ಅತ್ತೆಯ ಎತ್ತರ 

                                                     (ನಾಟಕ)  ರಚನೆ: ದಿ.ಲಂಕಾ ಕೃಷ್ಣಮೂರ್ತಿ.

Published by   LANKA KRISHNA MURTI FOUNDATION                                                     

(https://www.facebook.com/lankakrishnamurtifoundation/)                   

Website (https://www.krishnamurtifoundation.com/lanka/)

LKM FOUNDATION-YOUTUBE

(https://www.youtube.com/channel/UCptmyD6GditXlBWnaRNI11A)

                                      ಅತ್ತೆಯ ಎತ್ತರ 

                                                     (ನಾಟಕ)  ರಚನೆ: ದಿ.ಲಂಕಾ ಕೃಷ್ಣಮೂರ್ತಿ.

                                                                                 03-11-1975

                                             ದೃಶ್ಯ-1

(ರಂಗಸ್ಥಳದ ಹಿಂದಿನ ಅರ್ಧ ಭಾಗದ ಮಧ್ಯೆ ಒಂದು ಸ್ಕ್ರೀನ್ ಇರುವುದು. ಸ್ಕ್ರೀನ್‍ನ ಎಡಭಾಗದಲ್ಲಿ ಚಂದ್ರನ್ ಎಂಬ ಸುಮಾರು 28 ವರ್ಷ ವಯಸ್ಸಿನ ಹುಡುಗನು ಕುರ್ಚಿಯ ಮೇಲೆ ಕುಳಿತು ಒಂದು ಮಾಸ ಪತ್ರಿಕೆಯನ್ನು ಓದುತ್ತಿರುವನು. ಸ್ಕ್ರೀನಿನ ಬಲಗಡೆ ಒಂದು ಆರಾಮ ಕುರ್ಚಿ ಮತ್ತು ಒಂದು ಸ್ಟೂಲ್ ಇರುವುವು. 52 ವರ್ಷ ವಯಸ್ಸಿನ ಪೂರ್ಣಯ್ಯ ಬಲಗಡೆ ಭಾಗದಲ್ಲಿ ಪ್ರವೇಶಿಸುವನು).

ಪೂರ್ಣಯ್ಯ   :    ವರಂಡಾದಲ್ಲೇ ಚಪ್ಪಲಿ ಬಿಟ್ಟು, ಪಡಸಾಲೆಯಲ್ಲೇ ರುಮಾಲ್, ಕೋಟು, ಷರಟೂ ಬಿಚ್ಚಿ, ಹಿತ್ತಲಿನ ಕೊಳಾಯಿಯಲ್ಲಿ ಕೈ ಕಾಲು ತೊಳೆದುಕೊಂಡು ಒದ್ದೆ ಬಟ್ಟೆಯಿಂದ ಮನೆಯ ಪಂಚೆಯನ್ನುಟ್ಟು ಈ ಪ್ರೈವೇಟ್ ರೂಮಿಗೆ ಬಂದಿದ್ದೇನೆ, ಇನ್ನಾದರೂ ಕಾಫೀ ತಕೊಂಡು ಬಾರೇ ಮಡೀ ಹೆಂಗಸೇ, ನಾಲಿಗೆ ಒಣಗಿ ಹೋಗ್ತಾ ಇದೆ.

                        (ಸುಮಾರು 47 ವರ್ಷ ವಯಸ್ಸಿನ ಸಾವಿತ್ರಮ್ಮ ಪ್ರವೇಶಿಸುವಳು)

ಸಾವಿತ್ರಮ್ಮ  :    ಅಯ್ಯೋ. . .ಏನ್ರೀ ಇದು ಹೀಗೆ ಮಾತಾಡ್ತಾ ಇದ್ದೀರಿ, ನೀವು ಇವತ್ತು? ನೀವು ಬದುಕಿರೋವಾಗಲೇ ನನ್ನನ್ನು ಮಡೀ ಹೆಂಗಸು ಅಂತಾ ಹೇಳ್ತಾ ಇದ್ದೀರಿ? ಏನಾಯ್ತುರೀ ನಿಮ್ಮ ಬುದ್ಧಿಗೆ?

ಪೂರ್ಣಯ್ಯ   :    ನನ್ನ ಬುದ್ಧಿಗೆ ಏನೂ ಆಗಿಲ್ಲ. ನಿನಗೆ ವಯಸ್ಸು ಬಂದ್ಹಾಗೆಲ್ಲಾ ನಿನ್ನ ಮಡಿ ಇಮ್ಮಡಿ, ಮುಮ್ಮಡಿ, ನೂರ್ಮಡಿ, ಸಾವಿರ ಮಡಿ ಆಗ್ತಾ ಆಗ್ತಾ ನಾನು ಸತ್ತು ಹೋಗ್ತಾ ಹೋಗ್ತಾ ಇರುವಾಗ ನಿನ್ನನ್ನು ಮಡೀ ಹೆಂಗ್ಸೂ ಅಂತಲ್ಲದೇ ಇನ್ನೇನೆಂದು ಕರೀಲಿ. ಮೊದಲು ಈ ಬಾಯಿಗಿಷ್ಟು ಕಾಫಿ ಹಾಕಿ ನಿನ್ನ ಈ ಗಂಡನ ಪ್ರಾಣ ಉಳಿಸಿಕೋ, ನಿನ್ನನ್ನು ಮಡೀ ಹೆಂಗ್ಸು ಅನ್ನೋದನ್ನು ಬಿಟ್ಟು ಸಾವಿತ್ರೀ . . ಎಂದೇ ಕರೀತೀನಿ. (ಆರಾಮ ಕುಚ್ಚಿಯಲ್ಲಿ ಕುಸಿದು ಬಿಡುವನು)

ಸಾವಿತ್ರಮ್ಮ  :    ಆಗಲಿ (ಎಂದು ಹೊರಡುವಳು)

                       (ಚಂದ್ರನ್ ಕುರ್ಚಿಯಿಂದ ಎದ್ದು ಸ್ಕ್ರೂಡ್ರೈವರ್ ತೆಗೆದುಕೊಂಡು ಸ್ಕ್ರೀನ್‍ನಿಂದ ಒಂದು ಹಲಗೆಯನ್ನು ಬಿಚ್ಚಿ ಸ್ಕ್ರೀನಿಗೆ ಇದ್ದ ಎರಡು ಮೊಳೆಗಳ ಮೇಲೆ ಇಟ್ಟು ಅದರ ಮೇಲೆ ಕ್ಷೌರದ ಸಾಮಾನುಗಳನ್ನಿಟ್ಟುಕೊಂಡು ಬ್ರಷ್‍ನಿಂದ ಗಡ್ಡಕ್ಕೆ ಸಾಬೂನು ಹಚ್ಚುತ್ತಿರುವನು).

ಪೂರ್ಣಯ್ಯ   :    (ತಟಕ್ಕನೆ ಎದ್ದು) ಏನೇ, ಒಂದು ಲೋಟಾ ಕಾಫೀ ತಯಾರು ಮಾಡಿಕೊಂಡು ಬರೋದಕ್ಕೆ ಇಷ್ಟು ಹೊತ್ತು ಬೇಕೇನೇ? ಆಫೀಸಿನಿಂದ ಬರುವಾಗ ಬಸ್ಸಿನ ನುಗ್ಗಾಟದಲ್ಲಿ ಉಳಿಸಿಕೊಂಡು ಬಂದಿರೋ ಪ್ರಾಣವನ್ನು ನೀನು ಇಲ್ಲಿ ತೆಗೆದು ಹಾಗ್ತಾ ಇದ್ದೀಯೆ.

ಸಾವಿತ್ರಮ್ಮ  :    (ಪ್ರವೇಶಿಸಿ) ಕಾಫೀ ಕಾಫೀ ಅಂತಾ ಯಾಕೆ ಸುಮ್ಮನೇ ಬಡಕೊಂತೀರಿ? ಕೊಳಾಯಿ ಹತ್ತಿರ ಬಿಟ್ಟಿರೋ ಆಫೀಸು ಪಂಚೆ ಪೂರ್ತಿ ಒದ್ದೇನೇ ಆಗಿಲ್ಲ, ನಾನದನ್ನು ಮುಟ್ಟಿ ಒಗೆಯೋದು ಹೇಗೆ? ಪೂರ್ತಿ ಒದ್ದೇ ಮಾಡಿ ಬನ್ನಿ ಅಷ್ಟು ಹೊತ್ತಿಗೆ ಕಾಫೀ ಮಾಡಿರ್ತೀನಿ. (ಎಂದು ಹೊರಡುವಳು)

ಪೂರ್ಣಯ್ಯ   :    ಅಯ್ಯೋ ಕರ್ಮವೇ, ನೀನು ಮಡೀ ಹೆಂಗಸು ಒಂದೇ ಅಂತ ಅಂದುಕೊಂಡಿದ್ದೆ. ಈಗ ನಿನ್ನ ಬುದ್ಧಿಯೂ ಬೋಳಾಗಿ ಬಿಟ್ಟಿದೆ ಅಂತ ಅರ್ಥವಾಯಿತು. ನಾನು ಕಾಫೀ ಕಾಫೀ ಅಂತ ಬಾಯಿ ಬಿಟ್ಟು ಸತ್ತು ಹೋದರೆ ನಿನ್ನ ತಲೆಯೂ ಬೋಳಾಗುತ್ತೆ.

ಚಂದ್ರನ್         :    (ರಂಗಸ್ಥಳದಲ್ಲಿ ಪೂರ್ತಿ ಎಡಗಡೆಗೆ ಬಂದು ಸ್ವಗತವಾಗಿ) ನಮ್ಮಪ್ಪನನ್ನು ಸಾಯಿಸುತ್ತಿರೋ ಈ ಕಾಫೀ ರೋಗವನ್ನು ಪೂರ್ತಿ ಸ್ಟಡೀ ಮಾಡಿ ಅದರ ಮೇಲೆ ಹೊಸದಾಗಿ ಒಂದು ಆರ್ಟಿಕಲ್ ಬರೆದು ಪತ್ರಿಕೆಗಳಿಗೆ ಕಳಿಸಿದರೆ ಈ ಚಂದ್ರನನ್ನು ಎಲ್ಲರೂ ಡಾಕ್ಟರೆಂದೇ ಭಾವಿಸ್ತಾರೆ. ಇದು ಒಂದು ಒಳ್ಳೇ ಉಪಾಯ. (ಎಂದು ಸ್ಟೆಥಸ್ಕೋಪನ್ನು ತೆಗೆದುಕೊಂಡು ಕಿವಿಗಳಿಗೆ ಹಾಕಿಕೊಂಡು ಸ್ಕ್ರೀನಿನಿಂದ ಹಲಗೆ ತೆಗೆದ ಪ್ರದೇಶದಲ್ಲಿ ಅದನ್ನಿಟ್ಟು ಪರೀಕ್ಷಿಸುತ್ತಿರುವನು)

ಪೂರ್ಣಯ್ಯ   :  ಇನ್ನೂ ಆಗಲಿಲ್ಲವೇನೇ ಕಾಫೀ? ನಾನು ಸಾಯುತ್ತಾ ಇದ್ದರೆ ನಿನಗೇನು ತಮಾಷೆಯೇ? ಎಲ್ಲಿ, ಆ ಒನಕೆ ತಗೊಂಡು ಬಾ ಇಲ್ಲಿ. ನಿನ್ನನ್ನು ಕೊಂದು ಮುತ್ತೈದೆ ಸ್ವರ್ಗಕ್ಕೆ ಕಳಿಸಿ ನಾನೂ ಕಾಫೀ ಇಲ್ಲದೆ ಸತ್ತು ನಿನ್ನನ್ನು ಬಂದು ಸೇರ್ತೀನಿ.

ಚಂದ್ರನ್         :    (ಹಿಂದಿನಂತೆ ಸ್ವಗತವಾಗಿ) ಆ, ಇದೇ ಅಲ್ಲವೇ ಕ್ರೋಧ! ಕ್ರೋಧ! ಎಲ್ಲಿ ನೋಡೋಣ ಹೇಗೆ ಬಂದಿದೆಯೋ ನನ್ನ ಕ್ರೋಧದ ಚಿತ್ರ. (ಎಂದು ಒಂದು ದೊಡ್ಡ ಕಾಗದದ ಮೇಲೆ ಬರೆದಿರುವ ಕ್ರೋಧದ ಚಿತ್ರವನ್ನೆತ್ತಿಕೊಂಡು ನೋಡುವನು. ಅದನ್ನು ಕೆಳಗಿಟ್ಟು ಪುನಃ ಬಂದು ಸ್ಟೆಥಸ್ಕೋಪಿನಿಂದ ಪರೀಕ್ಷಿಸುತ್ತಿರುವನು)

                        (ಸ್ಕ್ರೀನಿನ ಬಲಭಾಗದಲ್ಲಿ – ಸಾವಿತ್ರಮ್ಮ ಕಾಫಿ ತರುವಳು)

ಸಾವಿತ್ರಮ್ಮ  :    ತಕೊಳ್ಳಿ ಕಾಫೀ. ಒಲೆ ಹಚ್ಚೋದಕ್ಕಿಲ್ಲ, ನೀರಿಡೋದಕ್ಕಿಲ್ಲ, ಪುಡಿ ಹಾಕೋದಕ್ಕಿಲ್ಲ, ಸಕ್ಕರೆ ಹಾಕೋದಕ್ಕಿಲ್ಲ, ಹಾಲು ಹಾಕೋದಕ್ಕಿಲ್ಲ, ಒಂದೇ ಸಮವಾಗಿ ಕಾಫೀ ಕಾಫೀ ಅಂತ ಜಪ ಮಾಡಿದರೆ ಹೇಗೆ?

ಪೂರ್ಣಯ್ಯ   :    ತಕೊಂಡು ಬಂದೆಯಲ್ಲಿ ಸಧ್ಯಕ್ಕೆ, ಪ್ರಾಣ ಉಳಿಸಿದೆಯಲ್ಲಾ. ಸಾವಿತ್ರೀ, ಬಾ, ಹತ್ತಿರಕ್ಕೆ ಬಾ . . ನನ್ನ ಮಾತುಗಳಿಗೆ ಕೋಪ ಮಾಡಿಕೊಳ್ಳಲಿಲ್ಲ ತಾನೇ?

ಸಾವಿತ್ತಮ್ಮ :    ನನಗೇನೂ ಕೋಪವಿಲ್ಲ.

ಪೂರ್ಣಯ್ಯ   :    ಹಾಗಾದರೆ ಎಲ್ಲಿ ನಿನ್ನ ಮುಖ ತೋರಿಸು.

ಸಾವಿತ್ರಮ್ಮ  :    ಇಲ್ಲ ನನಗೆ ನಾಚಿಕೆ ಆಗುತ್ತೆ.

ಪೂರ್ಣಯ್ಯ   :    ಇದು ನನ್ನ ಪ್ರೆವೇಟ್ ರೂಮು. ಇಲ್ಲಿ ಯಾತಕ್ಕೆ ನಿನಗೆ ನಾಚಿಕೆ? ನೋಡು (ಪ್ರೇಕ್ಷಕರ ಕಡೆ ಕೈ ತೋರಿಸಿ) ಇದು ದಪ್ಪವಾದ ಗೋಡೆ. ತಾತ ಮುತ್ತಾತಂದಿರ ಕಾಲದಿಂದ ಬಂದ ಎರಡಡೀ ಗೋಡೆ. (ಹಿಂದಕ್ಕೆ ತಿರುಗಿ) ಇದು ಅಣ್ಣ ತಮ್ಮಂದಿರ ವಿಭಾಗದ ಗೋಡೆ. ಒಂದೂ ಕಾಲಡೀದು. (ಸ್ಕ್ರೀನ್ ಕಡೆ ತಿರುಗಿ) ಇದು ನಮ್ಮ ಮಗ ಚಂದೀಗೆ ನಮ್ಮ ಮಾತುಗಳು ಕೇಳಿಸಬಾರದೂ ಅಂತ ಮಾಡಿಸಿರೋ ಫುಲ್ ಸ್ಕ್ರೀನು. (ಕೈಯಿಂದ ತೋರಿಸುತ್ತಾ) ಕೆಳಗಿನಿಂದ ಮೇಲಿನವರೆಗೂ ಆ ಗೋಡೆಯಿಂದ ಈ ಗೋಡೆಯವರೆಗೂ ಸ್ಕ್ರೀನೇ. ಈ ಪ್ರೈವೇಟ್ ರೂಮಿನಲ್ಲಿ ನಿನ್ನ ಮುಖ ನನಗೆ ತೋರಿಸೋದಕ್ಕೆ ನಾಚಿಕೆಯೇಕೆ?

ಸಾವಿತ್ರಮ್ಮ  :  ನೀವು ಎರಡು ಗೋಡೆ ಒಂದು ಸ್ಕ್ರೀನಿನ ಮಧ್ಯೆ ನಾಚಿಕೆಯಿಲ್ಲದೇ ಇರಿ. ನಾನು ಬಂದ ಬಾಗಿಲಿನಿಂದ ನನ್ನ ಕೆಲಸಕ್ಕೆ ಹೋಗ್ತೀನಿ. (ಎಂದು ಕಾಫೀ ಸ್ಟೂಲ್ ಮೇಲೆ ಇಟ್ಟು ಹೋಗುವಳು).

