Article of the Month February 2020

                                    ಗಾಯತ್ರಿ

                                   1-3-1994

       ಈಗ ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ವಿಷಯವನ್ನು ಕುರಿತು ಆಲೋಚಿಸೋಣ. ಶರೀರದಲ್ಲಿ ಅನೇಕ ನಾಡಿಗಳು (ನರಗಳು) ಇದ್ದು ಮಿದುಳಿನ ಕೆಲಸಕ್ಕೆ ಸಹಾಯಕವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಯೋಗಶಾಸ್ತ್ರದಲ್ಲಿ (ಮುಖ್ಯವಾಗಿ ಹಠಯೋಗದಲ್ಲಿ) ಈ ಸಾವಿರಾರು ನಾಡಿಗಳಲ್ಲಿನ ಮೂಲಭೂತವಾದ ಎರಡು ನಾಡಿಗಳನ್ನು ಗುರುತಿಸಿರುತ್ತಾರೆ. ಇವೇ ಇಡಾ ಮತ್ತು ಪಿಂಗಳಾ ಎಂಬುವು. ಹೊರಗಿನಿಂದ ಬರುವ ಶಬ್ದಾದಿ ವಿಷಯಗಳ ಇಂದ್ರಿಯ ಸಂವೇದನೆಯುಇಡಾನಾಡಿಯ ಮೂಲಕ ಮೆದುಳಿನ ಒಳಗೆ, ಮನಸ್ಸಿಗೆ, ತಲುಪುತ್ತದೆ. ಮೆದುಳಿನಲ್ಲಿ ಅಭಿವ್ಯಕ್ತವಾದ ಮನಸ್ಸಿನ ಪ್ರತಿಕ್ರಿಯಾ ಶಕ್ತಿ ಪ್ರವಾಹವುಪಿಂಗಳಾನಾಡಿಯ ಮೂಲಕ ಹೊರಗೆ ಹರಿಯುತ್ತದೆ. ಹೀಗೆ ಮನಸ್ಸಿಗೂ ಬಾಹ್ಯಪ್ರಪಂಚಕ್ಕೂ ಸಂಬಂಧವನ್ನು ಕಲ್ಪಿಸುವ ಈ ಎರಡು ನಾಡಿಗಳ ಕೆಲಸ ಪ್ರಾಣವಿರುವವರೆಗೂ ನಡೆಯುತ್ತಲೇ ಇರುತ್ತದೆ. ಪ್ರಾಣವಿರುವವರೆಗೂ ನಡೆಯುವ ಶರೀರ ವ್ಯಾಪಾರಕ್ಕೆ ಮೂಲಭೂತವಾದ ನರಗಳ ವ್ಯಾಪಾರವು ಎರಡು ಬಗೆಯಾಗಿರುತ್ತದೆ. ಉದಾಹರಣೆಗೆ ಉಸಿರನ್ನು ಎಳೆದುಕೊಳ್ಳುವುದು ಬಿಡುವುದೂ. ಒಂದರಲ್ಲಿ ನರಗಳ ಬಿಗಿತವೂ ಇನ್ನೊಂದರಲ್ಲಿ ಸಡಿಲವೂ ಇರುತ್ತದೆ. ಸೂರ್ಯಚಂದ್ರರು ಹೇಗೆ ಪ್ರಕೃತಿಯಲ್ಲಿ ಒಂದಕ್ಕೊಂದು ಇದುರಾಗಿದ್ದು ಬೇರೆ ಬೇರೆ ಕಾರ್ಯಗಳಿಗೆ ಪ್ರೇರಕರಾಗಿ ಉಷ್ಣ, ಶೈತ್ಯ, ತೇಜಸ್ಸು, ಆಹ್ಲಾದ ಇತ್ಯಾದಿ ಭಿನ್ನಭಾವಗಳಿಗೆ ಪ್ರೇರಕಗಳಾಗಿದ್ದಾರೆಯೋ, ಹಾಗೆಯೇ ಇವೂ ಇರುವುದರಿಂದ ಇಡಾನಾಡಿಗೆ ಚಂದ್ರನಾಡಿಯೆಂದೂ, ಪಿಂಗಳಿಗೆ ಸೂರ್ಯನಾಡಿಯೆಂದು ಹೆಸರುಗಳು ಬಂದಿವೆ. 

