Article of the Month December 2019

                                    ಗಾಯತ್ರಿ

                                   1-1-1994

       ಈಗ ಅಲೆಯಲ್ಲಿನ ಮೇಲಕ್ಕೇರುವ ಭಾಗ, ಎತ್ತರದಲ್ಲಿರುವ ಮಧ್ಯಭಾಗ ಮತ್ತು ಇಳಿಮುಖವಾಗುವ ಭಾಗ, ಇವುಗಳನ್ನು ಕುರಿತು ಆಲೋಚಿಸೋಣ. ಭೌತಿಕ ಪ್ರಪಂಚದಲ್ಲಿ ಶಕ್ತಿಯು ಅಲೆಗಳ ರೂಪದಲ್ಲಿ ಹರಡುತ್ತಿರುವ ವಿಷಯವು ವಿಜ್ಞಾನದಲ್ಲಿ ಸುಪ್ರಸಿದ್ಧವಾಗಿದೆ. ಭೌತಿಕ ವಸ್ತುಗಳಲ್ಲಿ, ಭೂಮಿ ತತ್ವ ಸೂಚಕವಾದ ಘನ ಪದಾರ್ಥಗಳಲ್ಲಿ ಅಲೆಯ ರೂಪದ ಶಕ್ತಿ ಪ್ರಸಾರವು ಸಾಧಾರಣವಾಗಿ ಕಂಡುಬರುವುದಿಲ್ಲ. ಆದರೆ ನೀರಿನ ತತ್ವವನ್ನು ಸೂಚಿಸುವ ದ್ರವ ಪದಾರ್ಥಗಳಲ್ಲಿ ಶಕ್ತಿ ಪ್ರಸಾರವು ಕಂಡುಬರುತ್ತದೆ. ಭೂತತ್ವದಲ್ಲಿ ಶಕ್ತಿ ಪ್ರಸಾರವು ಗುರುತ್ವಾಕರ್ಷಣ, ಎಸೆಯುವಿಕೆ, ತಳ್ಳುವಿಕೆ ಇತ್ಯಾದಿಗಳಲ್ಲಿ ಸರಳರೇಖೆಯ ರೂಪದಲ್ಲಿ ನಡೆಯುತ್ತಿದೆ. ಗುರುತ್ವಾಕರ್ಷಣದಿಂದ ಮೇಲಕ್ಕೆಸೆದ ವಸ್ತು ಹಿಂದಕ್ಕೆ ಬಗ್ಗಿ ನೆಲಕ್ಕೆ ಬಂದರೂ ಇದು ಪುನರಾವೃತ್ತಿ ಆಗುವುದಿಲ್ಲ. ಇದು ಸಹಜವಾದುದು. ಆದರೆ ಇದನ್ನೇ ಚಕ್ರಗಳಲ್ಲಿ ವರ್ತುಲಾಕಾರಕ್ಕೆ ಮತ್ತು ಯಂತ್ರಗಳಲ್ಲಿ ಇಷ್ಟ ಬಂದ ರೂಪಕ್ಕೆ ಕೃತಕವಾಗಿ ಪರಿವರ್ತಿಸಲಾಗುತ್ತಿದೆ. ಪುನಃ ಈ ಅಲೆಗಳನ್ನು ನಾವು ಆಕಾಶ ತತ್ವದಲ್ಲಿ ಕಾಣುತ್ತೇವೆ. ಬೆಳಕು, ದೂರಶ್ರವಣ ಮತ್ತು ದೂರದರ್ಶನದ ಶಕ್ತಿ ತರಂಗಗಳು ಇತ್ಯಾದಿಗಳು ಇಲ್ಲಿ ಬರುತ್ತವೆ. ಶಬ್ದ ಪ್ರಸಾರಕ್ಕೆ ಸಂಬಂಧಿಸಿದ ಪ್ರಕಂಪನಗಳಲ್ಲಿಯು ಅಲೆಯ ತತ್ವದ ಶಕ್ತಿಯ ಏರಿಳಿತಗಳು ಕಂಡುಬರುತ್ತಿವೆ. ಬೆಳಕು ಮುಂತಾದ ತರಂಗಗಳು ಸಹ ಪೂರ್ತಿ ಅಲೆಗಳ ರೂಪದಲ್ಲಿಲ್ಲದೆ ಶಕ್ತಿಯ ಬಿಡಿ ಬಿಡಿ ಪ್ರಮಾಣಗಳ ಸರಪಳಿಯ ರೂಪದಲ್ಲಿರುವುದಾಗಿಯು ವಿಜ್ಞಾನವು ತಿಳಿಸುತ್ತಿದೆ. ಒಟ್ಟಿನಲ್ಲಿ ವಿಶ್ವವ್ಯಾಪಾರದಲ್ಲಿ ಸ್ಥೂಲವಾಗಿ ಶಕ್ತಿಯ ವ್ಯಾಪಾರವು ನಾನ ರೂಪದಲ್ಲಿ ಕಂಡುಬರುತ್ತಿದ್ದರೂ ಸೂಕ್ಷ್ಮದಲ್ಲಿ ಅದು ಒಂದು ಪ್ರಕಂಪನ ಅಥವಾ ಅಲೆಯಲ್ಲಿರುವ ಮೂರು ಭಾಗಗಳಾದ ಆರಂಭ, ಉನ್ನತ ಸ್ಥಿತಿ ಮತ್ತು ಮುಕ್ತಾಯ ಮತ್ತು ಈ ಕ್ರಮದ ಪುನರಾವೃತ್ತಿ ಈ ರೂಪದಲ್ಲಿ ಇರುವುದಾಗಿ ಕಂಡುಬರುತ್ತಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಈ ಮೂರು ಭೇದಗಳೂ ವ್ಯಾಪಾರದಲ್ಲಿನ ಭೇದಗಳೇ ಹೊರತು ವಸ್ತು ಹಾಗೆಯೇ ಇರುತ್ತದೆ. ಅಲೆಗಳಲ್ಲಿ ಮೂಲಭೂತವಾದ ನೀರಿದ್ದಂತೆ ಮತ್ತು ಶಕ್ತಿಯ ಸ್ಪಂದನಗಳಲ್ಲಿ ಮೂಲಭೂತವಾದ ಶಕ್ತಿ ಇದ್ದಂತೆ. ಈ ಶಕ್ತಿಯು ಒಂದು ರೂಪದಿಂದ ಇನ್ನೊಂದು ರೂಪವನ್ನು ಹೊಂದುತ್ತದೆಯೇ ಹೊರತು ನಾಶವಾಗುವುದಿಲ್ಲ. ಶಕ್ತಿಯೇ ವಸ್ತುರೂಪವನ್ನು ತಾಳಿರುತ್ತದೆ. ಇತ್ಯಾದಿ ವೈಜ್ಞಾನಿಕ ಸತ್ಯಗಳನ್ನನುಸರಿಸಿ ಜೀವ ಜಗತ್ತಿನಲ್ಲಿ ಮತ್ತು ಮಾನಸಿಕ ಜಗತ್ತಿನಲ್ಲಿಯು ಒಂದೇ ಮೂಲಭೂತವಾದ ತತ್ವವು ಸೃಷ್ಟಿಸ್ಥಿತಿ ಲಯಗಳ ರೂಪದಲ್ಲಿ ಪುನರಾವೃತ್ತವಾಗುತ್ತಿರುವುದು ಸತ್ಯವೆಂದು ಭಾವಿಸಲು ಆಧಾರವಿದೆ. 

