ವಿಶ್ವ ಸಂಗೀತ 

                                                          ಲಂಕಾ ಕೃಷ್ಣಮೂರ್ತಿ

         ಘನ ವಿದ್ವಾಂಸರು ಸೇರಿ ಒಂದು ಒಳ್ಳೆಯ ಸಂಗೀತ ಕಛೇರಿಯನ್ನು ನಡೆಸುತ್ತಿರುವಂತೆ ಭಾವಿಸೋಣ. ಕಛೇರಿಯು ಒಂದು ದೊಡ್ಡ ಸಭಾಂಗಣದಲ್ಲಿ ನಡೆಯುತ್ತಿರುತ್ತದೆ. ಸಂಗೀತಗಾರರು ವೇದಿಕೆಯ ಮೇಲೆ ಕುಳಿತುಕೊಂಡಿದ್ದಾರೆ. ಸಭಾಂಗಣದಲ್ಲಿನ ಆಸನಗಳ ಮೇಲೆ ಶ್ರೋತೃಗಳು ಕುಳಿತುಕೊಂಡು ತನ್ಮಯರಾಗಿ ಸಂಗೀತ ಕೇಳುತ್ತಿದ್ದಾರೆ. ಸಭಾಂಗಣದ ಬಾಗಿಲು ಮುಚ್ಚಿಬಿಟ್ಟಿದ್ದಾರೆ. ಹೊರಗಡೆ ಇರುವವರಿಗೆ ಒಳಗಡೆ ಏನು ನಡೆಯುತ್ತಿದೆ ಎಂಬುದು ಕಾಣಿಸುವುದಿಲ್ಲ. 

       ಹೊರಗಡೆ ಇರುವ ಜನರು ಸಹ ಸಂಗೀತ ಕೇಳಲಿ ಎಂದು ಒಂದು ಧ್ವನಿವರ್ಧಕ ಯಂತ್ರವನ್ನು ಹೊರಗಡೆ ಇಟ್ಟಿದ್ದಾರೆ. ಅನೇಕ ಜನ ಹೊರಗಡೆ ನಿಂತು ಧ್ವನಿವರ್ಧಕಯಂತ್ರದಿಂದ ಹೊರಕ್ಕೆ ಬರುವ ಸಂಗೀತವನ್ನು ಕೇಳುತ್ತಿದ್ದಾರೆ. ಇವರಲ್ಲಿ ಕೆಲವರು ಸಂಗೀತದಲ್ಲಿ ಅಭಿರುಚಿ ಉಳ್ಳವರು. ಅವರು ಸಂಗೀತವನ್ನು ಬಹಳ ಮೆಚ್ಚುತ್ತಿದ್ದಾರೆ. ಆನಂದವನ್ನು ಅನುಭವಿಸುತ್ತಿದ್ದಾರೆ. ಇನ್ನು ಕೆಲವರಿಗೆ ಅಷ್ಟು ಅಭಿರುಚಿಯಿಲ್ಲ. ಎಲ್ಲರ ಜೊತೆಗೆ ನಿಂತು ಆ ಮಾತು ಈ ಮಾತು ಆಡುತ್ತ ಸಂಗೀತವನ್ನು ಒಂದು ವಿಚಿತ್ರದಂತೆ ಭಾವಿಸುತ್ತಿದ್ದಾರೆ. ಇನ್ನೂ ಕೆಲವರು ಬಹಳ ಬುದ್ಧಿಹೀನರು. ಅವರು ಧ್ವನಿವರ್ಧಕ ಯಂತ್ರವೇ ಹಾಡುತ್ತಿದೆ ಎಂದು ಭಾವಿಸುತ್ತಿದ್ದಾರೆ. ಅಲ್ಲಿಗೆ ಸಭಾಂಗಣದೊಳಗೆ ಸಂಗೀತಗಾರರನ್ನು ಸಹ ನೋಡುತ್ತ ಸಂಗೀತ ಕೇಳುತ್ತಿರುವವರು ಮೊದಲನೇ ಗುಂಪಿಗೆ ಸೇರಿದ ಶ್ರೋತೃಗಳಾದರು. ಹೊರಗಡೆ ಇರುವವರಲ್ಲಿ ಸಂಗೀತದ ಮಾಧುರ್ಯವನ್ನು ಅನುಭವಿಸುತ್ತಿರುವವರು ಎರಡನೇ ಗುಂಪಿಗೆ ಸೇರಿದವರು. ಆಸಕ್ತಿಯಿಲ್ಲದೆ ಹರಟೆ ಹೊಡೆಯುತ್ತಿರುವವರು ಮೂರನೇ ಗುಂಪಿಗೆ ಸೇರಿದವರು. ಧ್ವನಿವರ್ಧಕ ಯಂತ್ರವೇ ಹಾಡುತ್ತಿದೆ ಎಂದು ಭಾವಿಸುವವರು ನಾಲ್ಕನೇ ಗುಂಪಿಗೆ ಸೇರಿದವರು. 

