1-8-1993

Article of the Month August 2019 ಗಾಯತ್ರಿ (ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

          ‘ತತ್’ ಶಬ್ದವು ಗಾಯತ್ರೀ ಮಂತ್ರದ ಪ್ರಾರಂಭದಲ್ಲಿದ್ದು ಪರೋಕ್ಷವಾದ, ವಿಶ್ವಮೂಲವಾದ, ಪರಮಸತ್ಯವಾದ, ಏಕೈಕವಾದ ಪರಮಾತ್ಮನನ್ನು ಸೂಚಿಸುತ್ತಿದ್ದರೂ ನಾನಾತ್ವದಿಂದ ಶೋಭಿಸುತ್ತಿರುವ ದೃಶ್ಯ ವಿಶ್ವವೂ ಸಹ ಆಗಿರುತ್ತದೆ ಎಂಬ ಭಾವವನ್ನು ಪೂರ್ತಿ ಮಂತ್ರದ ಮೊದಲನೆಯ ಮತ್ತು ಕೊನೆಯ ಅಕ್ಷರಗಳು ಶಿಲ್ಪದಿಂದ ಬರುವ ಧ್ವನಿಯ ರೂಪದಲ್ಲಿ ತೋರಿಸುತ್ತಿವೆ. ಮೊದಲನೆಯ “ತ” ಎಂಬ ಅಕ್ಷರವನ್ನು “ಪ್ರಚೋದಯಾತ್” ಎಂಬ ಪದದಲ್ಲಿನ ಕೊನೆಯ ವರ್ಣ “ತ್” ಎಂಬುದನ್ನು ಸೇರಿಸಿ ಉಚ್ಛರಿಸಿದರೆ “ತತ್” ಎಂಬ ಪದವೇ ಬರುತ್ತದೆ. ಇದರಲ್ಲಿ ಇಡೀ ವಿಶ್ವದ ಪ್ರತೀಕವಾಗಿರುವ ಪೂರ್ಣ ಗಾಯತ್ರೀ ಮಂತ್ರವು “ತತ್” ಎಂಬ ಏಕೈಕ ತತ್ವವನ್ನೇ ಸೂಚಿಸುತ್ತದೆ ಎಂಬ ಧ್ವನಿಯಿರುತ್ತದೆ. 

           ಆ ಒಂದೇ ವಸ್ತು ಪ್ರಕೃತಿ ಪುರುಷರ ರೂಪದಲ್ಲಿ ಎರಡಾಯಿತು. ಅದೇ ಜೀವ ಜಗತ್ತಿನಲ್ಲಿ ಪುರುಷ, ಸ್ತ್ರೀ ಎಂಬ ಎರಡು ರೂಪದಲ್ಲಿದ್ದು ಸ್ಥಿತಿಗೆ ಕಾರಣವಾಗಿರುತ್ತದೆ. ಮಕ್ಕಳು ಮೊಮ್ಮಕ್ಕಳು ಮುಂತಾದ ವಂಶದವರು ತಾವು ಮಾತಾ ಪಿತೃಗಳಿಗಾಗಿ ಸೃಷ್ಟಿಯನ್ನು ಬೆಳಸಲು ಮೂಲ ಮಾತಾಪಿತೃಗಳ ರೂಪದಲ್ಲಿದ್ದ ಆ ಒಂದೇ ವಸ್ತು ಲಯವನ್ನು ಹೊಂದಿ ಮುಂದಿನ ಸೃಷ್ಟಿಗೆ ಎಡೆಮಾಡಿಕೊಡುತ್ತದೆ. ಈ ಸ್ತ್ರೀ ಪುರುಷ ತತ್ವಗಳು ಗಾಯತ್ರೀ ಮಂತ್ರದಲ್ಲಿ ಮೊದಲು ನಮಗೆ ಕಾಣಿಸುವುದು ವಾಕ್ಕು ಮತ್ತು ಅರ್ಥದ ರೂಪದಲ್ಲಿ. ಕಾಳಿದಾಸ ಮಹಾಕವಿಯು

       ವಾಗರ್ಥಾವಿವ ಸಂಪ್ಕೃಕ್ತೌ  ವಾಗರ್ಥ ಪ್ರತಿಪತ್ತಯೇ!

       ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ!! 

