Tyagashilpa-Drama

                           ತ್ಯಾಗ ಶಿಲ್ಪ –   ನಾಟಕ 

                                       ರಚನೆ: ದಿ.ಲಂಕಾ ಕೃಷ್ಣಮೂರ್ತಿ.

Published by   LANKA KRISHNA MURTI FOUNDATION                                                     

(https://www.facebook.com/lankakrishnamurtifoundation/)                   

Website (https://www.krishnamurtifoundation.com/lanka/)

LKM FOUNDATION-YOUTUBE

(https://www.youtube.com/channel/UCptmyD6GditXlBWnaRNI11A)                                                                  

                                         ಶ್ರೀ 

                                     ತ್ಯಾಗ ಶಿಲ್ಪ 

                                     (ನಾಟಕ) 

                                 ಅಂಕ -1 ದೃಶ್ಯ -1 

(ಘನಗಿರಿ ಮಂಡಲಾಧಿಪತಿಯಾದ ವಿರುಪಣ್ಣನ ಅರಮನೆ. ವಿರುಪಣ್ಣನೂ ಆತನ ಹೆಂಡತಿ ಪಾರ್ವತಮ್ಮನೂ ಪ್ರವೇಶಿಸಿ ತತ್ಪರತೆಯಿಂದ ಒಬ್ಬಳೇ ಹಾಡುತ್ತಿರುವ ತಮ್ಮ ಮಗಳು ಸರಸ್ವತಿಯ ಹಾಡನ್ನು ದೂರದಿಂದಲೇ ಕೇಳುತ್ತ ನಿಂತಿರುವರು) 

ಸರಸ್ವತಿ- ವಂದಿಪೆನು ನಾ ನಿನಗೆ ತಾಯೆ ಶಾರೆದೆಯೇ 

ಸೌಂದರ್ಯ ದೀಪಿಕೆಯೆ ಕರುಣಾಬ್ಧಿ ಹೃದಯೇ

ನಿನ್ನ ಬೆಳಕಿಂದಲೇ ಕಣ್ಣುಕಾಣುವುದು 

ನಿನ್ನ ಮೊಲೆವಾಲಿಂದೆ ಅರಿವು ಆನಂದ|

ನಿನ್ನ ವಾತ್ಸಲ್ಯವೇ ಕಲೆಯ ಸೃಷ್ಟಿಗೆ ಮೂಲ 

ನಿನ್ನ ಪ್ರೇಮವೆ ಜಗಕೆ ಪ್ರಾಣ, ಚೈತನ್ಯ|| ವಂದಿ|| 

ನೀನಿಲ್ಲದೊಡೆ ನಾವು ಕುರುಡರೂ ಕಿವುಡರೂ 

ಮೂಕರೂ ಅಲ್ಲವೇ ಮನಸುಮಾತಿನ ಶಕ್ತಿ, 

ನೀನೋವದಿದ್ದರೆ ನಾನು ತಬ್ಬಲಿಯಲ್ತೆ 

ನಿನ್ನ ಈ ಮಗುವನ್ನು ಕಾಪಾಡು ತಾಯೇ ||ವಂದಿ|| 

(ಹಾಡು ಮುಗಿದ ಮೇಲೆ ಸರಸ್ವತಿ ಪಕ್ಕಕ್ಕೆ ನೋಡುವಳು. ಎದ್ದು ಹೋಗಿ ತಂದೆತಾಯಿಗಳ ಪಾದಗಳಿಗೆರಗುವಳು. ಗಂಟು ಹಾಕದ ಅವಳ ಕೇಶರಾಶಿ ವಿಶಾಲವಾಗಿ ಹರಡುವುದು. ಪಾರ್ವತಮ್ಮ ಮಗಳನ್ನೆಬ್ಬಿಸಿ ಕೂದಲುಗಳನ್ನು ನಿವುರುತ್ತ ಅವು ಒಣಗಿರುವುದನ್ನು ನೋಡಿ ಅವುಗಳನ್ನೆಲ್ಲಾ ಸುತ್ತಿ ಗಂಟು ಹಾಕುವಳು) 

ಪಾರ್ವತಮ್ಮ- ಕಮಲಮ್ಮ, ಸರಸ್ವತಿಯನ್ನು ಕರೆದುಕೊಂಡು ಹೋಗಿ ಜಡೆ ಹಾಕಿ ಕಳಿಸು.

(ಪರಿಚಾರಕಿ ಕಮಲಮ್ಮ ಬಂದು ಸರಸ್ವತಿಯನ್ನು ಕರೆದುಕೊಂಡು ಹೋಗುವಳು. ವಿರುಪಣ್ಣ ಮತ್ತು ಪಾರ್ವತಮ್ಮ ಆಸನದ ಮೇಲೆ ಕುಳಿತುಕೊಳ್ಳುವರು. 

 ಪಾ – ಜಯಮ್ಮಾ (ಜಯಮ್ಮ ಎಂಬ ಪರಿಚಾರಕಿ ಬರುವಳು) 

ಪಾ – ಸರಸ್ವತಿ ವಯಸ್ಸಿಗೆ ಬಂದಿದ್ದಾಳೆ ಈ ದಿನವೇ ಸ್ನಾನವಾಗಿದೆ. ಸಾಯಂಕಾಲ ಆರತಿ ಮಾಡುವುದಕ್ಕೆ ಎಲ್ಲಾ ಏರ್ಪಾಟೂ ಮಾಡು. 

ಜಯಮ್ಮ – ಅದೆಲ್ಲಾ ನಾನು ನೋಡಿಕೊಂತೀನಿ ಅಮ್ಮನವರೇ, ಸರಸ್ವತಿ ಅಮ್ಮನವರಿಗೆ ನಮ್ಮ ನಾಡಿನ ಪದ್ಧತಿ ಪ್ರಕಾರ ತೊಡಿಸಬೇಕಾದ ರೂಪನ್ನು ಮಾಡಿಸಿದ್ದೀರಾ ತಾಯೀ. 

ಪಾ – ಮಾಡಿಸಿದ್ದಾರೆ ಪ್ರಭುಗಳು. ಅದನ್ನು ಅವಳಿಗೆ ತೋರಿಸವುದಕ್ಕೇ ನಾವಿಬ್ಬರೂ ಇಲ್ಲಿಗೆ ಬಂದಿರುವುದು. ಇಗೋ ನೋಡು (ಎಂದು ರೂಪು ಎಂಬ ಪದಕವಿರುವ ಚಿನ್ನದ ಹಾರವನ್ನು ತೋರಿಸುವಳು) 

ಜ- ಬಹಳ ಚೆನ್ನಾಗಿದೆ. ಇದರಲ್ಲಿನ ವಜ್ರಗಳು ಬಹಳ ಬೆಲೆ ಬಾಳುವುವು. ಸರಸ್ವತಮ್ಮನವರು ಇದನ್ನು ಮದುವೆ ಆಗುವವರೆಗೂ ಹಾಕಿಕೊಂಡಿರಬೇಕು. 

ಪಾ- ಇದನ್ನು ಹಾಕಿಕೊಂಡಿರುವ ಕನ್ಯೆಯರನ್ನು ಪರಪುರುಷರು ತಂಗಿಯಂತೆ ಕಾಣಬೇಕು. 

ಜ- ತಮಗೆ ಗೊತ್ತಿಲ್ಲದ ವಿಷಯ ಯಾವುದಿದೆ ತಾಯೀ. ತಾವು ಯಾವ ಯಾವ ಸಮಯದಲ್ಲಿ ಏನೇನು ಮಾಡಬೇಕೋ ಎಲ್ಲಾ ಕ್ರಮವಾಗಿಯೇ ಮಾಡಿಸುತ್ತಾ ಇದ್ದೀರಿ. 

ಪಾ – ಇಂಥ ಕ್ರಮಗಳೆಷ್ಟಾದರೂ ಜರುಗಿಸಬಹುದಮ್ಮಾ ಸರಸ್ವತಿಯನ್ನು ತಕ್ಕ ವರನಿಗೆ ಕೊಟ್ಟು ಮದುವೆ ಮಾಡಿದರೆ ತಾನೆ ನಮ್ಮ ಜವಾಬ್ದಾರಿ ತೀರುವುದು. 

ವಿರು – ಹೌದು ಜಯಮ್ಮಾ, ಹೆಣ್ಣುಮಕ್ಕಳನ್ನು ಹೆತ್ತವರಿಗೆಲ್ಲಾ ಈ ದೊಡ್ಡ ಜವಾಬ್ದಾರಿ ಇದ್ದೇ ಇದೆ. 

ಜಯಮ್ಮ – ಈ ಘನಗಿರಿ ಮಂಡಲಕ್ಕೇ ಅಧಿಪತಿಯಾದ ವಿರುಪಣ್ಣ ಪ್ರಭುಗಳಿಗೆ ಅಳಿಯ ಸಿಕ್ಕುವುದೇನು ಕಷ್ಟ? 

ವಿರು- ಅವರವರ ಪರಿಸ್ಥಿತಿಗೆ ತಕ್ಕಂತೆ ಅವರಿಗೆ ಜವಾಬ್ದಾರಿ ಇದ್ದೇ ಇದೆ.

ಜ – ನಾನು ನನ್ನ ಕೆಲಸಕ್ಕೆ ಹೋಗ್ತೀನಮ್ಮಾ. (ಹೊರಡುವಳು) 

ಪಾ- ಪ್ರಭುಗಳಿಗೆ ಈತನಕ ಮಹಾಶಿಲ್ಪಿಯ ಯೋಚನೆ ಒಂದೇ ಇತ್ತು ಈಗ ವರನ ಯೋಚನೆಯೂ ಸೇರಿತು. 

ವಿರುಪಣ್ಣ- ಸೇರಲಿ ಪಾರ್ವತೀ ಸೇರಲಿ. ಎಲ್ಲಾ ನಡೆಸಿಕೊಡುವವನು ಆ ವೀರಭದ್ರನೇ. ದೇವಾಲಯ ನಿರ್ಮಾಣಕ್ಕಾಗಿ ಹಣ ಕೂಡಿಟ್ಟಿದ್ದಾಯಿತು. ಶಿಲ್ಪಿಗಳನ್ನು ಆರಿಸಿಕೊಂಡಿದ್ದಾಯಿತು. ಅವರಿಗೆ ಒಂದು ವರ್ಷ

ಪುರಾಣ ಶ್ರವಣ ಮಾಡಿಸಿ ಗಹನವಾದ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳುವಂತೆ ಮಾಡಿದ್ದಾಯಿತು. ಅದೂ ಇನ್ನೇನು ಈ ದಸರಾದಲ್ಲಿ ಮುಗಿದು ಹೋಗುತ್ತೆ. ಮಹಾಶಿಲ್ಪಿ ಸಿಗುವವರೆಗೂ ಇನ್ನೇನು ಮಾಡಬೇಕೋ ನನಗೆ ತೋಚುತ್ತಲೇ ಇಲ್ಲ. 

ಸರಸ್ವತಿ – (ಪ್ರವೇಶಿಸಿ) – ಪುರಾಣಗಳ ಜೊತೆಗೆ ಸಾಹಿತ್ಯದ ಪರಿಚಯವನ್ನೂ ಶಿಲ್ಪಿಗಳಿಗೆ ಮಾಡಿಕೊಡಿ ಅಪ್ಪಾಜೀ. ನಮ್ಮ ಗುರುಗಳಿದ್ದಾರಲ್ಲಾ. 

ವಿರು- ಹೌದು. ಇದು ಒಳ್ಳೆಯ ಸಲಹೆ. ಬಾ ಮಗೂ. ಇಲ್ಲಿ ಕುಳಿತುಕೋ. ದೇವಾಲಯ ನಿರ್ಮಾಣದಲ್ಲಿ ನಿನ್ನ ಸಲಹೆಗಳೂ ಬೇಕು. 

ಪಾ – ಕೂತುಕೋ ಮಗೂ. ನಾವೀಗ ಇಲ್ಲಿಗೆ ಏಕೆ ಬಂದಿದ್ದೀವಿ ಅಂತ ಹೇಳುತ್ತೇನೆ. 

ಸ – ನನಗೆಲ್ಲಾ ಗೊತ್ತಾಯಿತಮ್ಮಾ, ಜಯಮ್ಮ ಹೇಳಿದಳು. ಎಲ್ಲಿ? ನೀವು ತಂದಿರುವ ರೂಪನ್ನು ತೋರಿಸಿ. 

ಪಾ- ಜಯಮ್ಮ ಎಷ್ಟು ಚೂಟಿ! ರೂಪು ನೋಡು (ಎಂದು ಕೊಡುವಳು) 

ಸ- (ನೋಡಿ) ಬಹಳ ಚೆನ್ನಾಗಿದೆ. 

ವಿರು- ಹಾಕಿ ಕೊಂಡು ತೋರಿಸು ಮಗೂ. (ಸರಸ್ವತಿ ಧರಿಸುವಳು) 

ವಿರು – (ಸರಸ್ವತಿಯನ್ನೇ ನೋಡುತ್ತ) ಶಿವನನ್ನೊಲಿಸುವುದಕ್ಕೆ ಶಿವನ ಸೇವೆ ಮಾಡುತ್ತಿದ್ದ ಲೋಕಮಾತೆ ಗಿರಿಜೆ ನನ್ನ ಒಳ ಕಣ್ಣಿಗೆ ಕಾಣಿಸುತ್ತಿದ್ದಾಳೆ. ಮಗೂ ಇದನ್ನು ನೀನು ಈ ದಿನ ಸಾಯಂಕಾಲ ಆರತಿ ಮಾಡುವಾಗ ಧರಿಸಬೇಕು. ನಿನಗೆ ಮದುವೆ ಆಗಿ ನಿನ್ನ ಪತಿ ನಿನ್ನ ಕೊರಳಲ್ಲಿ ಮಾಂಗಲ್ಯ ಕಟ್ಟುವವರೆಗೂ ನೀನು ಇದನ್ನು ಧರಿಸಿರಬೇಕು. ಇದು ಇರುವವರೆಗೂ ನೀನು ಪರಪುರುಷರನ್ನು ಸಹೋದರರಂತೆ ಭಾವಿಸಬೇಕು. ಇದು ನಿನಗೆ ರಕ್ಷೆ.

ಸರ- ಹಾಗೇ ಆಗಲಿ ಅಪ್ಪಾಜೀ. 

ವಿರು- ಮಹಾಶಿಲ್ಪಿಗಾಗಿ ಪ್ರಯತ್ನ ಮಾಡಿ ಮಾಡಿ ವಿಫಲನಾಗಿ ಆತನ ಬರುವಿಕೆಗೇ ಕಾದಿದ್ದೇನೆ. ನಿನಗೆ ತಕ್ಕ ವರನಿಗಾಗಿ ಪ್ರಯತ್ನ ಆರಂಭಿಸುತ್ತೇನೆ. ವೀರಭದ್ರಕೃಪೆಯಿದ್ದರೆ ಎರಡು ಕೋರಿಕೆಗಳೂ ಶೀಘ್ರದಲ್ಲಿಯೇ ಫಲಿಸಬಹುದು. ನಿನ್ನ ವಿವಾಹವೂ ಆಗಲಿ ದೇವಾಲಯ ನಿರ್ಮಾಣವೂ ಆಗಲಿ. 

ಸರ – ನನ್ನ ಮದುವೆಗಿಂತಲೂ ದೇವಾಲಯ ನಿರ್ಮಾಣ ಮುಖ್ಯವಾದುದು. ಆಗಲೇ ತಾವು ನನ್ನನ್ನು ನೋಡಿ ಒಳಕಣ್ಣಿಗೆ ಶಿವನ ಸೇವೆ ಮಾಡುತ್ತಿದ್ದ ಗಿರಿಜಾದೇವಿ ಕಾಣುತ್ತಿದ್ದಾಳೆಂದು ಹೇಳಲಿಲ್ಲವೇ? ತಾವು ನಿರ್ಮಿಸಲಿರುವ ದೇವಾಲಯದಲ್ಲಿ ಗಿರಿಜಾಕಲ್ಯಾಣ ನಡೆಯುವವರೆಗೂ ನಾನು ಕನ್ಯೆಯಾಗಿರಲು ನನಗೆ ಅನುಮತಿ ಕೊಡಿ ಅಪ್ಪಾಜೀ. 

(ವಿರುಪಣ್ಣ ಪಾರ್ವತಮ್ಮನ ಮುಖವನ್ನು ನೋಡುವನು) 

ಪಾ – ನಮ್ಮ ಮಗಳಿಗೆ ಈ ಸಂಕಲ್ಪ ಹುಟ್ಟಬೇಕಾದರೆ ಇವಳ ಮದುವೆಗೂ ದೇವಾಲಯ ನಿರ್ಮಾಣಕ್ಕೂ ಏನೋ ಸಂಬಂಧವಿರಬೇಕು. ಮೊದಲು ದೇವರ ಸೇವೆಯೇ ನಡೆಯಲಿ. 

ವಿ- ಇದರಲ್ಲಿ ನನಗೆ ಭಿನ್ನಾಭಿಪ್ರಾಯವೇ? ನಮ್ಮ ಸರ್ವಸ್ವವೂ ದೇವರು ಕೊಟ್ಟಿದ್ದೇ. ಅದನ್ನು ಆತನಿಗೇ ಅರ್ಪಿಸುವುದು ನಮ್ಮ ಕರ್ತವ್ಯ. ಈ ಭಾದ್ರಪದ ಕಳೆದರೆ ದಸರಾ ಹಬ್ಬಗಳು ಬರುತ್ತವೆ. ದಸರಾ ಪೂಜೆಗಳನ್ನು ಮುಗಿಸಿಕೊಂಡರೆ ಮಹಾಶಿಲ್ಪಿ ಲಭಿಸುವುದೊಂದೇ ತಡ. ದೇವಾಲಯ ನಿರ್ಮಾಣ ಪ್ರಾರಂಭ ಮಾಡುವುದಕ್ಕೆ ಯಾವ ತೊಂದರೆಯೂ ಇರುವುದಿಲ್ಲ. ನಿನ್ನ ಸಂಗೀತಾಭ್ಯಾಸಕ್ಕೆ ನೀನು ಕುಳಿತುಕೋ ಮಗೂ. ನಾವು ಹೊರಡುತ್ತೇವೆ.

(ವಿರುಪಣ್ಣ ಮತ್ತು ಪಾರ್ವತಮ್ಮ ಹೊರಡುವರು)

                                      ದೃಶ್ಯ – 2 

(ರುದ್ರಣ್ಣನ ಮನೆ – ರುದ್ರಣ್ಣನು ಮಂಚದ ಮೇಲೆ ಮಲಗಿ ಆಯಾಸಪಡುತ್ತಿರುವನು) 

ರುದ್ರ – ಇಷ್ಟು ನೀರಾದರೂ ಬಾಯಿಗೆ ಹಾಕೇ ನಂಜೀ. 

ನಂಜಮ್ಮ – (ಓಡಿಬಂದು) ಏನಾಯಿತೂಂದರೇ? ಹಬ್ಬದ ದಿನ ಅಮಂಗಳವಾಗಿ ಮಾತಾಡ್ತಾ ಇದ್ದೀರಲ್ಲಾ ವೀರಭದ್ರೇಶ್ವರಾ! ನೀನೇ ಕಾಪಾಡಬೇಕಪ್ಪಾ. (ರುದ್ರಣ್ಣನ ತಲೆಮುಟ್ಟಿ) ತಲೆ ಎಷ್ಟು ಬಿಸಿಯಾಗಿದೆರೀ! ಯಾಕೂಂದರೇ ಆಯಾಸ? ನೀರು ತಕೊಂಡು ಬರ್ತೀನಿ. (ಓಡಿಹೋಗಿ ನೀರು ತಂದು ಗಂಡನನ್ನೆಬ್ಬಿಸಿ ಕುಡಿಸುವಳು) 

ರುದ್ರಣ್ಣ – ನಿನ್ನ ಮುಂದೆ ಏನು ಹೇಳಿ ಏನು ಪ್ರಯೋಜನ? ಬೇಗ ಹೋಗಿ ಆ ವಿಷಕಂಠ ಶಾಸ್ತ್ರಿಯನ್ನು ಕರೆದುಕೊಂಡು ಬಾ. 

ನಂಜ – ಆಗಲಿ (ಎಂದು ಓಡಿ ಹೋಗುವಳು) 

ರುದ್ರ – (ಹೊರಳುತ್ತ) ನಾನೀ ಸಂಕಟವನ್ನು ಹೇಗೆ ಅನುಭವಿಸಲಿ ಅಪ್ಪಾ. ಅಯ್ಯೋ. ಅಯ್ಯೋ. (ವಿಷಕಂಠ ಶಾಸ್ತ್ರಿಯು ನಂಜಮ್ಮನೂ ಪ್ರವೇಶಿಸುವರು) 

ರುದ್ರ- (ಎದ್ದು) ಬಾರಯ್ಯ ಶಾಸ್ತ್ರೀ ಕೂತುಕೋ. (ನಂಜಮ್ಮನನ್ನು ನೋಡಿ ನೀನು ಅಡಿಗೆ ಮನೆಯಲ್ಲಿ ನಿನ್ನ ಕೆಲಸ ಮಾಡಿಕೋ ಹೋಗು. ಶಾಸ್ತ್ರಿ ಬಂದಿದ್ದಾನೆ. ನನಗೇನೂ ಪರವಾ ಇಲ್ಲ. (ನಂಜಮ್ಮ ಹೊರಡುವಳು) 

ವಿಷಕಂಠ ಶಾಸ್ತ್ರಿ – ಏನಯ್ಯಾ ರುದ್ರಣ್ಣಾ ನಿನಗೆ ಬಂದಿರೋ ರೋಗ? 

ರು – ಹೊಟ್ಟೇ ಸಂಕಟಾನೋ. ತಡೆಯಲಾರದ ಹೊಟ್ಟೇ ಸಂಕಟ.

ಶಾ – ಯಾರನ್ನು ನೋಡಿ ಅಯ್ಯಾ ನಿನಗೆ ಹೊಟ್ಟೇ ಸಂಕಟ? ಪೈತ್ಯ ಗೀತ್ಯ ಏನೂ ಆಗಿಲ್ಲವಲ್ಲಾ?

ರು- ಲೇ ಶಾಸ್ತ್ರೀ ಹತ್ತು ಲಕ್ಷ ಆಗಿದೆಯೋ ಹತ್ತು ಲಕ್ಷ.

ಶಾ- ಅದಾ ನಿನ್ನ ಸಂಕಟಕ್ಕೆ ಕಾರಣ. ಗೊತ್ತಾಯಿತು ಬಿಡು (ಗಟ್ಟಿಯಾಗಿ) ನಂಜಮ್ಮಾ. ಇನ್ನೇನೂ ಭಯಪಡಬೇಡ. ನಿನ್ನ ಗಂಡನಿಗೇನೂ ಖಾಯಿಲೇ ಇಲ್ಲ. ನಾನು ಬರುವಾಗಲೇ ಹೇಳಲಿಲ್ಲವೇ? 

ರುದ್ರ – ಅವಳನ್ನು ಯಾಕೆ ಕರೀತೀಯೋ ಮಹರಾಯಾ. ಈ ಗುಟ್ಟು ನಮ್ಮಿಬ್ಬರಲ್ಲೇನೇ ಇರಬೇಕು. ಬಾಗಿಲು ಹಾಕಿ ಬರ್ತೀನಿರು. (ಎದ್ದು ಹೋಗಿ ಬಾಗಿಲು ಹಾಕಿ ಬರುವನು) 

ವಿ. ಶಾ – ನನ್ನ ಸ್ಥಿತೀನೂ ನಿನ್ನ ಹಾಗೇ ಇದೆ ಬಿಡು. ಒಬ್ಬೊಬ್ಬರಿಗೆ ಒಂದು ಸಾವಿರ ವರಹಾನೋ ಒಂದು ಸಾವಿರ ವರಹ. ಮೇಲೆ ಜರತಾರೀ ಪಂಚೆಗಳು. ಬೆಳ್ಳೀ ತಟ್ಟೆ ಸಮೇತ. ನನ್ನ ಹೊಟ್ಟೇ ಕಿಚ್ಚನ್ನು ನಾನಾರಿಗೆ ಹೇಳಲಿ? 

ರು – ಯಾರಿಗೋ ಇದೆಲ್ಲಾ ಸಿಕ್ಕಿದ್ದು? ನಿನಗೇಕೆ ಸಿಗಲಿಲ್ಲ? 

ವಿ.ಶಾ – ಅದೇ ಆ ಪರಮೇಶ್ವರ ಶಾಸ್ತ್ರೀ, ನಾರಾಯಣ ಭಟ್ಟ ಇದ್ದಾರಲ್ಲಾ ಅವರಿಗೆ. ಮಂಡಲಾಧೀಶ್ವರರಾದ ವಿರುಪಣ್ಣನವರ ಅರಮನೆಯಲ್ಲಿ ಒಂದು ವರ್ಷ ಪುರಾಣ ಹೇಳಿದ್ದಕ್ಕೆ ಸಂಭಾವನೆ. ವಿರುಪಣ್ಣನವರ ತಮ್ಮ ವೀರಣ್ಣನವರು ನನ್ನಂತಹ ವಿದ್ವಾಂಸರನ್ನೆಲ್ಲಾ ಅಲ್ಲಗಳಿಸಿ ಅವರನ್ನೇ ಶ್ರೇಷ್ಠ ಪೌರಾಣಿಕರೆಂದು ಆರಿಸಿಕೊಂಡರಂತೆ. ಅವಮಾನ. ಪಂಡಿತಲೋಕಕ್ಕೇ ಅವಮಾನ. 

ರು- ಅಚ್ಯುತ ದೇವರಾಯರು ಈ ಘನಗಿರಿ ಮಂಡಲಕ್ಕೆ ವಿರುಪಣ್ಣನನ್ನು ಆರಿಸಿಕೊಂಡಂತೆ. ಅಲ್ಲವೇನೋ. ಅವರು ಅವರನ್ನು ಆರಿಸಿಕೊಂಡರು. ನಾವೆಲ್ಲಾ ಕೆಲಸಕ್ಕೆ ಬಾರದವರಾದೆವು. ಇವರು ಇವರನ್ನಾರಿಸಿಕೊಂಡರು. ನೀವೆಲ್ಲಾ ಕೆಲಸಕ್ಕೆ ಬಾರದವರಾದಿರಿ. ಅಲ್ಲವೇನೋ? 

ವಿ.ಶಾ – ಅದು ಹಾಗೇನೇ. ಈಗ ಅವರಿಗೆ ಕಾಲ. ನಮಗೂ ಒಂದು ಕಾಲ ಬರುತ್ತೆ. 

ರು- (ಹಲ್ಲು ಕಚ್ಚಿ)  ಬರುತ್ತೆ, ಬರುತ್ತೆ, ಬಂದೇ ಬರುತ್ತೆ ಬರದೇ ಇದ್ದರೆ ಈ ರುದ್ರಣ್ಣ ಬಿಡ್ತಾನಾ. ಹಹಹಹ….

ವಿ.ಶಾ- ಹತ್ತು ಲಕ್ಷ ಅಂತ ಹೇಳಿದೆಯಲ್ಲಾ. ನಿನಗೆ ಹೇಗೆ ಗೊತ್ತಾಯಿತೋ. ಯಾರಾದರೂ ನಂಬುತ್ತಾರೇನೋ.

ರು- ನಾನಷ್ಟು ಬೆಪ್ಪೇನೋ ಒಬ್ಬರ ಮಾತನ್ನು ನಂಬೋದಕ್ಕೆ. ನಾನೇ ಖುದ್ದಾಗಿ ನೋಡಿದೆ. ತಮ್ಮ ಅಂತ ಅಕ್ಕರೆಯಿಂದ ನಮ್ಮ ಅಣ್ಣ ವಿರುಪಣ್ಣ….. 

ವಿ.ಶಾ – ವಿರುಪಣ್ಣನಿಗೆ ನೀನು ತಮ್ಮನೇ. ನೀನು ಜ್ಞಾತಿ. ಜ್ಞಾತಿ ಶ್ಚೇ ದನಲೇನ ಕಿಮ್ ….

ರು – ನಿನ್ನ ಪಾಂಡಿತ್ಯ ತೋರಿಸಬೇಡ. ವಿರುಪಣ್ಣ ಅರಮನೆಯಲ್ಲಿ ದಸರಾ ಪೂಜೆಗಳಿಗೆ ನನಗೂ ಆಹ್ವಾನ ಕಳಿಸಿದ್ದ. ಬೇರೆ ಪೂಜೆಗಳನ್ನು ಕಟ್ಟಿಕೊಂಡು ನನಗೇನು ಬೇಕು. ಧನಾಗಾರದಲ್ಲಿ ಪೂಜೆ ನಡೆಯೋ ಸಮಯ ವಿಚಾರಿಸಿಕೊಂಡು ಅದಕ್ಕೆ ಮಾತ್ರ ಹಾಜರಾದೆ. ಸ್ವಲ್ಪ ಮುಂಚಿತವಾಗಿಯೇ ಹೋದೆ. ಆಳುಗಳು ಹೊರಲಾರದೆ ಹೊರಲಾರದೆ ಹಣದ ಚೀಲಗಳನ್ನು ಪೂಜೆಗಾಗಿ ಗುಡ್ಡೆ ಹಾಕುತ್ತಿದ್ದರು. ಆಮೇಲೆ ಸಕುಟುಂಬವಾಗಿ ಮಂಡಲೇಶ್ವರರು ಬಂದರು. ಖಜಾಂಚಿ ಬಹಳ ಸಂತೋಷದಿಂದ, ಕೂಡಿಟ್ಟಿದ್ದ ಧನ ಹತ್ತು ಲಕ್ಷವನ್ನು ಮೀರಿತು ಎಂದು ಬಿನ್ನವಿಸಿದ. ಅವರ ಆನಂದವೇ ಆನಂದ. ನನಗಂತೂ ಹೊಟ್ಟೆಯಲ್ಲಿ ಬೆಂಕಿ ಬಿದ್ದಹಾಗಾಯಿತು. ಆದರೆ ಅವರ ಎದುರಿಗೆ ನಾನೂ ಆನಂದವನ್ನು ನಟಿಸಿ ಅಲ್ಲಿಂದ ಸೀದಾ ಮನೆಗೆ ಬಂದವನೇ ಮಂಚ ಹಿಡಿದುಬಿಟ್ಟೆ. 

ವಿ.ಶಾ – ಆಶ್ಚರ್ಯ ಅಂದರೆ ಆಶ್ಚರ್ಯ . . .  ಏನೋ . . ಇರಬಹುದು ವಿರುಪಣ್ಣ ಮತ್ತು ವೀರಣ್ಣ ಪ್ರಭುಗಳು ಹಿಂದಿನ ಮಂಡಲಾಧಿಪತಿಗಳಂತೆ ವಿಲಾಸಪ್ರಿಯರಲ್ಲ. ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡೋವರಲ್ಲ. ಅದೂ ಅಲ್ಲದೆ ಇವರು ಬಂದಮೇಲೆ ದೇಶವೆಲ್ಲಾ ಸುಭಿಕ್ಷವಾಯಿತು. ಜನರೆಲ್ಲಾ ಐಶ್ಚರ್ಯವಂತರಾದರು. ಸರ್ಕಾರಕ್ಕೆ ವರಮಾನ ಹೆಚ್ಚಾಯಿತು. ವಿಜಯನಗರ ಸಮ್ರಾಟರೂ ಇವರಲ್ಲಿ ಪೂರ್ಣ ನಂಬಿಕೆ ಇಟ್ಟುಕೊಂಡಿದ್ದಾರೆ.

ರು – ನನಗೆ ಕರ್ಣ ಕಠೋರವಾದ ಈ ಹೊಗಳಿಕೆಯನ್ನು ಸ್ವಲ್ಪ ಕಡಿಮೆ ಮಾಡೋದು ಕಲಿತುಕೊಳ್ಳೋ. ನಾನೂ ಆ ಪ್ರಭುಗಳಿಗಿಂತಲೂ ಹೆಚ್ಚು ಸದ್ಗುಣಗಳನ್ನು ನಟಿಸಬಲ್ಲೆ. ಅವಕಾಶ ಸಿಕ್ಕಿದರೆ ನಾನೂ ವಿಜಯನಗರ ಸಾಮ್ರಾಟರ ಪ್ರೀತಿ ಸಂಪಾದಿಸಿ ಇದೇ ಘನಗಿರಿ ಮಂಡಲಕ್ಕೇ ಅಧಿಪತಿ ಆಗಬಲ್ಲೆ. ಅಚ್ಯುತದೇವರಾಯನ ಕಾಲದಲ್ಲಿ ನನಗೆ ಅದು ಸಾಧ್ಯವಾಗಲಿಲ್ಲ. ಅವನು ಮುದುಕನಾಗಿಬಿಟ್ಟ. ಇನ್ನೆಷ್ಟು ದಿನ ಬದುಕಿರ್ತಾನೆ. ನೋಡ್ತಾ ಇರು. ಇದನ್ನೆಲ್ಲಾ ಹೇಗೆ ತಲೆ ಕೆಳಗು ಮಾಡಿಬಿಡುತ್ತೀನೋ. ಸಮಯಕ್ಕಾಗಿ ಕಾದಿದ್ದೇನೆ. ನನ್ನ ಪ್ರಯತ್ನ ಸಫಲವಾದರೇ ನೀನೇ ನನ್ನ ಆಪ್ತ ಮಂತ್ರಿ. ಇದನ್ನು ರಹಸ್ಯವಾಗಿಟ್ಟುಕೊಂಡಿರು. ಯಾರಿಗೂ ಹೇಳಬೇಡ. ನನ್ನ ಹೆಂಡ್ತೀಗೂ ಗೊತ್ತಾಗಬಾರದು. 

ವಿಷಕಂಠ ಶಾಸ್ತ್ರಿಯ ಮಗ- (ಬಾಗಿಲುತಟ್ಟಿ ನೇಪಥ್ಯದಲ್ಲಿ) ಅಪ್ಪಾ ಅಪ್ಪಾ ಅಮ್ಮಾ ಊಟಕ್ಕೆ ಕಾದಿದ್ದಾಳೆ ಬಾ. 

ವಿ.ಶಾ – ಆಜ್ಞೆ ಬಂತೋ ನನ್ನ ಮಹಾರಾಣಿಯಿಂದ ಇನ್ನೂ ತಡಮಾಡಿದರೆ ಆಯಿತು. ಹೋಗಿ ಬರ್ತೀನಿ. (ಹೊರಡುವನು) 

                       ದೃಶ್ಯ -3

(ಲೇಪಾಕ್ಷಿಯಲ್ಲಿ ಕೂರ್ಮಾದ್ರಿ – ವಿರುಪಣ್ಣ ಮತ್ತು ಅರ್ಚಕರು ಪ್ರವೇಶಿಸುವರು) 

ವಿರು – ಎಷ್ಟು ಪ್ರಶಸ್ತವೂ ರಮ್ಯವೂ ಆಗಿದೆ ಅರ್ಚಕರೇ ಈ ಪ್ರದೇಶ. ನಾನು ಪುರಾಣಗಳಲ್ಲಿ ಈ ಕೂರ್ಮಾದ್ರಿಯ ವಿಷಯ ಕೇಳಿದ್ದೆನೇ ಹೊರತು ಇದನ್ನು ನೋಡಿರಲಿಲ್ಲ. ನಮ್ಮ ಮಂಡಲದಲ್ಲಿರುವ ಈ ಲೇಪಾಕ್ಷಿ ಪಟ್ಟಣದ ಪಕ್ಕದಲ್ಲೇ ಇದ್ದರೂ ನಾನಿದನ್ನು ನೋಡಲೇ ಇಲ್ಲವಲ್ಲ. ಈ ದಿನ ಇದನ್ನು ನೋಡುವ ಅದೃಷ್ಟ ನನಗಿತ್ತು. 

ಅರ್ಚಕ – ಈವತ್ತು ಕಾರ್ತಿಕ ಶುದ್ಧ ಹುಣ್ಣಿಮೆ ಸೋಮವಾರ ಸ್ವಾಮೀ ಈ ದಿನ ಈ ಪ್ರದೋಷ ಸಮಯದಲ್ಲಿ ತಾವು ಬಂದು ಇಲ್ಲಿ ಶಿವಲಿಂಗಗಳಿಗೆ ಪೂಜೆ ಮಾಡಿದಿರಲ್ಲಾ ಇದು ಎಂಥ ಸುಯೋಗ ಸ್ವಾಮೀ. ತಮ್ಮ ಮನಸ್ಸಿನಲ್ಲಿ ಏನು ಕೋರಿಕೆಗಳಿದ್ದರೂ ಅವು ಫಲಿಸಲೇ ಬೇಕು ಸ್ವಾಮಿ. 

ವಿರು – ನನ್ನ ಮನಸ್ಸಿನಲ್ಲಿ ಒಂದು ದೊಡ್ಡ ಕೋರಿಕೆ ಇದೆ ಅರ್ಚಕರೇ. ಆದರೆ ಈ ದೇವರ ಸನ್ನಿಧಿಗೆ ಬಂದಮೇಲೆ ಇಲ್ಲಿನ ಪ್ರಶಾಂತಿಯನ್ನು ಅನುಭವಿಸಿದ ಮೇಲೆ ನನ್ನಲ್ಲಿ ಏನೋ ಒಂದು ಹೊಸ ಅನುಭವ ಆಗುತ್ತಾ ಇದೆ. ಇದು ಕೋರಿಕೆ ಫಲಿಸುವ ಸೂಚನೆಯೋ ಅಥವಾ ಕೋರಿಕೆಗಳೇ ಮಾಯವಾಗುವ ಸೂಚನೆಯೋ ನನಗೆ ಅರ್ಥವೇ ಆಗುತ್ತಿಲ್ಲ. . . ನೀವು ಈ ಪ್ರಸಾದವನ್ನು ತೆಗೆದುಕೊಂಡು ಶಿಬಿರಕ್ಕೆ ಹೊರಡಿ. ನಾನೊಬ್ಬನೇ ಇಲ್ಲಿದ್ದು ನನ್ನ ಆತ್ಮಾನುಭವವನ್ನು ಅರ್ಥಮಾಡಿಕೊಂಡು ಬರುತ್ತೇನೆ. 

