Article of the month

ಶ್ರೀಮದ್ಭಾಗವತ ಮಹಾತ್ಮ್ಯ

ಮೊದಲನೆಯ ಅಧ್ಯಾಯ

 ಸಚ್ಚಿದಾನಂದ ರೂಪನೂ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನೂ, ತಾಪತ್ರಯಗಳನ್ನು ಹೋಗಲಾಡಿಸುವವನೂ ಆದ ಶ್ರೀ ಕೃಷ್ಣನಿಗೆ ನಮಸ್ಕರಿಸುತ್ತೇವೆ.

        ಸಮಸ್ತ ಕರ್ಮಗಳನ್ನು ತ್ಯಜಿಸಿ ಮೋಕ್ಷಾರ್ಥಿಯಾಗಿ ಏಕಾಂತವಾಗಿ ಹೊರಟ ಪುತ್ರನಾದ ಶುಕನನ್ನು ಹುಡುಕುತ್ತಾ ವಿರಹ ಕಾತರನಾಗಿ ಹೊರಟ ವ್ಯಾಸ ಮಹರ್ಷಿಯುಪುತ್ರನೇಎಂದು ಶುಕನನ್ನು ಕರೆದನು. ಶುಕನು ಅಲ್ಲಿಲ್ಲದಿದ್ದರೂ ಆತನು ಸಮಸ್ತ ಭೂತಗಳಲ್ಲಿ ಇರುವ ಪರಮಾತ್ಮನಲ್ಲಿ ಹೃದಯವನ್ನು ಲಗ್ನಮಾಡಿದ್ದುದ್ದರಿಂದ ಶುಕನ ಭಾವವನ್ನು ಹೊಂದಿದ್ದ. ಗಿಡಮರಗಳು ವ್ಯಾಸನಿಗೆ ಪ್ರತ್ಯುತ್ತರವನ್ನು ಕೊಟ್ಟವು. ಅಂತಹ ಮಹಾತ್ಮನಾದ, ಮೌನಿಯಾದ, ಶುಕ ಮಹರ್ಷಿಗೆ ನಮಸ್ಕರಿಸುತ್ತೇನೆ.

        ನೈಮಿಶಾರಣ್ಯದಲ್ಲಿ ಭಗವಂತನ ಕಥೆಯೆಂಬ ಅಮೃತರಸವನ್ನು ಆಸ್ವಾದಿಸಲು ಕುಶಲನಾದ ಶೌನಕ ಮಹರ್ಷಿ ಸುಖಾಸೀನನಾಗಿದ್ದ ಮಹಾ ಬುದ್ಧಿಶಾಲಿಯಾದ ಸೂತಪೌರುಣಿಕನಿಗೆ ನಮಸ್ಕರಿಸಿ ಆತನನ್ನು ಹೀಗೆಂದು ಕೇಳಿದನು.

ಶೌನಕನು ಹೇಳಿದನು

        ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಲು ಕೋಟಿಸೂರ್ಯ ಸಮಾನವಾದ ಕಾಂತಿಯುಳ್ಳ ಎಲೈ ಸೂತನೇ, ನನಗೆ ಕರ್ಣರಸಾಯನವಾಗಿರುವ ಶ್ರೇಷ್ಠವಾದ ಕಥೆಯನ್ನು ಹೇಳು. ವಿಷ್ಣುಭಕ್ತರಿಗೆ ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಬೆಳೆಸುವ ವಿವೇಕವು ಹೇಗೆ ವೃದ್ಧಿಯಾಗುತ್ತದೆ? ಅವರು ಮಾಯೆಯಿಂದುಂಟಾದ ಮೋಹವನ್ನು ಹೇಗೆ ಹೋಗಲಾಡಿಸುತ್ತಾರೆ? ಈಗ ಲೋಕದಲ್ಲಿ ಘೋರನಾದ ಕಲಿಯ ಪ್ರಭಾವದಿಂದ ಮನುಷ್ಯನು ಅಸುರತ್ವವನ್ನು ಹೊಂದಿದ್ದಾನೆ. ಅದರಿಂದ ನಾನಾ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ಅಂತಹ ಮಾನವನನ್ನು ಪಾಪರಹಿತನನ್ನಾಗಿ ಮಾಡುವ ಶ್ರೇಷ್ಠವಾದ ಮಾರ್ಗವಾವುದು? ಯಾವ ಸಾಧನವು ಎಲ್ಲಾ ಶ್ರೇಯಸ್ಸುಗಳಿಗಿಂತಲೂ ಶ್ರೇಷ್ಠವಾಗಿದೆಯೋ, ಎಲ್ಲಾ ಪವಿತ್ರ ವಸ್ತುಗಳಿಗಿಂತಲೂ ಪವಿತ್ರವಾಗಿದೆಯೋ, ಯಾವುದು ಕೃಷ್ಣನನ್ನು ಹೊಂದಲು ಸಹಾಯಕವಾಗಿದೆಯೋ, ಯಾವುದು ಕಲ್ಪವೃಕ್ಷಕ್ಕೆ, ಮತ್ತು ಚಿಂತಾಮಣಿಗೆ ಸಮಾನವಾಗಿ ಈ ಲೋಕದಲ್ಲಿ ಸುಖವನ್ನೂ ಆಮೇಲೆ ಸ್ವರ್ಗವನ್ನು ಕೊಡುವುದೋ, ಯಾವುದು ಸಂಪ್ರೀತನಾದ ಗುರುವಿನಂತೆ ಯೋಗಿಗಳಿಗೂ ದುರ್ಲಭವಾದ ವೈಕುಂಠವನ್ನು ಹೊಂದಲು ಸಹಾಯಕವಾಗಿರುವುದೋ, ಅಂತಹ ಶಾಶ್ವತವಾದ ಸಾಧನವನ್ನು ಈಗ ನನಗೆ ತಿಳಿಸು.

