Article of the Month January 2020

                                    ಗಾಯತ್ರಿ

                                   1-2-1994

       ಈಗ ಜ್ಞಾನ, ಜ್ಞಾತೃ, ಜ್ಞೇಯ ಎಂಬ ತ್ರಿಪುಟವನ್ನು ಕುರಿತು ಆಲೋಚಿಸೋಣ. ಜ್ಞಾನವೆಂದರೆ ತಿಳಿಯುವುದೆಂದು ಅರ್ಥ. ನಾವು ಪಂಚೇಂದ್ರಿಯಗಳ ಮೂಲಕ ಹೊರ ಜಗತ್ತಿನ ವಿಷಯಗಳನ್ನು ತಿಳಿದು ಕೊಳ್ಳುತ್ತಿರುತ್ತೇವೆ. ಇದಕ್ಕೆ ಪ್ರತ್ಯಕ್ಷ ಜ್ಞಾನವೆಂದು ಹೆಸರು. ಇದಲ್ಲದೆ ಪ್ರತ್ಯಕ್ಷ ಜ್ಞಾನ ಮುಂತಾದುವನ್ನು ಆಧಾರ ಮಾಡಿಕೊಂಡು ನಮ್ಮ ಮನಸ್ಸಿನಲ್ಲೇ ತರ್ಕ ಮಾಡಿಕೊಂಡು ಕೆಲವು ನಿರ್ಣಯಗಳಿಗೆ ಬರುತ್ತೇವೆ. ಇದಕ್ಕೆ ಅನುಮಾನದಿಂದ ಬಂದ ಜ್ಞಾನವೆಂದು ಹೆಸರು. ಅಲ್ಲದೆ ಕೆಲವು ವಿಷಯಗಳನ್ನು ಬಲ್ಲವರಿಂದ ತಿಳಿದುಕೊಳ್ಳುತ್ತೇವೆ. ಇದಕ್ಕೆ ಆಪ್ತ ವಾಕ್ಯದಿಂದ ಬಂದ ಜ್ಞಾನವೆಂದು ಹೆಸರು. ಪ್ರತ್ಯಕ್ಷವಾಗಿ ನೋಡಿದರೂ ತಪ್ಪು ತಿಳುವಳಿಕೆಗೆ ಅವಕಾಶವಿದೆ. ತರ್ಕ ಮಾಡಿಯೂ ತಪ್ಪು ತಿಳುವಳಿಕೆಯನ್ನು ಒಂದೊಂದು ಸಲ ಪಡೆಯಬಹುದು. ಆಪ್ತವಾಕ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿಯು ತಪ್ಪು ಮಾಡಬಹುದು. ಎಷ್ಟು ಬುದ್ಧಿವಂತರಾದರೂ ಬುದ್ಧಿವಂತರ ನಡುವೆಯೇ ಅಭಿಪ್ರಾಯ ಭೇದಗಳಿಗೆ ಅವಕಾಶವಿದೆ. ಜ್ಞಾನವು ಹೀಗೆ ನಾನಾ ರೂಪಗಳಲ್ಲಿದ್ದರೂ ವಿಜ್ಞಾನ ರೂಪದಲ್ಲಿ ಎಲ್ಲರಿಂದಲೂ ಅಂಗೀಕರಿಸಲ್ಪಡುವಷ್ಟು ಏಕರೂಪತೆಯನ್ನು ಪಡೆಯುವುದನ್ನು ನಾವು ಇಂದಿನ ವಿಜ್ಞಾನ ಯುಗದಲ್ಲಿ ನೋಡುತ್ತಿದ್ದೇವೆ. ಜ್ಞಾನವೆಂದು ಏಕರೂಪತೆಯನ್ನು ಪಡೆಯಬೇಕಾದರೆ ಅದು ಸತ್ಯವಾಗಿರಬೇಕು. ಸತ್ಯವಾದ ಸ್ಥಿತಿ ಒಂದೇ. ಅದಕ್ಕೆ ಭಿನ್ನವಾಗಿ ಅಸತ್ಯವಾದ ಅಥವಾ ಅಲ್ಪ ಸತ್ಯವಾದ ಸ್ಥಿತಿಗಳು ಎಷ್ಟಾದರೂ ಇರಬಹುದು ಆದುದರಿಂದ ಸತ್ಯವಾದ ಜ್ಞಾನವನ್ನೇ ಜ್ಞಾನವೆಂದು ಭಾವಿಸಬೇಕು. ಸತ್ಯವೆಂದರೆ ದೇಶ ಕಾಲಗಳಲ್ಲಿ ಒಂದೇ ರೂಪ ಹೊಂದಿರುವುದು. ಅಥವಾ ಶಾಶ್ವತವಾಗಿರುವುದು. ಬೆಂಕಿ ಸುಡುತ್ತದೆ ಎಂಬುದು ಸತ್ಯ. ಕಾರಣ ಇದು ಎಲ್ಲ ದೇಶ ಕಾಲಗಳಲ್ಲೂ ನಡೆಯುತ್ತದೆ. ಆದುದರಿಂದ ಸತ್ಯದ ಬೆಳಕಿರುವುದೇ ಜ್ಞಾನ. ಇತರ ವಿಧವಾದ ಜ್ಞಾನಗಳೆಲ್ಲವೂ ಅಜ್ಞಾನದ ಅಥವಾ ಅಲ್ಪ ಜ್ಞಾನದ ನಾನಾ ಸ್ವರೂಪಗಳು ಮಾತ್ರ. 