       ಇವೆರಡಲ್ಲದೆ ಮಾನವನಲ್ಲಿ ಜ್ಞಾನದ ಪ್ರತ್ಯೇಕ ಬೆಳವಣಿಗೆಯಿರುವುದರಿಂದ ಇದಕ್ಕೆ ಸಂಬಂಧಪಟ್ಟ ಮೂರನೆಯ ನಾಡಿಯಾದ ಸುಷುಮ್ನಾ ನಾಡಿಯು ನಡುವೆ ಗುದಸ್ಥಾನದಿಂದ ಮಿದುಳಿನವರೆಗೂ ವ್ಯಾಪಿಸಿದೆ ಎಂದು ಭಾವಿಸಲಾಗಿದೆ. ಲೌಕಿಕ ವ್ಯವಹಾರದಲ್ಲಿ ಇದು ಕೆಲಸಮಾಡುವುದಿಲ್ಲ. ಆದರೆ ಆಧ್ಯಾತ್ಮಕ ಜ್ಞಾನವು ಬೆಳೆದಷ್ಟೂ ಇದು ಕೆಲಸ ಮಾಡುತ್ತದೆ. ಇದರಲ್ಲಿ ಮೂಲಾಧಾರದಿಂದ ಸಹಸ್ರಾರದವರೆಗೂ 6 ಚಕ್ರಗಳಿರುತ್ತವೆ. ಕುಂಡಲಿನೀಶಕ್ತಿ (ಹಾವಿಗೆ ಹೋಲಿಸಲ್ಪಟ್ಟಿದೆ) ಮೂಲಾಧಾರದಲ್ಲಿ ಹಾವಿನಂತೆ ಸುರುಳಿಸುತ್ತಿಕೊಂಡು ನಿದ್ರೆಮಾಡುತ್ತಿರುತ್ತದೆ. ಆಧ್ಯಾತ್ಮಿಕ ಜ್ಞಾನದ ಪ್ರಗತಿಯಿಂದ (ಹಠಯೋಗದಲ್ಲಿ ಇಡಾಪಿಂಗಳಾನಾಡಿಗಳ ಬಲಾತ್ಕಾರವಾದ ನಿರೋಧದಿಂದ) ಈ ಕುಂಡಲಿನೀ ಶಕ್ತಿಯು ಕ್ರಮೇಣ ಮೇಲಕ್ಕೆ ಪ್ರಸರಿಸಿ ಒಂದೊಂದು ಚಕ್ರವನ್ನೂ ಭೇದಿಸಿಕೊಂಡು ಹೋಗಿ ಕೊನೆಗೆ ಸಹಸ್ರಾರವನ್ನು ತಲುಪಿದರೆ ಯೋಗಿ ಮುಕ್ತನಾಗುತ್ತಾನೆ. ಈ ಸುಷುಮ್ನಾನಾಡಿಗೆ ಅಗ್ನಿಯನ್ನು ಸಂಕೇತವಾಗಿ ಕೊಡಲಾಗಿದೆ. ರಾಮಾಯಣದ ಅಂತರಾರ್ಥದಲ್ಲಿ ಲಂಕಾದಹನ, ಸೀತಾಗ್ನಿಪ್ರವೇಶ ಈ ಕಥೆಗಳಲ್ಲಿನ ಅಗ್ನಿಗೂ ಸುಷುಮ್ನಾ ನಾಡಿಯಲ್ಲಿ ನಡೆಯುವ ಅಗ್ನಿಯ ಕೆಲಸಕ್ಕೂ ಸಂಬಂಧವನ್ನು ಹೇಳಲಾಗಿದೆ. ಆದುದರಿಂದ ಹಿಂದೆ ಚರ್ಚಿಸಲ್ಪಟ್ಟಿರುವ ಸೂರ್ಯ, ಚಂದ್ರ ಮತ್ತು ಅಗ್ನಿಯ ವಿಷಯಗಳನ್ನು ಪಿಂಗಳ ಇಡಾ ಮತ್ತು ಸುಷುಮ್ನಾ ನಾಡಿಗಳಿಗೂ ಅನ್ವಯಿಸಿಕೊಂಡು ನೋಡಬಹುದು. 

       ಸವಿತುಃಎಂಬ ಶಬ್ದವು ಪಿಂಗಳಾನಾಡಿಗೂ ಯಃ ಎಂಬುದು ಇಡಾನಾಡಿಗೂ ಸೂಚಕಗಳಾಗಿವೆ. ಸೂರ್ಯ ಚಂದ್ರರಿಗೆ ಇದನ್ನು ಹಿಂದೆಯೇ ಅನ್ವಯಿಸಲಾಗಿದೆ. ವರೇಣಿಯಂ ಭರ್ಗಃ, ದೇವಸ್ಯ, ಧೀಮಹಿ, ದಿಯಃ, ಈ ಶಬ್ದಗಳು ಅಗ್ನಿಸಂಕೇತವುಳ್ಳ ಸುಷುಮ್ನಾ ನಾಡಿಗೆ ಸೂಚಕಗಳು. 

