ಶ್ರೀಮದ್ಭಾಗವತ ಮಹಾತ್ಮ್ಯ 

                                ಲೇಟ್ ಶ್ರೀ ಲಂಕಾ ಕೃಷ್ಣಮೂರ್ತಿ

  ಮೂರನೇ ಅಧ್ಯಾಯ

ಭಕ್ತಿ ಜ್ಞಾನ ವೈರಾಗ್ಯಗಳನ್ನು ಸ್ಥಾಪಿಸುವ ಸಲುವಾಗಿ ಪ್ರಯತ್ನಪಟ್ಟು ಶುಕಮಹರ್ಷಿಯಿಂದ ಹೇಳಲ್ಪಟ್ಟ ಭಾಗವತಶಾಸ್ತ್ರದ ಪ್ರಭೆಯನ್ನು ಬೀರುತ್ತ ನಾನು ಜ್ಞಾನ ಯಜ್ಞವನ್ನು ಮಾಡುವೆನು. ನಾನು ಈ ಯಜ್ಞವನ್ನು ಯಾವ ಸ್ಥಳದಲ್ಲಿ ಮಾಡಬೇಕೆಂಬುದನ್ನು ತಿಳಿಸಿ. ಭಾಗವತದ ಮಹಿಮೆಯನ್ನು ತಿಳಿಸಿ. ವೇದಪಾರಂಗತರಾದವರು ಭಾಗವತವನ್ನು ಎಷ್ಟುದಿನ ವಾಚನ ಮಾಡಬೇಕು? ಇದರ ವಿಧಿಯೆಲ್ಲವನ್ನೂ ನನಗೆ ತಿಳಿಸಿ.

ಕುಮಾರರು ಹೇಳಿದರು

ನಾರದನೇ, ನೀನು ವಿವೇಕಿಯು, ವಿನಯಶೀಲನೂ ಆಗಿರುವುದರಿಂದ ನಿನಗೆ ಇದನ್ನೆಲ್ಲಾ ತಿಳಿಸುತ್ತೇವೆ ಕೇಳು. ಗಂಗಾದ್ವಾರದ ಬಳಿ ಆನಂದವೆಂಬ ನದೀ ತೀರವಿದೆ. ಅಲ್ಲಿ ನಾನಾ ಋಷಿಗಳು ವಾಸ ಮಾಡುತ್ತಾರೆ. ದೇವತೆಗಳೂ ಸಿದ್ಧರೂ ಆ ಸ್ಥಳವನ್ನು ಸೇವಿಸುತ್ತಾರೆ. ಅದು ನಾನಾ ವೃಕ್ಷಗಳಿಂದಲೂ ಬಳ್ಳಿಗಳಿಂದಲೂ ಹೊಸದಾದ ನುಣುಪಾದ ಮರಳಿನಿಂದಲೂ  ಶೋಭಿತವಾಗಿದೆ. ಅದು ಏಕಾಂತವೂ ರಮ್ಯವೂ ಆದ ಪ್ರದೇಶ. ಚಿನ್ನದ ಪದ್ಮಗಳ ಸೌರಭದಿಂದ ಮನೋಹರವಾಗಿದೆ. ಅಲ್ಲಿರುವ ಪ್ರಾಣಿಗಳಲ್ಲಿ ಸಹಜವಾದ ವೈರವೂ ಇಲ್ಲ. ನೀನು ಸುಲಭವಾಗಿ ಅಲ್ಲಿ ಜ್ಞಾನ ಯಜ್ಞವನ್ನು ಮಾಡು. ಅಲ್ಲಿ ವಾಚನ ಮಾಡಿದ ಭಗವಂತನ ಕಥೆ ಅಪೂರ್ವವಾದ ರಸದಿಂದ ಮನೋಹರವಾಗುತ್ತದೆ. ಭಕ್ತಿಯ ದುರ್ಬಲವಾದ ಮುದಿತನದಿಂದ ಜೀರ್ಣವಾದ ಶರೀರಗಳುಳ್ಳ ತನ್ನ ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಬರುವಳು. ಎಲ್ಲಿ ಭಗವಂತನ ಕೀರ್ತನೆ ನಡೆಯುತ್ತದೆಯೋ ಅಲ್ಲಿಗೆ ಭಕ್ತಿಜ್ಞಾನ ವೈರಾಗ್ಯಗಳು ಆಗಮಿಸುವುವು. ಕಥಾ ಶಬ್ದವನ್ನು ಕೇಳಿ ಆ ಮೂವರಲ್ಲಿಯೂ ಯೌವನ ಮೂಡುವುದು.

