Article of the Month June  2019

                                       ಗಾಯತ್ರಿ

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

1-6-1993

                                      ಗಾಯತ್ರಿ

                       ಗಾಯತ್ರಿ ಮಂತ್ರದಲ್ಲಿನ ಪ್ರತಿ ಒಂದು ಪದದ ಅರ್ಥವನ್ನು ಮೊದಲು ತಿಳಿದುಕೊಳ್ಳಬೇಕು. ಈ ಸಂದರ್ಭದಲ್ಲಿ ಆಯಾ ಪದಗಳ ವ್ಯುತ್ಪತ್ತಿಯನ್ನು ಸಹ ಗಮನಿಸಬೇಕು. ಈ ವ್ಯುತ್ಪತ್ತಿಯಿಂದ ಮಂತ್ರವನ್ನು ಮೇಲಿಂದ ಮೇಲೆ ಧ್ಯಾನಿಸುತ್ತಿದ್ದರೆ ಧ್ವನಿರೂಪದಲ್ಲಿ ನವನವವಾಗಿ ಅನೇಕ ಉತ್ತಮ ಭಾವನೆಗಳು ಸ್ಫುರಿಸುತ್ತವೆ. ಪದಗಳ ಜೋಡಣೆ ಅಥವಾ ಶಿಲ್ಪದಿಂದಲೂ ಧ್ವನಿರೂಪವಾಗಿ ಅನೇಕ ಉತ್ತಮ ಭಾವನೆಗಳು ಸ್ಫುರಿಸುತ್ತವೆ. ಈ ರೀತಿಯಾದ ಪ್ರಯತ್ನವನ್ನು ನನ್ನ ಅಲ್ಪಮತಿಗೆ ಸಾಧ್ಯವಾದಷ್ಟು ಮತ್ತು ಈ ಪತ್ರಿಕೆಯ ಗಾತ್ರವನ್ನು ಗಮನದಲ್ಲಿತ್ತುಕೊಂಡು ಸೂಚನಾಪ್ರಾಯವಾಗಿ ಮಾಡುತ್ತಿದ್ದೇನೆ. 

                  ಗಾಯತ್ರಿಯ ಶಿಲ್ಪದಲ್ಲಿ ಮೂರು ಪಾದಗಳಿವೆ. ಇವಲ್ಲದೆ “ಪರೋರಜಸಿ ಸಾವದೋಂ” ಎಂಬ ನಾಲ್ಕನೇ ಪಾದವೊಂದಿದೆ. ಅದನ್ನು ಸನ್ಯಾಸಿಗಳು ಮಾತ್ರ ಜಪಿಸುತ್ತಾರೆ. ಪ್ರಕೃತ ನಾನು ಮೂರು ಪಾದಗಳ ಗಾಯತ್ರೀ ಮಂತ್ರದ ವಿಷಯವಾಗಿ ಮಾತ್ರ ವಿವರಿಸಲು ಪ್ರಯತ್ನಿಸುತ್ತೇನೆ. ಗಾಯತ್ರಿಯ ಮೂರು ಪಾದಗಳ ವಿಷಯವಾಗಿ ಮನುಸ್ಮೃತಿಯು ಋಗ್ಯಜುಸ್ಸಾಮಗಳೆಂಬ ಮೂರು ವೇದಗಳಿಂದ ಗಾಯತ್ರಿಯ ಮೂರು ಪಾದಗಳು ಸಾರಭೂತವಾಗಿ ತೆಗೆಯಲ್ಪಟ್ಟಿವೆ ಎಂದು ತಿಳಿಸುತ್ತದೆ. ಹಾಗೆಯೇ ಭೂಃ, ಭುವಃ, ಸ್ವಃ ಎಂಬ ಮೂರು ವ್ಯಾಹೃತಿಗಳೂ ಮತ್ತು ‘ಓಂ’ ಕಾರದಲ್ಲಿನ ಅಕಾರ ಉಕಾರ ಮಕಾರಗಳೂ ಹೀಗೆಯೇ ಬಂದಿವೆಯೆಂದು ತಿಳಿಸುತ್ತದೆ. “ಓಂ ಭೂರ್ಭುವಸ್ಸ್ವಃ ತತ್ಸ ವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮ ಹಿ ಧಿಯೋಯೋ ನಃ ಪ್ರಚೋದಯಾತ್” ಎಂಬುದು ಜಪ ಮಾಡಬೇಕಾದ ಗಾಯತ್ರೀ ಮಂತ್ರದ ಸ್ವರೂಪ. ಇದು ಬ್ರಹ್ಮನ ಮುಖ ಅಂದರೆ ಪರಬ್ರಹ್ಮ ತತ್ವವನ್ನು ಅರಿಯಲು ದ್ವಾರವೆಂದು ಮನುಸ್ಮೃತಿಯು ತಿಳೀಸುತ್ತಿದೆ. ಇದು ಹೇಗೆಂದು ವಿಚಾರಿಸೋಣ.

