ದ್ವಿತೀಯಾಧ್ಯಾಯ

ನಾರದನು ಹೇಳಿದನು

ಬಾಲೆಯೇ, ನೀನೇಕೆ ಚಿಂತಾತುರಳಾಗಿ ವ್ಯರ್ಥವಾಗಿ ದುಃಖಿಸುತ್ತಿದ್ದೀಯೆ? ಶ್ರೀಕೃಷ್ಣನ ಪಾದಪದ್ಮಗಳನ್ನು ಸ್ಮರಿಸು. ನಿನ್ನ ದುಃಖವು ಪರಿಹಾರವಾಗುವುದು. ಯಾರ ಸಹಾಯದಿಂದ ಕೌರವರ ಅಪಕಾರದಿಂದ ದ್ರೌಪದಿ ರಕ್ಷಿಸಲ್ಪಟ್ಟಳೋ, ಯಾರು ಗೋಪಿಕಾಸ್ತ್ರೀಯರನ್ನು ರಕ್ಷಿಸಿದನೋ, ಅಂತಹ ಶ್ರೀಕೃಷ್ಣನು ಎಲ್ಲಿಗೂ ಹೋಗಲಿಲ್ಲ. ಭಕ್ತಿಯಾದ ನೀನು ಆತನಿಗೆ ಪ್ರಾಣಕ್ಕಿಂತಲೂ ಹೆಚ್ಚುಪ್ರಿಯಳು. ನಿನ್ನಿಂದ ಕರೆಯಲ್ಪಟ್ಟ ಭಗವಂತನು ನೀಚರ ಮನೆಗಳಿಗೂ ಬರುತ್ತಾನೆ. ಕೃತ ತ್ರೇತಾ ದ್ವಾಪರ ಯುಗಗಳಲ್ಲಿ ಜ್ಞಾನವೈರಾಗ್ಯಗಳು ಮೊಕ್ಷಸಾಧನಗಳಾಗಿದ್ದವು. ಆದರೆ ಕಲಿಯುಗದಲ್ಲಿ ಕೇವಲ ಭಕ್ತಿಯೇ ಬ್ರಹ್ಮಸಾಯುಜ್ಯವನ್ನು ಕೊಡಲು ಸಮರ್ಥವಾಗಿದೆ ಎಂದು ಯೋಚಿಸಿ ಚಿದಾನಂದ ಸ್ವರೂಪನಾದ ಪರಮಾತ್ಮನು ಸದ್ರೂಪಳೂ, ಸುಂದರಿಯೂ, ಕೃಷ್ಣ ಪ್ರಿಯಳೂ ಆದ ನಿನ್ನನ್ನು ಸೃಷ್ಟಿಮಾಡಿದನು. ಒಂದಾನೊಂದು ಕಾಲದಲ್ಲಿ ನೀನು ಕೈಗಳನ್ನು ಜೋಡಿಸಿ ಕೃಷ್ಣನನ್ನು “ನನ್ನ ಕೆಲಸವೇನೆಂದು” ಕೇಳಿದೆ. ಅದಕ್ಕೆ ಶ್ರೀಕೃಷ್ಣನು “ನೀನು ನನ್ನ ಭಕ್ತರನ್ನು ಪೋಷಿಸು” ಎಂದು ಆಜ್ಞಾಪಿಸಿದನು. ನೀನದಕ್ಕೆ ಒಪ್ಪಿಕೊಂಡೆ. ಅದರಿಂದ ಶ್ರೀಹರಿ ಸಂತುಷ್ಟನಾಗಿ ಮುಕ್ತಿಯನ್ನು ನಿನಗೆ ದಾಸಿಯನ್ನಾಗಿ ಮಾಡಿದನು. ನೀನು ವೈಕುಂಠದಲ್ಲಿ ನಿನ್ನ ನಿಜರೂಪದಿಂದ ಈ ಜ್ಞಾನ ವೈರಾಗ್ಯಗಳನ್ನು ಪೋಷಿಸುತ್ತಿದ್ದೀಯೆ. ಭೂಲೋಕದಲ್ಲಿ ಭಕ್ತರನ್ನು ಪೋಷಿಸುವುದಕ್ಕಾಗಿ ನೀನು ಛಾಯಾರೂಪವನ್ನು ಧರಿಸಿ ಮುಕ್ತಿ ಜ್ಞಾನ ವೈರಾಗ್ಯಗಳನ್ನು ಜೊತೆಯಲ್ಲಿಟ್ಟುಕೊಂಡು ಬಂದಿದ್ದೀಯೆ. ಕೃತಯುಗದಿಂದ ದ್ವಾಪರಯುಗದ ಕೊನೆಯವರೆಗೂ ನೀನು ಮಹಾನಂದದಿಂದ ಇದ್ದೆ. ಪಾಷಂಡರೆಂಬ ವ್ಯಾಧಿಯಿಂದ ಕಲಿಯುಗದಲ್ಲಿ ಮುಕ್ತಿ ಕ್ಷಯವನ್ನು ಹೊದಿದಳು. ಅವಳು ನಿನ್ನ ಅಪ್ಪಣೆ ಪಡೆದು ಪುನಃ ಶೀಘ್ರವಾಗಿ ವೈಕುಂಠಕ್ಕೆ ಹೋದಳು. ನೀನು ಭೂಲೋಕದಲ್ಲಿ ಸ್ಮರಿಸಿದಾಗ ಮುಕ್ತಿ ಇಲ್ಲಿಗೆ ಬರುತ್ತಾಳ, ಮತ್ತು