ಗಾಯತ್ರಿ

                                 1-7-1993

    ಪರಮಾತ್ಮ, ಆತನ ಅಂಶಗಳಾದ ಜೀವಾತ್ಮರು, ಪರಮಾತ್ಮನ ಮೂಲ ಸ್ವರೂಪವಾದ ಆನಂದ, ಜೀವಾತ್ಮರು ನಿರಂತರ ಬಯಸುತ್ತಿರುವ ಆನಂದದ ನಾನಾ ಛಾಯೆಗಳು, ಪರಮಾತ್ಮನ ಲೀಲೆಯಾದ ಸೃಷ್ಟಿಸ್ಥಿತಿಲಯಾತ್ಮಕವಾದ ವಿಶ್ವವ್ಯಾಪಾರ, ಇದಕ್ಕಾಗಿ ಚಿತ್ತಿನ ನಾನಾ ರೂಪಗಳು, ಈ ನಾನಾತತ್ವಕ್ಕಾಗಿ ಕತ್ತಲೆ, ಬೆಳಕು, ಸುಖ ದುಃಖ   ದ್ವಂದ್ವಗಳು, ಸತ್ವ, ರಜಸ್ತಮೋಗುಣಗಳು, ಈ ಲೀಲೆಗೆ ಬೇಕಾಗಿರುವ ಶಕ್ತಿಯ ನಾನಾ ರೂಪಗಳು, ನಾನಾ ರೀತಿಯ ವಸ್ತುಗಳು, ಈ ರೀತಿಯಾಗಿರುವ ಬ್ರಹ್ಮ ತತ್ವವನ್ನು ಗಾಯತ್ರೀ ಮಂತ್ರವು ಅದರಲ್ಲಿನ ಪದಗಳ ವಾಚ್ಯಾರ್ಥ, ಲಕ್ಷ್ಯಾರ್ಥ ವ್ಯಂಗ್ಯಾರ್ಥಗಳಿಂದ ತೋರಿಸುತ್ತಿದೆ. ಅಲ್ಲದೆ ಪದಗಳ ಜೋಡಣೆಯಲ್ಲಿನ ಶಿಲ್ಪದಿಂದಲೂ ಅನೇಕ ವ್ಯಂಗ್ಯರ್ಥಗಳನ್ನು ಕೊಡುತ್ತ ತತ್ವವನ್ನು ಸಾರುತ್ತಿದೆ. ಇದನ್ನು ಪರಿಶೀಲಿಸಲು ಒಂದು, ಎರಡು, ಮೂರು, ನಾಲ್ಕು, ಐದು, ಆರು ಇತ್ಯಾದಿ ಸಂಖ್ಯೆಗಳಿಂದ ಪ್ರಸಿದ್ಧವಾದ ವಿಶ್ವದ ಅಂಶಗಳನ್ನು ಮುಂದಿಟ್ಟುಕೊಳ್ಳಬೇಕು. ಉದಾಹರಣೆಗೆ :

            ಪರಮಾತ್ಮನು ಒಬ್ಬನೇ. ಪರಮ ಸತ್ಯವು ಒಂದೇ. ಅಲ್ಪ ಸತ್ಯಗಳು ನಾನಾ ವಿಧ. ಆ ಪರಮಾತ್ಮನೇ ಪ್ರಕೃತಿ, ಪುರುಷ ಎಂಬ ಎರಡು ಭೇದಗಳಲ್ಲಿದ್ದಾನೆ. ಭೌತಿಕ ಪ್ರಪಂಚದಲ್ಲಿ ಋಣಾತ್ಮಕ ಮತ್ತು ಧನಾತ್ಮಕಗಳು ಆಕರ್ಷಣ, ವಿಕರ್ಷಣಗಳು, ಬೆಳಕು, ಕತ್ತಲೆ, ಸುಖ, ದುಃಖ, ಗಂಡಸು, ಹೆಂಗಸು, ಇತ್ಯಾದಿ ಎರಡೆರಡು ಭೇದಗಳು ಸಹ ಇವೆ. 

           ನನಗೆ ತೋಚಿದ ಪ್ರಸಿದ್ಧವಾದ ಮೂರು ಮೂರು ಭೇದಗಳ ಪಟ್ಟಿ ಹೀಗಿರುತ್ತದೆ:- 

ಅ. ದೇಶ ಸಂಬಂಧವಾದವು-

೧) ಭೂಲೋಕ, ಭುವರ್ಲೋಕ, ಸುವರ್ಲೋಕ.

೨) ಊರ್ಧ್ವಲೋಕ, ಮಧ್ಯಲೋಕ, ಅಧೋಲೋಕ.

೩) ಅಂಡ, ಪಿಂಡ, ಬ್ರಂಹಾಂಡಗಳು.

೪) ಆದಿ, ಮಧ್ಯ, ಅಂತಗಳು.