ಅರ್ಚ – ತಮ್ಮ ಅಪ್ಪಣೆ (ಎಂದು ಹೊರಡುವನು) (ವಿರುಪಣ್ಣ ಒಂದು ಬಂಡೆಯ ಮೇಲೆ ಕುಳಿತುಕೊಳ್ಳುವನು ಎಷ್ಟು ಸುಂದರವಾಗಿದೆ ಈ ಚಂದ್ರೋದಯ. ಪೂರ್ವದಿಂದ ಈ ಚಂದ್ರ ದೇವನು ತನ್ನ ಪೂರ್ಣ ಕಲೆಗಳನ್ನು ಧರಿಸಿ ಲೋಕಕ್ಕೆ ಆನಂದದ ಅಮೃತವನ್ನು ಹಂಚುವುದಕ್ಕೆ ಏರಿ ಬರುತ್ತಿದ್ದಾನಲ್ಲಾ. ನನ್ನ ಕನಸಿನ ಆ ಮಹಾಶಿಲ್ಪಿ- ಆ ಶಿಲ್ಪಿ ಬ್ರಹ್ಮ- ಬಂದರೆ ಹೀಗೆ ತಾನೇ ಬರಬೇಕು…(ದೃಷ್ಟಿಸಿ ನೋಡಿ) ಏನಿದು? ಈ ಪೂರ್ಣ ಚಂದ್ರನಿಗೂ ನನಗೂ ಮಧ್ಯೆ ದೂರದಲ್ಲಿ ಒಬ್ಬ ಪುರುಷನು ಕಂಡುಬರುತ್ತಿದ್ದಾನಲ್ಲಾ. ಈತನೇನು ಚಂದ್ರಲೋಕದಿಂದ ಇಳಿದುಬಂದನೇ. ಇತ್ತ ಕಡೆಯೇ ಬರುತ್ತಿದ್ದಾನಲ್ಲಾ. ಈ ಹೊತ್ತಿನಲ್ಲಿ ಈತನಿಗೆ ಈ ನಿರ್ಜನ ಪ್ರದೇಶದಲ್ಲಿ ಏನು ಕೆಲಸವಿರಬಹುದು? ಪ್ರತಿ ಒಂದು ಶಿಲೆಯನ್ನೂ ಪರೀಕ್ಷಕನ ದೃಷ್ಟಿಯಿಂದ ನೋಡುತ್ತ ಬರುತ್ತಿದ್ದಾನಲ್ಲಾ. ಈತನೇನು ಶಿಲ್ಪಿಯೇ? ಅಥವಾ ನನ್ನ ಕನಸಿನ ಶಿಲ್ಪಿಬ್ರಹ್ಮನೇ ಆಗಿರಬಹುದೇ? . . . ಯುವಕ! ಏನು ಈತನ ಮುಖವರ್ಚಸ್ಸು! ಈತನು  ತಪ್ಪದೇ ಒಬ್ಬ ಕಲಾತಪಸ್ವಿಯಾಗಿರಬೇಕು. ಯಾವ ಮಹಾತ್ಮನೋ? ನಾನಿರುವೆಡೆಗೇ ಬರುತ್ತಿದ್ದಾನಲ್ಲಾ ವಂದನಾರ್ಹ. ಈತನ ಪಾದಗಳಿಗೆ ಅಡ್ಡಬೀಳುತ್ತೇನೆ (ಏಳುವನು) 

(ಯುವಕನು ಸಮೀಪಿಸಿ ನಿಂತು ಕ್ಷಣಕಾಲ ವಿರುಪಣ್ಣನನ್ನು ತದೇಕ ದೃಷ್ಟಿಯಿಂದ ನೋಡುವನು. ವಿರುಪಣ್ಣನೂ ಆತನ ಮುಖವನ್ನು ನೋಡುವನು. ಒಬ್ಬರಿನ್ನೊಬ್ಬರಿಗೆ ಅಡ್ಡಬೀಳಲು ಬಂದವರು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವರು)

ವಿರು – ಕಲಾತಪಸ್ವೀ! 

ಯುವಕ – ಮಹಾತ್ಮರೇ, ತಾವು ನನಗಿಂತ ದೊಡ್ಡವರು. ತಾವು ನನ್ನಲ್ಲಿ ಈ ರೀತಿ ಮೈತ್ರಿ ತೋರಿಸುವುದು ನನ್ನ ಭಾಗ್ಯ. ನಾನು ಇದುವರೆಗೂ ಉಪಾಸನೆ ಮಾಡಿದ ಕಲೆಯ ಪೂರ್ಣತೇಜಸ್ಸನ್ನೂ ಶಕ್ತಿಯನ್ನೂ ತಮ್ಮ ಕಣ್ಣುಗಳಲ್ಲಿ ಕಂಡು ಮುಗ್ಧನಾಗಿದ್ದೇನೆ. 

ವಿರು – ನಿನ್ನ ಪೂರ್ಣ ಪರಿಚಯ? 

ಯುವಕ- ನಾನು ಸದಾ ಭಾವಲೋಕದಲ್ಲಿ ಹಾರುತ್ತಿರುವ ಪಕ್ಷಿ. ರೆಕ್ಕೆಗಳ ಬಲದಿಂದ ಒಂದೊಂದು ಸಲ ಕಲಾ ಸ್ವರ್ಗಲೋಕಕ್ಕೆ ಏರಿ ರಸಮಂದಾಕಿನಿಯಲ್ಲಿ ಓಲಾಡುತ್ತಿರುತ್ತೇನೆ.

ವಿರು- ಮೊದಲು ಆತ್ಮಸ್ವರೂಪದ ಪರಿಚಯ. ಬಹಳ ಉಚಿತವಾಗಿದೆ.

ಯುವ- ಶಿಶುಲೋಕವನ್ನು ಬಿಟ್ಟಮೇಲೆ ಬಾಲಲೋಕದಲ್ಲಿ ಆಟವಾಡಿದೆ. ಜೀವನೋಪಾಯಕ್ಕಾಗಿ ಶಿಲ್ಪಕಲೆಯನ್ನು ಕಲಿತೆ. ಯೌವನದಲ್ಲಿ ಶಿಲ್ಪಕಲಾ ಸ್ವರ್ಗವನ್ನು ನೋಡಬೇಕೆಂಬ ಹಂಬಲದಿಂದ ನಿದ್ರಾಹಾರಗಳ ಮೇಲೆ ಗಮನವಿಲ್ಲದೆ ಕಲೆಯ ತಪಸ್ಸನ್ನು ಮಾಡಿ ಆ ಲಕ್ಷ್ಯವನ್ನೂ ಸೇರಿದೆ. 

ವಿರು- ಅಂದರೆ ಶಿಲ್ಪಿ ಬ್ರಹ್ಮನೇ ಆಗಿ ಬಿಟ್ಟೆ. ಧನ್ಯೋಸ್ಮಿ 

ಯುವಕ- ಶಿಲ್ಪಸೃಷ್ಟಿ ಮಾಡಬೇಕೆಂಬ ಕೋರಿಕೆ ಅಂಕುರಿಸಿದ ಕೂಡಲೇ ಹೊಸ ಹೊಸ ವಿಲಾಸವನ್ನು ಬೀರುವ ರೂಪಗಳು ಘನಾಕೃತಿಯಲ್ಲಿ ನನ್ನ ಮನಸ್ಸಿನಲ್ಲಿ ಸೃಷ್ಟಿ ಆಗುತ್ತವೆ. ಅವು ಕೆದರಿ ಹೋಗದಂತೆ ಮನಸ್ಸಿನಲ್ಲೇ ಧಾರಣ ಮಾಡುತ್ತೇನೆ. ಆಮೇಲೆ ಉಳಿಯಿಂದ ಶಿಲೆಯಲ್ಲಿ ಕೆತ್ತಿ ಅದಕ್ಕೆ ಜೀವ ಕೊಡುತ್ತೇನೆ. ಅವುಗಳ ಸೌಂದರ್ಯವನ್ನು ಪುನಃ ಪುನಃ ನಾನೇ ನೋಡಿ ಮುಗ್ಧನಾಗುತ್ತೇನೆ. ಆನಂದಪರವಶನಾಗಿ ಹಾಡುತ್ತೇನೆ, ಕುಣಿಯುತ್ತೇನೆ. 

ವಿರು- ಶಿಲ್ಪಿಬ್ರಹ್ಮನ ಸೃಷ್ಟಿ ಹೀಗೆತಾನೆ ಆಗುವುದು. 

ಯುವಕ- ನಾನಿದ್ದ ನಾಡಿನ ದೊರೆ ಸಾಂಬೋಜಿಯವರು – ನನ್ನನ್ನು ಬರಮಾಡಿಕೊಂಡು ಬಹಳ ಮರ್ಯಾದೆ ಮಾಡಿದರು. ಬೇಕಾದಷ್ಟು ಮಾನ್ಯಗಳನ್ನು ಕೊಟ್ಟರು. 

ವಿರು- (ಸ್ವಲ್ಪತಾಳಿ) ರಾಜಾಶ್ರಯದಿಂದ ನೀನು ಉತ್ತಮವಾದ ಶಿಲ್ಪಗಳನ್ನೆಷ್ಟೋ ಸೃಷ್ಟಿಮಾಡಿದೆ. ಹೌದು ತಾನೇ. ಆ ಶಿಲ್ಪಗಳ ವಿಚಾರ ಹೇಳು. 

ಯುವಕ- ಇಲ್ಲ, ಆ ದೊರೆ ನನಗೆ ಪ್ರೋತ್ಸಾಹ ಕೊಟ್ಟಿದ್ದು ಕೇವಲ ರಾಜನೀತಿಯಿಂದ. ಬಿಡಿಬಿಡಿ ಶಿಲ್ಪಗಳನ್ನು ಕೆತ್ತುವುದಕ್ಕಿಂತಲೂ ಮಹಾಕಾವ್ಯದಂತೆ ವಿಸ್ತಾರವಾದ ಒಂದು ದೊಡ್ಡ ನಿರ್ಮಾಣವನ್ನೂ ಮಾಡಬೇಕೆಂಬ ಹಂಬಲ ನನಗೆ ಮೊದಲಿನಿಂದಲೂ ಇತ್ತು. ಅದಕ್ಕೆ ಆ ದೊರೆಯಿಂದ ಯಾವ ಪ್ರೋತ್ಸಾಹವೂ ಸಿಗಲಿಲ್ಲ. ಇನ್ನೆಲ್ಲಾದರು ಪ್ರೋತ್ಸಾಹ ಕೊಡಬಲ್ಲ ದೊರೆಗಳಿದ್ದರೆ ನೋಡೋಣವೆಂದು ನನ್ನ ಎಲ್ಲ ಐಶ್ವರ್ಯವನ್ನು ಬಿಟ್ಟು ದೇಶಾಂತರ ಹೊರಟವನು ಈಗ ಇಲ್ಲಿಗೆ ಬಂದೆ. 

ವಿರು- ಕಲೆಗಾಗಿ ಎಂಥ ತ್ಯಾಗ.

ಯು- ನಿಮ್ಮ ಕಣ್ಣುಗಳಲ್ಲಿನ ತೇಜಸ್ಸನ್ನು ನೋಡಿದರೆ ನೀವು, ನನ್ನ ಆಸೆ ತೀರಿಸಬಲ್ಲಿರಿ ಎಂದು ಕಾಣುತ್ತೆ ಪ್ರಭುಗಳೇ.

ವಿರು- ಧನ್ಯೋಸ್ಮಿ, ನಿನ್ನಂಥ ಮಹಾಶಿಲ್ಪಿ ಎಂದಿಗೆ ಲಭಿಸುವನೋ ಎಂದು ಹಗಲೂ ರಾತ್ರಿ ಎದುರು ನೋಡುತ್ತಿದ್ದ ನನಗೆ ದೈವಕೃಪೆಯಿಂದ ಈ ದಿನ ನೀನು ಲಭಿಸಿದ್ದೀಯೆ. ನಿನ್ನ ಕೋರಿಕೆ ಯಾವುದೋ ನನ್ನ ಕೋರಿಕೆಯೂ ಅದೇ. ನಾನು ಈ ಘನಗಿರಿ ಮಂಡಲದ ಅಧಿಪತಿ ವಿರುಪಣ್ಣ. ನಾನೂ ನನ್ನ ತಮ್ಮ ವೀರಣ್ಣನೂ ಹತ್ತು ಲಕ್ಷ ವರಹಗಳಿಗೆ ಮೇಲ್ಪಟ್ಟು ಧನವನ್ನು ಶಿಲ್ಪಕಲೆಯಿಂದ ಭಗವಂತನನ್ನು ಅರ್ಚಿಸುವುದಕ್ಕೆ ಕೂಡಿಟ್ಟಿದ್ದೇವೆ. 

ಯುವ- ಆಹಾ ನನ್ನ ಅದೃಷ್ಟವೇ ಅದೃಷ್ಟ. 

ವಿರು – ಧನವೊಂದೇ ಅಲ್ಲ ಒಳ್ಳೆಯ ಶಿಲ್ಪಿಗಳೂ ಸಿದ್ಧರಾಗಿದ್ದಾರೆ. ನೀನು ಅವರಿಗೆಲ್ಲಾ ನಾಯಕನಾಗಿ ಕೆಲಸ ಪ್ರಾರಂಭಿಸುವುದೇ ತಡ. 

ಯುವ-ಪ್ರಬುಗಳೇ, ನಮ್ಮ ಈ ಅನುದ್ದಿಷ್ಟವಾದ ಸಮಾಗಮ ದೈವಪ್ರೇರಿತವಾದುದು. ಈ ಸ್ಥಳದಲ್ಲಿ ನಾವು ಸೇರಿರುವುದರಿಂದ ಇಲ್ಲಿಯೇ ಶಿಲ್ಪಸೃಷ್ಟಿ ಮಾಡೋಣ. ಇಲ್ಲಿ ಬೇಕಾದಷ್ಟು ಶಿಲೆಗಳಿವೆ. 

ವಿರು- ಶಿಲೆಗಳನ್ನು ಪರೀಕ್ಷಿಸಿದೆಯಲ್ಲಾ, ನಿನ್ನ ಅಭಿಪ್ರಾಯ? 

ಯುವ- ಜಕಣಾಚಾರಿ ವಂಶದವನಾದ ನನಗೆ ಯಾವ ಕಲ್ಲಾದರೇನು ಪ್ರಭೂ.

ವಿರು- ಇದು ಪುರಾಣ ಪ್ರಸಿದ್ಧವಾದ ಶಿವಕ್ಷೇತ್ರ. ಇಲ್ಲಿ ಅಗಸ್ತ್ಯ, ಶ್ರೀ ರಾಮ, ಆಂಜನೇಯ – ಇವರು ಪ್ರತಿಷ್ಠೆ ಮಾಡಿದ ಮೂರು ಶಿವಲಿಂಗಗಳಿವೆ. 

ಯುವಕ- ಇದೆಲ್ಲಾ ಭಗವಂತನ ಕರುಣೆ. ಶಿವಲಿಂಗಗಳ ಸಾನಿಧ್ಯದಲ್ಲಿ ಧ್ಯಾನ ಮಾಡುತ್ತ ಈ ರಾತ್ರಿಯೆಲ್ಲಾ ಇಲ್ಲೇ ಕಳೆಯೋಣ. ನಾಳೆಯೇ ದೇವಾಲಯ ನಿರ್ಮಾಣಕ್ಕೆ ನಾಂದಿ ಮಾಡೋಣ. 

ವಿರು – ನಾಳೆಯವರೆಗೂ ತಡಮಾಡುವುದು ಬೇಡ. ದೈವ ಯೋಗದಿಂದ ನೀನು ಲಭಿಸಿ ಈ ಸುಮುಹೂರ್ತವನ್ನು ನಾನು ಕಳೆದುಕೊಳ್ಳಲಾರೆ. ಈ ಮುಹೂರ್ತದಲ್ಲೇ, ಈ ಸ್ಥಳದಲ್ಲೇ, ಈ ಪೂರ್ಣಚಂದ್ರನಿಂದ ಬೀಳುತ್ತಿರುವ ಈ ಬೆಳದಿಂಗಳಿನ ಧಾರೆಗಳಿಂದಲೇ ದಶದಿಕ್ಕುಗಳೂ ನೋಡುತ್ತಿರಲು ನಿನ್ನನ್ನು ಶಿಲ್ಪಕಲಾ ಸಾಮ್ರಾಜ್ಯಕ್ಕೆ ಒಡೆಯೆನನ್ನಾಗಿ ಮಾಡುತ್ತಾ ಇದ್ದೇನೆ. 

ಯುವ – ಇದೇನು ಪ್ರಭುಗಳೇ, ಇಷ್ಟು ದೊಡ್ಡಸ್ತಿಕೆಗೆ ನನ್ನಲ್ಲಿ ಯೋಗ್ಯತೆ ಇಲ್ಲ. 

ವಿರು- ನಿನಗೆ ಗೊತ್ತಿಲ್ಲ ನೀನು ಸುಮ್ಮನೆ ಇರು. ನನ್ನ ತನುಮನಗಳನ್ನೂ, ಕೂಡಿಟ್ಟ ಧನವನ್ನೂ, ಬಂಧು ಮಿತ್ರರ ಮತ್ತೆ ಪ್ರಜೆಗಳ ಸಹಕಾರವನ್ನೂ ನಿನಗೆ ಅರ್ಪಿಸಿದ್ದೇನೆ. ನೀನು ಶಿಲ್ಪಕಲಾ ಸಾಮ್ರಾಜ್ಯವನ್ನಾಳುತ್ತಾ ಲೋಕಕಲ್ಯಾಣವನ್ನು ಮಾಡು. ಇಂದಿನಿಂದ ನಿನ್ನನ್ನೆಲ್ಲರೂ ಶಿಲ್ಪಿ ಬ್ರಹ್ಮನೆಂದೇ ಕರೆಯಲಿ.

ಯು- ಪ್ರಭುಗಳೇ, ನೀವು ನಿಜವಾಗಿಯೂ ಶಿಲ್ಪಕಲೆಯ ಪಾಲಿನ ಭಾಗ್ಯದೇವತೆ.

ವಿರು- ಎಲ್ಲಾ ಭಗವಂತನ ಸಂಕಲ್ಪ ಗೆಳೆಯನೇ( ಎಂದು ಯುವಕನನ್ನು ತಬ್ಬಿಕೊಳ್ಳುವನು) 

                              ಅಂಕ – 2 ದೃಶ್ಯ – 1

           (ಕೂರ್ಮಾದ್ರಿ – ದೇವಾಲಯಕ್ಕೆ ಬುನಾದಿಗಳನ್ನು ಹಾಕಿರುವರು) 

                                      ಹಾಡು

ಶಿಲ್ಪಿಗಳು – ಬುನಾದಿಗಳನ್ನು ಹಾಕಿ ನಾವು ಗುಡಿಯಕಟ್ಟುವ 

ಸರಸ್ವತಿ – ವಿನೋದ ಜ್ಞಾನ ಕೊಡುವ ಕಲೆಯ ಸಸಿಯನೆಟ್ಟುವ ||

ಶಿಲ್ಪಿಗಳು – ಹೊಡೆ ಹೊಡೆದು ಹೆಬ್ಬಂಡೆಗಳನು 

               ಕಡಿಕಡಿದು ಕೈವಶಮಾಡುವ, ತಡಬಡದೆ ಎತ್ತುತ ನಿಲಿಸುತ

               ಬಿಡಿ ಬಿಡಿ ರೂಪಗಳನು ಕೆತ್ತುವ || ಬುನಾ || 

ಸರಸ್ವತಿ –        ಶಿಲೆಯನ್ನಪರಂಜಿಯಮಾಡಿ, ಕುಲುಕುವ ಶಿಲ್ಪಗಳನು ಕೆತ್ತಿ 

              ತುಳುಕಿಸುತಾ ಬಾವಾಂಬುಧಿಯನು, ಕಲೆಗಳ ಅಮೃತಾಂಶುವ     

               ಸೃಷ್ಟಿಸಿ ||ಬುನಾ||

ಶಿಲ್ಪಿಗಳು – ಪ್ರಾಕಾರವ ಕೇಳಿರಬೇಕು, ಲೇಪಾಕ್ಷಿಯವರೆಗೂ ಹಬ್ಬ 

              ಆಕಾಶವ ಮುಟ್ಟಲೆ ಬೇಕು, ಗೋಪುರಗಳು ಮೇಲಕ್ಕುಬ್ಬಿ ||ಬುನಾ||

ಸರಸ್ವತಿ –        ಶಿವನಾ ಶ್ರೀವಿಷ್ಣುವಿನಾ, ವೀರಭದ್ರನಾ ಭದ್ರಕಾಳಿಯಾ 

         ವಿವಿಧಾಮರ ವರಮೂರ್ತಿಗಳ, ಭವನಂಗಳ ಕಟ್ಟುವ ನಾವು ||ಬುನಾ|| 

(ಶಿಲ್ಪಿ ಬ್ರಹ್ಮ ಪ್ರವೇಶಿಸಿ ನೋಡುತ್ತಾ ನಿಂತಿರುವನು).( ಹಾಡು ಮುಗಿದ ಮೇಲೆ)

ಶಿಲ್ಪಿ ಬ್ರಹ್ಮ – ಈ ದಿನ ಶ್ರಾವಣ ಶುದ್ಧ ಹುಣ್ಣಿಮೆ. ನಮ್ಮ ನಾಡಿನ ಪದ್ಧತಿಯಂತೆ ನನ್ನ ತಂಗಿ ನನಗೆ ರಕ್ಷಾ ಬಂಧನವನ್ನು ಕಟ್ಟುತ್ತಿದ್ದಳು. ಈ ವರ್ಷ ಎಲ್ಲಿದ್ದಾಳೋ ನನ್ನ ತಂಗಿ…

ಸರಸ್ವತಿ –        ಇಲ್ಲೇ ಇದ್ದಾಳಣ್ಣಾ 

ಶಿ. ಬ್ರ –    ಸರಸ್ವತೀ – ನೀನು ಪ್ರಭುಗಳ ಮಗಳು – ನನ್ನಂತಹ ಪರದೇಶಿಗೆ ತಂಗಿ

ಸರಸ್ವತಿ –        ನೀವು ಪರದೇಶಿ ಹೇಗಣ್ಣಾ. ಇಲ್ಲಿರುವ ನಾವೆಲ್ಲಾ ಕಲಾಬಂಧುಗಳೇ. ಮೇಲೆ ನೀವು ಶಿಲ್ಪ ಸಾಮ್ರಾಟರು. 

ಶಿ. ಬ್ರ –    ಅದು ನಿಮ್ಮ ತಂದೆಯವರ ಔದಾರ್ಯದ ಆವೇಶ. 

ಸರಸ್ವತಿ –        ರಕ್ಷಾಬಂಧನ ಅಂದರೆ ಬಲಕೈಗೆ ದಾರಕಟ್ಟುವುದು ತಾನೇ, ನಾನು ತಕೊಂಡು ಬರುತ್ತೇನೆ. ಇಲ್ಲೇ ಒಂದು ಕ್ಷಣ ಇರಿ.  (ಓಡಿಹೋಗುವಳು) 

ಒಬ್ಬ ಶಿಲ್ಪಾಚಾರ್ಯ – ಶಿಲ್ಪಿ ಬ್ರಹ್ಮಯ್ಯನವರೇ. ನಮ್ಮನ್ನೆಲ್ಲಾ ಮಂಟಪಗಳನ್ನು ಕಟ್ಟುವುದಕ್ಕೆ ನೀವು ನಿಯೋಗಿಸಿದ್ದೀರಿ. ಮಂಟಪಗಳಲ್ಲಿ ಒಂದೊಂದು ಸ್ತಂಭವನ್ನೂ ಮೂರು ಭಾಗ ಮಾಡಿ ಒಂದೊಂದು ಭಾಗದಲ್ಲೂ ನಾಲ್ಕು ಮುಖಗಳನ್ನು ಕೆತ್ತಿದರೆ ಸಾವಿರಾರು ಮುಖಗಳು ಸಿಗುತ್ತವೆ. 

ಶಿ. ಬ್ರ-     ಹೌದು. ಸಾವಿರಾರು ಮುಖಗಳು ಸಿಗದಿದ್ದರೆ ಈ ಸೃಷ್ಟಿಯಲ್ಲಿನ ಪಶುಪಕ್ಷ್ಯಾದಿ ನಾನಾ ರೂಪಗಳನ್ನು ಕೆತ್ತುವುದುಕ್ಕೆ ಹೇಗೆ ಸಾಧ್ಯ? ಸರಸ್ವತಿಯ ಕೋರಿಕೆ ಅದೇ ತಾನೇ. 

ಸರಸ್ವತಿ –        (ಪ್ರವೇಶಿಸುತ್ತಾ) ಈ ದಾರಕ್ಕೆ ಅರಸಿನ ಹಚ್ಚಿಕೊಂಡು ಬಂದಿದ್ದೀನಿ.

ಎಲ್ಲಿ ನಿಮ್ಮ ಬಲಗೈ ಕಟ್ಟುತ್ತೇನೆ. (ಶಿಲ್ಪಿ ಬ್ರಹ್ಮ ಬಲಗೈ ಚಾಚುವನು) 

ವಿರುಪಣ್ಣ –        (ಆತುರವಾಗಿ ಪ್ರವೇಶಿಸಿ) ಸ್ವಲ್ಪ ತಾಳು ಮಗೂ. ರಕ್ಷಾಬಂಧನವನ್ನು ಕಟ್ಟಬೇಡ. (ಎಲ್ಲರೂ ನಿಶ್ಚೇಷ್ಟರಾಗಿ ನಿಲ್ಲುವರು – ಪಾರ್ವತಮ್ಮ ಪ್ರವೇಶಿಸುವಳು)

ಪಾರ್ವತಮ್ಮ- ಏನಮ್ಮಾ ಅದು? ಏನೋ ಗಟ್ಟಿಯಾಗಿ ಹೇಳುತ್ತಿದ್ದಾರೆ ಯಜಮಾನರು? ಎಂದಿಗೂ ಇಲ್ಲ.

ಸರಸ್ವತಿ – ಈ ದಿನ ಶ್ರಾವಣ ಶುದ್ಧ ಹುಣ್ಣಿಮೆ ಅಲ್ಲವೇನಮ್ಮ, ಅಣ್ಣನಿಗೆ ಈ ದಾರವನ್ನು ರಕ್ಷಾಬಂಧನವನ್ನಾಗಿ ಕಟ್ಟುತ್ತಾ ಇದ್ದೇನೆ. ಇದು ಅವರ ದೇಶದ ಪದ್ಧತಿ.

ಪಾರ್ವತಮ್ಮ-    ಅದಕ್ಕೆ ಯಜಮಾನರು ಬೇಡವೆಂದರೇ? 

ಸರಸ್ವತಿ –        ಹೌದು. 

ಪಾರ್ವತಮ್ಮ – ತಿಳಿಯಿತು ಅವರ ಅಭಿಪ್ರಾಯ. ನಿನ್ನ ಕೊರಳಲ್ಲಿ ಈ ರೂಪು ಇರುವವರೆಗೂ ನೀವು ಅಣ್ಣ ತಂಗಿಯರಂತೆ ವ್ಯವಹರಿಸುವುದೇನೋ ಸರಿ. ಆದರೆ ನೀನು ರಕ್ಷಾ ಬಂಧನವನ್ನು ಕಟ್ಟ ಬೇಡ ಎಂದು ಹೇಳುವುದಕ್ಕೆ ನಿಮ್ಮ ತಂದೆಗೆ ಅಧಿಕಾರವಿದೆ. 

ಸರಸ್ವತಿ –        ನನ್ನ ರೂಪಿನ ಉದ್ದೇಶವೇನೋ ಹಿಂದೆಯೇ ತಿಳಿಸಿದ್ದೀರಿ. ಆದರೆ ಈ ರಕ್ಷಾಬಂಧನದ ಉದ್ದೇಶ ನನಗೆ ಪೂರ್ತಿ ತಿಳಿಯದು. ಇದು ಉತ್ತರ ದೇಶದ ಪದ್ಧತಿ. ಈ ದಿನ ಇದನ್ನು ಹೆಂಗಸರು ಅಣ್ಣತಮ್ಮಂದಿಗೆ ಕಟ್ಟುತ್ತಾರಂತೆ. ನಾನು ತಿಳಿಯದೆ ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ. 

ವಿರು –      ಅಮಾಯಕಳು ನಮ್ಮ ಸರಸ್ವತಿ. ಶಿಲ್ಪಿಬ್ರಹ್ಮಯ್ಯಾ, ನಿನಗಾದರೂ ಅರ್ಥವಾಯಿತೇ ನನ್ನ ಉದ್ದೇಶ. 

ಶಿ. ಬ್ರ –    ಅರ್ಥವಾಯಿತು. ಪ್ರಭುಗಳ ನಿಯಮವನ್ನು ಯಾರೂ ಉಲ್ಲಂಘಿಸಬಾರದು. 

ಸರಸ್ವತಿ –        ಅರ್ಥವನ್ನು ತೋರಿಸುವುದಕ್ಕೆ ಬದಲಾಗಿ ಅಣ್ಣನ ಮಾತು ಅರ್ಥವನ್ನು ಇನ್ನೂ ತೋರದಂತೆ ಮಾಡುತ್ತಿದೆಯಲ್ಲಾ. 

ಶಿ. ಬ್ರ –    ಅಮಾಯಕಳು ನೀನು. ರಕ್ಷಾಬಂಧನವನು ಕಟ್ಟಬೇಡ. 

ವಿರು –      ಈ ಮಾತು ಹೇಳಿ ನಮ್ಮನ್ನುದ್ಧಾರ ಮಾಡಿದೆಯಪ್ಪಾ. 

ಪಾರ್ವತಮ್ಮ-    ಹೌದು

ಶಿ.ಬ್ರ –     ನೀವು ಹೊರಿಸುವ ಭಾರ ನಾನಿನ್ನು ಹೊರಲಾರೆ. ನಾನು ದೇವಾಲಯ ನಿರ್ಮಾಣ ಪೂರ್ತಿ ಆಗುವವರೆಗೂ ದೀಕ್ಷೆಯಲ್ಲಿರಬೇಕು. 

ವಿರು –      ನಿನ್ನ ದೀಕ್ಷೆಗೆ ವಿಘ್ನಮಾಡುವ ಉದ್ದೇಶ ನಮ್ಮದಲ್ಲ. ಅದು ನಮ್ಮ ದೀಕ್ಷೆಗೂ ಭಂಗವೇ. 

ಸರಸ್ವತಿ –        ಈಗ ತಿಳಿಯಿತು. ಅದು ನನ್ನ ದೀಕ್ಷೆಗೂ ಭಂಗವೇ. ನಾನು ಹಿಂದೆಯೇ ಹೇಳಿದ್ದೇನಲ್ಲಾ ನನ್ನ ಮದುವೆಗಿಂತಲೂ ಪಾರ್ವತೀ ಪರಮೇಶ್ವರರ ಕಲ್ಯಾಣ ಮೊದಲಾಗಬೇಕು ಅಂತ. 

ವಿರು- ಮಗೂ, ಈ ಮಾತು ಹೇಳಿ ನೀನೂ ನಮ್ಮನ್ನುದ್ಧಾರ ಮಾಡಿದೆ.

(ಶಿಲ್ಪಿಯೂ ಸರಸ್ವತಿಯೂ ತಲೆ ಬಗ್ಗಿಸಿಕೊಳ್ಳುವರು)

ಪಾರ್ವತಮ್ಮ- ನಿಮ್ಮಿಬ್ಬರ ಹೆಸರುಗಳೂ ಈಗಿನಂತೆಯೇ ಇರಲಿ.( ಎಲ್ಲರೂ ನಗುವರು)

ಸರಸ್ವತಿ –        (ರೂಪನ್ನು ತೋರಿಸಿ) ಇದರ ಉದ್ದೇಶದಲ್ಲೇನು ಬದಲಾವಣೆ ಇಲ್ಲವಲ್ಲಾ. 

ಶಿ.ಬ್ರ –     ಅಂದರೆ ದೀಕ್ಷೆ ಮುಗಿಯುವವರೆಗೂ ನಾವು ಅಣ್ಣತಂಗಿಯರಂತೆ ವರ್ತಿಸುವುದರಲ್ಲಿ ಅಭ್ಯಂತರವೇನಿಲ್ಲವಲ್ಲಾ ಎಂದು ಕೇಳುತ್ತಿದ್ದಾರೆ ಸರಸ್ವತಿ. 

ವಿರು –      ಯಾವ ಅಭ್ಯಂತರವೂ ಇಲ್ಲ. ಅಣ್ಣತಂಗಿಯರ ನಡುವಿನ ಪ್ರೇಮ ಗಂಡಹೆಂಡಿರ ಪ್ರೇಮಕ್ಕಿಂತಲೂ ವಿಶಾಲವಾದದ್ದು. ಎರಡರಲ್ಲೂ ಇರುವ ಪ್ರೇಮದ ಅಂಶವೊಂದೇ. ನೀವು ಗೃಹಸ್ಥರಾದ ಮೇಲೆ ಅದರಲ್ಲಿ ಕಾಮ ಬೆರೆಯುತ್ತೆ ಅಷ್ಟೆ. ಅದಕ್ಕೆ ಮುಂಚೆ ಇಲ್ಲ. 

ಶಿ.ಬ್ರ –     ನಾವು ಶಿಷ್ಟರ ಸಂಪ್ರದಾಯವನ್ನುಲ್ಲಂಘಿಸುವ ಬಲಹೀನರಲ್ಲ. 

ವಿರು –      ನಿಮ್ಮಲ್ಲಿ ಪರಸ್ಪರ ಪ್ರೇಮವೂ ಸಹಕಾರವೂ ಇಂದಿನಿಂದ ಬೆಳೆಯಲಿ. ಲೋಕ ಕಲ್ಯಾಣಕ್ಕೆ ಸಹಾಯಕವಾಗಲಿ. 

                                    ಹಾಡು

ಸರಸ್ವತಿ –        ನನ್ನೀ ರೂಪಿನ ಸಂದೇಶ

ಶಿ.ಬ್ರ –     ನನ್ನ ದೀಕ್ಷೆಯ ಉದ್ದೇಶ 

ಇಬ್ಬರೂ – ನಮ್ಮ ಹಿರಿಯರ ಆದೇಶ ಧರ್ಮವೀರದ ಆದೇಶ || ಪಲ್ಲವಿ|| 

              ಇಲ್ಲ ನಮಗೆ ಮದುವೆಗೆ ಮುಂಚೆಯೆ ಸಲ್ಲದ ಚಾಂಚಲ್ಯದ ಕಾಮ 

              ಎಲ್ಲೆಲ್ಲಿಯು ಬಿರಿದಿದೆ ಪರಿಮಳದಾ ಮಲ್ಲಿಗೆವೊಲು ಸೋದರತೆಯ     

              ಪ್ರೇಮ ||ನನ್ನೀ||

ಸರಸ್ವತಿ –        ಸಾಹಿತ್ಯದ ಸಾಗರವನ್ನೀಸುವೆ ಸಾಹಿತ್ಯದ ಮಾಧುರ್ಯವ   

             ಸೂಸುವೆ 

            ಸಂಗೀತದ ಕುಂಡಲಿನಿಯನೆಬ್ಬಿಸಿ ಆನಂದದ ಅಮೃತವ

            ನಾಸುರಿಸುವೆ ||ನನ್ನೀ||

ಶಿ.ಬ್ರ –     ಬಲದಿಂ ಶಿಲೆಗಳನೆತ್ತುವೆ ಕೆತ್ತುವೆ 

ಸರಸ್ವತಿ –        ಛಲದಿಂ ಕುಣಿಕುಣಿದಾಡುವೆ ಹಾಡುವೆ 

ಶಿ.ಬ್ರ –     ಕಲೆಯ ಕಲ್ಪತರುಗಳ ಹಬ್ಬಿಸುವೆ 

ಸರಸ್ವತಿ –        ಫಲಗಳ ರಸವನು ಜಗಕೆ ಹಂಚುವೆ ||ನನ್ನೀ|| 

                                     ದೃಶ್ಯ – 2

           (ನಿರ್ಮಿತವಾದ ದೇವಾಲಯದಲ್ಲಿ – ರಂಗಮಂಟಪದ ಪಕ್ಕದಲ್ಲಿ) 

ಶಿಲ್ಪಿಬ್ರಹ್ಮ –      ಪ್ರಾಕಾರಗಳ ಮಂಟಪಗಳಿಂದ ಆರಂಭವಾದ ದೇವಾಲಯ ಇಂದಿಗೆ ಮಹಾದ್ವಾರದವರೆಗೂ ಬಂತು. ಇಲ್ಲಿಂದ ನೋಡು ಸರಸ್ವತೀ ಪರಿಪೂರ್ಣವಾದ ರಂಗ ಮಂಟಪ ಹೇಗೆ ಕಾಣುತ್ತೆ. 

ಸರಸ್ವತಿ – (ನೋಡಿ) ಬಹಳ ಸುಂದರವಾಗಿದೆಯಣ್ಣಾ. ನಿಮ್ಮ ಮತ್ತು ತಂದೆಯವರ ಎಂಟು ವರ್ಷಗಳ ತಪಸ್ಸಿನ ಫಲ. 

ಶಿ.ಬ್ರ –     ನಮ್ಮದೇ ಅಲ್ಲ. ಇದರಲ್ಲಿ ನಿನ್ನ ತಪಸ್ಸೂ ಸೇರಿದೆ. ಶಿಲ್ಪಿಗಳ ತಪಸ್ಸೂ ಸೇರಿದೆ. 

ಸರ –       ಶಿಲ್ಪಿಗಳ ತಪಸ್ಸೇನೋ ಸೇರಿದೆ. ನನ್ನ ತಪ್ಪಸ್ಸೇನು ಸೇರಿದೆ? ನನಗೆ ಕಲ್ಲಿನ ಮೇಲೆ ಒಂದು ಗೆರೆಯೂ ಕೆತ್ತುವುದಕ್ಕೆ ಬರುವುದಿಲ್ಲವಲ್ಲಾ. 

ಶಿ.ಬ್ರ –     ಅದು ನಿನಗೆ ಗೊತ್ತಿಲ್ಲ. ನೀನು ಕಲೆಯಲ್ಲಿ ತನ್ಮಯಳಾಗಿ ಆಡುವ ಮಾತುಗಳ, ಹಾಡುಗಳ ಸಂಗೀತದ ಮತ್ತು ಆಡುವ ನಾಟ್ಯದ ರಮ್ಯ ಭಾವಗಳು ನನ್ನ ಶಿಲ್ಪದಲ್ಲಿ ಬಹಳ ಮಟ್ಟಿಗೆ ಪ್ರತಿಬಿಂಬಿತವಾಗಿವೆ. 

ಸರ –       ನಿಮ್ಮ ಶಿಲ್ಪಕಲೆಗೂ ನನ್ನ ಸಂಗೀತ ನಾಟ್ಯಗಳಿಗೂ ವ್ಯತ್ಯಾಸವಿದೆ. ನಿಮ್ಮಲ್ಲೂ ನಮ್ಮ ತಂದೆಯಲ್ಲೂ ಏಕಾಗ್ರತೆ ಇದೆ. ನನ್ನಲ್ಲಿ ತಾತ್ಕಾಲಿಕವಾದ ಭಾವಾವೇಶವಿದೆ. ನಿಮ್ಮದು ತಪಸ್ಸಾಗಬಹುದು. ನನ್ನದು ತಪಸ್ಸೆನಿಸಿಕೊಳ್ಳುವುದಿಲ್ಲ. 

ಶಿ.ಬ್ರ –     ಹಾಗೆ ನೋಡಿದರೆ ನನ್ನದೂ ತಪಸ್ಸಾಗುವುದಿಲ್ಲ. ನಿಮ್ಮ ತಂದೆಯವರದೊಂದೇ ತಪಸ್ಸು. 

ಸರ –       ಅವರು ಒಂದೊಂದು ಶಿಲ್ಪದ ಮುಂದೆ ಅಥವಾ ಚಿತ್ರದ ಮುಂದೆ ನಿಂತುಕೊಂಡರೆ ಹಾಗೆಯೇ ಧ್ಯಾನಮಗ್ನರಾಗಿ ಎಷ್ಟೋ ಹೊತ್ತು ನಿಂತುಕೊಂಡಿರುತ್ತಾರೆ. ಆಶ್ಚರ್ಯ.   

ಶಿ.ಬ್ರ- ಅವರು ಕಲಾಯೋಗಿಗಳು. ಬೇರೆ ಯೋಗಗಳಂತಯೇ ಅದೂ ಮೋಕ್ಷಕ್ಕೆ ಒಂದು ಸಾಧನ.

ಸರ- ಇರಬಹುದು. ಯೋಗದಿಂದ ಸಿದ್ಧಿಗಳು ಬರುತ್ತವೆಯೆಂದು ಕೇಳಿದ್ದೇನೆ.