ವೈಕುಂಠಕ್ಕೆ ಹಿಂತಿರುಗಿ ಹೋಗುತ್ತಾಳೆ. ಈ ಜ್ಞಾನ ವೈರಾಗ್ಯಗಳನ್ನು ನೀನು ಪುತ್ರರಂತೆ  ಬಳಿಯಲ್ಲಿಟ್ಟುಕೊಂಡು ಸಲಹುತ್ತಿದ್ದೀಯೆ. ಜನರಿವರನ್ನುಪೇಕ್ಷೆ ಮಾಡಿರುವುದರಿಂದ ಈ ಕಲಿಯುಗದಲ್ಲಿ ಈ ನಿನ್ನ ಮಕ್ಕಳು ಮುದುಕರೂ, ಬಲಹೀನರೂ ಆಗಿದ್ದಾರೆ. ಆದರೂ ನೀನು ಚಿಂತಿಸಬೇಡ. ನಾನಿದನ್ನು ಸರಿಪಡಿಸುವ ಉಪಾಯವನ್ನು ಆಲೋಚನೆ ಮಾಡುತ್ತಿದ್ದೇನೆ. ಎಲೌ ಸುಂದರಿಯೇ, ಕಲಿಗೆ ಸಮಾನವಾದ ಯುಗವು ಬೇರೆ ಇಲ್ಲ. ಅದರಲ್ಲಿ ನಿನ್ನನ್ನು ಮನೆಮನೆಯಲ್ಲೂ ಜನಜನರಲ್ಲಿಯೂ ಸ್ಥಾಪಿಸುತ್ತೇನೆ. ಇದಕ್ಕಾಗಿ ನಾನು ಇತರ ಧರ್ಮಗಳನ್ನು ಬಿಟ್ಟು ಮಹೋತ್ಸವಗಳನ್ನು ಆಶ್ರಯಿಸುತ್ತೇನೆ. ನಾನು ಲೋಕದಲ್ಲಿ ನಿನ್ನನ್ನು ಸ್ಥಾಪಿಸದಿದ್ದರೆ ಹರಿದಾಸನಲ್ಲ. ಈ ಕಲಿಯುಗದಲ್ಲಿ ನಿನ್ನನ್ನುಳ್ಳ ಜನರು ಪಾಪಿಗಳಾದರೂ ನಿರ್ಭಯವಾಗಿ ವೈಕುಂಠವನ್ನು ಸೇರುವರು. ಯಾವಾಗಲೂ ಪ್ರೇಮರೂಪಿಣಿಯಾದ ಭಕ್ತಿ ಯಾರ ಮನಸ್ಸಿನಲ್ಲಿರುವುದೋ ಅಂತಹ ನಿರ್ಮಲಸ್ವರೂಪರು ಕನಸಿನಲ್ಲೂ ಯಮನನ್ನು ಕಾಣುವುದಿಲ್ಲ. ಮನಸ್ಸಿನಲ್ಲಿ ಭಕ್ತಿಯಿರುವವರನ್ನು ಪ್ರೇತವಾಗಲಿ, ಪಿಶಾಚವಾಗಲಿ, ರಾಕ್ಷಸನಾಗಲಿ, ಅಸುರನಾಗಲಿ ಮುಟ್ಟಲಾರನು. ಶ್ರಿಹರಿಯನ್ನು ಹೊಂದುವುದಕ್ಕೆ ತಪಸ್ಸುಗಳಿಂದಾಗಲಿ, ವೇದಗಳಿಂದಾಗಲಿ, ಜ್ಞಾನದಿಂದಾಗಲಿ, ಕರ್ಮದಿಂದಾಗಲಿ ಸಾಧ್ಯವಿಲ್ಲ. ಭಕ್ತಿಯಿಂದ ಮಾತ್ರ ಸಾಧ್ಯ. ಇದಕ್ಕೆ ಗೋಪಿಕಾ ಸ್ತ್ರೀಯರೇ ನಿದರ್ಶನ. ಸಾವಿರಾರು ಜನ್ಮಗಳ ಪರಿಪಾಕದಿಂದ ಮನುಷ್ಯರಿಗೆ ಭಕ್ತಿಯಲ್ಲಿ ಪ್ರೀತಿ ಹುಟ್ಟುತ್ತದೆ. ಕಲಿಯುಗದಲ್ಲಿ ಭಕ್ತಿ ಒಂದೇ ಮಾರ್ಗ. ಭಕ್ತಿಯಿಂದ ಶ್ರೀಕೃಷ್ಣನು ಎದುರಿನಲ್ಲಿರುತ್ತಾನೆ. ಯಾರು ಭಕ್ತಿಗೆ ದ್ರೋಹಮಾಡುವರೋ ಅವರು ಮೂರು ಲೋಕಗಳಲ್ಲಯೂ ನಾಶಹೊಂದುತ್ತಾರೆ. ಹಿಂದೆ ಭಕ್ತನನ್ನು ದೂಷಿಸಿ ದುರ್ವಾಸನು ದುಃಖವನ್ನು ಹೊಂದಿದನು. ವ್ರತಗಳು ಬೇಡ. ತೀರ್ಥಗಳು ಬೇಡ. ಯೋಗಗಳು ಬೇಡ. ಯಜ್ಞಗಳು ಬೇಡ. ಜ್ಞಾನದ ಮಾತುಗಳು ಬೇಡ. ಭಕ್ತಿಯೊಂದೇ ಮುಕ್ತಿಯನ್ನು ಕೊಡಬಲ್ಲದು.

