ಧರ್ಮದ ವೈಜ್ಞಾನಿಕ ಅಧ್ಯಯನ

                                                       ಲಂಕಾ ಕೃಷ್ಣಮೂರ್ತಿ

                   ಇಂದು ನಾವು ವಿಜ್ಞಾನಯುಗದಲ್ಲಿದ್ದೇವೆ. ಜೀವನದ ಪ್ರತಿ ಒಂದು ವಿಷಯದಲ್ಲೂ ವಿಜ್ಞಾನದ ಪ್ರಯೋಜನವನ್ನು ಪಡೆಯುತ್ತಿದ್ದೇವೆ. ಆದರೆ ‘ಧರ್ಮ’ವೆಂಬ ಹೆಸರನ್ನು ಹೇಳುವಾಗ ವಿಜ್ಞಾನವನ್ನು ಪೂರ್ತಿಯಾಗಿ ಮರೆತುಬಿಡುತ್ತೇವೆ. ಹಿಂದೂಧರ್ಮ ಬೇರೆ, ಕ್ರಿಸ್ತ ಧರ್ಮ ಬೇರೆ, ಇಸ್ಲಾಂ ಧರ್ಮ ಬೇರೆ ಎಂಬ ಭೇದಭಾವವೂ ಸ್ವಧರ್ಮಾಭಿಮಾನವೂ ಎದ್ದು ನಿಂತುಕೊಳ್ಳುತ್ತವೆ. ವಿಜ್ಞಾನದ ವಿಷಯ ಬಂದಾಗ ದೇಶ, ಭಾಷೆ, ಜಾತಿ ಇತ್ಯಾದಿ ಯಾವ ಭೇದ ಭಾವನೆಯೂ ಮನಸ್ಸಿನಲ್ಲಿ ಏಳುವುದಿಲ್ಲ. ಆದರೆ ಧರ್ಮದ ಹೆಸರು ಹೇಳಿದ ಕೂಡಲೇ ಈ ಭೇದಭಾವ ಗೋಡೆಗಳೇಕೆ ಎದ್ದು ನಿಂತು ಬಿಡುತ್ತವೆ? ಇದು ಆಲೋಚಿಸಬೇಕಾದ ವಿಷಯ. ನನಗೆ ತೋಚುವ ಕಾರಣವಿಷ್ಟೇ. ನಾವು ಧರ್ಮವೆಂದರೆ ಕೇವಲ ಕೆಲವು ಆಚಾರಗಳಿಗೆ ಸೀಮಿತಗೊಳಿಸಿ ನೋಡುತ್ತೇವೆ. ಬೇರೆ ಬೇರೆ ಪ್ರದೇಶಗಳಲ್ಲಿರುವ ಜನರ ನಡುವೆ ಸಂಪರ್ಕವು ಈ ವಿಜ್ಞಾನ ಯುಗದಲ್ಲಿದ್ದಷ್ಟು ಹಿಂದಿನ ಕಾಲದಲ್ಲಿರಲಿಲ್ಲ. ಆಗ ಅವರಲ್ಲಿನ ಭಾಷೆಗಳು ಹೇಗೆ ಬೇರೆ ಬೇರೆಯಾಗಿದ್ದವೋ ಸಂಸ್ಕೃತಿಗಳೂ, ಆಚಾರವ್ಯವಹಾರಗಳೂ ಬೇರೆ ಬೇರೆಯಾಗಿದ್ದವು. ಧರ್ಮದ ವಿಷಯದಲ್ಲಿ ಪರಂಪರಾಗತವಾಗಿ ಅವರವರ ಮನೆಗಳಲ್ಲಿ ಮತ್ತು ನೆಂಟರಿಷ್ಟರಲ್ಲಿ ಬಂದಿರುವ ಆಚಾರಗಳು ಹಾಗೆಯೇ ಉಳಿದುಕೊಂಡಿವೆ. ಇವುಗಳ ವಿಷಯವಾಗಿ ಒಂದುಕಡೆ ವೈಜ್ಞಾನಿಕವಾದ ಚಿಂತನೆಯ ಅಭಾವ ಮತ್ತೊಂದು ಕಡೆ ಇವುಗಳೇ ಧರ್ಮದ ಸಂಪೂರ್ಣ ಸ್ವರೂಪವೆಂಬ ತಪ್ಪುಕಲ್ಪನೆ ಉಳಿದುಕೊಂಡು ಬಂದಿರುವುದು ಬಹಳ ಶೋಚನೀಯ. ಇದರ ಜೊತೆಗೆ ದೇವರು, ಪರಲೋಕ, ಪುಣ್ಯಪಾಪಗಳು ಇತ್ಯಾದಿ ವಿಷಯಗಳು ವಿಜ್ಞಾನದ ಎಲ್ಲೆಯನ್ನು ಮೀರಿರುವುವು. ಇವುಗಳನ್ನು ಸಹ “ಧರ್ಮ”ವೆಂಬ ಶಬ್ದದಲ್ಲಿ ಸೇರಿಸಿಕೊಂಡು ಬಿಟ್ಟಿದ್ದೇವೆ. ಪ್ರತ್ಯೇಕತಾ ಭಾವನೆಗೆ ಇದೂ ಒಂದು ಕಾರಣ. ಇದರ ಜೊತೆಗೆ ಸ್ವಾರ್ಥಿಗಳು ಧರ್ಮದ ಹೆಸರಿನಲ್ಲಿ ಮತಾಂಧತೆಯನ್ನು ಎಬ್ಬಿಸುವ ಪ್ರವೃತ್ತಿಯು ಸೇರಿಕೊಂಡು ಇಂದು ಮಾನವರಲ್ಲಿ ವಿಭೇದ ಭಾವಗಳು ಹೆಚ್ಚಿವೆ. ಹಿಂದಿಗಿಂತಲೂ ಹೆಚ್ಚಿವೆಯೆಂದು ಹೇಳಿದರೂ ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಸಾಕಷ್ಟು ಚಿಂತನೆ ನಡೆಯುತ್ತಿಲ್ಲ. ಚಿಂತನೆ ನಡೆಸುವುದು  ಮಾನವ ಲೋಕದ ಹಿತದೃಷ್ಟಿಯಿಂದ ಅತ್ಯವಶ್ಯಕವಾಗಿದೆ. 