ಕಲಾಯೋಗದಿಂದಲೂ ಸಿದ್ಧಿಗಳು ಬರುತ್ತವೆಯೇ. ನಮ್ಮ ತಂದೆಯವರು ಯಾವ ಸಿದ್ಧಿಯನ್ನು ತೋರಿಸುತ್ತಿಲ್ಲವಲ್ಲಾ.

ಶಿ.ಬ್ರ –     ನಿಮ್ಮ ತಂದೆಯವರು ಕಲಾಯೋಗದ ಅತ್ಯುನ್ನತ ದಶೆಯಲ್ಲಿದ್ದಾರೆ. ಎಂದಾದರೂ ಒಂದು ದಿನ ಅವರು ಸಿದ್ಧ ಪುರುಷರಾಗಿ ತೀರುವರು. 

ಸರ –       ಮಾನವ ಶಕ್ತಿಗೆ ಅತೀತವಾದ ಒಂದು ಮಹಿಮೆಯನ್ನು ತೋರಿಸಿದರೆ ಅವರು ಆಗ ಸಿದ್ಧರಾಗಿದ್ದಾರೆಂದು ಭಾವಿಸಬಹುದು. 

ಶಿ.ಬ್ರ –     ಮಾನವಶಕ್ತಿಗೆ ಅತೀತವಾದ ಕೆಲಸಗಳನ್ನು ಎಷ್ಟೋ ಜನ ಮಾಡುತ್ತಾರೆ. ನಮ್ಮ ಶಿಲ್ಪಿಗಳೂ ಕೆಲವರು ಮಾಡುತ್ತಾರೆ. ನಾನೂ ಮಾಡಬಲ್ಲೆ. 

ಸರ –       ಹೌದು. ಈ ರಂಗಮಂಟಪದಲ್ಲಿ ನೆಲವನ್ನು ತಾಕದಂತೆ ಆ ಅಂತರಿಕ್ಷಸ್ತಂಭವನ್ನು ನಿಲ್ಲಿಸಿರುವುದೂ, ತಾಯಿ ಅಡಿಗೆ ಮಾಡುವಷ್ಟರೊಳಗೆ ಆ ದೊಡ್ಡ ಫಣೀಂದ್ರನನ್ನು ಕೆತ್ತಿದ್ದೂ ಇವೆಲ್ಲಾ ಮಾನವಾತೀತ ಶಕ್ತಿಯನ್ನು ತೋರಿಸುತ್ತದೆ. 

ಶಿ.ಬ್ರ –     ಆ. ಅದೇನಿಲ್ಲ – ನನ್ನಲ್ಲಿ ಯಾವ ಶಕ್ತಿಯೂ ಇಲ್ಲ. ನೀನು ಕೊಟ್ಟ ಭಾವಗಳೇ ತಾನೇ ಆ ಶಿಲ್ಪಗಳನ್ನು ಕೆತ್ತುವುದಕ್ಕೆ ಕಾರಣ. 

ಸರ –       ನನ್ನ ಭಾವಗಳಿಗೇನು? ಏನೋ ನನಗೆ ತೋಚಿದ್ದು ನಾನು ಹೇಳಿದೆ 

ಶಿ.ಬ್ರ –     ನಾವು ಮಾತಾಡುತ್ತಿದ್ದುದ್ದು ಸಿದ್ಧಪುರುಷರ ವಿಚಾರವಾಗಿ. ಸಿದ್ಧಪುರುಷರಿಗೆ ಮಹಿಮೆಯನ್ನು ತೋರಿಸಬೇಕೆಂಬ ಸಂಕಲ್ಪವೇ ಇರುವುದಿಲ್ಲ. ಯಾವುದಾದರೂ ಒಂದು ಸಂಕಟವೊದಗಿದಾಗ ಅಥವಾ ಯಾವುದಾದರೂ ಲೋಕ ಕಲ್ಯಾಣಕರವಾದ ವಿಷಯದಲ್ಲಿ ಭಗವಂತನೇ ಅವರ ಮೂಲಕ ಅದ್ಭುತಗಳನ್ನು ಮಾಡಿಸುತ್ತಾನೆ. 

ಸರ –       ನಮ್ಮ ತಂದೆಯವರಿಗೆ ಈಗಾಗಲೇ ಬಂದಿರುವ ಕಷ್ಟಗಳು ಸಾಲದೇ? ಆದರೂ ಅವರಿಗೆ ಅದರ ನೋವೇ ಇಲ್ಲ. ಕೂಡಿಟ್ಟ ಧನವನ್ನೆಲ್ಲಾ ದೇವಾಲಯ ನಿರ್ಮಾಣಕ್ಕೂ, ವಿಗ್ರಹಗಳ ಪ್ರತಿಷ್ಠೆಗೂ, ದೇವರಿಗೆ ಮಾನ್ಯಗಳನ್ನು ಕೊಡುವುದಕ್ಕೂ ಖರ್ಚುಮಾಡಿಬಿಟ್ಟರು. ನಮ್ಮ ಚಿಕ್ಕಪ್ಪ ವೀರಣ್ಣಪ್ರಭುಗಳು ಘನಗಿರಿಯಲ್ಲಿ ಮಂಡಲಾಧಿಪತ್ಯದಿಂದ ಬರುವ ಹಣವನ್ನೆಲ್ಲಾ ಕಳುಹಿಸುತ್ತಿದ್ದರೂ ಅದೂ ಸಾಲದು. ಇಬ್ಬರು ಮೂವರನ್ನು ಬಿಟ್ಟು ಶಿಲ್ಪಿಗಳನ್ನೆಲ್ಲಾ ನಾನೇ ತಾಂಬೂಲಗಳು ಕೊಟ್ಟು ಕಳುಹಿಸಿಬಿಟ್ಟನಲ್ಲಾ. ಇನ್ನು ದೇವಾಲಯದ ಕೆಲಸ ಎಷ್ಟೋ ಉಳಿದಿದೆ. ನಾವೆಲ್ಲಾ ನಮ್ಮ ಆಹಾರಕ್ಕೇ ಧನಿಕರ ದಾನ ಧರ್ಮಗಳ ಮೇಲೆ ಆಧಾರ ಪಟ್ಟಿದ್ದೇವೆ.

 ಶಿ.ಬ್ರ –    ಹೌದು, ಕಾಲ ತೀರ ಬದಲಾಯಿತು. ವಿಜಯನಗರದಲ್ಲಿ ಅಚ್ಯುತದೇವರಾಯರು ಬೇರೆ ತೀರಿಕೊಂಡರು. ಅಲ್ಲಿ ಯಾರು ಸಮ್ರಾಟರಾಗುವರೋ. ಮಂಡಲಾಧಿಪತಿಗಳಲ್ಲಿ ಏನೇನು ಬದಲಾವಣೆಗಳಾಗುವವೋ. ನಿಮ್ಮ ತಂದೆಯವರ ಜ್ಞಾತಿ ರುದ್ರಣ್ಣ ಬೇರೆ ಬಹಳ ದಿನಗಳಿಂದ ವಿಜಯನಗರದಲ್ಲೇ ಇದ್ದಾನೆಂದು ಹೇಳುತ್ತಿದ್ದಾರೆ. ಆತನನ್ನು ಪ್ರಭುಗಳು ಎಷ್ಟು ಪ್ರೀತಿಯಿಂದ ನೋಡುತ್ತಿದ್ದರೂ, ಆತ ಜ್ಞಾತಿಮಾತ್ಸರ್ಯ ತೋರಿಸುತ್ತಾ ಇದ್ದಾನಂತೆ. 

ಪಾವರ್ವತಮ್ಮ- (ನೇಪಥ್ಯದಿಂದ) ಮಗೂ ಸರಸ್ವತೀ, ಎಲ್ಲಿದ್ದೀಯೆ

ಸರ –       ಇಲ್ಲೇ ಇದ್ದೇನಮ್ಮಾ. 

    (ಪಾರ್ವತಮ್ಮ ಪ್ರವೇಶಿಸಿ ಸರಸ್ವತಿಯನ್ನು ತಬ್ಬಿಕೊಂಡು ಕಣ್ಣೀರಿಡುವಳು) 

ಸರ –       ಏನಮ್ಮಾ ಇದು? ಯಾಕಮ್ಮಾ ಅಳುವುದು? 

ಶಿ.ಬ್ರ –     ಏನು ತಾಯಿ ಇದು? ಎಂದಿಗೂ ಇಲ್ಲ. 

ಪಾ –       (ರೂಪನ್ನು ಕೈಯಿಂದ ಹಿಡಿದು ನೋಡುತ್ತ) ನಮಗೆ ಉಳಿದಿರುವ ನಿನ್ನ ಈ ಆಭರಣವನ್ನು ಶೀಘ್ರದಲ್ಲೇ ಮಾರಬೇಕಾಗಿ ಬರುವುದೆಂದು ಸೂಚನೆ ಕೊಟ್ಟರು ಯಜಮಾನರು. 

ಸರ- ಅದಕ್ಕೇತಕ್ಕಮ್ಮಾ ಯೋಚನೆ. ನಿಮಗೂ ತಂದೆಯವರಿಗೂ ಇಲ್ಲದ ಒಡವೆ ನನಗೇಕಮ್ಮಾ. ನಿಮ್ಮ ಧನವನ್ನೂ ಒಡವೆಗಳನ್ನೂ ನೀವು ಸಂತೋಷದಿಂದ ಕೊಡಲಿಲ್ಲವೇ. ನಾನೂ ಸಂತೋಷದಿಂದ ಕೊಟ್ಟುಬಿಡುತ್ತೇನೆ. ಇದಕ್ಕೇತಕ್ಕಮ್ಮಾ ದುಃಖಪಡುವುದು. 

ಪಾ –       ನಮಗಿರುವುದನ್ನು ನಾವು ಕೊಡುವುದಕ್ಕೂ ನಿನ್ನ ಒಡವೆ ಕಿತ್ತುಕೊಳ್ಳುವುದಕ್ಕೂ ವ್ಯತ್ಯಾಸವಿದೆ ಮಗೂ. ಇದು ನಿನಗೆ ಕೊಟ್ಟಮೇಲೆ ನಿನ್ನದೇ ಆಯಿತು. ಅದು ಮುಂದೆ ನಿನ್ನ ಯಜಮಾನರಿಗೆ ಸೇರಬೇಕಾದುದು. 

ಶಿ.ಬ್ರ –     ಇಲ್ಲಿ ಹೊಸಬರು ಯಾರಿದ್ದಾರೆ ತಾಯೀ. ಈ ದೇವಾಲಯದ ಕೆಲಸದಲ್ಲಿ ನಿಮಗೆಷ್ಟು ಬಾಧ್ಯತೆ ಇದೆಯೋ ನಮಗೂ ಅಷ್ಟೇ ಭಾದ್ಯತೆಯಿದೆ ಕೆಲಸದಲ್ಲಿ

ಪಾ- ಇದನ್ನು ತಿಳಿದೇ ಯಜಮಾನರು ಹಾಗೆ ಸೂಚನೆ ಕೊಟ್ಟದ್ದು. ಇನ್ನೊಂದು ವಿಷಯ. ಕಾಲ ತೀರ ಕೆಟ್ಟು ಹೋಗಿದೆಯಪ್ಪಾ. ಕಲ್ಯಾಣ ಮಂಟಪ ಮುಗಿಯುವವರೆಗೂ ಕಾದರೆ ಶಿವನ ಕಲ್ಯಾಣವೇ ಆಗುವುದಿಲ್ಲ. ಆದ್ದರಿಂದ ಈಗಾಗಿರುವಷ್ಟು ಕಲ್ಯಾಣ ಮಂಟಪದಲ್ಲೇ ಗಿರಿಜಾ ಕಲ್ಯಾಣವನ್ನು ಮಾಡಿ ಬಿಡಬೇಕು ಅಂತ ಯೋಚನೆ ಇದೆ ಯಜಮಾನರಿಗೆ. 

    (ವಿರುಪಣ್ಣ ಪ್ರವೇಶಿಸುವನು) 

ವಿರು –      ಹೌದು, ನನಗೆ ಹಾಗನ್ನಿಸುತ್ತೆ. ನಿಮ್ಮ ಅಭಿಪ್ರಾಯವೇನು 

ಶಿ.ಬ್ರ –     ತಮ್ಮ ಯೋಚನೆ ಬೇರೆ ನಮ್ಮ ಯೋಚನೇ ಬೇರೇನಾ! 

ಸರ –       ಅಪ್ಪಾಜೀ ನೀವು ಯೋಚಿಸಿದ ಹಾಗೇ ಮಾಡಿ. ಈ ರೂಪನ್ನು ಖರ್ಚಿಗಾಗಿ ಈಗಲೇ ತೆಗೆದುಕೊಳ್ಳಿ. (ಕೊರಳಿನಿಂದ ತೆಗೆಯುವುದಕ್ಕೆ ಹೋಗುವಳು). 

ವಿರು –      ಅದನ್ನು ತೆಗೆಯಬೇಡ ಮಗೂ. ಮಾಂಗಲ್ಯಕಟ್ಟಿದ ಮೇಲೇನೇ ಅದನ್ನು ತೆಗೆಯಬೇಕು. 

ಸರ –       ಹಾಗಾದರೆ ಕಲ್ಯಾಣೋತ್ಸದ ಖರ್ಚಿಗೆ? 

ವಿರು –      ಸಾಲಮಾಡಿರುತ್ತೇನೆ  ಕಲ್ಯಾಣೋತ್ಸವ ಆದ ಕೂಡಲೇ ನಿಮ್ಮಿಬ್ಬರ ಮದುವೆಯೂ ಆಗಲಿ. ಆಮೇಲೆ ರೂಪು ತೆಗೆದುಕೊಂಡು ಹೋಗಿ ಸಾಲ ತೀರಿಸುತ್ತೇನೆ. 

ಶಿ.ಬ್ರ –     ಕಲ್ಯಾಣ ಮಂಟಪ ಮುಗಿಯದೇ ನಾನು ದೀಕ್ಷೆ ಹೇಗೆ ಬಿಡಲಿ ಪ್ರಭುಗಳೇ. 

ವಿರು –      ಪ್ರತಿ ಒಂದೂ ದೈವ ಸಂಕಲ್ಪವಿದ್ದಂತೆ ನಡೆಯುತ್ತೆ. ಇದಕ್ಕೆ ನಾವು ಚಿಂತಿಸಬಾರದು. ನೀನು ಪಾರ್ವತಿಪರಮೇಶ್ವರರ ಕಲ್ಯಾಣವನ್ನು ತೋರಿಸುವ ವಿಗ್ರಹವನ್ನು ಕೆತ್ತಿ ನಿಲ್ಲಿಸಿ ದೀಕ್ಷೆಯನ್ನು ಬಿಟ್ಟು ಮದುವೆಯಾಗು. ಆಮೇಲೆ ಉಳಿದ ಕಲ್ಯಾಣ ಮಂಟಪವನ್ನು ಎಲ್ಲರೂ ಸೇರಿ ಕಟ್ಟುತ್ತಾ ಇರೋಣ. ಎಂದಿಗೆ ಮುಗಿದರೆ ಅಂದಿಗೆ ಮುಗಿಯಲಿ. 

ಶಿ.ಬ್ರ –     ಪ್ರಭುಗಳ ಅಪ್ಪಣೆ. 

ಪಾ –       ಮಗೂ, ಈ ಚಿನ್ನ ವಜ್ರಗಳ ಆಭರಣವನ್ನು ತೆಗೆದು ಮದುವೆಯಲ್ಲಿ ನಿನಗೆ ಕರಿಮಣಿಯ ಸರವನ್ನುಡಿಸಬೇಕಾಗಿ ಬಂತಲ್ಲಾ. 

ವಿರು –      ದೈವಸಂಕಲ್ಪಕ್ಕೆ ಯಾರೂ ಯೋಚಿಸಬಾರದು. 

ಮದುಮಗನಿಗೆ ಮದುಮಗಳೇ ಒಡವೆ. ಮದುಮಗಳಿಗೆ ಮದುಮಗನೇ ಒಡವೆ ಎಂದು ಹೇಳುವುದುಂಟು. ಅದಕ್ಕೆ ನಿಮ್ಮ ಮದುವೆ ಒಂದು ನಿದರ್ಶನವಾಯಿತು.

(ನೇಪಥ್ಯದಲ್ಲಿ ಹಾಡು)

ಮದುಮಗಳಿಗೆ ಮದುಮಗನೇ ಒಡವೆ, ಮದುಮಗನಿಗೆ ಮದುಮಗಳೇ ಒಡವೆ, 

ಇದುವೇ ಬಡವರ ಮದುವೆಯ ರೀತಿ, ಹೃದಯಗಳೊಳು ಮಿಡಿಯುತ್ತಿಹ ಪ್ರೀತಿ || 

ಬಡತನವೇ ಶಾಶ್ವತವೆಂದರಿತು, ಸಿರಿತನದಲಿ ಮೈಮರೆಯದೆ ನುರಿತು 

ತನ್ನ ಹೊನ್ನ ಬಡಬಗ್ಗರಿಗೀವ ಚಾಗಭೋಗ ದಕ್ಕರದಾ ರಸಿಕರ || ಮದು|| 

ಸಂಗೀತವೆ ಸಾಹಿತ್ಯವೆ ನಾಟ್ಯವೆ ಕೇಯೂರಂಗಳು ಚಂದ್ರಹಾರಗಳು 

ಶಿಲ್ಪಕಲೆಯ ಔನ್ನತ್ಯವೆ ನಿತ್ಯವು ತಲೆಯ ಮೇಲೆ ಬಲು ದೊಡ್ಡ ಕಿರೀಟವು || ಮದು||

ಲೋಕವೆಲ್ಲವೂ ಬಂಧುಬಳಗವೇ ಉಕ್ಕುವ ಪ್ರೇಮದ ರಸವೆ ವಸಂತವು 

ರಸಿಕರ ಹೊಗಳಿಕೆ ಮೇಳತಾಳಗಳು ಭಗವಂತನ ಕೃಪೆ ಆಶೀರ್ವಾದವು || ಮದು|| 

                                                        ದೃಶ್ಯ – 3

(ದೇವಸ್ಥಾನದ ಒಂದು ಭಾಗ) 

ಶಿಲ್ಪಿ ಬ್ರಹ್ಮ –     ಬಾ ಸರಸ್ವತೀ, ಇತ್ತಕಡೆ ಬಾ 

ಸರಸ್ವತಿ -(ಪ್ರವೇಶಿಸುತ್ತಾ) ತಾಯಿ ಅಡಿಗೆ ಕಲಿಸುತ್ತಿದ್ದಾರೆ ರೀ. ಹೋಗಬೇಕು. 

ಶಿ –  (ಕೈ ಹಿಡಿದುಕೊಂಡು) ನಿನಗೆ ಯಾವಾಗಲೂ ಅಡಿಗೆ ಮನೆಯಲ್ಲೇ ಕೆಲಸ. ಮದುವೆ ಆಗುವುದಕ್ಕೆ ಮೊದಲು ಅಡಿಗೆ ಮನೆಗೆ ಪ್ರವೇಶಿಸುತ್ತಾನೆ ಇರಲಿಲ್ಲ. ಈಗ ಯಾವಾಗಲೂ ಅಲ್ಲೇ ಕೆಲಸ. 

ಸ –  ಹಾಗೇನಿಲ್ಲ. ಏನಾದರೂ ಕೆಲಸವಿದ್ದರೆ ನೀವು ಕರೆದರೆ ಬರುತ್ತೇನೆ. ಸುಮ್ಮ ಸುಮ್ಮನೆ ನಾವಿಬ್ಬರೂ ಜತೆಕಟ್ಟಕೊಂಡು ಓಡಾಡುತ್ತಿದ್ದರೆ ದೊಡ್ಡವರು ಏನು ತಿಳಿದುಕೊಂಡಾರು? 

ಶಿ – ಸುಮ್ಮ ಸುಮ್ಮನೆ ಕರೆದುಕೊಂಡು ಬರುತ್ತೀನಾ ನಾನು? ನಿನಗೆ ನನ್ನ ಜತೆಯಲ್ಲಿ ಬರುವುದು ಇಷ್ಟವಿಲ್ಲದಿದ್ದರೆ ಅಡಿಗೆ ಮನೆಗೆ ಹೋಗು. 

ಸ –  ಹಾಗೆ ತಪ್ಪು ತಿಳಿದುಕೊಂಡರೆ ಹೇಗೆರೀ. ನನ್ನಿಂದ ಏನು ಕೆಲಸ ಅಂತ ಮಾತ್ರ ಕೇಳಿದೆ. 

ಶಿ – ನೀನಿಲ್ಲದಿದ್ದರೆ ನನಗೆ ಕೆಲಸವೇ ತೋಚುತ್ತಿಲ್ಲವಲ್ಲಾ. ನಿಮ್ಮ ತಾಯಿಯವರು ಏನು ಹೇಳಿದ್ದು? ಮದುವೆಯಾಗಿ ನೀವಿಬ್ಬರೂ ಶಿಲ್ಪಗಳನ್ನು ಪೂರ್ತಿಮಾಡಿ ಅಂತ ತಾನೇ? 

ಸ – ಅದೇನೋ ನಿಜ. ಆದರೆ ನನಗೆ ಶಿಲ್ಪ ಬರುವುದಿಲ್ಲವಿಲ್ಲಾ. 

ಶಿ – ನನಗೆ ಸಾಹಿತ್ಯ ಜ್ಞಾನವಿಲ್ಲವಲ್ಲಾ. ನೀನು ಹೊಸ ಹೊಸ ಭಾವಗಳನ್ನು ಕೊಡುತ್ತಿದ್ದರೆ ತಾನೆ ನಾನು ಶಿಲ್ಪಗಳನ್ನು ಕೆತ್ತುವುದು? 

ಸ – ಶಿಲ್ಪಿಗಳಿಗೆ ಸಾಹಿತ್ಯಜ್ಞಾನವಿಲ್ಲದೆ ಇರುತ್ತದೆಯೇ? ಅದರಲ್ಲೂ ನೀವು ದೊಡ್ಡ ಶಿಲ್ಪಿಗಳು.

ಶಿ – ನನಗೆ ಅಲ್ಪಸ್ವಲ್ಪ ಸಾಹಿತ್ಯ ಜ್ಞಾನವಿರಬಹುದು. ಆದರೆ ನೀನು ದೊಡ್ದ ಸಾಹಿತಿ.

ಸ – ನಾನೇನು ದೊಡ್ಡ ಸಾಹಿತಿ ಅಲ್ಲ.

ಶಿ – ನಾನೇನು ದೊಡ್ಡ ಶಿಲ್ಪಿ ಅಲ್ಲ.                                          

ಸ – ನೀವು ದೊಡ್ಡ ಶಿಲ್ಪಿಗಳು 

ಶಿ –  ನಿಜವಾಗಿಯೂ? 

ಸ –  ನಿಜವಾಗಿ. 

ಶಿ – ಆದರೆ ನಾನು ಶಿಲ್ಪ ಬ್ರಹ್ಮ ಅಂತ ಒಪ್ಪುತ್ತೀಯಾ? 

ಸ –  ನಿಜವಾಗಿ 

ಶಿ – ಹಾಗಾದರೆ ದೊಡ್ಡಶಿಲ್ಪಿಗಳು ಅನ್ನುವುದಕ್ಕೆ ಬದಲು ಶಿಲ್ಪಿಬ್ರಹ್ಮ ಅಂತ ಹೇಳು. 

ಸ –  ನಾನು ಹಾಗೆ ಹೇಳುವುದಿಲ್ಲ. ದೊಡ್ಡ ಶಿಲ್ಪಿಗಳು ಅಂತ ಮಾತ್ರ ಹೇಳುತ್ತೇನೆ. 

ಶಿ –  ದೊಡ್ಡಶಿಲ್ಪಿ ಅಂದರೆ ಏನು ಅರ್ಥ? ಎತ್ತರದಲ್ಲಿ ನಿನಗಿಂತಲೂ ದೊಡ್ಡವನು ಅಂತಲೋ? 

ಸ – ಅಲ್ಲ (ನಗುತ್ತ) ದೊಡ್ಡ ದೊಡ್ಡ ಶಿಲ್ಪಗಳನ್ನು ಮಾಡುವವರು ಅಂತ. 

ಶಿ –  ದೊಡ್ಡ ಅಂದರೆ ಗಾತ್ರದಲ್ಲೋ? ಗುಣದಲ್ಲೋ? 

ಸ –  ಎರಡರಲ್ಲೂ. ಆದರೆ ನೋಡಿದವರಿಗೆ ಮೊದಲು ಕಾಣುವುದು ಗಾತ್ರ 

ಶಿ –  ನೀನು ನನ್ನನ್ನು ಹಾಸ್ಯ ಮಾಡುತ್ತಿದ್ದೀಯಾ? 

ಸ –  ಇರುವ ಸಂಗತಿ ಹೇಳಿದರೆ ಹಾಸ್ಯವೇ? 

ಶಿ –  ಅಷ್ಟು ದೊಡ್ಡದಾಗಿ ಕಾಣಿಸುವ ಶಿಲ್ಪಗಳನ್ನು ನಾನೇನೂ ಮಾಡಿಲ್ಲವಲ್ಲಾ. ವಿಗ್ರಹಗಳು ಅಂದರೆ ಅಷ್ಟುಗಾತ್ರ ಇದ್ದರೇನೇ ಸೊಗಸು. 

ಸ –  ನಾನೊಂದು ದೊಡ್ಡಶಿಲ್ಪವನ್ನು ತೋರಿಸಿದರೆ? 

ಶಿ –  ಅಷ್ಟು ದೊಡ್ಡ ಶಿಲ್ಪವೆಲ್ಲಿದೆ? ತೋರಿಸು ನೋಡೋ. 

ಸ –  ಬನ್ನಿ (ನಿಷ್ಕ್ರಮಿಸುವರು – ರಂಗ ಬದಲಾಯಿಸುವುದು) (ಪುನಃ ಇನ್ನೊಂದು ಕಡೆಯಿಂದ ಪ್ರವೇಶಿಸುವರು).

ಸ – ಇಲ್ಲಿದೆ ನೋಡಿ (ಎಂದು ಕೆಳಗೆ ತೋರಿಸುವಳು) ಇದು ನಿಮ್ಮ ಶಿಲ್ಪವೇ ತಾನೇ? 

ಶಿ – ಹೌದು. ನೀನು ಯಾವಾಗ ನೋಡಿದೆ? ಈಗ ತಾನೇ ನಾನು ಅದನ್ನು ಕೆತ್ತಿ ನಿನಗೆ ತೋರಿಸಬೇಕು ಅಂತಲೇ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು.

ಸ – ಇದು ಒಬ್ಬರ ಪಾದ. ಇದು ಹೆಂಗಸರ ಪಾದವೇ ಆಗಿರಬೇಕು.

ಶಿ – ಹೌದು. ಸೀತಾದೇವಿಯ ಪಾದ.                                    

ಸ – ಹಾಗಾದರೆ ಇನ್ನೊಂದು ಪಾದವೆಲ್ಲಿ? 

ಶಿ –  ಘನಗಿರಿಯ ಬೆಟ್ಟದ ಮೇಲಿದೆ. 

ಸ –  ಆಶ್ವರ್ಯ. ಆಗಲಿ, ಇಲ್ಲಿ ಒಂದೇ ಪಾದವಿದೆ ಅಂತ ಇಟ್ಟುಕೊಳ್ಳೋಣ. ಹೆಂಗಸರ ಪಾದ ಇಷ್ಟು ದೊಡ್ಡದಾಗಿರುತ್ತೇನು ರೀ? ಇದು ಅಸ್ವಾಭಾವಿಕವಲ್ಲವೇನ್ರೀ? 

ಶಿ –  ದೊಡ್ಡದಾಗೇನಿಲ್ಲವಲ್ಲಾ. 

ಸ –  (ನಗುತ್ತಾ) ದೊಡ್ಡದಾಗಿಲ್ಲವಾ. ನಿಮಗೆ ಕಣ್ಣಿನ ದೋಷ ಬಂದಿದೆಯೋ ಅಥವಾ ಬುದ್ಧಿಭ್ರಮಣೆ ಆಗಿದೆಯೋ? 

ಶಿ –  ಏನು? ನಿಜವಾಗಿಯೂ ದೊಡ್ಡದಾಗಿದೆಯೇ? ಎಲ್ಲಿ ನಿನ್ನ ಪಾದ? ಇದರ ಪಕ್ಕದಲ್ಲಿಡು ನೋಡೋಣ. 

ಸ – ನೋಡಿ (ಎಂದು ಪಾದವನ್ನಿಡುವಳು) (ಶಿಲ್ಪಿಬ್ರಹ್ಮ ಅಳತೆ ಮಾಡಲು ಕೈಯಿಂದ ಪಾದವನ್ನು ಮುಟ್ಟುವನು) 

ಸ – (ಪಾದ ಹಿಂತೆಗೆದು – ಶಿಲ್ಪಿಬ್ರಹ್ಮನ ಮೈಯನ್ನು ಕೈಯಿಂದ ತಾಕಿ ಕಣ್ಣುಗಳಿಗೆ ಒತ್ತಿಕೊಂಡು) – ಏನ್ರಿ ಇದು? ನನಗೆ ಮೊದಲು ಗೊತ್ತಾಗಲಿಲ್ಲ. 

ಶಿ – ನಾನು ನಿನ್ನ ಪಾದವನ್ನು ಮುಟ್ಟುವುದರಲ್ಲಿ ತಪ್ಪೇನಿದೆ? ಸರಸ್ವತಿಯ ಪಾದವನ್ನು ಬ್ರಹ್ಮನು ಮುಟ್ಟಬಾರದೇ. 

ಸ – ನೀವು ಭಾವಲೋಕದಲ್ಲಿ ವಿಹರಿಸುತ್ತಾ ಇದ್ದೀರಿ. ನಾನು ನಿಮ್ಮ ಗೃಹಿಣಿ ನೀವು ಪಾದ ಮುಟ್ಟಿದರೆ ನನಗೆ ದೊಡ್ಡ ಪಾಪ ಸುತ್ತಿಕೊಳ್ಳುತ್ತೆ. 

ಶಿ –  ಹಾಗಾದರೆ ಸೀತಾದೇವಿಯ ಪಾದ ದೊಡ್ಡದಲ್ಲ ಅಂತ ಒಪ್ಪಿಕೋ. 

ಸ –  ನಾನೇಕೆ ಒಪ್ಪಿಕೊಂತೀನಿ. ನೀವು ಬೇರೇ ರೀತಿಯಲ್ಲಿ ಒಪ್ಪಿಸಿ ನೋಡೋಣ. 

ಶಿ – ಒಪ್ಪಿಸುತ್ತೇನೆ. ಸ್ವಲ್ಪ ಹೊತ್ತಾದ ಮೇಲೆ. 

ಸ –  ಅದನ್ನಲ್ಲಿಗೆ ಬಿಡೋಣ. ನೀವು ನನ್ನನ್ನಿಲ್ಲಿಗೆ ಯಾತಕ್ಕೆ ಕರೆತಂದದ್ದು ಹೇಳಿ. 

ಶಿ – ಸರಸ್ವತೀ, ಮದುವೆ ಆದ ಮೇಲೆ ನಿನ್ನಲ್ಲಿ ತಲೆದೋರಿರುವ ನಾಚಿಕೆ ನನ್ನಿಂದ ಈ ಪಾದವನ್ನು ಕೆತ್ತಿಸಿತು. 

ಸ – ನೀವು ವಿವರಿಸಿದರೆ ಮಾತ್ರ ತಿಳಿಯುತ್ತೆ. ಇದರಲ್ಲಿ ಅಡಗಿರುವ ಭಾವ.

ಶಿ – ಇಲ್ಲಿರುವ ಮಂಟಪ ಯಾವುದು?

ಸ – ಉಯ್ಯಾಲೆ ಮಂಟಪ.                                     

ಶಿ –  ಇದು ಎಷ್ಟು ಎತ್ತರವಾಗಿದೆ ನೋಡು? 

ಸ –  ಬಹಳ ಎತ್ತರವಾಗಿದೆ. ಉಯ್ಯಾಲೆಯ ಮಂಟಪವಾದ್ದರಿಂದಲೂ, ಉಯ್ಯಾಲೆ ಆಡುವ ದೇವರು ಬಹಳ ದೊಡ್ಡವರಾಗಿರುವುದರಿಂದಲೂ ಅವರ ಆನಂದ ಆಕಾಶವನ್ನು ಮುಟ್ಟುವಂತಹದಾಗಿರುವುದರಿಂದಲೂ ಇದರ ಎತ್ತರ ಇದಕ್ಕೆ ಶೋಭೆಯನ್ನು ತಂದಿದೆ. 

ಶಿ – ಈ ಮಂಟಪದ ಉಯ್ಯಾಲೆಯಲ್ಲಿ ಶ್ರೀರಾಮಚಂದ್ರನೂ ಸೀತಾ ದೇವಿಯೂ ತೂಗುತ್ತಿದ್ದಾರೆಂದು ಊಹಿಸಿಕೋ. 

ಸ – ಊಹಿಸಿಕೊಂಡೆ. ಎಷ್ಟು ಸುಂದರವಾಗಿದೆ ಈ ಭಾವ. 

ಶಿ – ಅವರು ಹೊಸದಾಗಿ  ಮದುವೆ ಆಗಿರುವವರೆಂದೂ ಊಹಿಸಿಕೋ. 

ಸ –  ಊಹಿಸಿಕೊಂಡೆ. ಭಾವ ಇನ್ನೂ ರಮ್ಯ. 

ಶಿ – ಶ್ರೀರಾಮಚಂದ್ರನು ಸೀತಾದೇವಿಯೊಡನೆ ಸರಸ ಸಲ್ಲಾಪ ಮಾಡುತ್ತಿದ್ದಾನೆಂದೂ ಊಹಿಸಿಕೋ. 

ಸ –  ಅದು ಹಾಗೆ ಇರಲೇ ಬೇಕಲ್ಲಾ ನವ ದಂಪತಿಗಳು. 

ಶಿ – ಆಗ ಶ್ರೀರಾಮಚಂದ್ರನು ಸೀತಾದೇವಿಯನ್ನು ತನ್ನಕಡೆ ನೋಡುವಂತೆ ಮಾಡಿ ಕೈಯಿಂದ ಆಕೆಯ ಗಲ್ಲವನ್ನು ತಟ್ಟುತ್ತಾನೆಂದೂಹಿಸಿಕೋ. 

ಸ –  ನಿಮ್ಮ ಕನಸು ಹಾಗೇ ಇರಬೇಕೆಂದು ನಾನು ಮೊದಲೇ ಊಹಿಸಿಕೊಂಡೆ. ನಾನಿನ್ನು ಹೊರಟು ಹೋಗುತ್ತೇನೆ. 

ಶಿ – ಸ್ವಲ್ಪ ಪೂರ್ತಿ ವಿವರಿಸುವವರೆಗೂ ಇರು. ಆಗ ಸೀತಾದೇವಿ ನಾಚಿಕೆಯಿಂದ ಉಯ್ಯಾಲೆಯಿಂದ ಧುಮುಕಿ ಒಂದೇ ಹೆಜ್ಜೆಯಲ್ಲಿ ಘನಗಿರಿಯ ಬೆಟ್ಟಕ್ಕೆ ಹಾರಿ ಅಲ್ಲಿನ ಗಿಡಗಳ ಹಿಂದೆ ಬಚ್ಚಿಟ್ಟುಕೊಂಡಳಂತೆ. ಅದಕ್ಕೇ ಒಂದು ಪಾದ ಇಲ್ಲಿ. ಇನ್ನೊಂದು ಪಾದ ನಿಮ್ಮ ತೌರೂರಾದ ಘನಗಿರಿಯ ಬೆಟ್ಟದ ಮೇಲೆ ಬಿದ್ದಿರುವುದು. 

ಸ –  ಅದ್ಭುತವಾದ ಕಲ್ಪನೆ. ನನಗೂ ನಾಚಿಕೆ ಆಗುತ್ತೆ. ನಾನು ಅಡಿಗೆ ಮನೆಗೆ ಹೋಗುತ್ತೇನೆ. (ಎಂದು ಓಡಿ ಹೋಗುವಳು) 

ಶಿ – ಹೌದು. ಇಲ್ಲಿ ಒಂದು ಪಾದ. ಮತ್ತೊಂದು ಅಡಿಗೆ ಮನೆಯಲ್ಲಿ. 

ಸ – ಊ. 

                               ಅಂಕ – 3 ದೃಶ್ಯ 1

(ಘನಗಿರಿಯಲ್ಲಿ ಅಂತಃಪುರ ಕಮಲಮ್ಮ ಜಯಮ್ಮ ಕೆಲಸ ಮಾಡುತ್ತ) 

ಜಯಮ್ಮ – ವೀರಣ್ಣ ಪ್ರಭುಗಳೂ, ಭದ್ರಮ್ಮನವರೂ, ಸರಸ್ವತಮ್ಮನವರ ಮದುವೆಗೆ ಲೇಪಾಕ್ಷಿಗೆ ಹೋದವರು ಪುನಃ ಇಲ್ಲಿಗೆ ಬರಲೇ ಇಲ್ಲವಲ್ಲಮ್ಮಾ. 

ಕಮಲಮ್ಮ-       ಇನ್ನೇಕೆ ಬರುತ್ತಾರಮ್ಮ. ಹೊಸ ಸಾಮ್ರಾಟರಾದ ಸದಾಶಿವರಾಯರು ಅವರನ್ನು ಮಂಡಲಾಧಿಪತ್ಯದಿಂದ ತೆಗೆದು ಹಾಕಿದ್ದಾರೆಂದು ಅವರಿಗೆ ಲೇಪಾಕ್ಷಿಯಲ್ಲಿಯೇ ಗೊತ್ತಾಯಿತು. 

ಜಯಮ್ಮ – ಈಗ ನಮ್ಮ ಮಂಡಲೇಶರಾಗಿ ರುದ್ರೇಶ್ವರ ಪ್ರಭುಗಳು ಬಂದಿದ್ದಾರೆ. ವಿರುಪಣ್ಣನವರ ಕಾಲದಲ್ಲೂ, ವೀರಣ್ಣನವರ ಕಾಲದಲ್ಲೂ ನಾವು ಸಂತೋಷವಾಗಿ ಕಾಲಕಳೆದೆವು. ಇವರ ಕಾಲ ಹೇಗಿರುತ್ತೋ.

ಕಮಲಮ್ಮ –      ಅಗೋ ಪ್ರಭುಗಳು ಇಲ್ಲಿಗೇ ಬರುತ್ತಿದ್ದಾರೆ. (ಇಬ್ಬರೂ ಎದ್ದು ನಿಂತುಕೊಳ್ಳುವರು. ರುದ್ರಣ್ಣ ಬಂದು ಆಸನದ ಮೇಲೆ ಕುಳಿತುಕೊಳ್ಳುವನು. ಜಯಮ್ಮನೂ ಕಮಲಮ್ಮನೂ ಚಾಮರಗಳಿಂದ ಆತನಿಗೆ ಬೀಸುತ್ತಿರುವರು). 