       ಇಲ್ಲಿ ಎರಡು ಉದಾಹರಣೆಗಳನ್ನು ನಾವು ಗಮನಿಸಿದರೆ ಸಾಕು ನಮಗೆ ವಿಶ್ವವ್ಯಾಪಾರದಲ್ಲಿ ಏಕತ್ವವೇ ನಾನಾತ್ವದಲ್ಲಿ ಹೇಗೆ ಆಟವಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಅತ್ಯಾಶ್ಚರ್ಯವಾಗುತ್ತದೆ. ಬೆಳಕಿನ ಕಿರಣಗಳು ಒಂದು ಸೆಕೆಂಡಿಗೆ ಒಂದು ಲಕ್ಷ ಎಂಬತ್ತು ಸಾವಿರ ಮೈಲಿ ದೂರ ಪ್ರಯಾಣ ಮಾಡುತ್ತವೆ. ಇದು ಎಷ್ಟು ಅದ್ಭುತ ಹಾಗೆಯೇ ಪ್ರಪಂಚದ ಸೃಷ್ಟಿ ಆದಲಾಗಾಯಿತು ಒಂದು ಪ್ರಾಣಿ ಸಹ ಅಪರೂಪವಾಗಿ ಆಯುಃ ಪರಿಮಾಣವನ್ನು ದಾಟಿ ಬಹಳ ಹೆಚ್ಚಿನ ಕಾಲ ಬದುಕಿಲ್ಲ. ಕೋಟಿಗಟ್ಟಲೆ ನಿದರ್ಶನಗಳಲ್ಲಿ ಒಂದು ಅಪವಾದವೂ ನಮಗೆ ಸಿಗುತ್ತಿಲ್ಲ. ಇದು ಎಷ್ಟು ಅದ್ಭುತ. 

