗದೆ ಅದರ ಸ್ವಾರಸ್ಯವನ್ನಷ್ಟನ್ನೂ ಗ್ರಹಿಸಿ ಬಳಿಕ ನಮಗೆ ಆ ಕಾರ್ಯಕ್ರಮದ ಗುಣ-ದೋಷಗಳ, ವ್ಯಾಪ್ತಿ- ಪರಿಮಿತಿಗಳ ಬಗ್ಗೆ ಮನನೀಯವಾದ ಮಾತುಗಳಲ್ಲಿ ತಿಳುವಳಿಕೆ ನೀಡಿದರು. ಅವರುಹಳತೆಲ್ಲ ಹೊನ್ನು ಹೊಸತೆಲ್ಲ ಹೊಲ್ಲಎನ್ನುವಂಥಹವರಲ್ಲವೆಂಬುದಕ್ಕೆ ಇದು ಸುಂದರ ನಿದರ್ಶನ.

             ಇದೇ ರೀತಿ ಅವಧಾನ ಕಾರ್ಯಕ್ರಮವೊಂದಕ್ಕಾಗಿ ಚಿಂತಾಮಣಿಗೆ ಹೋಗಿ ಅಲ್ಲಿಂದ ಮರಳಿ ಬರುವಾಗ ನಮ್ಮೊಡನೆ ಹೊಸತಾಗಿ ಸೇರಿಕೊಂಡ ವಿದ್ವಾಂಸರೊಬ್ಬರು ಶ್ರೀಮದ್ಭಾಗವತದ ಮಂಗಳಶ್ಲೋಕಕ್ಕೆ ತಮ್ಮದಾದ ವ್ಯಾಖ್ಯೆಯನ್ನು ನೀಡತೊಡಗಿದರು. ಆಗ ಅವರ ಮಾತಿನಲ್ಲಿ ತಲೆದೋರಿದ ದೋಷವನ್ನೂ, ನಿರ್ವಚನದ ಅಸಾಧುತ್ವವನ್ನೂ ಗಮನಿಸಿ ಕೃಷ್ಣಮೂರ್ತಿಯವರು ಕೂಡಲೇ ಸಗೌರವವಾಗಿ ಆ ವಿದ್ವಾಂಸರ ವಾದವನ್ನು ಸಂಪೂರ್ಣವಾಗಿ ಖಂಡಿಸಿದರು. ಆದರೆ ಈ ಸಂದರ್ಭದಲ್ಲಿ ಅವರ ಧ್ವನಿ ಸ್ವಲ್ಪವೂ ಏರಲಿಲ್ಲ. ಮಾತಿನ ಜಾಡಿನಲ್ಲಿ ಎಳೆಯಷ್ಟೂ ಆವೇಶ-ಅಭಿವೇಶಗಳಿರಲಿಲ್ಲ. ಹೀಗೆಯೇ ಇನ್ನೊಮ್ಮೆಧರ್ಮಪ್ರಭಪತ್ರಿಕೆಗಾಗಿಯೇ ನಾನು ಬರೆದ ಲೇಖನದಲ್ಲಿ ಸ್ವಾಭಿಪ್ರಾಯಮಂಡನೆ ಹಾಗೂ ಭಿನ್ನಾಭಿಪ್ರಾಯ ಖಂಡನೆಯ ಹುಮ್ಮಸ್ಸಿನಲ್ಲಿ ಚುರುಕಾದ ಮಾತುಗಳನ್ನು ಬಳಸಿದುದನ್ನು ಕಂಡು ಅವನ್ನೆಲ್ಲ ಕತ್ತರಿಸಿಸಾರ್! ನಮ್ಮ ವಿಚಾರಕ್ಕೆ ಮೊನಚುತನ  ಬರಬೇಕಿಲ್ಲ, ವಿಚಾರದ ಪ್ರಖರತೆ ಮತ್ತು ಚಿಂತನೆಯ ಪ್ರಾಮಾಣಿಕತೆಗಳಿಂದಲೇ ಅದು ಬರುತ್ತದೆಎಂದು ಸಮಾಧಾನ ನೀಡಿದ್ದರು. ಒಟ್ಟಿನಲ್ಲಿ ಅವರ ವಾದಗಳಲ್ಲಿ ಕಾವಿರುತ್ತಿರಲಿಲ್ಲ. ಬೆಳಕಿರುತ್ತಿತ್ತು. ಅದೊಂದು ಶೀತಲಕಾಂತಿ ಸೌಭಾಗ್ಯ ಅವರ ಮಾತುಗಳಲ್ಲಿ ಮನೆ ಮಾಡಿಕೊಂಡಿತ್ತು.