                   ವೇದಗಳಲ್ಲಿ ಪರಮಾತ್ಮನನ್ನು ಬ್ರಹ್ಮವೆಂದು ಕರೆದಿದ್ದಾರೆ. ಅಲ್ಲದೆ ಈ ಬ್ರಹ್ಮ ಶಬ್ದಕ್ಕೆ “ವೇದ”ವೆಂಬ ಅರ್ಥವೂ ಇದೆ. ವೇದವೆಂದರೆ ಜ್ಞಾನ. ಬ್ರಹ್ಮವೆಂಬ ಶಬ್ದವು “ಬೃಂಹ್” ಎಂಬ ಧಾತುವಿನಿಂದ ಬಂದಿದೆ. ಇದಕ್ಕೆ ದೊಡ್ಡದಾಗಿ ಬೆಳೆದಿರುವುದು ಎಂದು ಮೂಲವಾದ ಅರ್ಥ. ಈ ವಿಶ್ವವೇ ಬ್ರಹ್ಮ. ವಿಶ್ವದಲ್ಲಿ ಭಿನ್ನ ಭಿನ್ನ ವಸ್ತುಗಳಿದ್ದರೂ ಅವೆಲ್ಲವೂ ಮೂಲಭೂತವಾದ ಒಂದೇ ತತ್ವದ ಬೆಳವಣಿಗೆಯಲ್ಲಿನ ಸ್ವರೂಪಗಳು. ಆ ಮೂಲತತ್ವವು ಈ ವಿಶ್ವಕ್ಕೆ ನಿರ್ಮಾಣ ಶಕ್ತಿಯಾಗಿ ಮಾತ್ರವಿಲ್ಲ. ಮಡಿಕೆಗೆ ಮಣ್ಣು ಹೇಗೆಯೋ ಹಾಗೆ ವಿಶ್ವವೆಲ್ಲವೂ ತಾನೇ ಆಗಿರುವುದು ಈ ಮೂಲತತ್ವ. ಇಂತಹ ತಾನೇ ಬೆಳೆದು ನಾನಾ ರೂಪವಾದ ವಿಶ್ವವಾಗಿ ಕೊನೆಗೆ ತನ್ನಲ್ಲೇ ಲೀನ ಮಾಡಿಸಿಕೊಳ್ಳುವ ಕೇವಲ ಚೈತನ್ಯರೂಪನಾದ ತತ್ವವು ಯಾವುದಿದೆಯೋ ಅದೇ ಬ್ರಹ್ಮ.  ಅಂತಹ ಬ್ರಹ್ಮನನ್ನು ತಿಳಿಸುವುದರಿಂದ ವೇದಗಳು ಬ್ರಹ್ಮ. ವೇದಗಳ ಸಾರಾಭೂತವಾದ ಗಾಯತ್ರಿ ಮಂತ್ರವು ಬ್ರಹ್ಮಸ್ವರೂಪವೇ ಆಗಿದೆ.