ಸೂತನು ಹೇಳಿದನು

ಎಲೈ ಶೌನಕನೇ, ನಿನ್ನ ಹೃದಯದಲ್ಲಿ ಪ್ರೇಮವಿರುವುದರಿಂದ ವಿಚಾರ ಮಾಡಿ ನಿನಗೆ ಸಮಸ್ತ ಸಿದ್ದಾಂತಗಳ ಸಾರವೂ, ಸಂಸಾರ ಭಯವನ್ನು ಹೋಗಲಾಡಿಸುವುದೂ, ಭಕ್ತಿಯನ್ನು ಹೆಚ್ಚಿಸುವುದೂ, ವಿಷ್ಣುವಿಗೆ ಸಂತೋಷಕರವೂ ಆದುದನ್ನು ತಿಳಿಸುತ್ತೇನೆ. ಸಾವಧಾನ ಚಿತ್ತನಾಗಿ ಕೇಳು.

        ಕಾಲವೆಂಬ ಹಾವಿನ ಬಾಯಿಗೆ ತುತ್ತಾಗಿ ಭಯಪಡುತ್ತಿರುವ ಮಾನವರ ಭಯವನ್ನು ಹೋಗಲಾಡಿಸಲು ಕಲಿಯುಗದಲ್ಲಿ ಶ್ರೀಮದ್ಭಾಗವತವೆಂಬ ಶಾಸ್ತ್ರವನ್ನು ಶುಕ ಮಹರ್ಷಿ ಹೇಳಿದನು. ಮನಸ್ಸನ್ನು ಶುದ್ಧಿ ಮಾಡಲು ಇದಕ್ಕಿಂತಲೂ ಉತ್ತಮವಾದ ಸಾಧನವು ಬೇರೆ ಇಲ್ಲ. ಜನ್ಮಾಂತರದಲ್ಲಿ ಪುಣ್ಯ ಮಾಡಿರುವವರಿಗೆ ಮಾತ್ರ ಈ ಭಾಗವತವು ಲಭಿಸುತ್ತದೆ. ಶುಕನು ಪರೀಕ್ಷಿನ್ ಮಹಾರಾಜನಿಗೆ ಭಾಗವತದ ಕಥೆಯನ್ನು ಹೇಳಲು ಸಭೆಯಲ್ಲಿ ಕುಳಿತಾಗ ದೇವತೆಗಳು ಅಮೃತಕುಂಭವನ್ನೇ ತೆಗೆದುಕೊಂಡು ಅಲ್ಲಿಗೆ ಬಂದರು. ಸ್ವಕಾರ್ಯಕುಶಲರಾದ ಆ ದೇವತೆಗಳೆಲ್ಲರೂ ಶುಕನಿಗೆ ನಮಸ್ಕಾರ ಮಾಡಿಈ ಅಮೃತವನ್ನು ತೆಗೆದುಕೊಂಡು ನಮಗೆ ಭಾಗವತ ಕಥೆ ಎಂಬ ಅಮೃತವನ್ನು ಕೊಡುಎಂದು ಪ್ರಾರ್ಥಿಸಿದರು. ಬ್ರಹ್ಮಜ್ಞಾನಿಯಾದ ಶುಕನುಅಮೃತವೆಲ್ಲಿ? ಭಾಗವತದ ಕಥೆಯಲ್ಲಿ? ಲೋಕದಲ್ಲಿ ಗಾಜೆಲ್ಲಿ? ದೊಡ್ಡ ರತ್ನವೆಲ್ಲಿ?” ಎಂದು ಯೋಚಿಸಿ ದೇವತೆಗಳನ್ನು ಕುರಿತು ನಕ್ಕು, ಅವರನ್ನು ಭಕ್ತರಲ್ಲವೆಂದು ತಿಳಿದು, ಅವರಿಗೆ ಕಥಾಮೃತವನ್ನು ಕೊಡಲಿಲ್ಲ. ಶ್ರೀಮದ್ಭಾಗವತದ ಕಥೆ ದೇವತೆಗಳಿಗೂ ದುರ್ಲಭ. ಆ ಕಥೆಯನ್ನು ಕೇಳಿ ಮಹಾರಾಜನು ಮೋಕ್ಷವನ್ನು ಹೊಂದಿದುದನ್ನು ನೋಡಿ ಬ್ರಹ್ಮದೇವನೇ ಆಶ್ಚರ್ಯಪಟ್ಟನು. ಬ್ರಹ್ಮದೇವನು ಸತ್ಯಲೋದಲ್ಲಿ ತಕ್ಕಡಿಯನ್ನು ಕಟ್ಟಿ ಬೇರೆ ಬೇರೆ ಮೋಕ್ಷಸಾಧನಗಳನ್ನು ತೂಕ ಮಾಡಿದನು. ಅವುಗಳಲ್ಲಿ ಎಲ್ಲಾ ಸಾಧನಗಳಿಗಿಂತಲೂ ಭಾಗವತವೇ ಹೆಚ್ಚು ಭಾರವಾಗಿತ್ತು. ಅದನ್ನು ನೋಡಿ ಋಷಿಗಳೆಲ್ಲರೂ ಬಹಳ ಆಶ್ಚರ್ಯಪಟ್ಟರು. ಕಲಿಯುಗದಲ್ಲಿ ಭಾಗವತ ಶಾಸ್ತ್ರವನ್ನು ಭಗವಂತನ ರೂಪವೆಂದೇ ಭಾವಿಸಿದರು. ಈ ಭಾಗವತವನ್ನು ಓದಿದರೆ ಅಥವಾ ಕೇಳಿದರೆ ವೈಕುಂಠ ಪ್ರಾಪ್ತಿ ಕೂಡಲೇ ಲಭಿಸುವುದು. ಸಪ್ತಾಹ ಅಂಧರೆ ಏಳು ದಿನಗಳಲ್ಲಿ ಕೇಳಿದರೆ ಭಾಗವತ ಮುಕ್ತಿಯನ್ನು ಕೊಡುವುದು ಎಂದು ಸನಕಾದಿ ಋಷಿಗಳು ನಾರದನಿಗೆ ಹಿಂದೆ ದಯೆಯಿಂದ ಹೇಳಿದರು. ಹಿಂದೆ ಬ್ರಹ್ಮಲೋಕದಲ್ಲಿ ನಾರದನು ಭಾಗವತವನ್ನು ಕೇಳಿದ್ದನು. ಆದರೆ ಸಪ್ತಾಹ ಶ್ರವಣ ವಿಧಿಯನ್ನು ಆತನಿಗೆ ಸನಕಾದಿ ಋಷಿಗಳು ಬೋಧಿಸಿದರು.