ವಿಷಕಂಠಶಾಸ್ತ್ರಿ – (ನೇಪಥ್ಯದಿಂದ) ರುದ್ರೇಶ್ವರ ಪ್ರಭುಗಳಿಗೆ ಜಯವಾಗಲಿ. ರುದ್ರೇಶ್ವರ ಪ್ರಭುಗಳಿಗೆ ಜಯವಾಗಲಿ (ಓಡಿಬಂದು ನಿಲ್ಲುವನು). ಪ್ರಭುಗಳೇ, ತಾವು ಕೊಟ್ಟ ಮಾತನ್ನು ಮರೆಯಬೇಡಿ. ಕೊಟ್ಟ ಮಾತನ್ನು ಮರೆಯಬೇಡಿ ಪ್ರಭುಗಳೇ. 

ರುದ್ರಣ್ಣ –   ಏನಯ್ಯಾ ಇದು ನಿನ್ನ ಅವಾಂತರ. ಈ ಘನಗಿರಿಗೆ ಮಂಡಲಾಧಿಪತಿಗಳಾದ ಮೇಲೆ ನಮ್ಮ ತಲೆಯಲ್ಲಿ ಎಷ್ಟು ವಿಷಯಗಳು ಸುಳಿದಾಡುತ್ತಿವೆಯೆಂದು ನಿನಗೇನಯ್ಯಾ ಗೊತ್ತು? ನಮ್ಮ ಆಲೋಚನೆಗೆ ಭಂಗ ಮಾಡಬೇಡ. ಆ ಮೇಲೆ ಬಾರಯ್ಯ.

ವಿ.ಶಾ – ಪ್ರಭುಗಳೇ ಹೀಗೆಂದರೆ ನನ್ನ ಗತಿ ಏನು? ತಾವು ಹಿಂದೆ ಕೊಟ್ಟ ಮಾತನ್ನು ನೆರವೇರಿಸುತ್ತೇನೆ ಎಂದು ಒಂದು ಸಲ ಹೇಳಿಬಿಡಿ ಸಾಕು. ನಿಧಾನವಾಗಿ ಬರುತ್ತೇನೆ. 

ರು –        ದಾಸೀ (ದಾಸಿ ಪ್ರವೇಶಿಸುವಳು) 

ರು – ಇವನನ್ನು ಈ ಸಮಯದಲ್ಲಿ ನೀನೇಕೆ ಇಲ್ಲಿಗೆ ಬಿಟ್ಟೆ? 

ದಾಸಿ – ರಾಣಿಯವರ ಅಪ್ಪಣೆಯಂತೆ ಬಿಟ್ಟೆ ಪ್ರಭುಗಳೇ. 

ರು –        ಇಲ್ಲಿ ನಡೆಯಬೇಕಾದ್ದು ನನ್ನ ಆಜ್ಞೆ. ರಾಣಿಯ ಆಜ್ಞೆ ಅಲ್ಲ. ಇನ್ನು ಮೇಲೆ ರಾಣಿವಾಸಕ್ಕೆ ಯಾರಾದರೂ ಹೋಗಬೇಕಾದರೂ ನನ್ನ ಅಪ್ಪಣೆ ಪಡೆಯಬೇಕು. 

ವಿ.ಶಾ –    ಅಯ್ಯೋ, ಅಯ್ಯೋ, ಪ್ರಭುಗಳೇ. ಗೌರಾಂಬಿಕ ಮಹಾರಾಣಿಯವರು ಬಹಳ ಒಳ್ಳೆಯವರು. ನನ್ನ ಮೇಲಿನ ಕೋಪಕ್ಕೆ ಅವರ ಮೇಲೆ ನಿರ್ಬಂಧ ವಿಧಿಸಬೇಡಿ ಪ್ರಭುಗಳೇ. 

ರು –        ನಾನು ಎಲ್ಲರ ಮೇಲೂ ನಿರ್ಬಂಧ ವಿಧಿಸುತ್ತೇನೆ. ಇಲ್ಲಿ ನನ್ನ ಆಜ್ಞೆ ಒಂದೇ ನಡೆಯಬೇಕು. ಎಲ್ಲೆಲ್ಲಿ ಏನೇನು ನಡೆಯತ್ತಿರುವುದೋ ಎಲ್ಲಾ ನನಗೆ ಗೊತ್ತಾಗುತ್ತಲೇ ಇರಬೇಕು. 

ವಿ.ಶಾ –    ಪ್ರಭುಗಳು ರಾಜನೀತಿ ಪಾರಂಗತರು. 

ರು –        ಶಾಸ್ತ್ರೀ, ನೀನು ಕೋರುತ್ತಿರುವುದು ದೊಡ್ಡ ಹುದ್ದೆಯನ್ನಲ್ಲವೇ. 

ವಿ.ಶಾ –    ಹೌದು. ಹೌದು. ಪ್ರಭುಗಳು ಬಹಳ ಉದಾರಿಗಳು. ತಾವು ಹಿಂದೆ ಮಾತು ಕೊಟ್ಟಿದ್ದನ್ನು ದಯವಿಟ್ಟು ನೆನೆಪಿಸಿಕೊಳ್ಳಬೇಕು. 

ರು –        ದೊಡ್ಡ ಹುದ್ದೆಯಲ್ಲಿರುವುದಕ್ಕೆ ನಿನಗೆ ಏನು ಯೋಗ್ಯತೆ ಇದೆ? 

ವಿ – ಮುಖ್ಯದಾದ ಯೋಗ್ಯತೆ ತಾವು ಎಂತಹ ನೀಚವಾದ ಕೆಲಸವನ್ನು ಹೇಳಿದರೂ ಮಾಡುವುದಕ್ಕೆ ಸಿದ್ಧನಾಗಿರುವುದು. 

ರು –        ಭೇಷ್, ಪಾಪವಾದ ಕೆಲಸವನ್ನು ಹೇಳಿದರೆ? 

ವಿ.ಶಾ –    ಅದನ್ನು ಮಾಡುವುದಕ್ಕೂ ನಾನು ತಮ್ಮ ದಾಸಾನುದಾಸನಾಗಿದ್ದೇನೆ. ಪ್ರಭುಗಳು ಯಾವ ಆಜ್ಞೆ ಮಾಡಿದರೆ ಅದೇ ಧರ್ಮ. ಅದನ್ನು ಸರಿಪಡಿಸುವುದರಲ್ಲಿ ಪಾಪವೆಲ್ಲಿದೆ. ಪ್ರಭುಗಳು ಸಾಕ್ಷಾತ್ ವಿಷ್ಣುವಿನ ಅಂಶದವರು. ವಿಷ್ಣು ಅಲ್ಲ,ಶಿವನ ಅಂಶದವರು. ಅಲ್ಲ, ಅಲ್ಲ. ಹೌದು ಹೌದು. “ನಾವಿಷ್ಣುಃ ಪೃಥಿವೀ ಪತಿಃ” ಅಂದರೆ ಅಲ್ಲಿ ವಿಷ್ಣು ಶಬ್ದಕ್ಕೆ ‘ಶಿವ’ ಎಂದೇ ಅರ್ಥ ಹೇಳಬೇಕು.                       

ರು –        ದಾಸೀ. ಆಪ್ತಮಂತ್ರಿಗಳನ್ನು ಕರೆದುಕೊಂಡು ಬಾ. (ದಾಸಿ ಹೊರಡುವಳು. ರುದ್ರಣ್ಣ ಪಕ್ಕದಲ್ಲಿರುವ ಕಮಲಮ್ಮನನ್ನು ನೋಡುವನು. ಅವಳು ಗಾಬರಿಯಿಂದ ಬೀಸುವುದನ್ನು ನಿಲ್ಲಿಸುವಳು) 

ರು –        ಏಕೆ ನಿಲ್ಲಿಸಿದೆ ಬೀಸುವುದನ್ನು? 

ಕಮ –      ತಿಳಿಯಲಿಲ್ಲ ಪ್ರಭುಗಳೇ, ಬೀಸುತ್ತೇನೆ. (ಎಂದು ಜೋರಾಗಿ ಬೀಸುವಳು) 

ರು –        ಯಾಕೆ ಅಷ್ಟು ಜೋರಾಗಿ ಬೀಸುತ್ತಿದ್ದೀಯೆ? 

ಕಮ –      ಗೊತ್ತಿಲ್ಲ ಪ್ರಭುಗಳೇ ನಿಧಾನವಾಗಿ ಬೀಸುತ್ತೇನೆ. (ಎಂದು ನಿಧಾನವಾಗಿ ಬೀಸುವಳು) 

ರು – ಅಷ್ಟು ನಿಧಾನವಾಗಿ ಏಕೆ ಬೀಸುತ್ತೀ? 

ಕಮ –     ಗೊತ್ತಾಗಲಿಲ್ಲ. ಕ್ಷಮಿಸಿ ಪ್ರಭುಗಳೇ. 

ಜಯಮ್ಮ –       ಅವಳು ಸ್ವಲ್ಪ ಗಾಬರಿ ಸ್ವಭಾವದವಳು ಪ್ರಭುಗಳೇ. 

ವಿ.ಶಾ –    ನಿನ್ನನ್ನು ಪ್ರಭುಗಳೇನಾದರೂ ಮಾತಾಡಿಸಿದರೇ? 

ಆ – ಇಲ್ಲ. ಪ್ರಭುಗಳಿಗೆ ಕಮಲಮ್ಮನ ಸ್ವಭಾವ ತಿಳಿದಿದ್ದರೆ ಒಳ್ಳೆಯದು ಅಂತ ಹೇಳಿದೆ 

ವಿ.ಶಾ –    ಮಾತುಗಾತಿ ಅವಳು ಗಾಬರಿ. ಇವಳು ಮಾತುಗಾತಿ ಪ್ರಭುಗಳೇ, ಇವರಿಬ್ಬರನ್ನು ಕೆಲಸದಿಂದ ತೆಗೆದು ಹಾಕಿ. ನಾನು ಒಳ್ಳೆಯ, ಚಿಕ್ಕವಯಸ್ಸಿನಲ್ಲಿರುವ ಅಂದವಾಗಿರುವ ಹುಡುಗಿಯರನ್ನು ನೇಮಕ ಮಾಡಿಕೊಡುತ್ತೇನೆ. (ಕಿವಿಯ ಹತ್ತಿರ ಹೋಗಿ ಏನೋ ಹೇಳುವನು) 

ರು –        ಪರವಾಗಿಲ್ಲ ಶಾಸ್ತ್ರೀ. ನಾನೇನೋ ಅಂದುಕೊಂಡಿದ್ದೆ. ಪರವಾ ಇಲ್ಲ ನೀನು. ಮಂತ್ರಿ ಪದವಿಗೂ ಪರವಾ ಇಲ್ಲ.

( ಆಪ್ತ ಮಂತ್ರಿ ಪ್ರವೇಶಿಸುವನು)

ಮಂತ್ರಿ – ಪ್ರಭುಗಳಿಗೆ ಜಯವಾಗಲಿ.

ರು – ಮಂತ್ರೀ, ಈಗ ನಿನ್ನ ತಲೆಯಲ್ಲಿ ಏನು ಆಲೋಚನೆ ಇದೆ. ಮರೆಮಾಚದೆ ಹೇಳು.

ಮಂತ್ರಿ –   ತಮ್ಮ ಎದುರಿಗೆ ಮರೆಮಾಚುತ್ತೇನೆಯೇ ಪ್ರಭುಗಳೇ? ವಿರುಪಣ್ಣ ಪ್ರಭುಗಳು ದೇವಾಲಯವನ್ನು ನೋಡಬೇಕೆಂದು ತಮಗೆ ಆಹ್ವಾನವನ್ನು ಕೊಟ್ಟಿದ್ದನ್ನು ನಾನು ತಮಗೆ ಮೊದಲೇ ತಿಳಿಸಿದ್ದೆನಲ್ಲಾ. ತಾವು ಯಾವಾಗ ದೇವಾಲಯ ದರ್ಶನಕ್ಕೆ ಹೋಗಲಿರುವುದೂ ತಮ್ಮನ್ನು ಕೇಳಿ ತಿಳಿದುಕೊಳ್ಳಬೇಕೆಂದಿದ್ದೆ. 

ರು –        (ಹಲ್ಲು ಕಚ್ಚುತ್ತ) ವಿರುಪಣ್ಣ ಪ್ರಭುಗಳು – ನನ್ನ ಎದುರಿಗೆ ಈ ಮಾತು. ದೇವಾಲಯ – ನನಗೇನು ಬೇಕಾಗಿದೆ ದೇವಾಲಯವನ್ನು ಕಟ್ಟಿಕೊಂಡು? ಆವತ್ತೇ ನನ್ನ ಇಂಗಿತವನ್ನು ನೀನು ಗಮನಿಸಲಿಲ್ಲವೇ? 

ಮಂ –      ಗಮನಿಸಿದೆ ಪ್ರಭೂ. ಆದರೆ ತಾವು ಮಂಡಲಾಧಿಪತಿಗಳಾದ ಮೇಲೆ ಅವರ ಮೇಲೆ ದ್ವೇಷ ಬಿಟ್ಟಿದ್ದೀರೆಂದು ತಮ್ಮ ಮಾತುಗಳಿಂದಲೇ ತಿಳಿದಿದ್ದರಿಂದ ನನಗೆ ಆ ರೀತಿಯ ಆಲೋಚನೆ ಬಂತು. ಪೌರರ ಸಭೆಯಲ್ಲಿ ತಾವೇ ಹೇಳಲಿಲ್ಲವೇ “ನಾವು ವಿರುಪಣ್ಣ ಪ್ರಭುಗಳ ವಂಶಕ್ಕೆ ಸೇರಿದವರು. ನಾವು ಅವರಂತೆಯೇ ನಿಮಗೆ ಪ್ರೀತಿಯನ್ನುಂಟು ಮಾಡುವಂತೆ ಪರಿಪಾಲನೆ ಮಾಡುತ್ತೇವೆ” ಎಂದು?

ರು –        ಮಂತ್ರೀ, ನಿನಗೆ ರಾಜತಂತ್ರಗಳ ಅರಿವೇ ಇಲ್ಲದಂತಿದೆಯಲ್ಲಾ. ನನ್ನ ಈ ಚಾಣಕ್ಯತನವನ್ನೂ ತಿಳಿಯಲಾರದೆ ಇರುವ ನೀನು ನಮ್ಮ ಆಪ್ತ ಮಂತ್ರಿಯಾಗಿರಲು ಸರ್ವಥಾ ಯೋಗ್ಯನಲ್ಲ. 

ಮಂತ್ರಿ –   ನನ್ನಲ್ಲಿನ ಯೋಗ್ಯತೆಯನ್ನು ವಿರುಪಣ್ಣ ಪ್ರಭುಗಳೂ, ವೀರಣ್ಣ ಪ್ರಭುಗಳೂ ಬಹಳ ಮೆಚ್ಚಿಕೊಂಡಿದ್ದಾರೆ ಪ್ರಭುಗಳೇ. ಅವರಿಗೂ ತಮಗೂ ಮಧ್ಯೇ ಇರುವ ದ್ವೇಷದಿಂದ ನನಗೇನು ಬೇಕು? ರಾಜ್ಯದ ಕ್ಷೇಮಕ್ಕಾಗಿ ನಾನು ಎಷ್ಟೋ ದುಡಿದಿದ್ದೇನೆ ತಮ್ಮ ಕೈ ಕೆಳಗೂ ದುಡಿಯಲು ಸಿದ್ಧನಾಗಿದ್ದೇನೆ. 

ರು –        ಶಾಸ್ತ್ರೀ, ಈ ಮಾತಿಗೆ ನೀನೇನು ಹೇಳುತ್ತೀಯೇ? 

ವಿ.ಶಾ – ಈತನನ್ನು ವಿರುಪಣ್ಣಾ, ವೀರಣ್ಣ ಮೆಚ್ಚಿಕೊಂಡಿದ್ದಾರೆ ಅನ್ನುವುದೇ ತಮಗೆ ಮಂತ್ರಿಯಾಗಿರಲು ಈತನು ಸರ್ವಥಾ ಅಯೋಗ್ಯನೆಂಬುದನ್ನು ಸೂಚಿಸುತ್ತೆ.

ರು –        ಭೇಷ್ – ಹಾಗೆ ಸೂಟಿಯಾಗಿ ನೋಡಬೇಕು ನನ್ನ ಮಂತ್ರಿ ಅಂದರೆ. ಮಂತ್ರೀ, ನಿನ್ನನ್ನು ಕೆಲಸದಿಂದ ವಿರಾಮಗೊಳಿಸಿದ್ದೇವೆ. ನಿನ್ನ ಅಧಿಕಾರವನ್ನು ಶಾಸ್ತ್ರಿಗೆ ಕೊಡು. 

ಮಂ –      ಅಪ್ಪಣೆ. ನನಗೆ ವಿಶ್ರಾಂತಿ ವೇತನವನ್ನು ಪ್ರಭುಗಳು ದಯೆಪಾಲಿಸಬೇಕು. 

ರು – ದಯಪಾಲಿಸಿದ್ದೇನೆ. ಆದರೆ ತಾತ್ಕಾಲಿಕವಾಗಿ. ನೀನು ನಮಗೆ ವಿರೋಧವಾಗಿ ಏನಾದರೂ ಪ್ರವರ್ತಿಸುತ್ತಿದ್ದೀಯೆಂದು ಗೊತ್ತಾದರೆ ನಿಲ್ಲಿಸಿಬಿಡುತ್ತೇನೆ. ಹುಷಾರ್ ಹೊರಡು. 

ಮಂ –      ಅಪ್ಪಣೆ. (ಎಂದು ಹೊರಡುವನು) 

ವಿ. ಶಾ –   ಪ್ರಭುಗಳು ನನ್ನನ್ನು ಆಪ್ತಮಂತ್ರಿಯನ್ನಾಗಿ ಮಾಡಿದರು ಪ್ರಭುಗಳಿಗೆ ಜಯವಾಗಲಿ. ಜಯವಾಗಲಿ (ಹೊರಡುವನು) 

                                 ದೃಶ್ಯ – 2

(ರಾಮಪುರದಲ್ಲಿ ಚಾವಡಿ-ಪಂಚಾಯಿತಿ) ನಾಗಣ್ಣನನ್ನು ಕಂಬಕ್ಕೆ ಕಟ್ಟಿಹಾಕಿರುವರು. 

ಬಸಿರೆಡ್ಡಿ –  ರಾಮೇಶ್ವರ ಶರ್ಮಾ, ಓಬಳೇಶ, ಕೃಷ್ಣಶೆಟ್ಟಿ, ಕರೀಂ ಖಾನೂ, ಎಲ್ಲಾ ಬಂದಿದ್ದೀರೇನಪ್ಪಾ. 

ಎಲ್ಲರೂ – ಬಂದಿದ್ದೇವೆ. 

ಬಸಿರೆಡ್ಡಿ  –        ಅವನನ್ನು ಬಿಡಿಸಿ ಕೊಂಡು ಬಂದು ಪಂಚಾಯಿತಿದಾರರ ಮುಂದೆ ನಿಲ್ಲಿಸು. 

       (ಆಳು ಹೋಗಿ ನಾಗಣ್ಣನನ್ನು ಕಂಬದಿಂದ ಬಿಡಿಸಿ ಹಿಡಿದುಕೊಂಡು ಬರುವನು. ನಾಗಣ್ಣ ಕೈಕಟ್ಟಿಕೊಂಡು ನಿಂತುಕೊಳ್ಳುವನು) 

ಬಸಿರೆಡ್ಡಿ – ನಾಗಣ್ಣಾ. ನಿನಗೆ ಈ ರಾಮಪುರದ ಹತ್ತು ಜನರ ಸಹಕಾರ ಹೆಚ್ಚೋ? ರುದ್ರೇಶ ಕಳಿಸಿದ ನೂರು ವರಹ ಹೆಚ್ಚೋ. 

ನಾಗಣ್ಣ – ತಪ್ಪಾಯಿತು ಸ್ವಾಮೀ. ಬುದ್ಧಿಯಿಲ್ಲದೆ ಹುಲ್ಲು ತಿಂದೆ.

ರಾಮೇಶ್ವರ ಶರ್ಮ – ನಿನಗೆಷ್ಟೋ ವಯಸ್ಸು?

ನಾಗ – ಇಪ್ಪತ್ತೈದು ವರ್ಷ ಸ್ವಾಮಿ.

ಓಬಳೇಶ –       ಹೆಂಡ್ತೀ ಮಕ್ಕಳಿದ್ದಾರೇನು? 

ನಾಗ –     ಮದುವೆ ಆಗಿ ಎರಡು ವರ್ಷ ಮಾತ್ರ ಆಗಿದೆ ಸ್ವಾಮೀ. ಒಂದೇ ಗಂಡುಮಗು. 

ಕೃಷ್ಣಶೆಟ್ಟಿ –       ನೂರು ವರಹ ನೀನು ತಕೊಂಡೆಯಲ್ಲಾ ರುದ್ರಣ್ಣನ ಗೂಢಚಾರನಿಂದ. ಅದನ್ನೇನು ಮಾಡಿದೆಯೋ? 

ನಾಗ –     ನೆಲದಲ್ಲಿ ಬಚ್ಚಿಟ್ಟುಬಿಡೋಣ. ಯಾರಿಗೂ ತಿಳಿಯದ ಹಾಗೆ ಅಂತ ಅಗೀತಾ ಇದ್ದೆ ಸ್ವಾಮಿ. ಈ ಕರೀಂಖಾನ್ ಅವರು ಅದನ್ನೇ ನೋಡ್ತಾ ಇದ್ದರು. ಅವರಿಗೆ ಗುಮಾನಿ ಆಗಿ ಗಕ್ ಅಂತ ಹಿಡಿದು ಬಿಟ್ಟರು ಸ್ವಾಮೀ. 

ಕರೀಂಖಾನ್- ಇದೇ ನೋಡಿ ಹಣದ ಚೀಲ. ಇದರಲ್ಲಿ ನೂರು ವರಹಗಳಿವೆ. ಎಣಿಸಿಕೊಳ್ಳಿ. (ಎಂದು ಪಂಚಾಯತಿದಾರರ ಮುಂದೆ ಇಡುವನು) ಈ ಊರಿನಲ್ಲಿ ಯಾರು ಸರ್ಕಾರ ನಡಿಸ್ತಾ ಇರೋದು ಅಂತ ತಿಳಿಕೊಂಡೆ? ರುದ್ರೇಶನ್‍ಕಾ ಹುಕುಂ ಇಲ್ಲಿ ನಡೀತದೇನೋ. ನಿನಗೂ ಜಮೀನ್ ಇದೆಯಲ್ಲಾ. ಕಂದಾಯ ರುದ್ರೇಶನ್‍ಕಾ ಅಧಿಕಾರಿ ಬಂದರೆ ಕೊಡ್ತೀಯೇನೋ? 

ನಾಗ –     ಇಲ್ಲ. ತಾವು ಮಾಡಿರೋ ಕಟ್ಟಗೆ ವಳಪಟ್ಟಿದ್ದೇನೆ ಸ್ವಾಮೀ. 

ಬಸಿರೆಡ್ಡಿ –  ಈ ಕಟ್ಟುಮಾಡಿರೋದು ನಾವೊಬ್ಬರೇ ಅಲ್ಲ. ಇದು ಈ ಘನಗಿರಿ ಮಂಡಲದ ಎಲ್ಲಾ ಪ್ರಜೆಗಳೂ ಮಾಡಿಕೊಂಡಿರೋ ಕಟ್ಟು. ಅನ್ಯಾಯವಾಗಿ ವಿರುಪಣ್ಣ ಮತ್ತು ವೀರಣ್ಣ ಪ್ರಭುಗಳನ್ನು ತಪ್ಪಿಸಿ ಸಮ್ರಾಟರಿಗೆ ಮೋಸಮಾಡಿ

ಅಪ್ಪಣೆ ತಂದು ಮಂಡಲಾಧಿಪತಿ ಆಗಿದ್ದಾನಲ್ಲಾ ಆ ರುದ್ರೇಶ ಅವನಿಗೆ ಹೋಗಲಿ ಅಂತ ನಾವು ಕಂದಾಯಕೊಟ್ಟು ಮನ್ನಣೆ ಕೊಟ್ಟರೆ ನಮ್ಮನ್ನೇ ತಿಂದು ಹಾಕೋದಕ್ಕೆ ನೋಡಿದನಲ್ಲಾ. 

ರಾ.ಶ-     ಅವನು ಜನರನ್ನೆಲ್ಲಾ ಪೀಡಿಸಿ ಪೀಡಿಸಿ ಹಣ ದೋಚಿಕೊಂಡಿದ್ದು ಗೊತ್ತಿಲ್ಲವೇನೋ ನಿನಗೆ?

ನಾಗ – ಗೊತ್ತಿದೆ ಸ್ವಾಮೀ, ತಪ್ಪು ಮಾಡಿಬಿಟ್ಟೆ.

ಓಬಳೇಶ – ಅವನ ಆಳುಗಳಿಂದ ಕೊರಡಾ ಏಟುಗಳನ್ನು ತಿಂದಿಲ್ಲವೇನೋ ನೀನು?

ನಾಗ – ಇಲ್ಲ ಸ್ವಾಮೀ. 

ಓಬ –      ನಾನು ತಿಂದಿದ್ದೇನೆ ನೋಡು (ಎಂದು ಗುರ್ತುಗಳನ್ನು ತೋರಿಸುವನು). ಮೊನ್ನೆ ಸತ್ತುಹೋದನಲ್ಲಾ ನಿನ್ನ ತಂದೆ ಅವನೂ ತಿಂದಿರಬೇಕು.

ನಾಗ –     ಹೌದು ಸ್ವಾಮಿ. ನಮ್ಮ ತಂದೆಯವರೂ ತಿಂದಿದ್ದರು ಸ್ವಾಮೀ. 

ಕರೀಂಖಾನ್ – ಥೂ ಬೇವಾರ್ಸೀ, ನಿಮ್ಮ ತಂದೆಯನ್ನು ಕೊರಡಾದಿಂದ ಹೊಡೆದ ಕೈಯಿಂದ ಲಂಚ ತಕೋಂತೀಯೇನೋ, ನೀನು? 

ನಾಗ –     ತಪ್ಪಾಯಿತು ಸ್ವಾಮೀ – ಹಣ ನೋಡಿ ಆಸೆಪಟ್ಟೆ. ವಂಶಕ್ಕೇ ಅಪಕೀರ್ತಿತಂದೆ (ಎಂದು ಅಳುವನು) 

ಬಸಿರೆಡ್ಡಿ – ಈಗ ಬುದ್ಧೀ ಬಂದಿದೆಯೇನೋ. ಆ ದುಡ್ಡು ಪಂಚಾಯಿತಿಗೆ ಸೇರಿಸಿಕೊಂಡಿದ್ದೇನೆ. 

ನಾಗ –     ಧಾರಾಳವಾಗಿ ಸೇರಿಸಿಕೊಳ್ಳಿ ಸ್ವಾಮೀ. 

ರಾ. ಶ –   ಇವನಿಗೆ ದಂಡ ವಿಧಿಸಬೇಕು. ಯಜಮಾನರಿಗೇ ಬಿಡೋಣ ಇದನ್ನ. 

ಎಲ್ಲರೂ – ಆಗಬಹುದು. 

ಬಸಿರೆಡ್ಡಿ – ನಿಮ್ಮ ಕುಲದೇವತೆ ಯಾವುದು? 

ನಾಗ –     ದುರ್ಗಮ್ಮ 

ಬಸಿರೆಡ್ಡಿ – ವಿರುಪಣ್ಣ ಪ್ರಭುಗಳು ಕಟ್ಟಿಸಿರೋ ದೇವಾಲಯದಲ್ಲಿ ದುರ್ಗಮ್ಮನೂ ಇದ್ದಾಳೆ. ಆಯಮ್ಮನಿಗೂ ಪೂಜೆ ನಡೆಯುತ್ತೆ. ನಾಳೇನೇ ನೀನು ಶರ್ಮಾರವರ ಹತ್ತಿರ ಪ್ರಾಯಶ್ಚಿತ್ತ ಮಾಡಿಸಿಕೋ. ದುರ್ಗಮ್ಮನವರಿಗೆ ನಿನಗೆ ಕೈಲಾದಷ್ಟು ತಪ್ಪು ಕಾಣಿಕೆ ಹಾಕು. ಅದನ್ನು ಲೇಪಾಕ್ಷಿಗೆ ನಾವೆಲ್ಲಾ ಕಾಣಿಕೆ ಕಳಿಸ್ತೀವಲ್ಲಾ ಆವಾಗ ನಮ್ಮ ಕೈಗೆ ಕೊಡು. ಅದರ ಜೊತೆಗೆ ಕಳಿಸಿಬಿಡ್ತೀವಿ. ಇನ್ನು ಮೇಲೆ ಗ್ರಾಮಸ್ಥರ ಮಾತಿನಂತೆ ನಡಿ. 

ನಾಗ – ಹಾಗೇ ಮಾಡ್ತೀನಿ ಸ್ವಾಮಿ. ಹತ್ತು ವರಹ ತಪ್ಪು ಕಾಣಿಕೆ ಹಾಕ್ತೀನಿ ಸ್ವಾಮೀ.

ಬಸಿರೆಡ್ಡಿ – ಮಾತಿಗೆ ತಪ್ಪಿಗಿಪ್ಪೀಯೆ, ಹುಷಾರ್.

ನಾಗ – ದುರ್ಗಮ್ಮನ ಆಣೆ. ತಪ್ಪೋದಿಲ್ಲ ಸ್ವಾಮೀ.

ಬಸಿರೆಡ್ಡಿ – ಬಿಟ್ಟು ಬಿಡೋ ಇವನನ್ನು. (ಆಳು ಬಿಟ್ಟು ಬಿಡುವನು) ಹೋಗು. ಬುದ್ಧಿಯಿಂದಿರು. (ನಾಗಣ್ಣ ಹೋಗುವನು) ಏನು ಆಟ ಆಡ್ತಾನಪ್ಪಾ ರುದ್ರೇಶ. ನಾಡಿನ ಜನರು ಕಂದಾಯ ಕೊಡೋದಿಲ್ಲ ಅಂತ ಮಾಡಿರೋ ಕಟ್ಟಿಗೆ ಹೆದರಿಬಿಟ್ಟಿದ್ದಾನೆ. ಅದಕ್ಕೇ, ಉಪಾಯದಿಂದ ಲಂಚಕೊಟ್ಟು ಕಟ್ಟು ಮುರಿಯಬೇಕು ಅಂತ ಪ್ರಯತ್ನ ಮಾಡ್ತಾ ಇದ್ದಾನೆ. ಬಹಳ ಮಾಯಾವಿ. 

ರಾ. ಶ –   ಗೋಮುಖವ್ಯಾಘ್ರ. ಅವನ ಹತ್ತಿರ ಹಿಂದಿನ ಮಂತ್ರಿಗಳೂ ಪರಿಚಾರಕರೂ ಯಾರೂ ಇಲ್ಲ. ಎಲ್ಲಾ ನರಿಗಳೂ, ತೋಳಗಳು ಸೇರಿಕೊಂಡಿವೆ. ಮೋಸ ಮಾಡೋದಕ್ಕೆ ಹೊಂಚುತ್ತಾ ಇವೆ. ಹುಷಾರಾಗಿರಿ. ಗ್ರಾಮಸ್ಥರಿಗೆಲ್ಲಾ ಹುಷಾರು ಹೇಳಿ. ಏನೇ ಆಗಲಿ ಕಟ್ಟು ಸಡಿಲವಾಗಬಾರದು. (ಎಲ್ಲರೂ ಹೋಗುವರು) 

                                     ದೃಶ್ಯ – 3

(ಘನಗಿರಿ- ಗಗನಮಹಲಿನಲ್ಲಿ ರಾಜಾಸ್ಥಾನ – ಸದಾಶಿವರಾಯನೂ – ರುದ್ರಣ್ಣ, ಇತರ ಸಭ್ಯರೂ ಕುಳಿತಿರುವರು) 

ಸದಾ –     ಈ ಘನಗಿರಿಯ ಗಾಳಿ ಎಷ್ಟು ತಣ್ಣಗಿದೆ. ನಮ್ಮ ವಿಜಯನಗರದಲ್ಲಂತೂ ಈ ಬೇಸಿಗೆಯಲ್ಲಿ ಇರುವುದಕ್ಕೇ ಆಗುವುದಿಲ್ಲ. 

ರು –        (ಎದ್ದು ತಲೆ ಬಗ್ಗಿಸಿ ಕೈಜೋಡಿಸಿ) ಪ್ರಭುಗಳ ಉದಾರತೆ (ಪುನಃ ಕುಳಿತುಕೊಳ್ಳುವನು) 

ಸದಾ –     ರುದ್ರೇಶ್ವರರೇ, ಸಭಾಂಗಣದ ಅಲಂಕಾರ ಬಹಳ ಸುಂದರವಾಗಿದೆ. 

ರು –        (ಎದ್ದು ತಲೆ ಬಗ್ಗಿಸಿ ಕೈಜೋಡಿಸಿ) ಈ ಮಾತು ನಮಗೆ ಪ್ರಭುಗಳಿಂದ ಬಂದ ವರಪ್ರಸಾದ. ನಾವು ಕೃತಾರ್ಥರಾದೆವು. 

ಸದಾ –     (ಆಲೋಚಿಸಿ) ವಿರುಪಣ್ಣಾ, ವೀರಣ್ಣಾ, ನಮ್ಮ ಮೇಲೆ ಅಷ್ಟು ತಂತ್ರಗಳನ್ನು ಹೂಡಿದ್ದಾರೆಯೇ ಆಶ್ಚರ್ಯ. ಅಲ್ಪರಾದ ಅವರಿಬ್ಬರೂ ಅಧಿಕಾರವಿಲ್ಲದಿದ್ದರೂ ವಿಜಯನಗರದ ಸಮ್ರಾಟರನ್ನು ವಿರೋಧಿಸುವಷ್ಟು ಧೈರ್ಯಶಾಲಿಗಳಾದರೇ. 

ರು –        (ಎದ್ದು) ಪ್ರಭುಗಳೇ, ನಾನು ರಾತ್ರಿಯೇ ತಮಗೆ ಪೂರ್ಣವಾಗಿ ವಿವರಿಸಿದ್ದೇನೆ, ಅವರ ಕುತಂತ್ರಗಳನ್ನೆಲ್ಲಾ. ಹೊರಗಡೆ ಸೈನ್ಯ ಸಿದ್ಧವಾಗಿ ನಿಂತಿದೆ. ಈಗ ಹೊರಟರೆ ನಾವು ಅಪರಾಹ್ನವಾದ ಮೇಲೇನೇ ಲೇಪಾಕ್ಷಿಯನ್ನು ತಲುಪುವುದು. ಅಷ್ಟು ಹೊತ್ತಿಗೆ ಶತ್ರು ಸೈನ್ಯ ಅವರಿಗೆ ನೆರವಾಗಿ ಬಂದಿದ್ದರೆ ಯುದ್ಧ. ಇಲ್ಲದಿದ್ದರೆ ವಿರುಪಣ್ಣನನ್ನೂ, ವೀರಣ್ಣನನ್ನೂ ಬಂಧಿಸಿಕೊಂಡು ಬಂದುಬಿಡುವುದು. ನಾವು ಎಷ್ಟುಬೇಗ ಹೊರಟರೆ ಅಷ್ಟು ಒಳ್ಳೆಯದು.

ಜೋಯಿಸ- (ಕೈಬೆರಳುಗಳಿಂದ ಎಣಿಸಿ) ಇನ್ನೊಂದು ಘಳಿಗೆಯೊಳಗೆ ಪ್ರಯಾಣವಾದರೆ ಬಹಳ ಒಳ್ಳೇ ಮುಹೂರ್ತವಿದೆ. ಜಯ ಲಭಿಸುವುದು ಖಂಡಿತ. 

ರುದ್ರ –     ಎಲ್ಲಾ ಸಿದ್ಧವಾಗಿದೆ ಪ್ರಭುಗಳೇ. ಇಲ್ಲಿಂದ ಹೀಗೆಯೇ ಹೊರಡುವುದೇ. 

ಸದಾ –     ರುದ್ರೇಶ್ವರರೇ, ನಿಮ್ಮ ಏರ್ಪಾಟುಗಳೆಲ್ಲಾ ಸರಿಯಾಗಿವೆ. ಯಾವ ಲೋಪವೂ ಇಲ್ಲ. ಆದರೆ ವಿಜಯನಗರ ಸಮ್ರಾಟರ ಪದ್ಧತಿ ಒಂದು ನಿಮಗೆ ತಿಳಿದ ಹಾಗಿಲ್ಲ. 

ರು –        (ಗಾಬರಿಯಿಂದ) ಏನು ಪದ್ಧತಿ ಪ್ರಭುಗಳೇ. ಏನು ಬೇಕಾದರೂ ಕ್ಷಣದಲ್ಲಿ ಮಾಡಿಕೊಡುತ್ತೇನೆ. 

ಸದಾ –     ನಮ್ಮ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿಕೊಟ್ಟ ಗುರುಗಳು ಯಾರು ಗೊತ್ತೇ? 

ರು –        ವಿದ್ಯಾರಣ್ಯ ಸ್ವಾಮಿಗಳಲ್ಲವೇ? 

ಸದಾ –     ಆ. ಅವರು ಒಂದು ಒಳ್ಳೇ ಸಂಪ್ರದಾಯವನ್ನು ಕಲ್ಪಿಸಿದ್ದಾರೆ. ನಾವು ಅದನ್ನು ಪರಿಪಾಲಿಸಲೇ ಬೇಕು. 

ರು –        ಅದೇನು ಪ್ರಭುಗಳೇ. 

ಸದಾ –     ಮುಖ್ಯವಾದ ಯಾವ ಕಾರ್ಯವನ್ನು ಮಾಡಬೇಕಾದರೂ ನಾವು ಮೊದಲು ವಿದ್ಯಾವಂತರು ಮತ್ತು ಬಡವರಾದ ಬ್ರಾಹ್ಮಣರಿಗೆ ದಾನ ಮಾಡಿ ಅವರ ಆಶೀರ್ವಾದವನ್ನು ಪಡೆಯಬೇಕು.

ರು- (ಸದಾಶಿವರಾಯನು ನೋಡದಂತೆ ತಲೆ ಚಚ್ಚಿಕೊಳ್ಳುತ್ತಾ) ಅಗತ್ಯವಾಗಿ ಆಗಬಹುದು ಪ್ರಭುಗಳೇ. ಯೋಗ್ಯರಾದ ಬ್ರಾಹ್ಮಣರು  ಈಗಲೇ ಬರುತ್ತಾರೆ. (ಸಭೆಯಲ್ಲಿ ಕುಳಿತುಕೊಂಡಿದ್ದ ಇಬ್ಬರಿಗೆ ಕಣ್ಣುಸನ್ನೆ ಮಾಡಿದನು. ಅವರಿಬ್ಬರೂ ಹೊರಕ್ಕೆ ಹೋಗುವರು). 

                               (ನೇಪಥ್ಯದಲ್ಲಿ) 

        (ವಿಜಯನಗರ ಸಮ್ರಾಟ್ ಸದಾಶಿವರಾಯರಿಗೆ ಜಯವಾಗಲಿ) 

ಸದಾ –     ಯಾರದು? (ಚೀಣಿಯವನಂತೆ ವೇಷಧರಿಸಿದ ಒಬ್ಬನು ಬಂದು ರೇಷ್ಮೆ ಬಟ್ಟೆಗಳಿಂದ ತಯಾರು ಮಾಡಿ ಮುತ್ತುಗಳನ್ನು ಪೋಣಿಸಿರುವ ಎರಡು ವಿಚಿತ್ರ ಹಕ್ಕಿಗಳನ್ನು ಸಮ್ರಾಟರಿಗೆ ಅರ್ಪಿಸುತ್ತಾನೆ.) 

