Article of the Month May 2019

                                  ಗಾಯತ್ರಿ

ಲೇಟ್ ಶ್ರೀ ಲಂಕಾ ಕೃಷ್ಣಮೂರ್ತಿಯವರು “ಗಾಯತ್ರಿ” ಎಂಬ ಶೀರ್ಷಿಕೆಯಲ್ಲಿ ಸರಣಿ ಲೇಖನಗಳನ್ನು “ಧರ್ಮಪ್ರಭ” ಪತ್ರಿಕೆಯಲ್ಲಿ ಬರೆದಿರುತ್ತಾರೆ. ಆ ಲೇಖನಗಳನ್ನು ಈಗ ಪ್ರಸ್ತುತ ಪಡಿಸುತ್ತಿದ್ದೇವೆ.            

                                   ಗಾಯತ್ರಿ

     ಏಪ್ರಿಲ್ ತಿಂಗಳ “ಧರ್ಮ ಪ್ರಭ” ಪತ್ರಿಕೆಯಲ್ಲಿನ “ಓದುಗರ ಪತ್ರಗಳು” ಎಂಬ ಶೀರ್ಷಿಕೆಯಲ್ಲಿ ಶ್ರೀ ಗಾಯತ್ರಿ ದೇವಿ ದೇವಸ್ಥಾನದ ಅರ್ಚಕರು ಅಪೇಕ್ಷಿಸಿದಂತೆ ನಾನು ಈ ಸಂಚಿಕೆಯಿಂದ “ಗಾಯತ್ರಿ”ಯ ವಿಷಯವಾಗಿ ನನ್ನ ಅಲ್ಪಮತಿಗೆ ತೋಚುವ ಭಾವನೆಗಳನ್ನು ಬರೆಯುತ್ತಿದ್ದೇನೆ. ಗಾಯತ್ರೀ ಮಂತ್ರವು ನಮಗೆಲ್ಲರಿಗೂ ಮೊದಲು ಬೋಧಿಸುತ್ತಿರುವ ವಿಷಯವೆಂದರೆ ನಮ್ಮೆಲ್ಲರ ಬುದ್ಧಿಯನ್ನು ಸರಿಯಾದ ಲಕ್ಷ್ಯದ ಕಡೆ ಹುರಿದುಂಬಿಸುತ್ತಿರುವುದು ಈ ಜಗತ್ತಿನ ಮೂಲ ಚೈತನ್ಯವಾದ ಪರಮಾತ್ಮ ಶಕ್ತಿ ಎಂಬುದು. ಆದುದರಿಂದ ಮೊದಲು ಆ ಪರಮಾತ್ಮ ಶಕ್ತಿಯಾದ ಗಾಯತ್ರೀ ದೇವಿಗೆ ಭಕ್ತಿ ಪೂರ್ವಕ ನಮಸ್ಕಾರ ಮಾಡಿ ನನ್ನ ಬರವಣಿಗೆಯನ್ನು ಆರಂಭಿಸುತ್ತಿದ್ದೇನೆ.

          ಗಾಯತ್ರೀ ಮಂತ್ರವು ಹೀಗಿರುತ್ತದೆ.

