ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ

                                            ದಿ.ಲಂಕಾ ಕೃಷ್ಣಮೂರ್ತಿ(1925-1996)

Published by   LANKA KRISHNA MURTI FOUNDATION                                                     

(https://www.facebook.com/lankakrishnamurtifoundation/)                Website (https://www.krishnamurtifoundation.com/lanka/)

LKM FOUNDATION-YOUTUBE

(https://www.youtube.com/channel/UCptmyD6GditXlBWnaRNI11A)

ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆಎಂಬ ಪುರಂದರದಾಸರ ದೇವರ ನಾಮವನ್ನು ಹಾಡಿ ಹಾಡಿ, ಕೇಳಿ ಕೇಳಿ, ನೆನೆನೆನೆದು ಎಷ್ಟು ಜನ ಭಗವದ್ಭಕ್ತರು ಶ್ರೀ ಕೃಷ್ಣನ ಮಧುರ ಮೋಹನಮೂರ್ತಿಯ ಅವ್ಯಕ್ತ ಸೌಂದರ್ಯಾನುಭವವನ್ನೂ, ಸವಿಗನಸಿನ ಸೌಭಾಗ್ಯವನ್ನೂ, ದಿವ್ಯ ಸಾಕ್ಷಾತ್ಕಾರವನ್ನೂ ಪಡೆದಿರುವರೋ! ಭಕ್ತ ಕವಿಗಳಿಗೆ ಭಗವಂತನು ಸದಾ ಕಣ್ಣ ಮುಂದೆಯೇ ಇರುವನೇನೋ! ದಾಸರು ತಮ್ಮ ಅನುಭವವನ್ನು ಮೇಲೆ ಹೇಳಿದಂತೆ ಬಣ್ಣಿಸಿದರೆ, ಭಗವದ್ಭಕ್ತನೂ, ಆಂಧ್ರ ಕವಿಯೂ ಆದ ಪೋತನಾಮಾತ್ಯನು ತನ್ನ ಭಾಗವತದಲ್ಲಿ ವಿಷ್ಣುವಿನ ಮೋಹನಮೂರ್ತಿ ತನಗೆ ಕಣ್ಣು ಮುಚ್ಚಿದಾಗಲೂ, ಬಿಚ್ಚಿದಾಗಲೂ ಎದುರಿನಲ್ಲಿ ಕಾಣುತ್ತಿರಲೆಂದು ಹಾರೈಸಿದಾನೆ. ಆದುದರಿಂದಲೇ ಆತನ ಕವಿತಾ ಕಲ್ಪಲತೆಯಲ್ಲಿ ಪರಮಾತ್ಮನ ದಿವ್ಯಮಂಗಳ ವಿಗ್ರಹದ ವರ್ಣನೆಯ ಪಾರಿಜಾತಗಳು ಶಾಖೆ ಶಾಖೆಯಲ್ಲೂ ತುಂಬಿವೆ. ಈತನು ಸಂಸ್ಕೃತ ಭಾಗವತದಲ್ಲಿರುವ ವರ್ಣನೆಗಳ ವೈಭವದಿಂದಲೂ ತೃಪ್ತನಾಗದೆ ತನ್ನ ಪ್ರತಿಭೆಯ ಮತ್ತು ಪಾಂಡಿತ್ಯದ ಕೌಶಲದಿಂದ ಮೂಲದಲ್ಲಿರುವ ಹೂಗಳಿಂದ ಹಾರ ಕಟ್ಟಲೂ ಚಿನ್ನದಿಂದ ಆಭರಣಗಳನ್ನು ಮಾಡಲೂ, ಸುಸ್ವರ್ಣಾಭರಣಗಳಿಗೆ ಸುಗಂಧವನ್ನೊದಗಿಸಲೂ ಪ್ರಯತ್ನಿಸಿದ್ದಾನೆ. ಈ ಕವಿ ಚಿತ್ರಿಸಿರುವ ಲೀಲಾಮಾನುಷ ವಿಗ್ರಹದ ಎಷ್ಟೋ ಚಿತ್ರಗಳು-ಚಿತ್ರಕಾರನ ಚಿತ್ರ ಬರೆಯಲೂ, ನಟನು ಭಾವಪ್ರಕಟನೆ ಮಾಡಲೂ, ಕವಿ ರಸಾಸ್ವಾದನೆ ಗೈಯಲೂ, ಭಕ್ತನು ಲಕ್ಷ್ಯವಾಗಿಟ್ಟುಕೊಂಡು ಉಪಾಸಿಸಲೂ ಯೋಗ್ಯವಾಗಿರುವಷ್ಟು ಸ್ಪಷ್ಟತೆ. ಪರಿಪೂರ್ಣತೆ, ರಸಭಾವನಿರೂಪಣ, ಉದಾತ್ತತೆ ಇತ್ಯಾದಿ ಕಾವ್ಯಗುಣಗಳಿಂದ ಶೋಭಿಸುತ್ತಿವೆ. ಕೆಳಗೆ ವಿವರಿಸಿರುವ ಪದ್ಯಗಳು ಇದಕ್ಕೆ ಉದಾಹರಣೆಗಳು ಮಾತ್ರ. 