ಸದಾ – ಯಾರಯ್ಯಾ ನೀನು? ಯಾವ ದೇಶದವನು?

ಚೀಣಿಯವನು – ಚಂಗ್ ಚಲಾಂಗ್ ಟಂಗ್ ಚುಂಗ್. ಚಂಗ್ ಟಂಗ್ ಚುಂಗ್ ಚಲಾಂಗ್.

ಸಭ್ಯರಲ್ಲಿ ಒಬ್ಬನು (ಎದ್ದು) – ಪ್ರಭುಗಳೇ, ಈತ ಹಿಮವತ್ ಪರ್ವತದಿಂದಾಚೆ ಬಹು ದೂರದಲ್ಲಿರುವ ಚೀಣಾ ದೇಶದಿಂದ ಬಂದಿದ್ದಾನೆ. ಈತನು, “ಮಹಾರಾಜರಿಗೆ ಜಯವಾಗಲಿ ಜಯವಾಗಲಿ ಮಹಾರಾಜರಿಗೆ” ಎಂದು ತಮಗೆ ಹೇಳುತ್ತಿದ್ದಾನೆ. 

ಸದಾ –     ನಿಮಗೆ ಚೀಣೀ ಭಾಷೆ ಗೊತ್ತೇ? 

ಸಭ್ಯ –     ನಾನು ಅನೇಕ ದೇಶಗಳನ್ನು ಸುತ್ತಿದ್ದೇನೆ. ನನಗೆ ಎಲ್ಲಾ ಭಾಷೆಗಳೂ ಸ್ವಲ್ಪ ಸ್ವಲ್ಪ ತಿಳಿಯುತ್ತವೆ. 

ಸದಾ –     (ಬಹುಮತಿಯನ್ನು ನೋಡಿ ಮೆಚ್ಚಿಕೊಂಡು) ಈತನು ಏಕೆ ಬಂದಿದ್ದಾನೆ? 

ಸಭ್ಯ –     ತಮ್ಮ ಕೀರ್ತಿ ಚೀಣಾ ದೇಶದವರೆಗೂ ವ್ಯಾಪಿಸಿರುವುದರಿಂದ ತಮ್ಮ ದರ್ಶನ ಮಾಡಿಕೊಂಡು ಧನ್ಯನಾಗಬೇಕೆಂದು ಬಂದಿದ್ದಾನೆ. ಅಷ್ಟೇ ಹೊರತು ಬೇರೆ ಕೆಲಸವೇನೂ ಇಲ್ಲ. 

ಸದಾ –     ಈತನಿಗೆ ಒಳ್ಳೇ ಬಹುಮಾನದ ಕೊಟ್ಟು ಕಳುಹಿಸಿ.

ಸಭ್ಯ –     ಅಪ್ಪಣೆ – ಚೀಣೀ, ಟ್ಯುಂಗ್ ಟಂಗ್ ಟ್ಯಾಂಗ್ (ಚೀಣಿಯವನು ನಮಸ್ಕಾರ ಮಾಡಿ ಸಭ್ಯನ ಜತೆಯಲ್ಲಿ ಹೊರಕ್ಕೆ ಹೋಗುವನು) 

ರು –        ಬಡ ಬ್ರಾಹ್ಮಣರು ಸಿದ್ಧವಾಗಿ ಬಂದಿದ್ದಾರೆ ಪ್ರಭುಗಳೇ. 

ಸದಾ –     ಕಳಿಸಿ, ಆಶೀರ್ವಾದ ಮಾಡಲಿ (ಇಬ್ಬರು ಬ್ರಾಹ್ಮಣರು ಬಡವರಂತೆ ವೇಷಧರಿಸಿ ಬರುವರು) 

ಬ್ರಾಹ್ಮಣರು (ಇಬ್ಬರೂ ಸೇರಿ) – ಓಷಧಯಸ್ಸಗ್‍ಂ ಸಮೋಷಧಯ ಓಷಧಯ ಸ್ಸಗ್‍ಂ ಸಂವದಂತೇ ವದಂತೇ ಸಂವದಂತೇ ವದಂತೇ ಸೋಮೇನ ಸೋಮೇನ ಸಂವದಂತೇ ಸೋಮೇನ ಸಹ ಸಹ ಸೋಮೇನ ಸಹ ಸಹ ರಾಜ್ಞಾ ರಾಜ್ಞೇತಿರಾಜ್ಞಾ……..

ಸದಾ –     (ಕಣ್ಣುಮುಚ್ಚಿಕೊಂಡು) ಆಹಾ ಎಷ್ಟು ಚೆನ್ನಾಗಿದೆ ವೇದಘೋಷ. 

ಬ್ರಾಹ್ಮಣರು-     (ಇಬ್ಬರೂ ಸೇರಿ. ಧ್ವನಿಯನ್ನು ಹೆಚ್ಚಿಸಿ) ಓಷಧಯಸ್ಸಗ್‍ಂ ಸಮೋಷಧಯ (ಎಂದು ಅದನ್ನೇ ಪುನಃ ಹೇಳುತ್ತಿರುವರು)

(ರುದ್ರಣ್ಣನು ಬೇಜಾರು ಪಟ್ಟುಕೊಂಡರೂ ಬ್ರಾಹ್ಮಣರು ನಿಲ್ಲಿಸುವುದಿಲ್ಲ. ಆಗ ಆತ ಸದಾಶಿವರಾಯನ ಹಿಂದುಗಡೆಯಿಂದ ಬ್ರಾಹ್ಮಣರನ್ನು ಹೆದರಿಸುವನು. ಅವರು ಮಂತ್ರವನ್ನು ಮಧ್ಯದಲ್ಲೇ ನಿಲ್ಲಿಸಿ ಬಿಟ್ಟು) 

ಬ್ರಾಹ್ಮ –   ಶ್ರೀರಸ್ತು, ಭದ್ರಮಸ್ತು, ಕಲ್ಯಾಣಮಸ್ತು, ಜಯೋಸ್ತು, ವಿಜಯೋಸ್ತು. 

ಸದಾ –     ಇವರು ಬಹಳ ಚೆನ್ನಾಗಿ ವೇದಮಂತ್ರಗಳನ್ನು ಹೇಳಿದರು. ಇವರಿಗೆ ತಕ್ಕ ಸಂಭಾವನೆಯನ್ನು ಕೊಡಿ. 

ಒಬ್ಬ ಬ್ರಾಹ್ಮಣ- ನಾವು ತೀರ ಬಡವರು ಪ್ರಭುಗಳೇ (ರುದ್ರಣ್ಣ ಪುನಃ ಹೆದರಿಸುವನು) 

ಸದಾ –     ಬಡವರಾದರೂ ನೀವು ಪೂರ್ಣ ವಿದ್ಯಾವಂತರು, ನಿಷ್ಠಾವಂತರು, ನಿಮ್ಮ ಆಶೀರ್ವಾದ ಬಲವಿದ್ದರೆ ನಮಗೆ ಎಲ್ಲ ಕಾರ್ಯಗಳೂ ಸಿದ್ಧಿಸುತ್ತವೆ. ನೀವೂ ನಮ್ಮ ಜತೆಯಲ್ಲಿ ಲೇಪಾಕ್ಷಿಗೆ ಬನ್ನಿ. 

ರು –        (ತಲೆ ಚಚ್ಚಿಕೊಂಡು) ಬರುತ್ತಾರೆ ಪ್ರಭುಗಳೇ ಬ್ರಾಹ್ಮಣರೇ, ನೀವು ಕೂಡಾ ಪ್ರಯಾಣ ಮಾಡಿ. (ಒಬ್ಬನು ಸಂಭಾವನೆಯನ್ನು ತಂದು ಕೊಡುವನು) 

ಒಬ್ಬ ಬ್ರಾಹ್ಮಣ- (ಸಂಭಾವನೆ ತೆಗೆದುಕೊಂಡು) ಪ್ರಭುಗಳ ಅಪ್ಪಣೆ ಮೇರೆಗೆ ನಾವೂ ಪ್ರಯಾಣ ಮಾಡುತ್ತೇವೆ. 

ಸದಾ –     ಇನ್ನು ಹೊರಡಬಹುದೇ ರುದ್ರೇಶ್ವರರೇ? 

ರುದ್ರ –     ಪ್ರಯಾಣಕ್ಕೆ ಎಲ್ಲಾ ಸಿದ್ಧವಾಗಿದೆ. ಇದೇ ದಾರಿ. (ಎಲ್ಲರೂ ಹೊರಡುವರು) 

                            ಅಂಕ – 4 ದೃಶ್ಯ – 1

(ಲೇಪಾಕ್ಷಿಯ ಸಮೀಪದಲ್ಲಿ ರಾಜನ ಶಿಬಿರ-ಭಟರು ಆಸ್ಥಾನವನ್ನು ಏರ್ಪಾಟು ಮಾಡುತ್ತಿರುತ್ತಾರೆ) 

ರುದ್ರಣ್ಣ –   ವಿರುಪಣ್ಣಾ, ನೋಡುತ್ತಾ ಇರು ನಿನ್ನನ್ನೇನು ಮಾಡಿಬಿಡುತ್ತೇನೋ. ಪ್ರಜೆಗಳೆಲ್ಲಾ ನಿನ್ನನ್ನು ಹೊಗಳುತ್ತಾ ನನ್ನನ್ನು ವಿರೋಧಿಸುತ್ತಾ ಇದ್ದಾರೆ. ಪ್ರಜೆಗಳಿಗಲ್ಲ. ಮೊದಲು ನಿನಗೆ ಆಗಬೇಕು ಶಿಕ್ಷೆ. ನಿನಗೆ ಶಿಕ್ಷೆ ಆದರೆ ಪ್ರಜೆಗಳೆಲ್ಲಾ ಹೆದರಿಬಿಡುತ್ತಾರೆ. ದಾರಿಗೆ ಬರುತ್ತಾರೆ. 

ಬೇಗ ಬೇಗ ಕೆಲಸ ಮಾಡಿರೋ ಸೋಮಾರಿಗಳೇ ಮೊದಲು ಸಮ್ರಾಟರ ಸಿಂಹಾಸನ ಇಲ್ಲಿಡಿ.

(ಇಬ್ಬರು ಭಟರು ಆತುರಾತುರವಾಗಿ ಸಿಂಹಾಸನವನ್ನು ತಂದು ತಲೆಕೆಳಕಾಗಿ ಇಡುವರು. ರುದ್ರಣ್ಣ ನೋಡದೆ ಅದರಲ್ಲಿ ಕುಳಿತುಕೊಳ್ಳುವುದಕ್ಕೆ ಹೋಗಿ ಕುಸಿದು ಬೀಳುವನು. ಎದ್ದು ಕೋಪದಿಂದ ಎದುರಿಗೆ ಬಂದ ಭಟನನ್ನು ಹೊಡೆಯುವನು) 

ಭಟ –      ಅಯ್ಯೋ, ಅಯ್ಯೋ, ಇದೇನು ಪ್ರಭುಗಳೇ ನನ್ನನ್ನು ಹೊಡೆಯುತ್ತಿದ್ದೀರಿ? 

ರುದ್ರ –     ಸಿಂಹಾಸನ ತಲೆಕೆಳಗಾಗಿಟ್ಟಿದ್ದೀಯಾ ಮುಠ್ಠಾಳ. ಹೊಡೆಯದೆ ಬಿಡ್ತೀನಾ. 

ಭಟ –      ನಾನು ಸಿಂಹಾಸನವನ್ನು ಮುಟ್ಟಲೇ ಇಲ್ಲವಲ್ಲಾ ಪ್ರಭುಗಳೇ. ನನ್ನನ್ನು ದೇವಾಲಯಕ್ಕೆ ಕಳಿಸಿದ್ದರಲ್ಲಾ ತಾವು. ಈಗ ತಾನೇ ವಾಪಸ್ಸು ಬರ್ತಾ ಇದ್ದೀನಿ. 

ರುದ್ರ –     ಓಹೋ ನೀನಾ? (ಮೆಲ್ಲಗೆ) ಏನು ಮಾಡಿದೆ? ಬಂದಿದ್ದಾನಾ ಅವನು? 

ಭಟ – ನಾನು ಹೋದ ಮೇಲೆ ಕರೆದುಕೊಂಡು ಬರದೇ ಬಿಡ್ತೀನಾ ಪ್ರಭುಗಳೇ.

ರುದ್ರ – (ಸಂತೋಷದಿಂದ) ಸರಿ. ನೀನು ಇಲ್ಲಿ ಎಲ್ಲಾ ಏರ್ಪಾಟು ನೋಡಿಕೋ. ನಾನು ಹೋಗಿ ಸಾಮ್ರಾಟರನ್ನು ಕರೆದುಕೊಂಡು ಬರ್ತೀನಿ.

ಭಟ –      ಸಮ್ರಾಟರಿಗೆ ವಿಶ್ರಾಂತಿ ಬೇಡವೇ ಪ್ರಭುಗಳೇ ಇಷ್ಟು ದೂರದ ಪ್ರಯಾಣ. 

ರುದ್ರ –     ವಿಶ್ರಾಂತಿ ಕೊಟ್ಟರೆ ಸಾಯಂಕಾಲ ಆಗುತ್ತೆ. ಕತ್ತಲಾದ ಮೇಲೆ ಪರಿಸ್ಥಿತಿ ಹೇಗೆ ಬದಲಾಯಿಸುತ್ತೋ (ಹೊರಡುವನು) (ಆಸ್ಥಾನದಲ್ಲಿ ಎಲ್ಲರೂ ಸಿದ್ಧವಾಗಿ ಕುಳಿತುಕೊಂಡಿರುವರು)

(ನೇಪಥ್ಯದಲ್ಲಿ)

ಶ್ರೀಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಮೂರು ರಾಯರಗಂಡ ಅರಿರಾಜ ನಿಭಾಡ ಕರ್ಣಾಟಾಂಧ್ರಸಾಮ್ರಾಜ್ಯ ಸಂಸ್ಥಾಪನಾಚಾರ್ಯ

ಶ್ರೀ ಶ್ರೀ ಶ್ರೀ ಶ್ರೀ ಸದಾಶಿವರಾಯ ಸಾರ್ವಭೌಮಾ ಪರಾಕ್ ಬಹುಪರಾಕ್ (ತೂರ್ಯಗಳು ಮೊಳಗುವುವು) (ಸದಾಶಿವರಾಯನೂ ರುದ್ರಣ್ಣನೂ ಪ್ರವೇಶಿಸುವರು) 

ರು – ಪ್ರಭುಗಳೇ ಹೀಗೆ ದಯಮಾಡಿ. ಹೀಗೆ, ಹೀಗೆ, 

ಸದಾ –     ಎಲ್ಲಿದ್ದಾನೆ ಆ ದ್ರೋಹಿ, ದುಷ್ಟ, ಧೂರ್ತ ವಿರುಪಣ್ಣ? 

ರು – ತಮ್ಮ ಅನುಮತಿ ಆದರೆ ಒಳಕ್ಕೆ ಕರೆದುಕೊಂಡು ಬರುತ್ತಾರೆ. 

ಸದಾ –     ಕರೆಸಿ ಅವನನ್ನು, ಈಗಾಗಿರುವ ಹೊತ್ತು ಸಾಲದೇ? (ರುದ್ರಣ್ಣ ಕೈ ಸನ್ನೆ ಮಾಡುವನು. ವಿರುಪಣ್ಣ ಮಂಡಲೇಶ್ವರನ ಹಳೆಯ ಉಡುಪನ್ನು ಧರಿಸಿ ತಟ್ಟೆಯಲ್ಲಿ ಹೂಗಳನ್ನು ಹಣ್ಣುಗಳನ್ನು ತೆಗೆದುಕೊಂಡು ಬಂದು ನಮಸ್ಕಾರ ಮಾಡುತ್ತ) 

ವಿರು –      ಪ್ರಭುಗಳಿಗೆ ಜಯವಾಗಲಿ. 

ಸದಾ –     (ವಿರುಪಣ್ಣನನ್ನೇ ನೋಡುತ್ತಾ) ಏನಾಶ್ಚರ್ಯ! ಎಂತಹ ವಿನಯ!  ಎಂತಹ ಪ್ರಶಾಂತವಾದ ಮುಖ! ಕಣ್ಣುಗಳಲ್ಲಿ ಎಂಥ ಕಾಂತಿ ಈತನೇನಾ ವಿರುಪಣ್ಣ! 

ರುದ್ರಣ್ಣ – ಪ್ರಭುಗಳೇ, ಏಕೆ ತಡಮಾಡುತ್ತಿದ್ದೀರಿ. ಈತನನ್ನು ಬಂಧಿಸಬೇಕೆಂದು ಅಪ್ಪಣೆ ಕೊಡಿ. 

ವಿರುಪಣ್ಣ- (ಆಶ್ಚರ್ಯದಿಂದ) ಇದೇನಿದು? (ಸ್ವಲ್ಪ ಆಲೋಚಿಸಿ ನಕ್ಕು) ಪ್ರಭುಗಳೇ, ಈ ರುದ್ರಣ್ಣ ಜ್ಞಾತಿಮತ್ಸರದಿಂದ ನನಗೆ ಇಲ್ಲದ ಕಷ್ಟ ಕೊಡಬೇಕೆಂದು ಪ್ರಯತ್ನ ಮಾಡುತ್ತ ಮಾಡುತ್ತ ವೃಥಾ ಇಲ್ಲದ ಆಯಾಸಪಡುತ್ತಿರುತ್ತಾನೆ. ಪಾಪ, ಈತನ ಕಷ್ಟ ನೋಡಿದರೆ ನನಗೆ ಅಯ್ಯೋ ಅನ್ನಿಸುತ್ತೆ. 

ರುದ್ರ –     ಆಹಾ! ನನ್ನ ಮೇಲೆ ಎಷ್ಟು ಪ್ರೀತಿ ನಮ್ಮಣ್ಣನಿಗೆ. 

ವಿರು –      ನನಗೆ ನಿನ್ನ ಮೇಲೆ ಪ್ರೀತಿ ಯಾವಾಗಲೂ ಇದೆ ತಮ್ಮಾ. ಪ್ರೀತಿ ಇದ್ದುದ್ದರಿಂದಲೇ ನೀನು ಮಂಡಲಾಧಿಪತಿ ಆದಾಗ ಸಂತೋಷವಾಗಿ ಅಧಿಕಾರ ನಿನಗೆ ಬಿಟ್ಟುಕೊಟ್ಟು ನಾನೂ ವೀರಣ್ಣನೂ ಈ ಲೇಪಾಕ್ಷಿಯಲ್ಲಿ ವಾಸ ಮಾಡಿಕೊಂಡಿರುವುದು. . . ಸಮ್ರಾಟರೇ, ಮಂಡಲಾಧಿಪತಿ ಆದ ಮೇಲೆ ಈತ ಪ್ರಜೆಗಳ ಅನುರಾಗ ಸಂಪಾದಿಸಿಕೊಂಡು ರಾಜ್ಯವಾಳುತ್ತಾನೆಂದು ನಾನೆಷ್ಟೋ ಆಸೆ ಇಟ್ಟುಕೊಂಡಿದ್ದೆ. ಈತ ಧನದ ಆಸೆಯಿಂದ ಪ್ರಜೆಗಳನ್ನು ಪೀಡಿಸಿ ಪೀಡಿಸಿ ಅವರಿಗೇ ವಿರೋಧಿ ಆಗಿದ್ದಾನೆ. ಇನ್ನೂ ಬುದ್ಧಿ ಬಂದಿಲ್ಲ. 

ರುದ್ರ –     ಈ ಮಾತುಗಳಿಗೇನು? ಪ್ರಭುಗಳೇ, ನಿಮ್ಮ ಶತ್ರುವಾದ ಈತನನ್ನು ಬಂಧಿಸಲು ಬೇಗ ಆಜ್ಞೆ ಮಾಡಿ. 

ವಿರು –      (ಕಿವಿಗಳನ್ನು ಮುಚ್ಚಿಕೊಂಡು) ಶಿವ ಶಿವಾ. ಎಂಥ ಮಾತು. ವಿಜಯನಗರ ಸಾಮ್ರಾಟರ ಉಪ್ಪು ತಿಂದು ಈ ದೇಹವನ್ನು ಬೆಳೆಸಿದ ನಾನು ಅವರ ಶತ್ರುವೇ. ಕೇಳಲಾರೆ ಈ ಮಾತನ್ನು. 

ರು –        ಇವನನ್ನು ಬಂಧಿಸುವುದಕ್ಕೆ ಜಾಗ್ರತೆಯಾಗಿ ಅಪ್ಪಣೆ ಕೊಡಿ ಪ್ರಭುಗಳೇ. 

ವಿರು –      ಪ್ರಭುಗಳೇ, ನಾನೇನು ತಪ್ಪಿಸಿಕೊಂಡು ಓಡಿ ಹೋಗುವುದಿಲ್ಲ. ಹುಟ್ಟಿದ ಲಾಗಾಯತು ಬಂಧನಕ್ಕೊಳಗಾಗುವ ತಪ್ಪು ಕೆಲಸ ನಾನಾವುದೂ ಮಾಡಿಲ್ಲ. ನನ್ನ ತಮ್ಮ ನನ್ನ ಮೇಲೆ ತಮಗೆ ಏನೇನೋ ಚಾಡೀ ಹೇಳಿರಬಹುದು. ಇವನ ಮಾತು ನಂಬಬೇಡಿ ಪ್ರಭುಗಳೇ. ಇವನಿನ್ನೂ ಏನೂ ತಿಳಿಯದವನು.

ರುದ್ರ –     ಇದೇನು ಪ್ರಭುಗಳೇ, ಇವನ ಆಕಾರ, ಕಣ್ಣುಗಳೂ ನೋಡಿ ಬೆರಗಾಗಿ ಬಿಟ್ಟರೇ? ಇವನ ಈ ಮಾತುಗಳು ನಿಮ್ಮನ್ನೇನು ಮಾಡಿಬಿಟ್ಟವು? ಯಾಕೆ ಇನ್ನೂ ಸುಮ್ಮನಿದ್ದೀರಿ? ಜಾಗ್ರತೆಯಾಗಿ ಆಜ್ಞೆ ಮಾಡಿ. ಇಲ್ಲದಿದ್ದರೆ ಶತ್ರುಗಳ ಸೈನ್ಯ ಬಂದುಬಿಡಬಹುದು. 

ವಿರು –      (ನಕ್ಕು) ಶತ್ರುಗಳ ಸೈನ್ಯ ಯಾವುದು ಪ್ರಭುಗಳೇ? ಅಯ್ಯೋ, ಇದೇನೋ ವಿಚಿತ್ರವಾದ ನಾಟಕ ಆಡ್ತಾ ಇದ್ದಾನಲ್ಲಾ ನನ್ನ ತಮ್ಮ ರುದ್ರಣ್ಣ. 

                                       37

ಸದಾ –     ರುದ್ರೇಶ್ವರರೇ, ಇದೆಲ್ಲಾ ನಾಟಕ ಅಂತ ಈತ ಹೇಳುತ್ತಿದ್ದಾನೆ. ನೀವು ಈತ ದ್ರೋಹಿ ಅಂತ ಹೇಳುತ್ತಾ ಇದ್ದೀರಿ. ಮೊದಲು ಇದು ತೀರ್ಮಾನವಾಗಬೇಕು. ಈತನ ಮೇಲೆ ನಿಮ್ಮ ಆಪಾದನೆಗಳನ್ನೆಲ್ಲಾ ಹೇಳಿಬಿಡಿ. ಈತ ಏನು ಉತ್ತರ ಕೊಡುತ್ತಾನೋ ನೋಡೋಣ. 

ರು –        ವಿರುಪಣ್ಣಾ, ನಿನ್ನ ಮೇಲೆ ಅನೇಕ ಆಪಾದನೆಗಳಿವೆ. ಹೇಳ್ತೀನಿ ಕೇಳು. ಒಂದು – ನಿನ್ನ ಶಿಲ್ಪಬ್ರಹ್ಮ ಇದ್ದಾನಲ್ಲಾ ಆತ ಸಮ್ರಾಟರ ವಂಶಕ್ಕೇ ಶತ್ರುವಾದ ಶಂಭೋಜೀ ವಂಶದ ಸಾಂಬೋಜೀ ಆಸ್ಥಾನದಲ್ಲಿ ತಾನೇ ಹಿಂದೆ ಇದ್ದಿದ್ದು? 

ವಿರು –      ಹೌದಪ್ಪಾ. ಆತ ಅಲ್ಲಿದ್ದರೇನಾಯಿತು? 

ರು – ಅಷ್ಟೇ ಅಲ್ಲ. ಮುಂದೆ ಕೇಳು. ಆತನನ್ನು ನೀನೇ ತಾನೇ ಇಲ್ಲಿಗೆ ಕರೆಸಿಕೊಂಡಿದ್ದು? 

ವಿರು –      ಇಲ್ಲ – ಆ ರಾಜನ ಹತ್ತಿರ ಶಿಲ್ಪಕಲೆಗೆ ಪ್ರೋತ್ಸಾಹ ಸಿಕ್ಕದ ಕಾರಣ ಆತನೇ ತನ್ನ ಐಶ್ವರ್ಯವನ್ನೆಲ್ಲಾ ಬಿಟ್ಟು ಇಲ್ಲಿಗೆ ಬಂದನಂತೆ. 

ರು – ನೀನು ಹಾಗೆ ತಿರುಗಿಸಿಕೊಂಡೆಯೋ ಅದನ್ನು? 

ಸದಾ –     ರುದ್ರೇಶ್ವರರೇ, ಆಗಲೇ ಹೊತ್ತಾಗಿಬಿಟ್ಟಿದೆ. ಮಧ್ಯೆ ಮಧ್ಯೆ ಸಂಭಾಷಣೆ ಬೇಡ. ನಿಮ್ಮ ಆಪಾದನೆಗಳನ್ನೆಲ್ಲಾ ಒಟ್ಟಿಗೆ ಹೇಳಿಬಿಡಿ. ಅದಕ್ಕೆ ವಿರುಪಣ್ಣ ತನ್ನ ಉತ್ತರವನ್ನು ಹೇಳಲಿ.

ರು – ಅಪ್ಪಣೆ, ಎರಡನೇ ಆಪಾದನೆ. ನೀನು ಶತ್ರುದೇಶದ ಆ ಶಿಲ್ಪಿಯನ್ನೇ ದೊಡ್ಡವನನ್ನಾಗಿ ಮಾಡಿ – ಅವನನ್ನು ಅಳಿಯನನ್ನಾಗಿ ಮಾಡಿಕೊಂಡು ನಮ್ಮ ನಾಡಿನ ಶಿಲ್ಪಿಗಳಿಗೆಲ್ಲಾ ಅವಮಾನ ಮಾಡಿದ್ದೀಯೆ. ಇದರಿಂದ ನಮ್ಮ ನಾಡಿಗೆ ಕಳಂಕವುಂಟಾಗಿದೆ. 

ಮೂರನೇ ಆಪಾದನೆ – ಪ್ರಜೆಗಳಲ್ಲಿ ನನ್ನ ಮೇಲೂ ಸಮ್ರಾಟರ ಮೇಲೂ ದ್ವೇಷವನ್ನು ಹುಟ್ಟಿಸಿ ಅವರು ಕಂದಾಯ ಕೊಡದಂತೆ ಮಾಡಿದ್ದೀಯೆ. 

ನಾಲ್ಕನೇ ಆಪಾದನೆ – ದೇವಾಲಯಕ್ಕೆ ಬೇಕು ಅಂತ ಹೇಳಿ ಪ್ರಜೆಗಳಿಂದ ಕಂದಾಯವನ್ನು ನೀನೇ ವಸೂಲು ಮಾಡುತ್ತಿದ್ದೀಯೆ. 

ಐದನೇ ಆಪಾದನೆ – ಶಿಲ್ಪಿಯ ಮೂಲಕ ಸಾಂಬೋಜಿಯೊಂದಿಗೆ ಮೈತ್ರಿ ಮಾಡಿಕೊಂಡು ಆತನು ಕಳುಹಿಸಲಿರುವ ಸೈನ್ಯಕ್ಕಾಗಿ ಕಾದಿದ್ದೀಯೆ. 

ಸದಾ –     ಅಷ್ಟು ಸಾಕು. ಇವಕ್ಕೆಲ್ಲಾ ನಿನ್ನ ಉತ್ತರವೇನು? 

ವಿರು –      ನನ್ನ ತಮ್ಮ ಬಹಳ ಯುಕ್ತಿಯಿಂದ ಸ್ವಲ್ಪ ಸತ್ಯಾಂಶವನ್ನು ತೆಗೆದುಕೊಂಡು ಅದರ ಮೇಲೆ ಸುಳ್ಳಿನ ದೊಡ್ಡ ಕಟ್ಟಡವನ್ನೇ ಕಟ್ಟಿಬಿಟ್ಟಿದ್ದಾನೆ. ಪ್ರಭುಗಳೇ, ತಾವು ಕೋಟಿಗಟ್ಟಳೆ ಕೈಗಳೂ, ಕಾಲುಗಳೂ, ತಲೆಗಳೂ ಇರುವ ಈ ವಿಶಾಲವಾದ ವಿಜಯನಗರ ಸಾಮ್ರಾಜ್ಯಕ್ಕೆ ಒಡೆಯರು. ತಾವು ಪರಿಪಾಲನೆಯಲ್ಲಿ ಸಾವಿರ ಕಣ್ಣುಗಳಿಟ್ಟುಕೊಂಡು ನೋಡುತ್ತಿರಬೇಕು. ಇಲ್ಲದಿದ್ದರೆ ಸ್ವಾರ್ಥಿಗಳಾದವರು ತಮಗೇ ಮೋಸ ಮಾಡಿಬಿಡುತ್ತಾರೆ. 

ರು – ಇದೆಂಥ ಉತ್ತರ ಪ್ರಭುಗಳೇ. 

ಸದಾ –     ನೀವು ಸುಮ್ಮನಿರಿ. ಆತನು ಏನೇನು ಹೇಳಬೇಕೋ ಎಲ್ಲಾ ಹೇಳಲಿ. ಅದಕ್ಕೆ ಪೂರ್ತಿ ಅವಕಾಶ ಕೊಡಬೇಕಾದ್ದು ಧರ್ಮ. ಆತನು ಹೇಳುವುದರಲ್ಲಿ ಅಸಂಬದ್ಧವಾದ ಮಾತೇನೂ ಇಲ್ಲವಲ್ಲಾ.

ವಿರು –      ಶಿಲ್ಪಿ ಬ್ರಹ್ಮನ ಯೋಗ್ಯತೆಯನ್ನು ಕಂಡೇ ಆತನನ್ನು ಮಹಾಶಿಲ್ಪಿಯನ್ನಾಗಿ ಮಾಡಿಕೊಂಡಿದ್ದು. ಆತ ದಿವ್ಯವಾದ ದೇವಾಲಯವನ್ನು ಕಟ್ಟಿದ್ದಾನೆ. ಇದರಿಂದ ನಮ್ಮ ನಾಡಿನ ಕೀರ್ತಿ ಹೆಚ್ಚಿದೆಯೇ ಹೊರತು ಕಳಂಕವೆಲ್ಲಿಂದ ಬರುತ್ತೆ. ಆತ ಶತ್ರುರಾಜ್ಯ ಬಿಟ್ಟು ಬಂದಿದ್ದಾನೆ ಅಂದರೇನೇ ಆತನಿಗೆ ಶತ್ರು ರಾಜನ ಮೇಲೆ ಅಬಿಮಾನವಿಲ್ಲವೆಂದಾಯಿತಲ್ಲಾ. ಕಲೆಯನ್ನು ಉಪಾಸಿಸುವವರಿಗೆ ರಾಜ್ಯ ತಂತ್ರಗಳೇತಕ್ಕೆ ಬೇಕು ಪ್ರಭುಗಳೇ. 

ಸದಾ –     ಅದು ಸರಿ. ಮುಂದಿನ ಆಪಾದನೆಗಳ ವಿಷಯವಾಗಿ ಹೇಳು. 

ವಿರು –      ರುದ್ರಣ್ಣ ಮಂಡಲಾಧಿಪತಿ ಆದ ಮೇಲೆ ಪ್ರಜೆಗಳು ಕಂದಾಯಕೊಟ್ಟು ಕೊಂಡು ಭಕ್ತಿಯಿಂದ ಇದ್ದರು. ಅಂದರೆ ನಾನು ರುದ್ರಣ್ಣನ ಮೇಲೆ ಅಸೂಯೆಯಿಂದ ಪ್ರಜೆಗಳಲ್ಲಿ ಆತನ ಮೇಲೆ ದ್ವೇಷ ತುಂಬಲಿಲ್ಲ ಅನ್ನುವುದು ಸ್ಪಷ್ಟವಾಗುತ್ತಲ್ಲಾ. ಈತನು ಸ್ವಲ್ಪಕಾಲ ಒಳ್ಳೆಯವನಂತೆ ನಟಿಸಿ

ಆಮೇಲೆ ದುರಾಸೆಯಿಂದ ಪ್ರಜೆಗಳನ್ನು ಪೀಡಿಸಿದ್ದಕ್ಕೆ ಅವರು ಕಂದಾಯ ಕೊಡುವುದಿಲ್ಲವೆಂದು ಎದುರು ತಿರುಗಿದ್ದಾರೆ. 

ರುದ್ರ –     ಈತನ ಮಾತುಗಳೆಲ್ಲಾ ಸುಳ್ಳು ಪ್ರಭುಗಳೇ. 

ಸದಾ –     ನೀವು ಸ್ವಲ್ಪ ಸುಮ್ಮನಿರಿ. ನಿಮ್ಮನ್ನು ಆಮೇಲೆ ಕೇಳುತ್ತೇನೆ. 

ರುದ್ರ –     ನನ್ನನ್ನು ಕೇಳುತ್ತೀರಾ? 

ವಿರು –      ದೇವಾಲಯಕ್ಕೆ ಕಾಣಿಕೆ ಕೊಡುವ ಪದ್ಧತಿ ಹಿಂದಿನ ಕಾಲದಿಂದ ಬಂದದ್ದು ತಾನೇ? ಅದನ್ನು ನಡೆಸಿಕೊಂಡು ಬರುತ್ತಾ ಇದ್ದಾರೆಯೇ ಹೊರತು ಪ್ರಜೆಗಳು ಯಾವ ಕಂದಾಯವನ್ನೂ ನನಗೆ ಕೊಡುತ್ತಿಲ್ಲ. ನಾನು ಸಾಂಬೋಜಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಶುದ್ಧ ಸುಳ್ಳು ಕಲ್ಪನೆ. ಶತ್ರು ಸೈನ್ಯ ಯಾವುದು ಬರುತ್ತಿದೆಯೋ ನನಗೇ ಗೊತ್ತಿಲ್ಲವಲ್ಲಾ. ಅದಾವುದಾದರೂ ಬರುತ್ತಿದ್ದರೇ ಅದನ್ನೆದುರಿಸುವುದಕ್ಕೆ ನಾನೂ ಈ ಲೇಪಾಕ್ಷಿಯ ಪ್ರಜೆಗಳೂ ಎಲ್ಲರೂ ಸಿದ್ಧವಾಗಿದ್ದೇವೆ. ಈಗ ಮೀರಿ ಹೋಗಿದ್ದೇನೂ ಇಲ್ಲ. ರುದ್ರಣ್ಣ ಪ್ರಜೆಗಳನ್ನು ಪೀಡಿಸುವುದಿಲ್ಲ ಅಂತ ಒಂದು ಮಾತು ಕೊಡಲಿ. ಈಗಲೂ ಪ್ರಜೆಗಳು ಈತನಿಗೆ ಮನ್ನಣೆ ಕೊಡಲು ಸಿದ್ಧವಾಗಿದ್ದಾರೆ. ಈತನೂ ಪ್ರಜೆಗಳೂ ಅನ್ಯೋವಾಗಿದ್ದರೆ ನನಗಂತೂ ಬಹಳ ಸಂತೋಷ. 

ಸದಾ –     ಏನು ರುದ್ರೇಶ್ವರರೇ, ನೀವು ಬಹಳ ಒಳ್ಳೆಯವರೆಂದು ಇಷ್ಟು ದಿವಸ ನಂಬಿದ್ದರೆ .  . 

ರು – ಅಯ್ಯೋ, ಅಯ್ಯೋ, ಪ್ರಭುಗಳೇ, ಇವನ ಈ ಮಾತುಗಳಿಗೆ ನೀವೇ ಬೆರಗಾಗಿ ಬಿಟ್ಟರೇ? ನನಗೆ ಈತ ಇಂಥ ಮಾಯಾವಿ ಅಂತ ಗೊತ್ತೇ ಇರಲಿಲ್ಲ. ಇಲ್ಲದಿದರೆ ಪ್ರತಿ ಒಂದು ಆಪಾದನೆಗೂ ಒಳ್ಳೇ ಸಾಕ್ಷ್ಯವನ್ನು ತೋರಿಸುತ್ತಾ ಇದ್ದೆನಲ್ಲಾ. . . ಆ, ಪ್ರಭುಗಳೇ, ಸತ್ಯವನ್ನು ಕಂಡು ಹಿಡಿಯುವುದಕ್ಕೆ ಒಂದು ಉಪಾಯವಿದೆ. ಒಳ್ಳೇ ಉಪಾಯ. 

ಸದಾ –     ಏನದು? (ರುದ್ರಣ್ಣ ಸದಾಶಿವರಾಯನ ಕಿವಿಯಲ್ಲಿ ಏನೋ ಹೇಳುವನು) 

ಸದಾ –     ವಿರುಪಣ್ಣಾ, ನೀನೇನೋ ನಿನ್ನ ಉತ್ತರ ಹೇಳಿದೆ. ಆದರೆ ಅಷ್ಟಕ್ಕೇ ಅದನ್ನೆಲ್ಲಾ ನಂಬುವುದಕ್ಕಾಗುವುದಿಲ್ಲ.

ವಿರು –      ಹಾಗಾದರೆ ನಾನೇನು ರುಜುವಾತು ಕೊಡಬೇಕು ಪ್ರಭುಗಳೇ? 

ಸದಾ –     ನಿನ್ನ ರಾಜಭಕ್ತಿ ನಿಜವಾಗಿದ್ದೋ ಅಲ್ಲವೋ ನಾವು ಪರೀಕ್ಷೆ ಮಾಡುತ್ತೇವೆ. 

ವಿರು –      ಮಾಡಿ ಪ್ರಭುಗಳೇ. 

ಸದಾ –     ಶತ್ರುರಾಜ್ಯದಿಂದ ಬಂದ ನಿನ್ನ ಶಿಲ್ಪಿಯನ್ನು ನಾವು ನಂಬುವುದಕ್ಕಾಗುವುದಿಲ್ಲ. ನಿನ್ನ ದೇವಾಲಯದ ಕೆಲಸ ನಿಲ್ಲಿಸಿ ಬಿಟ್ಟು ಆ ಶಿಲ್ಪಿಯನ್ನು ನಮ್ಮ ವಶಮಾಡಿಬಿಡು ಅಂತ ನಾನು ಆಜ್ಞೆ ಮಾಡಿದರೆ ಹಾಗೆ ಮಾಡ್ತೀಯೋ? 