ಸೂತನು ಹೇಳಿದನು

ಹೀಗೆ ಹೇಳಿ ನಾರದನ ಜೊತೆಯಲ್ಲಿ ಕುಮಾರರು ಕಥಾಪಾನಕ್ಕಾಗಿ ಗಂಗಾತಟಕ್ಕೆ ಶೀಘ್ರವಾಗಿ ಆಗಮಿಸಿದರು. ಅವರು ಅಲ್ಲಿಗೆ ಬಂದ ಕೂಡಲೇ ಭೂಲೋಕದಲ್ಲೂ, ದೇವಲೋಕದಲ್ಲೂ, ಬ್ರಹ್ಮಲೋಕದಲ್ಲೂ ಕೋಲಾಹಲವುಂಟಾಯಿತು. ಶ್ರೀಭಾಗತವೆಂಬ ಅಮೃತವನ್ನು ಪಾನ ಮಾಡಲು ರಸಲಂಪಟರಾದವರೂ, ಅವರಲ್ಲೂ ಮೊದಲು ವಿಷ್ಣುಭಕ್ತರೂ, ಓಡಿಬಂದರು. ಭೃಗು, ವಸಿಷ್ಠ, ಚ್ಯವನ, ಗೌತಮ, ಮೇಧಾತಿಥಿ, ದೇವಲ, ದೇವರಾತ, ಪರಶುರಾಮ, ವಿಶ್ವಾಮಿತ್ರ, ಶಾಕಲ, ಮಾರ್ಕಂಡೇಯ, ಆತ್ರೇಯ, ಪಿಪ್ಪಲಾದ, ಯೋಗೇಶ್ವರರಾದ ವ್ಯಾಸ ಪರಾಶರರೂ, ಛಾಯಾಶುಕನೂ, ಜಾಜಲಿ, ಜಹ್ನು ಮುಂತಾದ ಮುನಿಗಳೆಲ್ಲರೂ ಅತಿಪ್ರೇಮದಿಂದ ಪುತ್ರಕಲತ್ರ ಶಿಷ್ಯ ಸಮೇತರಾಗಿ ಅಲ್ಲಿಗೈತಂದರು.

ಉಪನಿಷತ್ತುಗಳೂ, ವೇದಗಳೂ, ಮಂತ್ರಗಳೂ, ತಂತ್ರಗಳೂ, ಉಳಿದ ಹದಿನೇಳು ಪುರಾಣಗಳೂ, ಆರು ಶಾಸ್ತ್ರಗಳೂ, ಗಂಗಾದಿ ನದಿಗಳೂ, ಪುಷ್ಕರ ಮುಂತಾದ ಸರಸ್ಸುಗಳೂ, ಕ್ಷೇತ್ರಗಳೂ, ದಿಕ್ಕುಗಳೂ, ದಂಡಕ ಮುಂತಾದ ಅರಣ್ಯಗಳೂ, ಪರ್ವತಗಳೂ,  ಎಲ್ಲಾ ರೂಪಗಳನ್ನು ಧರಿಸಿ ಅಲ್ಲಿಗೆ ಬಂದವು. ಅಲ್ಲಿಗೆ ಯಾವ ಹಿರಿಯರು ಬರಲಿಲ್ಲವೋ ಅವರನ್ನು ಭೃಗುಮಹರ್ಷಿಯು ಗೌರವದಿಂದ ಕರೆದುಕೊಂಡು ಬಂದನು. ನಾರದನು ಕೊಟ್ಟ ಉತ್ತಮವಾದ ಆಸನದಲ್ಲಿ ಸನಕಾದಿ ಕುಮಾರರು ದೀಕ್ಷಿತರಾಗಿ ಕುಳಿತುಕೊಂಡರು. ಅವರನ್ನು ಎಲ್ಲರು ನಮಸ್ಕರಿಸಿದರು. ಅವರು ಕೃಷ್ಣಧ್ಯಾನದಲ್ಲಿ ಮುಳುಗಿದ್ದರು. ವೈಷ್ಣವರೂ, ವಿರಕ್ತರೂ, ಸನ್ಯಾಸಿಗಳೂ, ಬ್ರಹ್ಮಚಾರಿಗಳೂ ಅವರ ಮುಂದೆ ಕುಳಿತರು. ಅವರ ಎದುರಿಗೆ ನಾರದನನು ಕುಳಿತುಕೊಂಡನು. ಒಂದು ಕಡೆಯಲ್ಲಿ ಋಷಿಗಳೂ, ಇನ್ನೊಂದು ಕಡೆ ದೇವತೆಗಳೂ ಕುಳಿತುಕೊಂಡರು. ವೇದಗಳೂ, ಉಪನಿಷತ್ತುಗಳೂ ಒಂದು ಕಡೆ ಕುಳಿತುಕೊಂಡವು. ತೀರ್ಥಗಳು ಒಂದುಕಡೆ ಕುಳಿತುಕೊಂಡವು. ಹೆಂಗಸರು ಒಂದು ಕಡೆ ಕುಳಿತುಕೊಂಡರು. ಜಯಕಾರಗಳೂ, ನಮಶ್ಶಬ್ಧಗಳೂ, ಶಂಖ ಧ್ವನಿಗಳೂ ಎದ್ದವು. ಅರಸಿನ, ಕುಂಕುಮ, ಮುಂತಾದ ಮಂಗಳ ದ್ರವ್ಯಗಳೂ, ಅರಳೂ, ಹೂಗಳೂ ಚೆಲ್ಲಲ್ಪಟ್ಟವು. ಕೆಲವರು ದೇವನಾಯಕರು ವಿಮಾನಗಳಲ್ಲಿ ಕುಳಿತು ಕಲ್ಪವೃಕ್ಷದ ಹೂಗಳನ್ನು ಎಲ್ಲರ ಮೇಲೂ ಸೂಸಿದರು. ಆಗ ಎಲ್ಲರೂ ಏಕಾಗ್ರಚಿತ್ತರಾಗಿರುವಾಗ, ಕುಮಾರರು ಶ್ರೀಮದ್ಭಾಗವತದ ಮಾಹಾತ್ಮ್ಯವನ್ನು ನಾರದನಿಗೆ ಹೀಗೆಂದು ಸ್ಪಷ್ಟವಾಗಿ ಹೇಳಿದರು.

