This Article was written soon after my father’s death in 1996. Since my brother traced its manuscript recently I am privileged to publish it in the website now.                           

                                                                 ನನ್ನ ಪ್ರೀತಿಯ ತಂದೆಯ ನೆನಪು

                                                                                                               ಎಲ್.ಸುಬ್ರಮಣ್ಯ

ನನ್ನ ಪೂಜ್ಯ ತಂದೆಯವರು ನನಗೆ ಜೀವಂತ ದೇವರಾಗಿದ್ದರು. ಅವರು ಎಂದೂ ಸುಳ್ಳನ್ನು ನುಡಿದಿಲ್ಲ. ತಮಾಶೆಗೂ ಸುಳ್ಳು ಹೇಳುವುದನ್ನು ಖಂಡಿಸುತ್ತಿದ್ದರು. ನಿವ್ರುತ್ತರಾದ ನಂತರ ಸುಳ್ಳು ಪ್ರತಿಪಾದನೆ ಮಾಡ ಬೇಕಾಗುತ್ತದೆ ಎಂದು ವಕೀಲ ವ್ರುತ್ತಿಯನ್ನೇ ತ್ಯಜಿಸಿದವರು ಅವರು.

ಅವರಿಗೆ ಅಹಂಭಾವ ಇರಲಿಲ್ಲ. ಎಲ್ಲವನ್ನೂ ತಮ್ಮಿಂದ ದೇವರು ಮಾಡಿಸುತ್ತಿದ್ದಾನೆ ತನ್ನದೇನು ಅದರಲ್ಲಿ ಪಾತ್ರವಿಲ್ಲ ಎಂದು ಹೇಳುತ್ತಿದ್ದರು. ಅವರು ಸಂಸಾರದಲ್ಲಿದ್ದರೂ ಯೋಗಿಯಂತೆ ಬಂಧಮುಕ್ತರಾಗಿದ್ದರು. ಆದ್ದರಿಂದ ಅವರಿಗೆ ಚಿಂತೆ, ಒತ್ತಡ, ಉದ್ವೇಗ ಇಂತಹವುಗಳು ಯಾವುದೂ ಇರಲಿಲ್ಲ. ಅವರು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸಮಸ್ತ ಚರಾಚರ ವಸ್ತುಗಳಲ್ಲಿ ದೇವರ ಸ್ವರೂಪವನ್ನು ಕಾಣುತ್ತಿದ್ದರು ಮತ್ತು ಆ ಕಾರಣದಿಂದ ಎಲ್ಲವನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಅವರು ವಿದ್ಯೆಯಿಂದ, ಅಭ್ಯಾಸದಿಂದ,ಮತ್ತು ಕರ್ಮದಿಂದ,ಜ್ಞಾನಿಯಾಗಿದ್ದರು. ಅವರು ಅನ್ನದಾನ,ವಿದ್ಯಾದಾನ, ಧನದಾನ, ಮುಂತಾದ ಎಲ್ಲ ದಾನಗಳನ್ನು ಮಾಡುತ್ತಿದ್ದರು. ಪರೋಪಕಾರಾಂ ಸತಾಂ ವಿಭೂತಯಃ ಎಂಬುದು ಅವರ ಮಂತ್ರವಾಗಿತ್ತು.

ಅವರು ಒಳ್ಳೆಯ ವಿದ್ಯಾರ್ಥಿ, ಉಪಾಧ್ಯಾಯರು, ಗೃಹಸ್ಥರು, ಕವಿ, ವಿದ್ವಾಂಸರು, ಚಿತ್ರಕಾರರು, ಸಂಗೀತಗಾರರು, ಉಪನ್ಯಾಸಕರು, ವಕೀಲರು, ಆಡಳಿತಾಧಿಕಾರಿ, ಸಮಾಜ ಸೇವಕ ಮತ್ತು ಎಲ್ಲಕ್ಕೂ ಮಿಗಿಲಾಗಿ ಮನುಷ್ಯ  ಶ್ರೇಷ್ಟರಾಗಿದ್ದರು.  ಕಾಲಹರಣಮಾಡದೆ ಜ್ಞಾನ ಸಂಪಾದಿಸಿ ಜನಸೇವೆ ಮಾಡುತ್ತಾ ಒಳ್ಳೆಯ ಮಾನವ ಬದುಕನ್ನು ಎಲ್ಲರೂ ನಡೆಸಬೇಕು ಎಂಬುದು ಅವರ ಆಶೆಯಾಗಿತ್ತು. ನಾನು ಅವರ ಪುತ್ರನಾಗಿರುವುದು ನನ್ನ ಭಾಗ್ಯ.