ಚಂದ್ರನ್         :    (ಹಿಂದಿನಂತೆ ಸ್ವಗತವಾಗಿ) ಕಾಮ! ಎಲ್ಲಿ ನಾನು ಬರೆದ ಕಾಮದ ಚಿತ್ರವನ್ನು ನೋಡೋಣ? (ಎಂದು ಇನ್ನೊಂದು ಚಿತ್ರವನ್ನು ತೆಗೆದುಕೊಂಡು ನೋಡಿ ಪುನಃ ಬಂದು ಸ್ಟೆಥಸ್ಕೋಪಿನಿಂದ ಪರೀಕ್ಷಿಸುತ್ತಿರುವನು).

                        (ಪೂರ್ಣಯ್ಯ ಸ್ವಲ್ಪ ಹೊತ್ತು ನಿಶ್ಚೇಷ್ಟನಾಗಿ ನಿಂತಿದ್ದು ಆರಾಮ ಕುರ್ಚಿಯ ಮೇಲೆ ಬಂದು ಕುಳಿತುಕೊಂಡು ಕಾಫೀ ಕೈಗೆ ತೆಗೆದುಕೊಳ್ಳುವನು. ಕುಡಿಯಲು ಬಾಯಿಯವರೆಗೂ ತಂದವನು ಏನೋ ಜ್ಞಾಪಕ ಮಾಡಿಕೊಂಡು ತಟಕ್ಕನೆ ಸ್ಟೂಲಿನ ಮೇಲೆ ಇಡುವನು).

ಪೂರ್ಣಯ್ಯ   :    ಸಾವಿತ್ರೀ, ಲೇ . .ಸಾವಿತ್ರೀ, ಸ್ವಲ್ಪ ಇಲ್ಲಿ ಬಾ .

ಸಾವಿತ್ರಮ್ಮ  :    (ಪ್ರವೇಶಿಸಿ) ನಾನಿಲ್ಲದಿದ್ದರೆ ಕಾಫೀ ಗಂಟಲೊಳಗೆ ಇಳಿಯೋದೇ ಇಲ್ಲವೇನೋ?

ಪೂರ್ಣಯ್ಯ   :  ನೀನಿರಬೇಕೂಂತಲ್ಲ ನಾನು ಕರೆದಿದ್ದು. ನಾನು ಈವತ್ತು ಬೆಳಿಗ್ಗೆ ಸ್ನಾನ ಮಾಡೋದಕ್ಕೆ ಮೊದಲು ಹಲ್ಲುಜ್ಜಿಕೊಂಡೆನೇನೇ? ನನಗೇನೋ ಅನುಮಾನ ಆಗ್ತಾ ಇದೆ. ನಾನು ಹಲ್ಲುಜ್ಜಿಕೊಂಡಿದ್ದು ನೀನು ನೋಡಿದೆಯಾ?

ಸಾವಿತ್ರಮ್ಮ  :    ನನಗದೇ ಕೆಲಸ. ನೀವು ಹಲ್ಲುಜ್ಜಿಕೊಳ್ಳೋದು ಇಲ್ಲದೇ ಇರೋದೂ ನೋಡ್ತಾ ಕೂತು ಕೊಂಡರೆ ಈ ಮನೇ ಕಲೆಸಾ ಯಾರು ಮಾಡ್ತಾರೆ?

ಪೂರ್ಣಯ್ಯ   :  ಮನೇ ಕೆಲಸಕ್ಕೆ ಬರ್ತಾಳೆ ಸೊಸೆ. ಸ್ವಲ್ಪ ತಾಳು. ಕಾಫೀ ಕುಡಿದು ನಿನಗೆ ಹೇಳೋಣಾಂತಿದ್ದೆ. ಮೊದಲು ನನಗೆ ಅನುಮಾನ ತೀರಬೇಕು. ನಾನೀವತ್ತು ಹಲ್ಲುಜ್ಜಿ ಕೊಂಡೆನೇ ಇಲ್ಲವೇ?

ಸಾವಿತ್ರಮ್ಮ  :  ನನ್ನನ್ನು ಮಡೀ ಹೆಂಗಸು ಅಂತ ಹೇಳಿದ ನೀವೇಕೆ ಅನುಮಾನದ ಪಿಶಾಚಿ ಆಗಿಬಿಟ್ಟಿರಿ?

ಪೂರ್ಣಯ್ಯ   :  ನಾನೇನೂ ಅನುಮಾನದ ಪಿಶಾಚಿಯಲ್ಲ. ಸೆಕೆಂಡ್ ಷೋ ಸಿನಿಮಾ ನೋಡಿದ ಮೇಲೆ ರಾತ್ರಿಯೆಲ್ಲಾ ಅದೇ ತಲೆಯಲ್ಲಿ ತಿರುಗಾಡ್ತಾ ಇತ್ತು. ಆದ್ದರಿಂದ ಬೆಳಿಗ್ಗೆ ಪರಧ್ಯಾನದಲ್ಲಿ ಹಲ್ಲುಜ್ಜಿಕೊಳ್ಳದೇನೇ ಸ್ನಾನ ಮಾಡಿಬಿಟ್ಟೆನೇ ಅಂತ ಈಗ ಅನುಮಾನ ಆಗ್ತಾ ಇದೆ, ಅಷ್ಟೇ.

ಚಂದ್ರನ್         :    (ಹಿಂದಿನಂತೆ ಸ್ವಗತವಾಗಿ) ನಮ್ಮಪ್ಪನಿಗೆ ಸಿನಿಮಾ ಮೋಹ ಬೇರೇನೋ? ಎಲ್ಲಿ ಮೋಹದ ಚಿತ್ರ ಹೇಗೆ ಬಂದಿದೆಯೋ ನೋಡೋಣ? (ಎಂದು ಇನ್ನೊಂದು ಚಿತ್ರವನ್ನು ತೆಗೆದುಕೊಂಡು ನೋಡಿ ಪುನಃ ಬಂದು ಸ್ಟೆಥಸ್ಕೋಪಿನಿಂದ ಪರೀಕ್ಷಿಸುತ್ತಿರುವನು)

ಸಾವಿತ್ರಮ್ಮ  :    ಅನುಮಾನ ಆದರೆ, ಇನ್ನೊಂದು ಸಲ ಹಲ್ಲುಜ್ಜಿಕೊಂಡು ಬನ್ನಿ. ಆ ಮೇಲೆ ಕಾಫೀ ಕುಡೀರಿ.

ಪೂರ್ಣಯ್ಯ   :    ಅಷ್ಟು ಹೊತ್ತಿಗೆ ಕಾಫೀ ತಣ್ಣಗಾಗಿ ಬಿಡುತ್ತೆ. ಇನ್ನೊಂದು ಸಲ ಕಾಫೀ ಮಾಡು. ನೀನು ಮಾಡೋಷ್ಟರೊಳಗೆ ನಾನು ನೂರು ಸಲ ಹಲ್ಲುಜ್ಜಿಕೊಂಡು ಬರುತ್ತೇನೆ.

ಸಾವಿತ್ರಮ್ಮ  :  ಋಷಿ ಪಂಚಮಿಯಲ್ಲಿ ನೂರೆಂಟು ಸಲ ಹಲ್ಲುಜ್ಜುತಾರಲ್ಲಾ, ಹಾಗುಜ್ಜಿದರೆ ಏನುಪಯೋಗ? – ಈ ಕಾಫೀ ತಣ್ಣಗಾದರೆ ಇದನ್ನೇನು ಮಾಡಬೇಕು. ಪುಡೀ, ಹಾಲೂ, ಸಕ್ಕರೇ ಹಾಕಿ ಚೆಲ್ಲಿ ಬಿಡೋದಕ್ಕಾಗುತ್ತಾ? ಇದನ್ನೇ ಬಿಸಿ ಮಾಡ್ತೀನಿ. ಹಲ್ಲುಜ್ಜಿಕೊಂಡು ಬನ್ನಿ.

ಪೂರ್ಣಯ್ಯ   :    ಸೆಕೆಂಡ್ ಹ್ಯಾಂಡ್ ಕಾಫಿಯನ್ನು ಕುಡಿಯೋ ದೌರ್ಭಾಗ್ಯ ಈ ಪೂರ್ಣಯ್ಯನಿಗೆ ಇನ್ನೂ ಬಂದಿಲ್ಲ. ನೀನೇ ಕುಡಿ ಆ ಸೆಕೆಂಡ್ ಹ್ಯಾಂಡ್ ಕಾಫೀಯನ್ನು. ನನಗೆ ಫಸ್ಟ್ ಹ್ಯಾಂಡ್ ಬೇರೆ ಮಾಡಿ ಕೊಡು.

ಸಾವಿತ್ರಮ್ಮ  :  ನಾನೇತಕ್ಕೆ ಕುಡೀತೀನಿ ಸೆಕೆಂಡ್ ಹ್ಯಾಂಡ್ ಕಾಫಿಯನ್ನು; ನೀವೇ ಕುಡಿದೇ ಇದ್ದಮೇಲೆ?

ಪೂರ್ಣಯ್ಯ   :  ಇನ್ನೂ ಫಸ್ಟ್ ಹ್ಯಾಂಡ್‍ನಲ್ಲೇ ಇದೆ. ಈಗಲೇ ನೀನು ಕುಡಿದು ಬಿಡು.

ಸಾವಿತ್ರಮ್ಮ  :    ನೀವು ಕುಡಿ ಅಂದಾಗೆಲ್ಲಾ ಕುಡಿಯೋದಕ್ಕೆ ನನ್ನ ಹೊಟ್ಟೆಯೇನು ಭಾವಿಯೋ, ಕೆರೆಯೋ, ನಿಮಗೆ ಕಾಫೀ ಇಟ್ಟುಬಿಟ್ಟು ಹೋದವಳು ಉಳಿದದ್ದೆಲ್ಲಾ ನಾನು ಈಗ ತಾನೆ ಕುಡಿದು ಬಂದೆ.

ಪೂರ್ಣಯ್ಯ   :    ಒಳ್ಳೇ ಪತಿವ್ರತೆ ನೀನು – ನಿನ್ನ ಮಗ ಬಂದಿದ್ದರೆ ಅವನಿಗೆ ಕೊಡು ಇಲ್ಲಿಗೆ ಕರೆದು. ಇಲ್ಲಿಂದ ಕರೆದರೆ ಅವನಿಗೆ ಕೇಳಿಸೋದಿಲ್ಲ. ಫುಲ್ ಸ್ಕ್ರೀನ್ ಮಾಡಿಸಿದ್ದೇನೆ. ಈ ಕಡೆಯಿಂದ ಸುತ್ತು ಹಾಕಿಕೊಂಡು ಹೋಗಿ ಕರೆದು ಬಾ. ಆರಿ ಹೋಗುತ್ತೆ. ಜಾಗ್ರತೆಯಾಗಿ ಹೋಗು.

ಸಾವಿತ್ರಮ್ಮ  :    ಈ ಫುಲ್ ಸ್ಕ್ರೀನ್ ಬೇರೆ ನನ್ನ ಹಣೇ ಬರಹಕ್ಕೆ. (ಹೊರಡುವಳು)

                        (ಚಂದ್ರನ್ ಆರು ಚಿತ್ರಗಳನ್ನು ಸುರುಳಿ ಸುತ್ತಿ ಕಂಕುಳಲ್ಲಿಟ್ಟು ಕೊಂಡು ಹೊರಡುವನು. ಪುನಃ ಇತ್ತ ಕಡೆಯಿಂದ ಪ್ರವೇಶಿಸುವನು).

ಚಂದ್ರನ್         :    ಎಲ್ಲಪ್ಪಾ ಕಾಫೀ.

ಪೂರ್ಣಯ್ಯ   :    ಲೋ, ಏನೋ ಇದು? ನಾನು ಕಾಫೀ ಕೊಡೋಣ ಅಂತ ಕರೆದರೆ ಮುಖಕ್ಕೆಲ್ಲಾ ಸಾಬೂನು ಹಾಕಿಕೊಂಡು ಬಂದಿದ್ದೀಯೆ. ಬಚ್ಚಲ ಮನೆಯಲ್ಲಿದ್ದೆಯೇನೋ? ಪೂರ್ತಿ ಮುಖ ತೊಳೆದುಕೊಂಡು ಬರಬಾರದೇನೋ? ಕಾಫೀ ಅಂದರೆ ಅಷ್ಟು ಬಾಯಿ ಬಿಡೋದೇನೋ?

ಚಂದ್ರನ್         :    ನಾನು ಕಾಫೀ ಅಂದ್ರೆ ಬಾಯಿ ಬಿಡ್ತೀನಿ ನಿಜ. ಆದರೆ ಪ್ರಾಣ ಬಿಡೋವನಲ್ಲ.

ಪೂರ್ಣಯ್ಯ   :    ಆ . . ಪ್ರಾಣ ಬಿಡೋವನಲ್ಲವಾ. (ಸ್ಕ್ರೀನ್ ಕಡೆ ನೋಡುವನು).

ಚಂದ್ರನ್         :    ಸತ್ತು ಹೋಗುವವನೂ ಅಲ್ಲ.

ಪೂರ್ಣಯ್ಯ   :    ಆ . . ಸತ್ತು ಹೋಗುವವನೂ ಅಲ್ಲವಾ (ಪುನಃ ಸ್ಕ್ರೀನ್ ಕಡೆ ನೋಡುವನು).

ಚಂದ್ರನ್         :    ಸೋಪ್ ಯಾತಕ್ಕೆ ತೊಳೆದುಕೊಳ್ಳಬೇಕಪ್ಪಾ. ಕಾಫೀ ಅರ್ಧ ಆರಿಹೋಯಿತು. ಹಾಗೇ ಕುಡಿದುಬಿಡ್ತೀನಿ. (ಎಂದು ಲೋಟಾ ತೆಗೆದುಕೊಳ್ಳಲು ಹೋಗುವನು).

ಪೂರ್ಣಯ್ಯ   :    (ಅಡ್ಡ ಬಂದು) ಛೀ ಛೀ . . ಏನೋ ನಿನ್ನ ಅನಾಚಾರ? ಈ ಕಾಲದ ಹುಡುಗರಿಗೆ ಆಚಾರವೇ ಗೊತ್ತಿಲ್ಲ. ಮುಖದ ಮೇಲೆ ಸಾಬೂನು ಹಾಕಿಕೊಂಡೇ ಕಾಫೀ ಕುಡಿಯುವುದು.

ಚಂದ್ರನ್         :    ನೀವು ಹಲ್ಲುಜ್ಜಿಕೊಳ್ಳದೇನೇ ದೇವರ ಪೂಜೆ, ಊಟ, ಎಲ್ಲಾ ಮಾಡಬಹುದು. ನಾನು ಸಾಬುನು ಹಾಕಿಕೊಂಡು ಕಾಫೀ ಕುಡಿದರೆ ತಪ್ಪೇನಪ್ಪಾ.

ಪೂರ್ಣಯ್ಯ   :    ಆ . . ನಾನು ಬೆಳಗ್ಗೆ ಹಲ್ಲುಜ್ಜಿಕೊಳ್ಳಲಿಲ್ಲವೇ? ಯಾರು ಹೇಳಿದ್ದು ನಿನಗೆ. ನಿಮ್ಮ ಅಮ್ಮ ಹೇಳಿದಳೋ? ಎಲ್ಲಾ ಸುಳ್ಳು.

ಚಂದ್ರನ್         :    ನೀವೇ ಅಮ್ಮನಿಗೆ ಹೇಳ್ತಾ ಇದ್ದಿರಲ್ಲಾ. ಅನುಮಾನ ಅಂತಾ, ಅದಕ್ಕೇ ತಾನೇ ನೀವು ಕಾಫೀ ಇಲ್ಲೇ ಇಟ್ಟಿರೋದು.

ಪೂರ್ಣಯ್ಯ   :    ಆ . . . ನನ್ನ ಮಾತುಗಳೆಲ್ಲಾ ನಿನಗೆ ಕೇಳಿಸ್ತಾ ಇತ್ತೇನೋ? ಅಂದರೆ ಆ ಬಡಗಿ ಫುಲ್ ಸ್ಕ್ರೀನ್ ಸರಿಯಾಗಿ ಮಾಡಲಿಲ್ಲ ಅಂತ ಅರ್ಥ.

ಚಂದ್ರನ್         :    ಬಡಗೀದೇನೂ ತಪ್ಪಿಲ್ಲ. ನಾನೇ ಸ್ಕ್ರೀನ್‍ನಿಂದ ಒಂದು ಹಲಗೆ ಬಿಚ್ಚಿಕೊಂಡೆ ಸ್ಕ್ರೂಡ್ರೈವರಿನಿಂದ.

ಪೂರ್ಣಯ್ಯ   :    (ಸ್ಕ್ರೀನನ್ನು ನೋಡಿ) ಯಾವ ಜಾಗದಲ್ಲಿ ಬಿಚ್ಚಿಕೊಂಡೆ. ?

ಚಂದ್ರನ್         :    ಇಲ್ಲಿ ನೋಡಿ. (ಎಂದು ಸ್ಕ್ರೀನ್‍ಗೆ ತಗುಲಿ ಹಾಕಿದ್ದ ದೇವರ ಫೋಟೋ ತೆಗೆದು ತೋರಿಸುವನು) ನೀವು ದೇವರ ಫೋಟೋಗೆ ನಮಸ್ಕಾರ ಮಾಡ್ತೀರಿ. ಅದರ ಹಿಂದೆ ಏನಿದೇಂತ ನೋಡೋದಿಲ್ಲ.