       ಜ್ಞಾತೃ ಎಂದರೆ ಈ ಸತ್ಯ ರೂಪವಾದ ಜ್ಞಾನವನ್ನು ಪಡೆಯುತ್ತಿರುವವನು. ಜ್ಞೇಯವೆಂದರೆ ತಿಳಿಯತಕ್ಕ ವಿಷಯ. ಇದು ಜ್ಞಾನದ ಉದ್ದೇಶವನ್ನು ಅನುಸರಿಸಿಕೊಂಡಿರುತ್ತದೆ. ಜ್ಞಾನದ ಉದ್ದೇಶವೇನು? ಎಲ್ಲರ ಜಿಜ್ಞಾಸೆಯು ಒಟ್ಟಿನಲ್ಲಿ ಸುಖಪ್ರಾಪ್ತಿಯ ಉದ್ದೇಶವುಳ್ಳದ್ದೇ. ಈ ಸುಖಗಳಲ್ಲಿ ಸ್ವಲ್ಪ ಹೊತ್ತಿದ್ದು ದುಃಖವಾಗಿ ಪರಿಣಮಿಸುವ ಸುಖವು ನಿಜವಾದ ಸುಖವಲ್ಲ. ಆದುದರಿಂದ ಶಾಶ್ವತವಾದ ಸುಖವೇ ಎಲ್ಲರ ಆತ್ಮವೂ ಬಯಸುವುದು. ಇದಕ್ಕೆ ಆನಂದವೆಂದು ಹೆಸರು. 

       ಈ ಆನಂದವು ಬಾಹ್ಯವಸ್ತುಗಳಿಂದ ಸಿಗುವುದಿಲ್ಲ. ಕಾರಣ ಅವುಗಳಿಗೆ ಪರಿಮಿತಿ ಇದೆ. ಬಾಹ್ಯವಸ್ತುಗಳೇಕೆ? ನಮ್ಮ ಶರೀರವೇ ಶಾಶ್ವತವಲ್ಲ. ಆದರೆ ಆತ್ಮ ಶಾಶ್ವತ. ಅದಕ್ಕೆ ಮರಣವಿಲ್ಲ. ಈ ಆತ್ಮಕ್ಕೆ ಶಾಶ್ವತವಾದ ಆನಂದವು ಬೇಕಾದರೆ ಯಾವ ಜ್ಞಾನವು ಬೇಕೋ ಅದೇ ಉತ್ತಮವಾದ ಮತ್ತು ಪೂರ್ತಿಯಾಗಿ ನಿಜವಾದ ಜ್ಞಾನ. ಅದಕ್ಕೆ ಅಮರಕೋಶದಲ್ಲಿಮೋಕ್ಷೇ ಧೀಜ್ಞಾನ ಮನ್ಯತ್ರ ವಿಜ್ಞಾನಂ ಶಿಲ್ಪ ಶಾಸ್ತ್ರಯೋಃಎಂದು ಹೇಳಿರುವುದು ಆದುದರಿಂದ ವಸ್ತು ವಿಜ್ಞಾನವನ್ನು ಸಹ ಮೀರಿ ಶಾಶ್ವತಾನಂದ ರೂಪವಾದ ಮೋಕ್ಷಕ್ಕೆ ಸಂಬಂಧಿಸಿದ ಜ್ಞಾನವಾವುದಿದೆಯೋ ಅದೇ ನಿಜವಾದ ಜ್ಞಾನ. ಅದು ನಮ್ಮೆಲ್ಲರ ಗುರಿ. ಅಜ್ಞಾನವು ಯಾವ ಪರಮಸತ್ಯ ಸ್ಥಿತಿಯನ್ನು ತೋರಿಸುತ್ತದೆಯೋ ಅದೇ ಜ್ಞೇಯ. ಅದನ್ನು ಪಡೆಯುವವನೇ ಜ್ಞಾತೃ. 

