ಎಲ್ಲಾ ಜಲಮಯ 

                                                        ಲಂಕಾ ಕೃಷ್ಣಮೂರ್ತಿ

          “ಅಪೋವಾ ಇದಗ್‍ಂ ಸರ್ವಂ ವಿಶ್ವಾಭೂತಾನ್ಯಾಪಃ ಪ್ರಾಣಾವಾ ಆಪಃ ಪಶವ ಆಪೋನ್ನಮಾಪೋsಮೃತಮಾಪ ಸ್ಸಂರಾಡಾಪೋ ವಿರಾಡಾಪಸ್ವರಾಡಾಪಶ್ಛಂದಾಗ್‍ಂ ಷ್ಯಾಪೋ ಜ್ಯೋತೀಗ್‍ಂ ಷ್ಯಾಪೋ ಯಜಾಗ್‍ಂ ಷ್ಯಾಪಸ್ಸತ್ಯಮಾಪಸ್ಸರ್ವಾದೇವತಾ ಆಪೋ ಭೂರ್ಭುವ ಸ್ಸುವರಾಪ ಓಂ”. 

       ಈ ಪ್ರಸಿದ್ಧವಾದ ಮಂತ್ರವು ವಿಶ್ವವೆಲ್ಲಾ ನೀರು ಎಂಬ ಒಂದು ಸಿದ್ಧಾಂತವನ್ನು ಪ್ರತಿಪಾದಿಸುತ್ತಿದೆ. “ನಾರಾಯಣ” ಎಂಬ ದೇವರ ಹೆಸರಿಗೆ ಅರ್ಥ ಹೇಳುವಾಗ ಸಹ ಈ ವಿಶ್ವವೆಲ್ಲಾ ನೀರು. ಈ ನೀರು ಒಂದು ದೊಡ್ಡ ಸಮುದ್ರದ ರೂಪದಲ್ಲಿದೆ. ಒಳಗಡೆ ಇದು ಚಲನೆಯಿಲ್ಲದೆ ಒಂದೇ ಬೃಹದಾಕಾರವನ್ನು ತಾಳಿದೆ. ಆದರೆ ಹೊರಗಡೆ ಅಲೆಗಳ ರೂಪದಲ್ಲಿ ಹನಿಗಳ ರೂಪದಲ್ಲಿ ವೈವಿಧ್ಯವನ್ನು ತೋರಿಸುತ್ತಿದೆ. ಇಂತಹ ನೀರನ್ನು ಆಶ್ರಯಿಸಿಕೊಂಡು ಅದರಲ್ಲಿ ಯಾವ ಯೋಚನೆಯು ಇಲ್ಲದೆ ಆನಂದದಿಂದ ಮಲಗಿರುವವನೇ ನಾರಾಯಣ. ಎಂಬ ಭಾವನೆಯನ್ನು ವೇದಾಂತ ಗ್ರಂಥಗಳು ಕೊಡುತ್ತಿವೆ. 

       ಸಮಸ್ತವೂ ನೀರಿನ ಸ್ವರೂಪವೇ ಎಂದು ಹೇಳಿದರೆ ಯಾರೂ ನಂಬಲಾರರು. ಈ ಮಾತಿಗೆ ವಾಚ್ಯಾರ್ಥವನ್ನು ಗ್ರಹಿಸುವುದು ಸರಿಯಲ್ಲ. ಆದರೆ ಸಾಂಕೇತಿಕವಾದ ಅರ್ಥವನ್ನು ಗ್ರಹಿಸಲು ಯಾವ ಅಡ್ಡಿಯು ಇಲ್ಲ. ಈ ವಿಶ್ವದ ಸ್ವರೂಪವನ್ನು ವರ್ಣಿಸಲು ಸಂಕೇತವಾಗಿ ಬಳಸಲು ಎಲ್ಲ ವಸ್ತುಗಳಿಗಿಂತಲೂ ನೀರೇ ಹೆಚ್ಚು ಅರ್ಹವಾದುದು ಎಂಬ ಸತ್ಯವನ್ನು ನಾವು ಅರಿತರೆ ಮೇಲಿನ ಮಂತ್ರದಲ್ಲಿನ ಅದ್ಭುತವಾದ ಪರಮಸತ್ಯವನ್ನು ನಾವು ಅರಿಯಬಹುದು. 