ಪೂರ್ಣಯ್ಯ   :  ನೀನೇತಕ್ಕೆ ಹಲಗೆ ಬಿಚ್ಚಿದೆಯೋ.

ಚಂದ್ರನ್         :    ಅದಕ್ಕೆ ಎರಡು ಕಾರಣ. ಒಂದು ನಾನು ಸ್ಕ್ರೂಡ್ರೈವರ್ ಮುಂತಾದ ಉಪಕರಣಗಳನ್ನಿಟ್ಟು  ಕೊಂಡು ಸ್ವತಃ ಮೆಕ್ಯಾನಿಕಲ್ ಇಂಜಿನೀರ್ ಆಗೋದಕ್ಕೆ ಪ್ರಯತ್ನ ಪಡ್ತಾ ಇದ್ದೀನಿ. ಎರಡನೇ ಕಾರಣ. ನನಗೆ ಕನ್ನಡಿ, ನೀರು, ಸೋಪೂ, ರೇಜರು, ಇಟ್ಟುಕೊಳ್ಳೋದಕ್ಕೆ ಒಂದು ಹಲಗೆ ಬೇಕಾಗಿತ್ತು.

ಪೂರ್ಣಯ್ಯ   :    ಅಂದರೆ ನೀನು ಈಗ ಮುಖಕ್ಕೆ ಸಾಬುನು ಹಾಕಿಕೊಂಡಿರೋದು ಮುಖ ತೊಳೆದುಕೊಳ್ಳೋದಕ್ಕಲ್ಲ. ಕ್ಷೌರ ಮಾಡಿಕೊಳ್ಳೋದಕ್ಕೆ ಅಂತ ತಿಳಿಯಿತು.  ಈ ಸಾಯಂಕಾಲದ ಹೊತ್ತು ಯಾರಾದರೂ ಕ್ಷೌರ ಮಾಡಿಕೊಂತಾರೇನೋ. ಮಡಿ ಹೆಂಗಸಿನ ಮಗನೇ? ಅಂದರೆ ಮುಂಡೇ ಮಗನೇ?

ಚಂದ್ರನ್         :    ಯಾಕಪ್ಪಾ ಅಷ್ಟು ಕೋಪ? ನಿಮ್ಮಂಥ ವಯಸ್ಸಾಗಿರೋವವರೂ, ದೇವರ ಪೂಜೆ ಮಾಡೋವವರೂ, ಜಪ ಮಾಡೋವವರೂ, ಕಾಮಕ್ರೋಧಗಳನ್ನು ಬಿಡಬೇಕೇ ಹೊರತು ಹೆಚ್ಚಿಸಿಕೊಳ್ತಾರೇನಪ್ಪಾ. ಏನಪ್ಪಾ ಅಮ್ಮನನ್ನು ಹೀಗೆ ಬಯ್ಯಬಹುದೇನಪ್ಪಾ.

ಪೂರ್ಣಯ್ಯ   :    ಅದು ನನಗೆ ಗೊತ್ತು. ನೀನು ನನಗೆ ಬುದ್ಧಿ ಕಲಿಸಬೇಕಾಗಿಲ್ಲ.

ಚಂದ್ರನ್         :    ಆ . . ಅದೂ ಸಿಕ್ಕಿತು. ಅದೇ ಮದ ಅಪ್ಪಾ, ನನಗಂತು ಓದು ತಲೆಗೆ ಅಂಟೋದಿಲ್ಲ. ನನ್ನ ಜೀವನೋಪಾಯ ನಾನು ನೋಡಿಕೋ ಬೇಕು. ಮೆಕ್ಯಾನಿಕಲ್ ಇಂಜಿನೀಯರ್ ಆಗೋದಕ್ಕೆ ಒಂದು ಕಡೆ ಪ್ರಯತ್ನ ಮಾಡ್ತಾ ಇದ್ದೀನಿ. ಇನ್ನೊಂದು ಕಡೆ ಓದದೆಯೇ ಡಾಕ್ಟರ್ ಎಂಬ ಹೆಸರನ್ನು ಪಡೆಯುವುದಕ್ಕೆ ಪ್ರಯತ್ನ ಪಡ್ತಾ ಇದ್ದೀನಿ. ಇಷ್ಟೇ ಅಲ್ಲ. ಇನ್ನೂ ಒಂದಿದೆ. ಇಗೋ ಇವು ನೋಡು.

                        (ಎಂದು ಆರು ಚಿತ್ರಗಳನ್ನು ತೋರಿಸುವನು).

                        ಇಂದು ನನಗೆ ಒಂದು ಹೊಸ ಐಡಿಯಾ ತಲೆಗೆ ಬಂದಿದೆ. ಅದು ಏನೆಂದರೆ – ನಾನು ಒಂದು ಕ್ಯಾಲೆಂಡರನ್ನು ತಯಾರು ಮಾಡಿದ್ದೀನಿ. ಅದರಲ್ಲಿ ಎರಡೆರಡು ತಿಂಗಳಿಗೆ ಒಂದು ಚಿತ್ರ. ಎಲ್ಲಾ ಮಾಡರ್ನ್ ಆರ್ಟ್.

ಪೂರ್ಣಯ್ಯ   :    ನೀನು ಚಿತ್ರಕಾರನು ಬೇರೆ ಆಗಿ ಬಿಟ್ಟಿಯೇನೋ?

ಚಂದ್ರನ್      :    ನನ್ನ ಈ ಕ್ಯಾಲೆಂಡರನ್ನು ನೋಡಿದರೆ ನನ್ನನ್ನು ಕೇವಲ ಚಿತ್ರಕಾರ ಎಂದಲ್ಲ ಜೀನಿಯಸ್ ಅಂತ ಹೇಳಬೇಕು. ನನ್ನ ಮಾಡರ್ನ್ ಆರ್ಟಿಸ್ಟ್ ಕ್ಯಾಲೆಂಡರಿನ ಐಡಿಯಾನೇ ಬೇರೆ. ಇದರ ಹೆಸರು ಕಾಮ ಕ್ರೋಧ ಕ್ಯಾಲೆಂಡರ್, ಇಗೋ ನೋಡಿ. ಇದು ಮೊದಲನೇ ಶೀಟು. ಜನವರಿ-ಫೆಬ್ರವರಿ, ಚಳಿಗಾಲ-ಕಾಮ.

ಪೂರ್ಣಯ್ಯ   :  ಆಹಾ . .

ಚಂದ್ರನ್      :    ಇದು ಮಾರ್ಚ್-ಏಪ್ರಿಲ್, ವಸಂತಕಾಲ – ಮೋಹ

ಪೂರ್ಣಯ್ಯ   :    ಅಬ್ಬಾ.

ಚಂದ್ರನ್      :    ಇದು ಮೇ-ಜೂನ್, ಬೇಸಿಗೆಕಾಲ – ಕ್ರೋಧ

ಪೂರ್ಣಯ್ಯ   :    ಅಯ್ಯೋ. .

ಚಂದ್ರನ್       :    ಹೀಗೆಯೇ ಉಳಿದವೂ ಇವೆ. ಈ ಕಾಮ ಕ್ರೋಧ ಕ್ಯಾಲೆಂಡರ್‍ನಲ್ಲಿ ಕಾಮಕ್ಕೆ ಒಂದು, ಕ್ರೋಧಕ್ಕೆ ಒಂದೂ ಹೀಗೆ ಸಿನಿಮಾ ಹಾಡುಗಳನ್ನು ಹಾಕಿ ಕಾಪೀ ರೈಟ್ ಮಾಡಿಸುತ್ತೀನಪ್ಪಾ.

                        (ಸಾವಿತ್ರಮ್ಮ ಪ್ರವೇಶಿಸಿ ನಿಂತಿರುವಳು)

ಪೂರ್ಣಯ್ಯ   :  ನಿನ್ನ ಬುದ್ಧಿ ಪ್ರಚಂಡ. ಈ ಕಾಮ ಕ್ರೋಧ ಕ್ಯಾಲೆಂಡರಿನ ಐಡಿಯ ನಿನ್ನ ಮನಸ್ಸಿನಲ್ಲಿ ಒರಿಜನಲ್ಲಾಗಿ ಹುಟ್ಟಿತೋ ಅಥವಾ ಅದರ ಕಾಪೀರೈಟನ್ನು ಇನ್ನಾರಿಂದಾದರೂ ಕದ್ದಿದ್ದೀಯೋ?

ಚಂದ್ರನ್         :    ಅಪ್ಪಾ . . . ನಿಮ್ಮ ಎದುರಿಗೆ ಮಾತ್ರ ನಾನು ಸುಳ್ಳು ಹೇಳೋದಿಲ್ಲ. ಇದರ ಒರಿಜಿನಲ್ ಕಾಪೀರೈಟ್ ನಿಮ್ಮದು. ನಾನು ನಿಮ್ಮ ಮಗನಾಗಿರೋದರಿಂದ ಅದನ್ನು ನಾನು ಕಾಪೀ ಮಾಡಿದರೂ ತಪ್ಪಿಲ್ಲ. . . ಕಾಮಕ್ರೋಧಗಳು ಪ್ರತಿ ಒಬ್ಬರಿಗೂ ಪಿತ್ರಾರ್ಜಿತವಾದ ಆಸ್ತಿ. ಈ ಕ್ಯಾಲೆಂಡರು ಮಾತ್ರ ನನ್ನ ಸ್ವಯಾರ್ಜಿತ.

ಪೂರ್ಣಯ್ಯ   :    ಬೇರೆ ಯಾರ ಕಾಪೀರೈಟನ್ನು ಕದೀದೇ, ನನ್ನ ಕಾಪೀರೈಟನ್ನೇ ಕದಿಯೋ ನೀನು, ಈ ಹಿಪ್ಪೀ ಕ್ರಾಪನ್ನೇತಕ್ಕೋ ಕಾಪೀ ಮಾಡಿರೋದು? ನನ್ನಂಗ್ಯಾಕೋ ಕ್ರಾಪಿಟ್ಟು ಕೊಂಡಿಲ್ಲ?

ಚಂದ್ರನ್         :    ದಿನ ಕ್ರಮೇಣ ನಿಮ್ಮ ಕೆನ್ನೆಗಳ ಮೇಲೆ ಸೈಡ್‍ಲಾಕ್ಸ್ ಕಾಣಿಸಿಕೊಂತಾ ಇರೋದು ಯಾವ ಕಾರಣದಿಂದಲೋ, ನನ್ನ ತಲೆಯ ಮೇಲೆ ಹಿಪ್ಪೀ ಕ್ರಾಪಿರೋದೂ ಅದೇ ಕಾರಣದಿಂದಲೇ.

ಪೂರ್ಣಯ್ಯ   :    ಕ್ಷೌರಿಕನು ಅಲ್ಲಿಗೆ ಕಟ್ ಮಾಡಿದರೆ ಅದು ನನ್ನ ತಪ್ಪೇನೋ?

ಚಂದ್ರನ್         :    ಸಿನಿಮಾ ನಟರು ಹಿಪ್ಪಿ ಕ್ರಾಪನ್ನಿಟ್ಟು ಕೊಂಡರೆ ಅದು ನನ್ನ ತಪ್ಪೇನಪ್ಪಾ.

ಪೂರ್ಣಯ್ಯ   :  ನೀನು ಹಿಪ್ಪೀ ಕ್ರಾಪಿಟ್ಟುಕೊಂಡರೂ ಇಟ್ಟುಕೋ, ಅದೂ ನಾನು ಬೇಡಾನ್ನೋದಿಲ್ಲ. ಸಾಯಂಕಾಲವಾದರೂ ಮುಖ ಕ್ಷೌರ ಮಾಡಿಕೊಂತೀಯಲ್ಲಾ ಹಾಗೆ ಕಾಲಕ್ಕೆ ಸರಿಯಾಗಿ ಆ ಕ್ರಾಪ್ ಕಟ್ ಮಾಡಿಸಿಕೋಬಾರದೇನೋ?

ಚಂದ್ರನ್         :    ಕಾಲಕ್ಕೆ ಸರಿಯಾಗಿ ಕಟ್ ಮಾಡಿಸಿಕೊಂತಾನೇ ಇದ್ದೀನಲ್ಲಾ?

ಪೂರ್ಣಯ್ಯ   :    ಕಿವಿಗಳು ಮುಚ್ಚಿಕೊಂಡು ಹೋಗ್ತಾ ಇವೆ. ಇನ್ನೂ ಕಾಲ ಆಗಲಿಲ್ಲವೋ ಪಾಪ ಹೇರ್ ಕಟ್ ಮಾಡಿಸಿಕೊಳ್ಳೋದಕ್ಕೆ.

ಚಂದ್ರನ್         :    ಕಿವಿಗಳು ಮೇಲೆ ಮುಚ್ಚಿಕೊಂಡರೆ ಕಾಲ ಆದಹಾಗಲ್ಲ. ಆ ಕೂದಲು ಗುಂಗುರು ತಿರುಗಿ ಕಿವಿಯೊಳಗೆ ಹೋಗಿ ನನಗೆ ಕಿವಿಯಲ್ಲಿ ಕೆರೆತ ಷುರು ಆದರೆ ಆಗ ಹೇರ್‍ಕಟ್‍ಗೆ ಕಾಲವಾದ ಹಾಗೆ.

ಪೂರ್ಣಯ್ಯ   :    ಅಂದರೆ ಕೂದಲು ಬಂದು ಕಿವಿಯೊಳಗೆ ಹೇಳಬೇಕು, ಹೇರ್ ಕಟ್ ಮಾಡಿಸಿ ಕೊಳ್ಳೋದಕ್ಕೆ ಕಾಲವಾಯಿತು ಅಂತ, ಆ ದಶರಥ ಮಹಾರಾಜರಿಗೆ ಹೇಳಿದ ಹಾಗೆ.

ಚಂದ್ರನ್         :    ಏನು? ದಶರಥ ಮಹಾರಾಜನೂ ನನ್ನ ಹಾಗೆ ಕೂದಲು ಬೆಳೆಸಿಕೊಂಡಿದ್ದನೇ?

ಪೂರ್ಣಯ್ಯ   :    ಆತನು ಹೇಗೆ ಬೆಳೆಸಿ ಕೊಂಡಿದ್ದನೋ ಯಾರಿಗೆ ಗೊತ್ತು. ಆದರೆ ಕಾಳಿದಾಸ ಮಹಾಕವಿಯಂತೂ ರಘುವಂಶದಲ್ಲಿ ಹೇಳಿದ್ದಾನೆ. ಮುದಿತನ ಬಿಳಿ ಕೂದಲಿನ ರೂಪದಲ್ಲಿ ಅವನ ಕಿವಿಯ ಹತ್ತಿರ ಬಂದು ಹೇಳಿತಂತೆ.ನೀನು ಮುದುಕನಾದೆ, ನಿನ್ನ ಮಗನಾದ ಶ್ರೀ ರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡುಅಂತ.

ಚಂದ್ರನ್         :    ಐಡಿಯಾ, ಇದಕ್ಕಿಂತಲೂ ಏನು ಆಧಾರ ಬೇಕು. ಹಿಂದಿನ ಮಹಾರಾಜರೂ ಹಿಪ್ಪಿಗಳಂತೆ ಕ್ರಾಪುಗಳಿಟ್ಟು ಕೊಂಡು ಕೂದಲು ಕಿವಿಯೊಳಗೆ ಬಂದು ಹೇಳುವವರೆಗೂ ಕ್ಷೌರ ಮಾಡಿಸಿಕೊಂತಾ ಇರಲಿಲ್ಲ ಅಂತ ಹೇಳೋದಕ್ಕೆ. ಯಾವ ಪುಸ್ತಕದಲ್ಲಪ್ಪಾ ಇದು ಬರೆದಿರೋದು, ಎಷ್ಟನೇ ಪೇಜ್‍ನಲ್ಲಿದೆ? ಅದರ ಇಂಗ್ಲೀಷ್ ತರ್ಜುಮೆ ಯಾರು ಮಾಡಿದ್ದಾರೆ? ಅದು ಯಾವ ಲೈಬ್ರರಿಯಲ್ಲಿ ಸಿಗುತ್ತೆ? ನನಗೆ ಈ ವಿಲೇವಾರೀ ಎಲ್ಲಾ ಕೊಡಿ. ನಾನು ಒಂದು ಆರ್ಟಿಕಲ್ ಬರೆದು ಪೇಪರ್‍ಗೆ ಕಳಿಸ್ತೀನಿ.

ಪೂರ್ಣಯ್ಯ   :    ನೀನು ಹುಡುಗನಾಗಿದ್ದಾಗ ನಿನಗೆ ಅಮರಕೋಶ ಬಾಯಿ ಪಾಠ ಮಾಡಿಸಬೇಕೂಂತ ನಾನು ಎಷ್ಟು ಪ್ರಯತ್ನ ಪಟ್ಟರೂ ನಿನ್ನ ಬಾಯಿಗೆ ಒಂದು ಶ್ಲೋಕವೂ ಹಿಡಿಯಲಿಲ್ಲ. ನಿನಗೆ ಕಾಳಿದಾಸ ಮಹಾಕವಿಯ ರೆಫರೆನ್ಸ್ ಬೇಕೋ? ಈಗಿನ ಕಾಲದವರೆಲ್ಲಾ ಬುನಾದಿ ಹಾಕದೆಯೇ ಗೋಪುರ ಕಟ್ಟೋದಕ್ಕೆ ನೋಡ್ತಾರೆ. ಅಹಾ . . ಹಾ .. ಏನು ಪ್ರಚಂಡ ಬುದ್ದಿ!

