ಶ್ರೀ ದ್ವೈಮಾತೃಕ

                                        ದಿ.ಲಂಕಾ ಕೃಷ್ಣಮೂರ್ತಿ(1925-1996)

Published by   LANKA KRISHNA MURTI FOUNDATION                                                     

(https://www.facebook.com/lankakrishnamurtifoundation/)                Website (https://www.krishnamurtifoundation.com/lanka/)

LKM FOUNDATION-YOUTUBE

(https://www.youtube.com/channel/UCptmyD6GditXlBWnaRNI11A)

ಶ್ರೀ ಗಣಪತಿಯ ದಿವ್ಯ ಮೂರ್ತಿಯನು ಧ್ಯಾನಿಸುತ ಈ ಕವಿತೆಯನು ಬರೆಯಲುದ್ಯಮವ ಮಾಡುತಿಹೆ. ನಾನು ಕವಿಯಲ್ಲ, ಕರ್ಣಾಟಕ ಭಾಷೆಯೊಳಿನ್ನು ಬೀಳುತ್ತ ಏಳುತ್ತ ಬರುವ ಶಿಶುವಾಗಿರುವೆ. ತಾಯಿ ಕನ್ನಡ ಚಾಚಿರುವ ತೋಳುಗಳ ನಡುವೆ ನಾ ಪ್ರೇಮರಸ ಪೂರ್ಣ ಮಾತೃತ್ವ ಸುಧೆಯ ನಿವ ಹಂಬಲಿಸಿ ಬರುತಿರುವನೆಂದು ನೀವೂಹಿಸುವಿರದುಸಹಜ ದಿಟ, ನಾನು ಕನ್ನಡದ ಮಣ್ಣಿನೊಳಗಿಂದ ಬಂದಾಹಾರ ಕಣಗಳಿಂದಾವಗಂ ನವನವಗಳಾದ ಬಣ್ಣಗಳ ಕಣಕಣಗಳಿಂ ಬಗೆ ಬಗೆಯ ಚಿತ್ರಗಳ ರೂಪದಿಂ ಕಂಗೊಳಿಪ ಹಳೆಯ ಪಟದಂತೆ ಪೋಷಿತನಾಗಿ ಬರುತಿರುವ ಕನ್ನಡಿಗ; ಸರಸತಿಯ ಎದುರಿನಲಿ ಶಿಶುಮಾತ್ರ. ಕನ್ನಡವು ತಾಯಿ ಮಾತಾಯಿ ಯಾಗಿಹಳೆನಗೆ. ಮಾತೃಭಾಷೆಯ ತೆಲುಗು ಮಾತಾಯಿ ಕನ್ನಡವು, ಅಮ್ಮ ದೊಡ್ಡಮ್ಮ, ಎನಗಮ್ಮಂದಿರಿಬ್ಬರೀ ದ್ವೈ ಮಾತೃಕತ್ವಭಾಗ್ಯಕೆ ಸದಾ ನಂದಿಸುವೆ. ದ್ವೈಮಾತೃಕ ಪ್ರಿಯದ್ವಿಗುಣತೆಯನಾಶಿಸುವೆ. ದ್ವೈಮಾತೃಕ ಕ್ಷೇತ್ರದಂದದಿ ನಿರಂತರವು ಅಮೃತ ಪ್ರವಾಹಾದ್ರ್ರತೆಯನೆ ಬಯಸುತ್ತಿರುವೆ. ಆಂಧ್ರ ಸಾಹಿತ್ಯ ದುದ್ಯಾನದಲ್ಲಾಡುತ್ತ ಶಿಶುವಿನಂದಿದಿ, ಕಂಡೆ ಕರ್ಣಾಟಕ ಕವಿವರರ. ಅವರ ಪ್ರೀತಿಯ ಗಾಢಪಾಶ ನನ್ನನೆಳೆಯೆ, ಅವರ ಸೌಜನ್ಯ ಗೌರವವು