            ಪಾಂಡಿತ್ಯದ ದೃಷ್ಟಿಯಿಂದ ನೋಡಿದರಂತೂ ಕೃಷ್ಣಮೂರ್ತಿಯವರು ಸಂಸ್ಕೃತ ತೆಲುಗು – ಕನ್ನಡಗಳ ವಿದ್ವತ್ಕವಿತಾನಿಧಿ, ಹಿಂದಿ – ಇಂಗ್ಲೀಷ್, ತಮಿಳು ಭಾಷೆಗಳನ್ನೂ ಬಲ್ಲ ಮೇಧಾವಿ. ವಿಶೇಷತಃ ಅವರಿಗೆ ವೇದಾಂತ, ಧರ್ಮಶಾಸ್ತ್ರ, ಸಾಹಿತ್ಯಾದಿ ಕಲೆಗಳು ಮತ್ತು ವ್ಯಾಕರಣ ಪರಮ ಪ್ರಿಯವಾದ, ವಶಂವದವಿದ್ಯೆಗಳಾಗಿದ್ದವು. ಮನಸ್ಸಿನ ಸಂಸ್ಕಾಕಾರಕ್ಕಾಗಿ, ಆನಂದಕ್ಕಾಗಿ ಕಲಾ ಸಾಹಿತ್ಯ ಪ್ರಕಾರಗಳು, ಮಾತಿನ ಸಂಸ್ಕಾರಕ್ಕಾಗಿ ವ್ಯಾಕರಣ, ಲೋಕಸಂಸ್ಕಾರಕ್ಕಾಗಿ ಧರ್ಮಶಾಸ್ತ್ರ ಮತ್ತು ಸಮಸ್ತ ಸಂಸ್ಕಾರದ ಮೂಲಕ ಆತ್ಮೋನ್ನತಿಗಾಗಿ ವೇದಾಂತ ಎಂಬುದು ಅವರ ನಿಲುವಾಗಿತ್ತು. ಈ ನೆಲೆಯಿಂದಾಗಿಯೇ ಲಂಕಾ ಕೃಷ್ಣಮೂರ್ತಿಯವರಿಗೆ ವ್ಯಾಸ – ವಾಲ್ಮೀಕಿಗಳ ಬಳಿಕ ಕಾಳಿದಾಸ ಮತ್ತು ತಿಕ್ಕನ ಸೋಮಯಾಜಿ ತುಂಬ ಪ್ರಿಯ ಕವಿಗಳಾಗಿದ್ದರು. ಧರ್ಮಶಾಸ್ತ್ರಗಳ ಪೈಕಿ ಅವರಿಗೆ ಮನುಸ್ಮೃತಿ ತುಂಬ ಗೌರವಾರ್ಹವೆನಿಸಿತ್ತು. ಅನೇಕ ಬಾರಿ ನನಗೆ ಅವರು ಮನುವಿನ ಮಹನೀಯತೆಯನ್ನು ಸೋದಾಹರಣವಾಗಿ ವಿವರಿಸಿದ್ದರು. ಸಿದ್ಧಾಂತಕೌಮುದಿಯಂತೂ ಅವರಿಗೆ ಕರತಲಾಮಲಕ. ತಮ್ಮ ಮನೆಯಲ್ಲಿ ಅನೇಕ ವರ್ಷಗಳ ಕಾಲ ವ್ಯಾಕರಣದ ಪಾಠಗಳನ್ನವರು ಹೇಳಿದರು. ಅಲ್ಲದೆ ಪ್ರತಿಯೊಂದು ಶಬ್ದದ ಜಾಡು, ಚರಿತ್ರೆ, ವ್ಯಾಪ್ತಿ, ಅರ್ಥಚ್ಛಾಯೆಗಳ ಬಗೆಗೂ ಅವರ ಕೌತುಕ ಅಪಾರ. ಒಮ್ಮೆ ಕೋಲಾರದಲ್ಲಿ ನನ್ನ ಅವಧಾನದ ಬಳಿಕ ರಾತ್ರಿಯ ಭೋಜನಾ ನಂತರ ಎಂಟು – ಹತ್ತು ಜನ ವಿದ್ವದ್ರಸಿಕರಿರುವ ಆಪ್ತಘೋಷ್ಟಿಯಲ್ಲಿ ವೇದಗಳಲ್ಲಿ ಬರುವ ಜಲವಾಚಕ ಶಬ್ದಗಳನ್ನು ಕುರಿತು, ನೀರಿನ ಮಹಿಮೆಯ ಬಗ್ಗೆ ಮಾಡಿದ ಅಮೋಘ ಪ್ರವಚನವನ್ನು ನೆನೆದರೆ ಈಗಲೂ ಮೈನವಿರೇಳುತ್ತದೆ. ಇನ್ನೊಮ್ಮೆ ಸೊರಬದಲ್ಲಿ ಅವಧಾನಿಸಲು ರಾತ್ರಿಯ ಬಸ್ಸಿನಲ್ಲಿ ಹೊರಟಾಗ ಸುಪ್ರಸಿದ್ಧ ವಿದ್ವಾಂಸರಾದ ರಂಗನಾಥ ಶರ್ಮರೊಡನೆ ಲಂಕಾ ಕೃಷ್ಣಮೂರ್ತಿಯವರು ಸಂಸ್ಕೃತ – ಕನ್ನಡ ಭಾಷಾ ಶ್ಲೇಶದ ತೊಡಕಿನ ಶ್ಲೋಕವೊಂದರ ಅರ್ಥೈಸುವಿಕೆಯ ಚರ್ಚೆಗೆ ತೊಡಗಿದರು. ಇಡಿಯ ರಾತ್ರಿ ಆ ಚರ್ಚೆ ಸಾಗಿ ಬೆಳಗ್ಗೆ ಸೊರಬ ಸೇರಿದಾಗ ಕೃಷ್ಣಮೂರ್ತಿಯವರ ಅರ್ಥನಿರೂಪಣೆಯೇ ಸಿದ್ಧಾಂತವಾಗಿ ನಿಂತಿತು.