ಸಾವಿತ್ರಮ್ಮ  :    ಮಗನ ಪ್ರಚಂಡ ಬುದ್ಧಿಗೆ ಹಿಗ್ಗಿ ಹೀರೇಕಾಯಿ ಆಗ್ತಾ, ಆ ಮೇಲೆ ಹೇಳ್ತೀನಿ ಅಂತ ಹೇಳಿದಿರಲ್ಲಾ ಆ ಮಾತೇ ಮರೆತು ಬಿಟ್ರಿ.

ಪೂರ್ಣಯ್ಯ   :    ಯಾವ ಮಾತೇ ಅದು?

ಸಾವಿತ್ರಮ್ಮ :    ನನಗೆ ಸೊಸೆಯನ್ನು ತರುವ ಮಾತು.

ಪೂರ್ಣಯ್ಯ   :    ಆಹಾ . . . ಹೇಳ್ತೀನಿ. ಈ ಕಾಫಿ ಹೇಗಿದ್ದರೂ ಆರಿ ಹೋಯಿತು. ನಮಗೆಲ್ಲರಿಗೂ ಇನ್ನೊಂದು ಸಲ ಕಾಫೀ ಮಾಡು. ಅಷ್ಟರೊಳಗೆ ನಾನು ಹಲ್ಲುಜ್ಜಿಕೊಂಡು ಬರ್ತೀನಿ. ಇವನು ಆ ಮುಖಕ್ಕೆ ಏನು ಮಾಡಿಕೊಂಡು ಬರ್ತಾನೋ ಅದು ಮಾಡಿಕೊಂಡು ಬರಲಿ. ಕಾಫೀ ಕುಡಿದು ಸೊಸೆಯ ವಿಚಾರ ಹೇಳ್ತೀನಿ.

                                                         ******

                                                 ದೃಶ್ಯ-2

(ಹಿಂದಿನಂತೆಯೇ ಒಂದು ಸ್ಕ್ರೀನು. ಅದರ ಬಲಭಾಗದಲ್ಲಿ ಲೀಲಾವತಮ್ಮ ಕುರ್ಚಿಯ ಮೇಲೆ ಕುಳಿತು ಸ್ವೆಟರ್ ಹೆಣೆಯುತ್ತಿರುವಳು. ಎಡಭಾಗದಲ್ಲಿ ಆರಾಮ ಕುರ್ಚಿಯಲ್ಲಿ ಕೋಕಿಲಾ ಕಥೆ ಪುಸ್ತಕವನ್ನು ಓದುತ್ತಿರುವಳು. ಪೂರ್ಣಯ್ಯನಷ್ಟೇ ಎತ್ತರ ಲೀಲಾವತಮ್ಮ. ಪೂರ್ಣಯ್ಯನ ಪಾತ್ರಧಾರಿಯೇ ಈ ವೇಷವನ್ನು ಹಾಕಬಹುದು. ಆತನಿಗಿಂತಲೂ ಕುಳ್ಳದಾಗಿರುವ ಸಾವಿತ್ರಮ್ಮನ ಪಾತ್ರಧಾರಿಯೇ ಮುಂದೆ ಬರುವ ಹರಿದಾಸರಾಯರ ಪಾತ್ರವನ್ನೂ ವಹಿಸಬಹುದು).

ಲೀಲಾ           :    ಉಲ್ಲನ್ ತರೋದಕ್ಕೆ ಗಾಂಧಿಬಜಾರಿಗೆ ಕಳುಹಿಸಿ ಒಂದು ಘಂಟೆ ಆಯ್ತು. ಇನ್ನೂ ಬರಲಿಲ್ಲ. ಹರಿದಾಸರಾಯರು ಯಾವ ಯಾವ ದೇವರಿಗೆ ನಮಸ್ಕಾರಗಳನ್ನು ಮಾಡುತ್ತ ನಿಂತು ಬಿಟ್ಟರೋ. ಅವರ ವಾಮನ ಮೂರ್ತಿ ನೋಡಿ, ನಡಕೊಂಡು ಹೋದರೆ ಹೊತ್ತಾಗುತ್ತೆ ಅಂತ ಬಸ್‍ನಲ್ಲಿ ಹೋಗಿ ಬರೋದಕ್ಕೆ ಚಾರ್ಜನ್ನೂ ಕೊಟ್ಟು ಕಳಿಸಿದೆ. ಇಲ್ಲಿರೋ ಗಾಂಧೀಬಜಾರಿಗೆ ಬಸ್‍ನಲ್ಲಿ ಹೋಗಿ ಬರೋದಕ್ಕೆ ಇಷ್ಟು ಹೊತ್ತು ಬೇಕೇ? (ಹರಿದಾಸರಾಯರು ಪ್ರವೇಶಿಸುವರು)

ಹರಿ               :    ಯಾವ ಅಂಗಡಿಯಲ್ಲಿ ಕೇಳಿದರೂ ನೀನು ಹೇಳುವ ಮಾರ್ಕು ಉಲ್ಲನ್ನೇ ಇಲ್ಲವಂತೆ. ವ್ಯರ್ಥವಾಗಿ ಹೋಗಿ ಬಂದದ್ದಾಯಿತು. ಅದೆಲ್ಲಾದರೂ ಹೋಗಲಿ ಅಂದರೆ ಈ ಷರಟು ಬೇರೆ ಬಿಚ್ಚಿ ಒಗೆಯೋದಕ್ಕೆ ಹಾಕಬೇಕು ಬಸ್ಸಿನಲ್ಲಿ ಪ್ರಯಾಣ ಮಾಡಿದ ತಪ್ಪಿಗೆ.

ಲೀಲಾ           :    ನಿಮ್ಮನ್ನು ಬಸ್ಸಿನಲ್ಲಿ ಕಳಿಸಿದ ತಪ್ಪಿಗೆ ಇದೂ ಒಂದು ಬಂತು ನನ್ನ ತಲೆಗೆ. ಯಾವಾಗ ಬಸ್ಸಿಗೆ ಹೋದರೂ ಹೀಗೆ ಷರಟು ಬಿಚ್ಚಿ ಹಾಕ್ತೀರಿ.

ಹರಿ               :    ಆ ಬಸ್ ಟಿಕೆಟ್ಟನ್ನು ಜೇಬಿನಲ್ಲಿರಿಸಿಕೊಂಡ ಮೇಲೆ ಆ ಕಂಡಕ್ಟರಿನ ಎಂಜಲು ಜೇಬಿಗೆ ತಗುಲಿದ ಹಾಗೇ ತಾನೇ. ಇನ್ನು ಷರಟು ಒಗೆಯದೇ ಹಾಗೆಯೇ ಹಾಕಿಕೊಂಡಿರುವುದಕ್ಕೆ ಮನಸ್ಸೊಪ್ಪುತ್ತದೆಯೇ?

ಲೀಲಾ           :    ನೀವು ಸತ್ಯ ಹರಿಶ್ಚಂದ್ರರೂಂತಾ ಆ ಕಂಡಕ್ಟರಿಗೆ ಪೂರ್ತಿ ಬಸ್ ಚಾರ್ಜ್‍ಕೊಟ್ಟು ಟಿಕೆಟ್ ತಕೊಳ್ಳೋದರಿಂದ ತಾನೆ ಈ ಕಷ್ಟ. ನಾನು ಹೋದರೆ ಟಿಕೆಟ್ಟು ಕೊಡಪ್ಪಾ ಅಂತಾ ಇಪ್ಪತ್ತು ಪೈಸೆ ಕಂಡಕ್ಟರ್ ಕೈಗೆ ಹಾಕಿದರೆ ಅವನು ಹತ್ತು ಪೈಸೆ ವಾಪಸ್ಸು ಕೊಟ್ಟು ಬಿಡುತ್ತಾನೆ. ದುಡ್ಡೂ ಉಳಿಯುತ್ತೆ, ಎಂಜಲು ಟಿಕೇಟ್ಟು ತೆಗೆದುಕೊಳ್ಳೋ ಕಷ್ಟವೂ ತಪ್ಪುತ್ತೆ. ಸಾಧಾರಣವಾಗಿ ಹೆಂಗಸರಿಗೆಲ್ಲಾ ಹೀಗೇ ಮಾಡೋದು ಕಂಡಕ್ಟರು.

ಹರಿ               :    ಹಾಗೆ ಮಾಡೋದರಿಂದಲೇ ನಮಗೆ ಬಸ್ಸುಗಳ ಅಭಾವ. ನಿನಗೆ ಅವನು ಕೊಡೋ ಹತ್ತು ಪೈಸೆ ಎಂಜಲು ಮಾಡಿದ ಕೈಯಿಂದ ತಾನೆ. ಅವನ ಎಂಜಲಿನ ಜೊತೆಗೆ ನಿನಗೆ ಪಾಪವೂ ಬರುತ್ತೆ.

ಲೀಲಾ           :    ಪಾಪ ಯಾಕೆ ಬರುತ್ತೆ? ನಾನು ಇಪ್ಪತ್ತು ಪೈಸೆ ಕೊಟ್ಟರೂ ಅವನು ಹತ್ತು ಪೈಸೆ ವಾಪಸ್ಸು ಕೊಟ್ಟರೆ ನನಗೆ ಯಾಕೆ ಪಾಪ ಬರುತ್ತೆ. ಅಲ್ಲದೆ, ಅವನು ಪಾಪ ಬಾಯಿಂದ ತೆಗೆದು ತೆಗೆದು ನೂರಾರು ಜನಕ್ಕೆ ಎಂಜಲು ಹಂಚ್ತಾನಲ್ಲಾ, ಕೆಲವರಾದರೂ ಅವನ ಬಾಯಿಗೆ ಇಷ್ಟು ಹಾಕದೇ ಇದ್ದರೆ ಹೇಗೆ?

ಹರಿ               :    ಹೋಗಲಿ, ಆ ಚರ್ಚೆ ಬೇಡ, ನಮ್ಮ ಕೋಕಿಲಾಗೆ ಮದುವೆ ವಿಚಾರ ತಿಳಿಸೋಣ ಕೋಕಿಲಾ – ಬಾಮ್ಮಾ.

ಲೀಲಾ           :    ನೀವು ಹಾಗೆ ನೂರು ಸಲ ಕೂಗಿದರೂ ಅವಳು ಬರೋದಿಲ್ಲ.

ಹರಿ               :    ಯಾಕೆ ಬರೋದಿಲ್ಲ. ಕೋಕಿಲಾ . . ಕೋಕಿಲಮ್ಮಾ. . ಸ್ವಲ್ಪ ಬಾ ಮಗೂ

ಲೀಲಾ           :    ಅವಳು ಬಾರದಿರೋದಕ್ಕೆ ಎರಡು ಕಾರಣಗಳಿವೆ. ಒಂದು ಈ ಸ್ಕ್ರೀನನ್ನು ಫುಲ್ ಸ್ಕ್ರೀನ್‍ನ್ನಾಗಿ ಮಾಡಿಸಿಕೊಂಡು ಸೌಂಡ್ ಫ್ರೂಫ್ ಮಾಡಿಸಿಕೊಂಡಿದ್ದಾಳೆ. ಇದಕ್ಕಿಂತಲೂ ದೊಡ್ಡ ಕಾರಣ ಅವಳು ತನ್ನ ಹೆಸರನ್ನು ಬದಲಾಯಿಸಿ ಕೊಂಡಿದ್ದಾಳೆ.

ಹರಿ               :    ಹೆಸರನ್ನು ಬದಲಾಯಿಸಿ ಕೊಂಡಿದ್ದಾಳೆಯೇ? ತಂದೆ ತಾಯಿಗಳಿಟ್ಟ ಹೆಸರನ್ನೇ ಬದಲಾಯಿಸಿಕೊಂಡಳೇ? ಅವರನ್ನು ಕೇಳದೆಯೇ, ಅಂಥಾ ಕಾರಣವೇನಿತ್ತು. ಏನೂಂತ ಬದಲಾಯಿಸಿಕೊಂಡಿದ್ದಾಳೆ? ಹೇಗೆ ಬದಲಾಯಿಸಿಕೊಂಡಳು?

ಲೀಲಾ           :    ಅವಳು ಮೆಜಾರಿಟಿಗೆ ಬಂದ ಮೇಲೆ ತಂದೆ ತಾಯಿಗಳ ಅನುಮತಿ ಇಲ್ಲದೆಯೇ ಬದಲಾಯಿಸಿಕೊಳ್ಳಬಹುದು. ಗೆಜೆಟ್‍ನಲ್ಲಿ ಡಿಕ್ಲರೇಷನ್ ಪಬ್ಲಿಷ್ ಮಾಡಿ ಬದಲಾಯಿಸಿಕೊಂಡಳು.

ಹರಿ               :    ಇಂಥಾ ಮಾಡರ್ನ್ ಹುಡುಗಿ ಆಗಿ ಬಿಟ್ಟಳೇ ನಮ್ಮ ಕೋಕಿಲಾ? ನಿನ್ನನ್ನೂ ಕೇಳಲಿಲ್ಲವೇ?

ಲೀಲಾ           :    ನನಗೆ ತನ್ನ ಅಭಿಪ್ರಾಯವನ್ನು ಹೇಳಿದಳು. ಅನುಮತಿ ಕೇಳಲಿಲ್ಲ. ನಾನು ಸುಮ್ಮನಿದ್ದೆ.

ಹರಿ               :    ನನ್ನನ್ನು ಕೇಳಬೇಕೂಂತಲೂ ಹೇಳಲಿಲ್ಲವೇನೇ ನೀನು?

ಲೀಲಾ           :    ನನ್ನ ಅನುಮತಿಯನ್ನೇ ಕೇಳದಿದ್ದಮೇಲೆ ನಿಮ್ಮ ಅನುಮತಿಯನ್ನು ಕೇಳುತ್ತಾಳೆಯೇ ಅವಳು? ನಾನೇ ಅನುಮತಿ ಕೊಟ್ಟಿರುವಾಗ ನಿಮ್ಮ ಅನುಮತಿ ಯಾತಕ್ಕೆ ಬೇಕು? ಹೆಂಗಸರ ಹೆಸರುಗಳ ವಿಚಾರ ಗಂಡಸರಿಗೇಕೆ?

ಹರಿ               :    ಅವಳಲ್ಲ ಮಾಡರ್ನ್. ನೀನು ಮಾಡರ್ನ್.

ಲೀಲಾ           :    ನಾನು ಮಾಡರ್ನ್. ನನ್ನ ಮಗಳು ಅಲ್ಟ್ರಾ ಮಾಡರ್ನ್.

ಹರಿ               :    ಚೆನ್ನಾಗಿದೆ. ಆ ಹೆಸರಾದರೂ ಏನೋ?

ಲೀಲಾ           :    ಕುಹೂ.

ಹರಿ               :    ಕುಹೂ. ಅಂದರೆ?

ಲೀಲಾ           :    ಕೋಗಿಲೆಯ ಧ್ವನಿ. ಕೋಕಿಲಾ ಅಂದರೆ ಕಾಗೆ ಇದ್ದಹಾಗೆ ಕಪ್ಪಗಿರುತ್ತೆ. ಅದೇನು ಒಳ್ಳೇ ಹೆಸರಲ್ಲ. ಅದರ ಧ್ವನಿಯೇ ಕೇಳುವುದಕ್ಕೆ ಇಂಪಾಗಿರೋದು. ಅದಕ್ಕೆ ಅವಳು ಕನ್ನಡ ಪಂಡಿತರನ್ನು ಕೇಳಿ ಕೋಕಿಲೆಯ ಧ್ವನಿಗೆ ಏನು ಹೆಸರು ಅಂತ ತಿಳಿದುಕೊಂಡು, ಆ ಹೆಸರನ್ನೇ ಇಟ್ಟುಕೊಂಡಿದ್ದಾಳೆ.

ಹರಿ               :    ಅದಾವ ಕನ್ನಡ ಪಂಡಿತ ಅವನು? ನಾನು ಕನ್ನಡ ಪಂಡಿತನಾಗದಿದ್ದರೂ ಅಮರಕೋಶ ನಮ್ಮ ತಂದೆಯವರು ಚೆನ್ನಾಗಿ ಹೇಳಿಕೊಟ್ಟಿದ್ದರು. ಅದರಲ್ಲಿಕುಹೂಎಂದರೆ ಅಮವಾಸ್ಯೆ ಎಂಬ ಅರ್ಥವೂ ಇದೆಯೇ?

ಲೀಲಾ           :    ಮತ್ತೂ ಒಳ್ಳೇದಾಯಿತು. ಈ ಏಕೈಕ ಪುತ್ರಿ ನಮಗೆ ಹುಟ್ಟಿದ್ದು ಅಮಾವಾಸ್ಯೆ ಸೋಮವಾರ ವ್ರತ ಮಾಡಿದ ಫಲದಿಂದ ತಾನೇ?