ಶೌನಕನು ಹೆಳಿದನು

ಸಂಸಾರ ಸಂಬಂಧವಿಲ್ಲದೇ ಲೋಕಗಳನ್ನು ಸುತ್ತುತ್ತಿರುವ ನಾರದನಿಗೆ ಸಪ್ತಾಹ ಶ್ರವಣ ವಿಧಿಯನ್ನು ತಿಳಿದುಕೊಳ್ಳಬೇಕೆಂಬ ಆಸೆ ಹೇಗೆ ಹುಟ್ಟಿತು? ಆತನಿಗೆ ಸನಕಾದಿ ಮಹರ್ಷಿಗಳು ಎಲ್ಲಿ ಸಿಕ್ಕಿದರು?

                                             ಸೂತನು ಹೇಳಿದನು

ಈಗ ನಿನಗೆ, ನನ್ನ ಗುರುವಾದ ಶುಕನು ನನಗೆ ರಹಸ್ಯವಾಗಿ ಹೇಳಿದ ಭಕ್ತಿಯುಕ್ತವಾದ ಕಥೆಯನ್ನು ಹೇಳುತ್ತೇನೆ. ಒಂದಾನೊಂದು ಕಾಲದಲ್ಲಿ ವಿಶಾಲೆಯೆಂಬ ಪ್ರದೇಶದಲ್ಲಿ ಸತ್ಪುರುಷರ ಸಹವಾಸಕ್ಕಾಗಿ ಬಂದಿದ್ದ ಸನಕ, ಸನಂದನ, ಸನತ್ಕುಮಾರ, ಸನತಸುಜಾತರೆಂಬ ನಾಲ್ವರು ನಿರ್ಮಲ ಮನಸ್ಸುಳ್ಳ ಮತ್ತು ಐದು ವರ್ಷದ ಕುಮಾರರಂತಿರುವ ಋಷಿಗಳು ಅಲ್ಲಿ ನಾರದನನ್ನು ಕಂಡರು.

                                         ಕುಮಾರರು ಹೇಳಿದರು

ಎಲೈ ಬ್ರಹ್ಮಋಷಿಯೇ, ನೀನೇಕೆ ದೀನಮುಖನಾಗಿಯೂ ಚಿಂತಾತುರನಾಗಿಯೂ ಇದ್ದೀಯೆ? ನೀನು ಆತುರವಾಗಿ ಎಲ್ಲಿಗೆ ಹೋಗುತ್ತಿದ್ದೀಯೇ? ನೀನೆಲ್ಲಿಂದ ಬಂದೆ? ಈಗ ಧನವನ್ನು ಕಳೆದುಕೊಂಡಿರುವವನಂತೆ ನೀನು ಶೂನ್ಯಚಿತ್ತನಾಗಿ ಕಾಣುತ್ತಿದ್ದೀಯೆ? ಸಂಸಾರವನ್ನು ಬಿಟ್ಟ ಮೇಲೆ ಹೀಗೆ ಚಿಂತಿಸುವುದು ಉಚಿತವಲ್ಲ. ಇದರ ಕಾರಣವನ್ನು ತಿಳಿಸು.