            ಇಂಥದ್ದೇ ಒಂದು ಪದ್ಯಾರ್ಥ ನಿರೂಪಣೆಯು ಮತ್ತೊಂದು ಪ್ರಯಾಣದಲ್ಲಿ ಸಾಗಿತು. ಆಗ ಬಂದದ್ದು ಶ್ರೀ ಶಂಕರ ಭಗವತ್ಪಾದರಶಿವಾನಂದ ಲಹರಿಯಅಂಕೋಲಂ ನಿಜ ಬೀಜ ಸಂತತೀ…..” ಎಂಬ ಶ್ಲೋಕದ ಅತ್ಯದ್ಭುತ ಅಂತರಾರ್ಥಗಳ ವಿಶ್ಲೇಷಣೆ. ಅವಧಾನಗಳಲ್ಲಿ ಸಮಸ್ಯಾಪೂರಣಗಳಲ್ಲಿಯಾಗಲಿ, ವರ್ಣನಾದಿ ಪದ್ಯಗಳಲ್ಲಿಯಾಗಲಿ ಅವುಗಳ ಅಂತಸ್ವಾರಸ್ಯವನ್ನು ಅವಧಾನಿಗಿಂತ ಚೆನ್ನಾಗಿ ಬಿಡಿಸಿ ಹೊರಗಿಡುವ ವ್ಯಾಖ್ಯಾಕೌಶಲದಲ್ಲಿ ಇವರು ಅಸಮಾನರು. ಆದರೆ ಇವರ ವಿವರಣೆ ಹಿಸುಕಿ, ಹಿಂಜಿ ಬಲವಂತವಾಗಿ ಹೊರಡಿಸುವ ಕಾವ್ಯಹಿಂಸೆಯಲ್ಲ; ಆಳದ ಅಂತರ್ದೃಷ್ಟಿಯ ರಸ ಸಾಕ್ಷಾತ್ಕಾರ. ಇಂಥ ಬಲದಿಂದಾಗಿಯೆ ಇವರ ಚಿತ್ರಕವಿತ್ವ ಲೋಕೋತ್ತರವೆನಿಸುತ್ತದೆ. ಸಮಸ್ಯಾ ಪರಿಹಾರವು ಅತಿಪ್ರಬುದ್ಧವೆನಿಸಿದೆ. ಇವರ ಈ ಪರಿಯ ವ್ಯಾಖ್ಯಾ ವಿಶೇಷತೆಯಿಂದಾಗಿಯೇಅದ್ಭುತ ಶಿಲ್ಪಂಲೋ ಆರ್ಷ ಸಂದೇಶಂಎಂಬ ಶಾಕುಂತಲ ನಾಟಕದ ಅಂತರ್ದರ್ಶನ ಲೇಖನ ರೂಪದಿಂದ ಹೊಮ್ಮಿತು. ಕಾಳಿದಾಸನದೇ ಮತ್ತೊಂದು ಮಹಾಕೃತಿ ರಘುವಂಶಕ್ಕೆ ಇವರು ನೀಡುತ್ತಿದ್ದ ವಿವರಣೆಗಳಾಗಲಿ, ತಿಕ್ಕನನ ಪದ್ಯಗಳಿಗೆ ಕೊಡುತ್ತಿದ್ದ ಹೊಸ ನೋಟವಾಗಲಿ, ವೇದ ಮಂತ್ರಗಳಿಗೆ ಒದಗಿಸುತ್ತಿದ್ದ ಭಾಷ್ಯ ವಿಶೇಷವಾಗಲಿ, ಶ್ರೀಮದ್ಭಾಗವತದಲ್ಲಿ ತಾವೇ ಕಂಡುಹಿಡಿದು ಪ್ರಚುರಿಸಿದ ಶ್ರೀಕೃಷ್ಣ್ನನಪ್ರಥಮಗೀತೆಯಾಗಲೀ ಪ್ರತ್ಯೇಕ ಲೇಖನಗಳನ್ನೇ ಬಯಸುವ ಮಹತ್ವದ ಸಿದ್ಧಿಗಳಾಗಿವೆ. ಈ ದಾರಿಯಲ್ಲಿ ನಡೆದ ಇವರ ಪ್ರಾಯಶಃ ಕಡೆಯ ಬರಹ ಗಾಯತ್ರಿ ಮಂತ್ರಕ್ಕೆ ಸಂಬಂಧಿಸಿದ ಲೇಖನಮಾಲೆ. ಇವುಗಳಲ್ಲದೆ ಕೃಷ್ಣಮೂರ್ತಿಯವರುಧರ್ಮಪ್ರಭಪತ್ರಿಕೆಗೆ ಬರೆಯುತ್ತಿದ್ದ ಸಂಪಾದಕೀಯಗಳೂ, ಓದುಗರ ಪ್ರಶ್ನೆಗಳಿಗೆ ಒದಗಿಸುತ್ತಿದ್ದ ಉತ್ತರಗಳೂ ಮಹಾಜೀವವೊಂದರ ಆಳದ ಅಂತರ್ವಾಣಿಯೇ ಸರಿ.