ಎಂದು ಹೇಳುತ್ತಾನೆ. ವಾಕ್ಕು ಜಗತ್ತಿಗೆ ತಾಯಿ. ಅರ್ಥವು ತಂದೆ. ವಾಕ್ಕು ಪರ್ವತ ಪುತ್ರಿಗೆ ಎಂದರೆ ಪ್ರಕೃತಿಗೆ ಪ್ರತೀಕವಾಗಿರುವುದು. ಅರ್ಥವು ಪರಮೇಶ್ವರ ಎಂದರೆ ಪುರುಷನಿಗೆ ಪ್ರತೀಕವಾಗಿರುವುದು. “ಧಿಯಃ ಯಃ” ಎಂಬಲ್ಲಿ ಧೀ ಶಬ್ದವು ಸ್ತ್ರೀ ಲಿಂಗದಲ್ಲಿದೆ. ಯಃ ಎಂಬುದು ಪುಲ್ಲಿಂಗದಲ್ಲಿದೆ. “ಧಿಯಃ” ಎಂಬುದನ್ನು ಷಷ್ಠೀ ವಿಭಕ್ತಿಯ ಏಕವಚನದ ರೂಪವಾಗಿ ಭಾವಿಸಿದರೆ “ಧಿಯಃ ಯಃ” ಎಂಬ ಮಾತಿಗೆ ಬುದ್ಧಿಗೆ ಸಂಬಂಧಿಸಿದವನು ಎಂಬ ಅರ್ಥ ಬರುತ್ತದೆ. ಅವನನ್ನು ಪ್ರತ್ಯೇಕವಾಗಿ ನಿರ್ದೇಶನ ಮಾಡಿರುವುದರಿಂದ ಬುದ್ಧಿಯಿಂದ ಊಹಿಸಿಕೊಳ್ಳತಕ್ಕ ಪರಮ ಸತ್ಯಸ್ವರೂಪನು ಎಂಬ ಭಾವವು ಬರುತ್ತದೆ. ಆದುದರಿಂದ ಸ್ತ್ರೀ ಪುರುಷರ ಮತ್ತು ಪ್ರಕೃತಿ ಪುರುಷರ ತತ್ವಗಳು ಇಲ್ಲಿ ಗೋಚರಿಸುತ್ತಿವೆ. “ ನಃ” ಅಂದರೆ ನಮ್ಮನ್ನು ಎಂಬ ಅರ್ಥವನ್ನು ತೆಗೆದುಕೊಂಡರೆ ಒಟ್ಟಿಗೆ ಬುದ್ಧಿಯಿಂದ ಮಾತ್ರ ಊಹಿಸಿಕೊಳ್ಳಲು ಸಾಧ್ಯವಾದ ಪರಮಾತ್ಮನು ನಮ್ಮನ್ನು ಉತ್ತಮ ಧ್ಯೇಯದ ಕಡೆ ಪ್ರಚೋದಿಸಲಿ ಎಂಬ ಅರ್ಥವು ಮೂರನೆಯ ಪಾದಕ್ಕೆ ಬರುತ್ತದೆ. ನಃ ಎಂಬುದು ಪುಲ್ಲಿಂಗ ಸ್ತ್ರೀಲಿಂಗ ಎರಡರಲ್ಲಿಯೂ ಇರುವ ಶಬ್ದ. ಆದುದರಿಂದ ಬುದ್ಧಿ ಮತ್ತು ಆತ್ಮವೆಂಬ ತಾಯಿತಂದೆಯರ ಮಕ್ಕಳೇ “ನಾವು” ಎಂಬ ವ್ಯವಹಾರದಲ್ಲಿರುವ ಜೀವಾತ್ಮರು ಎಂಬ ಭಾವವೂ ಸಹ ಇಲ್ಲಿ ಸ್ಫುರಿಸುತ್ತದೆ.