ನಾರದನು ಹೇಳಿದನು

ನಾನು ಭೂಲೋಕವು ಸರ್ವಶೇಷ್ಠವೆಂದು ಭಾವಿಸಿ ಅಲ್ಲಿಗೆ ಹೋಗಿ ಪುಷ್ಕರ, ಪ್ರಯಾ, ಕಾಶಿ, ಗೋದಾವರಿ, ಹರಿಕ್ಷೇತ್ರ, ಕುರುಕ್ಷೇತ್ರ, ಶ್ರೀರಂಗ, ಸೇತುಬಂಧನ, ಇತ್ಯಾದಿ ಪುಣ್ಯ ತೀರ್ಥಗಳಲ್ಲಿ ಸಂಚಾರ ಮಾಡುತ್ತಾ ಎಲ್ಲಿಯೂ ಆನಂದವನ್ನು ಕೊಡುವ ಶುಭವನ್ನು ಕಾಣಲಿಲ್ಲ. ಅಧರ್ಮಪರನಾದ ಕಲಿಯಿಂದ ಈಗ ಈ ಭೂಲೋಕ ಬಾಧಿಸಲ್ಪಟ್ಟಿದೆ. ಇಲ್ಲಿ ಸತ್ಯವಿಲ್ಲ. ತಪಸ್ಸು, ಶೌಚ, ದಯೆ, ಮತ್ತು ದಾನ ಯಾವುದು ಇಲ್ಲ. ಮನುಷ್ಯರೆಲ್ಲರೂ ಕೇವಲ ಉದರ ಪೋಷಕರಾಗಿ ದೀನರೂ ಮತ್ತು ತುಚ್ಛರಾಗಿ, ಸುಳ್ಳು ಹೇಳುವವರಾಗಿ, ಮಂದ ಬುದ್ಧಿಗಳೂ ಮಂದ ಭಾಗ್ಯರೂ ಆಗಿದ್ದಾರೆ. ಲೋಕದಲ್ಲಿ ಉತ್ಪಾತಗಳು ಹೆಚ್ಚಿವೆ. ಸತ್ಪುರುಷರೆಲ್ಲರೂ ಪಾಷಂಡ ಮತಗಳನ್ನು ಅನುಸರಿಸಿದರು. ಸನ್ಯಾಸಿಗಳು ಮದುವೆ ಮಾಡಿಕೊಂಡರು. ಮನೆಯಲ್ಲಿ ಹೆಂಡತಿಯ ಪ್ರಭುತ್ವ ಬಂದಿತು. ಹೆಂಡತಿಯ ಸಹೋದರನೇ ಸಲಹೆ ಕೊಡುವವನಾದನು. ಹೆಣ್ಣುಮಕ್ಕಳನ್ನು ತಂದೆ, ತಾಯಿಗಳು ಲೋಭದಿಂದ ಹಣಕ್ಕೆ ಮಾರತೊಡಗಿದರು. ಗಂಡಹೆಂಡಿರಲ್ಲಿ ಹಗೆತನ ಬೆಳೆಯಿತು. ಯವನರು ಆಶ್ರಮಗಳನ್ನು ಕೆಡಿಸಿದರು. ದುಷ್ಟರು ನದಿಗಳನ್ನೂ, ತೀರ್ಥಗಳನ್ನೂ, ದೇವಾಲಯಗಳನ್ನೂ ಕೆಡಿಸಿದರು. ಯೋಗಿಯಾದವನೂ, ಸಿದ್ಧನೂ, ಜ್ಞಾನಿಯೂ, ಒಳ್ಳೆ ಕೆಲಸ ಮಾಡುವವನೂ ದುರ್ಲಭರಾದರು. ಕಲಿಯೆಂಬ ಕಾಡ್ಗಿಚ್ಚಿಗೆ ಸಿಲುಕಿ ಮೋಕ್ಷಸಾಧನಗಳು ಭಸ್ಮವಾದವು. ಪಟ್ಟಣಗಳಲ್ಲಿ ಅನ್ನ ವಿಕ್ರಯ ನಡೆಯುವುದು. ದ್ವಿಜರು ಹಣದ ಸಂಪಾದನೆಗೆ ದೇವರ ಹೆಸರನ್ನು ಉಪಯೋಗಿಸಿಕೊಳ್ಳುವರು. ಹೆಂಗಸರು ಸೂಳೆಗಾರಿಕೆಯಲ್ಲಿ ತೊಡಗುವರು. ಹೀಗೆ ಕಲಿಯುಗದ ದೋಷಗಳನ್ನು ನೋಡುತ್ತ ಭೂಲೋಕದಲ್ಲಿ ಸಂಚಾರ ಮಾಡುತ್ತ ಕೃಷ್ಣನು ವಿಹರಿಸಿದ್ದ ಯಮುನಾ ತೀರಕ್ಕೆ ಬಂದೆನು. ಅಲ್ಲಿ ಒಂದು ಆಶ್ಚರ್ಯವನ್ನು ಕಂಡೆನು. ಮುನೀಶ್ವರರೇ, ಅದನ್ನು ಕೇಳಿ. ಆ ಯಮುನಾ ತೀರದಲ್ಲಿ ಬಹಳ ದುಃಖಿತಳಾಗಿ ಒಬ್ಬ ಸ್ತ್ರೀ ಕುಳಿತಿದ್ದಳು. ಅವಳ ಪಕ್ಕದಲ್ಲಿ ಇಬ್ಬರು ಮುದುಕರು ನೆಲದ ಮೇಲೆ ಬಿದ್ದಿದ್ದರು. ಅವರಲ್ಲಿ ಉಸಿರಾಟವಲ್ಲದೆ, ಮತ್ತಾವ ಚೈತನ್ಯವೂ ಇರಲಿಲ್ಲ. ಆ ಹೆಂಗಸು ಅವರಿಗೆ ಉಪಚಾರ ಮಾಡುತ್ತಾ, ಅವರ ಎದುರಿಗೆ ಅಳುತ್ತಾ, ಅವರನ್ನು ಎಬ್ಬಿಸಬೇಕೆಂದು ಎಷ್ಟೋ ಪ್ರಯತ್ನ ಮಾಡುತ್ತಿದ್ದಳು. ಅವಳು ತನ್ನನ್ನು ಕಾಪಾಡುವವನು ಯಾವನಾದರೂ ಕಣ್ಣಿಗೆ ಬೀಳುವನೇ ಎಂದು ಹತ್ತು ದಿಕ್ಕುಗಳಲ್ಲೂ ನೋಡುತ್ತಿದ್ದಳು. ನೂರು ಜನ ಹೆಂಗಸರು ಅವಳಿಗೆ ಬೀಸಣಿಗೆಯಿಂದ ಬೀಸುತ್ತಿದ್ದರೂ ಅವಳ ತಾಪ ಹರಿಯಲಿಲ್ಲ. ಅವಳನ್ನು ದೂರದಿಂದ ನೋಡಿ ನಾನು ಅವಳ ಹತ್ತಿರಕ್ಕೆ ಹೋದೆನು. ನನ್ನನ್ನು ನೋಡಿ ಅವಳು ಎದ್ದು ನಿಂತು ಹೀಗಿ ಹೇಳಿದಳು.