ಹರಿ               :    ನೀನಾ? ಅಮಾವಾಸ್ಯೆ ಸೋಮವಾರ ವ್ರತವಾ? ಯಾವತ್ತು ಮಾಡಿದೆ?

ಲೀಲಾ           :    ನಾನು ಮಾಡಲಿಲ್ಲ. ನಮ್ಮತ್ತೆಯವರು ಮಾಡಿದರು. ನನಗೆ ಮಕ್ಕಳಾಗಲೀ ಅಂತಾ.

ಹರಿ               :    ಏನೋ ಆದದ್ದು ಆಗಿ ಹೋಗಿದೆ. ಇತ್ತ ಕಡೆಯಿಂದ ಸುತ್ತು ಹಾಕಿಕೊಂಡೇ ಹೋಗಿ ಅವಳನ್ನುಕುಹೂಎಂದೇ ಕರೆದು ಇಲ್ಲಿಗೆ ಕರೆದುಕೊಂಡು ಬಾ.

ಲೀಲಾ           :    ನಾನಾತಕ್ಕೆ ಸುತ್ತು ಹಾಕಿಕೊಂಡು ಹೋಗ್ತೀನಿ? ಇಲ್ಲಿಂದ್ಲೇ ಕರೀತೀನಿ.

ಹರಿ               :    ಈ ಸ್ಕ್ರೀನ್ ಸೌಂಡ್ ಪ್ರೂಫ್ ಅಂತ ಹೇಳಿದೆಯಲ್ಲಾ. ನೀನು ಕರೆದರೆ ಹೇಗೆ ಕೇಳಿಸುತ್ತೆ?

ಲೀಲಾ           :    ಅವಳು ಸೌಂಡ್ ಪ್ರೂಫ್ ಮಾಡಿಸಿಕೊಂಡರೆ ನಾನವಳ ತಾಯಿ. ಅದರಲ್ಲಿ ಒಂದು ವಾಲ್ವು ಮಾಡಿಸಿದ್ದೇನೆ. ಅಂದರೆ ಬೇಕಾದಾಗ ಸೌಂಡ್ ಕೇಳುತ್ತೆ, ಬಿಡದೇ ಇರುವುದಿಲ್ಲ.

ಹರಿ               :    ನೀನು ಬುದ್ಧಿಯಲ್ಲಿ ಅವಳ ತಾಯಿ ಮಾತ್ರವಲ್ಲ. ನನಗೆ ಮಲತಾಯಿ, ಪ್ರಚಂಡಿ.

ಲೀಲಾ           :    ಅದು ಈಗ ಬೇಡ. ಆ ತೂಬಿಗೆ ಅಡ್ಡ ಇಟ್ಟಿರೋದನ್ನು ಸ್ವಲ್ಪಾ ತೆಗೆಯಿರಿ. (ಹರಿದಾಸರಾಯನು ಸ್ಕ್ರೀನ್‍ಗೆ ಕೆಳಗಡೆ ಮೂಲೆಯಲ್ಲಿದ್ದ ತೂಬಿನ ಅಡ್ಡವನ್ನು ತೆಗೆಯುವನು)

ಲೀಲಾ           :    ಕೋಕಿಲಾ . . ಕೋಕಿಲಾ . . .

ಕೋಕಿಲಾ    :    (ಕೋಪದಿಂದ ಎದ್ದು) ಯಾರದು ಡಿಸ್ಟರ್ಬ್ ಮಾಡುತ್ತಿರೋದು?

ಲೀಲಾ           :    ಕೋಕಿಲಾ . . ಕೋಕಿಲಾ . . .

ಕೋಕಿಲಾ        :    ಇದೇನು ನನ್ನನ್ನು ಇನ್ನೂ ಈ ಹೆಸರಿನಿಂದ ಕರೆಯುತ್ತಿದ್ದಾಳೆ ನನ್ನ ತಾಯಿ? ನಾನು ಹೊಸ ಹೆಸರಿನಿಂದ ಕರೆಯೋವರೆಗೂ ಹೋಗೋದಿಲ್ಲ.

ಲೀಲಾ           :    (ಮೆಲ್ಲನೆ ಗಂಡನಿಗೆ) ಕೇಳಿದಿರಾ ನಿಮ್ಮ ಮಗಳ ಮಾತನ್ನು? (ಗಟ್ಟಿಯಾಗಿ) ಕುಹೂ, ಕುಹೂ, ಮಿಸ್ ಕುಹೂ. . .

ಕೋಕಿಲಾ    :    ಹಾಗೆ ದಾರಿಗೆ ಬರಬೇಕು. ಆದರೆ ಈ ಶಬ್ಧ ಎಲ್ಲಿಂದ ಬಂದಿದೆ? ಈ ಸ್ಕ್ರೀನ್ ಸೌಂಡ್ ಪ್ರೂಫಾಗ್ ಮಾಡಿಸಿದ್ದೆನಲ್ಲಾ? ಇದರಲ್ಲಿ ಏನು ಡಿಫೆಕ್ಟ್ ಇದೆ? (ಎಂದು ತಲೆ ಎತ್ತಿ ಸ್ಕ್ರೀನಿನ ಮೇಲ್ಭಾಗವನ್ನೆಲ್ಲಾ ನೋಡುವಳು) ಸರಿ, ಇದು ಆಮೇಲೆ ನೋಡೋಣ. (ಎಂದು ಹೊರಟು ಇತ್ತ ಕಡೆಯಿಂದ ಪ್ರವೇಶಿಸುವಳು).

ಕೋಕಿಲಾ        :    ಏನಮ್ಮಾ ಕರೆದಿದ್ದು? ನಾನು ಕಥೆ ಪುಸ್ತಕ ಓದ್ತಾ ಇದ್ದರೆ ಡಿಸ್ಟರ್ಬೆನ್ಸು?

ಲೀಲಾ           :    ಅದೇನೋ ನಿಮ್ಮ ತಂದೆಯನ್ನು ಕೇಳು.

ಕೋಕಿಲಾ        :    ಏನಪ್ಪಾ ಬೇಕು ನನ್ನಿಂದ?

ಹರಿ               :    ಮಗೂ, ನನಗೆ ನಿನ್ನಿಂದ ಏನೂ ಬೇಕಾಗಿಲ್ಲ ತಾಯೀ.

ಕೋಕಿಲಾ    :    ಮತ್ತೆ ಏತಕ್ಕೆ ಕರೆದದ್ದು?

ಹರಿ               :    ನಿಮ್ಮ ತಾಯಿಯನ್ನೇ ಕೇಳು. ನಿನಗೆ ಇಂಪಾಗುವಂತೆ ಹೇಳ್ತಾಳೆ.

ಲೀಲಾ           :    ನಾನೇನು ಹೇಳೋದು? ನೀವು ಹುಡುಕಿಕೊಂಡು ಬಂದಿರೋ ಸಂಬಂಧ ನೀವೇ ಹೇಳಿ?

ಕೋಕಿಲಾ    :    ಸಂಬಂಧ, ಅಂದರೆ ನನಗೆ ಮದುವೆ ಸಂಬಂಧವೇ? ಅದರ ವಿಚಾರ ಆಮೇಲೆ ಹೇಳಿ ಈಗ ನನ್ನ ತಲಿಯಲ್ಲಿ ಒಂದು ಸಮಸ್ಯೆ ಇದೆ. ಅದು ತೀರಿದ ಮೇಲಿಯೇ ಬೇರೆ ಸಮಸ್ಯೆಗಳನ್ನು ಕುರಿತು ಆಲೋಚನೆ ಮಾಡೋದಕ್ಕಾಗೋದು. ಅದರಲ್ಲೂ ಸಂಬಂಧದ ವಿಚಾರ ಅಂದರೇನೇ ನನಗೆ ತಲೆ ಕೆಟ್ಟು ಹೋಗುತ್ತೆ.

ಹರಿ               :    ಇವಳ ತಲೆಯಲ್ಲಿ ಈಗ ಇರೋ ಸಮಸ್ಯೆ ಏನೋ ಕೇಳೇ ಲೀಲಾವತೀ?

ಲೀಲಾ           :    ಅವಳ ತಲೆಯಲ್ಲಿ ಸಮಸ್ಯೆ ಇಲ್ಲದೇ ಇರೋ ದಿನ ಯಾವುದು? ಅದೇನೋ ಹೇಳಮ್ಮಾ ನಿಮ್ಮ ತಂದೆಗೆ?

ಕೋಕಿಲಾ    :   ಈ ಸ್ಕ್ರೀನನ್ನು ಸೌಂಡ್ ಫ್ರೂಫ್ ಆಗಿ ಮಾಡಿಸಿದ್ದರೆ, ನೀವು ಇಲ್ಲಿಂದ ಕರೆದಿದ್ದು ಹೇಗೆ ನನಗೆ ಕೇಳಿಸಿತು ಅಂತಾ…?

ಲೀಲಾ           :    ಅದು ನಿಮ್ಮ ತಂದೆಯವರ ಹರಿಭಕ್ತಿಯ ಮಹಿಮೆ.

ಕೋಕಿಲಾ    :    ನಾನ್ಸೆನ್ಸ್, ಮಹಿಮೆ ಗಿಹಿಮೆ ನಾನು ನಂಬೋದಿಲ್ಲ. ನನಗೆ ಈ ಸ್ಕ್ರೀನ್‍ನಲ್ಲಿರೋ ಡಿಫೆಕ್ಟು ಗೊತ್ತಾಗಬೇಕು?

ಲೀಲಾ           :    ನೀನು ಗಂಡಸರಿಗಿಂತಲೂ ನಾನೇನು ಕಡಿಮೆ ಅಂತ ಮೆಕ್ಯಾನಿಕಲ್ ಇಂಜಿನಿಯರಿಂಗೆ ಸೇರಿ ಓದ್ತಾ ಇದ್ದೀಯಲ್ಲಾ, ನೀನು ಕಾಣಲಾರದ ಡಿಫೆಕ್ಟು ಇರುತ್ತದೆಯೇ?

ಕೋಕಿಲಾ        :    ಹೌದು, ಇನ್ನೊಂದು ಸಲ ನೋಡ್ತೀನಿ. (ಎಂದು ತಲೆ ಬಗ್ಗಿಸದೆ ಸ್ಕ್ರೀನನ್ನು ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೂ ನೋಡಿಕೊಂಡು ಬರುವಳು)

ಲೀಲಾ           :    ಡಿಫೆಕ್ಟು ಗೊತ್ತಾಗಲಿಲ್ಲವೇ?

ಕೋಕಿಲಾ        :    ಯಾಕೋ ಗೊತ್ತಾಗಲಿಲ್ಲವಲ್ಲಾ? ಇದನ್ನು ಎಕ್ಸ್‍ಪರ್ಟಿಗೇ ತೋರಿಸಬೇಕು.

ಹರಿ               :    ಗುರು ಶಿಷ್ಯರು ಚೆನ್ನಾಗಿ ತಿಂದು ಚಪ್ಪಲಿ ಹುಡುಕಿದ ಕಥೆ ನಿನಗೆ ಗೊತ್ತಿಲ್ಲವೇ ಮಗೂ?

ಕೋಕಿಲಾ        :    ನಾನ್ಸೆನ್ಸ್.

ಲೀಲಾ           :    ಆ ಕಥೆ ಕೇಳಮ್ಮಾ. ನಿನಗೆ ಎಕ್ಸ್‍ಪರ್ಟ್‍ನ್ನು ಕರೆಸೋ ಅವಶ್ಯಕತೆ ಇರೋದಿಲ್ಲ.

ಹರಿ               :    ಗುರು, ಶಿಷ್ಯಾ ಇಬ್ಬರೂ ಜನಿವಾರ ತಂಬೂರಿ ತಂತಿ ಆಗೋವರೆಗೂ ಚೆನ್ನಾಗಿ ಊಟ ಮಾಡಿದರಂತೆ. ಗುರು ಶಿಷ್ಯನಿಗೆಶಿಷ್ಯಾ ನನ್ನ ಚಪ್ಪಲಿ ಎಲ್ಲಿದೆಯೋ ಹುಡುಕಿ ಕೊಡುಅಂತ ಹೇಳಿದನಂತೆ. ಶಿಷ್ಯಆಕಾಶದಲ್ಲೆಲ್ಲಾ ನೋಡಿದೆ, ನಿಮ್ಮ ಚಪ್ಪಲಿ ಎಲ್ಲೂ ಇಲ್ಲ ಗುರುಗಳೇಅಂದನಂತೆ.

ಕೋಕಿಲಾ        :    ಕಥೆ ತಮಷೆಯಾಗಿದೆ. ಒಳ್ಳೇ ಹಾಸ್ಯವಿದೆ. ಇದರಲ್ಲಿ.

ಹರಿ               :    ಇದರಲ್ಲಿ ಏನು ಹಾಸ್ಯವಿದೆ ನಿನಗೆ ಗೊತ್ತಾಗಿದ್ದರೆ ಹೇಳು ಮಗೂ.

ಕೋಕಿಲಾ    :    ಇನ್ನೇನಿದೆ? ಆಕಾಶದಲ್ಲಿ ಎಲ್ಲಾದರೂ ಚಪ್ಪಲೀ ಇರುತ್ತದೆಯೇ? ಬೆಪ್ಪ ಆ ಶಿಷ್ಯ ಹಾಗೆ ಹೇಳಿದ್ದೇ ಹಾಸ್ಯ.

ಹರಿ               :    ನಿನ್ನ ಬುದ್ಧಿ ಸಾಹಿತ್ಯದ ಸೂಕ್ಷ್ಮತೆಗಳನ್ನು ಅರಿಯಲು ಸಮರ್ಥವಲ್ಲ ಮಗೂ.

ಲೀಲಾ           :    ಈ ಕಥೆಯಲ್ಲಿರೋ ಮೆಕಾನಿಕ್ಸ್‍ನ್ನು ಅರ್ಥ ಮಾಡಿಕೊಳ್ಳಲೂ ಸಮರ್ಥವಲ್ಲ.

ಕೋಕಿಲಾ    :   ಈ ಕಥೇಯಲ್ಲಿ ಮೆಕ್ಯಾನಿಕ್ಸೇ?

ಲೀಲಾ           :    ಹೌದು. ಚಪ್ಪಲಿ ಬಿಟ್ಟ ಜಾಗದಲ್ಲೇ ಇತ್ತು. ಆದರೆ ಗುರು ಶಿಷ್ಯರ ಕಣ್ಣಿಗೆ ಯಾತಕ್ಕೆ ಕಾಣಿಸಲಿಲ್ಲ?

ಕೋಕಿಲಾ    :    ಅವರು ಕೆಳಗೆ  ನೋಡದೇ ಇದ್ದದ್ದರಿಂದ ಕಾಣಿಸಲಿಲ್ಲ. ಅದರಲ್ಲೇನು ಮೆಕ್ಯಾನಿಕ್ಸ್ ಇದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದೋ ಹುಡುಗೀಗೆ ಇಷ್ಟು ಮಾತ್ರ ಅರ್ಥವಾಗುವುದಿಲ್ಲವೇ?

ಲೀಲಾ           :    ಅವರು ಯಾತಕ್ಕೆ ಕೆಳಗೆ ನೋಡಲಿಲ್ಲ?

ಕೋಕಿಲಾ        :    ಬುದ್ಧಿ ಇಲ್ಲದೆ, ಹಿಂದಿನ ಕಾಲದ ಗುರು ಶಿಷ್ಯರೆಲ್ಲಾ ಬುದ್ಧಿ ಇಲ್ಲದವರೇ.

ಲೀಲಾ           :    ಅವರಿಗಲ್ಲ ಬುದ್ಧಿ ಇಲ್ಲದೇ ಇರೋದು, ನಿನಗೆ.

ಕೋಕಿಲಾ    :    ಏನಮ್ಮಾ ಇದು?

ಲೀಲಾ           :    ಅವರಿಗೆ ಕುತ್ತಿಗೆವರೆಗೂ ತಿಂದಿದ್ದರಿಂದ ಕತ್ತು ಬಗ್ಗಿಸಿ ಕೆಳಗೆ ನೋಡಲು ಆಗುತ್ತಿರಲಿಲ್ಲ. ನಿನಗೆ ಏನೂ ತಿನ್ನದಿದ್ದರೂ ಕತ್ತು ಬಗ್ಗಿಸಿ ನೋಡೋದಕ್ಕೆ ಯಾತಕ್ಕಾಗೋದಿಲ್ಲ?

ಕೋಕಿಲಾ    :    ನಾನಾತಕ್ಕೆ ಕತ್ತು ಬಗ್ಗಿಸಬೇಕು? ಹೆಣ್ಣು ಜಾತಿಯ ಗೌರವವನ್ನು ಕಾಪಾಡಬೇಕಾದರೆ ನಾನೆಂದಿಗೂ ಕತ್ತು ಬಗ್ಗಿಸಬಾರದು.

ಲೀಲಾ           :    ನೀನು ಕತ್ತು ಬಗ್ಗಿಸಿ ನೋಡದಿದ್ದರೆ ನಿನಗೆ ಸ್ಕ್ರೀನಿನಲ್ಲಿರುವ ಡಿಫೆಕ್ಟೇ ಗೊತ್ತಾಗೋದಿಲ್ಲ.