ನಾನು ಹದಿನೇಳು ವರುಷ ನ್ಯಾಯಾಧೀಶನಾಗಿ ಕೆಲಸ ಮಾಡಿದಾಗ್ಯೂ ಸಹ ಹೆಚ್ಚು ಜನ ನನ್ನನ್ನು ಗುರ್ತಿಸುವುದು ನನ್ನ ಪೂಜ್ಯ ತಂದೆ ಶ್ರೀ ಲಂಕಾ ಕೃಷ್ಣಮೂರ್ತಿಯವರ ಮಗನೆಂದು. ನ್ಯಾಯಾಲಯವು ದೇವರ ಗುಡಿಯಂತೆ ಮತ್ತು ನ್ಯಾಯಾಧೀಶ ದೇವರು ಮಾಡಬೆಕಾದಂತಹ ಕೆಲಸವನ್ನು ಮಾಡಬೇಕು ಎಂದು ಪದೇ ಪದೇ ಹೇಳುತ್ತಿದ್ದರು. ಕಕ್ಸಿದಾರರಿಗೆ ತೊಂದರೆ ಆಗದಂತೆ ರಜೆಗಳನ್ನು ಹಾಕಲು ನನಗೆ ಹೇಳುತ್ತಿದ್ದರು.ಎಲ್ಲರನ್ನೂ ಮಾನವೀಯತೆಯಿಂದ ನೋಡಿ, ಜೀವನದ ಕಷ್ಟ ಸುಖಗಳನ್ನು ತಿಳಿದುಕೊಂಡು,ನಿಷ್ಫಕ್ಷಫಾತವಾಗಿ ನ್ಯಾಯವಿತರಣೆ ಮಾಡಬೇಕು ಎನ್ನುತ್ತಿದ್ದರು.ನನ್ನ ಪೂಜ್ಯ ತಂದೆಯವರು ಇಲ್ಲದೇ ಇದ್ದರೂ ಅವರ ತತ್ವಗಳು ಮತ್ತು ಉಪದೇಶಗಳು ನನ್ನಲ್ಲಿ ಯಾವಾಗಲೂ ಜೀವಂತವಾಗಿದೆ.

ನಾನು ಚಿಕ್ಕವನಾಗಿದ್ದಾಗ ರಸ್ತೆಯಲ್ಲಿ ಬಿದ್ದಿದ್ದ ಹತ್ತು ರೂ ಹಣವನ್ನು ತಂದು ನಮ್ಮ ತಂದೆಗೆ ಕೊಟ್ಟೆ. ಅದಕ್ಕೆ ಅವರು ಅದನ್ನು ಸದ್ವಿನಿಯೋಗ ಮಾಡಬೇಕೆಂಬ ಉದ್ದೇಶದಿಂದ ಅಂಗಡಿಯಲ್ಲಿ ಚಿಲ್ಲರೆ ಮಾಡಿಸಿ ದೇವಸ್ಥಾನದ ಬಳಿ ಹೋಗಿ ಎಲ್ಲ ಭಿಕ್ಷುಕರಿಗೂ ಹಂಚಿದರು. ತಾವೂ ಸಹಾ ಭಿಕ್ಷುಕರಿಗೆ, ಬಡವರಿಗೆ, ಕೂಲಿಗಳಿಗೆ ಮತ್ತು ದುರ್ಬಲ ವರ್ಗದವರಿಗೆ ಧಾರಾಳವಾಗಿ ಹಣ ಸಹಾಯ ಮಾಡುತ್ತಿದ್ದರು. ನಮ್ಮ ಮನೆಗೆ ಊರುಗಳಿಂದ ಬಂದ ನೆಂಟರು, ಸ್ನೇಹಿತರು, ವಿಧ್ಯಾಭ್ಯ್ಯಾಸ ಮಾಡಲು ತಂಗುತ್ತಿದ್ದ ವಿದ್ಯಾರ್ಥಿಗಳಿಗೂ ಈ ರೀತಿ ಎಲ್ಲರಿಗೂ ಪ್ರತಿ ದಿನ ನಮ್ಮ ಮನೆಯಲ್ಲಿ ಅನ್ನದಾನ ನಡಯುತ್ತಿತ್ಥು. ಅತಿಥಿಗಳಿಗೆ ಸತ್ಕಾರ ಮಾಡಿ ಅವರು ತೃಪ್ತಿ ಹೊಂದಿದರೆ ನಮ್ಮ ತಂದೆಗೆ ಬಹಳ ಸಂತೋಷ. ಹೀಗೆ ಅವರು ಹಣಕ್ಕೆ ಎಂದೂ ಪ್ರಾಮುಖ್ಯತತೆ ಕೊಡಲಿಲ್ಲ.