               ಲಂಕಾ ಕೃಷ್ಣಮೂರ್ತಿಯವರು ಹೆಚ್ಚು ಬರೆದವರಲ್ಲ. ನಿಚ್ಚ ಬರೆದವರಲ್ಲ. ಮೆಚ್ಚಿಸಲು ಬರೆಯುವ ಅಭ್ಯಾಸವಿರಲಿಲ್ಲ. ಆದರೆ ಇಚ್ಛೆಯೊಪ್ಪಿ ಬಗೆ ಬಿಚ್ಚಿದರೆ ಕಣ್ಣಿಗೆ ಕಾಡಿಗೆಯನ್ನು ತೀಡಿ ತಿದ್ದಿ ರೂಪಿಸುವಂತೆ ಜಗತ್ತಿಗೆ ಜ್ಞಾನಾಂಜನವನ್ನು ನೀಡುವಂಥದ್ದು ಇವರ ಬರವಣಿಗೆ. ತಮ್ಮ ಬಾಳಿನಲ್ಲಿ ಹೇಗೋ ಹಾಗೆಯೇ ಬರಹದಲ್ಲಿಯೂ ಪ್ರಸಾದ ಗಂಭೀರವಾಗಿ ರಮ್ಯೋಜ್ವಲ ರೀತಿಯಲ್ಲಿ ಅಭಿವ್ಯಕ್ತಿ ಸಾಗುತ್ತಿತ್ತು. ಲೇಪಾಕ್ಷಿಯನ್ನು ಆಧರಿಸಿದತ್ಯಾಗಶಿಲ್ಪಮುಇವರ ರಮಣೀಯ ಅಖಂಡ ಖಂಡ ಕಾವ್ಯ. ಶ್ರೀವಿಲಾಸಮು, ದಾನಯಜ್ಞಮು, ಕೊಡೆಯಗೋಪಾಲ ಮುಂತಾದವು ಇವರ ಇನ್ನಿತರ ಪ್ರಕಟಿತ ಕಾವ್ಯ – ಕಾದಂಬರಿಗಳು.

