ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ

ಮಾನವನು ಸಮಾಜಜೀವಿ. ಈ ಸಮಾಜವೆಂಬುದು ಕುಟುಂಬದಿಂದ ಪ್ರಾರಂಭವಾಗಿ ಅನೇಕ ವಿಧವಾದ ಗುಂಪುಗಳ ರೂಪದಲ್ಲಿರುತ್ತದೆ. ಒಂದೊಂದು ಸಮಾಜದ ಗುಂಪಿಗೂ ಮಾನವ ಜೀವನದಲ್ಲಿ ಒಂದೊಂದು ವಿಶಿಷ್ಟ ಸ್ಥಾನವಿದೆ. ಈ ಸಮಾಜದ ಗುಂಪುಗಳು ಆಯಾ ದೇಶ, ಕಾಲ, ಪರಿಸ್ಥಿತಿಗಳನ್ನು ಸರಿಸಿಕೊಂಡು ಬೇರೆ ಬೇರೆ ರೂಪಗಳಲ್ಲಿ ಹುಟ್ಟುತ್ತಿರುತ್ತವೆ. ಬದಲಾಯಿಸುತ್ತಿರುತ್ತವೆ. ಬ್ರಾಹ್ಮಣ ವರ್ಣದಲ್ಲಿ ಗೋತ್ರ ಭೇದವನ್ನು ಬಿಟ್ಟರೆ ಧರ್ಮಶಾಸ್ತ್ರಗಳು ಬೇರೆ ಭೇದಗಳನ್ನು ಹೇಳಿಲ್ಲ. ಆದರೆ ವೈದಿಕ ಮತವು ಸಂಸ್ಕೃತ ಭಾಷೆಯನ್ನಾಡುವವರಿಗೆ ಸೀಮಿತವಾಗದೆ ಭಾರತ ದೇಶದಲ್ಲೆಲ್ಲಾ ವ್ಯಾಪಿಸಿದಾಗ ಬ್ರಾಹ್ಮಣವರ್ಗದಲ್ಲೇ ಆಯಾ ದೇಶಗಳ ಆಚಾರಗಳಲ್ಲಿನ ಭೇದದಿಂದ ಅನೇಕ ಪಂಗಡಗಳು ಹುಟ್ಟಿಕೊಂಡವು. ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಬ್ರಾಹ್ಮಣರಲ್ಲಿ ನಾಡುಬೇಧವು ಹೀಗೆ ಜಾರಿಗೆ ಬಂತು.

         ವೆಲನಾಡು ಎಂಬುದು ಆಂಧ್ರಪ್ರದೇಶದಲ್ಲಿ ಕೃಷ್ಣಾ, ಗೋದಾವರಿ ನದಿಗಳ ನಡುವೆ ಇರುವ ಓಂದು ಭೂಭಾಗ. ಇಲ್ಲಿದ್ದ ವೈದಿಕ ಬ್ರಾಹ್ಮಣರೇ ವೆಲನಾಡು ಬ್ರಾಹ್ಮಣರು. ಇಂದಿಗೂ ವೆಲನಾಡು ಬ್ರಾಹ್ಮಣರ ಸಂಖ್ಯೆ ಆ ಭೂಭಾಗದಲ್ಲಿಯೇ ಹೆಚ್ಚಾಗಿರುವುದು. ಕೃಷ್ಣಾ ಗೋದಾವರೀ ನದಿಗಳಿಗೆ ಅಡ್ಡಕಟ್ಟುಗಳನ್ನು ನಿರ್ಮಿಸುವುದಕ್ಕೆ ಮೊದಲು ಆ ಪ್ರಾಂತವು ಇಂದಿನಷ್ಟು ಸುಭಿಕ್ಷವಾಗಿರಲಿಲ್ಲ. ಆದುದರಿಂದ ಅಲ್ಲಿನ ಬ್ರಾಹ್ಮಣರನೇಕರು ಕರ್ನಾಟಕಕ್ಕೆ ವಲಸೆ ಬಂದರು. ಈಗ ಕರ್ನಾಟಕದಲ್ಲಿರುವ ವೆಲನಾಡು ಬ್ರಾಹ್ಮಣರ ಪೂರ್ವಿಕರೆಲ್ಲರೂ ಹೀಗೆ ಬಂದವರೇ. ಇವರು ಕೇವಲ ಯಾಚಕರಾಗಿ ಬಂದವರಲ್ಲ. ಇಲ್ಲಿನ ರಾಜರು ವಿದ್ಯಾಭಿಮಾನಿಗಳಾಗಿದ್ದರೆಂಬ ವಿಷಯ ತಿಳಿದು ಆ ರಾಜರನ್ನು ತಮ್ಮ ವಿದ್ಯೆಯಿಂದ ಮೆಚ್ಚಿಸಲು ಬಂದವರು.