      ತತ್ ಸವಿತುರ್ವರೇಣಿಯಂ

      ಭರ್ಗೋ ದೇವಸ್ಯ ಧೀಮಹಿ

      ಧಿಯೋ ಯೋನಃ ಪ್ರಚೋದಯಾತ್

  ಇದರಲ್ಲಿ 8 ಅಕ್ಷರಗಳ 3 ಪಾದಗಳಿರುವುದನ್ನು ಕಾಣಬಹುದು. ಇದರಲ್ಲಿನ ಪದಗಳು ಹೀಗಿವೆ;-

      ತತ್, ಸವಿತುಃ, ವರೇಣಿಯಂ,

      ಭರ್ಗಃ, ದೇವಸ್ಯ, ಧೀಮಹಿ,

      ಧಿಯಃ, ಯಃ, ನಃ,  ಪ್ರಚೋದಯಾತ್

ಈ ಪದಗಳ ಅರ್ಥ ಹೀಗಿರುತ್ತದೆ:-

       ‘ತತ್’ ಎಂದರೆ ಅದು ಎಂಬ ಅರ್ಥ ರೂಢಿಯಲ್ಲಿದೆ.  ಆಂಗ್ಲ ಭಾಷೆಯ ‘That’ ಎಂಬುದು ಇದಕ್ಕೆ ಸಂಬಂಧಿಸಿದೆ. ‘ಸವಿತುಃ’ ಎಂದರೆ  ಸೂರ್ಯನ ಅಥವಾ ಜನಕನ ಎಂಬ ಅರ್ಥ ಬರುತ್ತದೆ. ‘ವರೇಣಿಯಂ’ ಎಂದರೆ ಆವರಿಸಿಕೊಂಡಿರುವುದು. ವರಿಸಲು ಅಂದರೆ ಅಪೇಕ್ಷಿಸಿ ನಮ್ಮದನ್ನಾಗಿಕೊಳ್ಳಲು ಯೋಗ್ಯವಾದುದು ಎಂಬ ಅರ್ಥಗಳು ಬರುತ್ತವೆ. ಭರ್ಗಃ ಎಂದರೆ ‘ಹುರಿಯುವಿಕೆ’ ಎಂದು ಅರ್ಥ. ಅಂದರೆ ಪರಿಣಾಮವನ್ನುಂಟು ಮಾಡುವುದೆಂದರ್ಥ. ದೇವಸ್ಯ ಎಂದರೆ ‘ದೇವನ’ ಎಂದು ಅರ್ಥ. ದೇವ ಶಬ್ದಕ್ಕೆ ಮುಖ್ಯವಾಗಿ ಪ್ರಕಾಶಿಸುತ್ತಿರುವನು ಮತ್ತು ಕ್ರೀಡಿಸುತ್ತಿರುವನು ಎಂಬ ಅರ್ಥಗಳಿವೆ. ‘ಧೀಮಹಿ’ ಎಂದರೆ ನಾವೆಲ್ಲರೂ ಧ್ಯಾನಿಸಬೇಕು ಎಂದು ಅರ್ಥ. ಧೀಯಃ ಎಂದರೆ ಬುದ್ಧಿಗಳನ್ನು ಎಂದು. ‘ಯಃ’ ಎಂದರೆ ಯಾವನಾದರೆ, ‘ನಃ’ ಎಂದರೆ ನಮ್ಮ. “ಪ್ರಚೋದಯಾತ್” ಎಂದರೆ ಸರಿಯಾಗಿ ನಡೆಸುವನು ಎಂಬುದಾಗಿ ಅರ್ಥಗಳಿವೆ.

           ಯಾವನು ನಮ್ಮ ಬುದ್ಧಿಗಳನ್ನು ಮುಂದಕ್ಕೆ ಸರಿಯಾಗಿ ಕೊಂಡೊಯ್ಯುವನೋ ಆ ಸೂರ್ಯರೂಪಿಯು, ಜಗತ್ಪಿತನೂ ಆಗಿ ಪ್ರಕಾಶಿಸುತ್ತಿರುವ ಮತ್ತು ಕ್ರೀಡಿಸುತ್ತಿರುವವನಿಂದುಂಟಾಗುತ್ತಿರುವ ರಮಣೀಯವಾದ ಮತ್ತು ವಿಶ್ವವ್ಯಾಪ್ತವಾದ ಕ್ಷಣ ಕ್ಷಣ ಪರಿಣಾಮವನ್ನು ನಾವು ಧ್ಯಾನಿಸುತ್ತಿರಬೇಕು ಎಂಬುದು ಗಾಯತ್ರೀ ಮಂತ್ರದ ಸ್ಥೂಲವಾದ ಅರ್ಥ. ಸಂಸ್ಕೃತ ಭಾಷೆಯಲ್ಲಿ ಒಂದೊಂದು ಶಬ್ದಕ್ಕೂ ‘ವ್ಯುತೃತ್ತಿ’ ಎಂದರೆ ಆ ಶಬ್ದವು ಹೇಗೆ ಹುಟ್ಟಿದೆ ಎಂಬ ವಿಷಯದ ಜ್ಞಾನವಿರುತ್ತದೆ. ಇದು ಮಂತ್ರದ ಭಾವನೆಯಲ್ಲಿ ಬಹಳ ಉಪಕರಿಸುತ್ತದೆ. ಅಲ್ಲದೆ ಈ ಭಾಷೆಯಲ್ಲಿ ಪ್ರತಿ ಓಂದು ಪದವೂ ಹಿಂದೆ ಮುಂದೆ ಬರುವ ಇತರ ಪದಗಳ ಸಂಬಂಧವಿಲ್ಲದೆಯೇ ತನ್ನ ಉದ್ದಿಷ್ಟಾರ್ಥವನ್ನು ಕೊಡಲು ಸ್ವಯಂಪೂರ್ಣವಾಗಿರುತ್ತದೆ. ಆದುದರಿಂದ ಒಂದು ವಾಕ್ಯದಲ್ಲಿನ ಪದಗಳನ್ನು ಯಾವ ರೀತಿಯಲ್ಲಿ ಬೋಧಿಸಿದರೂ ವಾಕ್ಯದ ಅರ್ಥಕ್ಕೆ ಚ್ಯುತಿ ಬರುವುದಿಲ್ಲ. ಉದಾಹರಣೆಗೆ-

          ರಾಮಃ ರಾವಣಂ ಅವಧೀತ್

          ರಾಮನು ರಾವಣನನ್ನು ಕೊಂದನು.