       ಶ್ರೀಕೃಷ್ಣನು ದೇವಕೀವಸುದೇವರ ಸುತನಾಗಿ ಅವತರಿಸುವಾಗ ಚತುರ್ಭುಜಾದಿ ಲಕ್ಷಣೋಪೇತನಾಗಿಯೇ ಅವತರಿಸಿದನೆಂದು ವರ್ಣನೆ ಮೂಲದಲ್ಲಿ ಹೀಗಿದೆ. 

ತಮದ್ಭುತಂ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖ ಗದಾರ್ಯುದಾಯುಧಂ

ಶ್ರೀವತ್ಸ ಲಕ್ಷ್ಮಂಗಳ ಶೋಭಿಕೌಸ್ತುಭಂ ಪೀತಾಂಬರಂ ಸಾಂದ್ರ ಪಯೋದ ಸೌಭಗಂ|| 

ಮಹಾರ್ಹ ವೈಡೂರ್ಯ ಕಿರೀಟ ಕುಂಡಲ ತ್ವಿಷಾ ಪರಿಷ್ವಕ್ತ ಸಹಸ್ರ ಕುಂತಲಂ|

ಉದ್ದಾಮ ಕಾಂಚ್ಯಂಗದ ಕಂಕಣಾದಿಭಿರ್ವಿ ರೋಚಮಾನಂ ವಸುದೇವ ಐಕ್ಷತ|| 

ಇದಕ್ಕೆ ಪೋತನಾಮಾತ್ಯನ ಅನುವಾದ- 

ಜಲಧರದೇಹು, ಅಜಾನು ಚತುರ್ಬಾಹು, ಸರಸೀರುಹಾಕ್ಷು, ವಿಶಾಲ ವಕ್ಷು

ಚಾರುಗದಾ ಶಂಖಚಕ್ರ ಪದ್ಮವಿಲಾಸು, ಕಂಠ ಕೌಸ್ತುಭಮಣಿ ಕಾಂತಿಭಾಸು

ಕಮನೀಯ ಕಟಿಸೂತ್ರ ಕಂಕಣಕೇಯೂರು, ಶ್ರಿವತ್ಸಲಾಂಛನಾಂಚಿತ ವಿಹಾರು

ಉರುಕುಂಡಲ ಪ್ರಭಾಯುತ ಕುಂತಲ ಲಲಾಟು. ವೈಡೂರ್ಯಮಣಿಗಣ ವರಕಿರೀಟು

ಬಾಲು, ಪೂರ್ಣೇಂದುರುಚಿಬಾಲು, ಭಕ್ತಲೋಕ ಪಾಲು, ಸುಗುಣಾಲವಾಲು, ಕೃಪಾವಿಶಾಲು

ಚೂಚಿ ತಿಲಕಿಂಚಿ, ಪುಲಕಿಂಚಿ, ಚೋದ್ಯಮಂದಿ, ಉಬ್ಬಿ, ಚೆಲರೇಗಿ ವಸುದೇವುಡುತ್ಸಹಿಂಚೆ” 