       ಪಂಚಭೂತಗಳಲ್ಲಿ ಆಕಾಶಕ್ಕೆ ಯಾವ ಸ್ವರೂಪವೂ ಇಲ್ಲ. ವಾಯುವು ಕಣ್ಣಿಗೆ ಕಾಣಿಸುವುದಿಲ್ಲ. ತೇಜಸ್ಸು ಕಣ್ಣಿಗೆ ಕಾಣಿಸಿದರೂ ನಾನಾರೂಪಗಳನ್ನು ಪಡೆಯುವುದರಲ್ಲೂ ಪುನಃ ಪ್ರಶಾಂತವಾದ ಒಂದೇ ರೂಪವನ್ನು ಹೊಂದುವುದರಲ್ಲಿಯೂ ನೀರಿನಷ್ಟು ವಿವಿಧತೆಯನ್ನು ಪ್ರಕೃತಿಯಲ್ಲಿ ತೋರಿಸುತ್ತಿಲ್ಲ. ಭೂಮಿಯನ್ನು ಸಂಕೇತವನ್ನಾಗಿ ಗ್ರಹಿಸಲು ಅದರಲ್ಲಿನ ಪದಾರ್ಥಗಳು ಗಟ್ಟಿಯಾದ ಒಂದೊಂದು ರೂಪವನ್ನೂ ಪಡೆದಿದ್ದು ಕ್ಷಣಕ್ಷಣಕ್ಕೂ ಹೊಸ ಹೊಸ ರೂಪಗಳನ್ನು ಪಡೆಯುತ್ತಿರುವುದಿಲ್ಲ. ಆದುದರಿಂದ ಕ್ಷಣಕ್ಷಣದಲ್ಲೂ ಹೊಸ ರೂಪವನ್ನು ಪಡೆಯುತ್ತ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತ ಕೊನೆಗೆ ಒಂದೇ ರೂಪಕ್ಕೆ ಹಿಂತಿರುಗುತ್ತಿರುವ ಈ ವಿಶ್ವ ವ್ಯಾಪಾರವನ್ನು ಸಾಂಕೇತಿಕವಾಗಿ ತೋರಿಸಿಕೊಡಲು ನೀರೇ ಎಲ್ಲ ವಸ್ತುಗಳಿಗಿಂತಲೂ ಅತ್ಯಂತ ಅರ್ಹವಾಗಿರುವ ವಸ್ತು. 

       ಭವಭೂತಿ ಮಹಾಕವಿಯು ಶೃಂಗಾರ, ವೀರ, ಕರುಣ, ಅಧ್ಭುತ, ಹಾಸ್ಯ, ಭಯಾನಕ ಮುಂತಾದ ಭಿನ್ನಭಿನ್ನ ಮತ್ತು ಪರಸ್ಪರ ವಿರುದ್ಧವಾದ ರಸಗಳಲ್ಲಿಯು ಒಂದೇ ಮೂಲ ಭೂತವಾದ ರಸಾನುಭವವನ್ನು ನಾವು ಪಡೆಯುತ್ತಿರುವುದನ್ನು ವರ್ಣಿಸುತ್ತ “ಆವರ್ತ, ಬುದ್ಬುದ ತರಂಗ ಮಯೈರ್ವಿಕಾರೈರಂಭೋಯಥಾ ಸಲಿಲಮೇವಹಿ ತತ್ಸಮಸ್ತಂ” ಎಂಬ ಒಂದು ಮಾತಿನಲ್ಲಿ ನೀರಿನ ಸಂಕೇತವನ್ನು ಬಳಸಿರುತ್ತಾನೆ. ಸುಳಿ, ಗುಳ್ಳೆಗಳು, ಅಲೆಗಳು ಮುಂತಾದ ಅನೇಕರೂಪಗಳು ಬೇರೆಬೇರೆಯಾಗಿ ಕಂಡು ಬಂದರೂ ಇವೆಲ್ಲವೂ ಒಂದೇ ನೀರಿನ ವಿವಿಧ ರೂಪಗಳು ಮಾತ್ರವಲ್ಲವೇ ಎಂದು ಹೇಳಿರುತ್ತಾನೆ. 

       ವಸ್ತು ಹೊಸದಾಗಿ ಹುಟ್ಟುವುದಿಲ್ಲ. ಇದ್ದದ್ದು ನಾಶವಾಗುವುದಿಲ್ಲ. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯನ್ನು ಹೊಂದುತ್ತಿರುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಚೆನ್ನಾಗಿ ಗಮನದಲ್ಲಿಟ್ಟುಕೊಂಡು ನೀರಿನ ಸಾಂಕೇತಿಕ ಅರ್ಥವನ್ನು ತಿಳಿಯಲು ಪ್ರಯತ್ನಿಸಬೇಕು. ಆಗ ಜನನ, ಮರಣಗಳು ಕೇವಲ ಬಾಹ್ಯವಿಕಾರಗಳೇ ಹೊರತು ಆತ್ಮವು ಅವಿನಾಶಿ ಎಂಬ ಪರಮಸತ್ಯವು ಗೋಚರಿಸುತ್ತದೆ. ನಮ್ಮ ಜೀವನವನ್ನು ಕಾಲರೂಪದ ಒಂದು ನದಿಯ ಪ್ರವಾಹದಲ್ಲಿನ ಸಂಚಾರದಂತೆ ಭಾವಿಸಬಹುದಲ್ಲವೇ? ಆಗ ಆ ಪ್ರವಾಹದ ನೀರು ಯಾವುದು? ಅದು ಎಷ್ಟು ಶೀತಲವಾದುದು? ಎಷ್ಟು ತೃಪ್ತಿಯನ್ನು ಕೊಡುವುದು? ಎಷ್ಟು ರಮ್ಯವಾದುದು? ಇತ್ಯಾದಿ ವಿಷಯಗಳನ್ನು  ಕುರಿತ ಗಮ್ಯವಾದ ಚಿಂತನೆಗೆ ಸಹ “ನೀರು”ಅವಕಾಶ ಕೊಡುತ್ತದೆ ಅಲ್ಲವೇ?