ಆದುದರಿಂದ ವೆಲನಾಡು ಬ್ರಾಹ್ಮಣರಲ್ಲಿ ವೈದಿಕ ವಿದ್ಯೆ ರಕ್ತಗತವಾಗಿ ಬಂದಿದೆ. ಇವರು ನಿಯೋಗಿ ಬ್ರಾಹ್ಮಣರಲ್ಲದಿರುವುದರಿಂದ ಸೇವಾವೃತ್ತಿಯನ್ನರಿಯದವರು. ಇತರರು ಗೌರವಿಸಿ ಕೊಟ್ಟಿದ್ದರಿಂದ ತೃಪ್ತಿಪಟ್ಟು ಸ್ವತಂತ್ರವಾಗಿ ಬಾಳಿದವರು. ಆದುದರಿಂದಲೇ “ವೆಲನಾಟಿ ಏಕಾಂತಮು” ಎಂಬ ಗಾದೆ ಮಾತು ಹುಟ್ಟಿರುವುದು. ಇವರು ತಮಗೆ ಸರಿಯೆಂದು ಕಂಡು ಬಂದುದನ್ನು ಖಂಡಿತವಾಗಿ ಹೇಳುವ ಸ್ವಭಾವವುಳ್ಳವರಾಗಿದ್ದರು. ಅಧಿಕಾರಲಾಲಸೆ, ಐಶ್ವರ್ಯಲಾಲಸೆ ಇವರನ್ನು ಪೀಡಿಸುತ್ತಿರಲಿಲ್ಲ. ಆದುದರಿಂದ ಇವರು ಇಂದಿಗೂ ಸ್ವಲ್ಪ ಹಿಂದುಳಿದವರೇ ಆಗಿರುತ್ತಾರೆ.

        ಕಾಲ ಬದಲಾಯಿಸಿ, ಬ್ರಾಹ್ಮಣರು ತಮ್ಮ ವರ್ಣಧರ್ಮವನ್ನು ಬಿಟ್ಟು ನೌಕರಿಗಳಿಗೆ ಸೇರಿದಮೇಲೆ ಇವರಲ್ಲಿನ ವರ್ಚಸ್ಸು ಕ್ಷೀಣವಾಯಿತು. ಇಂದಿನ ಪೀಳಿಗೆಯವರಿಗೆ ಬ್ರಹ್ಮಣ ವರ್ಣದ ಒಂದು ಬುದ್ಧಿಶಕ್ತಿ ಸಂಕ್ರಮಿಸಿ ಬಂದಿದೆಯೇ ಹೊರತು ಬ್ರಾಹ್ಮಣರಿಗಿರಬೇಕಾದ ಸತ್ವಗುಣ, ತ್ಯಾಗ ಮತ್ತು ವೈರಾಗ್ಯಗಳು ಬಹುಪಾಲು ಮಾಯವಾಗಿಬಿಟ್ಟಿವೆ. ತಮ್ಮ ಮನೆ ಹೆಸರುಗಳನ್ನೇ ಮರೆತಿರುವ ಇಂದಿನ ವೆಲನಾಟಿ ಬ್ರಾಹ್ಮಣರಿಗೆ ತಮ್ಮ ಪೂರ್ವಿಕರು ಸಮಾಜದಲ್ಲಿ ಇತರರ ಗೌರವಕ್ಕೆ ಎಷ್ಟು ಅರ್ಹರಾಗಿದ್ದರು? ಏಕೆ ಅರ್ಹರಾಗಿದ್ದರು? ಎಂಬ ವಿಷಯವು ಹೇಗೆ ತಿಳಿದೀತು? ವೆಲನಾಡು ಜನಾಂಗದ ವಿಶಿಷ್ಟತೆ ತೆಲುಗು ಭಾಷೆಯನ್ನು ಮಾತಾಡುವುದರಲ್ಲಿದೆ. ಒಬ್ಬಟ್ಟುಗಳನ್ನು ತಿನ್ನುವುದರಲ್ಲಿಲ್ಲ. ಇವರು ವೈದಿಕ ಬ್ರಾಹ್ಮಣರಾಗಿದ್ದರು ಎಂಬುದರಲ್ಲಿದೆ ಮತ್ತು ಪಂಚದ್ರಾವಿಡರಲ್ಲಿ ಸೇರಿದ್ದರೆಂಬುದರಲ್ಲಿದೆ.