       ಸುಷುಮ್ನಾ ನಾಡಿಯಲ್ಲಿನ ಆರು ಚಕ್ರಗಳು 

1.    ಮೂಲಾಧಾರ – ಭೂಮಿತತ್ವ

2.    ಸ್ವಾಧಿಷ್ಮಾನ ಜಲತತ್ವ 

3.    ಮಣಿಪುರ ಅಗ್ನಿತತ್ವ 

4.    ಅನಾಹತ ವಾಯುತತ್ವ 

5.    ವಿರುದ್ಧ ಆಕಾಶತತ್ವ 

6.    ಆಜ್ಞಾ ಮನಸ್ತತ್ವ 

ಇದಕ್ಕಿಂತಲೂ ಮೇಲೆ ಇರುವುದೇ ಸಹಸ್ರಾರ ಕಮಲ, ಕುಂಡಲಿನಿ ಇದನ್ನು ತಲುಪಬೇಕು. 

       ಈಗ ಗಾಯಿತ್ರೀ ಮಂತ್ರದಲ್ಲಿನ ಶಬ್ದಗಳಿಗೂ ಈ ಚಕ್ರಗಳಿಗೂ ಸಹಸ್ರಾರ ಕಮಲಕ್ಕೂ ಇರುವ ಹೋಲಿಕೆಯನ್ನು ಗಮನಿಸೋಣ. 

1.    ವರೇಣಿಯಂ- ಇದುವೃಎಂಬ ದಾತುವಿನಿಂದ ಬಂದಿದೆ. ಇದಕ್ಕೆ ಆವರಿಸುವುದು, ಸುತ್ತಿಕೊಳ್ಳುವುದು ಎಂಬ ಅರ್ಥಗಳಿರುವುದರಿಂದ ಕುಂಡಲಿನೀ ಶಕ್ತಿಯು ಹಾವಿನ ರೂಪದಲ್ಲಿ ಸುರಳಿಹಾಕಿಕೊಂಡು ಮಲಗಿರುವ ಸ್ಥಿತಿಗೆ ಸೂಚಕವಾಗಿದೆ. ಮೂಲಾಧಾರದಲ್ಲಿ ಹೀಗಿರುವ ಕುಂಡಲಿನೀ ಶಕ್ತಿಯು ಎಚ್ಚರ ಹೊಂದಿದಾಗ ಸ್ವಲ್ಪ ಮೇಲಕ್ಕೆದ್ದು ಸ್ವಾಧಿಷ್ಟಾನ ಚಕ್ರವನ್ನು ತಲುಪುತ್ತದೆ. ಈ ಎರಡು ಚಕ್ರಗಳು ಭೂಮಿ ಮತ್ತು ನೀರಿನ ತತ್ವಗಳುಳ್ಳವು. ನೀರು ಭೂಮಿಯನ್ನು ಆವರಿಸಿಕೊಂಡಿರುದುದರಿಂದ ವರೇಣಿಯಂ ಶಬ್ದವು ನೀರಿನ ಸೂಚಕವೂ ಆಗಿದೆ. ಆದುದರಿಂದ ಈ ಶಬ್ದವು ಮೂಲಾಧಾರ ಮತ್ತು ಸ್ವಾಧಿಷ್ಠಾನ ಚಕ್ರಗಳ ಸಂಕೇತವಾಗಿದೆ. 

2.    ಭರ್ಗ: – ಇದಕ್ಕೆ ಪಾಕ ಅಥವಾ ಪಚನವಾಗುವುದು ಎಂದು ಅರ್ಥವೆಂದೂ, ಇದು ಅಗ್ನಿ ತತ್ವ ಸೂಚಕವೆಂದೂ ಹಿಂದೆಯೇ ತಿಳಿಸಿರುತ್ತೆ. ಆದುದರಿಂದ ಇದು ಜಠರಾಗ್ನಿ ಇರುವ ಹೊಟ್ಟೆಯ ಭಾಗಕ್ಕೆ ಸರಿಯಾಗಿ ಹಿಂದೆಯಿರುವ ಮಣಿಪುರ ಚಕ್ರಕ್ಕೆ ಸಂಕೇತವಾಗಿದೆ. 

3.    ದೇವಸ್ಯ ದೇವ ಎಂದರೆ ಕ್ರೀಡಿಸುವವನುಎಂಬ ಅರ್ಥವಿರುವುದರಿಂದಲೂ ಗಾಳಿಯು ಸ್ವೇಚ್ಛಾ ವಿಹಾರಕ್ಕೆ ಸೂಚಕವಾಗಿರುವುದರಿಂದಲೂ, ವಾಯು ತತ್ವದ ಮತ್ತು ಎದೆಯ ಭಾಗದಲ್ಲಿರುವ ಅನಾಹುತ ಚಕ್ರಕ್ಕೆ ಸಂಕೇತವಾಗಿದೆ. 