ಕುಮಾರರು ಹೇಳಿದರು

ಯಾವುದನ್ನು ಕೇಳಿದ ಮಾತ್ರಕ್ಕೆ ಮೋಕ್ಷವು ಕರತಲಾಮಲಕವಾಗುವುದೋ ಅಂತಹ ಶುಕನಿಂದ ಹೇಳಲ್ಪಟ್ಟ ಭಾಗವತದ ಮಹಿಮೆಯನ್ನು ನಾವೀಗ ಹೇಳುತ್ತಿದ್ದೇವೆ. ಯಾವುದನ್ನು ಕೇಳಿದ ಕೂಡಲೇ ಶ್ರೀಮಹಾವಿಷ್ಣುವು ಮನಸ್ಸಿನಲ್ಲಿ ನೆಲೆಗೊಳ್ಳುವನೋ ಅಂತಹ ಭಾಗವತ ಪುರಾಣದ ಕಥೆ ಎಲ್ಲರಿಂದಲೂ ಸದಾ ಸೇವಿಸಲ್ಪಡಲು ಯೋಗ್ಯವಾದುದು. ಇದೊಂದೇ ಎಲ್ಲರಿಂದಲೂ ಸದಾ ಸೇವಿಸಲ್ಪಡಲು ಯೋಗ್ಯವಾದುದು. ಆ ಭಾಗವತವನ್ನು ಶುಕಮಹರ್ಷಿಯು ಪರೀಕ್ಷಿನ್ಮಹಾರಾಜನಿಗೆ ಹೇಳಿದನು. ಅದರಲ್ಲಿ ಹದಿನೆಂಟು ಸಾವಿರ ಶ್ಲೋಕಗಳಿವೆ. ಅದನ್ನು ಹನ್ನೆರಡು ಸ್ಕಂಧಗಳಾಗಿ ವಿಭಾಗಿಸಿದ್ದಾರೆ. ಎಲ್ಲಿಯವರೆಗೂ  ಭಾಗವತ ಶ್ರವಣವನ್ನು ಕ್ಷಣಕಾಲವಾದರೂ ಮಾಡದೆ ಇರುತ್ತಾನೋ ಅಲ್ಲಿಯವರೆಗೂ ಆ ಮನುಷ್ಯನು ಅಜ್ಞಾನದಿಂದ ಸಂಸಾರ ಚಕ್ರದಲ್ಲಿ ತಿರುಗುತ್ತಿರುತ್ತಾನೆ. ಅನೇಕ ವೇದಗಳೇಕೆ? ಶಾಸ್ತ್ರಗಳೇಕೆ? ಭ್ರಮವನ್ನುಂಟುಮಾಡುವ ಅನೇಕ ಪುರಾಣಗಳೇಕೆ? ಮುಕ್ತಿಯನ್ನು ಸಾಧಿಸಲು ಭಾಗವತ ಶಾಸ್ತ್ರವೊಂದು ಸಾಕು. ಯಾವ ಮನೆಯಲ್ಲಿ ನಿತ್ಯವೂ ಭಾಗವತದ ಅಧ್ಯಯನ ನಡೆಯುತ್ತಿರುತ್ತದೆಯೋ ಆ ಮನೆಯೇ ಒಂದು ಪುಣ್ಯ ಕ್ಷೇತ್ರ. ಅಲ್ಲಿರುವವರ ಪಾಪಗಳು ನಶಿಸಿ ಹೋಗುವುವು. ಒಂದು ಸಾವಿರ ಅಶ್ವಮೇಧಯಾಗಗಳು, ನೂರು ವಾಜಪೇಯ ಯಾಗಗಳೂ ಭಾಗವತದ ಹರಿನಾರನೇ ಒಂದು ಭಾಗಕ್ಕೂ ಸಮಾನವಲ್ಲ. ಎಲೈ ತಪೋಧನರೇ, ನರರು ಎಲ್ಲಿಯವರೆಗೂ ಶ್ರೀಮದ್ಭಾಗವತ ಶ್ರವಣವನ್ನು ಚೆನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರೆಗೂ ಅವರ ದೇಹಗಳಲ್ಲಿ ಪಾಪಗಳಿರುತ್ತವೆ. ಗಂಗೆಯಾಗಲಿ, ಗಯೆಯಾಗಲಿ, ಕಾಶಿಯಾಗಲಿ, ಪುಷ್ಕರವಾಗಲಿ, ಪ್ರಯಾಗವಾಗಲಿ, ಭಾಗವತ ಕೊಡುವಷ್ಟು ಫಲವನ್ನು ಕೊಡಲು ಸಮರ್ಥವಲ್ಲ. ನಿನಗೆ ಉತ್ತಮ ಗತಿ ಬೇಕಾದರೆ ನಿನ್ನ ಬಾಯಿಯಿಂದ ಭಾಗವತದ ಅರ್ಧ ಶ್ಲೋಕವನ್ನು ಅಥವಾ ಕಾಲು ಶ್ಲೋಕವನ್ನಾದರೂ ಪ್ರತಿ ದಿನ ಓದು. ವೇದಗಳ ಆದಿಯಾದ ಓಂಕಾರ, ವೇದಮಾತೆಯಾದ ಗಾಯತ್ರಿ, ಪುರುಷಸೂಕ್ತ, ವೇದಗಳು, ಭಾಗವತ, ದ್ವಾದಶಾಕ್ಷರಮಂತ್ರ, ದ್ವಾದಶಾತ್ಮನಾದ ಸೂರ್ಯನು, ಪ್ರಯಾಗ, ಸಂವತ್ಸರಾತ್ಮಕವಾದ ಕಾಲ, ಬ್ರಾಹ್ಮಣರು, ಅಗ್ನಿಹೋತ್ರ, ಗೋವು, ದ್ವಾದಶಿ, ತುಲಸಿ, ವಸಂತಋತು, ಪುರುಷೋತ್ತಮನಾದ ಶ್ರೀ ಮಹಾವಿಷ್ಣು, ಇವುಗಳಲ್ಲಿ ಜ್ಞಾನಿಗಳು ತತ್ವದೃಷ್ಟಿಯಿಂದ ಭೇದಭಾವವನ್ನು ಮಾಡುವುದಿಲ್ಲ. ಯಾರು ಭಾಗವತವನ್ನು ಅರ್ಥ ತಿಳಿದು ಸದಾ ಪಾರಾಯಣ ಮಾಡುವರೋ ಅವರು ಕೋಟಿ ಜನ್ಮಗಳಲ್ಲಿ ಮಾಡಿದ್ದ ಪಾಪವೆಲ್ಲಾ ನಶಿಸುವುದು. ಇದರಲ್ಲಿ ಸಂಶಯವಿಲ್ಲ. ಯಾರು ಪ್ರತಿದಿನ ಅರ್ಧ ಶ್ಲೋಕವನ್ನಾಗಲೀ ಕಾಲುಶ್ಲೋಕವನ್ನಾಗಲಿ ಭಾಗವತ ಪಾರಾಯಣ ತಪ್ಪದೆ ಮಾಡುವರೋ ಅವರಿಗೆ ರಾಜಸೂಯ ಯಾಗ ಮತ್ತು ಅಶ್ವಮೇಧ ಯಾಗ ಮಾಡಿದ ಪುಣ್ಯ ಬರುವುದು. ನಿತ್ಯವೂ ಭಾಗವತ ಪಾರಾಯಣ ಮಾಡುವುದು, ವಿಷ್ಣು ಧ್ಯಾನ ಮಾಡುವುದು, ತುಲಸೀ ಪೋಷಣಗಳನ್ನು ಮಾಡುವುದು, ಗೋ ಸೇವೆ ಮಾಡುವುದು ಇವೆಲ್ಲಾ ಒಂದಕ್ಕೊಂದು ಸಮಾನ. ಮರಣ ಕಾಲದಲ್ಲಿ ಯಾರು ಭಾಗವತದ ವಾಕ್ಯವನ್ನು ಕೇಳುವರೋ ಅವರಿಗೆ ಗೋವಿಂದನು ಸಂತುಷ್ಟನಾಗಿ ವೈಕುಂಠದಲ್ಲಿ ಸ್ಥಾನಕೊಡುವನು. ಯಾರು ಭಾಗವತ ಪುಸ್ತಕವನ್ನು ಚಿನ್ನದ ಸಿಂಹಗಳ ಜೊತೆಯಲ್ಲಿಟ್ಟು ವೈಷ್ಣವನಿಗೆ ದಾನ ಮಾಡುವರೋ ಅವರಿಗೆ ತಪ್ಪದೆ ಕೃಷ್ಣ ಸಾಯುಜ್ಯ ಲಭಿಸುವುದು.