ಸೂತನು ಹೇಳಿದನು

ಹೀಗೆ ನಾರದನಿಂದ ನಿರ್ಣಯಿಸಲ್ಪಟ್ಟ ತನ್ನ ಹಿರಿಮೆಯನ್ನು ಕೇಳಿ ಭಕ್ತಿ ಸರ್ವಾಂಗ ಸೃಷ್ಟಿಯನ್ನು ಹೊಂದಿ ನಾರದನನ್ನು ಕುರಿತು ಹೇಳಿದಳು.

ಭಕ್ತಿ ಹೇಳಿದಳು

ಆಹಾ, ನಾರದನೇ ನೀನೇ ಧನ್ಯನು. ನಿನಗೆ ನನ್ನಲ್ಲಿ ನಿಶ್ಚಲವಾದ ಪ್ರೀತಿಯಿದೆ. ನಿನ್ನನ್ನು ನಾನೆಂದಿಗೂ ಬಿಡುವುದಿಲ್ಲ. ನಿನ್ನ ಹೃದಯದಲ್ಲಿ ಸದಾ ನಾನಿರುವೆನು. ಸತ್ಪುರುಷನೇ, ದಯಾಶೀಲನಾದ ನಿನ್ನಿಂದ ನನ್ನ ಬಾಧೆ ಕ್ಷಣದಲ್ಲಿ ತೊಲಗಿತು. ಈ ನನ್ನ ಮಕ್ಕಳು ಚೈತನ್ಯವಿಲ್ಲದೆ ಬಿದ್ದಿದ್ದಾರೆ. ಇವರಿಗೆ ಸ್ಪೃಹೆ ಬರುವಂತೆ ಮಾಡು. ಇವರನ್ನು ಎಚ್ಚರಗೊಳಿಸು.

ಸೂತನು ಹೇಳಿದನು

ಭಕ್ತಿಯ ಮಾತನ್ನು ಕೇಳಿ ನಾರದನಿಗೆ ಕರುಣೆ ಉಂಟಾಯಿತು. ಆತನು ತನ್ನ ಕೈಯಿಂದ ಭಕ್ತಿಯ ಮಕ್ಕಳನ್ನು ತಟ್ಟಿ ಅವರ ಕಿವಿಗಳ ಹತ್ತಿರ ಬಾಯಿಟ್ಟು ಗಟ್ಟಿಯಾಗಿ ಶಬ್ದ ಮಾಡುತ್ತ ಅವರನ್ನು ಪ್ರಬೋಧಿಸತೊಡಗಿದನು. “ಜ್ಞಾನನೇ ಶೀಘ್ರವಾಗಿ ಏಳು. ವೈರಾಗ್ಯನೇ ಏಳು”, ಎಂದು ಉಚ್ಚರಿಸಿದನು. ವೇದವೇದಾಂತ ವಾಕ್ಯಗಳನ್ನು ಹೇಳಿದನು. ಗೀತಾ ವಾಕ್ಯಗಳನ್ನು ಹೇಳಿದನು. ಹೀಗೆ ಪದೇ ಪದೇ ಹೇಳಿ ಬಹಳ ಪ್ರಯತ್ನದಿಂದ ಅವರನ್ನು ಹೇಗೆಯೋ ಎಬ್ಬಿಸಿದನು. ಆದರೆ ಅವರು ಕಣ್ತೆರೆದು ನೋಡಲಿಲ್ಲ. ಸುಮ್ಮನೆ ಆಕಳಿಸುತ್ತಿದ್ದರು. ಅವರ ಮೈ ಕೂದಲೆಲ್ಲ ಬಕಪಕ್ಷಿಯಂತೆ ಬೆಳ್ಳಗಾಗಿದ್ದವು. ಅವರ ಅಂಗಗಳು ಒಣಗಿದ ಕಟ್ಟಿಗೆಯಂತೆ ಸಾರಹೀನವಾಗಿದ್ದವು. ಅವರು ಬಹಳ ಸುಸ್ತಾಗಿದ್ದರು. ಹಸಿವೆಯಿಂದ ಬಹಳ ಬಳಲಿದ್ದರು. ಅವರು ನಾರದನ ಕಡೆ ಒಂದು ಸಲ ನೋಡಿ ಪುನಃ ಹಾಗೆಯೇ ಮಲಗಿಬಿಟ್ಟರು. ನಾರದ ಮಹರ್ಷಿಗೆ ಏನು ಮಾಡಬೇಕೆಂಬ ಚಿಂತೆ ಹತ್ತಿತು. “ಅಯ್ಯೋ ಇವರ ನಿದ್ರೆ ಎಂಥಾದ್ದು! ಇವರು ಎಷ್ಟು ಮುದುಕರಾಗಿದ್ದಾರೆ?” ಎಂದು ಚಿಂತಿಸುತ್ತ ಆತನು ಗೋವಿಂದನನ್ನು ಸ್ಮರಿಸಿದನು. ಆಗ ಆಕಾಶವಾಣಿಯು “ಋಷಿಯೇ, ಚಿಂತಿಸಬೇಡ. ನಿನ್ನ ಪ್ರಯತ್ನ ಸಫಲವಾಗುವುದು. ಇದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ನೀನು ಸತ್ಕರ್ಮವನ್ನು ಮಾಡು. 