ಬಾಗಿಸಲೆನ್ನ, ಅವರ ಭಾವೋನ್ನತಿಗೆ ಕುಳ್ಳನಾಗಿರೆ ನಾನು, ಅವರ ಕವಿತಾಸರಳತೆಯು ನನ್ನ ಮರುಳ್ಚುತಿರೆ, ಕರ್ಣಾಟ ಸಾಹಿತ್ಯ ಕಾಂತಿಯಂ ಕಂಡು ವಿಭ್ರಾಂತನಾದೆನು ಮತ್ತೆ ಧನ್ಯನಾದೆನು ನಾನು,. ಕವಿವರರು ಗೋಪಾಲ ಕೃಷ್ಣರಾಯರು ನನ್ನ ಗುರುಗಳಾಗಿಹರಿಲ್ಲಿ ಗುರುಪ್ರೀತಿಯುತರಾಗಿ. ಕವಿತೆಯನ್ನೋದಿದೆನು ಕರ್ಣಾಟಕ ಭಾಷೆಯಲಿ ಲೇಖನವ ಬರೆದೆ ನಾಭಾಷಣವ ಮಾಡಿದೆನು. ಕವಿತೆಯಂ ಮಾಡುವೀ ಹಂಬಲವು ಹೆಚ್ಚಾಗಿ ಕವಿತೆಯಂ ಮಾಡಲುದ್ಯಮಿಸುತ್ತಿರುವೆನಿಂತು. ಶಿಷ್ಯತ್ವವನ್ನು ನಾ ಮಾಡಿಲ್ಲವರಿಗೊಂದು ಶಬ್ದವನ್ನಾದರೂ ಕಲಿಯಲಿಲ್ಲವರಲ್ಲಿ ವಟವೃಕ್ಷ ಮೂಲದಲ್ಲಿನ ಗುರುವಿನ ಮೌನದುಪದೇಶ ದಂತಿವರ ಉಪದೇಶವು ಚಿತ್ರ. ನನ್ನ ಕನ್ನಡ ಕಾವ್ಯಪಠನ ವತ್ಯಂತಾಲ್ಪ. ಪ್ರಾಥಮಿಕ ಶಾಲೆಯಾ ಮಗುವಿನಂದದಿ ನನ್ನ ಕವಿಕಾವ್ಯ ಪರಿಚಯವ ದೀಗೀಗ ದಿಜ್ಮಾತ್ರ. ಒಂದು ಭಾಷೆಯಳೊಬ್ಬ ಕವಿವರೇಣ್ಯನದೊಂದು ವರಕೃತಿಯೆ ನಿರತ ನವ್ಯಾರ್ಥದಾಯಕಮಾಗೆ, ಹೊಸಭಾಷೆಯಲ್ಲಿ ನೂತನ ಕವೀಶ್ವರ ರಸಂ ಖ್ಯಾಕ ಕಾವ್ಯಗಳಲ್ಲಿ ಪಡೆಯ ಬಹುದಾದನವ್ಯಾರ್ಥ ನಿಧಿಗಳಿಗುಂಟೆ ತುದಿಯೊಂದು? – ಭಾರತಿಯ ನಾಟ್ಯಭಂಗಿಗಳ, ಬಾನಲಿ ಮೆರೆವ ತಾರೆಗಳ, ಚಿನ್ಮಯನ ಲೀಲೆಗಳ, ಲೆಕ್ಕಿಸಲು ಸಾಧ್ಯವೇ? ಪಂಪನೆನೆ ಪಂಪನೆ, ರನ್ನನೆನೆ ರನ್ನನೇ; ನಾರಣಪ್ಪನು ನಾರಣಪ್ಪನೇ ಅಲ್ಲವೇ? ಒಬ್ಬ ಕವಿ ವರನಂತೆ ಇನ್ನೊಬ್ಬರಿಲ್ಲವೀ ಜಗದೊಳಗೆ, ವಿಷ್ಣುವಿನ ಅವತಾರ ಪಂಕ್ತಿಯಲಿ ಒಂದಪೋಲ್ವುದೆ ಒಂದು? ಕಪಿವರೆನ ದನುವಾದ ವಾದರೇನುದು ನೂತ್ನ ಮೋದವಂ ಬೀರದೇ? “ಆಲಕ್ಷ್ಯದಂತೆ” ಎಂಬಾ ಕಾಳಿದಾಸನಾ ಪದ್ಯವನ್ನೋದಿ ಮೈಮರೆತರೆ “ಗೆಟೇ” ಕವಿಯು, ಬಸವಪ್ಪ ಶಾಸ್ತ್ರಿಗಳ ಅನುವಾದವನ್ನು “ಮೊಳೆವಲ್ ಶೋಭಿಸೆ” ಮೊದಲಾದಾ ಪದ್ಯವನ್ನೋದಲಾಗಿದ್ದ ರಾಸುಕವಿ ಎನಿತು ಹಿಗ್ಗಿರುವನೋ! ನನಗೆ ಕನ್ನಡ ಕಾವ್ಯನಂದನೋದ್ಯಾನದ ಲ್ಲೊಂದೊಂದು ಕಾವ್ಯವೂ ಒಂದೊಂದು ಹೊಸಸೃಷ್ಟಿ. ಮೊನ್ನೆತಂದು “ಗಣೇಶ ದರ್ಶನ”ವ ನೋದಿನಾ ಮುಗ್ಧನಾದೆನು ಕವಿಯ ದಿವ್ಯದೃಷ್ಟಿಯ ನೋಡಿ. ಶಿವತಾಂಡವದ ಚಲನಚಿತ್ರ ಮುದ್ರಿತವಾಯ್ತು ಮನದಲ್ಲಿ “ಪು.