ಈ ಪದ್ಯದಲ್ಲಿಜಲಧರದೇಹುಎಂಬ ಪದದಿಂದಕೃಪಾವಿಶಾಲುಎಂಬ ಪದದವರೆಗೂ, ಕನ್ನಡಕ್ಕೇ ಅಲ್ಲ, ಭಾರತದೇಶದ ಯಾವ ಭಾಷೆಗೂ ಅನುವಾದವೇ ಬೇಕಾಗಿಲ್ಲ. ಇಲ್ಲಿ ವರ್ಣಿಸಿರುವಂತಹ ಕೃಷ್ಣನನ್ನು ವಸುದೇವನು ನೋಡಿ, ಆಸಕ್ತಿಯಿಂದ ನೋಡಿ, ಪುಲಕಿಸಿ, ಆಶ್ಚರ್ಯಪಟ್ಟು ಉಬ್ಬಿ, ಅತ್ಯಂತವಾದ ಉತ್ಸಾಹವನ್ನು ಅನುಭವಿಸಿದನೆಂದು ಉಳಿದ ಪದ್ಯಭಾಗದ ಅರ್ಥ. ಈ ಭಾವಶಬಲತೆಯನ್ನು ನೋಡಿದರೆ, ಕೃಷ್ಣಮೂರ್ತಿಯನ್ನು ಭಾವಿಸುತ್ತ, ಪೋತನನೂ, ವಸುದೇವನಷ್ಟೇ ಭಾವಾವೇಶ ಪರನಾಗಿರಬೇಕೆಂದು ಕಾಣುತ್ತದೆ. ಈ ಪದ್ಯದಲ್ಲಿನ ಅನುಪ್ರಾಸ ಶೋಭಿತವಾದ ಶಯ್ಯಾಗುಣವು ವಸ್ತುವಿನ ಉದಾತ್ತತೆಗೆ ರಮ್ಯವಾಗಿ ಹೊಂದಿಕೊಂಡಿದೆ. 

       ಲೀಲಾಮಾನುಷ ವಿಗ್ರಹನಾದ ಶ್ರೀಕೃಷ್ಣನು ಐದು ವರ್ಷಗಳ ವಯಸ್ಸಿನಲ್ಲಿ ಗೋಪಕುಮಾರರ ಮತ್ತು ಗೋವತ್ಸಗಳ ಜೊತೆಯಲ್ಲಿ ವಿಹರಿಸುತ್ತ ತನ್ನನ್ನು ಪರೀಕ್ಷಿಸಲು ಬಂದ ಬ್ರಹ್ಮನನ್ನೇ ಮೋಹಗೊಳಿಸಿದ ಕಥಾಭಾಗದಲ್ಲಿ ಗೋಪಕುಮಾರರೊಂದಿಗೆ ತಂಗಳನ್ನು ತಿನ್ನುತ್ತಿರುವ ಗೋಪಾಲಕೃಷ್ಣನ ಮೂರ್ತಿಯನ್ನು ಪೋತನಾಮಾತ್ಯನು ಕಣ್ಣ ಮುಂದೆ ಕಾಣುವಂತೆ ಹೀಗೆ ಚಿತ್ರಿಸಿದ್ದಾನೆ – 

       ಹೊಟ್ಟೆಯ ಸುತ್ತಲೂ ದಿಂಬಾಗಿ ಕಟ್ಟಿದ ವಸ್ತ್ರದಲ್ಲಿ ಲಲಿತವಾದ ವಂಶನಾಳವನ್ನು ಸಿಕ್ಕಿಸಿ, ಕೊಂಬನ್ನು ಮತ್ತು ಬೆತ್ತವನ್ನು ಜಾರದಂತೆ ಎಡ ಕಂಕುಳಲ್ಲಿರಿಕಿ, ಕೆನೆ ಮೊಸರಿನಲ್ಲಿ ಕಲಸಿದ ತಂಗಳು ಮುದ್ದೆಯನ್ನು ಎಡಗೈ ತುಂಬ ಇಟ್ಟುಕೊಂಡು, ಮನೆಯವರೊಡನೆ ಹಠಮಾಡಿ ಕೊಸರಿ ತಂದ ಉಪ್ಪಿನಕಾಯಿಗಳನ್ನು ಬೆರಳುಗಳ ಸಂದಿಗಳಲ್ಲಿರಿಕಿ, ಜತೆಗಾರರ ನಡುವೆ ಚೆನ್ನಾಗಿ ಕುಳಿತು, ಹಾಸ್ಯಾಲಾಪಗಳಿಂದ ನಗೆಯನ್ನುಂಟುಮಾಡಿ, ಯಾಗ ಭೋಕ್ತೃವಾದ ಕೃಷ್ಣನು, ದೇವತೆಗಳು ಆಶ್ಚರ್ಯಪಡುವಂತೆ, ಶೈಶವವು ಪ್ರಕಾಶಿಸುತ್ತಿರಲು, ತಂಗಳನ್ನು ತಿಂದನು.” 