                                         ಬಾಲೆ ಹೇಳಿದಳು

ಅಯ್ಯಾ ಸಾಧುವೇ, ಸ್ವಲ್ಪ ಇಲ್ಲಿದ್ದು ನನ್ನ ದುಃಖವನ್ನು ನಾಶ ಮಾಡು. ನಿನ್ನ ದರ್ಶನದಿಂದ ಜನರಿಗೆ ಸಮಸ್ತ ಪಾಪಗಳು ಕಳೆಯುವುವು. ನಿನ್ನ ಮಾತಿನಿಂದ ದುಃಖೋಪಶಮನವಾಗುತ್ತದೆ. ನಿತ್ಯ ದರ್ಶನ ಲಭಿಸುವುದೇ ಒಂದು ಭಾಗ್ಯ.

ನಾರದನು ಹೇಳಿದನು

ಅಮ್ಮಾ, ನೀನಾರು? ಇಲ್ಲಿ ಮಲಗಿರುವ ಇಬ್ಬರು ವೃದ್ಧರು ಯಾರು? ನಿನ್ನ ಸುತ್ತಲಿರುವ ಈ ಹೆಂಗಸರು ಯಾರು? ನಿನ್ನ ದುಃಖಕ್ಕೆ ಏನು ಕಾರಣ? ಎಲ್ಲಾ ಪೂರ್ತಿಯಾಗಿ ತಿಳಿಸು.

ಬಾಲೆ ಹೇಳಿದಳು

ನನ್ನ ಹೆಸರು ಭಕ್ತಿ. ಇವರಿಬ್ಬರೂ ನನ್ನ ಮಕ್ಕಳು. ಒಬ್ಬನ ಹೆಸರು ಜ್ಞಾನ. ಮತ್ತೊಬ್ಬನ ಹೆಸರು ವೈರಾಗ್ಯ. ಇವರಿಬ್ಬರೂ ಕಾಲ ವಶದಿಂದ ಇಂತಹ ಜರ್ಜರ ಸ್ಥಿತಿಗೆ ಬಂದಿದ್ದಾರೆ. ನನ್ನ ಸುತ್ತಲೂ ಇರುವ ಹೆಂಗಸರು ಗಂಗೆ ಮೊದಲಾದ ನದಿಗಳು. ಇವರು ನನಗೆ ಉಪಚಾರ ಮಾಡಲು ಬಂದಿದ್ದಾರೆ. ದೇವತೆಗಳು ಬಂದು ನನಗೆ ಉಪಚಾರ ಮಾಡಿದರೂ ನನಗೆ ಒಳ್ಳೆಯದಾಗುತ್ತಿಲ್ಲ. ಈಗ ನೀನು ಮನಸ್ಸಿಟ್ಟು ನನ್ನ ವಿಷಯವನ್ನು ಕೇಳು. ಎಲೈ ತಪೋಧನನೇ, ನನ್ನ ವಿಷಯ ಎಷ್ಟೋ ಇದೆ. ಅದನ್ನು ಕೇಳಿ ನನಗೆ ಸುಖವನ್ನುಂಟು ಮಾಡು. ನಾನು ದ್ರವಿಡ ದೇಶದಲ್ಲಿ ಹುಟ್ಟಿದೆನು. ಕರ್ಣಾಟಕ ದೇಶದಲ್ಲಿ ಬೆಳೆದೆನು. ಮಹಾರಾಷ್ಟ್ರದೇಶದಲ್ಲೂ, ಗುರ್ಜರ ದೇಶದಲ್ಲೂ ಅಲ್ಲಲ್ಲಿ ಬೆಳೆದು ಕೊನೆಗೆ ಹೀನಸ್ಥಿತಿಗೆ ಬಂದೆನು. ಅಲ್ಲಿ ಘೋರನಾದ ಕಲಿಯ ಸಂಪರ್ಕದಿಂದ ಪಾಷಂಡರು ನನ್ನ ಶರೀರವನ್ನು. ಕತ್ತರಿಸಿದರು. ನಾನು ಬಲಹೀನಳಾಗಿ ಈ ಮಕ್ಕಳೊಂದಿಗೆ ಬಹಳಕಾಲ ಕೆಲಸಕ್ಕೆ ಬಾರದವಳಾಗಿದ್ದೆನು. ಆದರೆ, ಬೃಂದಾವನಕ್ಕೆ ಹೋಗಿ ಪುನಃ ಒಳ್ಳೆಯ ರೂಪವನ್ನು ಯೌವನವನ್ನೂ ಪಡೆದಿದ್ದೇನೆ. ಆದರೆ ಈ ನನ್ನ ಮಕ್ಕಳು ಮಾತ್ರ ನರಳುತ್ತಾ ಇಲ್ಲಿ ಬಿದ್ದಿದ್ದಾರೆ. ನಾನು ಈ ಜಾಗವನ್ನು ಬಿಟ್ಟು ವಿದೇಶಕ್ಕೆ ಹೋಗಬೇಕೆಂದಿದ್ದೇನೆ. ಆದರೆ ಮುದಿತನವನ್ನು ಹೊಂದಿರುವ ನನ್ನ ಮಕ್ಕಳನ್ನು ನೋಡಿ ದುಃಖಿಸುತ್ತಿದ್ದೇನೆ. ನಾನು ತರುಣಿಯಾಗಿದ್ದು ನನ್ನ ಮಕ್ಕಳು ಹೀಗೆ ಮುದುಕರಾಗಿರುವುದೇಕೆ? ನಾನು ತರುಣಿಯಾಗಿದ್ದು ನನ್ನ ಮಕ್ಕಳು ಹೀಗೆ ಮುದುಕರಾಗಿರುವುದೇಕೆ? ನಾವು ಮೂವರೂ ಒಟ್ಟಿಗಿರುವಾಗ ಈ ವೈಪರೀತ್ಯ ಹೇಗೆ ಬಂತು? ಲೋಕದಲ್ಲಿ ತಾಯಿ ಮುದುಕಿಯಾಗಿ ಮಕ್ಕಳು ತರುಣರಾಗಿರುವುದು ಸಹಜ. ಆದುದರಿಂದ ವಿಸ್ಮಯಪಟ್ಟು ಈ ಸ್ಥಿತಿಗೆ ಚಿಂತಿಸುತ್ತಿದ್ದೇನೆ. ಯೋಗಿಶ್ವರನೇ, ಬುದ್ಧಿವಂತನೇ, ಇದಕ್ಕೆ ಕಾರಣ ಏನೆಂಬುದು ನೀನಾದರೂ ತಿಳಿಸು.