ಆ. ಕಾಲ ಸಂಬಂಧವಾದವು-

೫) ಭೂತ, ವರ್ತಮಾನ, ಭವಿಷ್ಯ.

೬) ಹ್ರಸ್ವ, ದೀರ್ಘ, ಪ್ಲುತ ಸ್ವರಗಳು.

೭) ಪ್ರಾತಃಕಾಲ, ಮಧ್ಯಾಹ್ನ, ಸಾಯಂಕಾಲ.

ಇ. ವಸ್ತುಗಳು-

೮) ಸೂರ್ಯ, ಚಂದ್ರ, ಅಗ್ನಿ.

೯) ಸತ್ತು, ಚಿತ್ತು ಮತ್ತು ಆನಂದ.

೧೦) ಅಲೆಯಲ್ಲಿನ ಮೇಲಕ್ಕೇರುವ ಭಾಗ, ಎತ್ತರದಲ್ಲಿರುವ ಮಧ್ಯ ಭಾಗ ಮತ್ತು ಇಳಿಮುಖವಾಗುವ ಭಾಗ.

೧೧) ಜಡ ವಸ್ತುಗಳು, ಜೀವಿಗಳು, ಬುದ್ಧಿವಂತ ಜೀವಿಗಳು.

೧೨) ಜ್ಞಾನ, ಜ್ಞಾತೃ, ಜ್ಞೇಯ.

೧೩) ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳು.

೧೪) ಋಗ್ವೇದ, ಯಜುರ್ವೇದ, ಸಾಮವೇದ.

ಈ. ಗುಣಗಳು ಅಥವಾ ಅವಸ್ಥೆಗಳು-

೧೫) ಸತ್ವ, ರಜಸ್ಸು, ತಮಸ್ಸು.

೧೬) ಜಾಗ್ರತ್, ಸ್ವಪ್ನ, ಸುಷುಪ್ತಿ.

೧೭) ಉದಾತ್ತ, ಅನುದಾತ್ತ, ಸ್ವರಿತ.

೧೮) ವಾಚ್ಯಾರ್ಥ, ಲಕ್ಷ್ಯಾರ್ಥ, ವ್ಯಂಗ್ಯಾರ್ಥ.

೧೯) ನೀಲಿ, ಕೆಂಪು, ಹಳದಿ.

೨೦) ಸತ್ಯಂ, ಶಿವ, ಸುಂದರಂ.

೨೧) ವಾತ, ಪಿತ್ತ, ಸ್ಲೇಷ್ಮಗಳು.

೨೨) ಉತ್ತಮ, ಮಧ್ಯಮ, ಅಧಮ.

೨೩) ದೇವ, ಮನುಷ್ಯ, ಅಸುರ.

೨೪) ಭಕ್ತಿ, ಜ್ಞಾನ, ವೈರಾಗ್ಯ.

ಉ. ಕ್ರಿಯೆಗಳು-

೨೫) ಸೃಷ್ಟಿ, ಸ್ಥಿತಿ, ಲಯ.

೨೬) ದಮ, ದಾನ, ದಯೆ.

ಊ. ಕರ್ತೃಗಳು-

೨೭) ಪ್ರಕೃತಿ, ಜೀವ, ಈಶ್ವರ.

೨೮) ಬ್ರಹ್ಮ, ವಿಷ್ಣು, ರುದ್ರ.

ಋ. ಕರ್ಣಗಳು-

೨೯) ಮನಸ್ಸು, ವಾಕ್ಕು, ಕಾಯ.

೩೦) ಯಂತ್ರ, ತಂತ್ರ, ಮಂತ್ರ.

          ನಾಲ್ಕು ವಸ್ತುಗಳಾಗಿ ಪ್ರಸಿದ್ಧವಾದವುಗಳು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳು ಇತ್ಯಾದಿಗಳು.

           ಐದು ರೂಪಗಳಲ್ಲಿರುವುವು ಪಂಚ ಭೂತಗಳು, ಪಂಚ ಕೋಶಗಳು ಇತ್ಯಾದಿಗಳು. 

           ಆರು ಸಂಖ್ಯೆಯಲ್ಲಿರುವುವು ಕಾಮ ಕ್ರೋಧಾದಿಗಳು, ಷಟ್ಚಕ್ರಗಳು ಇತ್ಯಾದಿಗಳು.

           ಏಳಕ್ಕೆ ಸಪ್ತ ಧಾತುಗಳು ಮುಂತಾದುವು ಉದಾಹರಣೆಗಳು.