ವಿರು –      (ಸ್ವಲ್ಪ ಹೊತ್ತು ಆಲೋಚಿಸಿ) ತಾವು ಹೇಳಿದಂತೆ ಆಜ್ಞೆ ಮಾಡುವುದು ಧರ್ಮವೇ ಎಂದು ವಿಮರ್ಶೆ ಮಾಡಿ ಅದು ಧರ್ಮವಲ್ಲವೆಂಬ ನಿರ್ಧಾರಕ್ಕೆ ಬಂದಿದ್ದೇನೆ ಪ್ರಭುಗಳೇ ತಾವು ಅಂಥ ಅಧರ್ಮವಾದ ಆಜ್ಞೆಯನ್ನು ಮಾಡುವುದಿಲ್ಲ. . . ಒಂದು ವೇಳೆ ಮಾಡಿದರೆ ಅದನ್ನು ಪರಿಪಾಲಿಸುವುದು ನನಗೆ ಧರ್ಮವಲ್ಲ ಪ್ರಭುಗಳೇ. 

ರು – ನೋಡಿದಿರಾ ಪ್ರಭುಗಳೇ ಈತನ ರಾಜ ಭಕ್ತಿಯನ್ನು?       

ವಿರು – ನಾನು ಹೇಳಿದ್ದು ಧರ್ಮದ ದೃಷ್ಟಿಯಿಂದ. ನನ್ನ ರಾಜಭಕ್ತಿಯನ್ನು ನೋಡಬೇಕೆಂದಿದ್ದರೆ ನನ್ನ ಪ್ರಾಣವನ್ನು ತಗೊಳ್ಳಿ. ಅರ್ಪಿಸಲು ಬದ್ಧವಾಗಿದ್ದೇನೆ. ಈ ಶರೀರ ತಮ್ಮದು. (ಎಂದು ಮುಂದಕ್ಕೆ ಬಂದು ತಲೆ ಬಗ್ಗಿಸಿಕೊಂಡು ನಿಲ್ಲುವನು)

ಸದಾ –     ಧರ್ಮಾಧರ್ಮ ವಿಚಾರ ಮಾಡದೆ ನಾವು ದುಡುಕುವವರಲ್ಲ. 

ವಿರು –      ತಮ್ಮ ಧರ್ಮ ಪ್ರಿಯತೆ ವಿದ್ಯಾರಣ್ಯರ ಕಾಲದಿಂದಲೂ ಬಂದದ್ದು ಪ್ರಭುಗಳೇ. 

ಸದಾ –     ನನ್ನ ಆಜ್ಞೆ ಏಕೆ ಧರ್ಮಸಮ್ಮತವಾಗಿರುವುದಿಲ್ಲ? 

ವಿರು –      ದೇವಾಲಯ ನಿರ್ಮಾಣವೊಂದು ಪುಣ್ಯ ಕಾರ್ಯ. ನಿಷ್ಕಾರಣವಾಗಿ ಅದನ್ನು ನಿಲ್ಲಿಸಬೇಕೆಂಬ ಆಜ್ಞೆ ಧರ್ಮಸಮ್ಮತವಾಗುವುದಿಲ್ಲ. ಒಂದು ವೇಳೆ ಪ್ರಭುಗಳ ಅಥವಾ ರಾಜ್ಯದ ದ್ರವ್ಯದಿಂದ ಆ ದೇವಾಲಯವನ್ನು ಕಟ್ಟುತ್ತಿದ್ದರೆ ಅದನ್ನು ಪ್ರಭುಗಳು ನಿಲ್ಲಿಸಬೇಕೆಂದು ಹೇಳಿದಾಗ ನಾನು ನಿಲ್ಲಿಸಬಹುದು. ಈ ದೇವಾಲಯ ನಮ್ಮ ಸ್ವಂತ ಹಣದಿಂದಲೂ, ಆಮೇಲೆ ಪ್ರಜೆಗಳ ಕಾಣಿಕೆಗಳಿಂದಲೂ ನಿರ್ಮಿತವಾದುದು. 

ಸದಾ –     ಆ ವಿಷಯ ನಮಗೆ ತಿಳಿಯದು. ಶಿಲ್ಪಿಯನ್ನೇಕೆ ನಮ್ಮ ವಶ ಮಾಡುವುದಕ್ಕಾಗುವುದಿಲ್ಲ?

ವಿರು –      ಶಿಲ್ಪಿ ಯಾವ ಪಾಪವನ್ನೂ ಮಾಡಿದವನಲ್ಲ. ದೇವಾಲಯ ನಿರ್ಮಾಣವೆಂಬ ಪುಣ್ಯ ಕಾರ್ಯದಲ್ಲಿ ತೊಡಗಿದ್ದಾನೆ. ಅಂಥವನನ್ನು ತಮ್ಮ ವಶ ಮಾಡಲು ಆತನ ಮೇಲೆ ನನಗೇನು ಅಧಿಕಾರವಿದೆ ಪ್ರಭುಗಳೇ. ತಾವು ನಿಷ್ಕಾರಣವಾಗಿ ದೇವಾಲಯ ನಿರ್ಮಾಣ ನಿಲ್ಲಿಸಬೇಕೆಂಬ ಆಜ್ಞೆಯನ್ನು ಮಾಡಿದರೆ ತಮಗೆ ಅಪಕೀರ್ತಿ ಉಂಟಾಗುತ್ತೆ ಸ್ವಾಮಿ. ಸಾಯಂಕಾಲವಾಯಿತು. ದೇವರ ಸೇವೆಗೆ ಎಲ್ಲರೂ ಬಂದಿರುತ್ತಾರೆ. ಹೊರಡಲು ನನಗೆ ಅನುಮತಿ ಕೊಡಿ. 

ಸದಾ –     ವಿರುಪಣ್ಣಾ, ನಿನ್ನನ್ನು ಪರೀಕ್ಷೆ ಮಾಡುವುದಕ್ಕೆ ಹಾಗೆ ಹೇಳಿದೆನೇ ಹೊರತು ಪುಣ್ಯ ಕಾರ್ಯಕ್ಕೆ ವಿಘ್ನಮಾಡಿ ಅಪಕೀರ್ತಿಯನ್ನು ಕಟ್ಟಿಕೊಳ್ಳಬೇಕೆಂದಲ್ಲ. ನೀನಿನ್ನು ಹೋಗಬಹುದು.                

(ಎಂದು ತಟಕ್ಕನೆ ಏಳುವನು. ಎಲ್ಲರೂ ಹೋದಮೇಲೆ)                                                                                                 

ರುದ್ರ – ತಪ್ಪಿಸಿಕೊಂಡೆಯಾ ವಿರೂಪಣ್ಣಾ . ಆಗಲಿ. ಈ ರುದ್ರಣ್ಣ ಇಲ್ಲಿಗೇ ಬಿಡ್ತಾನಾ ನಿನ್ನನ್ನು?  ಹ.. ಹ.. ಹ.. ಹ …                                                                                     

                                 ದೃಶ್ಯ -2 

(ಶಿಬಿರ – ನಡುರಾತ್ರಿ ಸದಾಶಿವರಾಯನು ಕುಳಿತುಕೊಂಡಿರುವನು. ಅಂದವಾದ ಕಾಂತೆಯರು ಏನೇನೋ ಕೆಲಸಗಳಲ್ಲಿ ತೊಡಗಿರುವರು) 

ರುದ್ರಣ್ಣ –   ಆಳುಗಳು ಬಂದಿದ್ದಾರೆ ಪ್ರಭುಗಳೇ. (ಆಳುಗಳು ಪ್ರವೇಶಿಸುವರು) 

ಸದಾ –     ಏನೋ ನಿನ್ನ ಕೆಲಸ? 

1ನೇ ಆಳು –  ನಾನು ಕುದುರೆ ಸಾಕೋ ಆಳು ಸ್ವಾಮಿ. 

ಸದಾ –     ಲೇಪಾಕ್ಷಿಯ ಜನರು ನಿನಗೇನು ಮಾಡಿದರು? 

1ನೇ ಆಳು-      ಏನೂ ಮಾಡಲಿಲ್ಲ ಪ್ರಭುಗಳೇ 

ರುದ್ರ –     ನೀನು ಅವರ ಹತ್ತಿರ ಏನಾದರೂ ಮಾತಾಡಿದೆಯೇನೋ? 

1ನೇ ಆಳು – ಹೌದು ಸ್ವಾಮೀ, ನಾನು ಹೋಗಿ ಮಹಾರಾಜರ ಕುದುರೆಗಳಿಗೆ ಹುಲ್ಲು ಕೊಡಿ. ದುಡ್ಡು ಕೊಡ್ತೀನಿ ಅಂತ ಹೇಳಿದೆ ಸ್ವಾಮೀ. ಅವರೆಲ್ಲಾ ಸೇರಿ 

ನಾವು ಕಟ್ಟು ಮಾಡಿಕೊಂಡಿದ್ದೀವಿ. ನೀವು ದುಡ್ಡು ಕೊಟ್ಟರೂ ನಾವು ಹುಲ್ಲು ಕೊಡೋದಿಲ್ಲ ಅಂತ ಹೇಳಿದರು ಸ್ವಾಮೀ. 

2ನೇ ಆಳು- ನಾನು ಆನೆಗಳಿಗೆ ಬಾಳೆಹಣ್ಣು ಕೇಳಿದ್ದಕ್ಕೆ ನನಗೂ ಹಾಗೇ ಹೇಳಿದರು ಪ್ರಭುಗಳೇ. 

3ನೇ ಆಳು- ನಾನು ಅಡಿಗೆಗೆ ಮೆಣಸಿನ ಕಾಯಿ ಕೇಳಿದ್ದಕ್ಕೆ ನನಗೂ ಹಾಗೇ ಹೇಳಿದರು. 

4ನೇ ಆಳು- ನಾನು ಹೆಂಡಕ್ಕೆ ಹೋದೆ. ನನಗೂ ಅದೇ ಸಬೂಬು ಸರ್ಕಾರ್. 

ರುದ್ರ –     ನಾವು ಸಾಸುವೆ ಕಾಳಿನಿಂದ ಪ್ರತಿ ಒಂದು ಸಾಮಾನು ತಂದಿರುವುದರಿಂದ ಸರಿ ಹೋಯಿತು ಪ್ರಭುಗಳೇ. 

ಸದಾ –     ಹೌದು

ರುದ್ರ –     ಕಂದಾಯ ಕೊಡದಿದ್ದರೆ ಹೋಗಲಿ. ದುಡ್ಡು ಕೊಟ್ಟರೂ ಪದಾರ್ಥ ಕೊಡುವುದಿಲ್ಲ ಅಂದರೆ ಏನುಗತಿ? ಅವರಿಗೆ ನಮ್ಮ ಮೇಲೆ ಎಷ್ಟು ದ್ವೇಷವಿದೆ? ಇದಕ್ಕೆಲ್ಲಾ ಆ ಮಾಯಾವಿಯೇ ಮೂಲ.

ಸದಾ – ನೀವೆಲ್ಲಾ ಹೋಗಿ. (ಆಳುಗಳು ಹೊರಡುವರು). ರುದ್ರೇಶರೇ ಇಲ್ಲಿ ಕೂಡಿ. ನನಗೆ ಅರ್ಥವೇ ಆಗುತ್ತಿಲ್ಲ. ಆಲೋಚನೆ ಮಾಡಿದಷ್ಟೂ ತಲೆ ಕೆಟ್ಟು ಹೋಗುತ್ತಾ ಇದೆ.

ರು – ಅದು ಮಾರ್ಗಾಯಾಸದಿಂದ ನಾನಿರುವಾಗ ತಾವು ಅಷ್ಟು ಆಲೋಚನೆ ಮಾಡಬೇಕೇ? (ದೂರದಲ್ಲಿ ಬಂದೂಕುಗಳ ಶಬ್ದ ಕೇಳಿಬರುವುದು) 

ಸದಾ –     ಇದೇನು ರುದ್ರೇಶ್ವರರೇ? 

ರು –        ಏನೋ? ವಿಚಿತ್ರವಾಗಿದೆಯಲ್ಲಾ? ವಿಚಾರಿಸಿಕೊಂಡು ಬರುತ್ತೇನೆ. ಶತ್ರುಗಳ ಸೈನ್ಯ ಏನಾದರೂ ಬಂದು ಬಿಟ್ಟಿತೋ? (ಹೊರಡುವನು) 

ಸದಾ –     ಶತ್ರುಗಳ ಸೈನ್ಯ! ಈ ಸರಹೊತ್ತಿನಲ್ಲಿ! 

ರುದ್ರ –     (ಹಿಂತಿರುಗಿ) ಭಯಪಡಬೇಕಾಗಿಲ್ಲ. ಶತ್ರುಗಳ ಸೈನ್ಯ ಈ ರಾತ್ರಿ ಬರುವ ಸಂಭವವಿಲ್ಲ. ಲೇಪಾಕ್ಷಿಯ ಜನರು ಬಂದೂಕು ಹೊಡೆದು ನಮಗೆ ಧಿಕ್ಕಾರವನ್ನು ತೋರಿಸುತ್ತಾ ಇದ್ದಾರಂತೆ ಪ್ರಭುಗಳೇ. 

ಸದಾ –     ನಮಗೆ ಧಿಕ್ಕಾರವೇ? ಜನರೆಂದರೇನು? ಗುಂಡು ಹಾರಿಸುವುದೆಂದರೇನು? 

ರುದ್ರ –     ಇದಕ್ಕೆ ನಮ್ಮ ಸೈನ್ಯ ಹೆದರಿ ಓಡಿಹೋಗುತ್ತೆ ಅಂತ ತಿಳಿದುಕೊಂಡರೇನೋ ಪಾಪ.

ಸದಾ –     ನಮ್ಮ ಸೈನ್ಯದ ಮುಂದೆ ಜನರ ಆಟ. ಸೈನ್ಯ ಮೇಲೆ ಬಿದ್ದರೆ ಒಬ್ಬನಾದರೂ ಉಳಿಯುತ್ತಾನೆಯೇ? 

ರುದ್ರ –     ಪ್ರಜೆಗಳ ಶಕ್ತಿಯನ್ನು ಅಷ್ಟು ಹಗುರವಾಗಿ ಲೆಕ್ಕಿಸಬಾರದು ಪ್ರಭುಗಳೇ. ಅವರ ಬೆಂಬಲ ಇರುವುದರಿಂದಲೇ ಸಾಯಂಕಾಲ ಆ ವಿರುಪಣ್ಣ ತಮ್ಮ ಎದುರಿನಲ್ಲೇ ತಮಗಿಂತಲೂ ದೊಡ್ಡ ಧರ್ಮಶಾಸ್ತ್ರ ಕೋವಿದ ತಾನು ಅಂತ ಮಾತಾಡಿದ್ದು. ತಾವು ಆಜ್ಞೆ ಮಾಡಿದರೆ ಅವನು ಯಾವನೇ ಆಗಲಿ ತಲೆ ಬಗ್ಗಿಸಬೇಕೇ ಹೊರತು ತಮ್ಮ ಆಜ್ಞೆಯನ್ನು ಧರ್ಮಶಾಸ್ತ್ರ ಒಪ್ಪವುದಿಲ್ಲ ಅಂತ ತಲಹರಟೆ ಮಾತಾಡುವುದು ತಮಗೆ ತಕ್ಕದ್ದಲ್ಲ. ಇದು ಬೇರೆ ಯಾರಿಗಾದರೂ ಗೊತ್ತಾದರೆ ತಮ್ಮನ್ನು ಅಸಮರ್ಥರು ಅಂತ ಹಿಯಾಳಿಸುತ್ತಾರೆ.

ಸದಾ – ಆಗ ನನ್ನ ಯೋಚನೆ ಇಷ್ಟು ದೂರ ಹೋಗಲೇ ಇಲ್ಲವಲ್ಲಾ ರುದ್ರೇಶ್ವರರೇ!

ರುದ್ರ-      ಅದು ತಮ್ಮ ತಪ್ಪಲ್ಲ ಸ್ವಾಮಿ. ಅವನ ಕಣ್ಣುಗಳ ಪ್ರಭಾವ. 

ಸದಾ-      ಹೌದು, ಆ ಕಣ್ಣುಗಳನ್ನು ನೋಡುತ್ತಾ ಇದ್ದರೆ ಆತನು ಹೇಳಿದ್ದೆಲ್ಲಾ ಸರಿ ಅನ್ನಿಸುತ್ತಾ ಇತ್ತು. 

ರುದ್ರ-      ಆ ಕಣ್ಣುಗಳನ್ನು ಅವನಂಥ ಪಾಪಿಗೆ ಕೊಟ್ಟು ಬ್ರಹ್ಮದೇವನು ಸೃಷ್ಟಿಗೇ ಅಪಕಾರ ಮಾಡಿದ್ದಾನೆ ಸ್ವಾಮೀ. ಅದೇ ಕಣ್ಣುಗಳನ್ನೇ ಒಬ್ಬ ಹೆಂಗಸಿಗೆ ಕೊಟ್ಟಿದ್ದರೆ – ಅಲ್ಲ, ಅಲ್ಲ, ತಮಗೆ ಕೊಟ್ಟಿದ್ದರೆ! ಆಗ ತಮ್ಮನ್ನು ನೋಡಿದ ಕಾಂತೆಯರೆಲ್ಲಾ ತಮ್ಮ ಮೇಲೆ ಮೋಹಗೊಂಡು, ಆಹ್, . . .(ಕಣ್ಣಿನಿಂದ ಸನ್ನೆ ಮಾಡುವನು)        (ಒಬ್ಬ ಸುಂದರಿ ಸದಾಶಿವರಾಯನ ತುಟಿಗೆ ಆಸವದ ಪಾತ್ರೆಯನ್ನಿಡುವಳು. ಅವನು ಕುಡಿಯುತ್ತ ಕುಡಿಯುತ್ತ ನೋಟವನ್ನೆತ್ತಿ ಅವಳ ಮುಖವನ್ನು ನೋಡುವನು. ಅವಳು ನಗುವಳು. ಪಾನಪಾತ್ರೆಯನ್ನು ಹಿಡಿದ ಅವಳ ಕೈಯನ್ನು ತನ್ನ ಕೈಯಿಂದ ಆಚೆ ಜರುಗಿಸುತ್ತ ಸದಾಶಿವರಾಯನು ಒಂದು ಕಡೆಯಿಂದ ಅಲ್ಲಿದ್ದ ಕಾಂತೆಯರನ್ನು ನೋಡುವನು. ಅವನು ತನ್ನನ್ನು ನೋಡಿದ ಕೂಡಲೇ ಒಬ್ಬಳು ನಾಚಿ ಕೈಯಲ್ಲಿದ್ದ ಬೀಸಣಿಗೆಯನ್ನು ತುಟಿಯವರೆಗೂ ಅಡ್ಡವಾಗಿಟ್ಟು ಕೊಳ್ಳುವಳು. ಇನ್ನೊಬ್ಬಳು ತನ್ನ ಕೈಮೇಲಿದ್ದ ಗಿಣಿಗೆ ಪ್ರಭುವನ್ನು ಓರೆ ನೋಟದಿಂದ ತೋರಿಸುವಳು. ವೀಣೆ ಮೀಟುತ್ತಿದ್ದ ಇನ್ನೊಬ್ಬಳು ಪ್ರಭು ತನ್ನನ್ನು ನೋಡಿದ ಕೂಡಲೇ ಸ್ವಲ್ಪ ವೀಣೆ ನುಡಿಸುವಳು. ಇನ್ನೊಬ್ಬ ನಟಿ ಅವನು ತನ್ನನ್ನು ನೋಡಿದ ಕೂಡಲೇ ನಾಟ್ಯವಾಡುವಳು. ಅವಳ ಮುಖ ಹೇಗೆ ಆಡಿದರೆ ಇವನೂ ಹಾಗೆಯೇ ಮುಖವನ್ನಾಡಿಸುವನು) 

ರುದ್ರ-      ಈ ಕಾಮಿನೀ ಸುಖ ವಿಜಯನಗರ ಸಾಮ್ರಾಟರಿಗಲ್ಲದೆ ಬೇರೆಯವರಿಗೆ ಕನಸಿನಲ್ಲಾದರೂ ಲಭಿಸುವುದೇ ಪ್ರಭೂ. ಈ ಸುಖಕ್ಕೆ ಮೂಲ ತಮ್ಮ ಪ್ರಭುತ್ವ. ಅದಕ್ಕೆ ಹಾನಿ ಉಂಟಾದರೆ ಎಲ್ಲಾ ಹೋಯಿತು.

(ನಿಲ್ಲಿಸುವನು)

ಸದಾ – ಹೇಳಿ. ಕೇಳುತ್ತಾ ಇದ್ದೇನೆ.

ರುದ್ರ –     ರಾಜನೇ ಜಗತ್ತಿಗೆ ವಿಷ್ಣು ಅಂತ ತಾನೇ ವೇದ ಶಾಸ್ತ್ರಗಳು ಹೇಳಿರುವುದು. ಅಂಥ ಪ್ರಭುಗಳು ಏನು ಆಜ್ಞೆ ಮಾಡಿದರೆ ಅದೇ ಧರ್ಮ. ಅದಕ್ಕೆ ವಿರೋಧವಾಗಿ ನಡೆದವನನ್ನು ಶಿಕ್ಷಿಸದಿದ್ದರೆ ಪ್ರಭುತ್ವಕ್ಕೇ ಧಕ್ಕೆ. (ನಿಲ್ಲಿಸುವನು) 

ಸದಾ –     ಊ, ಹೇಳಿ. 

ರುದ್ರ-      ತಮ್ಮ ಆಜ್ಞೆಗೆ ಬದಲು ಹೇಳಿ ತಮ್ಮೆದುರಿಗೆ ಅಹಂಕಾರವನ್ನು ತೋರಿಸಿದ ಅಪರಾಧವೊಂದೇ ಸಾಲದೇ ಆ ವಿರುಪಣ್ಣನನ್ನು ಶಿಕ್ಷಿಸುವುದಕ್ಕೆ. ಮೇಲೆ ಪ್ರಜೆಗಳನ್ನೆತ್ತಿಕಟ್ಟಿ ಗುಂಡು ಹಾರಿಸುವಂತೆ ಮಾಡಿರುವುದು ಎರಡನೇ ಅಪರಾಧ. 

ಸದಾ –     ಏನೋ, ಆ ಕಣ್ಣುಗಳನ್ನು ನೋಡುತ್ತಿದ್ದರೆ ಸಾಯಂಕಾಲ ಹಾಗನ್ನಿಸುತ್ತಾ ಇತ್ತು. ಇಲ್ಲಿ ಈ ಕಾಂತೆಯರ ಕಣ್ಣುಗಳನ್ನು ನೋಡುತ್ತಿದ್ದರೆ, ನೀವು ಹೇಳುವುದೇ ಸರಿ ಅನ್ನಿಸುತ್ತಾ ಇದೆ. 

ರುದ್ರ-      ಇನ್ನೊಂದು ವಿಷಯ. ಅವನು ಸಾಯಂಕಾಲ ಹೇಳಿದನಲ್ಲಾ ದೇವಾಲಯ ನನ್ನ ಸ್ವಂತ ಹಣದಿಂದ ಕಟ್ಟಿಸಿದ್ದು ಅಂತ. ಅದು ಎಂಥ ಸ್ವಂತಹಣವೋ ಈ ಲೆಕ್ಕಗಳನ್ನು ತಾವು ಸ್ವಲ್ಪ ನೋಡಿ. ಈ ಲೆಕ್ಕಗಳು ವಿರುಪಣ್ಣನ ಹಿಂದಿನ ಮಂಡಲಾಧೀಶ್ವರರ ಕಾಲದ್ದು. ಈ ಲೆಕ್ಕಗಳು ವಿರುಪಣ್ಣನ ಕಾಲದ್ದು. ಸ್ವಲ್ಪ ತಾವೇ ಈ ವ್ಯತ್ಯಾಸ ಗಮನಿಸಿ. (ಎಂದು ಎರಡು ಲೆಕ್ಕ ಪುಸ್ತಕಗಳನ್ನು ಆತನ ಮುಂದೆ ಇಡುವನು. ಸದಾಶಿವರಾಯನು ಪುಸ್ತಕಗಳನ್ನು ನೋಡುವನು. ಆ ಮೇಲೆ ರುದ್ರಣ್ಣನನ್ನು ನೋಡುವವನು) 

ರುದ್ರ-      ಈಗ ತಮ್ಮ ಗಮನಕ್ಕೆ ಬಂದಿದೆ. ಇವನು ಎಷ್ಟು ಲಕ್ಷಗಳನ್ನು ಲಪಟಾಯಿಸಿದ್ದಾನೆಂದು. ಅದೇನು ಸಣ್ಣ ಕಟ್ಟಡವೇ. ಅದು ದೇವಾಲಯಕ್ಕಿಂತಲೂ ಮಿಗಿಲಾಗಿ ಕೋಟೆ. ಅದರ ಪ್ರಾಕಾರವನ್ನು ಮಧ್ಯಾಹ್ನ ತಮಗೆ ತೋರಿಸಿದೆನಲ್ಲಾ. ಅದು ದೇವಾಲಯದ ಪ್ರಾಕಾರವಿದ್ದ ಹಾಗಿದೆಯೋ, ಕೋಟೆಯ ಪ್ರಾಕಾರವಿದ್ದ ಹಾಗಿದೆಯೋ ತಾವೇ ಹೇಳಿ.

ಸದಾ – ನೀವೇ ಹೇಳಿ. 

ರುದ್ರ –     ಅಂಥ ಕಟ್ಟಡವನ್ನು ಒಬ್ಬ ಮಂಡಲಾಧೀಶ್ವರ ಕಟ್ಟಿಸಿದ್ದಾನೆ ಅಂದರೇನೇ ಗೊತ್ತಾಗುತ್ತೆ ಅವನು ಎಷ್ಟು ಹಣ ಲಪಟಾಯಿಸಿದ್ದಾನೆ ಅಂತ. 

ಸದಾ-      ಈಗ ಏನು ಮಾಡಬೇಕೆಂದಿದ್ದೀರಿ? 

ರುದ್ರ-      ಈ ಪಾಪಕಾಯಕ್ಕೆ ಅವನಿಗೆ ಮರಣದಂಡನೆಯನ್ನು ವಿಧಿಸಿದರೂ ಕಡಿಮೆಯೇ. ಕೊಂದರೆ ಸತ್ತು ಹೋಗುತ್ತಾನೆ. ಅದರಿಂದ ಅವನಿಗೆ ತಾನು ಮಾಡಿದ್ದು ತಪ್ಪು ಅಂತ ಅರಿವಾಗುವುದಿಲ್ಲ. ಅವನ ತಪ್ಪಿಗೆ ಅವನು ಬದುಕಿರೋ ವರೆಗೂ ಕೊರಗುತ್ತಾ ಇರಬೇಕು ಅಂದರೆ ಅವನ ಕಣ್ಣುಗಳನ್ನು ಕೀಳಿಸಬೇಕು. ಅದೇ ರೀತಿಯಾಗಿ ಶಿಕ್ಷಾ ಪತ್ರವನ್ನು ಸಿದ್ಧಮಾಡಿಕೊಂಡು ಬಂದಿದ್ದೇನೆ. (ಶಿಕ್ಷಾಪತ್ರವನ್ನು ಮುಂದಿಡುವನು) ಇದಕ್ಕೆ ತಾವು ಮುದ್ರೆ ಹಾಕಿ. ಉಳಿದಿದ್ದೆಲ್ಲಾ ನಾನು ನೋಡಿಕೊಳ್ಳುತ್ತೇನೆ. 

ಸದಾ-      ಶಿಕ್ಷೆ ವಿಧಿಸುವುದರಲ್ಲೂ ನೀವು ಎಷ್ಟು ಯೋಚನೆ ಮಾಡಿದ್ದೀರಿ? ಎಲ್ಲಿ ನನ್ನ ಮುದ್ರೆ? ನನ್ನ ಬೆರಳಿನ ಉಂಗುರವೇನಾಯಿತು? 

ಒಬ್ಬ ಯುವತಿ- ಪ್ರಭುಗಳೇ ತಾವು ಊಟ ಮಾಡುವಾಗ ನನಗೆ ಕೊಟ್ಟಿದ್ದಿರಲ್ಲಾ. ಇಲ್ಲೇ ಇದೆ. (ಎಂದು ಹೇಳಿ ಬಣ್ಣದಲ್ಲಿ ಒತ್ತಿ ಕೊಡುವಳು ಸದಾಶಿವರಾಯನು ಅವಳನ್ನೇ ನೋಡುತ್ತ ಮುದ್ರೆಯನ್ನೊತ್ತುವನು) 

ರುದ್ರ-      (ಶಿಕ್ಷಾಪತ್ರವನ್ನು ತೆಗೆದುಕೊಂಡು) ಧರ್ಮಪ್ರಭುಗಳು. ರಾಜನೀತಿಪಾರಂಗತರು. ತಮಗೆ ಸದಾ ಜಯವಾಗಲಿ. ದ್ರೋಹಿಗಳ ತುಂಟಾಟಗಳು ನಿಲ್ಲಲಿ. ತಾವು ಸುಖ ನಿದ್ರೆಯನ್ನು ಮಾಡಿ. (ಎಂದು ಹೇಳುತ್ತಾ ಹೊರಡುವನು). 

                                   ದೃಶ್ಯ -3 

(ದೇವಾಲಯದಲ್ಲಿ ವಿರುಪಣ್ಣ ಮತ್ತು ವೀರಣ್ಣ ನಿಂತುಕೊಂಡು ಶಿಲ್ಪಗಳನ್ನು ನೋಡುತ್ತಿರುವರು) 

ವಿರು-       ಇಲ್ಲಿ ಬಾ ತಮ್ಮಾ, ವೀರಣ್ಣಾ, ಈ ಶಿಲ್ಪಗಳನ್ನು ನೋಡು. (ಗಾಯಗೊಂಡ ಪ್ರಜೆಗಳು ಪ್ರವೇಶಿಸುವರು) 

ವಿರು-       ಏನಿದು? ಬಟ್ಟೆಗಳಿಗೆಲ್ಲಾ ರಕ್ತವಾಗಿದೆಯಲ್ಲಾ? ಏನಪ್ಪಾ ಇದು! 

ಪ್ರಜೆಗಳ ಮುಖಂಡ – ಏನು ಹೇಳುವುದು ಪ್ರಭುಗಳೇ. ಅರ್ಧರಾತ್ರಿಯಲ್ಲಿ ಸೈನಿಕರು ಲೇಪಾಕ್ಷಿ ಒಳಕ್ಕೆ ಬಂದು ನಿದ್ರೆ ಹೋಗುತ್ತಿದ್ದವರ ಮೇಲೆ ಗುಂಡು ಹಾರಿಸಿದರು. ಇವರಿಗೆಲ್ಲಾ ಗಾಯಗಳಾಗಿವೆ ನೋಡಿ. 

ವಿರು-       ಯಾರಿಗೂ ಪ್ರಾಣಾಪಾಯವಿಲ್ಲವೆ? 

ಮುಖಂಡ  – ಇಲ್ಲ ಸ್ವಾಮೀ. 

ವೀರಣ್ಣ     –      ಎಂಥ ಅನ್ಯಾಯ? 

ಮುಖಂಡ –       ನಿರಪರಾಧಿಗಳಾದ ಪ್ರಜೆಗಳನ್ನು ಹಿಂಸೆ ಮಾಡುವ ರಾಜನಿಗೆ ನಾವು ತಲೆ ಬಗ್ಗಿಸಿಕೊಂಡಿರುವುದು ಹೇಗೆ ಪ್ರಭುಗಳೇ? ನಾವೆಲ್ಲಾ ದಂಗೆ ಎದ್ದರೆ ಗೊತ್ತಾಗುತ್ತೆ ನಮ್ಮ ಶಕ್ತಿ. 

ವಿರು –      ಏಕೆ ಅಷ್ಟು ದುಡುಕುತ್ತೀರಪ್ಪಾ? ಈಗ ನಿಮ್ಮ ತಾಳ್ಮೆಗೂ ರಾಜಭಕ್ತಿಗೂ ಪರೀಕ್ಷೆಯ ಸಮಯ ಬಂದಿದೆ. ನೀವೇನಾದರೂ ಆವೇಶ ತೋರಿಸಿದರೆ ಆಯಿತು. ದೊಡ್ಡ ವಿಪತ್ತು ಬರುತ್ತೆ ನಮಗೆಲಾ ರುದ್ರಣ್ಣ ಕೆಟ್ಟ ಬುದ್ಧಿಯಿಂದ ನಿಮಗೆ ಕೇಡು ಮಾಡುತ್ತಿದ್ದಾನೆ. ಆದರೆ ಆತನ ಮೇಲೆ ಸಮ್ರಾಟರಿಗೆ ಅಧಿಕಾರವಿಲ್ಲವೇ? 

ವೀರಣ್ಣ –   ಸಮ್ರಾಟರು ಇಲ್ಲಿಗೆ ಬಂದಿರುವ ಅವಕಾಶ ತೆಗೆದುಕೊಂಡು ನಾವು ಹೇಗಾದರೂ ರುದ್ರಣ್ಣನಿಗೆ ಬುದ್ಧಿ ಕಲಿಸಬೇಕು. 

ಮುಖಂಡ- ಸಮ್ರಾಟರು ರುದ್ರಣ್ಣನ ಕೈಗೊಂಬೆ ಆಗದಿದ್ದರೆ ಆತನಿಗೆ ಅಧಿಕಾರ ಸಿಕ್ಕುತ್ತಿತ್ತೇ ಪ್ರಭುಗಳೇ? 

ವಿರು – ನಿನ್ನೆ ನಾನು ನೋಡಿದ್ದೆನಲ್ಲಾ. ಸಮ್ರಾಟರು ಅಂಥ ಶಕ್ತಿಹೀನರೇನಲ್ಲ. ಆವರು ಸ್ವತಃ ಒಳ್ಳೆಯವರು. ಧರ್ಮದ ಮರ್ಯಾದೆ ಅವರಿಗೆ ಗೊತ್ತು. ಆದರೆ ರುದ್ರಣ್ಣ, ನಾವೂ ಪ್ರಜೆಗಳೂ ಸಮ್ರಾಟರನ್ನು ದ್ವೇಷಿಸುತ್ತಿದ್ದೀವಿ ಅಂತ ಸುಳ್ಳು ಹೇಳಿ ಅವರ ಮನಸ್ಸನ್ನು ಕೆಡಿಸಿದ್ದಾನೆ.

ಮುಖಂಡ- ಹೌದು ಸ್ವಾಮೀ. ನಾವಿದನ್ನು ಹೇಗೆ ಸರಿಪಡಿಸುವುದು? 

ವಿರು –      ಅದಕ್ಕೇ ನಾನು ಹೇಳುತ್ತಿರುವುದು. ನೀವು ಸ್ವಲ್ಪವಾದರೂ ಪ್ರತಿಭಟನೆ ತೋರಿಸಿದರೆ ಸಮ್ರಾಟರು ರುದ್ರಣ್ಣ ಹೇಳುವುದೆಲ್ಲಾ ಸತ್ಯ ಅಂತ ನಂಬಿಬಿಟ್ಟು ನಿಮಗೆ ಇನ್ನೂ ತೊಂದರೆ ಕೊಡುತ್ತಾರೆ. ಆಗ ನಿಮಗೆ ತಡೆಯುವುದಕ್ಕಾಗುವುದಿಲ್ಲ. ಯುದ್ಧಗಳಾಗುತ್ತವೆ. ಇದರಿಂದ ಎಷ್ಟು ಕಷ್ಟ ಮತ್ತು ನಷ್ಟ? ಯುದ್ಧಗಳ ಜ್ವಾಲೆಗೆ ಈ ದೇವಾಲಯ ಮತ್ತು ಈ ಶಿಲ್ಪಗಳು ಆಹುತಿ ಆದರೂ ಆಗಬಹುದು.

ವೀರಣ್ಣ-    ಅಣ್ಣನವರು ದೂರಾಲೋಚನೆ ಮಾಡಿ ಹೇಳುತ್ತಿದ್ದಾರೆ ಕೇಳಿ. 

ಮುಖಂಡ- ಅವರ ಮಾತಿನಂತೆಯೇ ನಡೆಯುತ್ತೇವೆ ಸ್ವಾಮಿ. ಅದಕ್ಕೇ ತಾನೇ ನಾವಿಲ್ಲಿಗೆ ಬಂದದ್ದು. 

ವಿರು-       ವೀರಣ್ಣನನ್ನು, ಶಿಲ್ಪಿಬ್ರಹ್ಮನನ್ನು ಜತೆಯಲ್ಲಿ ಕರೆದುಕೊಂಡು ಹೋಗಿ ನೀವೆಲ್ಲರೂ ಸಮ್ರಾಟರ ದರ್ಶನ ಪಡೆಯಿರಿ. ಅವರನ್ನು ದೇವಾಲಯದ ಶಿಲ್ಪಗಳನ್ನು ನೋಡುವುದಕ್ಕೆ ಆಹ್ವಾನಿಸಿ. ಮೇಳತಾಳಗಳೊಂದಿಗೆ ಹೋಗಿ. 

ಮುಖಂಡ- ತಾವು ಹೇಳುವುದು ಬಹಳ ಒಳ್ಳೆಯದು. ಹಾಗೆಯೇ ಮಾಡುತ್ತೇವೆ. 

ವಿರು-              ಘಾಯಗಳಾಗಿರುವ ಇವರನ್ನು ಕರೆದುಕೊಂಡು ಹೋಗಿ. ಆದರೆ ಈ ಘಾಯಗಳೂ, ರಕ್ತ, ಒಂದೂ ಅವರಿಗೆ ಕಾಣಿಸಬಾರದು. ಸಮಯ ಬಂದರೆ ಅವರಿಗೆ ತೋರಿಸಿ ಅಷ್ಟೇ. 

ಮುಖಂಡ- ಹಾಗೇ ಮಾಡುತ್ತೇವೆ ಪ್ರಭುಗಳೇ. (ಪ್ರಜೆಗಳು ಹೊರಡುವರು)                                              

                                    ದೃಷ್ಯ – 4

                           (ಶಿಬಿರದ ಒಂದು ಭಾಗದಲ್ಲಿ)

ರುದ್ರಣ್ಣ-    ಹಹಹಹ. ನನ್ನ ಬಲೆಗೆ ಬೀಳದೇ ಇರುತ್ತಾ ಆ ಮಾಯಾಮೃಗ? ಅವನ ಆ ಕಣ್ಣುಗಳನ್ನು ಕೀಳಿಸಿಬಿಟ್ಟರೆ ನನ್ನ ಸಂಕಲ್ಪ ಪೂರ್ತಿ ನೆರವೇರಿದ ಹಾಗೆಯೇ. ಆಮೇಲೆ ಈ ಸಮ್ರಾಟನನ್ನೂ ಇಲ್ಲಿಂದ ತೊಲಗಿಸಿಕೊಂಡರೆ 

ಆಯಿತು. (ಇಬ್ಬರು ಆಳುಗಳು ಪ್ರವೇಶಿಸುವರು) 

ಆಳುಗಳು- ಪ್ರಭುಗಳಿಗೆ ನಮಸ್ಕಾರ. 

1ನೇ ಆಳು-      ನಾವೇನು ಕೆಲಸ ಮಾಡಬೇಕು ಸ್ವಾಮಿ. 

ರುದ್ರ –     ಎಲಾ, ನೀನೇನೇನೋ ರಾತ್ರಿ ಕುದುರೆ ಸಾಕುವವನ ವೇಷ ಹಾಕಿಕೊಂಡು ಬಂದಿದ್ದು? 

1ನೇ ಆಳು-      ಹೌದು, ಹೌದು ನಾನು ಆಟ ಚೆನ್ನಾಗಿ ಆಡಿದೆನಲ್ಲಾ ಸ್ವಾಮೀ? 