            ಆಟಂಬಾಂಬನ್ನು ತಯಾರಿಸಿರುವ ಇಂದಿನ ವಿಜ್ಞಾನವು ವಿಶ್ವದಲ್ಲಿನ ಭಿನ್ನ ಭಿನ್ನ ವಸ್ತುಗಳೆಲ್ಲಾ ೯೨ ಮೂಲ ಪದಾರ್ಥಗಳಿಂದ ಬಂದಿರುವುದೆಂದು ತಿಳಿಸುವುದಲ್ಲದೆ ಇದೆಲ್ಲಾ ಒಂದೇ ಶಕ್ತಿಯ ಸ್ವರೂಪವೆಂದು ತೋರಿಸಿದೆ. ಈ ಶಕ್ತಿ ಹೇಗೆ ಬಂದಿದೆ? ಇದರ ಮೂಲ ಸ್ವರೂಪವೇನು? ಎಂಬುದು ವಿಜ್ಞಾನಿಗಳಿಗೆ ತಿಳಿದಿಲ್ಲ. ನಮ್ಮಲ್ಲಿ ಶಕ್ತಿ ಇದೆ. ಅದರಿಂದಲೇ ನಮ್ಮ ಶರೀರ ಕೆಲಸ ಮಾಡುತ್ತಿರುವುದು. ಆದರೆ ಈ ಶಕ್ತಿಗಿಂತಲೂ ಸೂಕ್ಷ್ಮವಾದ ಮನಸ್ಸೆಂಬುದು ಸಹ ಇದೆ. ಇದಕ್ಕೇ ‘ಚಿತ್’ ಎಂದು ಹೆಸರು. ವಸ್ತು ಮತ್ತು ಶಕ್ತಿ “ಸತ್” ಎನಿಸಿಕೊಳ್ಳುತ್ತದೆ. ಈ ‘ಚಿತ್’ ಎಂಬುದು ‘ಸತ್’ ನ ಸ್ವರೂಪವನ್ನು ನಿರ್ಣಯಿಸುತ್ತ ವಿಶ್ವ ವ್ಯಾಪಾರವನ್ನು ನಡೆಸುತ್ತಿರುತ್ತದೆ. ಇದಕ್ಕೆ ಪ್ರೇರಣೆಯಾಗಿ ಆನಂದವಿರುತ್ತದೆ. ಆನಂದಕ್ಕಾಗಿಯೇ ನಮ್ಮ ಮನಸ್ಸು ಹಾತೊರೆಯುತ್ತಾ ಕೆಲಸ ಮಾಡುತ್ತಿರುವುದು. ಅದಕ್ಕನುಗುಣವಾಗಿಯೆ ಜಡವಾದ ದೇಹದಲ್ಲಿ ಪ್ರಾಣಶಕ್ತಿಯು ಕೆಲಸ ಮಾಡುತ್ತಿರುವುದು. ವಿಶ್ವ ವ್ಯಾಪಾರವೂ ಹೀಗೆಯೇ. ಈ ಆನಂದಕ್ಕೂ ಮೂಲಭೂತವಾಗಿರುವುದು ಆತ್ಮ. ವಿಶ್ವಕ್ಕೂ ಆತ್ಮವಿದೆ. ಅದೇ ಪರಮಾತ್ಮ. ಆ ಪರಮಾತ್ಮನಿಂದಲೇ ಚರಾಚರವಾದ ವಿಶ್ವವು ಉಧ್ಭವಿಸಿ ನಾಟಕವನ್ನಾಡಿ ಅವನಲ್ಲಿಯೇ ಲೀನವಾಗುತ್ತಿದೆ. ಇದು ಆತನ ಆಟ. ಲೀಲೆ. “ “ಬ್ರಹ್ಮ” ಶಬ್ದದಲ್ಲಿ ಇಷ್ಟು ಭಾವಗಳು ಅಡಗಿವೆ. ವೇದಗಳೂ ಮತ್ತು ಅವುಗಳ ಸಾರವಾದ ಗಾಯತ್ರಿಯು ಈ ಬ್ರಹ್ಮ ಸಂಬಂಧವಾದ ಜ್ಞಾನವನ್ನು ಹೇಗೆ ಕೊಡುತ್ತಿದೆ ಎಂಬುದನ್ನು ಮುಂದೆ ಗಮನಿಸೋಣ.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)