                 ಇನ್ನು ಅವಧಾನಲೋಕಲೋಜ್ಜೀವನದಲ್ಲಿ ಕೃಷ್ಣಮೂರ್ತಿಯವರು ಪಾಲ್ಗೊಂಡ ಬಗೆಯಂತೂ ಒಂದು ಗ್ರಂಥದಷ್ಟಾಗುತ್ತದೆ. ಅವರಿಲ್ಲದ ಅವಧಾನ ಸಭೆ ಎಂದೂ ಅಪೂರ್ಣ. ನಿಷೇಧಾಕ್ಷರಿಯನ್ನು ಅವರಂತೆ ನಿರ್ವಸಬಲ್ಲವರಾರು? ಅಲ್ಲದೆ ಅವರಿಗೆ ನಿಯಮನಿಷ್ಠುರತೆ ಎಷ್ಟೋ, ರಸೋದಾರತೆಯೂ ಅಷ್ಟ್ವೆ, ಉದ್ದಂಡರಾದ ಅವಧಾನಿಯ ತೊದಲ್ನುಡಿಗೂ ಅವರು ಹರ್ಷಿಸಿ ಅಸಾಧುತ್ವವನ್ನೂ ಗಮನಿಸಿ ಕೃಷ್ಣಮೂರ್ತಿ ಕೂಡಲೇ ಆಶೀರ್ವದಿಸಿದವರೇ, ಕೃಷ್ಣಮೂರ್ತಿಯವರ ಸತ್ಯನಿಷ್ಠೆ ಮತ್ತು ಗುಣಗ್ರಹಣಗಳೆರಡೂ ಅಸಮಾನ. ಸಂಸ್ಕೃತಾಂದ್ರ ಕರ್ಣಾಟಾವಧಾನ ವೇದಿಕೆಗಳಲ್ಲಿ ಅವರಿಗಿದ್ದ ಸೌಲಭ್ಯ ಅನ್ಯಾದೃಶ. ಈ ಕಲಾರಸಿಕತೆ ಸಂಗೀತಕ್ಕೂ, ಚಿತ್ರಕಲೆಗೂ ಹರಿದಿತ್ತು. ಲಂಕಾ ಕೃಷ್ಣಮೂರ್ತಿಯವರು ಒಳ್ಳೆಯ ಸಂಗೀತವನ್ನು ಉತ್ತೇಜಿಸಿ, ಆಸ್ವಾದಿಸಿದವರಲ್ಲದೆ ಸ್ವಯಂ ಅರಿತು ಹರಿಕತೆಗಳನ್ನೂ ಮಾಡಿದವರು. ಅವರು ಒಳ್ಳೆಯ ಚಿತ್ರಕಾರರು ಕೂಡ.ವೈದ್ಯಕೀಯದಲ್ಲಿಯೂ ಅವರಿಗೆ ಅಭಿರುಚಿ ಇದ್ದಿತು. ಇನ್ನು ಸನಾತನಧರ್ಮಸಂರಕ್ಷಣ ಸಮಿತಿಯ ದ್ವಾರಾ ಅವರು ಮಾಡಿದ ಕೆಲಸಗಳು ನಿರುಪಮಾನ. ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಅವರು ಶುದ್ಧಿ, ವಿನಯ, ಶ್ರದ್ಧೆಗಳ ತ್ರಿವೇಣಿಯನ್ನೇ ಹರಿಸಿದರು. ಸಂಸ್ಥೆಯ ಕೆಲಸವೆಂದರೆ ಕಾಫಿಯ ಲೋಟಗಳನ್ನು ತಾವೇ ತೊಳೆದಿಡುವ ಮಟ್ಟಿಗೆ ಹಮ್ಮು ಬಿಮ್ಮಿಲ್ಲದೆತೊಡಗಿಕೊಳ್ಳುತ್ತಿದ್ದರು.