        ಯಾವ ಬುದ್ಧಿಹೀನನು ಹುಟ್ಟಿದಲಾಗಾಯತು ಮನಸ್ಸಿಟ್ಟು ಸ್ವಲ್ಪವಾದರೂ ಭಾಗವತ ಕಥೆಯನ್ನು ಕೇಳಲಿಲ್ಲವೋ ಅವನ ಜೀವಿತ ಚಂಡಾಲನ ಜೀವಿತದಂತೆ, ಕತ್ತೆಯ ಜೀವಿತದಂತೆ ವ್ಯರ್ಥವಾದದ್ದು. ಅವನು ಹುಟ್ಟಿದ್ದಕ್ಕೆ ಫಲ ತಾಯಿಗೆ ಹೆರಿಗೆಯ ಕಷ್ಟಕೊಟ್ಟದ್ದೊಂದೇ.

        ಯಾವನು ಭಾಗವತ ಕಥೆಯನ್ನು ಸ್ವಲ್ಪವೂ ಕೇಳಲಿಲ್ಲವೋ ಅಂತಹ ಪಾಪಕರ್ಮನು ಜೀವಚ್ಛವನೆಂದೂ, ಅವನು ಪಶುಸಮನೆಂದೂ, ಅವನು ಭೂಮಿಗೆ ಭಾರರೂಪನೆಂದೂ, ದೇವ ಸಭೆಯಲ್ಲಿ ಮುಖ್ಯರಾದವರು ಹೇಳುತ್ತಾರೆ.

        ಲೋಕದಲ್ಲಿ ಭಾಗವತ ಕಥೆ ಸಿಗುವುದು ಕಷ್ಟ. ಅದು ಕೋಟಿ ಜನ್ಮಗಳ ಪುಣ್ಯವಿದ್ದರೆ ಮಾತ್ರ ಲಭಿಸುತ್ತದೆ. ಆದುದರಿಂದ ಯೋಗನಿಧಿಯೂ, ಬುದ್ಧಿವಂತನೂ ಆದ ನಾರದನೇ, ಭಾಗವತವನ್ನು ಪ್ರಯತ್ನಪಟ್ಟು ಕೇಳಬೇಕು. ಇದಕ್ಕೆ ದಿನಗಳ ನಿಯಮವಿಲ್ಲ. ಯಾವಾಗಲೂ ಇದನ್ನು ಶ್ರವಣ ಮಾಡಬಹುದು. ಸತ್ಯವನ್ನೂ ಬ್ರಹ್ಮಚರ್ಯವನ್ನೂ ಉಳ್ಳವನಾಗಿ ಯಾವಾಗಲೂ ಕೇಳಬಹುದು. ಯಾವಾಗಲೂ ಶ್ರವಣ ಮಾಡುವುದಕ್ಕೆ ಕಲಿಯುಗದಲ್ಲಿ ಸಾಧ್ಯವಿಲ್ಲದಿರುವುದರಿಂದ ಶುಕನು ಒಂದು ವಿಶೇಷವನ್ನು ಕಲ್ಪಿಸಿದ್ದಾನೆ. ಮನೋವೃತ್ತಿಯನ್ನು ಜಯಿಸುವುದಕ್ಕೂ, ನಿಯಮಗಳನ್ನು ಆಚರಿವುಸುವುದಕ್ಕೂ, ದೀಕ್ಷೆಯಿಂದ ಇರುವುದಕ್ಕೂ, ಸಾಧ್ಯವಿಲ್ಲದಿರುವುದರಿಂದ ಏಳು ದಿನಗಳು ಭಾಗವತ ಶ್ರವಣ ಮಾಡುವ ವಿಧಿಯು ಏರ್ಪಾಟಾಗಿದೆ. ಮಾಘಮಾಸದಲ್ಲಿ ಪ್ರತಿ ದಿನ ಶ್ರದ್ಧೆಯಿಂದ ಭಾಗವತವನ್ನು ಕೇಳಿದರೆ ಎಷ್ಟು ಫಲವಿದೆಯೋ ಅಷ್ಟೇಫಲ ಸಪ್ತಾಹ ಶ್ರವಣದಿಂದ ಲಭಿಸುತ್ತೆ, ಎಂದು ಶುಕದೇವನು ಏರ್ಪಾಟು ಮಾಡಿದ್ದಾನೆ. ಮನುಷ್ಯರಿಗೆ ಕಲಿದೋಷದಿಂದ ಮನಸ್ಸನ್ನು ಜಯಿಸುವುದು ಅಸಾಧ್ಯವಾಗಿರುವುದರಿಂದಲೂ, ರೋಗಗಳ ಕಾರಣದಿಂದಲೂ, ಆಯಸ್ಸು ಕ್ರಮೇಣ ಕ್ಷೀಣಿಸುತ್ತಿರುವುದರಿಂದಲೂ, ಸಪ್ತಾಹ ಶ್ರವಣ ಮಾಡಿದರೆ ಸಾಕು ಎಂದು ವಿಧಿಸಿದ್ದಾನೆ. ತಪಸ್ಸಿನಿಂದಲೂ, ಯೋಗದಿಂದಲೂ, ಸಮಾಧಿಯಿಂದಲೂ ಯಾವ ಫಲವನ್ನು ಹೊಂದಲು ಸಾಧ್ಯವಿಲ್ಲವೋ ಆ ಫಲವನ್ನು ಅನಾಯಾಸವಾಗಿ ಸಪ್ತಾಹ ಶ್ರವಣದಿಂದ ಹೊಂದಬಹುದು. ಭಾಗವತ ಸಪ್ತಾಹವು ಯಜ್ಞಕ್ಕಿಂತಲೂ, ವ್ರತಕ್ಕಿಂತಲೂ, ತಪಸ್ಸಿಗಿಂತಲೂ, ತೀರ್ಥಕ್ಕಿಂತಲೂ, ಯೋಗಕ್ಕಿಂತಲೂ, ಧ್ಯಾನಕ್ಕಿಂತಲೂ, ಜ್ಞಾನಕ್ಕಿಂತಲೂ ನಾನು ಶ್ರೇಷ್ಠವೆಂದು ಗರ್ಜಿಸುತ್ತಿದೆ. ಅದರ ಗರ್ಜನೆಯನ್ನು ಏನೆಂದು ವರ್ಣಿಸಲಿ. ಸದಾ ತನ್ನ ಹಿರಿಮೆಯನ್ನು ಸೂಚಿಸುತ್ತ ಗರ್ಜಿಸುತ್ತಲೇ ಇರುತ್ತದೆ.