ಕೋಕಿಲಾ        :    ಅಂದರೆ ಈ ಸ್ಕ್ರೀನಿನ ಡಿಫೆಕ್ಟು ಚಪ್ಪಲಿ ಬಿದ್ದ ಹಾಗೆ ಕೆಳಗೆ ಬಿದ್ದಿದೆಯೇ?

ಲೀಲಾ           :    ಡಿಫೆಕ್ಟು ಎಲ್ಲಾದರೂ ನೆಲದ ಮೇಲೆ ಬಿದ್ದಿರುತ್ತದೆಯೇ? (ಎಂದು ಹೋಗಿ ಕೋಕಿಲೆಯ ತಲೆಯನ್ನು ಕೈಯಿಂದ ಬಗ್ಗಿಸಿ ಅವಳಿಗೆ ತೂಬನ್ನು ತೋರಿಸುವಳು) ಇಲ್ಲಿದೆ ನೋಡು ಡಿಫೆಕ್ಟು. ಅದು ನನ್ನ ದೃಷ್ಟಿಯಲ್ಲಿ ಡಿಫೆಕ್ಟ್ – ನನಗೆ ಅದು ಬೇಕು. ಅದಿಲ್ಲದಿದ್ದರೆ ನೆಲ ತೊಳೆದ ನೀರು ಆಚೆ ಹೋಗೋದಿಲ್ಲ. ಇಷ್ಟೂ ಗೊತ್ತಾಗಲಿಲ್ಲ ನಿನ್ನ ಬುದ್ಧಿಗೆ. (ಎಂದು ತಲೆಯ ಮೇಲೆ ಹೊಡೆಯುವಳು)

ಕೋಕಿಲಾ        :    ಯಾಕಮ್ಮಾ ಹೊಡೆಯುವುದು? ಏನೋ ಗೊತ್ತಾಗದಿದ್ದರೆ ತಿಳಿಸಿದರೆ ಆಯಿತು. ಹೊಡೆಯೋದೇಕಮ್ಮಾ? ನೀನು ಹೆಂಗಸಾದ್ದರಿಂದ ನಾನು ಸುಮ್ಮನಿದ್ದೇನೆ. ಇದೇ ಗಂಡಸು ಯಾರಾದರೂ ಹೊಡೆದಿದ್ದರೆ ನಾನು ಏನು ಮಾಡ್ತಾ ಇದ್ದೆನೋ.

ಹರಿ               :    ಹೊಡೆದಿದೇಕೆ ಲೀಲಾವತೀ? ನೀನು ಮದುವೆ ಆಗೋದಕ್ಕೆ ಮುಂಚೆ ಹೀಗೇ ಮಾಡರ್ನ್ ಗರ್ಲ್ ಆಗಿರಲಿಲ್ಲವೇ? ಮದುವೆ ಆದ ಮೇಲೆ ಎಲ್ಲಾ ಸರಿಹೋಗುತ್ತೆ.

ಲೀಲಾ           :    ನೋಡು, ಹೆಂಗಸು ನಾನು ಹೊಡೆದರೆ ಗಂಡಸರು ನಿನ್ನ ಸಪೋರ್ಟ್‍ಗೆ ಬರ್ತಾರೆ. ಬಸ್ಸಿನಲ್ಲಿ ಮಕ್ಕಳನ್ನೆತ್ತಿ ಕೊಂಡು ಹೆಂಗಸರು ನಿಂತಿದ್ದರೆ ಗಂಡಸರು ಸೀಟ್ ಕೊಡ್ತಾರೆಯೇ ಹೊರತು ಹೆಂಗಸರು ಸೀಟ್ ಕೊಟ್ಟದ್ದು ನೀನು ಎಷ್ಟು ಸಲ ನೋಡಿದ್ದೀಯೆ?

ಕೋಕಿಲಾ        :    ನೀವಿಬ್ಬರೂ ಸೇರಿ ನನ್ನ ತಲೆ ಕೆಡಿಸ್ತಾ ಇದ್ದೀರಿ.

ಹರಿ               :    ನೋಡು ಮಗೂ, ನಿನಗೆ ಒಳ್ಳೆ ಸಂಬಂಧ ನೋಡಿದ್ದೇನೆ. ನೀನು ಆಗಬಹುದು ಅಂದರೆ ಅವರನ್ನೆಲ್ಲಾ ಇಲ್ಲಿಗೆ ಕರೆಸ್ತೀನಿ. ನೀನೂ ನಿನ್ನ ತಾಯೀ, ಗಂಡಿನ ಕಡೆಯವರೂ ಎಲ್ಲಾ ಒಪ್ಪಿದರೆ ನಿನ್ನ ಮದುವೆ ಕೂಡಲೇ ಮಾಡಿ ಬಿಡುತ್ತೇವೆ. ನಾವು ಅದೊಂದು ಜವಾಬ್ದಾರಿ ತೀರಿಸಿಕೊಂಡಹಾಗಾಗುತ್ತೆ.

ಕೋಕಿಲಾ        :    ನೀವೆಷ್ಟು ನೋಡಿದರೂ ನಾನು ವರನನ್ನು ಸ್ವತಃ ಇಂಟರ್‍ವ್ಯೂ ಮಾಡಿ ಪರೀಕ್ಷೆ ಮಾಡೋವರೆಗೂ ಒಪ್ಪಿಕೊಳ್ಳುವುದಿಲ್ಲ.

ಹರಿ               :    ನೀನು ಪರೀಕ್ಷೆ ಮಾಡಿದರೆ ಚೆನ್ನಾಗಿರೋದಿಲ್ಲ ಮಗೂ . .  ಅದು ಸಂಪ್ರದಾಯಕ್ಕೆ ವಿರೋಧ. ನಿನಗೆ ಏನೇನು ಅಪೇಕ್ಷೆ ಇದೆಯೋ ನಮಗೆ ಹೇಳು. ನಿನ್ನ ಎದುರಿಗೆ ನಾವು ಎಲ್ಲಾ ಪರೀಕ್ಷೆ ಮಾಡಿ ತಿಳಿದುಕೊಳ್ತೀವಿ.

ಕೋಕಿಲಾ        :    ಹಾಗಲ್ಲಪ್ಪಾ. ಸಂಪ್ರದಾಯ ಸಂಪ್ರದಾಯ ಅಂತ ನಾನು ಕಟ್ಟು ಬಿದ್ದು ನನ್ನ ಫ್ಯೂಚರನ್ನು ಹಾಳು ಮಾಡಿಕೊಳ್ಳಲು ಸಿದ್ಧಳಾಗಿಲ್ಲ. ಕೆಲವು ದೇಶಗಳಲ್ಲಿ ಇಂಟರ್ವ್ಯೂ ಮಾಡೋದಲ್ಲ, ಟ್ರಯಲ್ ಮಾಡಿ ನೋಡಿಯೇ ನಂತರ ಮದುವೆ ಮಾಡಿಕೊಳ್ಳೋದು. ಅದರಲ್ಲಿ ನಾನು ಇಂಟರ್ವ್ಯೂ ಮಾಡ್ತೀನಿ ಅಂತ  ಕನ್ಸೆಷನ್ ತೋರಿಸಿದರೆ ನೀವು ಅದಕ್ಕೂ, ಒಪ್ಪದಿದ್ದರೆ ನನಗೆ ಈ ಸಂಬಂಧವೇ ಬೇಡ.

ಲೀಲಾ           :    ಈಗ ಕಾಲ ಎಷ್ಟೋ ಬದಲಾಯಿಸಿದೆ. ಇವಳು ತನ್ನ ಭವಿಷ್ಯದ ಜವಾಬ್ದಾರಿಯನ್ನು ತಾನೇ ವಹಿಸಿ ಕೊಂಡಿರೋದರಿಂದ ನಮಗೆ ನಾಳೆ ಬದನಾಮಿರೋದಿಲ್ಲ ಒಪ್ಪಿಕೊಳ್ಳಿ ಇದಕ್ಕೆ.

ಹರಿ               :    ಸರಿ. ಏನಾದರೂ ಮಾಡಿ ಆ ಪೂರ್ಣಯ್ಯನವರ ಮನೆಗೆ ನಾನೇ ಹೋಗಿ ವಿಚಾರವೆಲ್ಲಾ ತಿಳಿಸಿ ಮಾತಾಡಿಕೊಂಡು ಬರ್ತೀನಿ.

ಕೋಕಿಲಾ        :    ನಾನಿನ್ನು ಹೋಗ್ತೀನಿ. ಕಥೆ ಒಳ್ಳೇ ಸಸ್ಪೆನ್ಸ್ನಲ್ಲಿ ಬಿಟ್ಟು ಬಂದಿದ್ದೇನೆ. (ಹೊರಡುವಳು).

ಹರಿ               :    ಈ ಅಮಾವಾಸ್ಯೆ ಆ ಚಂದ್ರನನ್ನಾದರೂ ಕಟ್ಟಿಕೊಂಡರೆ ಸ್ವಲ್ಪ ಬೆಳಗೀತೋ ಅಂತ ನನ್ನ ಆಸೆ.

                                                   ದೃಶ್ಯ-3

(ಹಿಂದಿನಂತೆ ಕೋಕಿಲಾ ತನ್ನ ರೂಮಿನಲ್ಲಿ ಆರಾಮ ಕುರ್ಚಿಯ ಮೇಲೆ ಕುಳಿತುಕೊಂಡು ಕಥೇ ಪುಸ್ತಕವನ್ನು ಓದಿಕೊಳ್ಳುತ್ತಿರುವಳು. ಇತ್ತ ಕಡೆ ಲೀಲಾವತಮ್ಮ ಕುರ್ಚಿಯ ಮೇಲೆ ಕುಳಿತುಕೊಂಡು ನ್ಯೂಸ್ ಪೇಪರ್ ಓದುತ್ತಿರುವಳು).

ಕೋಕಿಲಾ    :    ಇನ್ನೈದು ನಿಮಿಷ ಇದೆ. ಆ ವರ ಇಂಟರ್‍ವ್ಯೂಗೆ ಇಲ್ಲಿಗೆ ಬರೋದಕ್ಕೆ. ಅಷ್ಟರಲ್ಲಿ ಆತ ಬಾರದಿದ್ದರೆ ನಾನು ಸಿನಿಮಾಗೆ ಹೊರಟು ಹೋಗ್ತೀನಿ. (ಎಂದು ಓದಿಕೊಳ್ಳುತ್ತಿರುವಳು)

                        (ಇತ್ತ ಕಡೆ ಹರಿದಾಸರಾಯನು ಚಂದ್ರನ್‍ನನ್ನು ಕರೆದುಕೊಂಡು ಪ್ರವೇಶಿಸುವನು).

ಚಂದ್ರನ್         :    ನಮಸ್ಕಾರ ತಾಯೀ.

ಲೀಲಾ           :    ಬಾಪ್ಪಾ.

ಚಂದ್ರನ್         :    ನಿಮಗೆ ಮಿಸ್ ಕೋಕಿಲಾ ಒಬ್ಬಳೇ ಮಗಳು ಅಂತ ತಿಳಿಯಿತು. ನಮ್ಮ ತಂದೆ ತಾಯಿಗಳಿಗೂ ನಾನೊಬ್ಬನೇ ಮಗ. ನಿಮ್ಮಿಬ್ಬರನ್ನು ನೋಡಿದರೆ ನಮ್ಮ ತಂದೆ ತಾಯಿಗಳನ್ನು ನೋಡಿದಂತೇ ಇದೆ ನನಗೆ. ನಿಮ್ಮ ಐಶ್ವರ್ಯದ ವಿಚಾರವೆಲ್ಲಾ ನಮ್ಮ ತಂದೆ ಆಗಲೇ ನನಗೆ ಹೇಳಿದ್ದಾರೆ. ನಿಮ್ಮ ಮಗಳು ಮೆಕ್ಯಾನಿಕಲ್ ಇಂಜಿನೀರಿಂಗ್ ಓದ್ತಾ ಇದ್ದಾಳೆಂತಲೂ ತಿಳೀತು. ಇದೆಲ್ಲಾ ನೋಡಿಯೇ ನಮ್ಮ ತಂದೆ ತಾಯಿಗಳಿಗೆ ಬರೋದಕ್ಕಿಷ್ಟವಿಲ್ಲದಿದ್ದರೂ ನಾನು ಬಂದಿರೋದು.

ಹರಿ               :    ನೋಡಿದೆಯೇನೇ ಈ ವರ ನಮ್ಮೆಲ್ಲರ ಮೇಲೂ ಎಷ್ಟು ಪ್ರೀತಿಯನ್ನು ತೋರಿಸ್ತಾ ಇದ್ದಾನೆ. ಕೋಕಿಲಾ ಈತನನ್ನು ಒಪ್ಪಿ ಕೊಳ್ಳೋದೇ ತಡ, ಮದುವೆ ಮಾಡಿ ಬಿಡೋಣ.

ಲೀಲಾ           :    ಹೇಗಿದ್ದರೂ ಈತನ ತಂದೆ ತಾಯಿಗಳು ಬರಲಿಲ್ಲ. ಕೋಕಿಲಾ ಒಪ್ಪಿಕೊಂಡರೆ ರಿಜಿಸ್ಟ್ರು ಮ್ಯಾರೇಜ್ ಮಾಡಿಬಿಡೋಣ. ಖರ್ಚು ಕಡಿಮೆ ಆಗುತ್ತೆ . . ಆ ಹಣವನ್ನೂ ಇವರಿಬ್ಬರಿಗೇ ಕೊಟ್ಟು ಬಿಡೋಣ. ಶಾಸ್ತ್ರಕ್ಕೆ ಒಂದು ಟೀ ಪಾರ್ಟಿ ಮಾಡಿಸಿದರೆ ಆಯಿತು.

ಚಂದ್ರನ್         :    ಐಡಿಯಾ. ನೀವು ಇಷ್ಟು ಪ್ರೊಗ್ರೆಸೀವ್ ಆಗಿದ್ದೀರಿ ಅಂತ ನಾನು ಊಹಿಸಿಕೊಳ್ಳಲೂ ಇಲ್ಲ. ನನಗಂತೂ ನಿಮ್ಮ ಸಂಬಂಧ ಬಹಳ ಇಷ್ಟ.

ಹರಿ               :    ನೋಡೇ, ಟೀ ಪಾರ್ಟಿಗೆ ಖರ್ಚು ಮಾಡ್ತೀಯಲ್ಲಾ ಅದರಲ್ಲಿ ಎರಡು ಸ್ವೀಟ್ಸಗೆ ಬದಲು ಒಂದೇ ಸ್ವೀಟು ಮಾಡಿಸು. ಇದರಿಂದ ಉಳಿಯೊ ಹಣಕ್ಕೆ ಒಬ್ಬ ಪುರೋಹಿತನನ್ನು ಕರೆಸಿ ನಮ್ಮ ಮನೆಯಲ್ಲೇ ಮದುವೆ ಶಾಸ್ತ್ರಾನೂ ಮಾಡಿಸಿಬಿಡೋಣ. ಆ ಮೇಲೆ ರಿಜಿಸ್ಟರು ಮಾಡಿಸಿಕೊಳ್ಳಲಿ ಬೇಕಾದರೆ.

ಚಂದ್ರನ್         :    ಐಡಿಯಾ. ಈಗ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ ಕೊಂಡರೂ ಫಾರಿನ್‍ಗೆ ಹೋಗೋವರೆಲ್ಲಾ ರಿಜಿಸ್ಟರ್  ಮಾಡಿಸ್ತಾರೆ. ನಾವೂ ಏನಾದರೂ ಫಾರಿನ್‍ಗೆ ಹೋಗೋ ಅವಕಾಶ ಸಿಕ್ಕರೆ ಅದು ಉಪಯೋಗ ಆಗುತ್ತೆ.

ಹರಿ               :    ಮಗೂ, ನಿನಗೆ ಒಂದು ವಿಷಯ ಮೊದಲೇ ತಿಳಿಸಿರ್ತೀನಿ. ನನ್ನ ಮಗಳು ಸ್ವಲ್ಪ ಮಾಡರ್ನ್ ಗರ್ಲ್ ಅವಳ ಪ್ರವರ್ತನೆ ನಿನಗೆ ಸರಿ ಬೀಳದಿದ್ದರೂ ಸ್ವಲ್ಪ ಮದುವೆ ಆಗೋವರೆಗೂ ಸಹಕಾರ ಮಾಡು. ಮದುವೆ ಆದ ಮೇಲೆ ಅವಳು ತನ್ನಷ್ಟಕ್ಕೆ ತಾನೇ ದಾರಿಗೆ ಬರ್ತಾಳೆ.

ಚಂದ್ರನ್         :    ಅದೇನು ದೊಡ್ಡ ಕೆಲಸ. ಹುಡುಗರು ಹುಡುಗಿಯರನ್ನು ಅನುಸರಿಸುವುದರಲ್ಲೇ ಮಜಾ ಇರೋದು.