ರುದ್ರ –  ಛೀ. ಏನು ಆಡಿದೆ? ನನ್ನ ತಲೆಗೆ ತಂದಿದ್ದೆ. ದೊಡ್ಡವರು “ಲೇಪಾಕ್ಷಿಯ ಪ್ರಜೆಗಳು ನಿನಗೇನು ಮಾಡಿದರು” ಅಂತ ಕೇಳಿದರೆ “ಏನೂ ಮಾಡಲಿಲ್ಲ ಪ್ರಭುಗಳೇ ಅಂತ ಹೇಳಿ ಬಿಟ್ಟೆಯಲ್ಲಾ ನಾನು ಹೇಳಿಕೊಟ್ಟಿದ್ದು ಹಾಗೇನೇನೋ? ನಾನಲ್ಲಿದ್ದಿದ್ದರಿಂದ ಸರಿಮಾಡಿಕೊಂಡೆ. 

1ನೇ ಆಳು- ತಾವು ಪ್ರಭುಗಳು ಹಾಗೆ ಕೇಳುತ್ತಾರೆ ಅಂತ ಹೇಳಿಕೊಟ್ಟಿರಲಿಲ್ಲ ಸ್ವಾಮೀ. 

ರುದ್ರ –     ಬುದ್ಧಿ ಹೀನಾ. 

2ನೇ ಆಳು – ನಾನು ಆನೆ ಸಾಕುವವನಂತೆ ನಾಟಕ ಚೆನ್ನಾಗಿ ಆಡಿದೆನಲ್ಲಾ ಸ್ವಾಮೀ. 

ರುದ್ರ –     ನಿನ್ನ ಮುಖ. ಅದು ಹೋಗಲಿ ಬಿಡಿ. ಈಗ ನೋಡಿ, ನೀವಿಬ್ಬರೂ ಹೋಗಿ ವಿರುಪಣ್ಣನ ಕಣ್ಣುಗಳನ್ನು ಕಿತ್ತು ಬಿಟ್ಟು ಬರಬೇಕು.

ಆಳುಗಳು – ಅಪ್ಪಣೆ ಸ್ವಾಮಿ?

ರು – (ಶಿಕ್ಷಾಪತ್ರವನ್ನು ತೂರಿಸಿ) ಇದೇನು ಗೊತ್ತೇನೋ?

1ನೇ ಆಳು – ಗೊತ್ತು ಸ್ವಾಮೀ. ಶಿಕ್ಷಾಪತ್ರ. ತಾವು ಇದಕ್ಕೇ ತಾನೇ ದೊಡ್ಡವರ ಮುದ್ರೆ ಒತ್ತಿಸಿಕೊಂಡಿದ್ದು ರಾತ್ರಿ.

ರುದ್ರ –     ಇದು ನಿನಗೆ ಹೇಗೆ ತಿಳಿಯಿತೋ? 

1ನೇ ಆಳು –     ಸ್ವಾಮೀ, ನಾವಿಬ್ಬರೂ ಡೇರಾ ಸಂದಿನಿಂದ ನೀವು ಆಡ್ತಾ ಇದ್ದ ನಾಟಕ ಎಲ್ಲಾ ನೋಡ್ತಾನೇ ಇದ್ದೆವು ಸ್ವಾಮೀ. 

ರುದ್ರ –     ಎಂಥ ಘಾಟಿಗಳೋ ನೀವು? ಹೋಗಲಿ. ಹೊತ್ತಾಗುತ್ತೆ. ಇದನ್ನೆಲ್ಲಾ ಯಾರಿಗೂ ತಿಳಿಸಬಾರದು. ನೀವಿಬ್ಬರೂ ಗುಟ್ಟಾಗಿ ದೇವಾಲಯಕ್ಕೆ ಹೋಗಿ ವಿರುಪಣ್ಣನನ್ನು ಬಲವಾಗಿ ಹಿಡಿದು ಈ ಶಿಕ್ಷಾಪತ್ರವನ್ನವನಿಗೆ ತೋರಿಸಿ ಅವನ ಎರಡು ಕಣ್ಣುಗಳನ್ನು ಕಿತ್ತು ಬಂದುಬಿಡಬೇಕು. ತಕೊಳ್ಳಿ ಶಿಕ್ಷಾಪತ್ರವನ್ನು. (ಶಿಕ್ಷಾಪತ್ರ ಕೊಡುವನು) 

ಆಳುಗಳು- ಹಾಗೇ ಮಾಡ್ತೀವಿ ಸ್ವಾಮೀ (ಹೊರಡುವರು) 

ರುದ್ರ –     ಸ್ವಲ್ಪ ಕೇಳಿರೋ – ಕಣ್ಣುಗಳು ಕೀಳೋದಕ್ಕೆ ಶಸ್ತ್ರಗಳನ್ನೂ ಯಾರಾದರು ಅಡ್ಡ ಬಂದರೆ ಹೆದರಿಸುವುದಕ್ಕೆ ಆಯುಧಗಳನ್ನೂ ತೆಗೆದುಕೊಂಡು ಹೋಗಿ. 

2ನೇ ಆಳು –     ಇದೇನು ನಮಗೆ ಹೊಸದಾ ಸ್ವಾಮೀ. 

ರುದ್ರ –     ಈಗ ದೇವಾಲಯದಲ್ಲಿ ವಿರುಪಣ್ಣ ಒಬ್ಬನೇ ಇದ್ದಾನೆ ವೀರಣ್ಣಾ, ಶಿಲ್ಪಿ ಇಲ್ಲಿ ಬಂದು ಸಮ್ರಾಟರ ಭೇಟಿಗಾಗಿ ಕಾದಿದ್ದಾರೆ. ಅವರು ಹಿಂತಿರುಗಿ ಹೋಗುವಷ್ಟರೊಳಗೆ ನಿಮ್ಮ ಕೆಲಸ ಮುಗಿಯಬೇಕು. 

1ನೇ ಆಳು-      ಅಪ್ಪಣೆ ಸ್ವಾಮೀ. 

ರುದ್ರ –     (ಹಣದ ಚೀಲ ತೋರಿಸಿ) ಈ ಕೆಲಸ ಮಾಡಿ ಬಂದರೆ ನಿಮಗೆ ಈ ಚೀಲ. ಇದರಲ್ಲಿ ನೂರು ವರಹಗಳಿವೆ. 

ಆಳುಗಳು- ನೂರು ವರಹಗಳು! 

ರುದ್ರ –     ಹೊರಡಿ ಬೇಗ. (ಆಳುಗಳು ಹೊರಟು ಹಿಂತಿರುಗಿ ಬರುವರು) 

ರುದ್ರ –     ಏನೋ ವಾಪಸು ಬಂದಿರಿ. 

2ನೇ ಆಳು –     ಸ್ವಾಮೀ ದೇವಾಲಯದಲ್ಲಿ ಗಂಡಸರೇನೋ ಯಾರೂ ಇರೋದಿಲ್ಲ ಅಂತ ತಾವು ಹೇಳಿದಿರಿ. ಹೆಂಗಸಿರಬಹುದಲ್ಲಾ.

ರು –  ಹೆಂಗಸರಿದ್ದರೆ ನಿಮಗೇನೋ? ಹೇಡಿಗಳಿರಾ. ಅವರ ಕಣ್ಣಿಗೂ ಬೀಳದೇ ಬಚ್ಚಿಟ್ಟುಕೊಂಡು ಹೋಗಿ( ಆಳುಗಳು ಹೊರಡುವರು).

ರುದ್ರ –     ಸ್ವಲ್ಪ ಇಲ್ಲಿ ಬನ್ನಿರೋ. (ಪುನಃ ಭಟರು ಪ್ರವೇಶಿಸುವರು) 

ರುದ್ರ –     ಆ ವಿರುಪಣ್ಣನ ಕಣ್ಣುಗಳ ಎದುರಿಗೆ ಮಾತ್ರ ಹೋಗಬೇಡಿ. ಆ ಕಣ್ಣುಗಳಲ್ಲಿ ಇಂದ್ರಜಾಲವಿದೆ. ನೀವು ವಿರುಪಣ್ಣನನ್ನು ಹಿಂದುಗಡೆಯಿಂದ ಹೋಗಿ ಹಿಡಿಯಬೇಕು. ಹೊಂಚಿಕೊಂಡು ಹೊಂಚಿಕೊಂಡು ಹಿಂದುಗಡೆಯಿಂದ ಹೋಗಿ. ಓಡಿ. 

ಆಳು –     ಅಪ್ಪಣೆ ಸ್ವಾಮೀ (ಎಂದು ಓಡುವರು) 

                              ಅಂಕ – 5 ದೃಶ್ಯ -1

(ದೇವಾಲಯದಲ್ಲಿ ವಿರುಪಣ್ಣನೊಬ್ಬನೇ ಧ್ಯಾನದಲ್ಲಿ ಕುಳಿತಿರುವನು. ಹಿಂದುಗಡೆಯಿಂದ ಇಬ್ಬರು ಭಟರೂ ಹೊಂಚಿಕೊಂಡು ಹೊಂಚಿಕೊಂಡು ಬಂದು ಆತನ ಎರಡು ತೋಳುಗಳನ್ನೂ ಹಿಡಿದುಕೊಳ್ಳುವರು) 

ವಿರು –      (ಕಣ್ಣುಮುಚ್ಚಿಕೊಂಡೇ) ಪರಮೇಶ್ವರಾ. ಸೃಷ್ಟಿಯಲ್ಲಿನ ಎಲ್ಲ ಮುಖಗಳೂ, ತಲೆಗಳೂ, ಕೈಗಳೂ, ಕಾಲುಗಳೂ, ಎಲ್ಲಾ ನಿನ್ನವೇ ಅಲ್ಲವೇ? ನೀನೇ ಅಲ್ಲವೇ ನನ್ನ ತೋಳುಗಳನ್ನು ಹಿಡಿದುಕೊಂಡು ಮೇಲಕ್ಕೆಬ್ಬಿಸುತ್ತಿರುವುದು? ನನ್ನನ್ನುದ್ಧಾರ ಮಾಡಲು ಕರುಣೆಯಿಂದ ಎಷ್ಟು ಬೇಗನೆ ಓಡಿಬಂದೆ? (ಎಂದು ಹೇಳುತ್ತ ಮೇಲಕ್ಕೆದ್ದು ನಿಂತುಕೊಳ್ಳುವನು. ಕಣ್ಣುಬಿಟ್ಟು ಇಬ್ಬರನ್ನೂ ನೋಡುವನು. ಆಳುಗಳ ಕೈಗಳು ಸಡಿಲವಾಗಿ ಅವರು ದೂರ ಸರಿಯುವರು) 

ವಿರು –      ಯಾರು ತಮ್ಮಂದಿರೇ ನೀವು? ಏಕೆ ದೂರ ಸರಿಯುತ್ತಿದ್ದೀರಿ? ಹತ್ತಿರಕ್ಕೆ ಬನ್ನಿ. (ಆಳುಗಳು ಹತ್ತಿರಕ್ಕೆ ಬರುವರು) 

ವಿರು –      (ಆಳುಗಳ ಹೆಗಲ ಮೇಲೆ ಕೈ ಹಾಕಿ)  ತಮ್ಮಂದಿರೇ, ಈ ಪವಿತ್ರವಾದ ದೇವಾಲಯಕ್ಕೆ ಬಂದು ನೀವು ಏಕೆ ಹೆದರುತ್ತಿದ್ದೀರಿ? ಇಲ್ಲಿನ ಈ ಶಿಲ್ಪಿಗಳೂ ಚಿತ್ರಗಳೂ ಎಷ್ಟು ಅಂದವಾಗಿವೆ ನೋಡಿ. ಇವೆಲ್ಲಾ ನಿಮಗಾಗಿಯೇ ಇರುವುದು. ಹೀಗೆ ಬನ್ನಿ. ಇವನ್ನೆಲ್ಲಾ ಒಂದೊಂದಾಗಿ ನಿಮಗೆ ತೋರಿಸುತ್ತೇನೆ.

( ಹೊರಡುವರು. ರಂಗ ಬದಲಾಗುವುದು. ಪುನಃ ಪ್ರವೇಶಿಸುವರು)

ವಿರು –      ಎಲ್ಲಾ ನೋಡಿದಿರಾ, ತಮ್ಮಂದಿರೇ? (ಇಬ್ಬರು ಭಟರೂ ಗಡಗಡ ನಡುಗುತ್ತ ವಿರುಪಣ್ಣನ ಪಾದಗಳ ಮೇಲೆ ಬೀಳುವರು) 

ಭಟರು –   ಸ್ವಾಮೀ, ನಮ್ಮ ತಪ್ಪನ್ನು ಕ್ಷಮಿಸಿ. ಸ್ವಾಮೀ ನಮ್ಮನ್ನು ಕಾಪಾಡಿ (ಎಂದು ಹೊರಳುತ್ತ ಮೊರೆಯಿಡುವರು) 

ವಿರು –      (ಆಶ್ಚರ್ಯದಿಂದ) ಇದೇನಪ್ಪಾ ಹೀಗಾಡ್ತೀರಿ? ಮೇಲಕ್ಕೇಳಿ. (ಎಂದು ಇಬ್ಬರನ್ನೂ ಎಬ್ಬಿಸಿ) ಏನು ಸಮಾಚಾರ? ಹೆದರದೆ ಹೇಳಿ.

1ನೇ ಭಟ –      ಇದೆಲ್ಲಾ ಆ ರುದ್ರಣ್ಣ ಮಾಡಿರೋ ಮೋಸ ಸ್ವಾಮೀ. ದೇವರಂಥ ನಿಮ್ಮ ಕಣ್ಣುಗಳನ್ನು ಕೀಳಿಸಬೇಕೂಂತ ಶಿಕ್ಷಾಪತ್ರಕ್ಕೆ ದೊಡ್ಡವರಿಂದ ಮುದ್ರೆ ಒತ್ತಿಸಿಕೊಂಡಿದ್ದಾನೆ ಸ್ವಾಮಿ. ಇದೋ ನೋಡಿ. 

ವಿರು –      (ಶಿಕ್ಷಾಪತ್ರವನ್ನು ಓದಿಕೊಂಡು – ನಕ್ಕು) ದೊಡ್ಡಪ್ರಭುಗಳು ಬಹಳ ಒಳ್ಳೆಯವರು. ಮೋಸವಿಲ್ಲದಿದ್ದರೆ ಇಂಥ ಆಜ್ಞೆಗೆ ಮುದ್ರೆ ಒತ್ತುತ್ತಿದ್ದರೇ? ಈ ಮುದ್ರೆಯನ್ನು ಅವರೇ ಒತ್ತಿದರೋ ಅಥವಾ ಇದರಲ್ಲೂ ಮೋಸವಿದೆಯೋ? 

2ನೇ ಭಟ –      ಅವರೇ ಒತ್ತಿದರು ಸ್ವಾಮೀ. ನಾವು ಡೇರಾ ಸಂದಿನಿಂದ ನೋಡ್ತಾನೇ ಇದ್ದೆವು. ನಿನ್ನೆ ಅರ್ಧರಾತ್ರಿಯಲ್ಲಿ ರುದ್ರಣ್ಣ ಏನೇನೋ ಚಾಡೀ ಹೇಳಿ ಇದಕ್ಕೆ ದೊಡ್ಡವರ ಮುದ್ರೆ ಒತ್ತಿಸಿಕೊಂಡ. 

ವಿರು –      ಆತನ ಆಪಾದನೆಗಳಿಗೆಲ್ಲಾ ನಾನು ನಿನ್ನೆ ಸಾಯಂಕಾಲವೇ ಉತ್ತರ ಕೊಟ್ಟಿದ್ದೆನಲ್ಲಾ. ಇನ್ನೇನು ಚಾಡೀ ಹೇಳಿದನೋ? 

1ನೇ ಭಟ – ಸ್ವಾಮಿ, ನೀವು ಸಾಯಂಕಾಲ ದೊಡ್ಡವರ ಆಜ್ಞೆ ಧರ್ಮವಾದ್ದಲ್ಲ ಅಂತ ಧಿಕ್ಕಾರ ಮಾಡಿದಿರಂತೆ. ಅಹಂಕಾರ ತೋರಿಸಿದಿರಂತೆ. 

ವಿರು –      ಹಾಗೋ? ಆಮೇಲೆ? 

2ನೇ ಭಟ –      ಲೇಪಾಕ್ಷಿಯ ಜನರು ರಾತ್ರಿ ಗುಂಡುಹಾರಿಸಿ ಧಿಕ್ಕಾರ ತೋರಿಸುವಂತೆ ಮಾಡಿದಿರಂತೆ. 

ವಿರು –      ಹಾಗೋ? ಆಮೇಲೆ? 

1ನೇ ಭಟ – ನೀವು ದೊಡ್ಡವರ ಧನವೆಲ್ಲಾ ಲಪಟಾಯಿಸಿ ಈ ದೇವಾಲಯವನ್ನು ಕಟ್ಟಿಸಿದ್ದೀರಂತೆ.

ವಿರು – ಅರರೇ! ಅದೂನಾ. 

1ನೇ ಭಟ –      ಆ ಶಿಕ್ಷಾಪತ್ರವನ್ನು ಚೂರುಚೂರಾಗಿ ಹರಿದು ಬಿಡಿ ಸ್ವಾಮೀ. ಮೋಸದ್ದು. ಅನ್ಯಾಯದ್ದು. 

ವಿರು –      ಹಾಗೆ ದುಡುಕುವುದಕ್ಕಾಗುತ್ತೇನಪ್ಪಾ. ಪ್ರಭುಗಳ ಆಜ್ಞೆಯನ್ನು ಅಷ್ಟು ಸುಲಭವಾಗಿ ಹೀಂಕಾರ ಮಾಡುವುದಕ್ಕಾಗುತ್ತೇನಪ್ಪಾ? 

2ನೇ ಭಟ –      ಬಿಡಿಸ್ವಾಮೀ. ಇದೆಲ್ಲಾ ರುದ್ರಣ್ಣನ ಆಟ. ಎಷ್ಟು ದಿನ ನಡೀತದೆ. ಈವತ್ತೋ ನಾಳೇನೋ ಎಲ್ಲಾ ಬಯಲಾದರೆ ಆತನಿಗೇ ಅಪಾಯ. 

ವಿರು –      (ಆಲೋಚಿಸಿ) ನೀವು ಒಂದು ಕೆಲಸ ಮಾಡ್ತೀರಾ. 

1ನೇ ಭಟ –      ನೀವು ಏನು ಹೇಳಿದರೂ ಮಾಡ್ತೀವಿ ಸ್ವಾಮೀ. 

ವಿರು –      ನಾನು ದೊಡ್ಡ ಪ್ರಭುಗಳಿಗೆ ಒಂದು ಪತ್ರ ಬರೆದುಕೊಡುತ್ತೇನೆ. ಅದನ್ನು ರುದ್ರಣ್ಣನ ಕೈಗೆ ಸಿಗದಂತೆ ದೊಡ್ಡ ಸ್ವಾಮಿಗಳಿಗೆ ಕೊಡಬೇಕು. ಅದರ ಜೊತೆಗೆ ಈ ಶಿಕ್ಷಾಪತ್ರವನ್ನು ಭದ್ರವಾಗಿ ತೆಗೆದುಕೊಂಡು ಹೋಗಿ ಅವರ ಕೈಗೇ ಕೊಡಬೇಕು. 

2ನೇ ಭಟ –      ಇದೇನು ದೊಡ್ಡ ಕೆಲಸ ಸ್ವಾಮೀ. (ವಿರುಪಣ್ಣ ಹೊರಡುವನು) 

1ನೇ ಭಟ –      ಏನೋ, ಈ ಶಿಲ್ಪಗಳೂ, ಈ ಚಿತ್ರಗಳೂ, ನೋಡ್ತಾ ಇದ್ದರೆ  ನಾವು ಇಂದ್ರಲೋಕದಲ್ಲಿದ್ದೀವಾ ಅನ್ನಿಸುತ್ತೆ. 

2ನೇ ಭಟ –      ಹೌದೋ. ಯಾವಾಗಲೂ ಇಲ್ಲೇ ಈ ಸ್ವಾಮಿಗಳ ಜತೆಯಲ್ಲೇ ಇರೋಣ ಅನ್ನಿಸುತ್ತೆ. (ವಿರುಪಣ್ಣ ಪ್ರವೇಶಿಸುವನು) 

ವಿರು –      ಈ ಪತ್ರವನ್ನು ಈ ಶಿಕ್ಷಾಪತ್ರವನ್ನು ನಾನು ಹೇಳಿದಂತೆ ದೊಡ್ಡ ಪ್ರಭುಗಳಿಗೆ ನೀವೇ ಖುದ್ದಾಗಿ ಕೊಡಬೇಕು. ಇನ್ನಾರ ಕೈಗೂ ಸಿಗಬಾರದು. 

1ನೇ ಭಟ –      ಹಾಗೇ ಮಾಡ್ತೀನಿ ಸ್ವಾಮೀ. ಇಷ್ಟಾದರೂ ಮಾಡಿ ನಮ್ಮ ಪಾಪ ಕಳೆದುಕೊಳ್ತೀವಿ.(ಹೊರಡುವರು)

                                   ದೃಶ್ಯ- 2

(ಶಿಬಿರದಲ್ಲಿ ಆಸ್ಥಾನ – ಸದಾಶಿವರಾಯ, ರುದ್ರಣ್ಣ, ಇಬ್ಬರು ಬ್ರಾಹ್ಮಣರು ಮತ್ತಿತರರು ಆಸನಗಳ ಮೇಲೆ ಕುಳಿತಿರುವರು. ವೀರಣ್ಣ ಶಿಲ್ಪಿಬ್ರಹ್ಮ ಮತ್ತು ಪ್ರಜೆಗಳೂ ನಿಂತುಕೊಂಡಿರುವರು) 

ಸದಾ –     ರುದ್ರೇಶ್ವರರೇ, ಈ ವೀರಣ್ಣನೂ, ಶಿಲ್ಪಿಯು, ದೇವಾಲಯದಲ್ಲಿನ ಶಿಲ್ಪಗಳನ್ನೂ ಇಷ್ಟು ಹೊತ್ತು ವರ್ಣಿಸಿದ್ದರಿಂದ ಅವು ಚೆನ್ನಾಗಿರಬೇಕೆಂದೇ ಕಾಣುತ್ತೆ. ನಾವು ಹೋಗಿ ನೋಡಬಹುದಲ್ಲಾ.

ರುದ್ರ –     ತಮ್ಮ ವಿಜಯನಗರದ ಶಿಲ್ಪಗಳ ಮುಂದೆ ಇವರ ಶಿಲ್ಪಗಳೆಂಥಹವು ಸ್ವಾಮೀ? ದೇವಾಲಯವನ್ನು ದೊಡ್ಡದಾಗಿ ಕೋಟೆ ಕಟ್ಟಿದ ಹಾಗೆ ಕಟ್ಟಿಕೊಂಡಿದ್ದಾರೆ ಇವರು ಅಷ್ಟೇ. ತಾವಿಲ್ಲಿಗೆ ಬಂದ ಕಾರ್ಯ

ಮುಗಿಯಿತು. ತಾವು ಇಲ್ಲಿನ ಪರಿಸ್ಥಿತಿಗಳನ್ನು ಖುದ್ದಾಗಿ ಗಮನಿಸಿದ್ದಾಯಿತು. ನಮ್ಮ ಸೈನ್ಯವನ್ನಿಲ್ಲೇ ಇಟ್ಟು ನಾವಿನ್ನು ಘನಗಿರಿಗೆ ಹಿಂತಿರುಗೋಣ. ಅಲ್ಲಿ ತಾವು ವಿಶ್ವಾಂತಿ ತೆಗೆದುಕೊಳ್ಳಬಹುದು. ಇವರು ತಮ್ಮನ್ನು ಕರೆಯುತ್ತಿರುವ ಉದ್ದೇಶವನ್ನು ತಿಳಿದುಕೊಳ್ಳದೇ ದೇವಾಲಯಕ್ಕೆ ಹೋಗುವುದು ಸರಿಯಲ್ಲ ಪ್ರಭುಗಳೇ. 

ಸದಾ –     ವೀರಣ್ಣಾ, ಈಗ ದೇವಾಲಯಕ್ಕೆ ಬರುವುದಕ್ಕಾಗುವುದಿಲ್ಲ.ನಾವು ಕೂಡಲೇ ಘನಗಿರಿಗೆ ಪ್ರಯಾಣ ಮಾಡಬೇಕು. 

ವೀರ –     ತಾವು ಬಂದು ದೇವಾಲಯವನ್ನು ನೋಡುತ್ತೀರೆಂದು ನಾವೂ ಈ  ಪ್ರಜೆಗಳೂ ಎಷ್ಟೋ ಆಸೆ ಇಟ್ಟುಕೊಂಡಿದ್ದೆವು ಪ್ರಭುಗಳೇ. ತಾವು ಬಂದು ನೋಡಿದರೆ ತಾನೆ ನಮ್ಮ ಇಷ್ಟು ವರ್ಷಗಳ ಪ್ರಯತ್ನವೂ ಸಫಲವಾಗುವುದು. 

ಸದಾ –     ಈಗ ಆಗುವುದಿಲ್ಲ ವೀರಣ್ಣಾ. 

ಶಿಲ್ಪಿ ಬ್ರಹ್ಮ – ನಾವೆಲ್ಲಾ ನಿರಾಶೆಯಿಂದ ಹಿಂತಿರುಗಲೇ ಬೇಕೇ ಪ್ರಭುಗಳೇ?.

(ಭಟರು ಪತ್ರಗಳನ್ನು ತೆಗೆದುಕೊಂಡು ಬಂದು ಸದಾಶಿವರಾಯರಿಗೆ ಅರ್ಪಿಸುವರು)

ರುದ್ರ – ಎಲಾ, ನೀವೇತಕ್ಕೋ ಇಲ್ಲಿಗೆ ಬಂದಿದ್ದು?

1ನೇ ಭಟ – ವಿರುಪಣ್ಣನವರು ದೊಡ್ಡ ಪ್ರಭುಗಳಿಗೆ ಪತ್ರ ಬರೆದು ಕಳುಹಿಸಿದ್ದಾರೆ.

ರುದ್ರ – ಆ, ಪತ್ರ ಬರೆಯುವುದಕ್ಕೆ ಕಣ್ಣುಗಳೆಲ್ಲಿದ್ದವು?

2ನೇ ಭಟ – ಕಣ್ಣುಗಳು ಅವುಗಳ ಜಾಗದಲ್ಲೇ ಇವೆ ಸ್ವಾಮೀ.

ರುದ್ರ – ಅಂದರೆ ನೀವು ಆತನ ಕಣ್ಣುಗಳನ್ನು ಕೀಳಲಿಲ್ಲವೇ?

ವೀರ – ಇದೇನು ರುದ್ರಣ್ಣ, ಅಣ್ಣನ ಕಣ್ಣುಗಳನ್ನು ಕೀಳುವುದೇ?

ಸದಾ – ನೀನು ಮಾತಾಡಬೇಡ. ಇದು ನನ್ನ ಆಜ್ಞೆ. (ಭಟರನ್ನು ನೋಡಿ) ನೀವು ನನ್ನ ಆಜ್ಞೆಯನ್ನು ಜಾರಿಮಾಡಲಿಲ್ಲವೇ?

1ನೇ ಭಟ – ಅದಕ್ಕೇ ಹೋದೆವು ಪ್ರಭುಗಳೇ. ವಿರುಪಣ್ಣನವರು ನಮ್ಮನ್ನು ಕಣ್ತೆರೆದು ನೋಡಿದರು ಸ್ವಾಮೀ. ನಮ್ಮ ಕೈಗಳು ಜಾರಿ ಬಿಟ್ಟವು.

ರುದ್ರ – ಆ , ಆ ಕಣ್ಣುಗಳು ಪುನಃ ಗೆದ್ದವೇ?….. ಪ್ರಭುಗಳೇ ಅವನಲ್ಲಿ ಏನೋ ಇಂದ್ರಜಾಲ ವಿದ್ಯೆ ಇದೆ. ಅವನನ್ನು ಬಂಧಿಸಿಕೊಂಡು ಬರುವುದಕ್ಕೆ ಆಜ್ಞೆ ಕೊಡಿ. ತಮ್ಮ ಆಜ್ಞೆಯನ್ನು ಇಲ್ಲಿಯೇ ಜಾರಿ ಮಾಡಿಸೋಣ.

ಸದಾ – ಆ ಕಣ್ಣುಗಳು ಗೆದ್ದವೇ? ನನ್ನ ಆಜ್ಞೆ ಸೋತು ಹೋಯಿತೇ? ಎಲಾ, ನೀವು ಹಿಂದೆ ಯಾರ ಕಣ್ಣುಗಳನ್ನೂ ಕಿತ್ತಿಲ್ಲವೇನೋ?

2ನೇ ಭಟ – ಬೇಕಾದಷ್ಟು. ಇನ್ನೂ ಕ್ರೂರವಾದ ಶಿಕ್ಷೆಗಳನ್ನು ಜಾರಿಮಾಡಿದ್ದೇನೆ. ಆದರೆ ವಿರುಪಣ್ಣನವರು ಮಹಾತ್ಮರು. ದೇವರಂಥವರು ಪ್ರಭುಗಳೇ.

ಸದಾ – ಮಹಾತ್ಮ. ದೇವರಂಥವನು. ಈ ಕಟುಕರ ದೃಷ್ಟಿಯಲ್ಲಿ. ಆಶ್ಚರ್ಯ.

1ನೇ ಭಟ – ಅವರ ಪತ್ರವನ್ನು ಓದಿಕೊಳ್ಳಿ ಪ್ರಭುಗಳೇ.

ರುದ್ರ – ಅದು ನನಗೆ ಕೊಡಿ ಪ್ರಭುಗಳೇ. ನಾನೇ ಓದುತ್ತೇನೆ.

2ನೇ ಭಟ – ವಿರುಪಣ್ಣನವರು ತಮಗೇ ಕೊಡಬೇಕೆಂದೂ ಆ ಪತ್ರ ಇನ್ನಾರ ಕೈಗೂ ಹೋಗಬಾರದೆಂದೂ ಹೇಳಿದ್ದಾರೆ ಪ್ರಭುಗಳೇ.

ರು – ಎಲಾ ದುರ್ಮಾರ್ಗಾ, ನನ್ನ ಮಾತಿಗೇ ಎದುರು ಹೇಳುತ್ತಿದ್ದೀಯಾ? ನಿನಗೆ ಶಿಕ್ಷೆ ಮಾಡಿಸುತ್ತೀನಿ.

2ನೇ ಭಟ – ನಾನು ವಿರುಪಣ್ಣನವರು ಹೇಳಿದ್ದನ್ನು ಸಮ್ರಾಟರಿಗೆ ಅರಿಕೆ ಮಾಡಿಕೊಂಡೆ ಅಷ್ಟೇ.

ರು – ನೀನು ನನ್ನ ಭಟನೋ ವಿರುಪಣ್ಣನ ಭಟನೋ.

1ನೇ ಭಟ – ವಿರುಪಣ್ಣನವರು ದೇವರಂಥ ಮಹಾತ್ಮರು. ಅವರು ಹೇಳಿರೋ ಮಾತನ್ನು ಪ್ರಭುಗಳಿಗೆ ಬಿನ್ನವಿಸಿದ್ದೇನೆ ಅಷ್ಟೇ ಸ್ವಾಮೀ. ನಮ್ಮ ಮೇಲೆ ಕೋಪ ಏಕೆ ಮಾಡಿಕೊಂತೀರಿ ಸ್ವಾಮೀ.

ರು – ದೇವರಂಥವರು. ಮಹಾತ್ಮರು. ಪ್ರಭುಗಳೇ ವಿರುಪಣ್ಣ ಬಹಳ ಮಾಯಾವಿ. ಇಂದ್ರಜಾಲ ಬೇರೆ ಕಲಿತಿರಬೇಕು.

ಸದಾ – ಈ ಕ್ರೂರ ಭಟರು ದೇವರಂಥವನು ಅಂತ ಹೇಳುತ್ತಿದ್ದಾರೆ. ನೀವು ಮಾಯಾವಿ ಅಂತ ಹೇಳುತ್ತಿದ್ದೀರಿ. ಇದರಲ್ಲಿ ಯಾವುದು ನಿಜ ಅಂತ ನಾನು ಕಂಡು ಹಿಡಿಯುತ್ತೇನೆ. ಪತ್ರ ನಾನೇ ಓದಿಕೊಳ್ಳುತ್ತೇನೆ.

(ಎಂದು ತಾನೇ ಓದಿಕೊಳ್ಳುತ್ತಿರುವನು. ರುದ್ರಣ್ಣ ಸದಾಶಿವರಾಯನ ಹತ್ತಿರಕ್ಕೆ ಹೋಗಿ ಇಣಿಕಿ ನೋಡುವನು)

ಸದಾ – (ಕೋಪದಿಂದ) ರುದ್ರೇಶಾ, ನಿನ್ನ ಜಾಗದಲ್ಲಿ ಕುಳಿತುಕೋ. (ರುದ್ರಣ್ಣ ಬಂದು ಕುಳಿತುಕೊಳ್ಳುವನು) (ಪತ್ರ ಓದಿಕೊಂಡು) ಏನಾಶ್ಚರ್ಯ- ಎಂಥ ರಾಜಭಕ್ತಿ! ಎಂಥ ವಿವೇಕ! ಎಂಥ ತ್ಯಾಗ! ಎಂಥ ಪ್ರೇಮ!

ರುದ್ರ – ಇದೆಲ್ಲಾ ನಟನೆ ಪ್ರಭುಗಳೇ ನಟನೆ.

ವೀರ – ಇಲ್ಲ ಪ್ರಭುಗಳೇ. ಅಣ್ಣನಲ್ಲಿ ಎಲ್ಲಾ ಸದ್ಗುಣಗಳೂ ಇವೆ.

ಶಿಲ್ಪಿಬ್ರಹ್ಮ – ಅವರು ತ್ಯಾಗಿಗಳು ಮತ್ತು ಕಲಾ ಯೋಗಿಗಳೂ ಪ್ರಭುಗಳೇ.

ಸದಾ – ವಿರುಪಣ್ಣನಿಗೆ ಅಷ್ಟು ದೊಡ್ಡ ದೇವಾಲಯವನ್ನು ಕಟ್ಟಿಸುವುದಕ್ಕೆ ಹಣವೆಲ್ಲಿಂದ ಬಂತು? ಒಬ್ಬ ಮಂಡಲಾಧಿಪತಿಗೆ ಇದು ಸಾಧ್ಯವೇ?

ಒಬ್ಬ ಬ್ರಾಹ್ಮಣ – ನಮಗೆ ಹೊರಡಲು ಅನುಮತಿ ಕೊಡಿ ಪ್ರಭುಗಳೇ.

ಸದಾ – ನಾನು ಮುಖ್ಯವಾದ ವಿಷಯವನ್ನು ಕುರಿತು ವಿಚಾರಣೆ ಮಾಡುತ್ತಿದ್ದೇನೆ. ನೀವಿಲ್ಲರಬೇಕು.

ರುದ್ರ –     ತಮ್ಮ ದುಡ್ಡೂ, ಪ್ರಜೆಗಳ ಪಾಲಿನ ದುಡ್ಡೂ ಲಪಟಾಯಿಸಿದ್ದರಿಂದ ಬಂತು. 

ವೀರ –     ಏನಿದು ರುದ್ರಣ್ಣಾ. ಇಷ್ಟು ಸುಳ್ಳು ಹೇಳುತ್ತಿದ್ದೀಯೆ? ಪ್ರಭುಗಳೇ, ಆಗ ವರಮಾನವು ಹೆಚ್ಚಾಗಿತ್ತು. ನಾವು ಬಹಳ ಸರಳ ಜೀವಿತವನ್ನು ನಡೆಸುತ್ತ ಕಾಸಿಗೆ ಕಾಸು ಗಂಟು ಹಾಕಿ ದೇವರ ಸೇವೆಗಾಗಿ ಧನ ಕೂಡಿಟ್ಟೆವು ಸ್ವಾಮೀ. ನಾವು ದುಡ್ಡು ಲಪಟಾಯಿಸುವುದಕ್ಕೆ ಮೇಲೆ ಅಚ್ಯುತ ದೇವರಾಯರ ತನಿಖೆ ಇರಲಿಲ್ಲವೇ. ಪ್ರಜೆಗಳು ಸುಮ್ಮನೆ ಬಿಡುತ್ತಿದ್ದರೆ ಸ್ವಾಮೀ.

ಸದಾ –     ಅಚ್ಯುತ ದೇವರಾಯರು ತನಿಖೆ ಮಾಡದೆ ಬಿಡುತ್ತಿರಲಿಲ್ಲ. 

ವೀರ –     ಅವರು ನಮ್ಮ ದೇವಾಲಯಕ್ಕೆ ಬಂದು ನೋಡಿ ಸಂತೋಷಪಟ್ಟು ದೇವರಿಗೆ ಮಾನ್ಯಗಳನ್ನು ಕೊಟ್ಟಿದ್ದಾರೆ ಪ್ರಭುಗಳೇ. ತಾವು ಬಂದು ನೋಡಿ ಶಾಸನಗಳನ್ನು.

ಸದಾ –     ಅಚ್ಯುತದೇವರಾಯರು ಬಂದು ನೋಡಿ ಮಾನ್ಯಗಳನ್ನು ಕೊಟ್ಟಿದ್ದಾರೆಯೇ? ಅಂದರೆ ದುಡ್ಡು ಲಪಟಾಯಿಸಿದಿರಿ ಅನ್ನುವ ಆರೋಪ ಸುಳ್ಳು. 

ರುದ್ರ –     ಅವರ ಕಣ್ಣಿಗೂ ಮಣ್ಣೆರೆಚಿರಬಹುದು ಪ್ರಭುಗಳೇ. 

ಸದಾ –     ಹಾಗೆನ್ನಬೇಡಿ. ಅಚ್ಯುತರಾಯರ ವಿಷಯ ನನಗೆ ಚೆನ್ನಾಗಿ ಗೊತ್ತು. ಅವರಿಗೆ ಮೋಸ ಮಾಡಲು ಯಾರಿಗೂ ಸಾಧ್ಯವಿರಲಿಲ್ಲ. ಇನ್ನೊಂದು ಸಂಶಯವಿದೆ. ವೀರಣ್ಣಾ, ಈ ಲೇಪಾಕ್ಷಿಯ ಪ್ರಜೆಗಳಿಗೆ ಬಹಳ ರಾಜಭಕ್ತಿ ಇದೆ ಅಂತ ಹೇಳಿದೆಯಲ್ಲಾ. ಅದೇ ನಿಜವಾದರೆ ಅವರು ಅರ್ಧರಾತ್ರಿಯಲ್ಲಿ ಧಿಕ್ಕಾರ ತೋರಿಸಲು ಗುಂಡು ಹಾರಿಸುತ್ತಾರೆಯೇ? 

ವೀರ –     ಇದೇನಾಶ್ಚರ್ಯ ಸ್ವಾಮೀ, ಪ್ರಜೆಗಳು ಗುಂಡು ಹಾರಿಸಿದರೇ? (ಆಲೋಚಿಸಿ) ತಿಳಿಯಿತು ಸ್ವಾಮೀ. ಇವೆಲ್ಲಾ ರುದ್ರಣ್ಣನ ನಾಟಕವಿರಬೇಕು. ಗುಂಡು ಹಾರಿಸಿದವರು ಸೈನಿಕರು. ಘಾಯಪಟ್ಟವರು ಪ್ರಜೆಗಳು. ಈ ವಿಚಾರ ತಮ್ಮ ಗಮನಕ್ಕೆ ತಂದರೆ ತಮ್ಮ ಮನಸ್ಸಿಗೆ ನೋವಾಗಬಹುದೆಂದು ಪ್ರಜೆಗಳು ಹಿಂಜರಿದಿದ್ದಾರೆ. ಇಂಥ ಸಹನೆ ಮತ್ತು ರಾಜಭಕ್ತಿ ಇರುವ ಪ್ರಜೆಗಳೇ ಕೆಟ್ಟವರಾದರೇ ಪ್ರಭುಗಳೇ.