ನೀನು ಸಾಧುಭಾಷಿಗಳಾದ ಸಾಧುಗಳನ್ನು ಕೇಳಿದರೆ ಅವರು ನಿನಗೆ ಇದಕ್ಕೆ ಏನು ಮಾಡಬೇಕೆಂದು ಹೇಳುವರು. ನೀನು ಅವರು ಹೇಳಿದ ಸತ್ಕರ್ಮವನ್ನು ಮಾಡಿದರೆ ಇವರ ನಿದ್ರೆಯೂ ಮುದಿತನವೂ ಕ್ಷಣದಲ್ಲಿ ಮಾಯವಾಗುವುವು. ಆಗ ಭಕ್ತಿ ಎಲ್ಲೆಡೆಗಳಲ್ಲೂ ಪ್ರಸರಿಸುವುದು” ಎಂದು ಹೇಳಿತು. ಹೀಗೆ ಆಕಾಶವಾಣಿ ಹೇಳಿದ್ದನ್ನು ಅಲ್ಲಿದ್ದ ಎಲ್ಲರೂ ಸ್ಪಷ್ಟವಾಗಿ ಕೇಳಿದರು. ನಾರದನು ಆಶ್ಚರ್ಯಪಟ್ಟನು. ಆದರೆ ಆತನಿಗೆ ಯಾವ ಸತ್ಕರ್ಮವನ್ನು ಮಾಡಬೇಕೆಂದು ತಿಳಿಯಲಿಲ್ಲ.

ನಾರದನು ಹೇಳಿದನು

ಆಕಾಶವಾಣಿಯು ನಾನೇನು ಮಾಡಬೇಕೆಂಬುದನ್ನು ಪೂರ್ತಿ ತಿಳಿಸಲಿಲ್ಲ. ಇವರನ್ನು ಚೇತನಗೊಳಿಸುವುದಕ್ಕೆ ನಾನಾವ ಸತ್ಕರ್ಮವನ್ನು ಮಾಡಬೇಕು? ಆಕಾಶವಾಣಿ ಹೇಳಿದ ಸತ್ಪುರುಷರೆಲ್ಲಿದ್ದಾರೆ? ಅವರು ನನಗೆ ಸತ್ಕರ್ಮವನ್ನು ಹೇಗೆ ತಿಳಿಸುತ್ತಾರೆ? ನಾನೀಗ ಏನು ಮಾಡಬೇಕು?