                   ಪದವಿ, ಪ್ರತಿಷ್ಠೆ, ಪೂಜೆ, ಪುರಸ್ಕಾರ, ಧನ, ಕನಕಗಳ ಹಂಬಲವಿಲ್ಲದೆ ಭಗವದ್ಗೀತೆಯ ದೈವೀ ಸಂಪತ್ತಿನ (ಅಧ್ಯಾಯ XVI – 1,2,3) ಆದರ್ಶ ಪ್ರತಿನಿಧಿಯೆಂಬಂತೆ ಅವರಿದ್ದರು. ಅವರ ನೈಜವಾದ ಸಜ್ಜನಿಕೆ ಯಾವ ಮಟ್ಟದ್ದೆಂದರೆ ಶ್ರೀ ಬಸವಣ್ಣನವರು ಹರಳಯ್ಯನಿಗೆಶರಣುಶರಾಣಾರ್ಥಿಎಂದು ನಮ್ರತೆಯಿಂದ ಹೇಳಿದಂಥದ್ದು. ದೂರವಾಣಿಯಲ್ಲಿ ಯಾರೇ ಅವರೊಡನೆ ಮಾತನಾಡಿದರೂ ಮೊದಲನಮಸ್ಕಾರ ಸಾರ್ಹಾಗೂ ಕಡೆಯನಮಸ್ಕಾರ ಸರ್! ನಮಸ್ಕಾರ!ಎಂಬ ಉಕ್ತಿಗಳು ಅವರದೇ ಸೊತ್ತು. ನಾವೆಷ್ಟು ತಗ್ಗಿದರೂ, ನಮಗಿಂತ ತಗ್ಗಬಲ್ಲ ವಿನಯಶೀಲತೆ ಅವರದು. ಆದರೆ ಈ ಗುಣವು ಅವರ ಪ್ರಾಮಾಣಿಕತೆಯಿಂದಾಗಿ ಸಹಜವಾಗಿರುತ್ತಿತ್ತಲ್ಲದೆ ಎಂದೂ ಕೃತಕವೆನಿಸುತ್ತಿರಲಿಲ್ಲ. ಇನ್ನು ತಮ್ಮ ಇತಿ – ಮಿತಿಗಳ ವಿಚಾರದಲ್ಲಂತೂ ಎಣಿಕೆಯಿಲ್ಲದ ಆತ್ಮಸಮರ್ಪಣಭಾವವಿತ್ತು. ತಾವು ತಿಳಿಯದ ಸಂಗತಿಯನ್ನು ಅದೆಷ್ಟು ಪ್ರಾಂಜಲವಾಗಿ ಹೇಳುತ್ತಿದ್ದರೆಂದರೆ ಆ ಪಾರದರ್ಶಕ ಚಾರಿತ್ರ್ಯಕ್ಕೆ ಹೋಲಿಕೆಯೇ ಇಲ್ಲ. ಆ ನಡೆವಳಿಕೆಯ ಮುಂದೆ ಸ್ಫಟಿಕವೂ ಮಂಜುಮಂಜು, ಗಂಗೋದಕವೂ ಮಬ್ಬು ಮಬ್ಬು, ಅನ್ಯರ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಅವರೆಂದೂ ಅಡ್ಡಿಯಾಗಿರಲಿಲ್ಲ. ಆದರೆ ಆ ಧರ್ಮಕ್ಕೆ ಸೊಪ್ಪು ಹಾಕುತ್ತಿರಲಿಲ್ಲ.