ಲೀಲಾ           :    ಆ ತೂಬಿನ ಅಡ್ಡಾ ಸ್ವಲ್ಪ ತೆಗೀರಿ. (ಹರಿದಾಸರಾಯನು ತೆಗೆಯುವನು)

ಕೋಕಿಲಾ        :    (ಎದ್ದು ರಿಸ್ಟ್‍ವಾಚ್ ನೋಡಿ) ಇಂಟರ್‍ವ್ಯೂಗೆ ನಾನು ಕೊಟ್ಟ ಟೈಂ ಮೀರಿ ಹೋಯ್ತು. ವರ ಇಂಟರ್‍ವ್ಯೂಗೆ ಬರಲಿಲ್ಲ. ನಾನಿನ್ನು ಸಿನಿಮಾಗೆ ಹೊರಡ್ತೀನಿ. (ಎಂದು ಮುಖಕ್ಕೆ ಪೌಡರ್ ಹಾಕಿಕೊಳ್ಳುವುದಕ್ಕೆ ಕನ್ನಡಿಯ ಮುಂದೆ ನಿಂತುಕೊಳ್ಳುವಳು) .

                        (ಲೀಲಾವತಿ ತೂಬಿಗೆ ಅಡ್ಡಹಾಕಿ ಅಂತ ಸನ್ನೆ ಮಾಡುವಳು. ಹರಿದಾಸರಾಯ ಅಡ್ಡಹಾಕುವನು).

ಲೀಲಾ           :    ಕೂಡಲೇ ಕರೆದುಕೊಂಡು ಹೋಗಿ ಈತನನ್ನು, ಅವಳು ಸಿನಿಮಾಗೆ ಹೊರಟರೆ ಕಷ್ಟ. (ಹರಿದಾಸರಾಯನೂ ಚಂದ್ರನ್ ಹೊರಡುವರು. ಆ ಕಡೆಯಿಂದ ಕೋಕಿಲಾ ರೂಮನ್ನು ಪ್ರವೇಶಿಸುವರು).

ಹರಿ               :    ಮಗೂ. ಈತನೇ ವರ. ಬಂದಿದ್ದಾನೆ ಇಂಟರ್‍ವ್ಯೂಗೆ.

ಕೋಕಿಲಾ    :    ಮಿಸ್ಟರ್, ನನಗೆ ಸಿನಿಮಾಗೆ ಟೈಂ ಆಯಿತು. ನೀವು ಅಪಾಯಿಂಟೆಡ್ ಟೈಂಗೆ ಬರಲಿಲ್ಲ. ಆದ್ದರಿಂದ ಇಂಟರ್‍ವ್ಯೂ ಕ್ಯಾನ್ಸಲ್ ಮಾಡಿದ್ದೇನೆ. ಪುನಃ ಬೇಕಾದರೆ ಟೈಂ ಫಿಕ್ ಮಾಡಿ ತಿಳಿಸುತ್ತೇನೆ. (ಚಂದ್ರನ್ ಹರಿದಾಸರಾಯನಿಗೆ ಬಾಗಿಲು ಹಾಕಿಕೊಂಡು ಹೋಗಬೇಕೆಂದು ಕೈ ಸನ್ನೆ ಮಾಡುವನು. ಹರಿದಾಸರಾಯನು ಹೊರಡುವನು. ಬಾಗಿಲು ಮುಚ್ಚಿದ ಶಬ್ದ. ಚಂದ್ರನ್ ಬಾಗಿಲಿಗೆ ಅಡ್ಡ ನಿಂತುಕೊಳ್ಳುವನು).

ಕೋಕಿಲಾ    :    ಏನಿದು ನಿಮ್ಮನ್ನು ಇಲ್ಲಿ ಬಿಟ್ಟು ನಮ್ಮ ತಂದೆ ಬಾಗಿಲು ಹಾಕಿಕೊಂಡು ಹೋದರು? ನೀವು ಬಾಗಿಲಿಗೆ ಅಡ್ಡ ನಿಂತುಕೊಂಡಿದ್ದೀರಿ? ಏನಿದು ಅತ್ಯಾಚಾರ? ಪೊಲೀಸ್ . . ಪೊಲೀಸ್ . .

ಚಂದ್ರನ್         :    ಯಾವ ಅತ್ಯಾಚಾರವೂ ನಡೆಯುವುದಿಲ್ಲ. ದಯವಿಟ್ಟು ಕುರ್ಚಿಯ ಮೇಲೆ ಕುಳಿತುಕೊಳ್ಳಿ. ನೀವೊಬ್ಬರೇ ಇಂಟರ್‍ವ್ಯೂ ಮಾಡಬೇಕೆಂದು ನಿಮ್ಮ ತಂದೆಯವರಿಗೆ ತಿಳಿಸಿದ್ದರಿಂದ ಅವರು ನಮ್ಮ ಪ್ರಶ್ನೋತ್ತರಗಳು ಯಾರಿಗೂ ಕೇಳಿಸಬಾರದೂಂತ ಬಾಗಿಲು ಹಾಕಿದ್ದಾರೆ ಅಷ್ಟೆ. ನೀವು ಹೆಂಗಸಾಗಿ ಗಂಡಸನ್ನು ನೋಡಿದರೆ ಇಷ್ಟು ಹೆದರುತ್ತೀರಿ ಅಂತ ನನಗೆ ಗೊತ್ತಿರಲಿಲ್ಲ.

ಕೋಕಿಲಾ        :    ನನಗೆ ಭಯವೆಲ್ಲಿದೆ. ನಿಮ್ಮಂಥ ಗಂಡಸರನ್ನು ಎಷ್ಟೋ ಜನರನ್ನು ನಾನು ಟೀಸ್ ಮಾಡಿದ್ದೇನೆ.

ಚಂದ್ರನ್         :    ಹಾಗಾದರೆ ಇಂಟರ್‍ವ್ಯೂ ಷುರು ಮಾಡಿ. ಅಪಾಯಿಂಟ್‍ಮೆಂಟ್ ಕೊಟ್ಟು ಕ್ಯಾನ್ಸಲ್ ಮಾಡುವುದು ಜೆಂಟಲ್‍ಮೆನ್. ಅಲ್ಲ ಅಲ್ಲ ಲೇಡೀಸ್ ಲಕ್ಷಣವಲ್ಲ.

ಕೋಕಿಲಾ        :    ಟೈಂಗೆ ಸರಿಯಾಗಿ ಬಾರದಿರೋದು ಜೆಂಟಲ್‍ಮೆನ್ಸ್ ಲಕ್ಷಣವಲ್ಲ.

ಚಂದ್ರನ್         :    ನಾನು ಟೈಂಗೆ ಮುಂಚಿತವಾಗಿಯೇ ಬಂದಿದ್ದೇನೆ. ನಿಮ್ಮ ತಂದೆಯವರನ್ನು ಭೇಟಿ ಮಾಡಿದ್ದೇನೆ. ಅವರು ಈಗ ತಾನೆ ನನ್ನನ್ನು ನಿಮಗೆ ಇಂಟ್ರೋಡ್ಯೂಸ್ ಮಾಡಿದರು. ಟೈಂಗೆ ಬರಲಿಲ್ಲ ಅಂತ ಇಂಟರ್‍ವ್ಯೂ ಕ್ಯಾನ್ಸಲ್ ಮಾಡೋದು ಸರಿಯಲ್ಲ.

ಕೋಕಿಲಾ        :    ನೀವು ನನ್ನ ಹತ್ತಿರ ಇಂಟರ್‍ವ್ಯೂಗೆ  ಬಂದಿರುವುದು. ನಮ್ಮ ತಂದೆಯ ಹತ್ತಿರ ಅಲ್ಲ. ನೀವು ಟೈಂಗೆ ಸರಿಯಾಗಿ ಇಲ್ಲಿಗೆ ಬರಬೇಕಾಗಿತ್ತು.

ಚಂದ್ರನ್         :    ನಿಮಗೆ ಇಂಟರ್‍ವ್ಯೂ ಮಾಡೋ ಪದ್ಧತಿಯೇ ಗೊತ್ತಿಲ್ಲ ಪಾಪ. ಹೊಸ ಕುದುರೆ ಏರಿದಂತಾಗಿದೆ ಪಾಪ.

ಕೋಕಿಲಾ    :    ನನಗಿಂತಲೂ ನಿಮಗೆ ಜಾಸ್ತಿ ಗೊತ್ತಿದೆ ಪಾಪ. ನಾನು ಎಷ್ಟೋ ಕಾದಂಬರಿಗಳಲ್ಲಿ ಓದಿದ್ದೇನೆ.

ಚಂದ್ರನ್         :    ನಿಮ್ಮ ಜ್ಞಾನ ಕಾದಂಬರಿಗಳದ್ದು. ನನ್ನದು ವಾಸ್ತವಿಕವಾದದ್ದು. ಉದ್ಯೋಗಕ್ಕಾಗಿ ಇಂಟರ್‍ವ್ಯೂಗಳಿಗೆ ಹೋಗಿ ಹೋಗಿ ಬೇಜಾರಾಗಿ ಇನ್ನು ಇಂಟರ್‍ವ್ಯೂಗಳಿಗೆ ಹೋಗಬಾರದೆಂದು ತೀರ್ಮಾನ ಮಾಡಿಕೊಂಡಿದ್ದೇನೆ. ಇದು ಮದುವೇ ಇಂಟರ್‍ವ್ಯೂಗೆ ಆದ್ದರಿಂದ ಬಂದೆ. ಇಲ್ಲದಿದ್ದರೆ ಬರ್ತಾನೇ ಇರಲಿಲ್ಲ.

ಕೋಕಿಲಾ    :    ಕಾದಂಬರಿಗಳಲ್ಲಿ ವಾಸ್ತವಿಕತೆಗಿಂತಲೂ ಹೆಚ್ಚಾದ ವಿಷಯಗಳಿರುತ್ತವೆ.

ಚಂದ್ರನ್         :    ನೀವು ಓದಿದ ಕಾದಂಬರಿಗಳಲ್ಲಿ  ಯಾವುದರಲ್ಲಾದರೂ ಒಬ್ಬನು ಟೈಂಗೆ ಸರಿಯಾಗಿ ಬಂದನೇ ಇಲ್ಲವೇ? ಎಂಬ ಅಂಶದ ಚರ್ಚೆ ಬಂದಿದೆಯೇ? ಅದು ಬಂದಿದ್ದರೆ ಅದನ್ನು ಹೇಗೆ ತೀರ್ಮಾನ ಮಾಡುವುದನ್ನು ತೋರಿಸಿದ್ದಾನೆಯೇ?

ಕೋಕಿಲಾ    :    ಇಲ್ಲ.

ಚಂದ್ರನ್         :    ಅದಕ್ಕೇ ನನ್ನ ಮಾತನ್ನು ಕೇಳಿ. ಇಂಟರ್‍ವ್ಯೂ ಮಾಡೋದು ಹೇಗೆ ಅಂತ ನಾನು ಹೇಳಿಕೊಡ್ತೀನಿ. ಆ ಕುರ್ಚಿಯಲ್ಲಿ ಕುಳಿತುಕೊಳ್ಳಿ. ನನಗೆ ಕೂತುಕೊಳ್ಳೋದಕ್ಕೆ ಒಂದು ಕುರ್ಚಿ ಕೊಡಿ. ನಾನು ಕೂತುಕೊಂಡ ಮೇಲೆ ಮೊದಲನೇ ಪ್ರಶ್ನೆ ಕೇಳಿ.ನಾನು ಇಂಟರ್‍ವ್ಯೂ ಕ್ಯಾನ್ಸಲ್ ಮಾಡಿದ್ದು ಸರಿಯೆನ್ನುತ್ತೀರೋ ತಪ್ಪೆನ್ನುತ್ತೀರೋ? ಸಕಾರಣವಾಗಿ ಹೇಳಿ. . ಅಂತ.

ಕೋಕಿಲ         :    ಇಲ್ಲಿ ಆರಾಮ ಕುರ್ಚಿಒಂದೇ ಇದೆ. ಇನ್ನೊಂದು ಇಲ್ಲವಲ್ಲಾ. ತರೋದಕ್ಕೆ ಆಳು ಯಾರೂ ಇಲ್ಲವಲ್ಲಾ. ಅಯ್ಯೋ . . ಈಗೇನು ಮಾಡಲಿ (ಎಂದು ಅಲ್ಲಿ ಇಲ್ಲಿ ನೋಡುತ್ತಿರುವಳು)

                        (ಲೀಲಾವತಮ್ಮ ತೂಬಿಗೆ ಅಡ್ಡ ಹಾಕಿ ಎಂದು ಸನ್ನೆ ಮಾಡುವಳು. ಹರಿದಾಸ ರಾಯನು ಮುಚ್ಚುವನು)

ಲೀಲಾ           :    ಈ ಕುರ್ಚಿ ಕೂಡ್ಲೇ ಎತ್ತಿಕೊಂಡು ಹೋಗಿ ಅಲ್ಲಿ ಹಾಕಿ. ಕಾರ್ಯ ಕೆಟ್ಟು ಹೋಗುತ್ತೆ.

ಚಂದ್ರನ್         :    ನೀವು ಇಂಟರ್‍ವ್ಯೂಗೆ ಬರೋವರಿಗೆ ಕುಚಿಯನ್ನೇ ಇಟಿಲ್ವಲ್ಲಾ. ನಿಮಗೆ ಮ್ಯಾನರ್ಸ್ ಗೊತ್ತಿಲ್ಲ.

ಕೋಕಿಲಾ    :    ಇದು ನಮ್ಮ ತಂದೆ ಮಾಡಬೇಕಾಗಿತ್ತು. ನಾನಲ್ಲ.  (ಹರಿದಾಸರಾಯ ಕುರ್ಚಿ ತಂದು ಹಾಕುವನು. ಕೋಕಿಲಾ ಆರಾಮ ಕುರ್ಚಿಯ ಮೇಲೆ ಕುಳಿತುಕೊಳ್ಳುವಳು).

ಕೋಕಿಲಾ    :    ನೀವೇಕೆ ಆ ಕುರ್ಚಿಯ ಮೇಲೆ ಕುಳಿತುಕೊಳ್ಳದೆ ನಿಂತುಕೊಂಡಿದ್ದೀರಿ?

ಚಂದ್ರನ್         :    ಅದು ಮ್ಯಾನರ್ಸ್. ನೀವು ಕುಳಿತುಕೊಳ್ಳಿ ಅಂತ ಹೇಳಿದ ಮೇಲೆ ಕುಳಿತುಕೊಳ್ಳಬೇಕು.

ಕೋಕಿಲಾ        :    ಕೂತುಕೊಳ್ಳಿ. ನಿಮ್ಮ ಮ್ಯಾನರ್ಸ್ ನನಗೆ ಬಹಳ ಮೆಚ್ಚುಗೆ ಆಗಿದೆ. (ಚಂದ್ರನ್ ಕೂತುಕೊಳ್ಳುವನು).

ಕೋಕಿಲಾ        :    ನಾನು ಇಂಟರ್‍ವ್ಯೂ ಕ್ಯಾನ್ಸಲ್ ಮಾಡಿದ್ದು ಸರಿಯೋ, ತಪ್ಪೋ ಸಕಾರಣವಾಗಿ ಹೇಳಿ?

ಚಂದ್ರನ್         :    ಹೇಳ್ತೀನಿ. ಮೊದಲು ನೀವು ಪೇಪರೂ ಪೆನ್ಸಿಲ್ ಇಟ್ಟುಕೊಂಡು ನನ್ನ ಪ್ರತ್ಯುತ್ತರಗಳಿಗೆ ಮಾಕ್ರ್ಸ್ ಹಾಕಿಕೊಳ್ತಾ ಇರಬೇಕು.

ಕೋಕಿಲಾ    :    ನೀವು ಹೇಳೋದು ಸರಿ. ಕಾದಂಬರಿಯಲ್ಲಿ ಹಾಗೇ ವರ್ಣಿಸಿರೋದು.

ಚಂದ್ರನ್         :    ನನ್ನ ಉತ್ತರ ಕೇಳಿ. ಇಂಟರ್‍ವ್ಯೂ ಮಾಡೋವರು ಟೈಂ ಆಗೋವರೆಗೂ ಕಾದಿದ್ದು ಟೈಂ ಆದ ಕೂಡಲೇ ಕ್ಯಾಂಡಿಡೇಟ್‍ನ ಹೆಸರನ್ನು ಕೂಗಬೇಕು. ಈಗ ಕ್ಯಾಂಡಿಡೇಟ್ ಹಾಜರಾಗದಿದ್ದರೆ ಇನ್ನೂ ಎರಡು ಸಲ ಕೂಗಬೇಕು. ಅಲ್ಲಿಗೂ ಬಾರದಿದ್ದರೇನೇ ಇಂಟರ್‍ವ್ಯೂ ಕ್ಯಾನ್ಸಲ್ ಮಾಡಬೇಕು. ನೀವು ನನ್ನ ಹೆಸರು ಮೂರು ಸಲ ಕೂಗದೆ ಇಂಟರ್‍ವ್ಯೂ ಕ್ಯಾನ್ಸಲ್ ಮಾಡಿರೋದು ಸರಿಯಲ್ಲ.

ಕೋಕಿಲಾ    :    ಕಾದಂಬರಿಗಳಲ್ಲಿ ಈ ಕೂಗುವುದನ್ನು ಕೋರ್ಟಿನಲ್ಲಿ ಮಾತ್ರ ಮಾಡಿಸ್ತಾರೆ. ಇಂಟರ್‍ವ್ಯೂನನಲ್ಲ.