              ಗಾಯತ್ರೀ ಮಂತ್ರದ ಮಾಮೂಲು ಅರ್ಥದಲ್ಲಿ ಪುಂಲಿಂಗದ ಶಬ್ದಗಳಿಂದ ಸೂಚಿಸಲ್ಪಡುವ ಪರಮಾತ್ಮನೇ ಭಾಸಿಸುತ್ತಿದ್ದಾನೆ. “ ಸವಿತೃ” ಶಬ್ದದಲ್ಲಿ ಸೂರ್ಯ ಮತ್ತು ತಂದೆ ಎಂಬ ಅರ್ಥಗಳು ಮಾತ್ರ ಗೋಚರಿಸುತ್ತಿವೆ. “ದೇವಸ್ಯ” ಎಂಬುದೂ “ಯಃ” ಎಂಬುದೂ ಪುಂಲಿಂಗ ಶಬ್ದಗಳು. ಆದರೆ ಮಂತ್ರಕ್ಕೆ “ಗಾಯತ್ರೀ” ಎಂಬ ಸ್ತೀ ಲಿಂಗ ಶಬ್ದ ರೂಢಿಗೆ ಬಂದಿದೆ. ಮಂತ್ರದ ಧ್ಯಾನ ಶ್ಲೋಕದಲ್ಲಿ ಸ್ತ್ರೀ ದೇವತಾ ಸ್ವರೂಪಿಣಿಯನ್ನಾಗಿಯೇ ಗಾಯತ್ರಿಯನ್ನು ನಾವು ಧ್ಯಾನಿಸುತ್ತೇವೆ. ಪರಮಾತ್ಮನನ್ನು ಕೆಲವರು ಪುರುಷ ರೂಪದಲ್ಲಿರುವ ದೇವತಾ ಸ್ವರೂಪದಲ್ಲಿ ಉಪಾಸನೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸ್ತ್ರೀ ರೂಪದಲ್ಲಿ ಉಪಾಸನೆ ಮಾಡುತ್ತಿದ್ದಾರೆ. ಗಾಯತ್ರೀ ಮಂತ್ರವನ್ನು ಎರಡು ರೀತಿಯಲ್ಲಿಯೂ ಅರ್ಥೈಸಲು ಸಾಧ್ಯವಿದೆ. “ಸವಿತೃ” ಶಬ್ದವು “ತೃಚ್” ಎಂಬ ಪ್ರತ್ಯಯದಿಂದ ಬಂದಿರುವ ಶಬ್ದ. ಇಂತಹ ಶಬ್ದಗಳ ಸ್ತ್ರೀಲಿಂಗ ರೂಪ ಪಡೆಯಲು “ಈ” ಎಂಬ ಪ್ರತ್ಯಯವನ್ನು ಸೇರಿಸಬೇಕು. ಆಗ “ತಾಯೀ” ಎನ್ನಲು ಸವಿತೃ + ಈ= ಸವಿತ್ರೀ ಎಂಬ ಶಬ್ದಉಂಟಾಗುತ್ತದೆ. ಆದರೆ “ಮಾತೃ” ಶಬ್ದದಲ್ಲಿ “ತೃಚ್” ಪ್ರತ್ಯಯವಿದ್ದರೂ “ಈ” ಕಾರವು ಸೇರದೆ ಅದು ಋಕಾರಾಂತವೇ ಉಳಿದಿದೆ. ಪ್ರಚೀನ ಕಾಲದಲ್ಲಿ ಈ ಸಾಧ್ಯತೆಯೂ ಇತ್ತೆಂದು ಭಾವಿಸಿದರೆ ಅತಿ ಪ್ರಾಚೀನವಾದ ಗಾಯತ್ರೀ ಮಂತ್ರ್ದದಲ್ಲಿನ ”ಸವಿತೃ” ಶಬ್ದಕ್ಕೆ ತಾಯಿ ಎಂಬ ಅರ್ಥವನ್ನು ಮಾಡಬಹುದು. ವೈದಿಕ ಭಾಷೆಗೂ ಲೌಕಿಕ ಸಂಸ್ಕೃತಕ್ಕೂ ಇಂತಹ ಭೇದಗಳು ಅಲ್ಲಲ್ಲಿ ಕಾಣಿಸುತ್ತಲೇ ಇವೆ. ಮೂರನೇ ಪಾದದಲ್ಲಿನ “ಯೋನಃ” ಎಂಬುದನ್ನು ಯಃ+ನಃ ಎಂದು ಪದ ವಿಭಾಗ ಮಾಡಿದರೆ ಯಃ ಎಂಬುದು ಪುಂಲಿಂಗವಾಗುತ್ತದೆ. ಆದರೆ ಇಲ್ಲಿ ಯಾ+ಊ+ನಃ ಎಂದು ಪದ ವಿಭಾಗ ಮಾಡಿದರೆ ಸ್ತ್ರೀಲಿಂಗ ಶಬ್ದವು ಬರುತ್ತದೆ. ‘ಉ’ ಎಂಬ ಹೊಸ ಶಬ್ದವು ಸಿಗುತ್ತದೆ. ‘ಉ’ ಎಂದರೆ “ದಯೆಯಿಂದ” ಎಂಬ ಅರ್ಥ ಬರುತ್ತದೆ. “ತಾಯಿ” ಕರುಣಾಮಯಿ ಅಲ್ಲವೇ. ಪಾರ್ವತಿಯ ತಾಯಿಯು “ನೀನು ತಪಸ್ಸು ಮಾಡಲು ಹೋಗಬೇಡ” ಎಂದು ಹೇಳುವ ಉದ್ದೇಶದಿಂದ ಮಗಳನ್ನು “ ಉಮಾ” ಎಂದು ಕರುಣೆಯಿಂದ ಸಂಬೋಧಿಸಿದಳು. ಆದುದರಿಂದಲೇ ಪಾರ್ವತಿಗೆ “ಉಮಾ” ಎಂಬ ಹೆಸರು ಬಂತು. ಯಾ, ಉ, ನಃ ಪ್ರಚೋದಯಾತ್ ಎಂದರೆ ಕರುಣೆಯಿಂದ ನಮ್ಮ ಬುದ್ಧಿಗಳನ್ನು ತಾಯಿಯು ಸನ್ಮಾರ್ಗದಲ್ಲಿ ಮುಂದುವರಿಸಲಿ ಎಂಬ ಭಾವವು ಬರುತ್ತದೆ. “ದೇವಸ್ಯ” ಎಂಬಲ್ಲಿ “ಸವಿತುಃ ದೇವಸ್ಯ” ಎಂದರೆ “ತಾಯಿಯ ಕ್ರೀಡೆಯ” ಎಂದು ಅರ್ಥ ಮಾಡುವುದರಿಂದ ಅದು ಪರಮಾತ್ಮರೂಪಿಣಿಯಾದ ತಾಯಿಗೆ ಪುಂಲಿಂಗ ವಿಶೇಷಣವಾಗುವುದು ತಪ್ಪುತ್ತದೆ. ಹೀಗೆ ಗಾಯತ್ರೀ ಮಂತ್ರಕ್ಕೆ ಪುರುಷ ದೇವತಾ ಪರವಾಗಿಯೂ ಸ್ತ್ರೀ ದೇವತಾ ಪರವಾಗಿಯೂ ಅರ್ಥ ಹೇಳಲು ಸಾಧ್ಯವಿದೆ.