                                        ಶೌನಕನು ಹೇಳಿದನು

        ಆಶ್ಚರ್ಯಕರವಾದ ಕಥೆಯನ್ನು ನೀನು ಹೇಳಿದೆ. ಭಾಗವತಪುರಾಣವು ಜ್ಞಾನ ಮುಂತಾದ ಧರ್ಮಗಳನ್ನು ಮೀರಿಸಿ ಕಲಿಯುಗದಲ್ಲಿ ಮುಕ್ತಿಗಾಗಿ ಯೋಗಿಗಳು ಎಲ್ಲದಕ್ಕಿಂತಲೂ ಶ್ರೇಷ್ಠವೆಂದು ಹೇಳುವಂತೆ ಯಾವ ಕಾರಣದಿಂದ ಆಯಿತು?

                                         ಸೂತನು ಹೇಳಿದನು

        ಕೃಷ್ಣು ಭೂಲೋಕವನ್ನು ಬಿಟ್ಟು ವೈಕುಂಠಕ್ಕೆ ಹೋಗಲು ಸಿದ್ಧನಾಗಿರುವಾಗ, ಮನಸ್ಸನ್ನು ಜಯಿಸಿದವನಾದರೂ ಉದ್ಧವನು ಕೃಷ್ಣನನ್ನು ಕುರಿತು ಹೀಗೆಂದು ಹೇಳಿದನು.