ನಮ್ಮದೊಂದು ಹಳೆಯ ಕಾರು ಇತ್ತು. ನಮ್ಮ ತಂದೆಯವರು ಅದರ ಕಾರ್ಬರೇಟರ್ ಬಿಚ್ಚಿ ರಾತ್ರಿ ಬಹಳ ಹೊತ್ತು ರಿಪೇರಿ ಮಾಡಿ ಬೆಳೆಗ್ಗೆ ಕಾರು ನಡೆಸುತ್ತಿದ್ದಂತಹ ಜೀನಿಯಸ್ ಆಗಿದ್ದರು. ಕಾರಿನಲ್ಲಿ ಹೈಕೋರ್ಟಗೆ ಹೋಗುತ್ತಿದ್ದಾಗ ಮತ್ತು ಬರುತ್ತಿದ್ದಾಗ ರಸ್ತೆಯಲ್ಲಿ ಅಲ್ಲಲ್ಲಿ ನಿಲ್ಲಿಸಿ ತಮಗೆ ಪರಿಚಯವಿದ್ದವರನ್ನು ಕೂಡಿಸಿಕೊಂಡು ಬರುತ್ತಾ ಅವರಿಗೆ ಸಹಾಯ ಮಾಡುತ್ತಿದ್ದರು. ಒಂದು ದಿನ ಕಾರನ್ನು ಗ್ಯಾರೇಜಿಗೆ ರಿಪೇರಿಗೆ ಕೊಡಲು ಹೋಗಿದ್ದಾಗ ತಿಳಿಯದೇ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಪೊಲೀಸರಿಂದ ನಮ್ಮ ತಂದೆಗೆ ಹೈಕೋರ್ಟ್ ವಿಳಾಸಕ್ಕೆನೋಟೀಸು ಬಂತು. ಅಲ್ಲಿನ ಮೇಲಧಿಕಾರಿಗಳು ಪೋಲೀಸರಿಗೆ ಹೇಳಿ ಕೇಸು ಹಾಕದಂತೆ ನೋಡೋಣ ಎಂದು ಹೇಳಿದರಂತೆ. ಆದರೆ ನಮ್ಮ ತಂದೆಯವರು ತಪ್ಪು ಮಾಡಿದವರು ಯಾರೇ ಆಗಲಿ ಅವರಿಗೆ ಶಿಕ್ಷೆಯಾಗಬೇಕೆಂದು ಕೋರ್ಟ್ ಗೆ  ಹೋಗಿ ದಂಡ ತುಂಬಿಬಂದರು. ನಮ್ಮ ತಂದೆ ಬಹಳ ಶಿಸ್ತಿನವರು. ಯಾರಾದರೂ ಕಚೇರಿಗೆ ತಡವಾಗಿ ಬಂದರೆ ನಿಯಮಗಳ ಪ್ರಕಾರ ಅರ್ಧ ದಿನ ರಜ ಎಂದು ಪರಿಗಣಿಸುತ್ತಿದ್ದರು. ಅದೇ ರೀತಿ ತಾವು ತಡವಾಗಿ ಹೋದರೂ ಅರ್ಧ ದಿನ ರಜೆ ಹಾಕಿ ಪೂರ್ತಿ ದಿನ ಕೆಲಸ ಮಾಡುತ್ತಿದ್ದರು. ಹೀಗೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು.