ಸೂತನು ಹೇಳಿದನು

ಹೀಗೆ ಯೋಚಿಸುತ್ತ ನಾರದನು ಅವರಿಬ್ಬರನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಹೊರಟನು. ಒಂದೊಂದು ತೀರ್ಥಕ್ಕೂ ಹೋಗಿ ಅಲ್ಲಿದ್ದ ಮುನೀಶ್ವರರನ್ನು ಕೇಳಿದನು. ಅವರೆಲ್ಲರೂ ನಾರದನು ಹೇಳಿದ ವೃತ್ತಾಂತವನ್ನು ಕೇಳಿದರೇ ಹೊರತು ಯಾರೂ ನಾರದನಿಗೆ ಏನು ಮಾಡಬೇಕೆಂದು ಸೂಚಿಸಲಿಲ್ಲ. ಕೆಲವರು ಇದು ಅಸಾಧ್ಯವೆಂದು ಹೇಳಿದರು. ಕೆಲವರು ಇದು ಯಾರಿಗೂ ತಿಳಿಯಲು ಸಾಧ್ಯವಿಲ್ಲವೆಂದು ಹೇಳಿದರು. ಮತ್ತೆ ಕೆಲವರು ಮೌನದಿಂದಿದ್ದರು. ಕೆಲವರು ಏನೂ ಹೇಳದೆ ತಪ್ಪಿಸಿಕೊಂಡು ಹೋದರು ಮೂರು ಲೋಕಗಳಲ್ಲಿಯು ಆಶ್ಚರ್ಯಕರವಾಗಿ ದೊಡ್ಡದಾದ ಹಾಹಾಕಾರವುಂಟಾಯಿತು. ವೇದ ವೇದಾಂತ ವಾಕ್ಯಗಳಿಂದಲೂ ಗೀತಾವಾಕ್ಯಗಳಿಂದಲೂ ಪ್ರಬೋಧಿಸಿದರೂ ಭಕ್ತಿಜ್ಞಾನ ವೈರಾಗ್ಯಗಳು  ತೆಪ್ಪರಿಸಿಕೊಳ್ಳಲಿಲ್ಲವೆಂದೂ ಇದಕ್ಕೆ ಮತ್ತಾವ ಉಪಾಯವೂ ಇಲ್ಲವೆಂದು ಜನರು ಒಬ್ಬೊಬ್ಬರ ಕಿವಿಯಲ್ಲಿ ಗೊಣಗಾಡತೊಡಗಿದರು. ಯೋಗಿಯಾದ ನಾರದನಿಗೇ ಗೊತ್ತಾಗದಿದ್ದ ಮೇಲೆ ಅದನ್ನು ಇತರ ಮನುಷ್ಯರು ಹೇಳಬಲ್ಲರೇ ಎಂದೂ, ಇದು ಅಸಾಧ್ಯವೆಂದೂ, ಕೇಳಲ್ಪಟ್ಟ ಋಷಿಗಳು ನಿಶ್ಚಿತವಾಗಿ ಹೇಳಿಬಿಟ್ಟರು. ಆಗ ನಾರದನು ಚಿಂತಾತುರನಾಗಿ ಬದರೀ ವನಕ್ಕೆ ಬಂದನು. ಇಲ್ಲಿ ತಪಸ್ಸನ್ನು ಮಾಡೋಣವೆಂದು ನಿಶ್ಚಯಿಸಿಕೊಂಡಿದ್ದನು. ಆಗ ಆತನಿಗೆ ಕೋಟಿಸೂರ್ಯರಂತೆ ಪ್ರಕಾಶಿಸುತ್ತಿದ್ದ ಸನಕಾದಿ ಮುನೀಶ್ವರರು ಕಾಣಿಸಲು ನಾರದನು ಅವರನ್ನು ಕುರಿತು ಹೇಳಿದನು.

ನಾರದನು ಹೇಳಿದನು

ಕುಮಾರರೇ, ಈಗ ನನ್ನ ಮಹಾಭಾಗ್ಯದಿಂದ ತಮ್ಮ ಭೇಟಿ ಆಯಿತು. ನನ್ನ ಮೇಲೆ ಕರುಣೆಯಿಟ್ಟು ನನಗೆ ಬೇಕಾದುದನ್ನು ತಿಳಿಸಿ. ತಾವೆಲ್ಲರೂ ಯೋಗಿಗಳು, ಬುದ್ಧಿವಂತರು, ಬಹುಶ್ರುತರು, ಹಿರಿಯರಿಗಿಂತಲೂ ಹಿರಿಯರಾದರೂ ಐದುವರ್ಷ ವಯಸ್ಸಿನಲ್ಲೇ ಇರುವವರು. ಸದಾ ವೈಕುಂಠದಲ್ಲಿರುವವರು. ಹರಿ ಕೀರ್ತನ ತತ್ಪರರು, ಲೀಲಾಮೃತ ರಸೋನ್ಮತ್ತರು. ಕಥಾಮಾತ್ರೈಕ ಜೀವಿಗಳು. ನಿತ್ಯವೂ ಯಾರ ಮುಖದಲ್ಲಿ ಹರಿನಾಮವಿರುವುದೋ ಅವರನ್ನು ಶ್ರೀ ಹರಿಯು ಸದಾ ರಕ್ಷಿಸುತ್ತಾನಾದುದರಿಂದ ಅಂಥವರನ್ನು ಯಮನ ಅಪ್ಪಣೆಯಲ್ಲಿರುವ ಮುದಿತನ ಬಾಧಿಸುವುದಿಲ್ಲ. ತಮ್ಮ ಕೋಪದಿಂದ ವಿಷ್ಣುವಿನ ದ್ವಾರಪಾಲಕರೇ ಭೂಲೋಕಕ್ಕೆ ಬಿದ್ದರು. ತಮ್ಮ ಕರುಣೆಯಿಂದ ಪುನಃ ವೈಕುಂಠವನ್ನು ಹೊಂದಿದರು. ಆಹಾ ನನ್ನ ಭಾಗ್ಯದಿಂದ ತಮ್ಮ ದರ್ಶನವಾಯಿತು. ದಯಾಪರರಾದ ತಾವು ದೀನನಾದ ನನ್ನನ್ನು ಅನುಗ್ರಹಿಸಬೇಕು. ಆಕಾಶವಾಣಿ ಹೇಳಿದ ಸಾಧನವಾವುದೆಂಬುದನ್ನು ನನಗೆ ತಿಳಿಸಿ. ಅದನ್ನು ಹೇಗೆ ಅನುಷ್ಠಿಸಬೇಕು ಎನ್ನುವುದನ್ನೂ ಪೂರ್ತಿಯಾಗಿ ತಿಳಿಸಿ. ಭಕ್ತಿ ಜ್ಞಾನ ವೈರಾಗ್ಯಗಳಿಗೆ ಹೇಗೆ ಸುಖವುಂಟಾಗುವುದು? ಮತ್ತೆ ಅವುಗಳನ್ನು ಪ್ರೇಮಪೂರ್ವಕವಾಗಿ ಸರ್ವವರ್ಣಗಳಲ್ಲೂ ಹೇಗೆ ಸ್ಥಾಪಿಸಲು ಸಾಧ್ಯ? ಎಂಬುದನ್ನು ತಿಳಿಸಿ.