ಉದ್ಧವನು ಹೇಳಿದನು

        ಗೋವಿಂದನೇ, ನೀನು ಭಕ್ತರ ಕಾರ್ಯವನ್ನು ಮಾಡಿ ಈಗ ವೈಕುಂಠಕ್ಕೆ ಹೊರಟಿದ್ದೀಯೆ. ನನ್ನ ಮನಸ್ಸಿನಲ್ಲಿ ಬಹಳ ಚಿಂತೆಯುಂಟಾಗಿದೆ. ಅದನ್ನು ಕೇಳಿ ಸಮಾಧಾನಪಡಿಸು. ಈಗ ಘೋರವಾದ ಕಲಿಯುಗ ಪ್ರಾಪ್ತವಾಗಿದೆ. ಈ ಯುಗದಲ್ಲಿ ಪುನಃ ದುಷ್ಟರು ಉದ್ಭವಿಸುವರು. ಅವರ ಸಾಂಗತ್ಯದಿಂದ ಸತ್ಪುರುಷರೂ ಕ್ರೂರರಾಗುತ್ತಾರೆ. ಆಗ ಗೋರೂಪಳಾದ ಈ ಭೂಮಿ ಭಾರ ಸಹಿಸಲಾರದೆ ಯಾರನ್ನಾಶ್ರಯಿಸುವಳು. ಕಮಲಲೋಚನನೇ, ನೀನಲ್ಲದೆ ಭೂಮಿಗೆ ಸಂರಕ್ಷಕನು ಇನ್ನಾರೂ ನನಗೆ ಕಾಣಿಸುತ್ತಿಲ್ಲ. ಆದ್ದರಿಂದ ಸತ್ಪುರುಷರಲ್ಲಿ ದಯೆ ತೋರಿಸಿ ನೀನು ವೈಕುಂಠಕ್ಕೆ ತೆರಳದೆ ಇಲ್ಲೇ ಇರು. ಭಕ್ತವತ್ಸಲನೇ, ನೀನು ನಿರಾಕಾರನಾದರೂ ಚಿನ್ಮಯನಾದುದ್ದರಿಂದ ಭಕ್ತರಹಿತಕ್ಕಾಗಿ ಸಗುಣರೂಪವನ್ನು ಧರಿಸಿದ್ದೀಯೆ. ನಿನ್ನನ್ನಗಲಿ ಭಕ್ತರು ಭೂಲೋಕದಲ್ಲಿ ಹೇಗಿರುವರು? ನಿರ್ಗುಣೋಪಾಸನೆಯನ್ನು ಮಾಡುವುದು ಕಷ್ಟ. ಆದ್ದರಿಂದ ನೀನು ಸ್ವಲ್ಪ ಯೋಚನೆ ಮಾಡು. ಪ್ರಭಾಸ ಕ್ಷೇತ್ರದಲ್ಲಿ ಶ್ರೀಕೃಷ್ಣನು ಉದ್ಧವನು ಹೇಳಿದ ಈ ಮಾತುಗಳನ್ನು ಕೇಳಿ ಭಕ್ತರ ರಕ್ಷಣೆಗೆ ನಾನೀಗ ಏನು ಮಾಡಲಿ ಎಂದು ಯೋಚಿಸಿದನು. ಆಗ ಶ್ರೀಕೃಷ್ಣನು ತನ್ನಲ್ಲಿದ್ದ ತೇಜಸ್ಸನ್ನು  ಭಾಗವತದಲ್ಲಿಟ್ಟನು. ಶ್ರೀಕೃಷ್ಣನು ಅಂತರ್ಹಿತನಾಗಿ ಶ್ರೀ ಭಾಗವತವೆಂಬ ಸಮುದ್ರವನ್ನು ಪ್ರವೇಶಿಸಿದನು. ಆದುದರಿಂದ ಭಾಗವತ ವಿಷ್ಣುವಿನ ವಾಙ್ಮಯವಾದ ಪ್ರತ್ಯಕ್ಷಮೂರ್ತಿಯಾಗಿದೆ. ಇದು ಸೇವಿಸುವುದರಿಂದಲೂ, ಕೇಳುವುದರಿಂದಲೂ, ಓದುವುದರಿಂದಲೂ, ನೋಡುವುದರಿಂದಲೂ ಪಾಪವನ್ನು ನಾಶಗೊಳಿಸುತ್ತದೆ. ಹೀಗೆ ಸಪ್ತಾಹಶ್ರವಣವು