            ಶ್ರೀ ಲಂಕಾ ಕೃಷ್ಣಮೂರ್ತಿಯವರಿಗೆ ಪ್ರಿಯವೂ, ಆರಾಧ್ಯವೂ ಆದ ಮುಖ್ಯ ತತ್ವಗಳೆಂದರೆ ಸಾಮಾನ್ಯ ಧರ್ಮ(ಅಹಿಂಸೆ, ಸತ್ಯ, ಆಸ್ತೇಯ, ಶುಚಿತ್ವ, ಅಂತರಂಗ ಬಹಿರಂಗ ನಿಗ್ರಹ, ದಯೆ, ದಾನ, ಸಂತೃಪ್ತಿ ಮುಂತಾದ ಮೂಲಭೂತ ಮಾನವೀಯ ಮೌಲ್ಯಗಳು), ಋತ – ಧರ್ಮಗಳ ದರ್ಶನ, ಅದ್ವೈತ ವೇದಾಂತದ ಸಾರ್ವರ್ತಿಕ ಸಮೈಕ್ಯ ಪ್ರಜ್ಞೆ, ವ್ಯಾಸ – ವಾಲ್ಮೀಕಿಗಳ ಮಹಾಕಾವ್ಯ ದೀಪ್ತಿ, ಕಾಳಿದಾಸ ಮತ್ತು ತಿಕ್ಕನರ ಜೀವನ ಸೌಂದರ್ಯ ಸಮನ್ವಯ ಹಾಗೂ ಇಷ್ಟ ದೈವವಾದ ಶ್ರೀಕೃಷ್ಣನ ರೂಪದಲ್ಲಿ ಉಪಾಸನೆ ಮಾಡಿದ ಪರಭಕ್ತಿಯ ಅನುಸಂಧಾನಗಳು. ಇವೇ ಅವರ ಬಾಳನ್ನು ನಡೆಸಿದವು. ಅವರ ಕಡೆಯ ದಿನಗಳಲ್ಲೊಮ್ಮೆ ನಾನು ನನ್ನ ಅವಧಾನವೊಂದಕ್ಕೆ ಅವರನ್ನು ಕರೆತರುತ್ತಿದ್ದಾಗ ಅವರಾಗಿ ಹೀಗೆ ಹೇಳಿದ್ದರು.ಸಾರ್! ನನಗೀಗ ಜಗತ್ತೆಲ್ಲ ಈಶ್ವರನ ಲೀಲೆಯೆಂದು ಕಾಣುತ್ತಿದೆ. ಎಲ್ಲಿಯೂ ವೈಷಮ್ಯ ವಿರೋಧಗಳ, ಭೇದಖೇದಗಳ ವಿಕಾರವಿಲ್ಲ. ಸರ್ವತ್ರ ಆನಂದ ತುಂಬಿದೆ. ನನಗೀಗ ಜಗತ್ತು ಕರ್ತವ್ಯದಂತೆ ಭಾರವಾಗಿಲ್ಲ, ಲೀಲೆಯಂತೆ ಹಗುರಾಗಿದೆ. ಎಲ್ಲ ಬ್ರಹ್ಮವಾಗಿದೆ!ಇದು ಅವರಿಗಾದ ಸಾಕ್ಷಾತ್ಕಾರವೆಂದೇ ನಾನು ನಂಬಿದ್ದೇನೆ. ಅವರ ಬಗ್ಗೆ ನಾನೊಮ್ಮೆ ಅವಧಾನದಲ್ಲಿ ಹೇಳಿದ ಸಂಸ್ಕೃತ ಶ್ಲೋಕವೊಂದು ಇಲ್ಲಿ ಸ್ಮರಣೀಯ.