ನಾರದನು ಹೇಳಿದನು

ಎಲೌ ಪಾಪರಹಿತಳೇ, ಜ್ಞಾನದಿಂದ ಎಲ್ಲವನ್ನೂ ನನ್ನಲ್ಲೇ ನೋಡುತ್ತೇನೆ. ನೀನು ಚಿಂತಿಸಬೇಡ. ವಿಷ್ಣುವು ನಿನಗೆ ಒಳ್ಳೆಯದನ್ನು ಮಾಡುತ್ತೇನೆ.

ಸೂತನು ಹೇಳಿದನು

ನಾರದನು ಕ್ಷಣಕಾಲದಲ್ಲಿ ಎಲ್ಲವನ್ನೂ ತಿಳಿದು ಹೇಳಲಾರಂಭಿಸಿದನು.

ನಾರದನು ಹೇಳಿದನು

ಬಾಲೆಯೇ ಮನಸ್ಸಿಟ್ಟು ಕೇಳು. ಈಗ ದಾರುಣವಾದ ಕಲಿಯುಗ. ಆದುದರಿಂದ ಸದಾಚಾರವು ಮಾಯವಾಗಿದೆ. ಯೋಗಮಾರ್ಗವೂ, ತಪಸ್ಸೂ, ಎಲ್ಲಿಯೂ ಕಂಡು ಬರುವುದಿಲ್ಲ. ಜನರು ಪಾಪಕರ್ಮಗಳನ್ನು ಮಾಡುತ್ತ ಶಠರಾಗಿದ್ದಾರೆ. ಈ ಕಲಿಯುಗದಲ್ಲಿ ಒಳ್ಳೆಯವರು ದುಃಖ ಪಡುತ್ತಾರೆ. ಕೆಟ್ಟವರು ಸಂತೋಷಪಡುತ್ತಿದ್ದಾರೆ. ವಿದ್ಯೆ ಮತ್ತು ಜ್ಞಾನವಿಲ್ಲದಿದ್ದರೂ, ಯಾವ ಬುದ್ಧಿಶಾಲಿ  ಉದ್ಧಂತನಾಗಿರುತ್ತಾನೋ, ಅವನೇ ಧೀರನೂ ಪಂಡಿತನೂ ಎನಿಸಿಕೊಳ್ಳುತ್ತಾನೆ. ಅಸ್ಪೃಷ್ಯರಾದ ಇಂತಹ ದುರಾಚಾರಿಗಳನ್ನು ಹೊತ್ತು ವರ್ಷ ವರ್ಷಕ್ಕೂ ಆದಿಶೇಷನಿಗೆ ಭಾರವಾಗುತ್ತಿದ್ದಾಳೆ. ಲೋಕ ಕಲ್ಯಾಣವು ಕಂಡು ಬರುತ್ತಿಲ್ಲ. ನಿನ್ನನ್ನೂ, ನಿನ್ನ ಮಕ್ಕಳನ್ನೂ, ನೋಡುವವನೇ ಇಲ್ಲ. ಕಾಮಾಂಧರಾದ ಜನರಿಂದ ನೀನು ಉಪೇಕ್ಷಿಸಲ್ಪಟ್ಟು ಮುದುಕಿಯಾಗಿ ಬಿಟ್ಟಿದ್ದೆ. ಆದರೆ ಬೃಂದಾವನದ ಸಂಯೋಗದಿಂದ ನೀನು ಪುನಃ ತರುಣಿಯಾದೆ. ಬೃಂದಾವನವು ಧನ್ಯ. ಅಲ್ಲಿ ಭಕ್ತಿ ಯಾವಾಗಲೂ ನಟಿಸುತ್ತಿರುತ್ತದೆ. ತಮ್ಮನ್ನು ಗ್ರಹಿಸುವವರು ಇಲ್ಲದೇ ಇರುವುದರಿಂದ ಈ ನಿನ್ನ ಮಕ್ಕಳು ವೃದ್ಧಾಪ್ಯವನ್ನು ಬಿಡಲಿಲ್ಲ. ಇವರು ತಮ್ಮಲ್ಲಿ ತಾವೇ ಸುಖವನ್ನು ಹೊಂದಿ ಗಾಢನಿದ್ರೆಯಲ್ಲಿ ಮುಳುಗಿದ್ದಾರೆ.