ನಮ್ಮ ತಂದೆ ನಿವೃತ್ತರಾದ ನಂತರ ಸೋಫಸೆಟ್, ಡೈನಿಂಗ್ ಟೇಬಲ್ ಮುಂತಾದುವುಗಳನ್ನು ಕೊಂಡುಕೊಂಡರು. ಅಂಗಡಿಯವನಿಗೆ ಬಿಲ್ ಕೊಡಲು ಕೇಳಿದರು. ಅಂಗಡಿಯವನು ಬಿಲ್ ಹಾಕಿದರೆ ಎರಡು ಸಾವಿರ ತೆರಿಗೆಕಟ್ಟ ಬೇಕಾಗುತ್ತದೆ, ಅದರ ಬದಲು ಇನ್ಯಾವುದಾದರೂ ಪೀಠೋಪಕರಣ ತೆಗೆದುಕೊಳ್ಳಿ ಎಂದು ಹೇಳಿದರು. ಅದಕ್ಕೆ ಅವರು ಸರ್ಕಾರ ನಮಗೆ ಎಷ್ಟೋ ಅನುಕೂಲಗಳನ್ನು ಮಾಡುತ್ತಿದ್ದಾಗ ಅದಕ್ಕೆ ಮೋಸಮಾಡಬಾರದು ಎಂದು ಹೇಳಿ ಎರಡು ಸಾವಿರರೂಗಳ ತೆರಿಗೆ ಕಟ್ಟಿದರು.

ನಮ್ಮ ತಂದೆ ವಕೀಲ ವೃತ್ತಿ ಬಿಟ್ಟು ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ಒಂದು ದಿನ ಬಸ್ ನಿಲ್ದಾಣದಲ್ಲಿ ಹಳೆಯ ಕಕ್ಷಿದಾರ ಸಿಕ್ಕಿದ. ಕೂಡಲೆ ಆತನಿಗೆ ತನ್ನ ಕೆಲಸ ಪೂರ್ತಿಮಾಡಲು ಆಗಲಿಲ್ಲ ಎಂದು ನೂರು ರೂ ವಾಪಸ್ ಕೊಟ್ಟರು. ಒಂದು ದಿನ ರಸ್ತೆಯಲ್ಲಿ ಯಾರೋ ಹೆಂಗಸು ಒಂದು ಭಾರವಾದ ಪ್ಲಾಸ್ಟಿಕ್ ಕೈ ಚೀಲ ಹೊತ್ತುಕೊಂಡು ಹೋಗುತ್ತಿದ್ದು ತಕ್ಷಣವೇ ಬಿದ್ದುಹೋದರಂತೆ. ಕೂಡಲೆ ನಮ್ಮ ತಂದೆಯವರು ಕೆಳಗೆ ಬಿದ್ದಿದ್ದ ವಸ್ತುಗಳನ್ನು ಸೇರಿಸಿ ಆಕೆಗೆ ಸಹಾಯ ಮಾಡಲು ಹೋದರು. ಆಗ ಆ ಮಹಿಳೆ ಅದು ಮಾಂಸದ ವಸ್ತುಗಳು ನೀವು ಮುಟ್ಟಬೇಡಿ ಅಂದರಂತೆ. ಪರವಾಗಿಲ್ಲ ಎಂದು ಅವನ್ನೆಲ್ಲ ಆರಿಸಿ ಆಕೆಗೆ ಸಹಾಯ ಮಾಡಿದರಂತೆ. ನಮ್ಮ ತಂದೆಯವರು ಅಹಿಂಸಾವಾದಿ ಮತ್ತು ಶಾಖಾಹಾರಿಗಳು. ಸ್ವಧರ್ಮ ಮತ್ತು ಸಾಮಾಜಿಕ ಧರ್ಮಗಳ ಮೌಲ್ಯಗಳನ್ನು ಚೆನ್ನಾಗಿ ಅವರು ಅರಿತಿದ್ದರು ಮತ್ತು ಎರಡಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದರು. ಅವರ ಬಗ್ಗೆ ಹೇಳಲು ಇನ್ನೂ ಎಷ್ಟೋ ವಿಷಯಗಳಿವೆ.  ಒಟ್ಟಿನಲ್ಲಿ ಅವರ ವ್ಯ್ಕಕ್ತಿತ್ವ ,ಆದರ್ಶಗಳು,ಜೀವನ ಶೈಲಿ ಎಲ್ಲರಿಗೂ ಅನುಕರುಣೀಯ.