       ಜ್ಞಾತೃತ್ವದ ಮೊದಲನೆಯ ಹಂತದಲ್ಲಿರುವ ನಾವು ಮೊದಲನೇ ಹಂತದ ಜ್ಞೇಯಗಳ ಮೊದಲನೇ ಹಂತದ ಜ್ಞಾನವನ್ನು ಪಡೆಯುತ್ತ ಈ ಸಂಸಾರದಲ್ಲಿದ್ದೇವೆ. ಇದನ್ನು ಅತ್ಯುತ್ತಮ ಹಂತಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಸಾಧನವುಬುದ್ಧಿಇದಕ್ಕೆಧೀಎಂಬ ಹೆಸರೂ ಇದೆ. ಗಾಯತ್ರಿ ಮಂತ್ರದಲ್ಲಿನಧೀಮಹಿ” “ಧಿಯಃಎಂಬ ಶಬ್ದಗಳು ಈ ಬುದ್ಧಿಗೆ ಸಂಬಂಧಿಸಿರುವುವು. ಈ ಬುದ್ಧಿಯನ್ನು ಸರಿಯಾದ ಗುರಿಯತ್ತ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಭಾವವುಪ್ರಚೋದಯಾತ್ಎಂಬುದರಲ್ಲಿದೆ.ನಃಎಂದರೆ ನಮ್ಮ ಎಂಬುದರಲ್ಲಿ ಸೂಚಿತವಾದ ಭಿನ್ನ ಬಿನ್ನ ಮತ್ತು ಪ್ರಾರಂಭದ ದಸೆಯಲ್ಲಿರುವ ಜ್ಞಾತೃಗಳನ್ನುಯಃಎಂಬ ಏಕವಾದ ಗುರಿಯು ಮುಂದಕ್ಕೆ ತೆಗೆದುಕೊಂಡು ಹೋಗಲಿ ಎಂದು ಹೇಳಿರುವುದರಿಂದಯಃಎಂಬುದೇ ಜ್ಞೇಯ. ಜ್ಞೇಯವು ಎಂದರೆ ತಿಳಿಯಬೇಕಾದ ಸತ್ಯ ಎಂಬ ಗುರಿಯೇ ಜ್ಞಾತೃವನ್ನು ಅಂದರೆ ತಿಳಿಯಲು ಪ್ರಯತ್ನಿಸುತ್ತಿರುವವನ್ನುಜ್ಞಾನಎಂದರೆ ತಿಳಿಯುವಿಕೆ ಎಂಬ ಕಾರ್ಯದಲ್ಲಿ ಪ್ರಚೋದಿಸುತ್ತಿರುವುದು. 

       ಆದುದರಿಂದನಃಎಂಬುದು ಜ್ಞಾತೃವನ್ನು, ‘ಯಃಎಂಬುದು ಜ್ಞೇಯವನ್ನುಧೀಎಂಬುದು ಜ್ಞಾನವನ್ನು ಸೂಚಿಸುತ್ತಿವೆ. 

       ಧೀಅಥವಾ ಬುದ್ಧಿ ಎಂಬುದರ ಗುಣಗಳನ್ನು ಕೆಳಗಿನ ಶ್ಲೋಕವು ತಿಳಿಸುತ್ತಿದೆ. 

       ಶುಶ್ರೂಷಾ ಶ್ರವಣಂ ಚೈವ ಗ್ರಹಣಂ ಧಾರಣಂ ತಥಾ

       ಊಹಾಪೋಹೋsರ್ಥ ವಿಜ್ಞಾನಂ ತತ್ವಜ್ಞಾನಂಚ ಧೀ ಗುಣಾಃ” 