ಭಕ್ತಿ ಹೇಳಿದಳು

ಪರೀಕ್ಷಿನ್ ಮಹಾರಾಜನು ಅಶುಚಿಯಾದ ಕಲಿಗೆ ಅವಕಾಶ ಹೇಗೆ ಕೊಟ್ಟನು? ಕಲಿಯುಗದಲ್ಲಿ ಒಳ್ಳೆಯ ವಸ್ತುಗಳ ಸಾರವೆಲ್ಲ ಎಲ್ಲಿಗೆ ಹೋಯಿತು? ಕರುಣಾಳುವಾದ ಶ್ರೀಹರಿ ಅಧರ್ಮವನ್ನು ನೋಡುತ್ತ ಏಕೆ ಸುಮ್ಮನಿದ್ದಾನೆ? ಈ ಸಂಶಯಗಳನ್ನು ಬಿಡಿಸು. ನಿನ್ನ ಮಾತನ್ನು ಕೇಳುತ್ತಾ ನನಗೆ ಸುಖವುಂಟಾಗುತ್ತಿದೆ.

ನಾರದನು ಹೇಳಿದನು

ಅಮ್ಮಾ, ನೀನು ಪ್ರೀತಿಯಿಂದ ಕೇಳುತ್ತಿರುವುದರಿಂದ ಹೇಳುತ್ತಿದ್ದೇನೆ ಕೇಳು. ನಿನ್ನ ದುಃಖಪರಿಹಾರವಾಗುವುದು. ಯಾವ ದಿನ ಶ್ರೀಕೃಷ್ಣನು ಭೂಲೋಕವನ್ನು ಬಿಟ್ಟು ವೈಕುಂಠಕ್ಕೆ ಹೋದನೋ ಅದೇ ದಿನ ಸಮಸ್ತ ಸಾಧನಗಳನ್ನೂ ಮುರಿಯುವ ಕಲಿಯುಗ ಪ್ರಾರಂಭವಾಯಿತು. ಪರೀಕ್ಷಿನ್ಮಹಾರಾಜನು ದಿಗ್ವಿಜಯ ಮಾಡುವಾಗ ಕಲಿ ಆತನ ಕೈಗೆ ಸಿಕ್ಕಿ ಆತನನ್ನೇ ಶರಣು ಹೊಕ್ಕನು. ಆದ್ದರಿಂದ ಆತನು ದುಂಬಿಯಂತೆ ಸಾರವನ್ನು ಹೀರುವ ಕಲಿಯನ್ನು ಕೊಲ್ಲಲಿಲ್ಲ. ತಪಸ್ಸಿನಿಂದಲೂ, ಯೋಗದಿಂದಲೂ, ಸಮಾಧಿಯಿಂದಲೂ ಯಾವ ಫಲವನ್ನು ಹೊಂದಲು ಸಾಧ್ಯವಿಲ್ಲವೋ ಅಂತಹ ಫಲವನ್ನು ಈ ಕಲಿಯುಗದಲ್ಲಿ ಜನರು ವಿಷ್ಣುಕೀರ್ತನದಿಂದ ಸಾಧಿಸಬಲ್ಲರು. ಆದುದರಿಂದ ಕಲಿಯುಗ ಒಂದು ವಿಧದಲ್ಲಿ ಜನರಿಗೆ ಒಳ್ಳೆಯದಾಗಿದೆ. ಹೀಗೆ ಒಳ್ಳೆಯದು ಕೆಟ್ಟದ್ದು ಬೆರೆತಿರುವ ಈ ಕಲಿಯನ್ನು ವಿಷ್ಣುಭಕ್ತನಾದ ಪರೀಕ್ಷಿನ್ಮಹಾರಾಜನು ಜನರ ಹಿತಕ್ಕಾಗಿ ಹಾಗೆಯೇ ಬಿಟ್ಟನು. ಕೆಟ್ಟ ಕೆಲಸಗಳನ್ನು ಮಾಡುವುದರಿಂದ ಎಲ್ಲ ಕಡೆಗಳಲ್ಲೂ ಇದ್ದ ಸಾರವು ಈಗ ಹೊರಟು ಹೋಗಿದೆ. ಭೂಲೋಕದಲ್ಲಿನ ಪದಾರ್ಥಗಳು ಬೀಜವಿಲ್ಲದ ಜೊಳ್ಳಿನಂತೆ ಸಾರಹೀನವಾಗಿವೆ. ಈ ಯುಗದಲ್ಲಿ ಬ್ರಾಹ್ಮಣರು ಹಣದ ಆಸೆಗೆ ಹರಿನಾಮಕೀರ್ತನವನ್ನು ಮನೆ ಮನೆಯಲ್ಲೂ ಮಾಡುತ್ತಿದ್ದಾರೆ. ಅದುದರಿಂದ ವಿಷ್ಣು ಕಥೆಯಲ್ಲಿನ ಸಾರ ಲೋಪವಾಗಿದೆ. ಪುಣ್ಯಕ್ಷೇತ್ರಗಳಲ್ಲಿ ಬಹಳ ಕೆಟ್ಟ ಕೆಲಸಗಳನ್ನು ಮಾಡುವ ನಾಸ್ತಿಕರಾದಂತಹ ಜನರೇ ತುಂಬಿರುವುದರಿಂದ ಆ ಕ್ಷೇತ್ರಗಳಲ್ಲಿ ಸಾರವಿಲ್ಲ. ಕಾಮ, ಕ್ರೋಧ, ಲೋಭ, ತೃಷ್ಣೆ ಮತ್ತು ಚಿಂತೆಯಿಂದ ಕೂಡಿ  ತಪಸ್ಸನ್ನು ಮಾಡುವುದರಿಂದ ತಪಸ್ಸಿನ ಸಾರ ನಷ್ಟವಾಗಿದೆ. ಧ್ಯಾನ ಮಾಡುವ ಜನರು ಮನಸ್ಸನ್ನು ಜಯಿಸದಿರುವುದರಿಂದಲೂ, ಲೋಭ-ಡಂಭಗಳು ಬಿಡದೆ ಪಾಷಂಡರನ್ನು ಆಶ್ರಯಿಸಿರುವುದರಿಂದಲೂ, ಶಾಸ್ತ್ರಗಳನ್ನು ಅಭ್ಯಾಸ ಮಾಡದಿರುವುದರಿಂದಲೂ, ಧ್ಯಾನ ಯೋಗದ ಫಲ ಅವರಿಗೆ ಸಿಗುತ್ತಿಲ್ಲ. ಪಂಡಿತರು ಸಹ ಕೋಣಗಳಂತೆ ಕೇವಲ ಕಾಮಾಸಕ್ತರಾಗಿದ್ದಾರೆ. ಇವರು ಮಕ್ಕಳನ್ನು ಹುಟ್ಟಿಸುವುದರಲ್ಲಿ ಸಮರ್ಥರೇ ಹೊರತು ಮೋಕ್ಷಸಾಧನೆಯಲ್ಲಿ ಅಸಮರ್ಥರಾಗಿದ್ದಾರೆ. ಸಾಂಪ್ರಾದಾಯಿಕವಾಗಿ ಬಂದ ವಿಷ್ಣು ಭಕ್ತಿ ಎಲ್ಲಿಯೂ ಕಂಡುಬರುವುದಿಲ್ಲ. ಹೀಗೆ ಎಲ್ಲಿ ನೋಡಿದರೂ ವಸ್ತುಗಳು ಸಾರಹೀನವಾಗಿವೆ. ಇದು ಕೇವಲ ಯುಗಧರ್ಮ. ಇದಕ್ಕೆ ಯಾರೂ ಹೊಣೆಯಲ್ಲ. ಆದುದರಿಂದ ಹತ್ತಿರದಲ್ಲಿದ್ದೂ ವಿಷ್ಣುದೇವನು ಇದನ್ನೆಲ್ಲಾ ಸಹಿಸಿಕೊಂಡಿದ್ದಾನೆ.