       ನೀರು ಮತ್ತು ಅಲೆಗಳು ಎಂಬುದು ಮೇಲೆ ಹೇಳಿದ ವಿಶ್ವವ್ಯಾಪಾರಕ್ಕೆ ಒಳ್ಳೇಯ ಸಂಕೇತವಾಗಿವೆ. ಸಂಸ್ಕೃತದಲ್ಲಿ ನೀರಿಗೆಆಪಃಎಂಬ ಶಬ್ದವಿದೆ. ಇದರ ವ್ಯುತ್ಪತ್ತಿ ಆಪ್ಲ ವ್ಯಾಪ್ತೌ ಎಂಬುದನ್ನನುಸರಿಸಿ ವ್ಯಾಪಿಸುವುದು ಎಂಬ ಅರ್ಥದಿಂದ ಅಲ್ಲದೆ ಈ ಶಬ್ದವು ಯಾವಾಗಲೂ ಬಹುವಚನದಲ್ಲಿರುವುದು. ಆದುದರಿಂದ ಅಪಃ ಅನ್ನುವ ಶಬ್ದವು ಮೇಲೆ ಹೇಳಿದ ಸಂಕೇತವನ್ನು ಅನುಸರಿಸಿ ವಿಶ್ವವ್ಯಾಪಾರವನ್ನು ಸೂಚಿಸುತ್ತಿದೆ. 

       ಆಪೋವಾ ಇದಂ ಸರ್ವಂ ವಿಶ್ವಾ ಭೂತಾನ್ಯಾಪಃ ಪ್ರಾಣಾವಾಆಪಃ ಪಶವ ಅಪೋನ್ನ ಮಾಪೋs ಮೃತಮಾಪಸ್ಸಂರಾಡಾಪೋ ವಿರಾಡಾಪಸ್ಸ್ವರಾಡಾಪ ಶ್ಛಂದಾಂಸ್ಯಾಪೋ ಜ್ಯೋತೀಂಷ್ಯಾಪೋಯಜೂಂಷ್ಯಾಪ ಸ್ಸತ್ಯಮಾಪ ಸ್ಸರ್ವಾದೇವತಾ ಆಪೋ ಭೂರ್ಭುವಸ್ಸುವರಾಪ ಓಂಎಂಬ ಮಂತ್ರವು ಈ ಪರಮ ಸತ್ಯವನ್ನು ತಿಳಿಸುತ್ತಿದೆ. ಈ ವಿಶ್ವವೆಲ್ಲವೂ ನೀರೇ. (ಸಾಂಕೇತಿಕವಾಗಿ) ಸಮಸ್ತ ಭೂತಗಳು, ಪ್ರಾಣಿಗಳು, ಪಶುಗಳು, ಅನ್ನ, ನೀರು ಇತ್ಯಾದಿ ಇತ್ಯಾದಿ ಎಲ್ಲವೂ ನೀರೇ ಎಂಬುದಾಗಿ ಹೇಳಿರುವ ವೇದಗಳು ನೀರು ಮತ್ತು ಅಲೆಗಳ ಸಂಕೇತಕ್ಕೆ ಹೆಚ್ಚು ಪ್ರಾಧಾನ್ಯವನ್ನು ಕೊಟ್ಟಿರುತ್ತವೆ. 