ಚಂದ್ರನ್         :    ಇಂಟರ್‍ವ್ಯೂನಲ್ಲೂ ಕೋರ್ಟಿನಲ್ಲೂ ಪ್ರೊಸೀಜರ್ ಒಂದೇ. ಇಲ್ಲದಿದ್ದರೆ ಇಂಟರ್‍ವ್ಯೂ ಕಾನೂನಿಗೆ ವಿರೋಧವಾಗುತ್ತೆ. ಕ್ಯಾಂಡಿಡೇಟ್ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಹಾಕ್ತಾನೆ. ಅಲ್ಲದೇ, ಇದು ಕೋರ್ಟ್‍ಂಗ್‍ಗೆ ಇಂಟರ್‍ವ್ಯೂ ಆಗಿರುವುದರಿಂದ ಕೋರ್ಟ್‍ನ ಕ್ರಮವನ್ನೇ ಅನುಸರಿಸಬೇಕು.

ಕೋಕಿಲಾ    :    ಸರಿ ಇದಕ್ಕೆ ಹತ್ತಕ್ಕೆ ಆರು ಮಾರ್ಕು ಕೊಟ್ಟಿದ್ದೇನೆ.

ಚಂದ್ರನ್         :    ನೀವು ಮಾರ್ಕುಗಳನ್ನು ಹೇಳಬಾರದು. ತೋರಿಸಬಾರದು. ಈಗ ಕೊಟ್ಟಿರೋ ಮಾರ್ಕುಗಳು ಫೈನಲ್ ಅಲ್ಲ. ರಿಜಲ್ಟ್ ಹೇಳುವಷ್ಟರೊಳಗೆ ಮಾರ್ಕುಗಳನ್ನು ಹೆಚ್ಚಿಸೋದಕ್ಕೂ ತಗ್ಗಿಸೋದಕ್ಕೂ ಎಷ್ಟೋ ಕಾರಣಗಳಿರುತ್ತವೆ.

ಕೋಕಿಲಾ    :    ಇನ್ನು ನಾನು ತಯಾರು ಮಾಡಿದ ಪ್ರಶ್ನೆಗಳಿಗೆ ಉತ್ತರ ಹೇಳಿ. ಮೊದಲು ನಿಮ್ಮ ಹೆಸರೇನು?

ಚಂದ್ರನ್         :    ಚಂದ್ರನ್

ಕೋಕಿಲಾ        :    ಚಂದ್ರನ್ ಎಂದರೆ ನೀವು ಕನ್ನಡಿಗರಲ್ಲ, ತಮಿಳರು? ನಾನು ಅಚ್ಚ ಕನ್ನಡತಿ. ಕನ್ನಡ ಮಹಿಳಾ ಸಂಘಕ್ಕೆ ಪ್ರೆಸಿಡೆಂಟು. ಇನ್ನು ಈ ಇಂಟರ್‍ವ್ಯೂ ಕ್ಲೋಸ್ ಮಾಡಬೇಕು. ಕ್ಯಾನ್ಸಲ್ ಮಾಡದಿದ್ದರೂ.

ಚಂದ್ರನ್         :    ನಾನು ತಮಿಳನಲ್ಲ. ನಿಮಗಿಂತಲೂ ಹೆಚ್ಚು ಕನ್ನಡದವನು. ಚಂದ್ರನ್ ಅನ್ನುವುದು ಚಂದ್ರ ಎಂಬ ಶಬ್ದದ ತತ್ಸಮ ರೂಪ. ಹಳಗನ್ನಡ ಮಹಾ ಕವಿಗಳು ಚಂದ್ರನು ಅನ್ನುವುದಕ್ಕೆ ಚಂದ್ರನ್ ಎಂದೇ ಬರೆದಿದ್ದಾರೆ. ಆದ್ದರಿಂದ ನನ್ನ ಹೆಸರಿನಲ್ಲಿ ಕನ್ನಡತನ ನಿಮ್ಮ, ನಿಮ್ಮ ತಂದೆಯ, ನಿಮ್ಮ ತಾತನ ಹೆಸರಿಗಿಂತಲೂ ಹೆಚ್ಚಾಗಿದೆ. ಈನ್ಎಂಬ ಪ್ರತ್ಯಯವನ್ನು ತಮಿಳರು ಕನ್ನಡದಿಂದಲೇ ತೆಗೆದುಕೊಂಡರೇ ಎಂದು ನಾನು ಪರಿಶೋಧನೆ ಮಾಡ್ತಾ ಇದ್ದೇನೆ.

ಕೋಕಿಲಾ    :    ನೀವು ಹೇಳಿದ್ದೆಲ್ಲಾ ನಿಜವೆಂದು ಒಪ್ಪಿಕೊಂಡರೂ ನಿಮ್ಮ ಉತ್ತರ ನನಗೆ ಸಮರ್ಪಕವಿಲ್ಲ. ನನಗೆ ಹಳೆಯದೊಂದೂ ಸರಿ ಬೀಳುವುದಿಲ್ಲ. ನಾನು ಯಾವಾಗಲೂ ಹೊಸದನ್ನೇ ಪ್ರೀತಿಸ್ತೀನಿ. ಹೊಸಗನ್ನಡದಲ್ಲಿ ಈ ರೂಪವೀಗಿಲ್ಲ. ತಮಿಳಿನಲ್ಲಿದೆ. ಆದ್ದರಿಂದ ನೀವು ಈ ಹೆಸರನ್ನು ಬದಲಾಯಿಸಿಕೊಳ್ಳದಿದ್ದರೆ ನಾನು ನಿಮ್ಮನ್ನು ಮದುವೆ ಆಗೋದು ಅಸಾಧ್ಯ.

ಚಂದ್ರನ್         :    ಹಾಗಾದರೆ ನೀವು ನಿಮ್ಮ ಕೋಕಿಲಾ ಎಂಬ ಹೆಸರನ್ನೂ ಬದಲಾಯಿಸಿಕೊಳ್ಳಬೇಕು ಕೋಗಿಲೆ ಕಾಗೆ ಇದ್ದ ಹಾಗೆ ಕಪ್ಪಗಿರುತ್ತೆ.

ಕೋಕಿಲಾ    :    (ನಕ್ಕು) ನಾ.. ನಾ. . ಹೆಸರನ್ನು ಯಾವಾಗಲೋ ಬದಲಾಯಿಸಿಕೊಂಡಿದ್ದೇನೆ. ಈಗ ನನ್ನ ಹೆಸರು ಕುಹೂ . .  ಅಂದರೆ ಕೋಗಿಲೆಯ ಧ್ವನಿ. ಕೋಗಿಲೆ ಅಲ್ಲ.

ಚಂದ್ರನ್         :    ಕುಹೂ. . ಕುಹೂ. . ಕುಹೂ. . ಕುಹೂ. . ಎಷ್ಟು ಚೆನ್ನಾಗಿದೆ.

ಕೋಕಿಲಾ    :    ನಿಮ್ಮ ವಿದ್ಯಾಭ್ಯಾಸ ಎಲ್ಲಿಯವರೆಗೆ ನಡೆದಿದೆ?

ಚಂದ್ರನ್         :    ನಾನು ಬಿ.ಎಸ್.ಸಿ ಫೆಯಿಲ್. ಆದರೂ ಸ್ವಂತವಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಮೆಡಿಸನ್, ಮಾಡರ್ನ್ ಆರ್ಟ್ ಎಂಬ ಥ್ರೀ ಎಮ್ಸ್ ನಲ್ಲಿ ಮಾಸ್ಟರ್ ಆಗಬೇಕೂಂತ ಪ್ರಯತ್ನ ಮಾಡ್ತಾ ಇದ್ದೀನಿ. ಈ ಸ್ಕ್ರೂ ಡ್ರೈವರ್. ಈ ಸ್ಟೆಥೆಸ್ಕೋಪ್, ಈ ಕಾಮ ಕ್ರೋಧ ಕ್ಯಾಲೆಂಡರ್ ನೋಡಿ. (ಎಂದು ಎಲ್ಲಾ ತೋರಿಸುವನು).

ಹರಿ               :    (ತೂಬು ಮುಚ್ಚಿ) ಥ್ರೀ ಎಮ್ಸ್, ಎರಡು ಎಂ ಅಂದರೆ ಎಂ.ಎಂ ಅಂದರೆ ಮೊದ್ದು ಮುಂಡೆ ಅನ್ನೋದಕ್ಕೆ ಅಬ್ರಿವೇಷನ್ ಥ್ರೀ ಎಮ್ಸ್ ? .. ? …? ದೇವರೇ ಗತಿ (ಎಂದು ತಲೆ ಚಚ್ಚಿಕೊಳ್ಳುವನು).

ಲೀಲಾ           :    ಈ ಓದೋ ಹುಡುಗಿಯ ಮೆಕ್ಯಾನಿಕಲ್ ಇಂಜಿನೀಯರಿಂಗ್ ಆಗಲೀ ನೋಡಿದ್ದಾಯಿತಲ್ಲಾ. ಈ ಓದದವನ ಇಂಜಿನಿಯರಿಂಗ್, ಇವನ ಮೆಡಿಸನ್, ಇವನ ಮಾಡರ್ನ್ ಆರ್ಟ್ ದೇವರೇ ಗತಿ. ಜಾಕ್ ಆಫ್ ಆಲ್ ಟ್ರೇಡ್ಸ್.

ಹರಿ               :    ಅಂಡ್ ಮಾಸ್ಟರ್ ಆಫ್ ನನ್. (ಪುನಃ ತೂಬು ತೆಗೆಯುವನು)

ಚಂದ್ರನ್         :    ನೋಡಿದಿರಾ ಎಲ್ಲಾ.

ಕೋಕಿಲಾ        :    ನೋಡಿದೆ. ವಂಡರ್‍ಫುಲ್.

ಚಂದ್ರನ್         :    ವಂಡರ್‍ಫುಲ್ ಅಂದರೆ, ತಪ್ಪಿಸಿಕೊಳ್ಳೋ ಮಾತು. ಮೆಚ್ಚುಗೆಯ ಮಾತಲ್ಲ. ಡಿಪ್ಲೊಮೆಟಿಕ್ ಆಗಿ ತಪ್ಪಿಸಿಕೊಳ್ಳುವ ಮಾತು. ಅಯ್ಯೋ.

ಹರಿ               :    (ತೂಬು ಮುಚ್ಚಿ) ಏನೇ. ಪರವಾ ಇಲ್ಲವೇ ನಿನ್ನ ಮಗಳು. ಡಿಪ್ಲೊಮೆಟಿಕ್ ಆಗಿ ಉತ್ತರ ಕೊಟ್ಟಿದ್ದಾಳೆ. (ತೂಬು ತೆಗೆಯುವನು)

ಕೋಕಿಲಾ        :    ನಿಮಗೆ ಸಿನಿಮಾ ನಟರಲ್ಲಿ ನಟಿಯರಲ್ಲಿ ಯಾರ ನಟನೆ ಹೆಚ್ಚು ಪ್ರಿಯ. ಈ ಪೇಪರ್‍ನಲ್ಲಿ ಹೆಸರುಗಳನ್ನು ಬರೆದಿದ್ದೇನೆ. ನೀವು ಮಾರ್ಕ್ ಮಾಡಿ ನನಗೆ ಕೊಡಿ. (ಎಂದು ಕೊಡುವಳು)

                        (ಚಂದ್ರನ್ ಓದಿಕೊಂಡು ಮಾರ್ಕು ಮಾಡುವನು. ಕೋಕಿಲಾ ನೋಡಿ ಮುಖವಿಕಾರ ಮಾಡುವಳು. ಮಾರ್ಕು ಕೊಡುವಳು)

ಕೋಕಿಲಾ        :    ಇದು ಸಿನಿಮಾ ಹಾಡುಗಳ ಪಟ್ಟಿ. ನಿಮಗೆ ಹೆಚ್ಚು ಪ್ರಿಯವಾದವುಗಳನ್ನು ಮಾರ್ಕ್ ಮಾಡಿ.

                        (ಚಂದ್ರನ್ ಮಾರ್ಕು ಮಾಡುವನು. ಕೋಕಿಲಾ ನೋಡಿ ಮುಖಾ ಸಪ್ಪೆ ಮಾಡಿಕೊಳ್ಳುವಳು. ಮಾರ್ಕು ಹಾಕುವಳು)

ಚಂದ್ರನ್         : (ಭಯದಿಂದ ನಡುಗುತ್ತ) ನಿಮಗೆ ಪ್ರಿಯವಾದವುಗಳನ್ನು ನಾನು ಮಾರ್ಕ್ ಮಾಡಲಿಲ್ಲ ಅಂತ ಕಾಣುತ್ತೆ. ದಯವಿಟ್ಟು ನನಗೆ ಫೈಯಿಲ್ ಮಾಕ್ರ್ಸ್ ಹಾಕಬೇಡಿ. ನಿಮಗೆ ಯಾವುದು ಇಷ್ಟವೋ ನನಗೂ ಅದೇ ಇಷ್ಟ ಅಂತಾ ಭಾವಿಸಿಕೊಂಡು ಮಾರ್ಕು ಕೊಡಿ ಮೇಡಂ.

ಕೋಕಿಲಾ    :    ಸರಿ. ಇದಕ್ಕೆ ಇನ್ನೆರಡು ಮಾಕ್ರ್ಸ್ ಪ್ಲಸ್ ಮಾಡ್ತೀನಿ. ನಿಮ್ಮ ತಂದೆ ಎಷ್ಟು ಎತ್ತರ? ನಿಮ್ಮ ತಾಯಿ ಎಷ್ಟು ಎತ್ತರ? ಅವರಿಬ್ಬರಲ್ಲಿ ಯಾರು ಪ್ರಬಲರು?

ಚಂದ್ರನ್         :    ನಿಮ್ಮ ತಂದೆಯಷ್ಟೇ ಎತ್ತರ ನಮ್ಮ ತಾಯಿ. ನಿಮ್ಮ ತಾಯಿಯಷ್ಟೇ ಎತ್ತರ ನಮ್ಮ ತಂದೆ. ನಮ್ಮ ತಂದೆಯೇ ಪ್ರಬಲರು.

ಕೋಕಿಲಾ    :    ಹಾಗೋ (ಎಂದು ಹೇಳಿ ಮಾರ್ಕು ಹಾಕಿ) ಕೈಗಡಿಯಾರ ನೋಡಿ ಸರಿ ನನಗೆ ಟೈಂ ಆಯಿತು. ನೀವು ಹೋಗಿ ಬನ್ನಿ. ರಿಸಲ್ಟ್ ತಿಳಿಸಲಾಗುತ್ತೆ.

ಚಂದ್ರನ್         :    ಥ್ಯಾಂಕ್ಯೂ, ಮೇಡಂ. (ಎಂದು ಹೊರಡುವನು)

ಕೋಕಿಲಾ    :    (ಕಾಗದದ ಮೇಲೆ ಏನೋ ಬರೆದು) ರಿಸಲ್ಟು ರಿಜಲ್ಟು – ಬರೆದಿಟ್ಟಿದ್ದೇನೆ. ನೋಡಿಕೊಳ್ಳಲಿ ನನ್ನ ತಂದೆ. (ಎಂದು ಹೊರಡುವಳು)

                        (ಇತ್ತ ಕಡೆಯಿಂದ ಹೊರಟು ಹರಿದಾಸರಾಯನೂ, ಲೀಲಾವತಮ್ಮನೂ ಅತ್ತ ಕಡೆಯಿಂದ ಕೋಕಿಲಾಳ ರೂಮನ್ನು ಪ್ರವೇಶಿಸುವರು).

ಹರಿ               :    (ರಿಜಲ್ಟು ನೋಡಿ) ಪಾಪ ! ಹುಡುಗ ಎಲ್ಲಾದರಲ್ಲೂ ಇವಳನ್ನನುಸರಿಸಿದ. ಕೊನೇಗೆ ಪೇರೆಂಟೇಜ್‍ನಲ್ಲಿ ಫೈಯಿಲ್ ಆಗಿಬಿಟ್ಟ ಪಾಪ. ಅವನ ತಾಯಿ ಎತ್ತರ ಬದಲಾಯಿಸೋದಕ್ಕೆ ಅವನಿಂದ ಆಗುತ್ತ್ಯೇ? ಪಾಪ. .

ಲೀಲಾ           :    ಏನು? ಫೈಯಿಲ್ ಮಾಡಿಬಿಟ್ಟಳೇ?

ಹರಿ               :    ಇನ್ನೇನು. ನೀನು ಆಸೆಯಿಟ್ಟು ಕೊಂಡಿದ್ದೆ. ಈ ಅಮಾವಾಸ್ಯೆ ಆ ಚಂದ್ರನಿಂದ ಬೆಳಗುತ್ತೆ ಅಂತಾ. ಅಮಾವಾಸ್ಯೆಯನ್ನು ಬೆಳಗಿಸೋ ಚಂದ್ರನನ್ನು ದೇವರು ಇನ್ನೂ ಸೃಷ್ಟಿ ಮಾಡಿಲ್ಲ ಕಣೇ . . . ಸೃಷ್ಟಿ . . ಮಾಡಿಲ್ಲ.

                                                  (ತೆರೆ ಬೀಳುವುದು)

                                                                         ರಚನೆ: ಲಂಕಾ ಕೃಷ್ಣಮೂರ್ತಿ.

                                                                                                                      03-11-1975