       ಶರದೃತುವಿನಲ್ಲಿ ಬೃಂದಾವನದಲ್ಲಿ ವೇಣುನಾದ ಮಾಡುತ್ತ ಚರಾಚರ ಸೃಷ್ಟಿಯನ್ನೇ ಮೋಹಗೊಳಿಸಿದ ವೇಣುಗೋಪಾಲನ ಮೂರ್ತಿ ಚಿತ್ರಣವು  ಹೀಗಿದೆ – 

       ಕರ್ಣಾವತಂಸಿತ ಕಣಿಕಾರಪ್ರಭ ಗಂಡಭಾಗ ದ್ಯುತಿಗಡಲು ಕೊಲುಪ ಭುವನಮೋಹನಮೈನ ಭ್ರೂವಿಲಾಸಂಬುತೋ ವಾಮಭಾಗಾನತ ವದನಮೊಪ್ಪ 

ಅಪಸವ್ಯಕರಮೃದುಲಾಂಗುಳಿ ಚಾತುರಿ ಷಡ್ಜ ಧ್ವನಿಕಿ ಮರ್ಮ ಸರಣಿ ಚೂಪ, ಡಾಕಾಲಿವೀದನಡ್ಡಮು ಸಾಚಿನಿಲ್ಪಿನ ಪದನಖದ್ಯುತಿ ಭೂಮಿ ಬ್ರಬ್ಬಕೊನಗ, ಮೌಳಿಪಿಂಛನು ಕಂಠಧಾಮಮುನು ಮೆರಯ 

ವಿಲಸಿತ ಗ್ರಾಮಮುಗನೊಕ್ಕ ವೇಣುವಂದು

ಬ್ರಹ್ಮಗಾಂಧರ್ವ ಗೀತಂಬು ಪರಗಜೇಸೆ

ಚತುರ ನಟಮೂರ್ತಿ ಗೋಪಾಲ ಚಕ್ರವರ್ತಿ”. 

ಇದನ್ನು ಹಾಗೆಯೇ ಕನ್ನಡಕ್ಕೆ ಪರಿವರ್ತಿಸಿದರೆ ಹೀಗಿರುವುದು- 

       ಕರ್ಣಾವತಂಸಿತ ಕಣೀಕಾರಪ್ರಭೆ ಗಂಡಭಾಗದ್ಯುತಿಯಲ್ಲಿ ಕಾಂತಿಯ ಕಡಲೆಬ್ಬಿಸುತ್ತಿರಲು, ಭುವನ ಮೋಹನವಾದ ಭ್ರೂವಿಲಾಸದಿಂದ ವಾಮಭಾಗಾನತವದನವೊಪ್ಪುತ್ತಿರಲು, ಅಪಸವ್ಯಕರ ಮೃದುಲಾಂಗುಳಿ ಚಾತುರಿಷಡ್ಜ ಧ್ವನಿಗೆ ಮರ್ಮಸರಣಿಯನ್ನು ತೋರುತ್ತಿರಲು, ಎಡಗಾಲಿನ ಮೇಲೆ ಅಡ್ಡವಾಗಿ ಸಾಗಿಸಿ ನಿಲ್ಲಿಸಿರುವ ಪದದ ನಖದ್ಯುತಿ ಭೂಮಿಯಲ್ಲಿ ಹಬ್ಬಿಕೊಂಡಿರಲು, ಮೌಳಿ ಪಿಂಛವೂ, ಕಂಠಧಾಮವೂ, ಮೆರೆಯುತ್ತಿರಲು, ಚತುರ ನಟಮೂರ್ತಿಯಾದ ಗೋಪಾಲ ಚಕ್ರವರ್ತಿಯು, ಒಂದು ವೇಣುವಿನಲ್ಲಿ, ವಿಲಸಿತಗ್ರಾಮವಾಗಿ ಬ್ರಹ್ಮಗಾಂಧರ್ವ ಗೀತವನ್ನು ರೂಪಿಸಿದನು.” 

(Earliar published in JIVANA September 1966 magazine)