ಸೂತನು ಹೇಳಿದನು

ಹೀಗೆ ನಾರದನು ಹೇಳಿದ್ದನ್ನು ಕೇಳಿ ಭಕ್ತಿಯು ಆಶ್ಚರ್ಯಪಟ್ಟು ಪುನಃ ಹೀಗೆ ಹೇಳಿದಳು. ಶೌನಕನೇ ಅದನ್ನು ಕೇಳು.

ಭಕ್ತಿ ಹೇಳಿದಳು

ದೇವಋಷಿಯೇ, ನೀನೇ ಧನ್ಯನು. ನನ್ನ ಅದೃಷ್ಟದಿಂದ ನೀನಿಲ್ಲಿಗೆ ಬಂದಿರುತ್ತೀಯೆ. ಲೋಕದಲ್ಲಿ ಸತ್ಪುರುಷರ ಸಂದರ್ಶನ ಸಮಸ್ತ ಇಷ್ಟಾರ್ಥಗಳನ್ನು ಪೂರೈಸುವುದರಿಂದ ಅತ್ಯುತ್ತಮವಾಗಿದೆ.

ಯಾರ ಮಾತುಗಳನ್ನು ಮಾತ್ರ ಆಶ್ರಯಿಸಿ ಸಂಸಾರಿಯಾಗಿರುವವನು, ಮಾಯೆಯನ್ನು ಗೆಲ್ಲುತ್ತಾನೆಯೋ.                                          

ಯಾರ ಕೃಪೆಯಿಂದ ಧ್ರುವನು ಶಾಶ್ವತವಾದ ಪದವಿಯನ್ನು ಹೊಂದಿದನೋ ಅಂತಹ ಸಕಲಮಂಗಳಪ್ರದನಾದ, ಬ್ರಹ್ಮಪುತ್ರನಾದ ನಾರದನಿಗೆ ನಮಸ್ಕರಿಸುತ್ತೇನೆ.

ಎಂಬಲ್ಲಿಗೆ ಶ್ರೀಪದ್ಮಪುರಾಣದ ಉತ್ತರಖಂಡದಲ್ಲಿನ ಶ್ರೀಮದ್ಭಾಗವತಮಾಹಾತ್ಮ್ಯದಲ್ಲಿ ಭಕ್ತಿನಾರದ ಸಮಾಗಮವೆಂಬ ಪ್ರಥಮಾಧ್ಯಾಯವು ಮುಗಿಯಿತು.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)