4.    ಧೀಮಹಿ – ಧ್ಯಾನಿಸಬೇಕು ಎಂದು ಅರ್ಥ. ಧ್ಯಾನಕ್ಕೆ ಯಾವ ಅಡಚಣೆಯೂ ಇಲ್ಲದ ಆಕಾಶತತ್ವ್ವದ ವಿಶುದ್ಧ ಚಕ್ರವನ್ನು ಇದಕ್ಕೆ ಜೋಡಿಸಬಹುದು. ಧ್ಯಾನವು ಭಾವನಾತ್ಮಕವಾಗಿ ಶಬ್ದರೂಪದಲ್ಲಿರುತ್ತದೆ. ಆಕಾಶವು ಶಬ್ದಗುಣವುಳ್ಳದ್ದು. ಆದುದರಿಂದಲೂ ಇದು ಹೊಂದಾಣಿಕೆಯಾಗುತ್ತದೆ. ಮತ್ತು ಕಂಠಕ್ಕೂ ಶಬ್ದಕ್ಕೂ ಇರುವ ಸಂಬಂಧವನ್ನೂ ಗಮನಿಸಬೇಕು. 

5. ಧಿಯಃ – ಬುದ್ಧಿಗಳನ್ನು ಎಂದು ಅರ್ಥ. ಬುದ್ಧಿಗೂ ಮನಸ್ತತ್ವದ ಆಜ್ಞಾ ಚಕ್ರಕ್ಕೂ ಸಂಬಂಧವಿದೆ. ಇದು ಭ್ರೂಮಧ್ಯದಲ್ಲಿರುವ ಚಕ್ರ. ಮಿದುಳಿನ ಶಕ್ತಿಗಳ ಕೇಂದ್ರ ಭ್ರೂಮಧ್ಯ.

       ಈಗ ನಃ ಮತ್ತು ಪ್ರಚೋದಯಾತ್ ಎಂಬ ಶಬ್ದಗಳನ್ನು ಸಹಸ್ರಾರ ಕಮಲಕ್ಕೆ ಅನ್ವಯಿಸಿ ನೋಡೋಣ. ಕಮಲದಲ್ಲಿ ಸೌಂದರ್ಯವಿದೆ. ಸಹಸ್ರಾರ ಕಮಲವು ಸಾವಿರಾರು ದಳಗಳ ಸುಂದರವಾದ ರೂಪದಿಂದ ಅಧೋಮುಖವಾಗಿ ಪ್ರಕಾಶಿಸುತ್ತಿರುತ್ತದೆ. ಇದನ್ನು ಕುಂಡಲಿನೀ ಶಕ್ತಿ ಸ್ಪರ್ಶಿಸಿದಾಗ ಇದರಿಂದ ಅಮೃತವು ಸುರಿಯುತ್ತದೆ. ಇದರಿಂದಲೇ ಮೋಕ್ಷ ಪ್ರಾಪ್ತಿ. ಅತ್ಯುತ್ತಮವಾದ ಆನಂದಪ್ರಾಪ್ತಿ.ನಃಎಂಬುವ ಶಬ್ದಕ್ಕೆ ಅರ್ಥನಮ್ಮೆಲ್ಲರಎಂದು. ಇಲ್ಲಿ ನಾವು ಸಾವಿರಾರು ಜನ ಅಲ್ಲವೇ? ನಮ್ಮೆಲ್ಲರ ಹಿತವನು ಯೋಚಿಸುವನ ಹೃದಯವು ಎಷ್ಟು ಸುಂದರ. ಅದರಲ್ಲಿನ ಪ್ರೇಮವು ಎಷ್ಟು ಮಧುರ. ಅದೇ ಅಮೃತವಲ್ಲವೇ. ಅಮೃತ ಕಿರಣವಾದ ಚಂದ್ರನನ್ನು ಸೂಚಿಸುವಯಃಎಂಬ ಶಬ್ದವು ಕರ್ತೃವಾಗಿರುವ ಪ್ರಚೋದಯಾತ್ ಎಂಬ ಶಬ್ದವು ಸೂಚಿಸುವುದು ಅಮೃತಸಾರವನ್ನಲ್ಲವೇ. ಸಹಸ್ರಾರ ಕಮಲದಲ್ಲಿನ ಸಾವಿರಾರು ದಳಗಳ ಒಕ್ಕೂಟಕ್ಕೂನಃಎಂಬ ಶಬ್ದದಲ್ಲಿನ ಮಾನವ ಲೋಕದ ಒಕ್ಕೂಟದ ಭಾವನೆಗೂ ಹೋಲಿಕೆಯಿರುವುದನ್ನು ಇಲ್ಲಿ ಗಮನಿಸಬಹುದು. 

       (ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)