                                   ಕುಮಾರನು ಹೇಳಿದನು

        ದೇವರ್ಷಿಯೇ, ನೀನು ಚಿಂತಿಸಬೇಡ. ಮನಸ್ಸಿನಲ್ಲಿ ಹರ್ಷವನ್ನು ನೆಲೆಗೊಳಿಸು. ಈ ವಿಷಯದಲ್ಲಿ ಆಗಲೇ ಸಿದ್ಧವಾದ ಮತ್ತು ಸುಲಭಸಾಧ್ಯವಾದ ಉಪಾಯವಿದೆ. ನಾರದನೇ, ನೀನು ವಿರಕ್ತಿಯುಳ್ಳವರಲ್ಲಿ ಅಗ್ರಗಣ್ಯನಾದುದರಿಂದಲೂ, ಸದಾ ಶ್ರೀಕೃಷ್ಣದಾಸರಲ್ಲಿ ಅಗ್ರಣಿಯಾಗಿರುವುದರಿಂದಲೂ, ಯೋಗಭಾಸ್ಕರನಾಗಿರುವುದರಿಂದಲೂ, ಕೃತಾರ್ಥನಾಗಿದ್ದೀಯೆ. ಇಂತಹ ನೀನು ಭಕ್ತಿಯ ಕಾರ್ಯಕ್ಕಾಗಿ ಶ್ರಮಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಕೃಷ್ಣದಾಸನಿಗೆ ಭಕ್ತಿಯನ್ನು ಸಂಸ್ಥಾಪಿಸಬೇಕೆಂಬ ಉದ್ದೇಶ ಯಾವಾಗಲೂ ಸಫಲವಾಗುತ್ತದೆ. ಲೋಕದಲ್ಲಿ ಋಷಿಗಳು ಅನೇಕ ಮಾರ್ಗಗಳನ್ನು ಬೋಧಿಸಿದ್ದಾರೆ. ಅವೆಲ್ಲವೂ ಶ್ರಮಸಾಧ್ಯಗಳು ಮತ್ತು ಹೆಚ್ಚಾಗಿ ಸ್ವರ್ಗ ಫಲವನ್ನು ಮಾತ್ರ ಕೊಡತಕ್ಕವು. ವೈಕುಂಠಸಾಧಕವಾದ ಮಾರ್ಗವು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅದನ್ನು ಉಪದೇಶಿಸುವ ಪುರುಷನು ಭಾಗ್ಯದಿಂದ ಮಾತ್ರ ಲಭಿಸುವನು. ಹಿಂದೆ ನಿನಗೆ ಆಕಾಶವಾಣಿ ಯಾವ ಸತ್ಕರ್ಮವನ್ನು ಸೂಚಿಸಿತೋ ಅದನ್ನು  ತಿಳಿಸುತ್ತೇವೆ. ನೀನು ಸ್ಥಿರವಾದ ಮತ್ತು ಪ್ರಸನ್ನವಾದ ಮನಸ್ಸಿನಿಂದ ಅದನ್ನು ಕೇಳು. ಲೋಕದಲ್ಲಿ ಕೆಲವರು ದ್ರವ್ಯಗಳಿಂದ ಭಗವಂತನನ್ನು ಅರ್ಚಿಸುವರು. ಕೆಲವರು ತಪಸ್ಸಿನಿಂದ ಅರ್ಚಿಸುವರು. ಕೆಲವರು ಯೋಗದಿಂದಲೂ ಕೆಲವರು ವೇದ ಪಾರಾಯಣದಿಂದಲೂ ಜ್ಞಾನದಿಂದಲೂ ಅರ್ಚಿಸುವರು. ಅವರೆಲ್ಲರೂ ಕರ್ಮಬಂಧನವನ್ನು ಕಳೆದುಕೊಳ್ಳುತ್ತಾರೆ. ಪಂಡಿತರು ಜ್ಞಾನಯಜ್ಞವನ್ನು ಸತ್ಕರ್ಮಸೂಚಕವೆಂದು ಹೇಳಿದ್ದಾರೆ. ಶುಕಾದಿ ಮಹರ್ಷಿಗಳು ಶ್ರೀಮದ್ಭಾಗವತ ಪಾರಾಯಣ ಶ್ರವಣಗಳನ್ನು ಕೊಂಡಾಡಿದ್ದಾರೆ. ಶ್ರೀಮದ್ಭಾಗವತದ ಉಚ್ಚಾರಣದಿಂದ ಶಕ್ತಿಜ್ಞಾನ ವೈರಾಗ್ಯಗಳಿಗೆ ಬಹಳ ಬಲವುಂಟಾಗುತ್ತದೆ. ಭಕ್ತಿಯಿಂದ ದ್ವಂದ್ವಗಳ ಪೀಡೆ ಪರಿಹಾರವಾಗಿ ಆನಂದವುಂಟಾಗುತ್ತದೆ. ಶ್ರೀಮದ್ಭಾಗವತದ ಧ್ವನಿಯಿಂದ ಸಿಂಹದ ಗರ್ಜನೆಯನ್ನು ಕೇಳಿ ತೋಳಗಳು ಹೇಗೆ ಭಯಪಡುತ್ತವೆಯೋ ಹಾಗೆ ಕಲಿದೋಷಗಳೆಲ್ಲವೂ ನಾಶವಾಗುತ್ತವೆ. ಆಗ ಪ್ರತಿಯೊಂದು ಮನೆಯಲ್ಲೂ ಪ್ರತಿಯೊಬ್ಬನ ಮನಸ್ಸಿನಲ್ಲೂ ಜ್ಞಾನವೈರಾಗ್ಯಗಳಿಂದ ಕೂಡಿದ ಮತ್ತು ಪ್ರೇಮರಸವನ್ನುಂಟುಮಾಡುವ ಭಕ್ತಿಯು ಕ್ರೀಡಿಸುತ್ತದೆ.