            ಸೂರ್ಯನು ಭೂಮಿ ಮತ್ತು ಗ್ರಹಗಳನ್ನು ಹೊರತಳ್ಳಿದ್ದಾನೆ. ಆದರೆ ಆಕರ್ಷಣದಿಂದ ಅದನ್ನು ಹಿಡಿದಿದ್ದಾನೆ. ತನ್ನ ಕಿರಣಗಳಿಂದ ಸಮುದ್ರದ ನೀರನ್ನು ಮೇಲಕ್ಕೆತ್ತಿ ಪುನಃ ಕೆಳಕ್ಕೆ ಬೀಳುವಂತೆ ಮಾಡುತ್ತಿದ್ದಾನೆ. ತಾಯಿಯು ಮಗುವನ್ನು ಗರ್ಭದಿಂದ ಹೊರತಳ್ಳುತ್ತಾಳೆ. ಆದರೆ  

ಪ್ರೀತಿಯಿಂದ ಅದನ್ನು ಎತ್ತಿಕೊಂಡು ಸಲಹುತ್ತಾಳೆ. ಕವಿಯು ಭಾವಗಳಿಂದ ಸೃಷ್ಟಿ ಮಾಡುತ್ತಾನೆ. ಅದನ್ನು ರಕ್ಷಿಸಿ ಬೆಳಸುತ್ತಾನೆ. ಹೀಗೆ ವಿಕರ್ಷಣ ಮತ್ತು ಆಕರ್ಷಣಗಳು ಕೆಲಸ ಮಾಡುತ್ತಿವೆ. ಗಾಯತ್ರೀ ಮಂತ್ರದಲ್ಲಿ ‘ತತ್’ ಎಂಬ ಮೂಲ ಶಕ್ತಿಯು “ಸವಿತೃ” ಎಂದರೆ ಹೆರುವವನು ಅಥವಾ ಹೆರುವವಳು ಅಥವಾ ಸೂರ್ಯ ಈ ರೂಪಗಳಲ್ಲಿ ತನ್ನೊಳಗಿರುವುದನ್ನು ಹೊರತಂದು 