        ಪಂಚದ್ರಾವಿಡರೆಂದರೆ ಕನ್ನಡ, ತಮಿಳು, ತೆಲುಗು, ತುಳು ಮತ್ತು ಮಲೆಯಾಳಗಳೆಂಬ ಐದು ಭಾಷೆಗಳನ್ನಾಡುವವರು. ಈ ಬ್ರಾಹ್ಮಣರು ಶುದ್ಧ ಶಾಖಾಹಾರಿಗಳು. ಧರ್ಮಶಾಸ್ತ್ರಗಳಲ್ಲಿ ಮಾಂಸಾಹಾರವರ್ಜನವನ್ನು ಬಹಳ ಕೊಂಡಾಡಿದೆ. ಪಂಚ ದ್ರಾವಿಡ ಬ್ರಾಹ್ಮಣರು ಇದನ್ನು ಸಾಧಿಸಿರುವುದು ಧರ್ಮದ ದೃಷ್ಟಿಯಲ್ಲಿ ದೊಡ್ಡ ವಿಶೇಷ. ಬ್ರಾಹ್ಮಣರು ವೈದಿಕರಾಗಿರುವುದು ಮತ್ತೊಂದು ದೊಡ್ಡ ವಿಶೇಷ. ಅರ್ಥ ಕಾಮಗಳಲ್ಲಿ ಆಸಕ್ತಿಯನ್ನು ಬಿಟ್ಟು ವಿದ್ಯಾರ್ಜನೆಯಲ್ಲಿಯು ವಿದ್ಯಾಬೋಧನೆಯಲ್ಲಿಯು, ನಿಯಮ ನಿಷ್ಠೆಗಳಲ್ಲಿಯು ಆಸಕ್ತಿಉಳ್ಳವರಾಗಿ ದೇವರು ಕೊಟ್ಟಿದ್ದರಲ್ಲಿ ತೃಪ್ತಿಯಿಂದಿರುವುದೇ ವೈದಿಕ ಬ್ರಾಹ್ಮಣರ ಲಕ್ಷಣ. ಇಂದಿನ ವೆಲನಾಡು ಬ್ರಾಹ್ಮಣರಾದ ನಾವು ಮತ್ತು ನಮ್ಮ ಮಕ್ಕಳು ಕಾಲದ ಪ್ರಭಾವದಿಂದ ಯಾವ ವೃತ್ತಿಯನ್ನವಲಂಬಿಸಿದರೂ ಮೇಲ್ಕಂಡ ವಿಷಯಗಳನ್ನು ಸದಾ ಸ್ಮರಿಸುತ್ತ, ಅರ್ಥಕಾಮನೆಗಳ ಸುಳಿಗೆ ಸಿಗದೆ, ದೇವರು ಕೊಟ್ಟಿದ್ದರಲ್ಲಿ ತೃಪ್ತಿಪಟ್ಟು, ಜ್ಞಾನಾರ್ಜನೆ ಮಾಡುತ್ತ ಶುದ್ಧ ಶಾಖಾಹಾರಿಗಳಾಗಿದ್ದು, ಸಾತ್ವಿಕ ಜೀವನವನ್ನು ನಡೆಸುತ್ತ, ತಮಗೆ ಕೈಲಾದಷ್ಟು ಸಹಕಾರ ಸೇವೆ ಮಾಡುತ್ತ ಜೀವಿಸುವುದೇ ನಮ್ಮ ವಂಶದ ವಿಶಿಷ್ಟತೆಗೆ ತಕ್ಕುದಾಗಿ ಇರುತ್ತದೆ.