ರುದ್ರ –     ಇದೆಲ್ಲಾ ಸುಳ್ಳು ಪ್ರಭುಗಳೇ. ಈಗ ಸಿಕ್ಕಿಹಾಕಿಕೊಂಡೆ ವೀರಣ್ಣಾ ಸುಳ್ಳು ಹೇಳಿ. ಪ್ರಜೆಗಳಿಗೆಲ್ಲಿ ಘಾಯಗಳಾಗಿವೆ? ಅದೇ ನಿಜವಾದರೆ ಅವರು ಸುಮ್ಮನಿರುತ್ತಿದ್ದರೇ? ಅಷ್ಟು ಸಹನೆಯನ್ನು ಅವರು ಖರೀದಿಗೆ ಪಡೆಯಬೇಕು ವಿರುಪಣ್ಣನ ಅಂಗಡಿಯಲ್ಲಿ. ವಿರುಪಣ್ಣನ ಅಂಗಡಿಯಲ್ಲಿ. 

ವಿರಣ್ಣ –    ಇದೇನು ನಾಟಕ ಪ್ರಭುಗಳೇ ಘಾಯಗೊಂಡಿರುವ ಪ್ರಜೆಗಳು ಇಲ್ಲೇ ಇದ್ದಾರಲ್ಲಾ. ತಾವೇ ನೋಡಿ. (ಎಂದು ಪ್ರಜೆಗಳನ್ನು ಕರೆದು ಕಟ್ಟುಗಳನ್ನು ಬಿಚ್ಚಿ ಘಾಯಗಳನ್ನು ತೋರಿಸುವನು) 

ಸದಾ –     ಎಷ್ಟು ಘಾಯಗಳಾಗಿವೆ! (ಕೋಪದಿಂದ ಮೇಲಕ್ಕೆದ್ದು ಸಭಾಸದರನ್ನೆಲ್ಲಾ ನೋಡಿ) ಇದೆಲ್ಲಾ ನನ್ನನ್ನಾಡಿಸುವುದಕ್ಕೆ ನಾಟಕ ಆಡ್ತಾ ಇದ್ದೀರೇನೋ? ಇವನು ಚಿಕ್ಕವನು, ಹೊಸದಾಗಿ ಸಮ್ರಾಟನಾಗಿದ್ದಾನೆ ನಾವು ಹೇಗೆ ಆಡಿಸಿದರೆ ಹಾಗೆ ಆಡ್ತಾನೆ ಅಂತ ತಿಳಿದುಕೊಂಡಿರಾ? ಈ ಸಭೆಯಲ್ಲಿರುವವರೆಲ್ಲಾ ನಿಜ ಬೊಗಳಿ ಇಲ್ಲದಿದ್ದರೆ ನಿಮ್ಮ ನಾಲಿಗೆಗಳನ್ನು ಸೀಳಿಸುತ್ತೇನೆ. (ಬ್ರಾಹ್ಮಣರಿಬ್ಬರೂ ಗಡಗಡ ನಡುಗುತ್ತಾ ಸದಾಶಿವರಾಯರ ಪಾದಗಳ ಮೇಲೆ ಬೀಳುವರು) 

ಸದಾ- ಏನಿದು? ನೀವು ಬ್ರಾಹ್ಮಣರು?

ಒಬ್ಬ ಬ್ರಾಹ್ಮಣ – ಈ ರುದ್ರಣ್ಣನನ್ನು ಸೇರಿದ ಮೇಲೆ ನಾವೆಂಥ ಬ್ರಾಹ್ಮಣರು? ವಿರುಪಣ್ಣ ದೇವರಂಥವನು. ದುರಾಸೆಯಿಂದ ಈ ರುದ್ರಣ್ಣನನ್ನು ಸೇರಿ ನಾವು ಪಾಪಿಗಳಾದೆವು. ಸುಳ್ಳು ಲೆಕ್ಕಗಳನ್ನೂ ಬರೆದೆವು. ನಮ್ಮನ್ನು ತಾವೇ ಕಾಪಾಡಬೇಕು. ಕ್ಷಮಿಸಬೇಕು. (ಎಂದು ಅಳುವರು) (ರುದ್ರಣ್ಣ ತಪ್ಪಿಸಿಕೊಂಡು ಹೋಗುವನು) 

ಸದಾ –     ಎಲಾ ದುರ್ಮಾಗಾ. ಎಲ್ಲಿ ಆ ರುದ್ರೇಶಾ. ಆಗಲೇ ತಪ್ಪಿಸಿಕೊಂಡು ಹೋಗಿದ್ದಾನಲ್ಲಾ.  ಅವನನ್ನು ಹಿಡಿಯಿರಿ. ಹಗ್ಗಗಳಿಂದ ಕಟ್ಟಿ. (ತಲೆ ಬಡೆದುಕೊಳ್ಳುತ್ತ) ಅಯ್ಯೋ ಎಂಥ ಪಾಪದ ಕೆಲಸ ಮಾಡಿಬಿಟ್ಟೆ! ವಿರುಪಣ್ಣಾ, ವಿರುಪಣ್ಣಾ, ತಡಿ, ತಡಿ, ನಾನೇ ಬರುತ್ತಿದ್ದೇನೆ. ತಡಿತಡಿ. (ಎಂದು ಓಡಿ ಹೋಗುವನು. ಎಲ್ಲರೂ ಓಡಿ ಹೋಗುವರು)

ಆಳುಗಳು –       ರುದ್ರಣ್ಣನನ್ನು ಹಿಡೀಬೇಕು (ಅಂತ ಓಡಿ ಹೋಗುವರು) 

       (ರುದ್ರಣ್ಣ ಗಾಬರಿಯಿಂದ ಅತ್ತಿತ್ತ ನೋಡುತ್ತ ಪ್ರವೇಶಿಸುವನು) 

ರುದ್ರ –     ಪ್ರಾಣಭೀತಿಯಿಂದ ಬಚ್ಚಿಟ್ಟುಕೊಂಡಿದ್ದೆ. ಭಟರು ನನ್ನನ್ನು ನೋಡದೆ ಆ ಕಡೆ ಓಡಿ ಹೋದರು. ಯಾರೂ ಇಲ್ಲವಲ್ಲಾ (ಎಂದು ಎರಡುಕಡೆಯೂ ನೋಡಿಕೊಂಡು ಬರುವನು. ಬಂದು ಕೆಳಗೆ ಬಿದ್ದಿದ್ದ ವಿರುಪಣ್ಣನ ಪತ್ರವನ್ನು ನೋಡಿ ಕೈಗೆ ತೆಗೆದುಕೊಂಡು) ಅವನ ಈ ಪತ್ರವೇ ನನ್ನನ್ನು ಈಗತಿಗೆ ತಂದದ್ದು. ಆ, ಇದು ಈಗ ನನ್ನ ಕೈಗೆ ಸಿಕ್ಕಿದೆ. ಇದನ್ನೇ ಉಪಯೋಗಿಸಿಕೊಂಡು ಪುನಃ ಏನಾದರೂ ಮಾಡೋಣವೇ? . . ಇನ್ನೇನು ಮಾಡುವುದು? ಸರ್ವನಾಶವಾಯಿತು. ಪಾತಾಳಕ್ಕೆ ಬಿದ್ದೆ. ಆ ವಿರುಪಣ್ಣ ಧರ್ಮಾತ್ಮ. ಬರೀ ಹೊಟ್ಟೇ ಕಿಚ್ಚಿನಿಂದ ಅವನಿಗೆ ಕೇಡು ಮಾಡುವುದಕ್ಕೆ ಹೋಗಿ ನಾನೇ ಕೆಟ್ಟೆ. ಅವನು ನನಗೆ ಯಾವ ಕೇಡೂ ಎಂದಿಗೂ ಮಾಡಲಿಲ್ಲವಲ್ಲಾ ಅಯ್ಯೋ. . . ಹೋಗಲಿ ಇದರಲ್ಲಿ ಏನು ಬರೆದಿದ್ದಾನೋ ಓದೋಣ (ಓದಿಕೊಳ್ಳುವನು) 

ನೇಪಥ್ಯದಲ್ಲಿ ವಿರುಪಣ್ಣನ ಕಂಠ – ಪ್ರಭುಗಳಿಗೆ ಜಯವಾಗಲಿ ರಾಜಭಕ್ತನಾದ ವಿರುಪಣ್ಣ ತಮ್ಮಡಿಗಳಲ್ಲಿ ಬಿನ್ನವಿಸಿಕೊಳ್ಳುವುದೇನೆಂದರೆ . . . 

ರುದ್ರ –     ವಿರುಪಣ್ಣ ನಿಜವಾದ ರಾಜಭಕ್ತ . . . 

ವಿರುಪಣ್ಣನಕಂಠ – ತಮ್ಮ ಶಿಕ್ಷಾ ಪತ್ರವನ್ನು ನೋಡಿದೆ. ಇನ್ನೂ ಏನೂ ತಿಳಿಯದ ನನ್ನ ತಮ್ಮನ ಮಾತುಗಳನ್ನು ಕೇಳಿ ತಾವು ಶಿಕ್ಷೆ ವಿಧಿಸಿದ್ದೀರಿ. ಆಪಾದಿತನನ್ನು ವಿಚಾರಿಸದೆ ವಿಧಿಸಿರುವ ಶಿಕ್ಷೆ ಧರ್ಮಸಮ್ಮತವಾದದ್ದಲ್ಲವೆಂದು ನಾನು ಹೇಳಿದರೆ ತಾವು ಕೋಪ ಪಡಬೇಡಿ. ಈ ಅಧರ್ಮ ಆಜ್ಞೆ ನೆರವೇರಿದರೆ ತಮಗೆ ಪಾಪ ಮತ್ತು ಅಪಕೀರ್ತಿ ಬರುತ್ತದೆ. ಇದನ್ನು ಮಾಡಿಸಿದ ನನ್ನ ತಮ್ಮನಿಗೂ ಪಾಪ ಬರುತ್ತೆ. ಇದನ್ನು ಪರಿಪಾಲಿಸದಿದ್ದರೆ ನನ್ನ ರಾಜಭಕ್ತಿಗೆ ಕುಂದು. ತಮಗೆ ನನ್ನ ಮೇಲೆ ಕೋಪ ಬರುತ್ತೆ. ರಾಜಭಕ್ತನೆಂದು ನಾನು ನೆನ್ನೆ ತಮ್ಮ ಮುಂದೆ ಹೇಳಿದ್ದನ್ನು ತಾವು ನಟನೆಯೆಂದು ಭಾವಿಸುತ್ತೀರಿ. ನನ್ನನ್ನು ಪ್ರಜೆಗಳನ್ನೂ ತಾವು ವಿದ್ರೋಹಿಗಳೆಂದು ಭಾವಿಸುತ್ತೀರಿ. ನಮ್ಮನ್ನು ನಾಶಮಾಡಲು ಪ್ರಯತ್ನಪಡುತ್ತೀರಿ. ಪ್ರಜೆಗಳು ಎದುರು ತಿರುಗುತ್ತಾರೆ. ಬೇಕಾದಷ್ಟು ರಕ್ತಪಾತವಾಗುತ್ತೆ. ಈ ಸಮರಾಗ್ನಿಗೆ ದೇವಾಲಯವೂ ಶಿಲ್ಪವೂ ಆಹುತಿ ಆದರೂ ಆಗಬಹುದು. 

ರುದ್ರ –     ಏನು ದೂರ ದೃಷ್ಟಿ. ಎಂಥ ವಿವೇಕ. ಆತನ ಸದ್ಗುಣಗಳನ್ನು ಒಪ್ಪಿಕೊಳ್ಳಬಾರದೆಂದು ಎಷ್ಟು ತಡಗಟ್ಟಿದರೂ ಒಪ್ಪಿಕೊಂಡು ತೀರಬೇಕಾಗುತ್ತಲ್ಲಾ. 

ವಿ. ಕಂಠ ಧ್ವನಿ – ಆದುದರಿಂದ ತಮ್ಮ ಆಜ್ಞೆಯನ್ನು ಪರಿಪಾಲಿಸಿದರೆ ಒಂದು ತಪ್ಪು – ಪರಿಪಾಲಿಸದಿದ್ದರೆ ಒಂದು ವಿಪತ್ತು. 

ರುದ್ರ –     ಹಾಗಾದರೆ? 

ವಿರು ಕಂಠಧ್ವನಿ –       ಈ ಪರಿಸ್ಥಿತಿಯಲ್ಲಿ ತಮಗೂ, ನನ್ನ ತಮ್ಮನಿಗೂ, ಪ್ರಜೆಗಳಿಗೂ, ದೇವಾಲಯಕ್ಕೂ, ಶಿಲ್ಪಗಳಿಗೂ, ಹಿತಕರವಾದ ಒಂದೇ ಒಂದು ದಾರಿ ಇದೆ. 

ರುದ್ರ –     ರಾಜನಮೇಲೂ, ನನ್ನ ಮೇಲೂ, ಪ್ರಜೆಗಳ ಮೇಲೂ, ದೇವಾಲಯದ ಮೇಲೂ, ಎಷ್ಟು ಪ್ರೇಮವಿದೆ ನಮ್ಮ ಅಣ್ಣನಿಗೆ. ಅದೆಂತಹ ಪ್ರೇಮ. ನನಗೆ ಕೇಡು ಬಯಸುವ ಮಾತು ಒಂದೂ ಇಲ್ಲವಲ್ಲಾ. ನನ್ನನ್ನು ತನ್ನ ತಮ್ಮನೆಂದೇ ಭಾವಿಸುತ್ತಿದ್ದಾನಲ್ಲಾ. 

ವಿರು ಕಂಠ ಧ್ವನಿ – ನನ್ನ ತಮ್ಮ ನನ್ನ ಕಣ್ಣುಗಳನ್ನು ಕೋರಿದ್ದಾನೆ. ಅವುಗಳನ್ನು ಸಂತೋಷವಾಗಿ ನಾನೇ ಕೊಟ್ಟುಬಿಡುತ್ತೇನೆ. 

ರುದ್ರ –     ಅಣ್ಣಾ, ಅಣ್ಣಾ, ಎಷ್ಟು ಪ್ರೇಮವಣ್ಣಾ ನಿನಗೆ ಈ ತಮ್ಮನ ಮೇಲೆ. ಈ ದ್ರೋಹಿಯ ಮೇಲೆ. ಈ ಪಾಪಿಯ ಮೇಲೆ. ಎಂಥ ಒಳ್ಳೆಯವನಣ್ಣಾ ನೀನು (ಎಂದು ಕಣ್ಣೀರು ಸುರಿಸುವನು, ಕಣ್ಣೀರೊರೆಸಿಕೊಂಡು ಪತ್ರವನ್ನು ಕಣ್ಣುಗಳಿಗೊತ್ತಿಕೊಳ್ಳುವನು). 

ವಿರು ಕಂಠ ಧ್ವನಿ – ಕಣ್ಣುಗಳನ್ನು ಕೊಟ್ಟವನನು ಈಶ್ವರನು. ಅವುಗಳನ್ನು ಅತನಿಗೇ ಅರ್ಪಿಸುತ್ತೇನೆ. ಇದರಿಂದ ಎಲ್ಲರ ಕಣ್ಣುಗಳಿಗೂ ಸತ್ಯ ತೋರಲಿ. ಎಲ್ಲರಿಗೂ ಒಳ್ಳೆಯದಾಗಲಿ.

ರುದ್ರ –     ದೇವರಿಗೆ ಕಣ್ಣುಗಳನ್ನು ಕೊಟ್ಟು ಬಿಡುವಷ್ಟು ಶಕ್ತಿ ನಿನ್ನಲ್ಲಿದೆ. ಅಯ್ಯೋ ಅಣ್ಣಾ, ನನ್ನ ಕೆಟ್ಟತನದಿಂದ ಕಣ್ಣುಗಳನ್ನು ದೇವರಿಗೆ ಕೊಟ್ಟುಬಿಟ್ಟೆಯಾ. ನಿನ್ನಂಥ ದೈವ ಭಕ್ತನಿಗೂ ಮಹಾತ್ಮನಿಗೂ ದ್ರೋಹ ಮಾಡಿದ ನಾನೆಂಥ ಪಾಪಿ ಈ ಪಾಪದಿಂದ ನನ್ನನ್ನು ಯಾರು ಕಾಪಾಡುವರು? . . . . .  ನನಗಾಗಿ ಕಣ್ಣುಗಳನ್ನು ಬಲಿದಾನ ಮಾಡಿ ನನ್ನ ಕಣ್ತೆರೆಸಿದ ನೀನೇ ನನಗೆ ಗುರು, ನೀನೇ ದಿಕ್ಕು, ನೀನೇ ಶರಣು, ನಾನು ರಾಜಭಟರಿಗೆ ಹೆದರುವುದಿಲ್ಲ. ಸಮ್ರಾಟರು ಏನು ಶಿಕ್ಷೆಯನ್ನು ಕೊಟ್ಟರೂ ಪಾಪದ ಪ್ರಾಯಶ್ಚಿತ್ತವಾಗಿ ಅನುಭವಿಸುತ್ತೇನೆ. ಮೊದಲು ನಿನ್ನ ದರ್ಶನ ಮಾಡಿಕೊಳ್ಳಬೇಕು. ಆಮೇಲೆ ಪ್ರಾಣವಿದ್ದರೆ ಇರಲಿ, ಹೋದರೆ ಹೋಗಲಿ ನಿನ್ನ ಪಾದಗಳೇ ದಿಕ್ಕು. (ಎಂದು ಓಡಿ ಹೋಗುವನು) 

                                  ದೃಶ್ಯ – 3

(ದೇವಾಲಯದಲ್ಲಿ ವಿರುಪಣ್ಣ ತಾನೇ ತನ್ನ ಕಣ್ಣುಗಳನ್ನು ಕಿತ್ತುಕೊಂಡು ಗೋಡೆಗೆಸೆದಿರುವನು. ರಕ್ತ ಸುರಿದ, ಗಡ್ಡೆ ಕಟ್ಟಿದ, ತಾಕಿದ ಗುರ್ತುಗಳು) 

ವಿರು – ನಮಃಶಿವಾಯ, ನಮಃಶಿವಾಯ (ಎಂದು ಜಪಿಸುತ್ತಿರುವನು) (ಸರಸ್ವತಿ ಪ್ರವೇಶಿಸಿ ವಿರುಪಣ್ಣನನ್ನು ನೋಡಿ ಗಾಬರಿಯಿಂದ ಕಿರುಚಿಕೊಳ್ಳುವಳು) 

ಸರ –      ಅಪ್ಪಾಜೀ, ಅಪ್ಪಾಜೀ ಏನಿದು ಅನ್ಯಾಯ, ಯಾರು ನಿಮ್ಮ ಕಣ್ಣುಗಳನ್ನು ಕಿತ್ತವರು? 

ವಿರು – ಸರಸ್ವತೀ, ಬಾ ಮಗೂ, ಏಕಮ್ಮಾ ಅಷ್ಟು ಆಕ್ರೋಶ? ನನ್ನ ಕಣ್ಣುಗಳನ್ನು ಯಾರೂ ಕೀಳಲಿಲ್ಲ. ಶಿವನು ಕೊಟ್ಟ ಕಣ್ಣುಗಳನ್ನು ಶಿವನಿಗೇ ಅರ್ಪಿಸಿಬಿಟ್ಟೆ.

ಸರ –       ನೀವೇ ಕಿತ್ತುಕೊಂಡಿರಾ ಅಪ್ಪಾಜೀ? ಅದು ಹೇಗೆ ಸಾಧ್ಯವಾಯಿತು? ನೋವು ತಡೆಯುವುದಕ್ಕಾಯಿತೇ? ಈಗ ನೋವಾಗುತ್ತಿಲ್ಲವೇ? 

ವಿರು –      ಪರಶಿವನ ಧ್ಯಾನದ ಅಮೃತಪಾನ ಮಾಡುತ್ತಿದ್ದರೆ ನೋವೆಲ್ಲಿ ಕಾಣುತ್ತೆ ಮಗೂ? 

ಸರ –       ಅಯ್ಯೋ ಕಣ್ಣುಗಳನ್ನೇಕೆ ಕಿತ್ತುಕೊಂಡಿರಿ ಅಪ್ಪಾಜಿ? ನಿಮ್ಮ ಕಣ್ಣುಗಳು ರಾತ್ರಿ ಹಗಲು ಶಿಲ್ಪಗಳನ್ನೇ ನೋಡುತ್ತಾ ಇದ್ದವಲ್ಲಾ. ಇನ್ನು ಮುಂದೆ ಶಿಲ್ಪಗಳನ್ನು ಹೇಗೆ ನೋಡುತ್ತೀರಿ ಅಪ್ಪಾಜೀ? 

ವಿರು –      ಕಣ್ಣುಗಳು ತಮ್ಮ ಕೆಲಸವನ್ನು ಪೂರ್ತಿ ಮಾಡಿಬಿಟ್ಟವು ಮಗೂ. ಇನ್ನವು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ನನ್ನ ಒಳಗಣ್ಣಿಗೆ ಶಿಲ್ಪಗಳೂ ಚಿತ್ರಗಳೂ ಯಾವಾಗಲೂ ಕಂಡುಬರುತ್ತ ಇರುತ್ತವೆ. ಈ ಶರೀರ, ಈ ಕಣ್ಣುಗಳೂ ಎಂದಾದರೂ ನಾಶವಾಗಲೇ ಬೇಕಲ್ಲಾ. 

ಸರ –       ನನಗೇನೂ ತಿಳಿಯುತ್ತಿಲ್ಲ. ಅಮ್ಮನನ್ನು ಕರೆದುಕೊಂಡು ಬರುತ್ತೇನೆ. ಕಣ್ಣುಗಳಿಗೆ ಚಿಕಿತ್ಸೆಯಾದರೂ ಮಾಡಿಸಬೇಕು. 

ವಿರು –      ಯಾವ ಚಿಕಿತ್ಸೆಯೂ ಬೇಡ. ನೀರು ತೆಗೆದುಕೊಂಡು ಬಾ. ರಕ್ತ ತೊಳೆದುಕೊಳ್ಳುತ್ತೇನೆ. 

ಸರ –       ಅಮ್ಮಾ, ಅಮ್ಮಾ (ಎನ್ನುತ್ತಾ ಓಡಿಹೋಗುವಳು) 

ವಿರು-       ದ್ವೇಷಗಳು ಅಣಗಾರಲಿ ಪ್ರೇಮ ಬೆಳೆಯಲಿ, ಅಸತ್ಯ ಮಾಯವಾಗಲಿ, ಸತ್ಯ ತೋರಲಿ. (ನೇಪಥ್ಯದಲ್ಲಿ ಸದಾಶಿವರಾಯರ ಧ್ವನಿ) ವಿರುಪಣ್ಣಾ ಸ್ವಲ್ಪ ತಡಿ, ಕಣ್ಣುಗಳನ್ನು ಕಿತ್ತುಕೊಳ್ಳ ಬೇಡ. ನಾನೇ ಬರುತ್ತಾ ಇದ್ದೇನೆ. 

ಸದಾ –     (ಪ್ರವೇಶಿಸಿ ವಿರುಪಣ್ಣನನ್ನು ನೋಡಿ ನಿಂತು) ಅಯ್ಯೋ, ಆಗಲೇ ಕಣ್ಣುಗಳನ್ನು ಕಿತ್ತುಕೊಂಡುಬಿಟ್ಟೆಯಾ? ವಿರುಪಣ್ಣಾ, ವಿರುಪಣ್ಣಾ, ನಾನು ಎಂಥ ದ್ರೋಹ ಮಾಡಿದೆ? ಎಂಥ ಪಾಪ ಮಾಡಿದೆ. ಕ್ಷಮಿಸು. (ಎಂದು ಹೇಳುತ್ತ ಬಂದು ವಿರುಪಣ್ಣನ ಪಾದಗಳ ಮೇಲೆ ಬೀಳುವನು)

ವಿರು –      ಪ್ರಭುಗಳೇ, ತಪ್ಪುತಪ್ಪು, ಈ ಅಲ್ಪನ ಪಾದಗಳನ್ನು ಮುಟ್ಟಬೇಡಿ. ಏಳಿ, ನಿಮ್ಮದೇನೂ ತಪ್ಪಿಲ್ಲ. (ಎಂದು ಎಬ್ಬಿಸಿ ಆಲಂಗಿಸಿಕೊಳ್ಳುವನು) (ವೀರಣ್ಣನೂ ಶಿಲ್ಪಿಬ್ರಹ್ಮನೂ ಬರುವರು) 

ವೀರ –     ಏನಿದು ಅಣ್ಣಾ? ಈ ಸ್ಥಿತಿ ಬಂತು ನಿಮಗೆ. 

ಶಿಲ್ಪಿ –      ಎಂಥ ಅನ್ಯಾಯವಾಯಿತು ಪ್ರಭುಗಳೇ! (ಇಬ್ಬರೂ ವಿರುಪಣ್ಣನ ಹತ್ತಿರಕ್ಕೆ ಬಂದು ನೋಡುವರು) 

ವಿರು – (ಕೈಗಳಿಂದ ಇಬ್ಬರನ್ನೂ ಮುಟ್ಟಿ) ಗಾಬರಿಪಡಬೇಡಿ ಅಪ್ಪಾ- ಶಾಂತವಾಗಿರಿ. (ಪಾರ್ವತಮ್ಮ ಮತ್ತು ಸರಸ್ವತಿ ಅಳುತ್ತ ನೀರು ತೆಗೆದುಕೊಂಡು ಬರುವರು. ರಕ್ತ ತೊಳೆಯಲು ಹತ್ತಿರಕ್ಕೆ ಬರುವರು) 

ವಿರು –      ನನ್ನ ರಕ್ತವನ್ನಾಮೇಲೆ ತೊಳೆಯಬಹುದು. ಸಮ್ರಾಟರು ಬಂದಿದ್ದಾರೆ ಅವರನ್ನು ಉಪಚರಿಸಿ ಮೊದಲು. 

ವೀರ –     ಪ್ರಭುಗಳೇ ಬನ್ನಿ, ಇಲ್ಲಿ ಕುಳಿತುಕೊಳ್ಳಿ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. 

ಸದಾ –     ಉಪಚಾರ ಬೇಡ ವೀರಣ್ಣಾ. ನಾನು ಕುಳಿತುಕೊಳ್ಳುವುದಿಲ್ಲ. ಸಮ್ರಾಟನೆಂಬ ಅಹಂಕಾರ ನನ್ನಿಂದ ಎಂಥ ಪಾಪವನ್ನು ಮಾಡಿಸಿತು? 

ವೀರ –     ನಿಮ್ಮದೇನು ತಪ್ಪಿಲ್ಲಿ ಪ್ರಭುಗಳೇ. ಎಲ್ಲಾ ರುದ್ರಣ್ಣನ ನಾಟಕ. 

ವಿರು –      ರುದ್ರಣ್ಣನದಲ್ಲಪ್ಪಾ – ಇದು ಎಲ್ಲಾ ದೈವ ಸಂಕಲ್ಪ. ನಮಗೆ ಬುದ್ಧಿ ಹುಟ್ಟಿಸುವವನು. ನಮ್ಮಿಂದ ಕೆಲಸ ಮಾಡಿಸುವನು ಎಲ್ಲಿ ಆ ಭಗವಂತನೇ, ರುದ್ರಣ್ಣನ ತಪ್ಪೇನಿಲ್ಲ.

(ನೇಪಥ್ಯದಲ್ಲಿ ರುದ್ರಣ್ಣನ ಧ್ವನಿ) – ಅಣ್ಣಾ, ಅಣ್ಣಾ, ನನ್ನ ತಪ್ಪನ್ನು ಕ್ಷಮಿಸು, ಈ ಪಾಪಿಯನ್ನು ಕಾಪಾಡು.

ವಿರು – ಅಗೋ ನನ್ನ ತಮ್ಮ ರುದ್ರಣ್ಣನೂ ಬಂದು ಬಿಟ್ಟ. ನನಗೆ ವೀರಣ್ಣ ಹೇಗೆಯೋ, ರುದ್ರಣ್ಣನೂ ಹಾಗೆಯೇ ಪ್ರಭುಗಳೇ. 

ಸದಾ – ನೀನು ನಿಜವಾಗಿಯೂ ಮಹಾತ್ಮನು ವಿರುಪಣ್ಣಾ.

(ಭಟರು ರುದ್ರಣ್ಣನನ್ನು ಹಗ್ಗಗಳಿಂದ ಕಟ್ಟಿ ಹಿಡಿದುಕೊಂಡು ಬರುವರು) 

ಸದಾ –     ಹಗ್ಗಗಳಿಂದ ಬಿಡಿಸಿ ರುದ್ರಣ್ಣನನ್ನು  (ಭಟರು ಹಗ್ಗ ಬಿಚ್ಚುವರು) 

ರುದ್ರ –     (ವಿರುಪಣ್ಣನ ಪಾಗಳಿಗೆರಗಿ) ನನ್ನ ತಪ್ಪುಗಳನ್ನು ಕ್ಷಮಿಸು ಅಣ್ಣಾ. 

ವಿರುಪಣ್ಣ-  ಏಳಪ್ಪಾ ರುದ್ರಣ್ಣಾ. (ಎಬ್ಬಿಸಿ ಆಲಿಂಗಿಸಿಕೊಳ್ಳುವನು) 

 ರುದ್ರ –    ನಿನ್ನ ಪತ್ರ ಓದಿ ನನಗೆ ಜ್ಞಾನೋದಯವಾಯಿತು. ಅದರಲ್ಲಿನ ನಿಮ್ಮ ಪ್ರೇಮಗಂಗೆಯಲ್ಲಿ ಪವಿತ್ರನಾಗಿದ್ದೇನೆ. ನನಗೆ ರಾಜ್ಯವೂ, ಮನೆ, ಮಠ ಯಾವುದೂ ಬೇಡ. ಎಲ್ಲಾ ಬಿಟ್ಟು ನಿನ್ನಡಿಗಳಲ್ಲಿಗೆ ಬಂದಿದ್ದೇನೆ. ಉಳಿದ ಜೀವಿತವನ್ನು ನಿನ್ನ ಶಿಷ್ಯನಾಗಿ ಇಲ್ಲಿಯೇ ಇದ್ದು ಕಳೆಯಬೇಕೆಂದು ಸಂಕಲ್ಪ ಮಾಡಿದ್ದೇನೆ. 

ಸದಾ –     ನಿನ್ನ ಸಂಕಲ್ಪ ಮೆಚ್ಚುವಂತಹುದು ರುದ್ರಣ್ಣಾ. ಹಿಂದಿನಂತೇ ವೀರಣ್ಣನೇ ಮಂಡಲಾಧಿಪತಿಯಾಗಿರಲಿ. 

ರುದ್ರ –     ವೀರಣ್ಣ ಪ್ರಭುಗಳಿಗೆ ಜಯವಾಗಲಿ . . . 

ಎಲ್ಲರೂ – ವೀರಣ್ಣ ಪ್ರಭುಗಳಿಗೆ ಜಯವಾಗಲಿ . . . 

ವಿರು –      ನೀವೆಲ್ಲಾ ಕುಳಿತುಕೊಳ್ಳಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಾನು ಆಚೆ ಹೋಗಿ ರಕ್ತ ತೊಳೆದುಕೊಂಡು ಬರುತ್ತೇನೆ. ಇಲ್ಲಿ ರಕ್ತ ಎಲ್ಲೆಲ್ಲಿ ಬಿದ್ದಿದೆಯೋ ತೊಳೆಯಿರಿ. (ಪಾರ್ವತಮ್ಮ ವಿರುಪಣ್ಣನನ್ನು ಕೈಹಿಡಿದುಕೊಂಡು ಕರೆದುಕೊಂಡು ಹೋಗುವಳು. ಶಿಲ್ಪಬ್ರಹ್ಮನು ಸರಸ್ವತಿಯು ಗೋಡೆಯಲ್ಲಿನ ರಕ್ತ ತೊಳೆಯುತ್ತಿರುವರು) 

ಶಿ. ಬ್ರ – ಇದೇನಾಶ್ಚರ್ಯ ಸರಸ್ವತೀ. ಕಣ್ಣುಗಳು ಬಿದ್ದಿರುವ ಜಾಗದಲ್ಲಿ ಕಲ್ಲೇ ತೂತು ಬಿದ್ದಿದೆ.

ಎಲ್ಲರೂ – ಎಲ್ಲಿ? ಎಲ್ಲಿ? (ಎಂದು ಬಂದು ನೋಡುವರು)

ಸರ – ಈ ಆಶ್ಚರ್ಯ ನೋಡಿ. ರಕ್ತ ಸೋರಿದ ಗುರ್ತುಗಳನ್ನು ಎಷ್ಟು ಒರೆಸಿದರೂ ಹೋಗುತ್ತಿಲ್ಲ.

ಎಲ್ಲರೂ –  ಎಲ್ಲಿ? ಎಲ್ಲಿ? (ಎಂದು ನೋಡುವರು) 

ಶಿ. ಬ್ರ –    ಇದರಲ್ಲೇನೋ ಅದ್ಭುತವಿದೆ. ಇವರ ಮಹಾತ್ಯಾಗ ಲೋಕಕ್ಕೆ ಮಾರ್ಗದರ್ಶಕರವಾಗಿರಬೇಕೆಂದು ಆ ಶಿವನೇ ಹೀಗೆ ಮಾಡಿದ್ದಾನೆ. 

ಸ –  ಈ ದೇವಾಲಯದಲ್ಲಿನ ಒಂದೊಂದು ಶಿಲ್ಪದಲ್ಲೂ ಒಂದೊಂದು ಸಂದೇಶವಿದೆ. ಈ ಕಣ್ಣಿನ ಗುರ್ತುಗಳಲ್ಲಿ ತ್ಯಾಗದ ಸಂದೇಶವಿದೆ. ಇದೂ ಒಂದು ಶಿಲ್ಪವೇ 

ಶಿ –  ಹೌದು, ಉಳಿದ ಶಿಲ್ಪಗಳು ಮಾನವ ನಿರ್ಮಿತಗಳು. ಈ ತ್ಯಾಗ ಶಿಲ್ಪವು ದೈವನಿರ್ಮಿತ. 

ಸ –  ಎಲ್ಲ ಸಂದೇಶಗಳಿಗಿಂತಲೂ ಮಿಗಿಲಾದದ್ದು ತ್ಯಾಗದ ಸಂದೇಶ. ತ್ಯಾಗದಿಂದ ಮೈತ್ರಿ ಬೆಳೆಯುತ್ತೆ. ದ್ವೇಷಗಳು ಅಣಗಾರುತ್ತವೆ. ಲೋಕ ಕಲ್ಯಾಣವಾಗುತ್ತೆ. 

ಅರ್ಚಕ  –  (ಪ್ರವೇಶಿಸಿ) – ನಕರ್ಮಣಾನ ಪ್ರಜಯಾ ಧನೇನ ತ್ಯಾಗೇ ನೈಶೇ ಅಮೃತತ್ವಮಾನಶಾಃ. ಅಂದರೆ, ತ್ಯಾಗದಿಂದಲೇ ಮೋಕ್ಷ ಎಂದು ಶ್ರುತಿಗಳು ಸಾರುತ್ತಿವೆ. ಭಗವಂತನ ಪ್ರಸಾದವನ್ನು ಸ್ವೀಕರಿಸಿ.. (ಎಲ್ಲರೂ ಪ್ರಸಾದವನ್ನು ಸ್ವೀಕರಿಸುವರು. ವಿರುಪಣ್ಣನೂ ಬಂದು ಪ್ರಸಾದ ಸ್ವೀಕರಿಸುವನು) 

ಶಿ. ಬ್ರ –    ವಿರುಪಣ್ಣ ನೋಡಲಾರದ ಶಿಲ್ಪಗಳನ್ನು ನಿರ್ಮಿಸಿ ಈ ದೇವಾಲಯವನ್ನು ಪೂರ್ತಿ ಮಾಡಲು ನನಗೆ ಇಚ್ಛೆಇಲ್ಲ. ದೈವನಿರ್ಮಿತವಾದ ಈ ತ್ಯಾಗಶಿಲ್ಪದಿಂದ ದೇವಾಲಯವು ಪೂರ್ಣವಾಗಿದೆ ಎಂದೇ ಭಾವಿಸಬಹುದು. ಈ ತ್ಯಾಗ ಶಿಲ್ಪ ಅಮರವಾಗಿರಲಿ. ಇದರ ಸಂದೇಶ, ಅಮರವಾಗಿರಲಿ. 

ಎಲ್ಲರೂ – ಅಮರವಾಗಿರಲಿ. 

ವಿರು – ಸಮಸ್ತ ಲೋಕಕ್ಕೂ ಶುಭವಾಗಲಿ. 

ಸರ – ತ್ಯಾಗದಿಂದಲೆ ಭುಕ್ತಿ, ತ್ಯಾಗದಿಂದಲೇ ಮುಕ್ತಿ. ತ್ಯಾಗವೇ ಲೋಕಕ್ಕೆ ಕಲ್ಪವೃಕ್ಷ.

ದ್ವೇಷಗಳ ರೋಷಗಳ ಮತ್ಸರಾಸೂಯೆಗಳ ಬೇರಾದ ಮಮತೆಯಂ ಕಿತ್ತು ಹಾಕುವ ತ್ಯಾಗ ||ತ್ಯಾಗ|| 

ಸ್ಪರ್ಧೆಯಿಂದ ಸ್ಪರ್ಧಿಸಿ ಸಹಕಾರದೊಂದಿಗೆ ಸಹಕರಿಸಿ ಸಮತೆಯನು ಹರಡುವಾ ತ್ಯಾಗ ||ತ್ಯಾಗ||

ಪರರಿಗುಪಕಾರವೇ ಪುಣ್ಯವೂ ಧರ್ಮವೂ, ಪುಣ್ಯ ಧರ್ಮಗಳನ್ನು ಪೋಷಿಸುತ್ತಿಹ ತ್ಯಾಗ ||ತ್ಯಾಗ||

ಧನವುಧಾನ್ಯವು ಲಕ್ಷ್ಮಿ ವಿದ್ಯೆ ಬುದ್ಧಿಯು ಲಕ್ಷ್ಮಿ, ಸದ್ಗುಣಂಗಳು ಲಕ್ಷ್ಮಿ ಅದ ಬೆಳೆಸಿಹಂಚುವಾ ||ತ್ಯಾಗ||

ಮಾಯೆಯಾ ಕತ್ತಲೆಯ ಹೋಗಲಾಡಿಸಿ ಮೆರೆವ ಸತ್ಯವಂ ತೋರಿಸುವ ಚೈತನ್ಯವೇ ತ್ಯಾಗ ||ತ್ಯಾಗ||

(ತೆರೆ ಬೀಳುವುದು)

ಶ್ರೀ ಮಹಾಲಕ್ಷ್ಮಿ ಚರಣಾರವಿಂದಾರ್ಪಣಮಸ್ತು|| 

                                                            ಲಂಕ ಕೃಷ್ಣಮೂರ್ತಿ  

                                                               03/11/1975