       ಗಾಯತ್ರೀ ಮಂತ್ರದ ಮೊದಲನೆಯ ಪಾದದಲ್ಲಿನ ತತ್ ಶಬ್ದವು ಅಲೆಯಲ್ಲಿ ಮೂಲಭೂತವಾಗಿರುವ ನೀರನ್ನು ಸೂಚಿಸುತ್ತದೆ. ಸವಿತುಃ ಎಂಬುದು ಸೃಷ್ಟಿಯ ಪ್ರಾರಂಭವನ್ನು ಸೂಚಿಸುವುದರಿಂದ ಅಲೆಯ ಪ್ರಾರಂಭವನ್ನು ಸೂಚಿಸುತ್ತಿದೆ. ವರೇಣಿಯಂ ಎಂಬುದು ವರ್ತುಲಾಕಾರದ ಸೂಚಕವಾಗಿ ಅಲೆಯ ಪ್ರಗತಿಯನ್ನು ಅದು ವರ್ತುಲಾಕಾರದ ಸೂಚಕವಾಗಿ ಅಲೆಯ ಪ್ರಗತಿಯನ್ನು ಅದು ವರ್ತುಲದ ಭಾಗದ ಆಕಾರದಲ್ಲಿ ಮುಂದುವರಿಯುವುದನ್ನು ಸೂಚಿಸುತ್ತದೆ. ಭರ್ಗಃ ಎಂಬುದು ಈ ಸಂಚಲನದಲ್ಲಿ ಶಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ. ದೇವಸ್ಯ ಎಂಬುದು ಪ್ರಕಾಶಮಾನವಾಗಿ ಅಲೆ ಕಾಣಿಸಿಕೊಳ್ಳುತ್ತಿದೆ ಎಂದರೆ ಅದು ತನ್ನ ಎತ್ತರದ ಮಟ್ಟವನ್ನು ಮುಟ್ಟಿದೆ ಎಂಬ ಭಾವವನ್ನು ಸೂಚಿಸುತ್ತಿದೆ. ಧೀಮಹಿ ಎಂದರೆ ನಾವು ಇದನ್ನು ಧ್ಯಾನಿಸಬೇಕು ಎಂಬ ಭಾವನೆ. ಮೂರನೇ ಪಾದದಲ್ಲಿನ ನಃ, ಯಃ, ಪ್ರಚೋದಯಾತ್ ಎಂಬ ಪದಗಳು ಅದೇ ಮೂಲ ತತ್ವವಾದ ನೀರೇ ಅಲೆಗಳ ರೂಪದಲ್ಲಿ ಮುಂದುವರೆಯುವುದನ್ನು ಸೂಚಿಸುತ್ತದೆ. ಯಃ ಎಂಬುದು ತತ್ ಎಂಬುದರ ಪ್ರತಿಬಿಂಬವೆಂಬ ವಿಷಯವು ಹಿಂದೆಯೇ ಬಂದಿದೆ. ಆದುದರಿಂದ ಅಲೆಯ ಪೂರ್ವ ಭಾಗದ ಪ್ರತಿಬಿಂಬವಾದ ಉತ್ತರ ಭಾಗ ಅಂದರೆ ಅಲೆಯ ಇಳಿಯುವ ಭಾಗವನ್ನು ಸೂಚಿಸುತ್ತದೆ. ಮತ್ತು ಪ್ರಚೋದಯಾತ್ ಎಂಬುದು ಈ ಕ್ರಿಯೆಯು ಮುಂದುವರಿಯುತ್ತ ಅಲೆಗಳು ಮುಂದಕ್ಕೆ ಪ್ರಸರಿಸುತ್ತವೆ ಎಂಬ ಭಾವನೆಯನ್ನು ಕೊಡುತ್ತಿದೆನಃಎಂಬುದು ಬಹುವಚನದಲ್ಲಿರುವುದರಿಂದ ಮತ್ತು ಅದರ ಸಂಬಂಧವಾದಧಿಯಃಎಂಬುದೂ ಬಹುವಚನದಲ್ಲಿರುವುದರಿಂದ ಗಮನಿಸುತ್ತಿರುವ ವಿಶ್ವಾತ್ಮನು ಒಬ್ಬನೇ ಆದರೂ ಈ ಅಲೆಗಳ ರೂಪದ ವಿಶ್ವವ್ಯಾಪಾರದಲ್ಲಿ ನಾನಾತ್ವವನ್ನು ಹೊಂದಿ ಜೀವಾತ್ಮಗಳ ರೂಪದಲ್ಲಿರುವನೆಂದೂ ಈ ಜೀವಾತ್ಮರಿಗೆ ಬುದ್ದಿ ಗೋಚರವಾಗುವಂತೆ ವಿಶ್ವವ್ಯಾಪಾರವು ಅಲೆಗಳ ರೂಪದಲ್ಲಿ ಮುಂದುವರಿಯುತ್ತಿದೆ ಎಂದೂ ಭಾಸವಾಗುತ್ತದೆ. ನೀರು ಮತ್ತು ಅಲೆಗಳ ತತ್ವವನ್ನು ಸತ್, ಚಿತ್, ಆನಂದಗಳ ಎಲ್ಲ ಹಂತಗಳಲ್ಲೂ ಅನ್ವಯಿಸಿ, ‘ಆಪಃಎಂಬ ಶಬ್ದವನ್ನುಪಯೋಗಿಸಿ ಹೇಳಿರುವ ಮೇಲ್ಕಂಡ ಮಂತ್ರವು ಸದಾ ಭಾವಿಸಲು ಯೋಗ್ಯವಾಗಿದೆ. 