‘ವರೇಣ್ಯಂ’ ಎಂದರೆ ಪ್ರೀತಿಸುತ್ತಾ ಮತ್ತು ತನ್ನೆಡೆಗೆ ಸೆಳೆಯುತ್ತಾ “ಭರ್ಗಃ” ಎಂದರೆ ಶಕ್ತಿ ರೂಪದ ಪರಿಣಾಮವನ್ನುಂಟುಮಾಡುತ್ತಿದೆ. ‘ದೇವಸ್ಯ’ ಎಂದರೆ ಇದು ಅವನ ಲೀಲೆ. ಈ ಅರ್ಥದಲ್ಲಿ ಆಕರ್ಷಣ ವಿಕರ್ಷಣ ರೂಪವಾದ ದ್ವಂದ್ವಗಳ ಸೂಚನೆಯು ಈ ಮಂತ್ರದಲ್ಲಿದೆ. ‘ವರೇಣಿಯಂ’ ಎಂದರೆ ಆವರಿಸಿರುವುದು ಎಂಬ ಅರ್ಥ ಇರುವುದರಿಂದ ಮುಚ್ಚುವುದು ಎಂಬ ಭಾವ ಬರುತ್ತದೆ. ಸವಿತೃ ಶಬ್ದದಲ್ಲಿ ಬೆಳಕನ್ನು ಕೊಡುವ ಭಾವವಿದೆ. ‘ವರೇಣಿಯಂ’ ನಲ್ಲಿ ತದ್ವಿರುದ್ಧವಾದ ‘ಮುಚ್ಚುವಿಕೆ’ ಎಂಬ ಭಾವವಿದೆ. ದ್ವಂದ್ವ ರೂಪದಲ್ಲಿರುವ ಬೆಳಕು, ಕತ್ತಲೆ, ಸುಖ, ದುಃಖ ಎಂಬೆಲ್ಲವೂ ಈ ಎರಡು ಶಬ್ದಗಳಲ್ಲಿ ಸ್ಫುರಿಸುತ್ತಿವೆ. ‘ ವಿಶ್ವ ವ್ಯಾಪಾರವೆಂಬ ಲೀಲೆಯನ್ನು ಧ್ಯಾನಿಸೋಣ’ ಎಂಬ ಮೊದಲಿನ ಎರಡು ಪಾದಗಳ ಭಾವದಲ್ಲಿ ಪ್ರವೃತ್ತಿ ಸೂಚಿತವಾಗಿದೆ. ಆದರೆ ಧೀಯಃ= ಬುದ್ಧಿಯಿಂದಾಚೆಗೆ (ಪಂಚಮೀ ವಿಭಕ್ತಿ) ಯಃ= ಆ ಪರಮಾತ್ಮನು ನಃ= ನಮ್ಮನ್ನು ಪ್ರಚೋದಯಾತ್= ಹೋಗುವಂತೆ ಮಾಡಲಿ ಎಂಬ ಮೂರನೇ ಪಾದದಲ್ಲಿ ನಿವೃತ್ತಿ ಸೂಚಿತವಾಗಿದೆ. ಇಲ್ಲಿಯವರೆಗೆ ವಿಶ್ವದಲ್ಲಿನ ಒಂದು ಮತ್ತು ಎರಡು ಸಂಖ್ಯೆಗಳಿಂದ ಸೂಚಿತವಾದ ಮೂಲ ತತ್ವಗಳ ಚರ್ಚೆ ಸಂಗ್ರಹವಾಗಿ ಮಾಡಲ್ಪಟ್ಟಿತು. ಮುಂದೆ ಮೂರನೇ ಸಂಖ್ಯೆಗೆ ಹೋಗೋಣ.  

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)