ಎಲ್ಲ ಸಾಧನಗಳಿಗೂ ಮಿಗಿಲಾಗುವಂತೆ ಶ್ರೀಕೃಷ್ಣನು ಮಾಡಿದ್ದಾನೆ. ಕಲಿಯುಗದಲ್ಲಿ ಸಪ್ತಾಹಶ್ರವಣ ಅತ್ಯುತ್ತಮ ಧರ್ಮವೆಂದು ಹೇಳಲ್ಪಟ್ಟಿದೆ. ದುಃಖವನ್ನೂ ದಾರಿದ್ರ್ಯವನ್ನೂ, ದೌರ್ಭಾಗ್ಯವನ್ನೂ, ಪಾಪಗಳನ್ನೂ ತೊಳೆದುಕೊಳ್ಳುವುದಕ್ಕೂ, ಕಾಮಕ್ರೋಧಗಳನ್ನು ಜಯಿಸುವುದಕ್ಕೂ, ಕಲಿಯುಗದಲ್ಲಿ ಸಪ್ತಾಹ ಧರ್ಮವು ಹೇಳಲ್ಪಟ್ಟಿದೆ. ಇದನ್ನು ಬಿಟ್ಟರೆ ವಿಷ್ಣುಮಾಯೆಯನ್ನು ಗೆಲ್ಲಲು ದೇವತೆಗಳಿಗೂ ಸಾಧ್ಯವಿಲ್ಲ. ಮನುಷ್ಯನಿಗೆ ಹೇಗೆ ಸಾಧ್ಯವಾದೀತು. ಆದುದರಿಂದ ಸಪ್ತಾಹ ವಿಧಿ ಕೊಂಡಾಡತಕ್ಕದ್ದಾಗಿದೆ.

ಸೂತನು ಹೇಳಿದನು

        ಹೀಗೆ ಸಭೆಯಲ್ಲಿ ಸನಕಾದಿ ಋಷಿಗಳು ಸಪ್ತಾಹ ಶ್ರವಣವೆಂಬ ಧರ್ಮವನ್ನು ಪ್ರಕಾಶ ಮಾಡುತ್ತಿರಲು ಒಂದು ಆಶ್ಚರ್ಯ ನಡೆಯಿತು. ಶೌನಕನೇ, ಅದನ್ನು ಹೇಳುತ್ತೇನೆ ಕೇಳು. ಪ್ರೇಮೈಕ ರೂಪಳಾದ ಭಕ್ತಿಯು ತರುಣ ವಯಸ್ಕರಾದ ತನ್ನ ಮಕ್ಕಳನ್ನು ಕರೆದುಕೊಂಡು ಶ್ರೀಕೃಷ್ಣ, ಗೋವಿಂದಾ, ಹರೀ, ಮುರಾರೀ, ನಾಥಾ, ಎಂಬ ದೇವರ ನಾಮಗಳನ್ನು ಪದೇ ಪದೇ ಉಚ್ಚರಿಸುತ್ತ ಕೂಡಲೇ ಅಲ್ಲಿ ಪ್ರತ್ಯಕ್ಷಳಾದಳು. ಅಲ್ಲಿನ ಸದಸ್ಯರೆಲ್ಲರೂ ಒಳ್ಳೆಯ ಸುಂದರವಾದ ವೇಷವನ್ನು ಧರಿಸಿ ಭಾಗವತದ ಅರ್ಥವೆಂಬ ಭೂಷಣಗಳನ್ನು ತೊಟ್ಟು ಬಂದ ಆಕೆಯನ್ನು ನೋಡಿ “ಈಕೆ ಇಲ್ಲಿ ಹೇಗೆ ಪ್ರವೇಶಿಸಿದಳು? ಮುನಿಗಳ ನಡುವೆ ಹೇಗೆ ಬಂದಳು?” ಎಂದು ಜಿಜ್ಞಾಸೆಯನ್ನು ವ್ಯಕ್ತಪಡಿಸಿದರು. ಆಗ ಕುಮಾರರು “ಈಕೆಯು ಭಾಗವತ ಕಥಾರ್ಥದಿಂದ ಈಗ ಹೊರಗೆ ಬಂದಳೆಂದು” ಹೇಳಿದರು. ಆ ಮಾತನ್ನು ಕೇಳಿ  ಪುತ್ರಸಹಿತಳಾದ ಭಕ್ತಿಯು ಸನತ್ಕುಮಾರನಿಗೆ ವಿನಯದಿಂದ ಹೀಗೆ ಹೇಳಿದಳು.