ತಿ.ನ” ವರನಾಮ ದೊಂದಿಗೆ ಅಂದೆ. ತೆಲುಗಿನಲಿ “ಪುಟ್ಟಪರ್ತಿ” ಕವೀಶ ವಿರಚಿತವು ಶಿವತಾಂಡವವು ಗೇಯ ಕೃತಿ ಶಿರೋಭೂಷಣವು. ಆಕವಿಯ ಹೆಸರು “ಪು.ತಿ. ನಾರಾಯಣಾಚಾರ್ಯ,” ಈ ಕವಿಯ ಹೆಸರು “ಪು.ತಿ ನರಸಿಂಹ ಆಚಾರ್ಯ”. ಶಿವತಾಂಡವದ ಕನ್ನಡದವತಾರ ವಿದಾಗೆ, ಶಿವತಾಂಡವದ ತೆಲುಗಿನವತಾರವದು ದಿಟವು. ಒಂದು ಜೀವಿತನಾಟ್ಯವಾದೊಡಿ ನ್ನೊಂದದರೆ ಆತ್ಮಾನು ಭವರೂಪ ಪ್ರತಿಬಿಂಬ ವಾಗಿಹುದು. ಒಂದು ವಾಗ್ವೈಭವದ ಭಂಡಾರ ದಂತಿರಲು ಮತ್ತೊಂದದರ ಅರ್ಥ ಗೌರವದ ಹೋಲಿಹುದು. ಒಂದು ಚಿತ್ರ ವಿಚಿತ್ರಿಶಿಲ್ಪ ದಂತಿರಲು, ಮತ್ತೊಂದು ಶಿಲ್ಪಾಮ್ನಾಯ ಮಂತ್ರತತಿ ಯಂತಿಹುದು. ಶಿವತಾಂಡವವೋ, ಸರಸ್ವತಿಯ ಸುವಿಲಾಸವೊ, ಶ್ರೀಹರಿಯ ಲೀಲೆಯೋ ಒಂದೊಂದು ಭಾಷೆಯಲಿ ಒಂದೊಂದು ಸೊಗಸನ್ನು ಹೊಂದಿಹುದು, ಚಂದವಿದು. ಕವಿತೆಯೆನೆ ಮಾತುಗಳ ಜೋಡಿಸಿದ ರಾಗುವುದೆ? ಕೇವಲ ಚಮತ್ಕøತಿಯ ಕೃತಿ ಕವಿತೆಯಾಗುವುದೇ? ಕವಿತಾ ಗುಣಗಳೆಷ್ಟು? ಕವಿಗುಣಗಳೆಷ್ಟಿಹವು? ಕವಿಯಶಃ ಪ್ರಾರ್ಥಿನಾನಲ್ಲ, ನಾ ಮಾತುಗಳ ಕಲಿಯುತ್ತಿರುವ ಬಾಲಕನು ಮಾತ್ರ, ಸುಕವೀಂದ್ರ ಪೂತವಾಗ್ಮಾರುತವ ಹೀರಿ ಪಿಷ್ಟವಮಾಡಿ ಓಷಧಿಗಳೆನಗನ್ನವಂ ಕೊಟ್ಟು ಸಲಹಲೆಂದರ್ಥಿಸುವೆ; ಭಾವಿಮಾನವ ಸಮಾಜವ ಹರಸುವಾಕವೀಶ್ವ ರವೃಂದ ದಾಶೀರ್ವಚನದಲ್ಲಿ ನನ್ನ ವಾಣಿಯು ಮೇಳವನ್ನು ಹೊಂದಲಿ! ಎಂದು ಬಯಸುವೆನು; ಬಯಕೆಯೊಂದಿಗೆ ನನ್ನ ಈ ಕವಿತೆಯಲ್ಲಿರುವ ಕಾವ್ಯ ಲಕ್ಷಣಗಳಾ ಗಣಗಳೇ- ಗಣಪತಿಯ ಕೃಪೆಯಿಂದ ಗಣಗಳಂ ಜೋಡಿಸಿದೆ, ದ್ವೈಮಾತುರನ ವರದಿ ನಾದೆ ದ್ವೈಮಾತೃಕನು. (Earliar published in JIVANA January 1968 magazine)