           Rama Killed Ravana

      ಇಲ್ಲಿ ಸಂಸ್ಕೃತ ಮತ್ತು ಕನ್ನಡ ವಾಕ್ಯಗಳಲ್ಲಿ ಪದಗಳ ಕ್ರಮವನ್ನು ಹೇಗೆ ಬದಲಾಯಿಸಿದರೂ ಒಂದೇ ಅರ್ಥ ಬರುತ್ತದೆ. ಆದರೆ  Ravana Killed Rama ಎಂದು ಬದಲಾಯಿಸಿ ಹೇಳಿದರೆ ವಿರುದ್ಧಾರ್ಥವೇ ಬರುತ್ತದೆ. ಈ ಎರಡು ಅನುಕೂಲಗಳು ಸಂಸ್ಕೃತ ಭಾಷೆಯ ವಿಶೇಷಗಳು. ಪದಗಳ ಸ್ಥಾನವನ್ನು ಬದಲಾಯಿಸಲು ಇರುವ ಈ ಅನುಕೂಲದಿಂದ ಸಂಸ್ಕೃತ ಭಾಷೆಯಲ್ಲಿ ಪದ್ಯ ರಚನೆ ಸುಲಭವಾಯಿತು. ಆದುದರಿಂದಲೇ ಈ ಭಾಷೆಯ ಸಾಹಿತ್ಯ ಹೆಚ್ಚಾಗಿ ಪದ್ಯದಲ್ಲಿರುವುದು ಮತ್ತು ನಾನಾ ರೀತಿಯ ವೃತ್ತಗಳ ವಿಲಾಸದಿಂದ ಶೋಭಿಸುತ್ತಿರುವುದು. ಈ ಅನುಕೂಲವನ್ನು ವೇದ ಮಂತ್ರಗಳು ಸಹ ಉಪಯೋಗಿಸಿಕೊಂಡು ಮಂತ್ರದ ವಾಕ್ಯದಲ್ಲಿನ ಶಬ್ದಗಳ ಕ್ರಮವನ್ನು ತಮಗೆ ಇಷ್ಟಬಂದಂತೆ ಮಾಡಿಕೊಳ್ಳುತ್ತಾರೆ. ಆದರೆ ಒಂದು ಸಲ ಮಂತ್ರದಲ್ಲಿ ಪದಗಳ ಸ್ಥಾನವನ್ನು ನಿಗದಿ ಮಾಡಿದ ಮೇಲೆ ಆ ಸ್ಥಾನಗಳನ್ನು ಬದಲಾಯಿಸುವ ಹಾಗಿಲ್ಲ. ಇದಕ್ಕೆ ಕಾರಣ ಒಂದೊಂದು ಪದಕ್ಕೆ ಕೊಟ್ಟಿರುವ ಸ್ಥಾನದಲ್ಲಿ ಶಿಲ್ಪವಿರುವುದೇ. ಈ ಶಿಲ್ಪವು ಕೇವಲ ಛಂದಸ್ಸಿಗಾಗಿರುವುದಿಲ್ಲ. ಶಿಲ್ಪದಿಂದ ಧ್ವನಿ ರೂಪವಾದ ನಾನಾ ಭಾವಗಳನ್ನು ಸಾಧಿಸುವುದೇ ಇದರ ಉದ್ದೇಶ. ಮಂತ್ರವೆಂದರೆ ಜಪ ಮಾಡಲು ಯೋಗ್ಯವಾದುದೆಂಬ ವಿಷಯವು ಎಲ್ಲರಿಗೂ ತಿಳಿದೇ ಇದೆ. ಜಪ ಮಾಡುವುದರಿಂದ ಮಂತ್ರದ ಭಾವನೆಯು ಧೃಢವಾಗುವುದಲ್ಲದೆ ಅದರಲ್ಲಿನ ಶಬ್ದಗಳ ವ್ಯತೃತ್ತಿಯ ಮೇಲೂ, ಶಬ್ದಸ್ಥಾನಗಳ ಶಿಲ್ಪದ ಮೇಲೂ ಮನಸ್ಸನ್ನಿಟ್ಟು ಆಲೋಚಿಸುತ್ತ ಹೋದರೆ ಅನೇಕ ಉತ್ತಮ ಭಾವಗಳು ಧ್ವನಿ ರೂಪದಲ್ಲಿ ಸ್ಫುರಿಸುತ್ತಲೆ ಇರುತ್ತವೆ.

            ಈ ಹಿನ್ನೆಲೆಯಲ್ಲಿ ಗಾಯತ್ರಿ ಮಂತ್ರದ ಸಮಗ್ರವಾದ ಅರ್ಥವನ್ನು ವಿಚಾರಿಸೋಣ.

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)