ನಾರದರು ಹೇಳಿದರು

ವೇದ ವೇದಾಂತ ಪ್ರವಚನದಿಂದಲೂ, ಗೀತಾಪಾಠದಿಂದಲೂ ಪ್ರಬೋಧಿಸಿದರೂ ಭಕ್ತಿ ಜ್ಞಾನ ವೈರಾಗ್ಯಗಳು ತೆಪ್ಪರಿಸಿಕೊಳ್ಳದಿರುವಾಗ ಅವು ಶ್ರೀಮದ್ಭಾಗವತ ಪ್ರವಚನದಿಂದ ಹೇಗೆ ಚೈತನ್ಯವನ್ನು ಪಡೆಯುವುವು? ಅದರ ಕಥೆಗಳಲ್ಲಿ ಶ್ಲೋಕ ಶ್ಲೋಕದಲ್ಲೂ, ಪದಪದದಲ್ಲಿಯೂ ವೇದಾರ್ಥವಿದೆಯೇ? ನನ್ನ ಈ ಸಂದೇಹವನ್ನು ಶರಣಾಗತ ವತ್ಸಲರೂ ಮತ್ತು ಜ್ಞಾನಿಗಳೂ ಆದ ನೀವು ಕಾಲವಿಳಂಬವಿಲ್ಲದೆ ಪರಿಹರಿಸತಕ್ಕದ್ದು.