       ಈಗ ಜಡವಸ್ತುಗಳು, ಜೀವಿಗಳು, ಬುದ್ಧಿಜೀವಿಗಳು ಎಂಬ ವಿಷಯವನ್ನು ಕುರಿತು ಆಲೋಚಿಸೋಣ. ಗಾಯತ್ರಿಯ ಮೊದಲನೇ ಪಾದವು ಸೂರ್ಯ ಮತ್ತು ಭೂಮಿಯ ರೂಪದಲ್ಲಿ ಜಡವಸ್ತುಗಳಿಗೆ ಸಂಕೇತವಾಗಿರುವುದು ಸ್ಪಷ್ಟ. 2ನೇ ಪಾದವುಭಗವಃಎಂದರೆ ಪಾಕವೆಂಬ ಅರ್ಥದಂತೆ ಪ್ರಾಣಿ ಜಗತ್ತಿಗೆ ಸೂಚಕ. ದೇವಸ್ಯ, ಧೀಮಹಿ ಎಂಬ ಶಬ್ದಗಳು ಪ್ರಾಣಿ ಜಗತ್ತನ್ನೂ ಮೀರಿದ ಬುದ್ಧಿಯ ಹಂತವನ್ನು ಸೂಚಿಸುತ್ತಿವೆ. ಮೂರನೇ ಪಾದವು ಬುದ್ಧಿ ಜೀವಿಗಳ ಉನ್ನತ ಸ್ಥಿತಿಯನ್ನು ಮುಂದೆ ಅವರು ಬೆಳೆಯಬೇಕಾದ ಲಕ್ಷ್ಯವನ್ನೂ ಸೂಚಿಸುತ್ತಿದೆ.  

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)