           ಮೊದಲು ಗಾಯತ್ರೀ ಮಂತ್ರದಲ್ಲಿ ಏಕ ಸಂಖ್ಯೆಯ ವಿಷಯವನ್ನು ಕುರಿತು ವಿಚಾರಿಸೋಣ. ಈ ಮಂತ್ರದ ಮೊದಲನೇ ಪದವಾದ ‘ತತ್’ ಎಂಬುದನ್ನು ಇಲ್ಲಿ ನಾವು ಗಮನಿಸಬೇಕು. ಇದು ನಪುಂಸಕಲಿಂಗದಲ್ಲಿರುವುದರಿಂದ ‘ಸ್ತ್ರೀ, ಪುಂ’ ಎಂಬ ಎರಡು ಭೇದಗಳಿಗೆ ಅವಕಾಶವಿಲ್ಲ. ಈ ಮಂತ್ರದಲ್ಲಿನ ವಾಕ್ಯದಲ್ಲಿ ಬೇರೆ ಪದಗಳಿಗೂ ಇದಕ್ಕೂ ಸಂಬಂಧ ಮಾಡಲು ಸಾಧ್ಯತೆ ಇದ್ದರೂ ಮಾಡಲೇ ಬೇಕೆಂದಿಲ್ಲ. ಇದನ್ನೇ ಪ್ರತ್ಯೇಕವಾಗಿ ತೆಗೆದುಕೊಂಡು ಪರಮಾತ್ಮನು ಪರಮ ಸತ್ಯವು ಎಂಬ ಭಾವವನ್ನು ಇದರಿಂದ ಪಡೆಯಬಹುದು. ಕಾರಣ ಸಂಸ್ಕೃತ ಭಾಷೆಯಲ್ಲಿ ‘ತತ್’ ಎಂಬ ಶಬ್ಡವು ಪ್ರಾಚೀನ ಕಾಲದಲ್ಲಿ ಪರೋಕ್ಷವಾಗಿರುವುದನ್ನು ಸೂಚಿಸುತ್ತಿತ್ತು. ಪ್ರತ್ಯಕ್ಷವಾಗಿ, ದೂರದಲ್ಲಿರುವವನಿಗೆ “ ಅಸೌ” ಎಂದು ಹೇಳುತ್ತಿದ್ದರು. ‘ ಅಸಾವಾದಿತ್ಯೋ ಬ್ರಹ್ಮ’ ಎಂದರೆ ದೂರದಲ್ಲಿರುವ ಆ ಸೂರ್ಯನು ಬ್ರಹ್ಮನು ಎಂದರ್ಥ. ಆದುದರಿಂದ ತಚ್ಛಬ್ದವು ಪರೋಕ್ಷದಲ್ಲಿರುವ ವಿಶ್ವ ಮೂಲವಾದ ಪರಮಾತ್ಮನ ಅಥವಾ ಏಕೈಕ ಪರಮಸತ್ಯದ ಪ್ರತೀಕವಾಗಿದೆ. 

           ಯೋಗ ಯಾಜ್ಞವಲ್ಕ್ಯದಲ್ಲಿ ಮುಂದಿನಂತೆ ವಿವರಣೆ ಇರುತ್ತದೆ:-

 ತಚ್ಛಬ್ದೇನತು ಯಚ್ಛಬ್ದೋ ಬೋದ್ಧವ್ಯಃ ಸತತಂ ಬುಧೈಃ

 ಉದಾಹೃತೇತು ಯಚ್ಛಬ್ದೇ ತಚ್ಛಬ್ದಃ ಸ್ಯಾದುದಾಹೃತಃ

             ಗಾಯತ್ರೀ ಮಂತ್ರದಲ್ಲಿ ಮೂರನೇ ಪಾದದಲ್ಲಿ “ಯಃ” ಎಂಬ ಶಬ್ದವೂ ಪ್ರಾರಂಭದ ತತ್ಛಬ್ದವೂ ಒಂದೇ ಇದರ ಭಾವ. ನಮ್ಮ ಬುದ್ಧಿಯನ್ನು ಮುಂದೆ ಕೊಂಡೊಯ್ಯುವ ಪರಮ ಸತ್ಯದ ಸ್ವರೂಪವೇ ಈ ಎರಡು ಶಬ್ದಗಳಿಂದಲೂ ಸೂಚಿಸಲ್ಪಟ್ಟಿರುವುದು.

             ಅಲ್ಲದೆ ಭಗವದ್ಗೀತೆಯಲ್ಲಿಯೂ ಓಂ ತತ್ಸದ್ ಇತಿ ನಿರ್ದೇಶಃ ತ್ರಿವಿಧೋ ಬ್ರಹ್ಮಣಃ ಸ್ಮೃತಃ ಎಂದು ಹೇಳಿರುವುದರಿಂದ ‘ ಓಂ’ಕಾರವು ಹೇಗೆ ಪರಬ್ರಹ್ಮ ನಿರ್ದೇಶಕವೋ “ತತ್” ಶಬ್ದವೂ ಹಾಗೆಯೇ.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)