     ದೇವರು, ಪರಲೋಕ, ಪುಣ್ಯಪಾಪಗಳು ಇತ್ಯಾದಿಗಳನ್ನು ಬಿಟ್ಟು ಧರ್ಮದ ಲೌಕಿಕಾಂಶದಲ್ಲಿ ವೈಜ್ಞಾನಿಕ ಚಿಂತನೆಯನ್ನು ಮಾಡುವುದು ಅತ್ಯವಶ್ಯಕವಾಗಿದೆ. ಧರ್ಮವೆಂದರೆ ಸಮಾಜವು ಪರಸ್ಪರ ದ್ವೇಷಾಸೂಯೆಗಳಿಂದ ಛಿದ್ರವಾಗದಂತೆ ಅದನ್ನು ಹಿಡಿದಿರುವುದು ಎಂದು ಅರ್ಥ. ಸಮಾಜದಲ್ಲಿ ಈ ಸಹಕಾರ ಮನೋಭಾವದ ಅವಶ್ಯಕತೆ, ಅದನ್ನು ಹೇಗೆ ಸಾಧಿಸಬೇಕು ಎಂಬುದಾಗಿ ಸಮಾಜ ಶಾಸ್ತ್ರ, ಮನೋವಿಜ್ಞಾನ ಶಾಸ್ತ್ರ, ಚರಿತ್ರೆ, ಇತ್ಯಾದಿ ವಿಷಯಗಳ ಸಹಾಯದಿಂದ ವೈಜ್ಞಾನಿಕವಾಗಿ ಚಿಂತನೆ ನಡೆಸಿ ಹೊಸ ಭಾವಗಳನ್ನು ಲೋಕಕ್ಕೆ ಕೊಟ್ಟರೆ ಧರ್ಮದ ನಿಜವಾದ ಉದ್ಧಾರವೂ, ಮಾನವ ಕಲ್ಯಾಣವೂ ತಪ್ಪದೆ ಸಿದ್ಧಿಸುತ್ತವೆ. ಇದಕ್ಕೆ ಮಾನವೀಯ ಮೌಲ್ಯಗಳ ಬೆಲೆ ತಿಳಿದಿರುವ ತ್ಯಾಗಮನೋಭಾವವುಳ್ಳ ಬುದ್ಧಿವಂತರು ಉತ್ಸಾಹದಿಂದ ಶ್ರಮಿಸಬೇಕಾಗಿದೆ. ಹೊಸ ಹೊಸ ಭಾವನೆಗಳನ್ನು ಪ್ರಚಾರ ಮಾಡಬೇಕಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಬೋಧಿಸುವವರು ತಾವು ಆಚರಿಸಿ ತೋರಿಸಬೇಕಾಗಿದೆ. ಮಾನವ ಕಲ್ಯಾಣ ಯೋಜನೆಗಳಲ್ಲಿ ಇಂತಹ ಯೋಜನೆಯನ್ನು ಸೇರಿಸಿ ಅದಕ್ಕೆ ರಾಷ್ಟ್ರಗಳು ಆದ್ಯತೆಯನ್ನು ಕೊಡಬೇಕಾಗಿದೆ. ಸ್ಪರ್ಧೆಯ ಸ್ಥಾನದಲ್ಲಿ ಸಹಕಾರವನ್ನು ಪ್ರತಿಷ್ಠಾಪನೆ ಮಾಡಬೇಕಾಗಿದೆ.