ಸೌಜನ್ಯಾಯತನಂ ಸುಧೀಸಹೃದಯಂ ಸಾಹಿತ್ಯ ಸತ್ವೇಸ್ಥಿತಂ

ನಿರ್ಲೇಪಕ್ರಿಯಾಯನ್ವಿತಂ ನಿಜಗುಣೈರ್ನವ್ಯಂ ನತಂ ನಿಸ್ತುಲಂI

ಆರ್ಷಶ್ರೀಕವಿತೇವ ಬಾಹ್ಯಸರಲಂ ಭೂಮಾನಮಂತಃಪ್ರಭಂ

ಲಂಕಾಂಕಂ ತ್ವಕಲಂಕಮೇವ ಕಲೆಯೇ ಕೃಷ್ಣಂ ಶುಚಿಕ್ಯಾಪಕಂII

(ಸೌಜನ್ಯದ ತವರಾದ, ಸಹೃದಯ ವಿದ್ವಾಂಸನೆಸಿದ, ಸಾಹಿತ್ಯದ ನೆಲೆಯಲ್ಲಿ ನಿಂತ, ನಿರ್ಲೇಪಕರ್ಮಯೋಗಿಯಾಗಿ ನೈಜಗುಣಗಳಿಂದ ಜಗದ ಗೌರವ ಪಡೆದೂ ನಿರುಪಮಾನ ವಿನಯದಿಂದ ಬೆಳಗಿದ, ವೇದವಾಣಿಯಂತೆ ಹೊರಗೆ ಸರಳವಾಗಿದ್ದು ಒಳಗೆ ಭವ್ಯತೆಯ ಬೆಳಕಾದ, ಅಕಲಂಕ ಚರಿತ್ರೆಯ, ಶುಚಿಜೀವನದ ಲಂಕಾಕೃಷ್ಣಮೂರ್ತಿಗಳಿಗೆ ನಮನ.)

ಮಹಾಕವಿ ಷೇಕ್ ಸ್ಪಿಯರ ಮಾತಿನಲ್ಲಿ ಹೇಳುವುದಾದರೆ:

“His life was gentle and the elements so mixed in him, that nature might stand up and say to all the 

‘World This was a Man’ !”