       ವಿಶ್ವವ್ಯಾಪಾರವನ್ನು ಒಂದು ಸಂಗೀತಕ್ಕೆ ಹೋಲಿಸಬಹುದು. ವಿಶ್ವದಲ್ಲಿ ವೈವಿಧ್ಯವಿದ್ದರೂ ಸಾಮರಸ್ಯವಿದೆ. ಪರಸ್ಪರ ವಿರುದ್ಧಗಳಾದ ರಸಗಳನ್ನು ಸಹ ನಾವು ನಾಟಕದಲ್ಲಿ ಗ್ರಹಿಸಿ ಒಂದೇ ವಿಧವಾದ ಆನಂದವನ್ನನುಭವಿಸುತ್ತೇವೆ. ಸಂಗೀತದಲ್ಲಿ ತಾರಸ್ಥಾಯಿ, ಮಂದ್ರಸ್ಥಾಯಿ ಇವುಗಳ ನಡುವೆ ಅಂತರವಿದೆ. ಮೃದಂಗಕ್ಕೂ, ವೀಣೆಗೂ, ಧ್ವನಿಯಲ್ಲಿ ಬಹಳ ಭೇದವಿದೆ. ಆದರೆ ಸಂಗೀತಕ್ಕೆ ಇವೆಲ್ಲಾ ಬೇಕು. ವಿಶ್ವಸಂಗೀತದಲ್ಲೂ ಪರಸ್ಪರ ಭಿನ್ನ ಅಥವಾ ವಿರುದ್ಧವಾದ ಅಂಶಗಳಲ್ಲಿನ ಸಾಮರಸ್ಯದ ರಸವಿದ್ದೇ ಇದೆ. 

       ಈಗ ನಾವು ನಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡು ನಾವು ಈ ವಿಶ್ವಸಂಗೀತದ ಶ್ರೋತೃಗಳಲ್ಲಿ ಯಾವ ಗುಂಪಿಗೆ ಸೇರಿದ್ದೇವೆ ಎಂದು ಸ್ವಲ್ಪ ಆಲೋಚಿಸೋಣ. ಬೆಳಗ್ಗೆ ನಿದ್ರೆಯಿಂದ ಎದ್ದವರು ನಾವು ರಾತ್ರಿ ನಿದ್ರೆ ಹೋಗುವವರೆಗೂ ಯಾವುದೋ ಒಂದು ಚಿಂತೆಯಿಂದ, ಉದ್ವೇಗದಿಂದ ನರಳುತ್ತಲೇ ಇರುತ್ತೇವೆ. ನಮ್ಮ ಜೀವನದ ಅನುಭವದ ವಿವಿಧತೆಯಲ್ಲಿ ಕ್ಷಣಿಕವಾಗಿ ಸುಖ ಕಂಡುಬಂದಂತಾಗಿ ಅನಂತರ ಪುನಃ ತಾಪತ್ರಯವು ಆವರಿಸಿಕೊಳ್ಳುತ್ತದೆ. ಕಾರಣ ನಾವು ವಿಶ್ವಸಂಗೀತದ ರುಚಿಯನ್ನು ಬಲ್ಲವರಲ್ಲ. ಇದೆಲ್ಲಾ ಒಂದು ತಮಾಷೆಯೆಂದು ಭಾವಿಸುತ್ತೇವೆಯೇ ಹೊರತು ಇದರಲ್ಲಿನ ರಸಾನಂದವನ್ನು ಅನುಭವಿಸಲಾರೆವು. ಹಾಗಾದರೆ ನಾವು ಮೂರನೇ ಗುಂಪಿಗೆ ಸೇರಿದವರಲ್ಲವೇ? ಇಲ್ಲ. ನಾವು ಈ ವಿಶ್ವವ್ಯಾಪಾರದ ಮೂಲ ಕರ್ತೃಗಳಾದ ದೇವತಾ ಶಕ್ತಿಗಳನ್ನು ತಿಳಿಯದೆ, ಅವನು ಹೀಗೆ ಮಾಡಿದ, ನಾನು ಹಾಗೆ ಮಾಡಿದೆ ಎಂಬ ಭಿನ್ನತಾಭಾವದಿಂದ ಧ್ವನಿವರ್ಧಕ ಯಂತ್ರವೇ ಹಾಡುತ್ತಿದೆ ಎಂದು ಭಾವಿಸುವ ನಾಲ್ಕನೇ ಗುಂಪಿಗೆ ಸೇರಿದ್ದೇವೆ. 

       ಲೋಕವ್ಯವಹಾರದ ಜಂಜಾಟದ ನಡುವೆ ಆಗಾಗ್ಗೆ ಸ್ವಲ್ಪ ಈಚೆಗೆ ಬಂದು ಈ ವಿಶ್ವವ್ಯಾಪಾರದಲ್ಲಿನ ಸಾಮರಸ್ಯವನ್ನು ನೋಡಿ, ಇದಕ್ಕೆ ಕರ್ತೃವಾದ ದೇವತಾ ಶಕ್ತಿಯನ್ನು ಗುರುತಿಸಿ ನಾಲ್ಕನೇ ಗುಂಪಿನಿಂದ ಮೂರನೇ ಗುಂಪಿಗೆ ಹೋಗಲು ಪ್ರಯತ್ನಿಸೋಣ. ಆಮೇಲೆ ಎರಡನೇ ಗುಂಪಿಗೆ, ಅಲ್ಲಿಂದ ಮೊದಲನೇ ಗುಂಪಿಗೆ ಹೋಗಿ ಶಾಶ್ವತಾನಂದಪಡೆಯಲು ಅವಕಾಶವುಂಟಾಗುತ್ತದೆ.