                                        ಕುಮಾರರು ಹೇಳಿದರು

ಭಾಗವತದ ಕಥೆಯು ವೇದ ಮತ್ತು ಉಪನಿಷತ್ತುಗಳಸಾರದಿಂದ ಹುಟ್ಟಿದೆ. ಆದುದರಿಂದ ಅದು ಗಿಡದಲ್ಲಿನ ಸಾರದಿಂದ ಹುಟ್ಟಿದ ಫಲದಂತೆ ಅತ್ಯುತ್ತಮವೂ ಆಸ್ವಾದಯೋಗ್ಯವೂ ಆಗಿದೆ. ಗಿಡದಲ್ಲಿ ಮೊದಲಿನಿಂದ ಕೊನೆಯವರೆಗೂ ರಸವಿರುತ್ತದೆಯಾದರೂ ಅದನ್ನು ಯಾರೂ ಆಸ್ವಾಸಿಸುವುದಿಲ್ಲ. ಅದು ಯಾವಾಗ ಪ್ರತ್ಯೇಕಿಸಲ್ಪಟ್ಟು ಫಲರೂಪದಲ್ಲಿ ಕಾಣಿಸಿಕೊಳ್ಳುವುದೋ ಆಗ ಅದು ಎಲ್ಲರ ಚಿತ್ತವನ್ನೂ ಆಕರ್ಷಿಸುತ್ತದೆ. ಹಾಲಿನಲ್ಲಿ ತುಪ್ಪವಿದ್ದರೂ ಅದನ್ನು ಆಸ್ವಾಸಿಸುವುದಕ್ಕೆ ಆಗುವುದಿಲ್ಲ. ಅದು ತುಪ್ಪವಾಗಿ ಪ್ರತ್ಯೇಕಿಸಲ್ಪಟ್ಟಾಗ ಅದು ದೇವತೆಗಳ ಆಹಾರವಾಗುತ್ತದೆ. ಕಬ್ಬಿನಲ್ಲಿ ಸಕ್ಕರೆ ಇರುತ್ತೆ. ಆದರೆ ಅದನ್ನು ಸಕ್ಕರೆ ರೂಪದಲ್ಲಿ ಪ್ರತ್ಯೇಕಿಸಿ ತೆಗೆದಾಗ ಅದು ಬಹಳ ಮಧುರವಾಗಿರುತ್ತದೆ. ಭಾಗವತ ಕಥೆಯ ವಿಷಯವೂ ಹಾಗೆಯೇ. ಈ ಭಾಗವತವೆಂಬ ಪುರಾಣವು ವೇದಸಮಾನವಾದದ್ದು. ಭಕ್ತಿ ಜ್ಞಾನ ವೈರಾಗ್ಯಗಳನ್ನು ಸ್ಥಾಪಿಸುವುದಕ್ಕಾಗಿ ಪ್ರಕಾಶಿತವಾಗಿದೆ. ಹಿಂದೆ ವ್ಯಾಸ ಮಹರ್ಷಿಯು ವೇದವೇದಾಂತಗಳಲ್ಲಿ ಮುಳುಗಿ ಗೀತೆಯನ್ನು ಸಹ ರಚಿಸಿದ್ದರೂ ಆತನಿಗೆ ಮನಶ್ಶಾಂತಿ ಲಭಿಸಲಿಲ್ಲ. ಆತನು ಅಜ್ಞಾನ ಸಮುದ್ರದಲ್ಲಿ ಮೋಹಗೊಂಡಿರುವಾಗ ನೀನೇ ಆತನಿಗೆ ನಾಲ್ಕು ಶ್ಲೋಕಗಳನ್ನು ಹೇಳಿ ಭಾಗವತ ರಚನೆಗೆ ಪ್ರೊತ್ಸಾಹಿಸಿದೆ. ಆ ಶ್ಲೋಕಗಳನ್ನು ಕೇಳಿದ ಕೂಡಲೇ ವ್ಯಾಸನು ಮನಸ್ಸಿನ ಅಶಾಂತಿಯನ್ನು ತೊರೆದನು. ಅಂತಹ ನೀನೇ ಭಾಗವತದ ಹಿರಿಮೆಯ ವಿಷಯದಲ್ಲಿ ಆಶ್ಚರ್ಯಪಟ್ಟು ಪ್ರಶ್ನಿಸಿತ್ತಿದ್ದೀಯಲ್ಲಾ. ಶ್ರೀಮದ್ಭಾಗವತದ ಶ್ರವಣದಿಂದ ಶೋಕವೂ ದುಃಖವೂ ತಪ್ಪದೆ ಪರಿಹಾರವಾಗುತ್ತದೆ.

                               ನಾರದನು ಹೇಳಿದನು

              ಆದಿಶೇಷನು ಹರಿಕೀರ್ತನೆಯನ್ನು ಹಾಡುತ್ತಿರಲು ಅದರ ರಸವನ್ನು ಪೂರ್ತಿಯಾಗಿ ಪಾನಮಾಡುತ್ತಾ ಆನಂದಿಸುವ ಕುಮಾರರೇ, ನಿಮ್ಮ ದರ್ಶನದಿಂದಲೇ ಸಮಸ್ತ ಪಾಪಗಳು ನಶಿಸಿ ಹೋಗುತ್ತದೆ. ಸಂಸಾರ ದುಃಖವೆಂಬ ದಾವಾನಲಕ್ಕೆ ಸಿಕ್ಕಿ ನರಳುತ್ತಿರುವವರಿಗೆ ಶ್ರೇಯಸ್ಸು ಉಂಟಾಗುತ್ತದೆ. ಅಂತಹ ನಿಮ್ಮನ್ನು ಪ್ರೇಮದ ಬೆಳಕಿಗಾಗಿ ಶರಣು ಹೊಕ್ಕಿದ್ದೇನೆ.

                   ಬಹು ಜನ್ಮಗಳ ಪುಣ್ಯಪರಿಪಾಕದಿಂದ ಸತ್ಪುರುಷರ ಸಹವಾಸ ಲಭಿಸುತ್ತದೆ. ಅದರಿಂದ ಅಜ್ಞಾನದಿಂದ ಉಂಟಾದ ಮೋಹ, ಮದ, ಎಂಬ ಅಂಧಕಾರವು ಅಳಿದು ವಿವೇಕ ಹುಟ್ಟುತ್ತದೆ.

   ಎಂಬಲ್ಲಿಗೆ ಶ್ರೀ ಪದ್ಮಪುರಾಣದ ಉತ್ತರ ಖಂಡದಲ್ಲಿನ ಶ್ರೀಮದ್ಭಾಗವತಮಹಾತ್ಮ್ಯದಲ್ಲಿ ಕುಮಾರ ನಾರದ ಸಂವಾದವೆಂಬ ದ್ವಿತೀಯಾಧ್ಯಾಯವು ಮುಗಿದುದು.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)