                                          ಭಕ್ತಿ ಹೇಳಿದಳು

        ಕಲಿಪ್ರಭಾವದಿಂದ ನಾಶಹೊಂದಿದ್ದ ನಾನು ತಮ್ಮಿಂದ ಪ್ರಕಟವಾದ ಭಾಗವತ ಕಥಾರಸದಿಂದ ಈಗ ಪರಿಪುಷ್ಟಳಾಗಿದ್ದೇನೆ. ನಾನೀಗ ಎಲ್ಲಿ ನಿಲ್ಲಬೇಕೆಂಬುದನ್ನು ತಿಳಿಸಿ.

ಎಂದು ಭಕ್ತಿ ಹೇಳಿದ್ದನ್ನು ಕೇಳಿ ಕುಮಾರರು ಹೀಗೆಂದು ಹೇಳಿದರು. ಅಮ್ಮಾ ನೀನು ಭಕ್ತರಿಗೆ ಗೋವಿಂದ ರೂಪಿಣಿಯಾಗಿ ಪ್ರೇಮವನ್ನು ಧರಿಸಿ ಭವರೋಗಗಳನ್ನು ನಾಶಪಡಿಸುತ್ತ, ಧೈರ್ಯವನ್ನು ತುಂಬುತ್ತ ಯಾವಾಗಲೂ ವೈಷ್ಣವರ ಮನಸ್ಸುಗಳಲ್ಲಿ ನಿಂತಿರು. ಕಲಿಯಿಂದ ಉಂಟಾದ ದೋಷಗಳು ಲೋಕದಲ್ಲಿ ಎಷ್ಟು ಬಲಿಷ್ಠಗಳಾದರೂ ನಿನ್ನನ್ನು ನೋಡುವುದಕ್ಕೂ ಅವುಗಳಿಗೆ ಸಾಧ್ಯವಿರುವುದಿಲ್ಲ. ಹೀಗೆ ಕುಮಾರರು ಹೇಳುತ್ತಿರುವಾಗಲೇ ಭಕ್ತಿ ಹೋಗಿ ಹರಿದಾಸರ ಮನಸ್ಸುಗಳಲ್ಲಿ ಸೇರಿಕೊಡಳು.

ಸಮಸ್ತ ಪ್ರಪಂಚದಲ್ಲಿಯೂ ಯಾರ ಹೃದಯದಲ್ಲಿ ವಿಷ್ಣುಭಕ್ತಿ ಮಾತ್ರವಿರುತ್ತದೆಯೋ ಬಡವರಾದರೂ ಅವರೇ ಧನ್ಯರು. ಶ್ರೀಹರಿಯು ಭಕ್ತಿ ಎಂಬ ಹಗ್ಗದಿಂದ ಎಳೆಯಲ್ಪಟ್ಟು ತನ್ನ ಲೋಕವನ್ನು ಬಿಟ್ಟು ಅವರ ಮನಸ್ಸುಗಳಲ್ಲಿ ಪ್ರವೇಶಿಸುತ್ತಾನೆ.

ಪರಬ್ರಹ್ಮ ತತ್ವಪ್ರತಿಪಾದಕನಾದ ಭಾಗವತದ ಮಹಿಮೆಯನ್ನಿದಕ್ಕಿಂತಲೂ ಹೆಚ್ಚಾಗಿ ಏನೆಂದು ಹೇಳಲಿ. ಅದನ್ನು ಆಶ್ರಯಿಸಿ ಪಾರಾಯಣ ಮಾಡಿದರೆ ಪಾರಾಯಣ ಮಾಡುವವನೂ ಕೇಳುವವನೂ ಕೃಷ್ಣನಿಗೆ ಸಮಾನರಾಗುತ್ತಾರೆ. ಬೇರೆ ಧರ್ಮಗಳೇಕೆ ಬೇಕು?

        ಎಂಬಲ್ಲಿಗೆ ಶ್ರೀಪದ್ಮಪುರಾಣದ ಉತ್ತರ ಖಂಡದಲ್ಲಿ ಶ್ರೀಮದ್ಭಾಗವತ ಮಾಹಾತ್ಮ್ಯದಲ್ಲಿ ಭಕ್ತಿ ಕಷ್ಟನಿವರ್ತನೆಂಬ ತೃತೀಯಾಧ್ಯಾಯವು ಮುಗಿದುದು.

 (ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)