       ಶುಶ್ರೂಷೆ ಮೊದಲನೇ ಗುಣ. ಕೇಳಬೇಕೆಂಬ ಇಚ್ಛೆಯೇ ಶುಶ್ರೂಷೆ. ಇದನ್ನುವರೇಣಿಯಂಶಬ್ದವು (ವರಿಸುವುದೆಂದರೆ ಇಚ್ಛಿಸುವುದು) ಸೂಚಿಸುತ್ತಿದೆ. ಶ್ರವಣಂ ಎಂದರೆ ಕೇಳುವುದು ಗ್ರಹಣಂ ಎಂದರೆ ಕೇಳಿದ್ದನು ಗ್ರಹಿಸುವುದು, ಧಾರಣಂ ಎಂದರೆ ಅದನ್ನು ಗಟ್ಟಿಯಾಗಿ ಹಿಡಿದಿರುವುದು ಎಂಬ ಭಾವಗಳು ಇಚ್ಚೆಯನ್ನು ಕಾರ್ಯರೂಪಕ್ಕೆ ತರುವ ಕೆಲಸಗಳು. ಇವುಗಳಿಗೆ ಶಕ್ತಿ ಬೇಕು. ಶಕ್ತಿಯಿಲ್ಲದೆ ಬಯಕೆಯನ್ನು ಕಾರ್ಯರೂಪಕ್ಕೆ ತರದಿದ್ದರೆ ನಿಷ್ಫಲವಲ್ಲವೇ. ಈ ಶಕ್ತಿಯನ್ನುಸವಿತೃಶಬ್ದವು ಸೂಚಿಸುತ್ತಿದೆ.ಸವಿತೃಎಂದರೆ ಪ್ರೇರಕನು ಎಂದು ಅರ್ಥ. ಪ್ರೇರಣೆ ಎಂಬುದು ಶಕ್ತಿ ಸೂಚಕ. ಅಲ್ಲದೆ ಸೂರ್ಯನು ಸಮಸ್ತ ಶಕ್ತಿಗೂ ಮೂಲ. ಆಮೇಲೆ ನಡೆಯಬೇಕಾದ ಬುದ್ಧಿಯ ಕೆಲಸಗಳು ಊಹಾಪೋಹಗಳು ಮತ್ತು ಅರ್ಥ ವಿಜ್ಞಾನ. ಇವು ನಮ್ಮೊಳಗೇ ನಡೆಯುವ ಬುದ್ಧಿ ಕಾರ್ಯಗಳು, ಇದರಿಂದ ಜ್ಞಾನವು ಪರಿಪಕ್ವವಾಗುತ್ತೆ. ಈ ಪರಿಪಕ್ವ ಮಾಡುವುದನ್ನುಭರ್ಗಃಎಂಬ ಶಬ್ದವು ಸೂಚಿಸುತ್ತದೆ. ಭರ್ಗಃ ಎಂದರೆಪಾಕವೆಂಬುದಾಗಿ ಹಿಂದೆಯೇ ತಿಳಿಸಿದೆ ಕೊನೆಗೆ ಇದರ ಫಲವಾಗಿ ಬರುವುದೇತತ್ವಜ್ಞಾನಇದು ಪ್ರಕಾಶದಂತೆ ಉದ್ಭವಿಸುತ್ತದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ತಿಳಿಯದ ಒಂದು ಸತ್ಯ ತಿಳಿದು ಬಂದರೆ ಕತ್ತಲಿನಲ್ಲಿ ಪ್ರಕಾಶವುಂಟಾದಂತೆ ಆಗುವುದಿಲ್ಲವೆ? “ದೇವಎಂದರೆ ಪ್ರಕಾಶಿಸುವವನು. ಆದುದರಿಂದ ಈ ಶಬ್ದವು ಈ ತತ್ವ ವಿಜ್ಞಾನವನ್ನು ಸೂಚಿಸುತ್ತಿದೆ. ಆದುದರಿಂದಸವಿತುಃಎಂಬುದರಿಂದದೇವಸ್ಯವರೆಗಿನ ಶಬ್ದಗಳು ಮೇಲಿನ ಶ್ಲೋಕದಲ್ಲಿನ ಧೀ ಗುಣವನ್ನು ಸೂಚಿಸುತ್ತಿವೆ. 

       ತತ್ ಎಂಬ ಮೊದಲನೇ ಶಬ್ದವು ಅವ್ಯಕ್ತ ಮೂಲತತ್ವದ ಸೂಚಕವೆಂದೂಯಃಎಂಬುದು ಇದರ ಪ್ರತಿಬಿಂಬವೆಂದೂ ಹಿಂದೆಯೇ ತಿಳಿದು ಕೊಂಡಿರುತ್ತೇವೆ. ಆದುದರಿಂದಜ್ಞೇಯವನ್ನೇ ಸೂಚಿಸುವ ಶಬ್ದ. 

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)